ಡಾ.ರಘುಪತಿ
ಮಹದೇಶ್ವರ ಬೆಟ್ಟಕ್ಕೆ ಹೋಗುವಾಗ ಹನೂರು ದಾಟಿದರೆ ನಿಮಗೆ ದೊಡ್ಡಿ ಹೆಸರಿನ ಹಲವು ಹಳ್ಳಿಗಳು ಸಿಗುತ್ತವೆ. ಹಾಗೆಯೇ ನೂರಾರು ದನಗಳೂ,ಅದೂ ನಾಟಿ ದನಗಳೂ, ಮೂಗುದಾರವೂ ಇಲ್ಲದ ಅಪ್ಪಟ ದೇಸಿದನಗಳೂ ತಂಡೋಪತಂಡವಾಗಿ ಕಾಡಿಗೆ ಹೋಗುತ್ತಿರುವ ದೃಶ್ಯವನ್ನು ನೀವು ನೋಡಬಹುದು.
ಕೆಂಚಯ್ಯನ ದೊಡ್ಡಿ,ತಿಮ್ಮನಾಯಕನ ದೊಡ್ಡಿ,ಹೊಸದೊಡ್ಡಿ, ಮಲ್ಲಯ್ಯನಪುರ, ಪುದೂರು, ಎಲೆಮಾಳ,ಬಾಳಗುಣಿಸೆ, ಗುಂಜಪುರ – ಹೀಗೆ ಹಲವು ದೊಡ್ಡಿಗಳಲ್ಲಿ ವಾಸಿಸುವ ಪಶುಪಾಲಕರು ಈಗಲೂ ಕನಿಷ್ಠ ಅಂದರೆ ೫೦ ರಿಂದ ನೂರು ದನಕರುಗಳನ್ನು ಪಾಲನೆ ಮಾಡುತ್ತಿದ್ದಾರೆ. ದನಗಳನ್ನು ಇವರು ಕಾಲ್ನಡೆ ಎನ್ನುತ್ತಾರೆ.ಅದೂ ಯಾವುದೇ ಆಧುನಿಕ ಸೌಲಭ್ಯಗಳಿಲ್ಲದೆ ಕಾಡುಗಳಲ್ಲಿ ಸಾಕುತ್ತಿದ್ದಾರೆ.ಇವರೇ ಕೃಷ್ಣ ಗೊಲ್ಲರು !!
ಈ ಸಮುದಾಯ ಕರ್ನಾಟಕದ ಅಲೆಮಾರಿ ಪಶುಪಾಲಕ ಸಮುದಾಯಗಳಲ್ಲಿ ಒಂದು. ಸರಿಸುಮಾರು ೫,೦೦೦ ಕ್ಕೂ ಹೆಚ್ಚು ನಾಟಿದನಗಳೂ,ನಾಲ್ಕಾರು ಸಾವಿರ ಆಡುಕುರಿಗಳೂ ಇವರ ಕಾಲ್ನಡೆಗಳಾಗಿವೆ.
