ವಸುಧೇಂದ್ರ
ಸಾಹಿತ್ಯಕ್ಕೆ ರಾಜಕೀಯ ಬೆರತಂತೆಲ್ಲಾ ಭ್ರಷ್ಟತೆ ಹೆಚ್ಚುತ್ತದೆ. ಸಾಹಿತ್ಯ ಸಮ್ಮೇಳನವನ್ನಂತೂ ರಾಜಕೀಯ ನಾಯಕರು ಆಪೋಶನ ತೆಗೆದುಕೊಂಡು ಬಿಟ್ಟಿದ್ದಾರೆ. ಕೇವಲ ಶೀರ್ಷಿಕೆಯಲ್ಲಿ ‘ಸಾಹಿತ್ಯ’ ಎನ್ನುವ ಪದ ಇದೆ ಎನ್ನುವುದನ್ನು ಹೊರತು ಪಡಿಸಿದರೆ, ಸಾಹಿತ್ಯ ಸಮ್ಮೇಳನಕ್ಕೂ ಸಾಹಿತ್ಯಕ್ಕೂ ಅಂತಹ ಸಂಬಂಧ ಇಲ್ಲ.
ಸಮ್ಮೇಳನದಲ್ಲಿ ಸ್ವಲ್ಪ ಮಟ್ಟಿಗೆ ಓದುಗರಿಗೆ ಇಷ್ಟವಾಗುವುದು ಪುಸ್ತಕ ಮಳಿಗೆಗಳು ಮಾತ್ರ. ನಾಡಿನ ಮೂಲೆ ಮೂಲೆಯಿಂದ ಪ್ರಕಾಶಕರು ತಮ್ಮ ಸರಕನ್ನು ಹೊತ್ತು ತಂದಿರುತ್ತಾರೆ. ಬಾಕಿ ದಿನಗಳಲ್ಲಿ ನಮಗೆ ಲಭ್ಯವಾಗದ ಪುಸ್ತಕಗಳು ಸಮ್ಮೇಳನದ ನೆಪದಲ್ಲಿ ಒಂದೆಡೆ ದೊರಕುತ್ತವೆ. ಹಲವಾರು ಸಾಹಿತಿಗಳು ಮಾತನಾಡಲು, ಸಹಿ ಮಾಡಲು ದೊರಕುತ್ತಾರೆ. ಅವರೊಡನೆ ನಿಂತು ಒಂದು ಸೆಲ್ಛೀ ತೆಗೆದುಕೊಳ್ಳು ವುದು ಸಂಭ್ರಮದ ಸಂಗತಿಯೇ ಆಗಿರುತ್ತದೆ.
ಅವೆಲ್ಲ ಓದುಗರಿಗೆ ಮುದ ನೀಡುವ ಸಂಗತಿಗಳೇ ಆಗಿವೆ. ಹಲವು ದಶಕಗಳ ಕೆಳಗೆ ನಮ್ಮ ಹಿರಿಯ ಸಾಹಿತಿ ಗಳು ಸದುದ್ದೇಶದಿಂದಲೇ ಸಾಹಿತ್ಯ ಸಮ್ಮೇಳನ ಪ್ರಾರಂಭಿಸಿದ್ದಾರೆ. ಅದಕ್ಕೆ ತಕ್ಕಂತೆ ಪ್ರತಿವರ್ಷವೂ ಸಾಹಿತ್ಯಕ್ಕೆ ಸಂಬಂಽಸಿದ ಸಂಗತಿಗಳನ್ನು ಚರ್ಚಿಸುತ್ತಾ, ಕರ್ನಾಟಕದ ಏಳಿಗೆಯ ಕಡೆಗೆ ಗಮನ ಹರಿಸುತ್ತಾ ಬಂದಿದ್ದಾರೆ. ಆ ಹೊತ್ತಿನಲ್ಲಿ ರಾಜಕೀಯ ನಾಯಕರು ಸಮ್ಮೇಳನದಲ್ಲಿ ಮೂಗು ತೂರಿಸದೇ ಇರುವುದರಿಂದ ಅದು ತನ್ನ ಪಾವಿತ್ರ್ಯತೆಯನ್ನು ಉಳಿಸಿಕೊಂಡಿತ್ತು. ಯಾವುದೇ ದುಂಧು ಖರ್ಚಿನ ಹೊರೆಯಿಲ್ಲದೆ, ಸಾಹಿತಿಗಳು ಮತ್ತು ಓದುಗರ ಪ್ರೀತಿಯ ನೆರಳಲ್ಲಿ ಅಂತಹ ಸಮ್ಮೇಳನಗಳು ನಡೆದಿರುವುದು ಕಂಡು ಬರುತ್ತದೆ.
ಯಾವಾಗ ಕನ್ನಡ ಸಾಹಿತ್ಯ ಸಮ್ಮೇಳನದ ಜನಪ್ರಿಯತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಬಂದಿತೋ, ಆಗ ಅದರೆಡೆಗೆ ರಾಜಕೀಯ ನಾಯಕರ ಕಣ್ಣು ಹೋಗಿದೆ. ಈಗ ಅದನ್ನು ಸಂಪೂರ್ಣವಾಗಿ ಕಬಳಿಸಿಕೊಂಡು ಬಿಟ್ಟಿದ್ದಾರೆ. ಸಾಹಿತ್ಯ ಸಮ್ಮೇಳನ ಇಂದು ಹುಲಿಸವಾರಿ ಆಗಿ ಹೋಗಿದೆ. ನಿಲ್ಲಿಸುವಂತಿಲ್ಲ, ಹೀಗೇ ಸಾಗುವುದೂ ಸರಿಯಲ್ಲ. ಕೊನೆಯ ಪಕ್ಷ ಅದರ ಸ್ವರೂಪವನ್ನಾದರೂ ಬದಲಿಸಲು ನಾವು ಸಿದ್ಧರಾಗಬೇಕು. ರಾಜಕೀಯ ನಾಯಕರು ಬೇಕಿದ್ದರೆ ಇಡೀ ಜನಸಮುದಾಯವನ್ನು ಆಕರ್ಷಿಸುವ ಜಾತ್ರೆಗಳನ್ನು ಮಾಡಲಿ. ತಪ್ಪೇನಿಲ್ಲ. ಆದರೆ ಸಾಹಿತ್ಯಕ್ಕೆ ತನ್ನದೇ ಆದ ಘನತೆಯನ್ನು ಕಾಪಾಡಿ ಕೊಳ್ಳುವ ಅವಶ್ಯಕತೆಯಿದೆ.
ಸಾಹಿತ್ಯದ ಹೆಸರಲ್ಲಿ ಜನರ ಹಣವನ್ನು ಪೋಲು ಮಾಡುವುದು ಬೇಡ. ಹಿರಿಯ ಸಾಹಿತಿಗಳು ಸೇರಿ ನಮಗೇನು ಬೇಕು ಎನ್ನುವುದನ್ನು ನಿರ್ಧರಿಸಲಿ. ಈ ದೊಡ್ಡ ಮೊತ್ತದಲ್ಲಿ ಹಲವಾರು ಸಾಹಿತ್ಯದ ಕೆಲಸ ಗಳನ್ನು ಪೂರೈಸಬಹುದು. ಪ್ರತಿ ಯೊಂದು ಜಿಲ್ಲೆಯಲ್ಲೂ ಅಚ್ಚುಕಟ್ಟಾಗಿ ಪುಸ್ತಕ ಸಂತೆ ಯನ್ನು ಮಾಡಬಹುದು. ಕನ್ನಡದಿಂದ ಬೇರೆ ಭಾಷೆಗೆ, ಪ್ರಮುಖವಾಗಿ ಇಂಗ್ಲೀಷಿಗೆ, ಮುಖ್ಯ ಕೃತಿಗಳನ್ನು ತರ್ಜುಮೆ ಮಾಡಿಸಿ ಉತ್ತಮ ಪ್ರಕಾಶಕರಿಂದ ಪ್ರಕಟಿ ಸಬಹುದು, ಅವರಿಗೆ ಅಗತ್ಯವಾದ ಸಾ-ವೇರ್ ಗಳನ್ನು ಕೊಟ್ಟು ತರಬೇತಿಗಳನ್ನು ನೀಡಬಹುದು, ಮುಖ್ಯ ಲೇಖಕರನ್ನು ಹಲವು ಊರುಗಳಿಗೆ ಕಳುಹಿಸಿ ಓದುಗರೊಡನೆ ಒಡನಾಟ ಮಾಡಿಸಬಹುದು-ಹೀಗೆ ಹಲವಾರು ಉತ್ತಮ ಕೆಲಸಗಳನ್ನು ಮಾಡುವ ಅವಕಾಶ ನಮಗೆ ದಕ್ಕುತ್ತದೆ.
