Andolana originals

ಕೈಗಾರಿಕೆಗಳ ‘ರಾಜಧಾನಿ’; ಸ್ಥಳೀಯರ ಕೈಗೆಟುಕದ ಉದ್ಯೋಗ

ಕಪಿಲಾ ನದಿಯ ಹರಿವಿನೊಂದಿಗೇ ನಂಜನಗೂಡಿನಲ್ಲಿ ಕೈಗಾರಿಕೆಗಳೂ ಬೆಳೆದಿವೆ. ನೂರು ವರ್ಷಗಳಿಗೂ ಹೆಚ್ಚು ಕಾಲದಿಂದ ಕಾರ್ಖಾನೆಗಳು ಸ್ಥಳೀಯರ ಬದುಕಿನೊಂದಿಗೆ ಬೆಸೆದುಕೊಂಡಿವೆ. ಬಹುಶಃ ಆರಂಭದಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ದೊರೆತಿತ್ತು. ಅದರಲ್ಲಿಯೂ ಸುಜಾತ ಹತ್ತಿ ಗಿರಣಿಯಲ್ಲಿ ಬಹುತೇಕ ಸ್ಥಳೀಯರೇ ಕಾರ್ಮಿಕರಾಗಿದ್ದರು. ಆದರೆ, ಅಭಿವೃದ್ಧಿ, ಪೈಪೋಟಿಯ ಕಸರತ್ತಿನಲ್ಲಿ ಕೈಗಾರಿಕೆಗಳು ಸ್ಥಳೀಯರನ್ನು ಮರೆತರೆ, ಆಡಳಿತಗಾರರು ಕೂಡ ಗೊತ್ತಿದ್ದೂ ಗೊತ್ತಿಲ್ಲದಂತೆ ವರ್ತಿಸಿದರು. ಅದರಿಂದ ಈಗ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಗಗನಕುಸುಮವಾಗಿದೆ.

ಮೈಸೂರಿನಿಂದ ಕೇವಲ 25 ಕಿ.ಮೀ. ಅಂತರದಲ್ಲಿರುವ ನಂಜನಗೂಡು ಫಲವತ್ತಾದ ಭೂಮಿ ಹೊಂದಿದೆ. ಶತಮಾನಕ್ಕೂ ಹೆಚ್ಚು ಕಾಲದಿಂದ ಇಲ್ಲಿ ಕೈಗಾರಿಕೆಗಳು ಬೆಳೆದು ಬಂದಿವೆ. ಹಾಗಾಗಿ ನಂಜನಗೂಡನ್ನು ಕೈಗಾರಿಕೆಗಳ ‘ರಾಜಧಾನಿ’ ಎನ್ನುವುದುಂಟು.

1913ರಲ್ಲಿ ಸಣ್ಣ ಪ್ರಮಾಣದಲ್ಲಿ ಬಿ.ವಿ.ಪಂಡಿತರ ಹಲ್ಲು ಪುಡಿ ತಯಾರಿಕಾ ಸಂಸ್ಥೆಯಿಂದ ಆರಂಭವಾದ ನಂಜನಗೂಡಿನ ಕೈಗಾರಿಕಾ ಪರಂಪರೆ ಅನೂಚಾನವಾಗಿ ಬೆಳೆದು ಬಂದಿದೆ. ಪ್ರಸ್ತುತ ಕೈಗಾರಿಕೆಗಳು 2,721 ಎಕರೆ ಪ್ರದೇಶವನ್ನು ವ್ಯಾಪಿಸಿಕೊಂಡು ರಾಜ್ಯದ ಭೂಪಟದಲ್ಲಿ ತಮ್ಮದೇ ಆದ ಛಾಪು ಮೂಡಿಸಿವೆ.

ಜೀವ ನದಿ ಕಪಿಲೆ ಹರಿಯುವ ಈ ತಾಲ್ಲೂಕಿನಲ್ಲಿ ರಾಜ್ಯ ಸರ್ಕಾರಿ ಸ್ವಾಮ್ಯದ ಕೆಐಎಡಿಬಿ ವತಿಯಿಂದ ಈಗಾಗಲೇ ನಂಜನಗೂಡು, ಕಲ್ಲಹಳ್ಳಿ, ತಾಂಡ, ಅಡಕನಹಳ್ಳಿ, ಇಮಾವು, ಹುಳಿಮಾವುಗಳಲ್ಲಿ ಮಹಿಳಾ ಕೈಗಾರಿಕೆಗಳ ಪಾರ್ಕ್ ಸೇರಿದಂತೆ ಕೈಗಾ ರಿಕಾ ವಸಾಹತುಗಳನ್ನು ನಿರ್ಮಿಸಲಾಗಿದೆ. ವಿವಿಧ ಸೌಲಭ್ಯಗಳನ್ನು ನೀಡಿ ದೇಶ ವಿದೇಶಗಳ ಕೈಗಾರಿಕೆಗಳು ಇಲ್ಲಿ ತಳವೂರಲು ಅವಕಾಶ ಕಲ್ಪಿಸಲಾಗಿದೆ.

ನಂಜನಗೂಡು ತಾಲ್ಲೂಕಿನಲ್ಲಿರುವ ಕೈಗಾರಿಕೆಗಳಲ್ಲಿ ಅಧಿಕೃತವಾಗಿ 20,436 ಮಂದಿ ಪುರುಷರು ಹಾಗೂ 3,171 ಮಹಿಳೆಯರು ಸೇರಿದಂತೆ ಒಟ್ಟಾರೆ 23,607 ಮಂದಿ ಉದ್ಯೋಗಿ ಗಳಿದ್ದಾರೆ. ಇದಲ್ಲದೆ ಸುಮಾರು 20 ಸಾವಿರಕ್ಕೂ ಹೆಚ್ಚು ಕಾರ್ಮಿಕರಿಗೆ ಹಂಗಾಮಿಯಾಗಿ ಉದ್ಯೋಗ ನೀಡಿರುವ ಇಲ್ಲಿನ ಕೈಗಾರಿಕೆಗಳು ಸ್ಥಳೀಯರಿಗಿಂತ ಹೆಚ್ಚಾಗಿ ಹೊರಗಿನವರಿಗೆ ಮಣೆ ಹಾಕಿವೆ. ಶತಮಾನದ ಹಿಂದಿನ ಕೈಗಾರಿಕೆಯಿಂದ ಹಿಡಿದು ಆಧುನಿಕ ಸೆಮಿ ಕಂಡಕ್ಟರ್ ತಯಾರಿಸುವವರೆಗೆ ಇರುವ ಕೈಗಾರಿಕೆಗಳು ಸ್ಥಳೀಯರ ಪಾಲಿಗೆ ಮರೀಚಿಕೆಯಾಗಿವೆ.

ಇಲ್ಲಿ 150ಕ್ಕೂ ಹೆಚ್ಚು ಕೈಗಾರಿಕೆಗಳಿವೆ. ಸ್ಥಳೀಯರಿಗೆಷ್ಟು ಉದ್ಯೋಗಗಳು ಸಿಕ್ಕಿದೆ ಎಂದು ತಡಕಾಡಿದರೆ ಸಮುದ್ರದ ದಡದಲ್ಲೇ ವಾಸ, ಉಪ್ಪಿಗೆ ಪರದಾಟ ಎನ್ನುವಂತಾಗಿದೆ. ಇಲ್ಲಿನ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಶೇ.10ರಷ್ಟು ಕೂಡ ಉದ್ಯೋಗ ಲಭಿಸಿಲ್ಲ. ಸ್ಥಳೀಯರನ್ನೇ ಹೆಚ್ಚಾಗಿ ಅವಲಂಬಿಸಿದ್ದ ಬಿರ್ಲಾ ಗ್ರೂಪ್ ವಾಲೀಕತ್ತದ ಸುಜಾತ ಹತ್ತಿ ಗಿರಣಿ, ಕರೀಮ್ ಸಿಲ್ಕ್ ಸೇರಿದಂತೆ ಅನೇಕ ಕೈಗಾರಿಕೆಗಳು ಹಲವು ವರ್ಷಗಳ ಹಿಂದೆಯೇ ಕಣ್ಣುಚ್ಚಿದ್ದು, ಇಲ್ಲಿದ್ದ ಕಾರ್ಮಿಕರ ಬದುಕು ಅತಂತ್ರವಾಯಿತು. ನೆಲ, ಜಲ, ವಿದ್ಯುತ್ ನಮ್ಮದು, ಆದರೆ ಕೆಲಸ ವಾತ್ರ ಬೇರೆಯವರಿಗೆ ಎಂಬ ಸ್ಥಳೀಯ ಕನ್ನಡಿಗರ ರೋದನೆ ಕೈಗಾರಿಕೆಗಳ ಆಡಳಿತಗಾರರ ಕಿವಿ, ಹೃದಯಕ್ಕೆ ತಾಕುತ್ತಿಲ್ಲ. ಸ್ಥಳೀಯರಿಗೆ ಉದ್ಯೋಗ ನೀಡಲೇಬೇಕೆಂಬ ಸರೋಜಿನಿ ಮಹಿಷಿ ವರದಿ ಪ್ರಕಾರ ಈ ಕೈಗಾರಿಕೆಗಳು ಸ್ಥಳೀಯರಿಗೆ ವರದಾನವಾಗಬೇಕಾಗಿತ್ತು. ಆದರೆ ಅದನ್ನು ಜಾರಿಗೆ ತರದ ನಮ್ಮ ಆಡಳಿತಗಾರರು ವರದಿಯನ್ನು ದೂಳು ಹಿಡಿಸುತ್ತಿರುವ ಪರಿಣಾಮವಾಗಿ ಸ್ಥಳೀಯರ ಉದ್ಯೋಗದ ಕನಸು ಇಂದಿಗೂ ಕೈಗೂಡಿಲ್ಲ.

ನಂಜನಗೂಡು ತಾಲ್ಲೂಕಿನ ಅರ್ಧ ಭಾಗ ಹಾಗೂ ಅಡಕನಹಳ್ಳಿ, ಇದ್ದಾವು, ತಾಂಡ್ಯ ಮತ್ತು ಹುಳಿಮಾವು ಕೈಗಾರಿಕಾ ಪ್ರದೇಶಗಳಲ್ಲಿರುವ ಕಾರ್ಖಾನೆಗಳು/ ಸಂಸ್ಥೆಗಳಲ್ಲಿ ರಾಜ್ಯ ಸರ್ಕಾರ ಕನ್ನಡಿಗರು ಹಾಗೂ ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.

ಕೈಗಾರಿಕೆಗಳ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ನಿಧಿಯು ತಾಲ್ಲೂಕಿನ ಸರ್ಕಾರಿ ಶಾಲೆಗಳಿಗೆ ಮೂಲ ಸೌಲಭ್ಯ ಒದಗಿಸಲು ಬಳಕೆಯಾಗಬೇಕು. ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಬೇಕು. ಐಟಿಐ ಹಾಗೂ ಡಿಪ್ಲೊಮಾ ವ್ಯಾಸಂಗ ಮಾಡಿದ ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗ ನೀಡಲು ಈ ಕಾರ್ಖಾನೆಗಳು ಮುಂದಾಗಬೇಕು.
• ದರ್ಶನ್ ಧ್ರುವನಾರಾಯಣ, ಶಾಸಕರು, ನಂಜನಗೂಡು.

ಹೊರದೇಶದವರೂ ಇಲ್ಲಿ ಉದ್ಯೋಗಿಗಳು!?

