Andolana originals

ನನಗೆ ಒಂದು ನಿವೇಶನವೂ ಇಲ್ಲ: ಸಿಎಂ ಸಿದ್ದರಾಮಯ್ಯ

ಮೈತ್ರಿ ಪಾದಯಾತ್ರೆ ವಿರುದ್ಧ ‘ಸತ್ಯಮೇವ ಜಯತೇ’ ಶೀರ್ಷಿಕೆಯಲ್ಲಿ ಜನಾಂದೋಲನ ಸಮಾವೇಶ

ಮುಖ್ಯಮಂತ್ರಿ ಬೆನ್ನಿಗೆ ನಿಂತ ಕಾಂಗ್ರೆಸ್‌ ಸೇನೆ ; ಅಭೂತಪೂರ್ವ ಜನಸಾಗರ

ನೋಟಿಸ್‌ ವಾಪಸ್ ಪಡೆಯಲು ರಾಜ್ಯಪಾಲರಿಗೆ ಒಕ್ಕೊರಲ ಆಗ್ರಹ

ಮುಡಾ ಹಗರಣದಲ್ಲಿ ನನ್ನ ಪಾತ್ರ ಇಲ್ಲ; ನಾನು ತಪ್ಪು ಮಾಡಿಲ್ಲ: ಸಿಎಂ

ಮೈಸೂರು: ಆಸ್ತಿ ವ್ಯಾಮೋಹ ಇದ್ದಿದ್ದರೆ ಕೋಟಿಗಟ್ಟಲೆ ಹಣ ಮಾಡಿಕೊಳ್ಳುತ್ತಿದ್ದೆ. ಸಾಲ ತೀರಿಸಲಾಗದೆ ಮೈಸೂರಿನಲ್ಲಿ ಇದ್ದ ಎರಡು ಮನೆಗಳನ್ನು ಮಾರಿದ್ದೆ. ನನ್ನ ಹೆಸರಿನಲ್ಲಿ ಒಂದೇ ಒಂದು ನಿವೇಶನ ಇದ್ದರೆ ತೋರಿಸಲಿ ಎಂದು ಪ್ರತಿಪಕ್ಷಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗ ಸವಾಲು ಹಾಕಿದರು.

ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು, 40 ವರ್ಷ ಗಳ ಕಾಲದ ರಾಜಕಾರಣದಲ್ಲಿ ಅನೇಕ ಇಲಾಖೆಗಳ ಸಚಿವನಾಗಿ, ಎರಡು ಬಾರಿ ಉಪ ಮುಖ್ಯಮಂತ್ರಿ ಯಾಗಿ, ಈಗ ಎರಡು ಬಾರಿ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಈವರೆವಿಗೂ ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ. ನನ್ನ ರಾಜಕೀಯ ಜೀವನ ಶುದ್ಧವಾಗಿದೆ ಆಸ್ತಿ ಮಾಡುವ ದುಡ್ಡು ಮಾಡುವ ಆಸೆ ಬಂದಿಲ್ಲ ಎಂದು ಭಾವುಕವಾಗಿ ಹೇಳಿದರು.

ರಾಜಭವನ ದುರುಪಯೋಗ ಮಾಡಿಕೊಂಡು ಕೇಂದ್ರ ಸರ್ಕಾರ, ಎಚ್.ಡಿ.ಕುಮಾರಸ್ವಾಮಿ, ಬಿ.ವೈ. ವಿಜಯೇಂದ್ರ, ಬಿ.ಎಸ್.ಯಡಿಯೂರಪ್ಪ, ಆರ್. ಅಶೋಕ್ ಸೇರಿ ಸರ್ಕಾರವನ್ನು ದುರ್ಬಲಗೊಳಿಸುವ ಯತ್ನ ಮಾಡುತ್ತಿದ್ದಾರೆ. ದಲಿತರು, ಹಿಂದುಳಿದ ವರ್ಗಗಳು, ಅಲ್ಪ ಸಂಖ್ಯಾತರ ಪರವಾಗಿ ಇದ್ದೇನೆಂದು ಸಹಿಸಿ ಕೊಳ್ಳುತ್ತಿಲ್ಲ. ಬಿಜೆಪಿಯವರು ಏನೇ ದೊಂಬ ರಾಟ ಮಾಡಿದರೂ ಏನೂ ಮಾಡೋದಕ್ಕೆ ಆಗಲ್ಲ. ನಿಮ್ಮ ಬೆಂಬಲ ಆಶೀರ್ವಾದ ಸದಾ ಇರಬೇಕು ಎಂದು ಮನವಿ ಮಾಡಿದರು.