ಪ್ರಕೃತಿಯ ಮಡಿಲಲ್ಲಿ ಸಮೃದ್ಧವಾಗಿದ್ದ ಕೃಷ್ಣಗೊಲ್ಲ ಪಶುಪಾಲಕ ಸಮುದಾಯ ಈಗ ಈ ಬಾರಿಯ ಬರಕ್ಕೆ ತತ್ತರಿಸಿ ಹೋಗುತ್ತಿದೆ. ಈ ಸಾರಿ ಸರ್ಕಾರ ನಮ್ಮ ನೆರವಿಗೆ ಬರದಿದ್ದರೆ ನಮ್ಮ ಕಾಲ್ನಡೆಗಳು ಉಳಿಯಲ್ಲ ಎಂದು ಮಲ್ಲಯ್ಯನಪುರ ಕನಕರಾಜು ಮಮ್ಮಲ ಮರುಗಿ ನೊಂದುಕೊಳ್ಳುತ್ತಾರೆ. ಆಗಿರುವುದಾದರೂ ಏನು ? ಇದ್ದಕ್ಕಿದ್ದಂತೆ ಈ ಸ್ಥಿತಿ ಬಂತಾ ? ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಇವರಿಗೆ ‘ ಪರ್ಮೆಂಟ’ ಕೊಟ್ಟಿದ್ದರು.ಇವರು ಸಾವಿರಾರು ದನಗಳನ್ನು ಕಾವೇರಿ ಹೊಳೆ ಪಕ್ಕದ ದಟ್ಟ ಕಾಡಿನಲ್ಲಿನ ‘ ನತ್ತ’ ಗಳಲ್ಲಿ ಬೀಡು ಬಿಟ್ಟು ಅಲ್ಲಿಯೇ ಬೇಸಿಗೆಯ ನಾಲ್ಕೈದು ತಿಂಗಳು ಮೇಯಿಸುತ್ತಾ ಬೇಸಿಗೆಯನ್ನು ಕಳೆಯುತ್ತಿದ್ದರು.ದೊಡ್ಡಸ್ವಾನೆ ನತ್ತ,ಜುಂಜಗೋಳ ನತ್ತ – ಇವುಗಳು ಈ ನತ್ತಗಳಲ್ಲಿ ಮುಖ್ಯವಾದವು. ಮಳೆಗಾಲದಲ್ಲಿ ತಮ್ಮ ಊರಿನ ದೊಡ್ಡಿಗಳಿಗೆ ಹಿಂತಿರುಗುತ್ತಿದ್ದರು ಕೃಷ್ಣ ಗೊಲ್ಲರು.
ಆದರೆ ಈಗ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಅದರಲ್ಲೂ ವಿಶೇಷವಾಗಿ ಮಹದೇಶ್ವರ ಹುಲಿ ಅಭಯಾರಣ್ಯ ಘೋಷಣೆ ಆದ ಮೇಲೆ ಕಾಡಿಗೆ ಕಾಲ್ನಡೆಗಳನ್ನು ನಡೆಸುವುದೇ ದುಸ್ಸಾಹಸವಾಗಿದೆ. ಆ ಊರುಗಳಿಂದ ಸರಿಸುಮಾರು ಹತ್ತು ಕಿಲೋಮೀಟರ್ ದೂರವಿರುವ ಕಾಡಿನಲ್ಲಿನ ಕಾವೇರಿ ಹೊಳೆ ಈಗ ಇವರಿಗೆ ದೂರವೇ ಆಗಿ ಉಳಿದಿದೆ. ಈಗ ಪ್ರತಿನಿತ್ಯ ದೊಡ್ಡಿಯಿಂದ ಐದಾರು ಮೈಲಿ ಹೋಗಿ ವಾಪಸ್ಸು ಬರುತ್ತಾರೆ. ಹೀಗೆ ಕಷ್ಟಸಾಧ್ಯವಾದ ಪಶುಪಾಲನೆಯಿಂದ ಇವರ ಕಾಲ್ನಡೆಗಳ ಸಂಖೈ ದಿನೇದಿನೇ ಕುಗ್ಗಿ ಈಗ ಕನಿಷ್ಠ ಸಂಖ್ಯೆಗೆ ಇಳಿದಿದೆ.
ಇತ್ತೀಚಿನ ಕ್ಷಾಮದಲ್ಲಿ ಅಂದರೆ ೨೦೧೬ ರಲ್ಲಿ ರಾಮಚಂದ್ರಾಪುರ ಮಠ ಇವರ ಕಷ್ಟವನ್ನು ಆತುಗೊಂಡಿತ್ತು .ಆಗ ಪ್ರತಿ ನಾಲ್ಕೈದು ದೊಡ್ಡಿಗಳಿಗೆ ಒಂದರಂತೆ ಗೋಶಾಲೆ ತೆರೆದಿದ್ದರು.ಸುಮಾರು ಹದಿನೈದು ಗೋಶಾಲೆಗಳನ್ನು ಮಾಡಿ ಹಸಿದಂಟು,ನೀರು ಎಲ್ಲ ಪೂರೈಸಿದ್ದನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ ಇವರು. ಇಡೀ ಕರ್ನಾಟಕದಲ್ಲಿ ದನಗಳ ಸಂಖ್ಯೆ ಒಂದು ಕೋಟಿಗಿಂತಲೂ ಕಡಿಮೆ ಆಗುತ್ತಿದೆ. ಅದರಲ್ಲೂ ಹಾಲು ಕೊಡುವ ಮಿಶ್ರತಳಿ ಜರ್ಸಿ, ಹೆಚ್‌ಎಫ್ ಹಸುಗಳದೇ ಸಿಂಹಪಾಲು. ಇನ್ನು ನಾಟಿ ತಳಿಗಳ ದನಗಳು ಈಗ ಹಲವು ಲಕ್ಷಕ್ಕೆ ಕುಸಿದಿವೆ.