ಅದೊಂದೂ ಇಲ್ಲದೆ ದೀಪಾವಳಿಯಲ್ಲಿ ಪಟಾಕಿ ಸಿಡಿಸಿ ಹಣವನ್ನು ಪೋಲು ಮಾಡಿದಂತೆ ಮೂವತ್ತೊಂದು ಕೋಟಿ ರೂ. ಅನ್ನು ಉಡಾಯಿಸುವುದು ಸಾಹಿತ್ಯದ ಯಾವ ಸೌಭಾಗ್ಯಕ್ಕೆ? ಪ್ರತಿ ಸಾಹಿತ್ಯ ಸಮ್ಮೇಳನ ಮುಗಿದ ನಂತರ ನಾವು ಸಾಽಸಿದ ಸಾಹಿತ್ಯದ ಸಾಧನೆಗಳನ್ನು ಪಟ್ಟಿ ಮಾಡುವ ಸಂಪ್ರದಾಯವನ್ನು ಸಾಹಿತ್ಯ ಪರಿಷತ್ತು ಎತ್ತಿಕೊಳ್ಳಬೇಕು. ಇಂತಹ ದೊಡ್ಡ ವೆಚ್ಚವನ್ನು ಮಾಡಿದ ಮೇಲೆ ಅದಕ್ಕೆ ಉತ್ತರದಾಯಿತ್ವ ಹೊರುವುದು ಅಷ್ಟೇ ಮುಖ್ಯವಾಗಿರುತ್ತದೆ. ಕೇವಲ ಒಂದು ಅಥವಾ ಎರಡು ಕೋಟಿ ಹಣದಲ್ಲಿ ದೇಶದಲ್ಲಿ ಅತ್ಯಂತ
ಅಚ್ಚುಕಟ್ಟಾಗಿ ಲಿಟರರಿ ಫೆಸ್ಟಿವಲ್‌ಗಳು ನಡೆಯುತ್ತಿವೆ. ಅಲ್ಲಿ ಹಲವಾರು ಪುಸ್ತಕಗಳ ಬಗ್ಗೆ ಚರ್ಚೆಯಾಗುತ್ತದೆ, ಹತ್ತಾರು ಹೊಸ ಲೇಖಕರ ಪರಿಚಯವಾಗುತ್ತದೆ, ದೇಶದ ಜ್ವಲಂತ ಸಮಸ್ಯೆಗಳ ಚರ್ಚೆಯೂ ಆಗುತ್ತದೆ. ಅದು ನಮಗೆ ಮಾದರಿಯಾಗಬಾರದೇಕೆ? ವಿಶೇಷವೆಂದರೆ ಇವೆಲ್ಲ ಲಿಟರರಿ ಫೆಸ್ಟಿವಲ್‌ಗಳು ಖಾಸಗಿಯಾಗಿ ನಡೆಯುತ್ತವೆ. ಅಲ್ಲಿ ಸರಕಾರ ಮೂಗು ತೂರಿಸುವುದಿಲ್ಲ. ರಾಜಕೀಯ ನಾಯಕರು ಭಾಗವಹಿಸಿದರೂ ಸಾಹಿತ್ಯದ ವಿದ್ಯಾರ್ಥಿಯಾಗಿ ಬರುತ್ತಾರೆ. ಖಾಸಗಿ ಕಾರ್ಪೊರೇಟ್ ಕೈಗೆ ಚುಕ್ಕಾಣಿ ಸಿಗದಂತೆ ಸಾಹಿತ್ಯಾಸಕ್ತರೇ ಅಂತಹ ಸಮ್ಮೇಳನವನ್ನು ನಿರ್ವಹಿಸಿದರೆ, ಅದು ನಿಜಕ್ಕೂ ಕನ್ನಡಕ್ಕೆ ಸಾಕಷ್ಟು ಉಪಕಾರವನ್ನು ಮಾಡುತ್ತದೆ.
