Andolana originals

ಕೇರಳ ಸರ್ಕಾರ ಭಾಷಾ ಸೌಹಾರ್ದತೆ ಕಾಪಾಡಲಿ

ಏಪ್ರಿಲ್ ತಿಂಗಳ ಹೊತ್ತಿಗೆ ವಿಧಾನಸಭೆ ಚುನಾವಣೆ ನಡೆಯಲಿರುವ ಕೇರಳದಲ್ಲಿನ, ಸಿಪಿಐ(ಎಂ)ನ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎ- ಸರ್ಕಾರ, ರಾಜಕೀಯ ಕಾರಣಗಳಿಗಾಗಿ ನೆರೆಯ ಕರ್ನಾಟಕದ ಒಂದೊಂದೇ ವಿಷಯಗಳಲ್ಲಿ ಮೂಗು ತೂರಿಸಲಾರಂಭಿಸಿದೆ.

ವನ್ಯಜೀವಿಗಳ ಪಾಲಿಗೆ ಕಂಟಕ ಪ್ರಾಯವಾಗಿರುವ ಕಾರಣಕ್ಕೆ ಸ್ಥಗಿತಗೊಳಿಸಿರುವ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ ಮೂಲಕ ಕೇರಳಕ್ಕೆ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅನುಮತಿ ನೀಡುವಂತೆ ದಶಕಗಳಿಂದಲೂ ಕರ್ನಾಟಕ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಬಂದಿರುವ ಕೇರಳ ಸರ್ಕಾರ, ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿನ ಅಕ್ರಮ ಮನೆಗಳನ್ನು ತೆರವುಗೊಳಿಸಿದ್ದನ್ನೂ ಖಂಡಿಸಿದ್ದಲ್ಲದೇ, ಸ್ವತಃ ಅಲ್ಲಿನ ಚುನಾಯಿತ ಪ್ರತಿನಿಧಿ ಕೋಗಿಲು ಬಡಾವಣೆಗೆ ಬಂದು ಪರಿಶೀಲನೆ ನಡೆಸಿ, ಸೂರು ಕಳೆದುಕೊಂಡವರ ಅಹವಾಲು ಆಲಿಸಿ, ಅವರ ಬೆಂಬಲಕ್ಕೆ ನಿಲ್ಲುವ ವಾಗ್ದಾನ ನೀಡಿ ಹೋಗುವ ದಾರ್ಷ್ಯ್ಟತನ ತೋರಿದ್ದಾರೆ. ಇದರ ಬೆನ್ನಲ್ಲೇ ಎಐಸಿಸಿಪ್ರಧಾನ ಕಾರ್ಯದರ್ಶಿ ಕೆ.ವೇಣುಗೋಪಾಲ್ ಅವರ ಸೂಚನೆ ಮೇರೆಗೆ ಕರ್ನಾಟಕ ಸರ್ಕಾರ ತಾನೇ ಕೆಡವಿದ ಅಕ್ರಮ ಸೂರುದಾರರಿಗೆ ಕನ್ನಡಿಗರ ತೆರಿಗೆ ಹಣದಲ್ಲಿ ನಿರ್ಮಿಸಿರುವ ಸುಸಜ್ಜಿತ ಬಹುಮಹಡಿ ಕಟ್ಟಡದಲ್ಲಿ ಮನೆಗಳ ಹಂಚಿಕೆಗೆ ಮುಂದಾಗಿರುವುದು ವಿವಾದಕ್ಕೆ ಎಡೆಮಾಡಿದೆ. ಇದರ ಬೆನ್ನಲ್ಲೇ ಇದೀಗ ಕೇರಳ ಸರ್ಕಾರ ಭಾಷೆಯಂತಹ ಭಾವನಾತ್ಮಕ ವಿಚಾರದಲ್ಲಿ ಕನ್ನಡಿಗರನ್ನು ಕೆಣಕುವ ದುಸ್ಸಾಹಸಕ್ಕೆ ಕೈಹಾಕಿದ್ದು, ಕೇರಳ ಸರ್ಕಾರ ಜಾರಿಗೆ ತಂದಿರುವ ‘ಮಲಯಾಳಂ ಭಾಷಾ ಮಸೂದೆ-೨೦೨೫’ ಅನ್ನು ವಿರೋಧಿಸಿ ನಾಡಿನಾದ್ಯಂತ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಬೀದಿಗಿಳಿದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಸುದೀರ್ಘ ಪತ್ರ ಬರೆದು ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವಿನ ದೀರ್ಘಕಾಲದ ಸಂಬಂಧವನ್ನು ನೆನಪಿಸಿದ್ದಾರೆ.

ಸಿದ್ದರಾಮಯ್ಯ ಅವರು ಪತ್ರ ಬರೆದ ಬೆನ್ನಲ್ಲೇ ಕೇರಳ ಸರ್ಕಾರ ತನ್ನ ವರಸೆ ಬದಲಿಸಿದ್ದು, ಹೊರರಾಜ್ಯ, ವಿದೇಶಿ ವಿದ್ಯಾರ್ಥಿಗಳಿಗೆ ಮಲಯಾಳಂ ಪರೀಕ್ಷೆ ಕಡ್ಡಾಯವಲ್ಲ. ೯, ೧೦ನೇ ತರಗತಿ ಹಾಗೂ ಪಿಯುಸಿ ಪರೀಕ್ಷೆಗೆ ಮಲಯಾಳಂ ಪರೀಕ್ಷೆ ಕಡ್ಡಾಯಗೊಳಿಸಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಪತ್ರಕ್ಕೆ ಪ್ರತ್ಯುತ್ತರ ಬರೆಯುವ ಸೌಜನ್ಯ ತೋರದ ಪಿಣರಾಯಿ ವಿಜಯನ್ ಅವರ ಎಕ್ಸ್ ಖಾತೆಯ ಒಕ್ಕಣೆಯನ್ನು ನಂಬಿ ಕುಳಿತರೆ ಮಲಯಾಳಂ ಭಾಷಾ ಮಸೂದೆ-೨೦೨೫ (ತಿದ್ದುಪಡಿ) ಕಾನೂನಾಗಿ ಜಾರಿಯಾಗಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ? ೧೩ನೇ ಕೇರಳ ವಿಧಾನಸಭೆಯಲ್ಲಿ ಮಂಡಿಸಲಾದ ಈ ಮಸೂದೆಯು ಭಾಷಾ ಅಲ್ಪಸಂಖ್ಯಾತರಿಗೆ ವಿರುದ್ಧವಾಗಿದೆ ಎಂದು ಅಂದಿನ ರಾಜ್ಯಪಾಲರು ಅಂಕಿತ ಹಾಕದೆ, ರಾಷ್ಟ್ರಪತಿ ಭವನಕ್ಕೆ ರವಾನಿಸಿದರು. ರಾಷ್ಟ್ರಪತಿಗಳು ಕೂಡ ಇದಕ್ಕೆ ಅನುಮೋದನೆ ನೀಡದಿರುವುದರಿಂದ ಪಿಣರಾಯಿ ವಿಜಯನ್ ಸರ್ಕಾರ ಮತ್ತೆ ತಿದ್ದುಪಡಿ ಮಸೂದೆಗೆ ರಾಜ್ಯಪಾಲರ ಅನುಮೋದನೆ ಪಡೆದಿದೆ. ಹೀಗಾಗಿ ಈ ಮಸೂದೆ ಕಾನೂನಾಗಿ ಜಾರಿಯಾದರೆ ಗಡಿಪ್ರದೇಶದ ಕನ್ನಡಿಗರ ಮೇಲೆ ಮಲಯಾಳಂ ಭಾಷಾ ಏರಿಕೆ ಮಾಡಿದಂತಾಗುತ್ತದೆ.

ಕೇರಳದ ಮಲಯಾಳಂ ಭಾಷಾ ಮಸೂದೆ-೨೦೨೫ರಲ್ಲಿ ಏನಿದೆ? ಅದರಿಂದ ಕನ್ನಡಿಗರಿಗೆ, ಕನ್ನಡ ಶಾಲೆಗಳಿಗೆ ಏಕೆ ಆತಂಕ ಎಂಬುದನ್ನು ನೋಡಹೊರಟರೆ ರಿಷಬ್ ಶೆಟ್ಟಿ ನಿರ್ದೇಶನದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ-ಕಾಸರಗೋಡು’ ಸಿನಿಮಾದಲ್ಲಿ ಗಡಿಭಾಗದ ಕನ್ನಡ ಶಾಲೆಯ ಮಕ್ಕಳಿಗೆ ಎದುರಾಗಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ಅದೇ ಮಾದರಿಯಲ್ಲಿ ಈ ಮಸೂದೆ ಕಾನೂನಾಗಿ ಜಾರಿಯಾದಲ್ಲಿ ಗಡಿಭಾಗದ ಮಕ್ಕಳ ಮೇಲೆ ಮಲಯಾಳಂ ಭಾಷೆಯನ್ನು ಕಡ್ಡಾಯವಾಗಿ ಹೇರಿಕೆ ಮಾಡುವುದರಲ್ಲಿ ಯಾವುದೇ ಅನುಮಾನ ಬೇಡ. ಇದು ಕರ್ನಾಟಕದ ಗಡಿಭಾಗದ ಕನ್ನಡಿಗರ ಪ್ರಾಬಲ್ಯ ಹೆಚ್ಚಿರುವ ಕಾಸರಗೋಡು, ಮಂಜೇಶ್ವರ ಪ್ರದೇಶದ ಕನ್ನಡ ಭಾಷಿಕ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ.

” ಕೇರಳದಲ್ಲಿ ಸುಮಾರು ೨೦೨ ಕನ್ನಡ  ಮಾಧ್ಯಮ ಶಾಲೆಗಳಿವೆ. ಅದರಲ್ಲೂ ಕಾಸರಗೋಡು ಜಿಲ್ಲೆ ಒಂದರಲ್ಲೇ ೧೯೪ಕ್ಕೂ ಹೆಚ್ಚು ಕನ್ನಡ ಮಾಧ್ಯಮ ಶಾಲೆಗಳಿವೆ. ಮಲಯಾಳ ಭಾಷಾ ಮಸೂದೆ ಕಾನೂನಾಗಿ ಜಾರಿಯಾದರೆ, ಕನ್ನಡ ಮಾಧ್ಯಮ ಶಾಲೆಗಳ ಮಲಯಾಳೀಕರಣ ವಾಗುವ ಆತಂಕ ಇದ್ದೇ ಇದೆ. ಕೇರಳದ ಗಡಿ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಜನರ ಜೀವನ ಕೂಡ ಸಂಪೂರ್ಣ ಕನ್ನಡ ಭಾಷೆಯೊಂದಿಗೆ ಬೆರೆತು ಹೋಗಿದೆ. ಹೀಗಾಗಿ ಕೇರಳ ಸರ್ಕಾರ ಬಾಯಿ ಮಾತಿಗೆ ಸೀಮಿತವಾಗದೇ ಉದ್ದೇಶಿತ ಮಸೂದೆಯನ್ನು ಹಿಂಪಡೆಯುವ ಪ್ರಾಮಾಣಿಕ ಕಳಕಳಿಯನ್ನು ತೋರುವ ಮೂಲಕ ಭಾಷಾ ಸೌಹಾರ್ದತೆ ಕಾಪಾಡಲು ಮುಂದಾಗಲಿ.”

ಆಂದೋಲನ ಡೆಸ್ಕ್

Recent Posts

ಉಡುತೊರೆ ಹಳ್ಳ ಜಲಾಶಯದ 490 ಕೋಟಿ ವೆಚ್ಚದ ಕಾಮಗಾರಿಗೆ ಅನುಮೋದನೆ: ಸಿಎಂ ಸಿದ್ದರಾಮಯ್ಯಗೆ ಅಭಿನಂದನೆ ಸಲ್ಲಿಸಿದ ಪುಟಾಣಿಗಳು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲೂಕಿನ ಉಡುತೊರೆ ಹಳ್ಳ ಜಲಾಶಯ ಸೇರಿದಂತೆ ಪ್ರಮುಖ ಕೆರೆಕಟ್ಟೆಗಳಿಗೆ ಕಾವೇರಿ…

4 hours ago

ಹನೂರು| ಕುಡಿಯುವ ನೀರಿನ ಸಮಸ್ಯೆ ಉದ್ಭವ: ಅಧಿಕಾರಿಗಳ ವಿರುದ್ಧವೇ ದೂರು ನೀಡಿದ ಗ್ರಾಮಸ್ಥರು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದ್ದು, ಸಂಬಂಧಪಟ್ಟವರು ಸರಿಯಾಗಿ ಸ್ಪಂದಿಸುತ್ತಿಲ್ಲ.…

4 hours ago

ಯಾವುದೇ ಕಾರಣಕ್ಕೂ ಟಿ.ನರಸೀಪುರ ರೇಷ್ಮೆ ಕಾರ್ಖಾನೆ ಮುಚ್ಚಲ್ಲ: ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಕ್ರೀಡಾಂಗಣಕ್ಕಾಗಿ ಯಾವುದೇ ಕಾರಣಕ್ಕೂ ರೇಷ್ಮೆ ಕಾರ್ಖಾನೆಯನ್ನು ಮುಚ್ಚುವುದಿಲ್ಲ ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಈ ಕುರಿತು ಮಾತನಾಡಿದ…

5 hours ago

ಹಾಸನ: ಕೆರೆಗೆ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

ಹಾಸನ: ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ನೀರಿನಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ. ಜಿಲ್ಲೆಯ ಆಲೂರು…

5 hours ago

ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಸಿಲುಕಿದ ಸಾರಂಗ: ಅರಣ್ಯ ಇಲಾಖೆಯಿಂದ ರಕ್ಷಣೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಬಿಸಿಲ ಬೇಗೆ ತಾಳಲಾರದೆ ನೀರು ಕುಡಿಯಲು ಹೋದ ಸಾರಂಗ ಕೆಸರು…

5 hours ago

ಮಂಡ್ಯ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಯ ಮುಂಚೂಣಿಯಲ್ಲಿದೆ: ಸಚಿವ ಚಲುವರಾಯಸ್ವಾಮಿ

ಮಂಡ್ಯ: ಮುಂದಿನ ಎರಡು ವರ್ಷಗಳಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರ ಜಿಲ್ಲೆಯ ಇತರೆ ಕ್ಷೇತ್ರಗಳ ಅಭಿವೃದ್ಧಿಗಿಂತ ಮುಂಚೂಣಿಯಲ್ಲಿರಲಿದ್ದು, ಇದಕ್ಕೆ ಶ್ರಮಿಸುತ್ತಿರುವ ಸ್ಥಳೀಯ…

6 hours ago