Andolana originals

ಶಿಥಿಲಾವಸ್ಥೆಯತ್ತ ಕೊಡವ ಹೆರಿಟೇಜ್‌ ಸೆಂಟರ್‌

ಕಾಮಗಾರಿ ಸ್ಥಗಿತಗೊಂಡು ಪಾಳುಬಂಗಲೆಯಂತಾ ? ಕಟ್ಟಡ; ಪುಂಡ ಪೋಕರಿಗಳ ತಾಣವಾಗಿ ಮಾರ್ಪಾಡು

ನವೀನ್ ಡಿಸೋಜ

ಮಡಿಕೇರಿ: ದಶಕಗಳಿಂದ ನಡೆಯುತ್ತಿರುವ ಕೊಡವ ಹೆರಿಟೇಜ್ ಸೆಂಟರ್ ಕಾಮಗಾರಿ ಪೂರ್ಣಗೊಳ್ಳದೆ ಕಟ್ಟಡಗಳು ಪಾಳುಬಂಗಲೆಯಂತಾಗಿದ್ದು, ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ಕೊಡವ ಹೆರಿಟೇಜ್ ಸೆಂಟರ್ ಕುರಿತು ಇತ್ತೀಚೆಗೆ ಅಧಿವೇಶನದಲ್ಲಿ ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಪ್ರವಾಸೋದ್ಯಮ ಸಚಿವ ಎಚ್.ಕೆ . ಪಾಟೀಲ್, ಹೆರಿಟೇಜ್ ಸೆಂಟರ್ ಕಾಮಗಾರಿಯನ್ನು ಪಿಪಿಪಿ(ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ಪೂರ್ಣಗೊಳಿಸಿ, ನಿರ್ವಹಣೆ ಮತ್ತು ಕಾರ್ಯಾಚರಣೆ ನಡೆಸಲು ಮಾರ್ಗದರ್ಶನ ಕೋರಲಾಗಿದೆ ಎಂದು ಉತ್ತರಿಸಿದ್ದರು. ಸರ್ಕಾರ ಕಾಮಗಾರಿ ಮುಗಿಸುವ ಕುರಿತು ಇನ್ನೂ ಮಾರ್ಗಗಳನ್ನು ಹುಡುಕುತ್ತಿರುವಾಗಲೇ ಇತ್ತ ಕಾಮಗಾರಿ ಪೂರ್ಣಗೊಳ್ಳದೆ ಹೆರಿಟೇಜ್ ಸೆಂಟರ್‌ನ ಕಟ್ಟಡಗಳು ಕಾಡು ಪಾಲಾಗುತ್ತಿದೆ.

ಕಾಮಗಾರಿ ಪೂರ್ಣಗೊಳ್ಳದೆ ನಿರ್ವಹಣೆಯನ್ನೂ ಮಾಡದೆ ಮೂಲೆಗುಂಪಾಗಿರುವ ಕೊಡವ ಹೆರಿಟೇಜ್ ಸೆಂಟರ್ ಪುಂಡ ಪೋಕರಿಗಳ ಮೋಜಿನ ತಾಣವಾಗಿ ಮಾರ್ಪಟ್ಟಿದೆ. ಈಗಾಗಲೇ ಕಟ್ಟಡದ ಕಿಟಕಿ ಬಾಗಿಲುಗಳು ಕಿಡಿಗೇಡಿಗಳಿಂದ ನಾಶವಾಗುತ್ತಿದ್ದು, ಶೀಘ್ರ ಕಾಮಗಾರಿ ಆರಂಭಿಸದಿದ್ದರೆ ಕಟ್ಟಡ ಶಿಥಿಲಾವಸ್ಥೆ ತಲುಪುವ ಸಾಧ್ಯತೆ ಇದೆ.

ಮಡಿಕೇರಿ ಹೊರವಲಯದ ಕೆ.ನಿಡುಗಣೆ ಗ್ರಾ.ಪಂ. ವ್ಯಾಪ್ತಿಯ ಗಾಲ್ಛ್ ಮೈದಾನದ ಬಳಿ ನಿರ್ಮಾಣವಾಗಿರುವ ಕೊಡವ ಹೆರಿಟೇಜ್ ಸೆಂಟರ್‌ನ ಕಟ್ಟಡಗಳು ಸುಸಜ್ಜಿತವಾಗಿವೆ. ಒಳಾಂಗಣ ಕೆಲಸಗಳು, ಪೀಠೋಪಕರಣ ಮತ್ತಿತರ ಕೆಲಸಗಳಷ್ಟೇ ಬಾಕಿ ಇದೆ. ಆದರೆ, ನಿರ್ಮಾಣವಾಗಿ ನಿಂತಿರುವ ಕಟ್ಟಡದ ಸುತ್ತ ಗಿಡ-ಗಂಟಿಗಳು ಬೆಳೆದು ಕಟ್ಟಡವನ್ನೇ ಆವರಿಸಿಕೊಳ್ಳುತ್ತಿರುವುದರಿಂದ ನೂತನ ಹೆರಿಟೇಜ್ ಕೇಂದ್ರ ಯಾವುದೋ ಪಾಳುಬಂಗಲೆಯಂತಾಗುತ್ತಿದೆ.

ಮುಖ್ಯಕಟ್ಟಡದ ಎದುರಿನ ಬಾಗಿಲು ಹಾಕಲಾಗಿದೆಯಾದರೂ ಹಿಂದಿನಿಂದ ಕಟ್ಟಡದೊಳಗೆ ಪ್ರವೇಶಿಸಬಹುದಾಗಿದೆ. ಕಟ್ಟಡಕ್ಕೆ ಕಾವಲುಗಾರರಿಲ್ಲದಿರುವುದರಿಂದ ಯಾರು ಯಾವಾಗ ಬೇಕಾದರೂ ಕಟ್ಟಡದೊಳಗೆ ಪ್ರವೇಶಿಸಬಹುದಾಗಿದೆ. ಕೊಡವ ಹೆರಿಟೇಜ್ ಸೆಂಟರ್‌ನ ಮುಖ್ಯ ಕಟ್ಟಡ ಮತ್ತು ಎಡಭಾಗದಲ್ಲಿರುವ ಮತ್ತೆರಡು ಕಟ್ಟಡಗಳಿಗೆ ಗೇಟ್ ವ್ಯವಸ್ಥೆ ಇಲ್ಲ. ಹೀಗಾಗಿ ಈ ಕಟ್ಟಡಗಳೀಗ ಪುಂಡ ಪೋಕರಿಗಳ ತಾಣವಾಗಿ ಮಾರ್ಪಟ್ಟಿದೆ. ಇತ್ತೀಚಿನವರೆಗೂ ಇಲ್ಲಿ ಆಗೊಮ್ಮೆ ಈಗೊಮ್ಮೆ ಮದ್ಯದ ಪಾರ್ಟಿ ನಡೆದಿರುವುದರ ಕುರುಹುಗಳು ಕಾಣುತ್ತಿವೆ.

ಜೊತೆಗೆ ಕಿಡಿಗೇಡಿಗಳು ಇಲ್ಲಿನ ಕಿಟಕಿ ಗಾಜುಗಳನ್ನು, ಬಾಗಿಲುಗಳನ್ನು ನಾಶಮಾಡಿದ್ದಾರೆ. ಮದ್ಯದ ಬಾಟಲ್‌ಗಳನ್ನೂ ಒಡೆದು ವಿಕೃತಿ ಮೆರೆದಿದ್ದಾರೆ. ಹೀಗಾಗಿ ಕಟ್ಟಡದ ಕೆಲಸವನ್ನು ಶೀಘ್ರ ಆರಂಭಿಸಬೇಕು ಮತ್ತು ಇಲ್ಲಿಗೆ ಕಾವಲುಗಾರರನ್ನು ನೇಮಕ ಮಾಡಬೇಕೆಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಒಂದೂವರೆ ದಶಕದಿಂದ ಪೂರ್ಣವಾಗದ ಕೆಲಸ

ಗಾಲ್ಛ್ ರಸ್ತೆಯಲ್ಲಿ ೫ ಎಕರೆ ಜಾಗದಲ್ಲಿ ೨೦೦೯-೧೦ರಲ್ಲಿ ಮಂಜೂರಾತಿ ಪಡೆದು ೨೦೧೧ರಲ್ಲಿ ಕೊಡವ ಹೆರಿಟೇಜ್ ಸೆಂಟರ್ ನಿರ್ಮಾಣ ಕಾರ್ಯ ಆರಂಭಿಸಲಾಯಿತು. ನಿರ್ಮಾಣದ ಹಂತದಲ್ಲಿಯೇ ಮಳೆಯಿಂದ ಛಾವಣಿ ಕುಸಿದಿತ್ತು. ಇದನ್ನು ಇತ್ತೀಚೆಗೆ ಸರಿಪಡಿಸಲಾಯಿತು. ಹೀಗೆ ಅಂದಾಜು ೧೪ ವರ್ಷಗಳ ಬಳಿಕ ಕಾಮಗಾರಿ ಮುಕ್ತಾಯಗೊಳ್ಳುವಹಂತ ತಲುಪಿತು. ಆದರೆ ಕಟ್ಟಡಕ್ಕೆ ಬೇಕಾದ ಪೀಠೋಪಕರಣ ಮತ್ತು ಮೂಲಸೌಲಭ್ಯಗಳ ಕೆಲಸ ಬಾಕಿ ಉಳಿದಿದ್ದು, ಇದಕ್ಕಾಗಿ ಈಗ ಪ್ರಸ್ತಾವನೆ ಸಲ್ಲಿಸಿ ಕಾಯಲಾಗುತ್ತಿದೆ. ಸದ್ಯ ೩.೩೦ ಕೋಟಿ ರೂ. ವೆಚ್ಚದಲ್ಲಿ ೨ ಐನ್‌ಮನೆಗಳ ಕೆಲಸ, ಪ್ರವೇಶದ್ವಾರ, ಅಡುಗೆ ಕೊಠಡಿ, ಮೆಟ್ಟಿಲುಗಳು, ಗ್ರಂಥಾಲಯ, ರಂಗಮಂದಿರ, ವಿದ್ಯುದ್ಧೀಕರಣ, ಕಿಟಕಿ, ಬಾಗಿಲುಗಳ ಕಾಮಗಾರಿಗಳು ನಡೆದಿವೆ.  ಇನ್ನೂ ಅನೇಕ ಕೆಲಸಗಳು ಬಾಕಿ ಉಳಿದುಕೊಂಡಿವೆ.

” ಕೊಡವ ಹೆರಿ ಟೇಜ್ ಸೆಂಟರ್ ಕಾಮಗಾರಿ ಯನ್ನು ಪಿಪಿಪಿ ಮಾದರಿಯಲ್ಲಿ ಪೂರ್ಣಗೊಳಿಸಿ ನಿರ್ವಹಣೆ ಮಾಡಲು ಮಾರ್ಗದರ್ಶನ ಕೋರಿ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ. ಸದ್ಯ ಕಟ್ಟಡ ಲೋಕೋಪಯೋಗಿ ಇಲಾಖೆ ಅಧಿನದಲ್ಲಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕವಷ್ಟೇ ನಮಗೆ ಹಸ್ತಾಂತರವಾಗಬೇಕು.”

-ಅನಿತಾ ಭಾಸ್ಕರ್, ಉಪ ನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ

ಆಂದೋಲನ ಡೆಸ್ಕ್

Recent Posts

ಹೆಮ್ಮಿಗೆಯಲ್ಲಿ ಹುಲಿ ದಾಳಿಗೆ ಹಸು ಬಲಿ: ರೈತರಲ್ಲಿ ಆತಂಕ

ಹುಣಸೂರು : ತಾಲೂಕಿನ ಹನಗೋಡು ಹೋಬಳಿಯ ಹೆಮ್ಮಿಗೆ ಬಳಿಯ ಜಮೀನಿನಲ್ಲಿ ಹಗಲು ವೇಳೆಯೇ ಹುಲಿ ದಾಳಿ ನಡೆಸಿ ಹಸುವನ್ನು ಕೊಂದು…

15 mins ago

ಬೋನಿಗೆ ಬಿದ್ದ ಚಿರತೆ : ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಟಿ.ನರಸೀಪುರ : ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದ ಘಟನೆ ಟಿ.ನರಸೀಪುರ ತಾಲ್ಲೂಕಿನ ಶ್ರೀರಂಗರಾಜಪುರ ಗ್ರಾಮದಲ್ಲಿ ನಡೆದಿದೆ. ಕಳೆದ…

2 hours ago

ನನಗೂ ಎಂಎಲ್‌ಸಿ ಸ್ಥಾನ ಕೊಡಿ : ರಕ್ತದಲ್ಲಿ ಸಹಿ ಹಾಕಿ ವರಿಷ್ಠರಿಗೆ ಪತ್ರ ಬರೆದ ಕಾಂಗ್ರೆಸ್ ಕಾರ್ಯಕರ್ತ

ಮೈಸೂರು: ಎಂಎಲ್‌ಸಿ ಸ್ಥಾನಕ್ಕಾಗಿ ರಕ್ತದಲ್ಲಿ ಸಹಿ ಮಾಡಿ ಮನವಿ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತನೊಬ್ಬರು ತಮ್ಮ…

2 hours ago

ಓದುಗರ ಪತ್ರ:  ದೇವಾಲಯಗಳ ಬಳಿ ಪೊಲೀಸ್ ಗಸ್ತು ಹೆಚ್ಚಿಸಿ

ಧನುರ್ಮಾಸ ಆರಂಭವಾದ ಕೂಡಲೇ ಎಲ್ಲೆಡೆ ದೇವಸ್ಥಾನಗಳಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಬೆಳಗಿನ ಜಾವ ಪೂಜೆ ಆರಂಭವಾಗುತ್ತದೆ. ಮಹಿಳೆಯರು ಬೆಳಗಿನ ಚಳಿಯಲ್ಲಿಯೇ ದೇವಾಲಯಗಳಿಗೆ…

5 hours ago

ನಂಜನಗೂಡು | ಚಲಿಸುತ್ತಿದ್ದ ಬಸ್‌ ಬೆಂಕಿಗಾಹುತಿ ; 40ಕ್ಕೂ ಹೆಚ್ಚು ಪ್ರಯಾಣಿಕರು ಪಾರು

ಮೈಸೂರು : ಚಲಿಸುತ್ತಿದ್ದ ವೇಳೆಯೇ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಹೊತ್ತಿ ಉರಿದಿರುವ ಘಟನೆ…

5 hours ago

ಓದುಗರ ಪತ್ರ: ನಂಜನಗೂಡಿನಲ್ಲಿ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿ

ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡು ಪಟ್ಟಣದಿಂದ ಊಟಿ ಮತ್ತು ಸುಲ್ತಾನ್ ಬತ್ತೇರಿಗೆ ಹಾದು ಹೋಗಿರುವ ರಸ್ತೆಗಳಲ್ಲಿ ಮತ್ತು…

5 hours ago