ಪುನೀತ್ ಮಡಿಕೇರಿ
ರಾಜ್ಯದಲ್ಲೇ ಅತಿ ಕಡಿಮೆ ಜಾನುವಾರು ಹೊಂದಿರುವ ಜಿಲ್ಲೆ ; ಜಾನುವಾರು ಸಾಕಣೆಗೆ ಆಸಕ್ತಿ ತೋರದ ರೈತರು
ಮಡಿಕೇರಿ: ಕೊಡಗುಜಿಲ್ಲೆ ಎಲ್ಲ ಕ್ಷೇತ್ರಗಳಲ್ಲಿಯೂ ಸಾಕಷ್ಟು ಮುಂದೆ ಇದ್ದರೂ ಹೈನೋದ್ಯಮ ಕ್ಷೇತ್ರದಲ್ಲಿ ಮಾತ್ರ ತೀರಾ ಹಿಂದೆ ಉಳಿದಿದ್ದು, ರೈತರು ಜಾನುವಾರು ಸಾಕಣೆಗೆ ಆಸಕ್ತಿ ತೋರುತ್ತಿಲ್ಲ, ಜತೆಗೆ ಜಾಗೃತಿಯ ಕೊರತೆಯೂ ಕಾಡುತ್ತಿದೆ.
ಇಡೀ ರಾಜ್ಯದಲ್ಲೇ ಅತಿ ಕಡಿಮೆ ಜಾನುವಾರುಗಳು ಕೊಡಗು ಜಿಲ್ಲೆಯಲ್ಲಿವೆ. ಜಿಲ್ಲೆಯಲ್ಲಿ ಅತಿ ಕಡಿಮೆ ಹಾಲು ಉತ್ಪಾದನೆಯಾಗುತ್ತದೆ. ಕೊಡಗು ಜಿಲ್ಲೆಯಲ್ಲಿ ಬೇರೆ ಎಲ್ಲ ಜಿಲ್ಲೆಗಳಂತೆ ಹೈನೋದ್ಯಮಕ್ಕೆ ವಿಪುಲ ಅವಕಾಶಗಳಿದ್ದರೂ, ಜಾಗೃತಿಯ ಕೊರತೆಯಿಂದ ಜನರು ಜಾನುವಾರು ಸಾಕಣೆಯತ್ತ ಚಿತ್ತ ಹರಿಸಿಲ್ಲ. ಒಂದು ವೇಳೆ ಕೃಷಿ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ಜಾಗೃತಿ ಮೂಡಿಸಿದರೆ, ಉದ್ಯೋಗ ಅರಸಿ ಜಿಲ್ಲೆ ಯಿಂದ ಹೊರಗೆ ಹೋಗುತ್ತಿರುವ ಯುವ ತಲೆಮಾರನ್ನು ಇಲ್ಲಿಯೇ ಉಳಿಸಿಕೊಳ್ಳಬಹುದಾಗಿದೆ.