ಇಲ್ಲಿ ಮತ್ತೊಂದು ಮರೆಯಬಾರದ ಸಂಗತಿಯಿದೆ. ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಪರ ಪ್ರೀತಿ, ಆವೇಶ ಇರುತ್ತದೆ. ಇದು ಅತ್ಯಂತ ಪವಿತ್ರವಾದದ್ದು. ಬೀದರ್, ಕಲಬುರಗಿ, ವಿಜಯಪುರ, ಕರಾವಳಿಯಿಂದೆಲ್ಲಾ ಕನ್ನಡದ ಪುಳಕದಲ್ಲಿ ಜನರು ಸಮ್ಮೇಳನಕ್ಕೆ ಬರುತ್ತಾರೆ. ಈ ಭಾವನಾತ್ಮಕ ಬೆಸುಗೆಯನ್ನು ಸುಲಭವಾಗಿ ಸಾಽಸುವುದು ಸಾಧ್ಯವಿಲ್ಲ. ಇದಕ್ಕೆ ದಶಕಗಳ ಇತಿಹಾಸ, ಶ್ರಮದ ಕೊಡುಗೆಯಿದೆ. ಅದನ್ನು ಕುಗ್ಗಿಸದಂತೆ, ಅದು ಮತ್ತಷ್ಟು ಹಿಗ್ಗುವಂತೆ ಮಾಡಬೇಕಿದೆ. ಬಂದವರಿಗೆ ಒಳ್ಳೆಯ ಆತಿಥ್ಯ ಸಿಗಬೇಕು, ಅಚ್ಚುಕಟ್ಟಾಗಿ ನಡೆಯುವ ಗೋಷ್ಠಿಗಳಲ್ಲಿ ಅವರು ಭಾಗವಹಿಸಬೇಕು, ಮಾತುಗಳನ್ನು ಕೇಳಬೇಕು, ಪುಸ್ತಕ ಕೊಳ್ಳಬೇಕು, ಲೇಖಕರೊಡನೆ ಒಡನಾಡಿ ಮನೆಗೆ ಹೋಗವಾಗ ಏನೋ ಕನ್ನಡದ ಕೆಲಸದಲ್ಲಿ ಭಾಗಿಯಾದ ಭಾವ ಅವರಲ್ಲಿ ಮೂಡಬೇಕು.
ಆದರೆ ಸದ್ಯ ನಡೆಯುತ್ತಿರುವ ಸಮ್ಮೇಳನಗಳು ಅಂತಹವರಿಗೆ ಸುಸ್ತು ತರಿಸುತ್ತಿವೆ. ದೂಳು, ಕೆಸರು, ಊಟದ ಹೋರಾಟ, ಬಿಸಿಲು, ಗಲಾಟೆ-ಯಾವುದೂ ಮುದ ನೀಡುವುದಿಲ್ಲ. ಸಾಹಿತ್ಯದ ಉದ್ದೇಶಕ್ಕಿಂತಲೂ ಜಾತ್ರೆಯ ಉದ್ದೇಶಕ್ಕೆ ಬರುವವರ ಸಂಖ್ಯೆ ಹೆಚ್ಚಿರುವುದರಿಂದಲೇ ಈ ಸಮಸ್ಯೆಯಾಗುತ್ತದೆ. ಕನ್ನಡದ ಜಾತ್ರೆಯೂ ಬೇಕು. ಅದನ್ನು ಬೇರೆಯಾಗಿ ಸರಕಾರ ನಿರ್ವಹಿಸಲಿ. ಆದರೆ ಸಾಹಿತ್ಯಕ್ಕೆ ಮಾತ್ರ ಗಲಾಟೆಯಿಲ್ಲದ ತುಸು ನೆಮ್ಮದಿಯ ಗಳಿಗೆಗಳನ್ನು ನೀಡಲಿ. ಶ್ರವಣಬೆಳಗೊಳಕ್ಕೆ ಹೋಗಿ, ಬಾಹುಬಲಿಯ ಸನ್ನಿಽಯಲ್ಲಿ ಶಾಂತಿಯನ್ನು ಹೊಂದಿದಂತಹ ಭಾವವನ್ನು ಸಾಹಿತ್ಯ ಸಮ್ಮೇಳನ ನೀಡಬೇಕು.
ಎಷ್ಟೋ ಜನರಿಗೆ ಸಮ್ಮೇಳನದ ಗಲಾಟೆ ಅದೆಷ್ಟು ಭಯ ತರಿಸುತ್ತದೆಂದರೆ, ಅವರು ಮಂಡ್ಯದಲ್ಲಿದ್ದೂ ಸಮ್ಮೇಳನಕ್ಕೆ ಬರಲಿಲ್ಲ. ಎಷ್ಟೇ ಸಾಹಿತ್ಯದ ಆಸಕ್ತಿಯಿದ್ದರೂ ದೂಳು, ಗಲಾಟೆ ತಮಗೆ ಆಗಿ ಬರುವುದಿಲ್ಲ ಎಂದು ಬಹುತೇಕರು ಹಿಂಜರಿಯುತ್ತಾರೆ. ಸಮ್ಮೇಳನದ ಈ ರೌದ್ರ ಅವತಾರ ಬದಲಾಗಿ ಸೌಮ್ಯವಾಗಬೇಕು, ಶಾಂತವಾಗಬೇಕು. ಸಮ್ಮೇಳನಕ್ಕೆ ಬಂದವರಿಗೆಲ್ಲಾ ಉಚಿತವಾಗಿ ಆಹಾರದ ಪೂರೈಕೆ ಇರುವುದು ಇಂತಹ ಗದ್ದಲಕ್ಕೆ ಕಾರಣವಾಗುತ್ತದೆ. ಅದಕ್ಕೆ ಬದಲು ಊಟಕ್ಕೆ ಒಂದಿಷ್ಟು ಹಣವನ್ನು ನಿಗದಿ ಪಡಿಸಿದರೆ ಸಾಹಿತ್ಯದ ಆಸಕ್ತಿ ಇರುವವರು ಮಾತ್ರ ಬರುತ್ತಾರೆ. ಆಗ ದೊಡ್ಡ ಮಟ್ಟದ ಖರ್ಚೂ ಆಗುವುದಿಲ್ಲ, ಯಾವುದಾದರೂ ಒಳಾಂಗಣದಲ್ಲೇ ಸಾಹಿತ್ಯ ಸಮ್ಮೇಳನ ನಿರ್ವಹಿಸ ಬಹುದು.