ಈ ಮಹದೇಶ್ವರ ಬೆಟ್ಟದ ಮೇಲಿರುವ ಬೇಡಗಂಪಣರು, ಬೆಟ್ಟದ ಕೆಳಗಿರುವ ಕೃಷ್ಣಗೊಲ್ಲರು,ಮಲೆನಾಡಿನ ಅಂಚಿನ ಜಿಗಳಲ್ಲಿರುವ ಧನಗರ್ ಗೌಳಿಗಳು, ಮಧ್ಯಕರ್ನಾಟಕದಲ್ಲಿರುವ ಮ್ಯಾಸಬೇಡರು,ಕಾಡು ಗೊಲ್ಲರು, ಉತ್ತರ ಕರ್ನಾಟಕದ ಕೊಪ್ಪಳ ಹಿಂಡುದನಗಳ ಪಾಲಕರು – ಇವರ ನಾಟಿ ದನಗಳ ಸಂಖ್ಯೆ ಇಡೀ ಕರ್ನಾಟಕದ ದೇಸಿ ದನಗಳ ಸಂಖ್ಯೆಯ ಅರ್ಧದಷ್ಟಾಗುತ್ತದೆ !
ಆದರೆ ಸರ್ಕಾರ ದೇಸಿತಳಿಗಳ ಅಭಿವೃದ್ಧಿಯನ್ನು ತನ್ನ ತಳಿನೀತಿಯಲ್ಲಿ ಆದ್ಯತೆಯಾಗಿ ಘೋಷಿಸಿ ಕೊಂಡಿದೆ. ಪಟ್ಟಣಗಳಲ್ಲಿ,ಸಿಟಿಗಳಲ್ಲಿ ನಾಟಿ ಹಸುವಿನ ಹಾಲಿಗೆ ಬೇಡಿಕೆ ಹೆಚ್ಚುತ್ತಿದೆ.ಅದರ ಉತ್ಪನ್ನಗಳಾದ ಬೆಣ್ಣೆ,ತುಪ್ಪ ಗಳ ಬೆಲೆ ಹೀಗಿದ್ದೂ ಈ ಸಮುದಾಯಗಳನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದರೆ ಹೇಗೆ ? ಕೃಷ್ಣಗೊಲ್ಲರು ತಮ್ಮ ಸಾವಯವ ಬದುಕಿನ ರೀತಿಯಿಂದ ಪ್ರಕೃತಿಗೇ ಕಾಣಿಕೆ ಕೊಡುತ್ತಾ ಪಶುಪಾಲನೆ ಮಾಡುತ್ತಿದ್ದರೆ ಪಶುಪಾಲನಾ ಇಲಾಖೆ ಇವರ ವಿಷಯದಲ್ಲಿ ಅಸಡ್ಡೆ ತೋರುತ್ತಿಲ್ಲವೇ ? ಈಗಿನ ಕ್ಷಾಮದ ದವಡೆಗೆ ಸಿಕ್ಕಿರುವ ಈ ಪಶುಪಾಲಕ ಸಮುದಾಯಗಳನ್ನು ರಕ್ಷಿಸುವ ಹೊಣೆ ಸರ್ಕಾರಕ್ಕೆ ಇಲ್ಲವೇ ? ಹೊಸ ಅಭಿವೃದ್ಧಿ ನೀತಿಗಳು ಈ ಕಾಡಿನಂಚಿನ ಈ ಪಶುಪಾಲಕ ಸಮುದಾಯಗಳನ್ನು ಕಬಳಿಸಿ ಕಾಡನ್ನು ಉಳಿಸಲು ಸಾಧ್ಯವೇ ? ಜಗತ್ತಿನ ಶ್ರೇಷ್ಠ ಪರಿಸರ ವಿeನಿ ಆಲನ್ ಸಾವರಿ, ದನಕರು ಆಡು ಕುರಿಗಳ ನಿಯಂತ್ರಿತ ಮೇಯುವಿಸುವಿಕೆಯಿಂದ ಮಾತ್ರ ಜಗತ್ತಿಗೆ ಅಡರಿಕೊಂಡಿರುವ ಹವಾಮಾನ ವೈಪ್ಯರೀತ್ಯವನ್ನು ತೊಡೆಯಬಹುದು ಎಂದಿರುವುದು ನಮ್ಮ ಆಧುನಿಕ ಅಭಿವೃದ್ಧಿ ತಜ್ಞರಿಗೆ ಗೊತ್ತಿಲ್ಲವೇ ?