ಕೊಡಗು ಜಿಲ್ಲೆಯಲ್ಲಿ ನಿತ್ಯ ೬೫ ರಿಂದ ೭೨ ಸಾವಿರ ಲೀಟರ್ ಹಾಲನ್ನು ಉಪಯೋಗಿಸಲಾಗುತ್ತದೆ. ಆದರೆ, ಜಿಲ್ಲೆಯಲ್ಲಿ ಉತ್ಪಾದನೆಯಾಗುವುದು ಕೇವಲ ೨೩ ಸಾವಿರ ಲೀಟರ್ ಹಾಲು ಮಾತ್ರ. ಇದರಿಂದ ಮಂಗಳೂರು, ಹಾಸನದಿಂದ ಹೆಚ್ಚಿನ ಪ್ರಮಾಣದಲ್ಲಿ ಹಾಲು ಇಲ್ಲಿಗೆ ಪೂರೈಕೆಯಾಗುತ್ತಿದೆ. ಜಿಲ್ಲೆಯಲ್ಲಿ ೩೯ ಹಾಲು ಉತ್ಪಾದಕರ ಸಹಕಾರ ಸಂಘಗಳು ಮಾತ್ರ ಇವೆ. ಅದರಲ್ಲೂ ಪೊನ್ನಂಪೇಟೆ ತಾಲ್ಲೂಕಿನಲ್ಲಿ ಒಂದೇ ಒಂದು ಸಂಘವೂ ಅಸ್ತಿತ್ವದಲ್ಲಿಲ್ಲ. ವಿರಾಜಪೇಟೆ ತಾಲ್ಲೂಕಿನಲ್ಲಿ ೨ ಮತ್ತು ಮಡಿಕೇರಿಯಲ್ಲಿ ಕೇವಲ ೧ ಸಂಘವಷ್ಟೇ ಇವೆ. ಇನ್ನುಳಿದ ಎಲ್ಲ ಸಂಘಗಳೂ ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕಿನಲ್ಲೇ ಇವೆ. ಜಿಲ್ಲೆಯಲ್ಲಿ ಹೈನೋದ್ಯಮ ಕಡಿಮೆ ಇರುವುದರಿಂದ ಸಹಜವಾಗಿಯೇ ಇಲ್ಲಿ ಹಾಲು ಉತ್ಪಾದಕರ ಮಹಾಮಂಡಲ ಇಲ್ಲ. ಇದು ಹಾಸನ ಜಿಲ್ಲಾ ಹಾಲು ಸಹಕಾರ ಒಕ್ಕೂಟದೊಂದಿಗೆ ಸೇರ್ಪಡೆಯಾಗಿದೆ. ಕೂಡಿಗೆಯಲ್ಲಿ ಜಿಲ್ಲೆಯ ಏಕೈಕ ಡೇರಿ ಇದೆ.
ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಹೆಚ್ಚಾಗಿ ಸ್ಥಾಪನೆಯಾಗದಿರುವುದಕ್ಕೆ ಹಾಲು ಉತ್ಪಾದನೆ ಕಡಿಮೆ ಇರುವುದೇ ಕಾರಣವಾಗಿದೆ. ಒಂದು ಸಂಘ ಕಾರ್ಯ ನಿರ್ವಹಿಸಬೇಕಾದರೆ ಆ ವ್ಯಾಪ್ತಿಯಲ್ಲಿ ಕನಿಷ್ಠ ನಿತ್ಯ ೨೦೦ ಲೀಟರ್ ಹಾಲು ಉತ್ಪಾದನೆಯಾಗಲೇಬೇಕು. ಆದರೆ, ಇಷ್ಟೊಂದು ಪ್ರಮಾಣದ ಹಾಲು ಉತ್ಪಾದನೆಯಾಗುವುದು ಕಷ್ಟ. ಜೊತೆಗೆ, ದೂರ ದೂರದಲ್ಲಿ ಮನೆಗಳಿರುವುದರಿಂದ ಸಹಜವಾಗಿಯೇ ಒಂದು ಕಡೆ ಹಾಲು ಸ್ವೀಕರಣಾ ಕೇಂದ್ರ ತೆರೆಯುವುದು ಕಷ್ಟ. ಇದರಿಂದಾಗಿ ಹೆಚ್ಚಿನ ಸಂಘಗಳು ಜಿಲ್ಲೆಯಲ್ಲಿ ಸ್ಥಾಪನೆಯಾಗಿಲ್ಲ.