ಮಂಡ್ಯದಲ್ಲಿ ಗಲಾಟೆಗೆ ಕಾರಣವಾದ ಆಹಾರದ ವೈವಿಧ್ಯವನ್ನೂ ಈ ಕ್ರಮದಲ್ಲಿ ಸುಲಭವಾಗಿ ನಿರ್ವಹಿಸಬಹುದು. ಧಾರವಾಡ ಸಾಹಿತ್ಯ ಸಂಭ್ರಮ ಶುರುವಾದಾಗ ಅಂತಹದೊಂದು ಪರ್ಯಾಯ ಸಮ್ಮೇಳನವೆನ್ನಿಸಿ ಸಾಹಿತ್ಯಾಸಕ್ತರಲ್ಲಿ ಭರವಸೆ ಮೂಡಿಸಿತ್ತು. ಆದರೆ ಅದು ದುರಾದೃಷ್ಟದಿಂದಾಗಿ ಒಂದೆರಡು ವರ್ಷಕ್ಕೆ ಮಾತ್ರ ಸೀಮಿತವಾಯ್ತು. ಈಗ ಬುಕ್‌ಬ್ರಹ್ಮದವರು ದೊಡ್ಡ ಪ್ರಮಾಣದಲ್ಲಿ ಅಂತಹದೇ ಶುದ್ಧ ಸಾಹಿತ್ಯಕ್ಕೆ ಸೀಮಿತವಾದ ಉತ್ಸವವನ್ನು ಮಾಡಲು ಶುರು ಮಾಡಿದ್ದಾರೆ. ಅದು ಹಲವು ವರ್ಷಗಳ ಕಾಲ ನಿರಂತರವಾಗಿ ನಡೆದರೆ, ಸಾಹಿತ್ಯಪ್ರಿಯರು ಅತ್ತ ಕಡೆಗೆ ವಾಲುವುದು ನಿಶ್ಚಯ.
ಬೆಂಗಳೂರು : ಮಾರ್ಕ್ʼ ಸಿನಿಮಾದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಕಿಚ್ಚ ಸುದೀಪ್ ಹೇಳಿದ ಮಾತೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ…
ಚಾಮರಾಜನಗರ : ಅನ್ನದಾತರಾಗಿರುವ ರೈತರ ಬಗ್ಗೆ ಆತ್ಮೀಯ ಕಾಳಜಿಯಿದ್ದು, ಅವರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದೆ…
ಬೆಂಗಳೂರು : ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಅಧಿಕೃತ ಅಧಿಸೂಚನೆಯ ಮೂಲಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು…
ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಕಾರ್ಯನಿರ್ವಾಹಿಸುತ್ತಿರುವ ಮಹಿಳಾ ಸಿಬ್ಬಂದಿಗೆ ತಿಂಗಳಿಗೊಂದು ದಿನ ಋತುಚಕ್ರ ರಜೆ ನೀಡುವಂತೆ…
ಮೈಸೂರು : ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತಸೌಕರ್ಯ ಮರಿಚಿಕೆಯಾಗಿದೆ ಎಂದು ಆರೋಪಿಸಿ ಸಂಶೋಧಕರು ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟವು ಪ್ರತಿಭಟನೆ…
ಕೆ.ಆರ್.ನಗರ : ಪಟ್ಟಣದಲ್ಲಿ ಇಬ್ಬರು ಯುವಕರು ಮಾರುತಿ ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ…