ಮಂಜು ಕೋಟೆ
ಸತತ ಮಳೆಯಿಂದ ನುಗು, ತಾರಕ, ಹೆಬ್ಬಾಳ ಜಲಾಶಯಗಳಲ್ಲೂ ನೀರಿನ ಮಟ್ಟ ಏರಿಕೆ
ಎಚ್.ಡಿ.ಕೋಟೆ: ತಾಲ್ಲೂಕಿನ ಕಬಿನಿ, ನುಗು, ತಾರಕ, ಹೆಬ್ಬಾಳ ಜಲಾಶಯಗಳ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಮೂರೇ ದಿನಗಳಲ್ಲಿ ಕಬಿನಿಗೆ ೧೨ ಅಡಿ, ತಾರಕಕ್ಕೆ ೩ ಅಡಿ, ನುಗುವಿಗೆ ೫ ಅಡಿ, ಹೆಬ್ಬಾಳ ಜಲಾಶಯಕ್ಕೆ ೬ ಅಡಿ ನೀರು ಬಂದಿದ್ದು, ಒಳಹರಿವಿನ ಪ್ರಮಾಣ ಹೆಚ್ಚಾಗಿರುವುದರಿಂದ ಮುಂದಿನ ತಿಂಗಳಲ್ಲೇ ಈ ಜಲಾಶಯಗಳು ಭರ್ತಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ಕಳೆದ ಏಪ್ರಿಲ್ ಮತ್ತು ಈ ತಿಂಗಳಲ್ಲಿ ವಿಪರೀತವಾದ ಬಿಸಿಲಿದ್ದರಿಂದ ಕಬಿನಿ, ನುಗು, ತಾರಕ, ಹೆಬ್ಬಾಳ ಜಲಾಶಯಗಳಲ್ಲಿ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿತ್ತು. ಆದರೆ, ಕಳೆದ ವಾರದಿಂದ ತಾಲ್ಲೂಕು ಮತ್ತು ಕೇರಳದ ವಯನಾಡು, ಕೊಡಗು ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಈ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಹೆಚ್ಚಾಗಿ ನೀರಿನ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರುವುದು ರೈತರು ಮತ್ತು ಸಾರ್ವಜನಿಕರಲ್ಲಿ ಸಂತಸ ಉಂಟುಮಾಡಿದೆ.
ಪ್ರತಿ ಸಾಲಿನಲ್ಲೂ ಈ ಅವಧಿಯಲ್ಲಿ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿತವಾಗಿರುತ್ತಿತ್ತು. ಇದೇ ಮೊದಲ ಬಾರಿಗೆ ವರುಣನ ಆರ್ಭಟದಿಂದ ಜಲಾಶಯಗಳ ನೀರಿನ ಮಟ್ಟದಲ್ಲಿ ಏರಿಕೆ ಕಾಣುತ್ತಿದ್ದು, ಇದೇ ರೀತಿ ಮಳೆ ಮುಂದುವರಿದರೆ ಜೂನ್ ತಿಂಗಳ ಮೊದಲನೇ ವಾರದಲ್ಲೇ ಜಲಾಶಯಗಳು ಭರ್ತಿಯಾಗುವುದು ಖಚಿತ. ಕಬಿನಿ ಜಲಾಶಯದ ಇತಿಹಾಸದಲ್ಲೇ ಮೊದಲು ಎಂಬಂತೆ ಮೂರೇ ದಿನಗಳಲ್ಲಿ ೧೨ ಅಡಿಗಳಷ್ಟು ನೀರಿನ ಮಟ್ಟ ಏರಿಕೆ ಕಂಡಿದೆ. ಕಳೆದ ವಾರ ಕಬಿನಿ ಜಲಾಶಯ ೬೦ ಅಡಿಗಳಿಗೆ ಕುಸಿತ ಕಂಡಿತ್ತು. ಈಗ ೭೨ ಅಡಿಗಳಷ್ಟು ನೀರಿದೆ. ಗರಿಷ್ಟ ೮೪ ಅಡಿಗಳಿರುವ ಜಲಾಶಯ ಭರ್ತಿಯಾಗಲು ಇನ್ನು ೧೨ ಅಡಿ ಮಾತ್ರ ಬಾಕಿ ಇದೆ. ಸದ್ಯ ೨೪ ಸಾವಿರ ಕ್ಯೂಸೆಕ್ಸ್ ಒಳಹರಿವು ಇದೆ.
ತಾರಕ ಜಲಾಶಯ ತನ್ನ ಗರಿಷ್ಟ ೧೧೦ ಅಡಿ ತಲುಪಲು ಇನ್ನು ೧೨ ಅಡಿಗಳು ಮಾತ್ರ ಬಾಕಿ ಇದೆ. ೩ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯದಲ್ಲಿ ೩ ಅಡಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ ೧,೭೦೦ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು ಕೊಡಗಿನಲ್ಲಿ ಮಳೆ ಪ್ರಮಾಣ ಹೆಚ್ಚಾಗಿರುವುದರಿಂದ ಈ ಪ್ರದೇಶದಿಂದ ಈ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ.
