ಪ್ರೊ.ಆರ್.ಎಂ.ಚಿಂತಾಮಣಿ
ಉದ್ಯೋಗಾವಕಾಶಗಳ ಸೃಷ್ಟಿಯ ಮಹತ್ವಾಕಾಂಕ್ಷೆಯ ಗುರಿ ಸಾಧಿಸಲು ಕೇಂದ್ರ ಸರ್ಕಾರದ ಅರ್ಥ ಮಂತ್ರಿಗಳು ಇತ್ತೀಚೆಗೆ ಸಂಸತ್ತಿನಲ್ಲಿ ಮಂಡಿಸಿದ 2024-25ರ ಪೂರ್ಣಾವಧಿ ಮುಂಗಡಪತ್ರದಲ್ಲಿ ಪ್ರಕಟಿಸಿದ ಹಲವು ಯೋಜನೆಗಳಲ್ಲಿ ಇಂಟರ್ನ್‌ಶಿಪ್ ಯೋಜನೆಯೂ ಒಂದು. ಇಂಟರ್ನ್‌ಶಿಪ್ ಎಂದರೆ ಅಧ್ಯಯನ ಪೂರ್ಣಗೊಂಡ ನಂತರ ಮಾಡಬೇಕಾದ ಕೆಲಸಗಳನ್ನು ಪ್ರತ್ಯಕ್ಷ ಮಾಡಿ (Hands on thejob) ಅನುಭವ ಪಡೆಯುವ ತರಬೇತಿ ಎಂದರ್ಥ. ಇದರಲ್ಲಿ ವೃತ್ತಿಯಲ್ಲಿರುವ ಹಿರಿಯರ ಮಾರ್ಗದರ್ಶನವಿರುತ್ತದಲ್ಲದೆ ಅವರ ಅನುಭವ ಮತ್ತು ನಡೆನುಡಿಗಳನ್ನು ಗಮನಿಸುತ್ತಾ ವೃತ್ತಿ ಮತ್ತು ನೌಕರಿ ಜೀವನದ ಬಗ್ಗೆ ಕಲಿಯುವುದೂ ಅವಶ್ಯವಾಗಿರುತ್ತದೆ. ಇಂಟರ್ನೀ ತನ್ನಭವಿಷ್ಯ ರೂಪಿಸಿಕೊಳ್ಳಲು ಇದೂ ಒಂದು ಮಹತ್ವದ ಹೆಜ್ಜೆ. ಇಲ್ಲಿ ತನ್ನ ಸಾಮರ್ಥ್ಯವನ್ನು ಮತ್ತು ಕೌಶಲಗಳನ್ನು ಪ್ರದರ್ಶಿಸಿ ಕೆಲಸಕ್ಕೆ ಅವಕಾಶ ಕೊಟ್ಟವರ ಮೆಚ್ಚುಗೆ ಪಡೆದರೆ ಉದ್ಯೋಗಾವಕಾಶಗಳು ತಾವಾಗಿಯೇ ಒದಗಿಬರುತ್ತವೆ.
ಈಗ ವೈದ್ಯಕೀಯ ಪದವಿ ಶಿಕ್ಷಣದಲ್ಲಿ ಅಂತಿಮ ಪರೀಕ್ಷೆಯ ನಂತರ ಒಂದು ವರ್ಷದ ಇಂಟರ್ನ್‌ಶಿಪ್ ಕಡ್ಡಾಯವಾಗಿದೆ. ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರವೇ ಪದವಿ ಪ್ರಮಾಣ ಪತ್ರ ಕೊಡಲಾಗುವುದು. ಅದೇ ರೀತಿ ಕೈಗಾರಿಕೆಗಳಿಗೆ ವಿವಿಧ ವಿಭಾಗಗಳಲ್ಲಿ ಸಮರ್ಥ ಕೆಲಸಗಾರರನ್ನು ತಯಾರಿಸುವ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿಯೂ (ಐಟಿಐಗಳು) ಫ್ಯಾಕ್ಟರಿ ಅಥವಾ ವರ್ಕ್‌ಶಾಪ್ ಅನುಭವ ಬೇಕೇ ಬೇಕು. ಇತರ ಜ್ಞಾನ ಶಾಖೆಗಳಲ್ಲೂ ಕೌಶಲಾಭಿವೃದ್ಧಿ, ಫ್ಯಾಕ್ಟರಿ ರಿಪೋರ್ಟ್ಸ್ ಮತ್ತು ಕೇಸ್ ಸ್ಟಡಿಗಳ ಮೂಲಕ ಪ್ರತ್ಯಕ್ಷ ಕೆಲಸದ ಅನುಭವಕ್ಕೆ ಅವಕಾಶವಿರುತ್ತದೆ.
ಯೋಜನೆಯ ರೂಪ ರೇಷೆ ಮತ್ತು ಸಮಸ್ಯೆಗಳು: ಪ್ರಕಟಿತ ಯೋಜನೆಯಂತೆ ದೇಶದ ಅತಿ ದೊಡ್ಡ 500 ಕಂಪೆನಿಗಳಲ್ಲಿ ಪ್ರತಿವರ್ಷ ಕನಿಷ್ಠ 20 ಲಕ್ಷ ಯುವ ಜನರಿಗೆ 12 ತಿಂಗಳವರೆಗೆ ಇಂಟರ್ನ್‌ಶಿಪ್ ಒದಗಿಸುವ ಉದ್ದೇಶವಿದೆ. ಯೋಜನೆ ಐದು ವರ್ಷಗಳವರೆಗೆ ಜಾರಿಯಲ್ಲಿದ್ದು, ಅಷ್ಟು ಹೊತ್ತಿಗೆ ಕಡಿಮೆ ಎಂದರೆ ಒಂದು ಕೋಟಿ ಜನರಿಗೆ ಇಂಟರ್ನ್‌ಶಿಪ್ ತರಬೇತಿ ಕೊಡುವ ಆಶಯವಿದೆ. ಈ ವರ್ಷದ ಬಜೆಟ್‌ನಲ್ಲಿ ಯೋಜನೆಗಾಗಿ 19,000 ಕೋಟಿ ರೂ. ಗಳನ್ನು ತೆಗೆದಿಡಲಾಗಿದೆ.
ಈ 12 ತಿಂಗಳಲ್ಲಿ ಪ್ರತಿಯೊಬ್ಬ ಇಂಟರ್ನೀ ಪ್ರತಿ ತಿಂಗಳು 5000 ರೂ. ಗೌರವಧನ ಪಡೆಯುವುದಲ್ಲದೆ ಇತರೆ ವೆಚ್ಚಗಳಿಗಾಗಿ ವರ್ಷದಲ್ಲಿ ಒಂದು ಸಲ 6,000 ರೂ.ಗಳನ್ನು ಪಡೆಯುತ್ತಾರೆ. ಮಾಸಿಕ ಗೌರವಧನದಲ್ಲಿ ಕೇವಲ 500 ರೂ.ಗಳನ್ನು ಮಾತ್ರ ಕಂಪೆನಿ ಕೊಡಬೇಕು. ಅದೂ ಸಂಬಳದ ಬಾಬಿನ ಖರ್ಚು ಎಂದಲ್ಲ. ತಾನು ಪ್ರತಿವರ್ಷ ಕಡ್ಡಾಯವಾಗಿ ಸಾಮಾಜಿಕ ಜವಾಬ್ದಾರಿ ವೆಚ್ಚದಲ್ಲಿ (ಸಿಎಸ್ ಆರ್) ಖರ್ಚು ಮಾಡಬಹುದು. ಉಳಿದ ಮಾಸಿಕ 4,500 ರೂ.ಗಳು ಮತ್ತು ಇತರೆ ವೆಚ್ಚಗಳ 6,000 ರೂ.ಗಳು (ಒಟ್ಟು 60,000 ರೂ.ಗಳನ್ನು ಕೇಂದ್ರ ಸರ್ಕಾರ ಸಬ್ಸಿಡಿಯಾಗಿ ಕೊಡುತ್ತದೆ. ಕಂಪೆನಿಗಳಿಗೆ ಇಂಟರ್ನಿಗಳ ಕೆಲಸದ ಅನುಕೂಲ ಸಿಗುತ್ತದೆ. ಆದರೆ ಹಣಕಾಸಿನ ಭಾರ ಬೀಳುವುದಿಲ್ಲ ಎಂದು ಯೋಜನೆ ಹೇಳುತ್ತದೆ.
2013ರ ಕಂಪೆನಿ ಕಾಯ್ದೆ ಪ್ರಕಾರ ಪ್ರತಿಯೊಂದು ನೋಂದಾಯಿತ ಕಂಪೆನಿಯೂ ಹಿಂದಿನ ಮೂರು ವರ್ಷಗಳ ಸರಾಸರಿ ಲಾಭದ ಶೇ.2ರಷ್ಟನ್ನು ಕಡ್ಡಾಯವಾಗಿ ಸಿಎಸ್‌ಆರ್‌ಗಾಗಿ ಖರ್ಚು ಮಾಡಲೇಬೇಕು. ತಪ್ಪಿದರೆ ಸರ್ಕಾರ ಕ್ರಮ ಕೈಗೊಳ್ಳಬಹುದು. ಆದ್ದರಿಂದ ಕಂಪೆನಿಯು ಸಿಎಸ್‌ಆರ್ ವೆಚ್ಚದ ಶೇ.10ರಷ್ಟಾದರೂ ಇಂಟರ್ನ್‌ಶಿಪ್ ಗಾಗಿ ಖರ್ಚು ಮಾಡಿದರೆ ಅದೂ ಸಮಾಜ ಸೇವೆಯೇ ಆಗುತ್ತದೆ ಎನ್ನುವುದು ಯೋಜನೆ ರೂಪಿಸಿದವರ ಅಭಿಪ್ರಾಯ.
ಇಂಟರ್ನ್‌ಶಿಪ್ ಪೂರ್ಣಗೊಳಿಸಿದವರಿಗೆ ಅದೇ ಕಂಪೆನಿಯಲ್ಲಿ ಕೆಲಸ ಸಿಗುತ್ತದೆ ಅಥವಾ ಬೇರೆ ಕಂಪೆನಿಗಳಲ್ಲಿ ದೊರೆಯುತ್ತದೆ. ಅದಿಲ್ಲದಿದ್ದರೆ ಸ್ವತಃ ತಾನೇ ವ್ಯವಹಾರ ಆರಂಭಿಸುವ ಸಾಮರ್ಥ್ಯವನ್ನು ಪಡೆದಿರುತ್ತಾರೆ ಎನ್ನುವುದು ಸರ್ಕಾರದ ಖಚಿತ ವಾದ. ಇದೇ ಗ್ರಹಿಕೆಯಿಂದಲೇ ಇದನ್ನು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಯೋಜನೆಗಳಲ್ಲಿ ಸೇರಿಸಿದೆ. ಬಜೆಟ್ ಮಂಡನೆ ಮಾಡುವಾಗ ಹಣಕಾಸು ಸಚಿವರು ಇದು ಎಲ್ಲ ದೊಡ್ಡ ಕಂಪೆನಿಗಳಿಗೂ ಕಡ್ಡಾಯವೆಂದು ಹೇಳಿದ್ದರು. ಮರುದಿನ ಮಾಧ್ಯಮಗಳ ಮುಂದೆ ವಿವರಣೆ ನೀಡುವಾಗ ಯೋಜನೆಯು ಕಂಪೆನಿಗಳಿಗೆ ಕಡ್ಡಾಯವಲ್ಲ, ಐಚ್ಛಿಕವೆಂದು ಹೇಳಿದರು. ಯೋಜನೆ ಕಂಪೆನಿಗಳಿಗೂ, ನಿರುದ್ಯೋಗಿ ಯುವಕ ಯುವತಿಯರಿಗೂ ಆಕರ್ಷಕವಾಗಿಯೇ ಇದೆ. ಆದರೆ ಇಂದಿನ ಸ್ಥಿತಿಯಲ್ಲಿ ಅನುಷ್ಠಾನಗೊಳ್ಳುವುದೇ ಒಂದು ದೊಡ್ಡ ಸವಾಲು ಅಥವಾ ನಿರುದ್ಯೋಗ ವನ್ನು 12 ತಿಂಗಳು ಮುಂದೂಡಿದಂತಾಗುತ್ತದೆಯೇ ಎನ್ನುವುದು ಕೆಲವು ತಜ್ಞರ ಆತಂಕ.
ಪ್ರತಿವರ್ಷ 20 ಲಕ್ಷ ಇಂಟರ್ನೀಗಳನ್ನು ದೊಡ್ಡ ಕಂಪೆನಿಗಳಲ್ಲಿ ತೆಗೆದುಕೊಳ್ಳುವುದೆಂದರೆ ಅಷ್ಟು ಕೈಗಳಿಗೆ ಕೆಲಸ ಒದಗಿಸಬೇಕಾಗುವುದು ಎಂದರ್ಥವಲ್ಲವೇ? ಇತ್ತೀಚಿನ ವರ್ಷಗಳಲ್ಲಿ ಡಿಜಿಟಲೈಜೇಶನ್, ಕೃತಕ ಬುದ್ಧಿಮತ್ತೆ ಮತ್ತು ಹೊಸ ತಂತ್ರಜ್ಞಾನಗಳನ್ನು ಬಳಸುತ್ತ ತಮ್ಮ ನೌಕರರ ಸಂಖ್ಯೆಯ ಬೆಳವಣಿಗೆ ಗತಿಯನ್ನೇ ಕಡಿಮೆ ಮಾಡುತ್ತಿರುವ ಈ ಕಂಪೆನಿಗಳು ವರ್ಷಕ್ಕೆ 20 ಲಕ್ಷ ಇಂಟರ್ನಿಗಳನ್ನು ತೆಗೆದುಕೊಳ್ಳಲು ಸಾಧ್ಯವೇ?
ಪ್ರತ್ಯಕ್ಷ ಕೆಲಸದ ಅನುಭವ ಕಾರ್ಪೊರೇಟ್ ವಲಯಗಳಲ್ಲಿ ಮಾತ್ರ ಅವಶ್ಯವೆಂದೇನಿಲ್ಲ. ದೊಡ್ಡ 50 ಕಂಪೆನಿಗಳಲ್ಲಿ ಮಾತ್ರ ಇದು ಸಾಧ್ಯ ಎಂದೂ ಇಲ್ಲ. ಮಧ್ಯಮ ಗಾತ್ರದ ಕಂಪೆನಿಗಳು ಸಾಕಷ್ಟಿವೆ. ಅಸಂಘಟಿತ ವಲಯದಲ್ಲಿ ಉದ್ಯೋಗಾವಕಾಶಗಳು ಹೆಚ್ಚು. ಇದರಲ್ಲಿ ಅರೆ ನಿಯಂತ್ರಿತ ಮಾಧ್ಯಮ ವಲಯ (ಪಾಲುಗಾರಿಕೆ ಫಾರ್ಮುಗಳು, ಸಣ್ಣ ಖಾಸಗಿ ಕಂಪೆನಿಗಳು ಮತ್ತು ಸಹಕಾರ ಸಂಘಗಳು ಮುಂತಾದವು) ವೇಗವಾಗಿ ಬೆಳೆಯುತ್ತಿವೆ. ಸಣ್ಣ ಸ್ಥಳೀಯ ಸೂಪರ್ ಮಾರ್ಕೆಟ್‌ಗಳೂ ಡಿಪಾರ್ಟ್‌ಮೆಂಟಲ್ ಸ್ಟೋರ್‌ಗಳೂ ಹೆಚ್ಚುತ್ತಿವೆ. ಕರ್ನಾಟಕದ ‘ನಂದಿನಿ’ ಮತ್ತು ಗುಜರಾತಿನ ‘ಅಮುಲ್’ ಹಾಲು ಉತ್ಪನ್ನಗಳ ವಿಷಯದಲ್ಲಿ ದೊಡ್ಡ ಹೆಸರು ಮಾಡಿವೆ. ಇವುಗಳಲ್ಲಿ ಕೆಲಸ ಮಾಡಲು ಕೌಶಲಗಳು ಮತ್ತು ತಂತ್ರಗಳು ಬೇಕಲ್ಲವೇ? ಇವುಗಳಲ್ಲಿ ಇಂಟರ್ನ್ ಶಿಪ್‌ಗೆ ಅವಕಾಶ ಕಲ್ಪಿಸಿದರೆ ಉಪಯುಕ್ತವಲ್ಲವೆ?
ಕೃಷಿ ಉತ್ಪನ್ನಗಳ ಮಾರುಕಟ್ಟೆ ಇತರ ಉತ್ಪನ್ನಗಳ ಪೇಟೆಗಳಂತಲ್ಲ. ಇಲ್ಲಿ ಬೇಡಿಕೆ ನಿರಂತರವಾಗಿರುತ್ತದೆ. ಪೂರೈಕೆ ಒಕ್ಕಣೆ ಹಂಗಾಮಿನಲ್ಲಿ ಹೆಚ್ಚಾಗಿದ್ದು, ಇತರ ಸಮಯದಲ್ಲಿ ಕಡಿಮೆ ಇರುತ್ತದೆ. ಅಲ್ಲದೆ ಇದರಲ್ಲಿ ತರಕಾರಿ ಮುಂತಾದವುಗಳು ಬೇಗ ಹಾಳಾಗುತ್ತವೆ. ಇಲ್ಲಿ ಕೆಲಸ ಮಾಡಲು ವಿಶಿಷ್ಟ ಕೌಶಲಗಳು ಮತ್ತು ತಂತ್ರಗಾರಿಕೆಗಳು ಅವಶ್ಯ. ಇಲ್ಲಿಯೂ ಇಂಟರ್ನ್‌ಶಿಪ್ ಅವಶ್ಯ ಮತ್ತು ಸಾಧ್ಯ.
ಯೋಜನೆ ಯಶಸ್ವಿಯಾಗಬೇಕಲ್ಲವೇ?: ಮೊದಲು ಉದ್ದೇಶಿತ ವಾರ್ಷಿಕ 20 ಲಕ್ಷ ಇಂಟರ್ನ್‌ಶಿಪ್ ಗುರಿಯನ್ನು 15 ಲಕ್ಷದ ಆಸುಪಾಸಿನಲ್ಲಾದರೂ ನಿಗದಿ ಮಾಡಬೇಕು. ಅಷ್ಟೂ ಇಂಟರ್ನೀಗಳು ಅರ್ಥಪೂರ್ಣ ಅನುಭವ ಪಡೆದು ಉದ್ಯೋಗಕ್ಕೆ ಸೇರುವಂತಾಗಬೇಕು. ಎರಡನೆಯದಾಗಿ ದೊಡ್ಡ ಕಂಪೆನಿಗಳಿಗಷ್ಟೇ ಇಂಟರ್ನ್‌ಶಿಪ್ ದಾತರನ್ನು ಸೀಮಿತಗೊಳಿಸದೇ ಮಧ್ಯಮ ಗಾತ್ರದ ಕಂಪೆನಿಗಳಿಗೂ ಸಹಕಾರಿ ವಲಯದ ದೊಡ್ಡ ಸಂಸ್ಥೆಗಳಿಗೂ ವಿವರಿಸಬೇಕು. ಇದರ ಮೇಲುಸ್ತುವಾರಿ ಮತ್ತು ನಿಯಂತ್ರಣಕ್ಕಾಗಿ ಸಮರ್ಥ ಮತ್ತು ಪ್ರಾಮಾಣಿಕ ಆಡಳಿತ ವ್ಯವಸ್ಥೆ ಇರಬೇಕು. ಮೂರನೆಯದಾಗಿ 4,500 ರೂ.ಗಳನ್ನು ಕೊಡುವ ಸರ್ಕಾರಕ್ಕೆ ಉಳಿದ 500 ರೂ.ಗಳನ್ನು ಕೊಡುವುದು ತೊಂದರೆಯಾಗಲಿಕ್ಕಿಲ್ಲ. ಇಂಟರ್ನ್‌ಶಿಪ್‌ದಾತ ಸಂಸ್ಥೆಗಳ ತರಬೇತಿ ಮತ್ತು ಆಡಳಿತ ವೆಚ್ಚಗಳನ್ನು ಮಾತ್ರ ಭರಿಸುವಂತಾದರೆ ಹೆಚ್ಚು ಕಾಳಜಿ ವಹಿಸಿ ತರಬೇತಿ ಒದಗಿಸಲು ಅನುಕೂಲವಾದೀತು. ಇಲ್ಲಿ ಇಂಟರ್ನಿಗಳ ಆಸಕ್ತಿ ಮತ್ತು ಅಧ್ಯಯನಶೀಲತೆ ಮುಖ್ಯ.
ಒಂದು ಮಾತು: ಅವಶ್ಯಕತೆ ಮತ್ತು ಆಸಕ್ತಿ ಇರುವವರನ್ನು ಆಯ್ಕೆ ಮಾಡಿ ಸೂಕ್ತ ತರಬೇತಿ ಮತ್ತು ಅನುಭವ ಒದಗಿಸುವ ಕಂಪೆನಿ ಅಥವಾ ಸಂಸ್ಥೆಗಳಲ್ಲಿ ಇಂಟರ್ನ್‌ಶಿಪ್ ಅವಕಾಶ ಕಲ್ಪಿಸಿದರೆ ಅವರ ಭವಿಷ್ಯ ಉತ್ತಮವಾದೀತು. ಸರ್ಕಾರದ ಹತ್ತಾರು ಯೋಜನೆಗಳಲ್ಲಿ ಇದೂ ಇನ್ನೊಂದಾಗಬಾರದು.
ರಾಜ್ಯಸಭೆಯ ಕಲಾಪದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವ ಭರದಲ್ಲಿ ಕೆಲವರು ಅಂಬೇಡ್ಕರ್ ಎನ್ನುವುದನ್ನು ಈಗ ಫ್ಯಾಷನ್…
ದಾ.ರಾ. ಮಹೇಶ್ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…
ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20,21 ಮತ್ತು 22ರಂದು ಮೂರು ದಿನಗಳ ಕಾಲ ಜರುಗಲಿರುವ ಕನ್ನಡ ನುಡಿ ಜಾತ್ರೆ…
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…