” ಕೃಷ್ಣಗೊಲ್ಲರು ತಮ್ಮ ಸಾವಯವ ಬದುಕಿನ ರೀತಿಯಿಂದ ಪ್ರಕೃತಿಗೇ ಕಾಣಿಕೆ ಕೊಡುತ್ತಾ ಪಶುಪಾಲನೆ ಮಾಡುತ್ತಿದ್ದರೆ ಪಶುಪಾಲನಾ ಇಲಾಖೆ ಇವರ ವಿಷಯದಲ್ಲಿ ಅಸಡ್ಡೆ ತೋರುತ್ತಿಲ್ಲವೇ ? ಈಗಿನ ಕ್ಷಾಮದ ದವಡೆಗೆ ಸಿಕ್ಕಿರುವ ಈ ಪಶುಪಾಲಕ ಸಮುದಾಯಗಳನ್ನು ರಕ್ಷಿಸುವ ಹೊಣೆ ಸರ್ಕಾರಕ್ಕೆ ಇಲ್ಲವೇ ?”
ಮುಂಬೈ: ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದ ಗಂಟೆಗಳಲ್ಲಿ ಅವರ ಅಜ್ಜಿ ನಿಧನರಾಗಿದ್ದಾರೆ. ದೀರ್ಘಕಾಲದ…
ಮೈಸೂರು: ಮೈಸೂರಿನ ದಸರಾ ಮಹೋತ್ಸವದ ಉದ್ಘಾಟನೆಗೆ ಚಾಮುಂಡಿಬೆಟ್ಟದಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಉದ್ಘಾಟನಾ ಸಮಾರಂಭಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಹಾಲಯ ಅಮಾವಾಸ್ಯೆ ಪ್ರಯುಕ್ತ ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ…
ನವದೆಹಲಿ: ಅಭಿಜಿತ್ ದೀಪ್ಕೆ ಪೊಲೀಸ್ ವಶದಲ್ಲಿರುವ ಹಿನ್ನೆಲೆಯಲ್ಲಿ, ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಿಜೆಪಿಯ ಸಂಘಟನಾ ಉಸ್ತುವಾರಿ ಅಜಿಂಕ್ಯ ಶಿಂಧೆ…
ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳು ಹಾಗೂ ಕೆಲವು ಸಂಘಟನೆಗಳು ಪ್ರತಿಭಟನೆಗಳನ್ನು ಮಾಡುತ್ತಿರುವುದು ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ವಾತಾವರಣ ದಲ್ಲಿ…
ಮೈಸೂರಿನಲ್ಲಿ ಇ-ಖಾತಾ ಹಾಗೂ ಸಿ ಆರ್ ವಿತರಣೆ ಸಂಬಂಧ ಸಾರ್ವಜನಿಕರಿಂದ ಕುಂದು ಕೊರತೆ ಆಲಿಸಿದ ನಂತರ ಮೈಸೂರು ನಗರ ಪಾಲಿಕೆಯ…