ಹೆಬ್ಬಾಳದ ಜಲಾಶಯ ತನ್ನ ಗರಿಷ್ಟ ಮಟ್ಟ ೨೫ ಅಡಿ ತಲುಪಲು ಇನ್ನು ೪ ಅಡಿ ಮಾತ್ರ ಬಾಕಿ ಇದೆ. ಜಲಾಶಯಕ್ಕೆ ಹುಣಸೂರು ಮತ್ತು ಕೋಟೆ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗುತ್ತಿರುವುದರಿಂದ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು ೨-೩ ದಿನದಲ್ಲಿ ಜಲಾಶಯ ಭರ್ತಿಯಾಗಲಿದೆ. ನುಗು ಜಲಾಶಯ ತನ್ನ ಗರಿಷ್ಟ ಮಟ್ಟ ೧೧೦ ಅಡಿ ತಲುಪಲು ೨೨ ಅಡಿಗಳು ಬಾಕಿ ಮಾತ್ರ ಇದೆ. ೮೩ ಅಡಿಗಳಿಗೆ ಕುಸಿತ ಕಂಡಿದ್ದ ಜಲಾಶಯ ವಾರದಿಂದ ಮಳೆಯಿಂದಾಗಿ ೫ ಅಡಿಗಳಷ್ಟು ನೀರು ಹೆಚ್ಚಳವಾಗಿ ೮೮ ಅಡಿಗಳಿಗೆ ಏರಿಕೆಯಾಗಿದೆ. ೧,೮೦೦ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಕಳೆದ ಬಾರಿ ಇದೇ ಸಂದರ್ಭದಲ್ಲಿ ನೀರಿನ ಮಟ್ಟ ೭೪ ಅಡಿಗಳಷ್ಟಿತ್ತು.
ಮುಂಗಾರು ಮಳೆ ಇದೇ ವಾರದಲ್ಲಿ ಕೇರಳ ಮತ್ತು ಕರ್ನಾಟಕ ಪ್ರವೇಶಿಸುವುದರಿಂದ ಮುಂಗಾರು ಮಳೆಯ ಆರ್ಭಟ ಹೆಚ್ಚಾದಲ್ಲಿ ಭಾರಿ ಪ್ರಮಾಣದ ನೀರನ್ನು ಜಲಾಶಯದಿಂದ ಹೊರಬಿಡುವ ಸಾಧ್ಯತೆಗಳೂ ಇವೆ.
” ಕೋಟೆ ಮತ್ತು ಸರಗೂರು ತಾಲ್ಲೂಕುಗಳಲ್ಲಿ ಭಾರೀ ಮಳೆ ಆಗುತ್ತಿದ್ದು ವಿಪತ್ತು ನಿರ್ವಹಣಾ ಸಮಿತಿಯನ್ನು ಎರಡೂ ತಾಲ್ಲೂಕುಗಳಲ್ಲಿ ರಚಿಸಿ, ಅನೇಕ ಅಽಕಾರಿಗಳನ್ನು ನೇಮಕ ಮಾಡಲಾಗಿದ್ದು, ಸಭೆ ನಡೆಸಲಾಗಿದೆ. ಜಲಾಶಯಗಳಿಗೆ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.”
-ಶ್ರೀನಿವಾಸ್, ತಹಸಿಲ್ದಾರ್, ಎಚ್.ಡಿ.ಕೋಟೆ, ಮೋಹನಕುಮಾರಿ, ತಹಸಿಲ್ದಾರ್, ಸರಗೂರು.
” ಕಬಿನಿ ಜಲಾಶಯದಲ್ಲಿ ದಿನದಿಂದ ದಿನಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಹೀಗೆಯೇ ಮಳೆ ಮುಂದುವರಿದರೆ ಶೀಘ್ರದಲ್ಲೇ ಜಲಾಶಯ ಭರ್ತಿಯಾಗಲಿದೆ. ನೀರಾವರಿ ಇಲಾಖೆಯ ಅಧಿಕಾರಿಗಳು ಕಟ್ಟುನಿಟ್ಟಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿದೆ.”
-ಚಂದ್ರಶೇಖರ್, ಇಇ, ಕಬಿನಿ ಜಲಾಶಯ
ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ ಮೈಸೂರು : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ತಂಬಾಕು ಬೆಳೆಗಾರರ ಸಮಸ್ಯೆಗಳು ಹಾಗೂ ಮಾರಾಟ…
ಮೈಸೂರು : ಮೈಸೂರು ಅರಮನೆ ಮಂಡಳಿ ವತಿಯಿಂದ ಕ್ರಿಸ್‌ಮಸ್ ಹಾಗೂ ಹೊಸವರ್ಷದ ಪ್ರಯುಕ್ತ 10 ದಿನಗಳ ‘ಅರಮನೆ ಫಲಪುಷ್ಪ ಪ್ರದರ್ಶನ’…
ಹಲಗೂರು : ಎತ್ತಿನ ಗಾಡಿ ತೆರಳುತ್ತಿದ್ದ ವೇಳೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಎತ್ತು ಸ್ಥಳದಲ್ಲೇ ಮೃತಪಟ್ಟ ಘಟನೆ…
ಹಲಗೂರು : ಇಲ್ಲಿಗೆ ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟಿರುವ ಘಟನೆ…
ಭಾರತೀನಗರ : ಇಲ್ಲಿಗೆ ಸಮೀಪದ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಪೊಲೀಸರ ಭದ್ರತೆಯೊಂದಿಗೆ ಗ್ರಾಮದ ಪರಿಶಿಷ್ಟ ಜಾನಾಂಗದ ಮಹಿಳೆಯರು, ಪುರುಷರು ದೇವಾಲಯಗಳಿಗೆ ಪ್ರವೇಶಿಸಿದರು.…
ಮೈಸೂರು : ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವ ಸಂಬಂಧ ಯಶಸ್ವಿ ಕಾರ್ಯಾಚರಣೆ ನಡೆಸಿದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಚಾವಿಸನಿನಿ)…