Andolana originals

ಭೂಪರಿಹಾರ ನೀಡದೆ ರಸ್ತೆ ಅಭಿವೃದ್ಧಿಗೆ ಅಡ್ಡಿ

• ಸಾಲೋಮನ್

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಇನ್ನೂ ಭೂ ಪರಿಹಾರ ನೀಡದ ಕಾರಣ ರಸ್ತೆ ಅಭಿವೃದ್ಧಿ ಪಡಿಸಲು ಭೂಮಾಲೀಕರು ಅನೇಕ ವರ್ಷಗಳಿಂದ ಅಡ್ಡಿ ಪಡಿಸುತ್ತಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಗರದ ನರಸಿಂಹರಾಜ ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ಡಾ.ರಾಜ್‌ಕುಮಾರ್‌ ರಸ್ತೆಯಲ್ಲಿ ಸುಮಾರು 100 ಮೀಟರ್ ಉದ್ದಕ್ಕೂ ಗುಂಡಿಗಳು ಬಿದ್ದು ರಸ್ತೆ ಹಾಳಾಗಿದೆ. ಅನೇಕ ವರ್ಷಗಳಿಂದ ರಸ್ತೆ ಅಭಿವೃದ್ಧಿ ಪಡಿಸಲು ಭೂ ಮಾಲೀಕರು ಬಿಡದೆ ವಾಹನಗಳ ಸಂಚಾರಕ್ಕೆ ಭಾರೀ ತೊಂದರೆ ಆಗಿದೆ.

ಈ ಮಾರ್ಗದ ಒಂದು ಭಾಗಕ್ಕೆ ಆಂದೋಲನ ಮುಡಾದಿಂದ ಭೂ ಪರಿಹಾರ ಸಿಗದ ಕಾರಣ ಭೂ ಮಾಲೀಕರು ರಸ್ತೆ ಅಭಿವೃದ್ಧಿಗೆ ಅವಕಾಶ ನೀಡುತ್ತಿಲ್ಲ. ಹೀಗಾಗಿ ರಸ್ತೆ ಅಭಿವೃದ್ಧಿಯಾಗದೇ ಸಂಪೂರ್ಣವಾಗಿ ಹಾಳಾಗಿದೆ.

ನಗರದ ಕಲ್ಯಾಣಗಿರಿ ಮಾರ್ಗವಾಗಿ ಯರಗನಹಳ್ಳಿ ವೃತ್ತದವರೆಗೆ ಡಾ.ರಾಜ್‌ಕುಮಾರ್ ರಸ್ತೆ ಸುಮಾರು 4 ಕಿ.ಮೀ. ಉದ್ದ ಇದ್ದು, ಜೆಎಸ್‌ಎಸ್ ಬಡಾವಣೆ, ರಾಘವೇಂದ್ರನಗರ, ಟೀಚರ್ ಲೇಔಟ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ಈ ವಾಹನಗಳೆಲ್ಲ ಹಳ್ಳಗುಂಡಿಯಲ್ಲಿ ಎದ್ದುಬಿದ್ದು ಸಾಗಬೇಕಿದೆ. ಅಲ್ಲದೆ ನಿರಂತರ ಮಳೆಯಿಂದ ರಸ್ತೆ ಇನ್ನಷ್ಟು ಹಾಳಾಗಿದ್ದು, ದ್ವಿಚಕ್ರ ವಾಹನ ಓಡಿಸುವ ಅನೇಕ ಹಿರಿಯರು, ಮಹಿಳೆಯರು ಬಿದ್ದು ಗಾಯಗೊಂಡಿದ್ದಾರೆ. ಈ ಸಂಬಂಧ ನಗರಪಾಲಿಕೆ, ಮುಡಾ ಹಾಗೂ ಜಿಲ್ಲಾಧಿಕಾರಿ ಗಳಿಗೂ ಸಾರ್ವಜನಿಕರು ಪತ್ರ ಬರೆದು ರಸ್ತೆ ದುರಸ್ತಿ ಮಾಡಲು ಮನವಿ ಮಾಡಿದ್ದಾರೆ. ಆದರೂ ಪ್ರಯೋಜನ ಆಗಿಲ್ಲ ಎಂಬ ಬೇಸರವೂ ಸಾರ್ವಜನಿಕರಲ್ಲಿದೆ.

ರಸ್ತೆ ಅಭಿವೃದ್ಧಿಗೆ ಸಿದ್ದ: ಭೂ ಮಾಲೀಕರಲ್ಲಿ ಒಮ್ಮತವಿಲ್ಲದೆ ಸಮಸ್ಯೆ ಜಟಿಲ

ಡಾ.ರಾಜ್‌ಕುಮಾರ್ ರಸ್ತೆಯ ಸಮಸ್ಯೆ ಬಹಳ ಹಳೆಯ ದಾಗಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳಬೇಕೆಂದು ಮುಡಾ ಅನೇಕ ಬಾರಿ ಪ್ರಯತ್ನಿಸಿದೆ. ಆದರೆ ಭೂ ಮಾಲೀಕ ರಲ್ಲಿ ಒಮ್ಮತ ಇಲ್ಲದ ಕಾರಣ ಸಮಸ್ಯೆ ಜಟಿಲಗೊಂಡಿದೆ. ಸದ್ಯಕ್ಕೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು ಮುಂದಿನ ತಿಂಗಳ ಮೊದಲ ವಾರದಲ್ಲೇ ವಿಚಾರಣೆಗೆ ಬರಲಿದೆ. ಈ ಬಾರಿ ಇತ್ಯರ್ಥ ಆಗಲೇಬೇಕೆಂದು ಮುಡಾ ನ್ಯಾಯಾಲಯಕ್ಕೆ ಮಧ್ಯಂತರ ಆದೇಶ ನೀಡಲು ಅರ್ಜಿ ಸಲ್ಲಿಸಿ ಮನವಿ ಮಾಡಿದೆ ಎಂದು ತಿಳಿದು ಬಂದಿದೆ. ಮೈಸೂರು ಮಹಾನಗರ ಪಾಲಿಕೆಗೂ ಸಾರ್ವಜನಿಕ ರಿಂದ ಒತ್ತಡ ಇದೆ. ಭೂ ಮಾಲೀಕರು ಹಾಗೂ ಮುಡಾ ನಡುವಿನ ವ್ಯಾಜ್ಯ ಇತ್ಯರ್ಥವಾದರೆ ಕೂಡಲೇ ರಸ್ತೆ ನಿರ್ಮಾಣ ಮಾಡಲು ಮಹಾನಗರ ಪಾಲಿಕೆ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ. ಶಾಸಕ ತನ್ವಿರ್ ಸೇ‌ಠ್‌ ಕೂಡ ವ್ಯಾಜ್ಯವನ್ನು ನ್ಯಾಯಸಮ್ಮತವಾಗಿ ಬಗೆಹರಿಸಿ ಕೊಳ್ಳೋಣ, ಮೊದಲು ರಸ್ತೆ ಮಾಡಿ ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಕೋಟ್ಸ್‌))

ಈ ಭಾಗದ ರಸ್ತೆ ಮುಡಾದಿಂದ ನಗರಪಾಲಿಕೆಗೆ ಇನ್ನೂ ಹಸ್ತಾಂತರ ಆಗಿಲ್ಲ. ಇತ್ತೀಚೆಗೆ ಪಾಲಿಕೆಯಿಂದ ಗುಂಡಿ ಮುಚ್ಚಲು ಹೋದಾಗ ಭೂಮಾಲೀಕರು ಅಡ್ಡಿ ಪಡಿಸಿದ್ದರು. ಭೂಪರಿಹಾರ ನೀಡಿಲ್ಲ ಎನ್ನುವ ಕಾರಣಕ್ಕೆ ಈ ಸಮಸ್ಯೆ ಉದ್ಭವವಾಗಿದೆ. ಶಾಸಕರು ರಸ್ತೆ ಮಾಡಿ ಎಂದು ಸೂಚನೆ ನೀಡಿದ್ದಾರೆ. ಅವರ ಆದೇಶದಂತೆ ಈಗಾಗಲೇ ಸರ್ವೆ ಮಾಡಿ ಡಿಪಿಆರ್ ಸಿದ್ಧಪಡಿಸಿದ್ದೇವೆ. ಅನುದಾನಕ್ಕೂ ಅನುಮೋದನೆ ಸಿಕ್ಕಿದೆ. ಟೆಂಡರ್ ಕರೆದು ಆದಷ್ಟು ಬೇಗ ರಸ್ತೆ ಅಭಿವೃದ್ಧಿಪಡಿಸಲು ಎಲ್ಲ ರೀತಿಯಲ್ಲೂ ಸಿದ್ಧವಾಗಿದ್ದೇವೆ.
-ಸಿಂಧು, ಅಧೀಕ್ಷಕ ಅಭಿಯಂತರರು, ಮೈಸೂರು ಮಹಾನಗರಪಾಲಿಕೆ.

ಇದೊಂದು ಅಪಾಯಕಾರಿ ರಸ್ತೆ. ಅನೇಕ ವರ್ಷಗಳಿಂದ ಗುಂಡಿ ಬಿದ್ದು ಹಾಳಾಗಿದೆ. ಭೂಮಾಲೀಕರು ಪರಿಹಾರ ಸಿಕ್ಕಿಲ್ಲ ಎಂಬ ಕಾರಣಕ್ಕೆ ಇಲ್ಲಿ ರಸ್ತೆ ಅಭಿವೃದ್ಧಿ ಮಾಡಲು ಬಿಡುತ್ತಿಲ್ಲ. ಮುಡಾ, ನಗರಪಾಲಿಕೆ ಅಧಿಕಾರಿಗಳು ಚರ್ಚಿಸಿ ಸಮಸ್ಯೆ ಬಗೆಹರಿಸಬಹುದಿತ್ತು. ಅವರುಗಳ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಇನ್ನಾದರೂ ಈ ಸಮಸ್ಯೆ ಬಗೆ ಹರಿಸಲಿ.
-ಕೆ.ಪಿ.ಶರತ್, ಸ್ಥಳೀಯರು

ದಿನನಿತ್ಯ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ಹದಗೆಟ್ಟ ರಸ್ತೆಯ ಬಗ್ಗೆ ನಗರಪಾಲಿಕೆ, ಮುಡಾ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿದ್ದೇವೆ. ಯಾರೂ ಕ್ರಮ ತೆಗೆದುಕೊಳ್ಳುತ್ತಿಲ್ಲ. ಹೀಗಾದರೆ ಜನರು ಯಾರ ಬಳಿಗೆ ಹೋಗಬೇಕು. ಇದು ಅಧಿಕಾರಿಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಅನ್ಯಾಯ ಅಲ್ಲವೆ?
-ಡಾ.ಅಕ್ಷಯ್, ಸ್ಥಳೀಯರು

ನಾನು ಈಗಷ್ಟೇ ಅಧಿಕಾರ ವಹಿಸಿಕೊಂಡಿ ದ್ದೇನೆ. ಈ ಸಮಸ್ಯೆ ಬಹಳ ಗಂಭೀರವಾದದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಇಲ್ಲಿ ರಸ್ತೆ ಆಗಲೇಬೇಕಿದೆ. ಭೂ ಪರಿಹಾರಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ವ್ಯಾಜ್ಯ ಇದೆ. ನ್ಯಾಯಾಲಯ ಯಾರಿಗೆ ಪರಿಹಾರ ನೀಡಲು ಸೂಚಿಸುತ್ತದೆಯೋ ಅವರಿಗೆ ಪರಿಹಾರ ನೀಡಲು ಮುಡಾ ಸಿದ್ಧವಿದೆ ಹಾಗೂ ಸಾರ್ವಜನಿಕರ ಹಿತದೃಷ್ಟಿ ಯಿಂದ ರಸ್ತೆ ಅಭಿವೃದ್ಧಿಗೆ ಮಧ್ಯಂತರ ಆದೇಶ ನೀಡುವಂತೆ ಕೋರಿದೆ. ನ್ಯಾಯಾಲಯದ ಆದೇಶದಂತೆ ಸಮಸ್ಯೆ ಬಗೆಹರಿಸುತ್ತೇವೆ. ಪಾಲಿಕೆಗೆ ಮುಡಾ ಸಹಕಾರ ನೀಡುತ್ತದೆ.
-ಎ.ಎನ್.ರಘುನಂದನ್, ಆಯುಕ್ತರು, ಮುಡಾ