ನಂಜನಗೂಡಿನ ಕೈಗಾರಿಕೆಗಳಲ್ಲಿ ಹೊರ ರಾಜ್ಯದವರಿರಲಿ ಹೊರದೇಶದವರೂ ಉದ್ಯೋಗಿಗಳಾಗಿದ್ದಾರೆ. ಅಂದಾಜಿನ ಪ್ರಕಾರ ಎರಡು ಸಾವಿರಕ್ಕೂ ಹೆಚ್ಚು ಬಾಂಗ್ಲಾದೇಶಿ ಯರು ಇಲ್ಲಿನ ಕೈಗಾರಿಕೆಗಳಲ್ಲಿ ಬಿಹಾರ ಮತ್ತು ಪಶ್ಚಿಮ ಬಂಗಾಳ ವಾಸಿಗಳು ಎಂದು ಹೇಳಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಅವರೀಗ ಸಂಬಂಧಪಟ್ಟ ಅಧಿಕಾರಿಗಳ ಕೃಪಾಕಟಾಕ್ಷ’ ದಿಂದ, ಇಲ್ಲೇ ಪಡಿತರ ಚೀಟಿ, ಆಧಾರ್ ಕಾರ್ಡ್ ಗಿಟ್ಟಿಸಿಕೊಂಡು ಸ್ಥಳೀಯರಾಗಿಬಿಟ್ಟಿದ್ದಾರೆ. ಇಂತಹ ಕಾರ್ಮಿಕರನ್ನು ಕರೆತರಲೆಂದೇ ಹತ್ತಾರು ಸಂಸ್ಥೆಗಳು ಹುಟ್ಟಿಕೊಂಡಿವೆ.

ಸಿದ್ಧಾಂತವನ್ನು ಕೈಬಿಟ್ಟು, ಕೇವಲ ಹಣದ ಬೆನ್ನು ಬಿದ್ದಿರುವ ಹಲವು ಕಾರ್ಮಿಕ ಸಂಘಟನೆಗಳಿಂದ ಇಲ್ಲಿನ ಕೈಗಾರಿಕೆಗಳಿಗೆ ಕೆಟ್ಟ ಹೆಸರು ಬಂದಿದೆ. ಇದರಿಂದಲೇ ಅನೇಕ ಕೈಗಾರಿಕೆಗಳು ನಂಜನಗೂಡಿನಿಂದ ಪಲಾಯನ ಮಾಡಿವೆ.
– ಎಂ.ಎಸ್.ರಾಮಪ್ರಸಾದ್, ಅಧ್ಯಕ್ಷರು, ನಂಜನಗೂಡು ಕೈಗಾರಿಕಾ ಒಕ್ಕೂಟ.

ಶ್ರೀಧರ್ ಆರ್ ಭಟ್

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವನಾದ ನಾನು ನಂಜನಗೂಡು ನಗರದಲ್ಲಿ ವಾಸವಾಗಿದ್ದು 1982ರ ಮಾರ್ಚ್ ತಿಂಗಳಿಂದ‌, 42 ವರ್ಷಗಳಿಂದ ಆಂದೋಲನ ದಿನ ಪತ್ರಿಕೆಯಲ್ಲಿ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಮೊಬೈಲ್‌ ಸಂಖ್ಯೆ: 9448425325

Recent Posts

ವಿಶೇಷ ಚೇತನ ಮಕ್ಕಳು ಸಮಾಜಕ್ಕೆ ಶಾಪವಲ್ಲ, ವರ; ದೀಪಕ್‌ ಅಭಿಮತ

' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…

50 mins ago

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…

1 hour ago

ಮಂಡ್ಯ ಸಮ್ಮೇಳನ | ನಗರ ದೀಪಾಲಂಕಾರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…

1 hour ago

ನಕಲಿ ಚಿನ್ನಾಭರಣ ಅಡವಿಟ್ಟು ಬರೋಬ್ಬರಿ 34 ಲಕ್ಷ ರೂ. ವಂಚನೆ..!

ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…

2 hours ago

ಮುಡಾ ಪ್ರಕರಣ | ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ಜ.15ಕ್ಕೆ ಮುಂದೂಡಿಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಜನವರಿ…

2 hours ago

ಸಮ್ಮೇಳನಕ್ಕೆ ಕ್ಷಣಗಣನೆ | ಸಮ್ಮೇಳನ ಸರ್ವಾಧ್ಯಕ್ಷ ಗೊ.ರು ಚನ್ನಬಸಪ್ಪಗೆ ಆತ್ಮೀಯ ಸ್ವಾಗತ

ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…

2 hours ago