ಇದರ ಮಧ್ಯೆಯೂ ಹಲವು ಪ್ರಗತಿಪರ ರೈತರು ಹೆಚ್ಚಾಗಿ ಜಾನುವಾರುಗಳನ್ನು ಸಾಕುತ್ತಿದ್ದಾರೆ. ಹೈನೋದ್ಯಮವನ್ನೇನೆಚ್ಚಿಕೊಂಡು ಜೀವನದಲ್ಲಿ ಯಶಸ್ಸು ಕಂಡಿದ್ದಾರೆ. ಆದರೆ ಅಂತಹವರ ಸಂಖ್ಯೆ ವಿರಳ. ಸದ್ಯ, ಜಿಲ್ಲೆಯಲ್ಲಿ ೭೨ ಸಾವಿg ಜಾನುವಾರುಗಳು ಮಾತ್ರವೇ ಇವೆ. ಅವುಗಳಲ್ಲಿ ೩೬ ಸಾವಿರ ಮಾತ್ರ ಮಿಶ್ರ ತಳಿ ಹಸುಗಳು. ಉಳಿದವು ದೇಸಿ ತಳಿಗಳಾಗಿವೆ. ಕೊಡಗು ಜಿಲ್ಲೆಯಲ್ಲಿ ಹೈನೋದ್ಯಮಕ್ಕೆ ಪೂರಕವಾಗಿರುವ ಅಂಶಗಳ ಪೈಕಿ ಮೇವು ಲಭ್ಯತೆಯೂ ಒಂದು. ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆಯುವುದರಿಂದ ಸಹಜವಾಗಿಯೇ ಅತ್ಯಧಿಕ ಪ್ರಮಾಣದ ಮೇವು ಜಿಲ್ಲೆಯಲ್ಲಿ ಲಭ್ಯವಿದೆ. ಈ ಮೇವನ್ನು ಬಳಕೆ ಮಾಡಿಕೊಂಡು ಹಸುಗಳನ್ನು ಸಾಕಲು ಅವಕಾಶ ಇದೆ. ಆದರೆ, ಇಲ್ಲಿನ ಜನರು ಇದನ್ನು ಬಳಕೆ ಮಾಡಿಕೊಳ್ಳುತ್ತಿಲ್ಲ.ಇಲ್ಲಿನ ಮೇವು ಕೇರಳದ ಹೈನೋದ್ಯಮಕ್ಕೆ ಪೂರೈಕೆಯಾಗುತ್ತಿದೆ.
ಮಡಿಕೇರಿ ಸೇರಿದಂತೆ ಹಲವು ಪಟ್ಟಣಗಳಲ್ಲಿ ಹಾಲನ್ನು ಖಾಸಗಿಯಾಗಿ ಮಾರಾಟ ಮಾಡುವ ಕೆಲವಾರು ಸಣ್ಣ ಸಣ್ಣ ಕಂಪೆನಿಗಳಿವೆ. ಇವರು ಹಾಲನ್ನು ಜನರ ಮನೆ ಬಾಗಿಲಿಗೆ ನಿತ್ಯ ಬೆಳಿಗ್ಗೆ ಮತ್ತು ಸಂಜೆ ತಲುಪಿಸುತ್ತಾರೆ. ಈ ಬಗೆಯ ಸಣ್ಣ ಸಣ್ಣ ಕಿರು ಉದ್ಯಮಗಳನ್ನು ನಡೆಸಲೂ ಇಲ್ಲಿ ವಿಫುಲ ಅವಕಾಶಗಳಿವೆ.
ಸಾಲ ಸೌಲಭ್ಯ ಜಾಗೃತಿ ಅಗತ್ಯ..!:
ಹೈನೋದ್ಯಮಕ್ಕೆ ವಿವಿಧ ಯೋಜನೆಗಳಡಿ ಸಾಲಸೌಲಭ್ಯಗಳು ದೊರೆಯುತ್ತವೆ. ವಿಶೇಷವಾಗಿ, ನಬಾರ್ಡ್ ಸಾಲ ನೀಡುತ್ತದೆ. ಸಣ್ಣಪುಟ್ಟ ನೌಕರಿ ಮಾಡುವುದಕ್ಕಿಂತ ೪ ಹಸುಗಳನ್ನು ಸಾಕುವುದು ಉತ್ತಮ ಎಂಬ ಭಾವನೆ ಯುವ ತಲೆಮಾರಿನಲ್ಲಿ ಬೇರೂರುವಂತೆ ಮಾಡಬೇಕಿದೆ. ಇದಕ್ಕೆ ಬೇಕಾದ ಮೇವು, ಜಾಗ, ಮಾರುಕಟ್ಟೆ, ಸಾಲ ಸೌಲಭ್ಯಗಳ ಕುರಿತು ಅರಿವು ಮೂಡಿಸಬೇಕಿದೆ. ಸೂಕ್ತ ತರಬೇತಿ ನೀಡಿದರೆ ನಿಜಕ್ಕೂ ಹೈನೋದ್ಯಮ ಕ್ಷೇತ್ರದಲ್ಲಿ ಕೊಡಗು ಮುಂಚೂಣಿಗೆ ಬರಬಹುದಾಗಿದೆ.