ಆಲ್‌ಫ್ರೆಡ್‌ ಸಾಲೋಮನ್

ಮೂಲತಃ ಮೈಸೂರಿನವನಾದ ನಾನು ಮಹಾರಾಜ ಕಾಲೇಜಿನಲ್ಲಿ ಪದವಿ ಮುಗಿಸಿ, ಮಾನಸ ಗಂಗೋತ್ರಿಯಲ್ಲಿ ಪತ್ರಿಕೋದ್ಯಮ ಮತ್ತು ಸಾಮೂಹಿಕ ಸಂವಹನ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಬೆಂಗಳೂರಿನ ಅಭಿಮಾನ ಪ್ರಕಾಶನದ ಅಭಿಮಾನಿ, ಅರಗಿಣಿ, ಪತ್ರಿಕೆ ಮೂಲಕ 1988ರಲ್ಲಿ ಪತ್ರಕರ್ತನಾಗಿ ವೃತ್ತಿ ಆರಂಭಿಸಿ, ರೂಪತಾರ, ಉದಯವಾಣಿ, ಗೃಹಶೋಭ, ಉಷಾಕಿರಣ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿರುತ್ತೇನೆ. ಪ್ರಸ್ತುತ ಆಂದೋಲನ ದಿನಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ.

Recent Posts

ಭಾನುವಾರದ ಪುರವಣಿಗಳಲ್ಲಿ ಸಾಹಿತ್ಯ ಯಾಕೆ ಮಾಯ?

ಅಕ್ಷತಾ ಖಾಲಿ ಹಾಳೆಯ ಒಂದೇ ಮಗ್ಗುಲಿನಲ್ಲಿ ಚಿತ್ತಿಲ್ಲದಂತೆ ಬರೆದು, ಪದ ಮಿತಿಯನ್ನು ಬೆರಳು ಲೆಕ್ಕದಲ್ಲಿ ಎಣಿಸಿ, ಪತ್ರಿಕೆಯ ವಿಳಾಸಕ್ಕೆ ಕಳುಹಿಸಿದ…

36 seconds ago

ಹನೂರು: ಏಕಕಾಲದಲ್ಲೇ ಕಾಣಿಸಿಕೊಂಡ ಎರಡು ಚಿರತೆಗಳು

ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…

11 hours ago

ನಾಳೆಯೊಳಗೆ ಪ್ರಯಾಣಿಕರಿಗೆ ಮರುಪಾವತಿ ಮಾಡಿ: ಇಂಡಿಗೋ ಏರ್‌ಲೈನ್ಸ್‌ಗೆ ಗಡುವು ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…

11 hours ago

ಡಿ.ಕೆ.ಶಿವಕುಮಾರ್‌ ಸಂಪುಟದಲ್ಲಿ ನನಗೆ ಸಚಿವ ಸ್ಥಾನ ಬೇಡ: ಮಾಜಿ ಸಚಿವ ಕೆ.ಎನ್.ರಾಜಣ್ಣ

ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…

12 hours ago

ನನ್ನನ್ನು ಹೆದರಿಸ್ತೀನಿ ಅಂದ್ರೆ ಅದು ಸಾಧ್ಯವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ

ಹಾಸನ: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್‌ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…

13 hours ago