” ಕೊಡಗು ಜಿಲ್ಲೆಯಲ್ಲಿ ಹೈನೋದ್ಯಮಕ್ಕೆ ವಿಪುಲ ಅವಕಾಶಗಳಿವೆ ಎಂಬುದು ಸತ್ಯ. ಇದಕ್ಕೆ ನಬಾರ್ಡ್‌ನಿಂದ ಸಾಲಸೌಲಭ್ಯ ಸಿಗುತ್ತದೆ. ಉತ್ತಮ ಮಾರುಕಟ್ಟೆಯೂ ಇದೆ. ಯುವ ಜನರು ಸಣ್ಣಪುಟ್ಟ ನೌಕರಿ ಮಾಡುವ ಬದಲು ಹೈನೋದ್ಯಮ ನಡೆಸಿದರೆ ಖಂಡಿತ ಲಾಭಗಳಿಸಬಹುದು. ಹಸು ಸಾಕಾಣಿಕೆಯನ್ನು ಉದ್ಯಮವಾಗಿ ಸ್ವೀಕರಿಸಬೇಕಿದೆ.”
-ಲಿಂಗರಾಜ ದೊಡ್ಡಮನಿ, ಉಪನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ
ಬೆಂಗಳೂರು : ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಹಂತ ಹಂತವಾಗಿ ಸಫಾರಿ ಆರಂಭಿಸಲು ಮತ್ತು ಧಾರಣಾ ಶಕ್ತಿ ಮತ್ತು ಹುಲಿಗಳು ನಾಡಿನತ್ತ…
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆ ಮೈಸೂರಿನಲ್ಲಿ ಎರಡು ದಿನಗಳ ಕಾಲ ಪ್ರವಾಸ ಹಮ್ಮಿಕೊಂಡಿದ್ದಾರೆ. ಜ.5ರಂದು ಬೆಳಿಗ್ಗೆ…
ಮೈಸೂರು : ಅರಮನೆ ನಗರಿ ಮೈಸೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಾಮುಂಡಿಬೆಟ್ಟದ ಸಂರಕ್ಷಣೆ ಮತ್ತು ಉಳಿವಿಗಾಗಿ ಜ.4ರಂದು(ಭಾನುವಾರ) ಜಾಗೃತಿ ಆಂದೋಲನವನ್ನು…
ಭೋಪಾಲ್ : ಇಂದೋರ್‌ನ ಭಗೀರಥಪುರದಲ್ಲಿ ಕಲುಷಿತ ಕುಡಿಯುವ ನೀರು ಸೇವನೆಯಿಂದ 11 ಜೀವಗಳು ಬಲಿಯಾಗಿವೆ. ಮತ್ತು 1400ಕ್ಕೂ ಹೆಚ್ಚು ನಿವಾಸಿಗಳ…
ಬೆಂಗಳೂರು : ಬ್ಯಾನರ್ ಕಟ್ಟುವ ವಿಷಯದಲ್ಲಿ ಕಳೆದ ರಾತ್ರಿ ಬಳ್ಳಾರಿ ನಗರದಲ್ಲಿ ನಡೆದ ಘಟನೆಯ ಕುರಿತು ಉಚ್ಚ ನ್ಯಾಯಾಲಯದ ಹಾಲಿ…
ಬೆಂಗಳೂರು : ಬಳ್ಳಾರಿಯಲ್ಲಿ ಗುರುವಾರ ರಾತ್ರಿ ವಾಲ್ಮೀಕಿ ಬ್ಯಾನರ್ ವಿಚಾರದಲ್ಲಿ ನಡೆದ ಎರಡು ಗುಂಪುಗಳ ಘರ್ಷಣೆ ವೇಳೆ ಫೈರಿಂಗ್ ಆಗಿ…