ಮುಡಾದಿಂದ 50:50 ಅನುಪಾತದ ನಿವೇಶನ ಹಂಚಿಕೆ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿ ದಂತೆ ಬಿಜೆಪಿ-ಜಾ.ದಳ ನಡೆಸಿದ ಪಾದಯಾತ್ರೆಯ ವಿರುದ್ಧ ಕಾಂಗ್ರೆಸ್ ಆಯೋಜಿಸಿದ್ದ ಜನಾಂದೋಲನ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಇಡೀ ಸಚಿವ ಸಂಪುಟ, ಕಾಂಗ್ರೆಸ್ ಸೇನೆಯೇ ನಿಂತುಕೊಂಡು ಎದುರಾಳಿ ನಾಯಕರ ಮೇಲೆ ಗುಡುಗಿ ತನ್ನ ಶಕ್ತಿಯನ್ನು ಪ್ರದರ್ಶಿಸಿತು.

‘ಸತ್ಯ ಮೇವ ಜಯತೆ’ ಹೆಸರಿನಲ್ಲಿ ನಡೆದ ಐತಿಹಾಸಿಕ ಸಮಾವೇಶದಲ್ಲಿ ಸೇರಿದ್ದ ಸಹಸ್ರಾರು ಕಾರ್ಯಕರ್ತರು ಸಿದ್ದರಾಮಯ್ಯರ ಬೆನ್ನಿಗೆ ನಿಂತು ಸಾಕ್ಷೀಕರಿಸಿದರು. ಈ ಮೂಲಕ ಸಿಎಂ ತವರು ನೆಲದಲ್ಲಿ ಬಿಜೆಪಿ-ಜಾ.ದಳದ ಆರೋಪಗಳಿಗೆ ಪ್ರತ್ಯುತ್ತರ ನೀಡುವ ಮೂಲಕ ಮುಡಾದಲ್ಲಿ ಯಾವುದೇ ಕಾನೂನುಬಾಹಿರವಾದ ತೀರ್ಮಾನವಾಗಿಲ್ಲ ಎಂಬುದನ್ನು ಬಲವಾಗಿ ಸಮರ್ಥಿಸಿಕೊಂಡರು.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಬಿಜೆಪಿ- ಜಾ.ದಳ ಬೆಂಗಳೂರಿನಿಂದ ಮೈಸೂರಿನವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಯ ವಿರುದ್ಧ ಸಿಡಿದೆದ್ದ ಕಾಂಗ್ರೆಸ್ ನಾಯಕರು ಚನ್ನಪಟ್ಟಣ, ರಾಮನಗರ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ದಲ್ಲಿ ಜನಾಂದೋಲನ ಸಮಾವೇಶ ನಡೆಸಿ ಬಿಜೆಪಿ ನಾಯಕರಿಗೆ ತಿರುಗೇಟು ನೀಡುವ ಕೆಲಸ ಮಾಡುತ್ತಾ ಬಂದಿದ್ದರು.

ಅದರಂತೆ, ಪಾದಯಾತ್ರೆ ಅಂತ್ಯವಾಗುವ ಮುನ್ನಾದಿನವಾದ ಶುಕ್ರವಾರ ಕಾಂಗ್ರೆಸ್ ರಣಕಹಳೆಯನ್ನು ಮೊಳಗಿಸಿತು. ರಾಜ್ಯದ ಇತಿಹಾಸದಲ್ಲಿ ಲೋಕಸಭಾ, ವಿಧಾನಸಭಾ ಚುನಾವಣೆಗಳ ಪ್ರಚಾರ ಸಭೆ ಸೇರಿದಂತೆ ಈ ವರೆಗೆ ನಡೆದಿರುವ ವಿವಿಧ ಸಮಾವೇಶಗಳಲ್ಲಿ ಒಂದೇ ವೇದಿಕೆಯಲ್ಲಿ ಪಾಲ್ಗೊಳ್ಳದೇ ಇದ್ದರೂ, ಈ ಸಮಾವೇಶದಲ್ಲಿ ಮಾತ್ರ ಇಡೀ ಸಚಿವ ಸಂಪುಟದ ಸದಸ್ಯರು, ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಹಾಜರಿದ್ದು ಗಮನ ಸೆಳೆದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಾಹ್ನ 12.45ರ ಹೊತ್ತಿಗೆ ವೇದಿಕೆ ಅಲಂಕರಿಸುವ ವೇಳೆಗೆ ನಿಗದಿತ ಸಮಯದೊಳಗೆ ಆಗಮಿಸಿದ್ದ ಬಹುತೇಕ ಸಚಿವರು ಬಿಜೆಪಿ-ಜಾ.ದಳ ನಾಯಕರ ಮೇಲೆ ವಾಗ್ದಾಣವನ್ನು ಹರಿದುಬಿಟ್ಟರು. ಸಿದ್ದರಾಮಯ್ಯ ಅವರು ವೇದಿಕೆಯನ್ನೇರಿ ಎದುರುಗಡೆ ಕುಳಿತಿದ್ದ ಲಕ್ಷಾಂತರ ಜನಸಮೂಹದ ಕಡೆಗೆ ಕೈ ಬೀಸುತ್ತಿದ್ದಂತೆ ಶಿಳ್ಳೆ ಚಪ್ಪಾಳೆ, ಜೈಕಾರವನ್ನು ಮೊಳಗಿಸುವ ಮೂಲಕ ಮತ್ತಷ್ಟು ಹುರುಪು ತಂದುಕೊಟ್ಟರು.

ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಜಿ.ಪರಮೇಶ್ವರ್, ಡಾ.ಎಚ್.ಸಿ.ಮಹದೇವಪ್ಪ, ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ಸತೀಶ್ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ, ಎಚ್.ಕೆ.ಪಾಟೀಲ್, ದಿನೇಶ್ ಗುಂಡೂರಾವ್, ಕೆ.ಎಚ್‌.ಮುನಿಯಪ್ಪ ಮೊದಲಾದ ಸಚಿವ ಸಂಪುಟದ ಸದಸ್ಯರು ಪಾಲ್ಗೊಂಡು ಸಿಎಂ ಮೇಲಿನ ಆರೋಪವನ್ನು ಸಾರಾಸಗಟಾಗಿ ತಿರಸ್ಕರಿಸಿದರು. ಸರ್ಕಾರದ ಜತೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷರು,ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಒಕ್ಕೊರಲಿ ನಿಂದ ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಸಂದೇಶ ನೀಡಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯರ ಹೆಸರನ್ನು ಹೇಳುತ್ತಿದ್ದಂತೆ ಜೈಕಾರದ ಘೋಷಣೆ ಮುಗಿಲುಮುಟ್ಟಿತು. ಕರ್ನಾಟಕದಲ್ಲಿ ಎರಡನೇ ಬಾರಿ ಹಿಂದುಳಿದ ವರ್ಗಗಳ ನಾಯಕನೊಬ್ಬ ಸಿಎಂ ಆಗಿರುವುದನ್ನು ಸಹಿಸದೆ ತೊಂದರೆ ಕೊಡುವ, ಅಧಿಕಾರದಿಂದ ಕೆಳಗಿಳಿಸುವ ಹುನ್ನಾರ, ಸಂಚು ರೂಪಿಸಿದರೂ ಸಾಧ್ಯವಿಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು, ಸಿದ್ದರಾಮಯ್ಯ ಅವರ ಬೆನ್ನಿಗೆ ಇರುವ ತನಕವೂ ಅಧಿಕಾರದಿಂದ ಕೆಳಗಿಳಿಸಲು ಆಗೋದಿಲ್ಲ ಎಂದು ಹೇಳಿದರು.

ಇದೇ ವೇಳೆ ಬಿಜೆಪಿ-ಜಾದಳದ ದೋಸ್ತಿ ರಾಂಗ್ ಟರ್ನ್ ಬಗ್ಗೆ ಬಿ.ಎಸ್. ಯಡಿಯೂರಪ್ಪ ಎಚ್.ಡಿ.ದೇವೇಗೌಡ ಎಚ್.ಡಿ.ಕುಮಾರಸ್ವಾಮಿ, ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಸಿಪಿಯೋಗೇಶ್ವರ್, ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದ್ದ ಭಾಷಣದ ತುಣುಕುಗಳನ್ನು ಪ್ರದರ್ಶಿಸಲಾಯಿತು.

ಸಮಾವೇಶದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾ‌ರ್ ಸೇರಿದಂತೆ ಸಚಿವರೆಲ್ಲರೂ ಬಿಜೆಪಿ, ಜಾದಳ ನಾಯಕರ ವಿರುದ್ಧ ಟೀಕಾಪ್ರಹಾರ ನಡೆಸುವ ಜೊತೆಗೆ ಮುಡಾದಲ್ಲಿ ಕಾನೂನು ಪ್ರಕಾರ ನಿವೇಶನ ಪಡೆದಿದ್ದರೂ ಜನರಿಗೆ ಸುಳ್ಳು ಹೇಳಲಾಗುತ್ತಿದೆ. ಸಿದ್ದರಾಮಯ್ಯ ಅವರ ವ್ಯಕ್ತಿತ್ವ ಹಾಳು ಮಾಡುವುದು ಬಿಟ್ಟರೆ ಬೇರೇನೂ ಇಲ್ಲ. ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವ ಅಗತ್ಯ ಇಲ್ಲ ಎಂದು ಹೇಳಿದರು. ಇದಕ್ಕೆ ಪುಷ್ಟಿಯಾಗಿ ಎಐಸಿಸಿ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಕೂಡ ಸಿದ್ದರಾಮಯ್ಯ ಅವರ ಆಡಳಿತದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿ ಹೈಕಮಾಂಡ್‌ನ ಶ್ರೀರಕ್ಷೆಯನ್ನು ನೀಡಿದರು.

ದೋಸ್ತಿ ರಾಂಗ್ ಮೈಸೂರು: ಟರ್ನ್ ಕಿರುಚಿತ್ರ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ದೋಸ್ತಿ ರಾಂಗ್ ಟರ್ನ್ ಕಿರುಚಿತ್ರವನ್ನು ಪ್ರದರ್ಶಿಸಿ ಎದುರಾಳಿಗಳಿಗೆ ಟಾಂಗ್ ಕೊಡಲಾಯಿತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ-ಮಾಜಿ ಸಿಎಂ ಬಿ. ಎಸ್.ಯಡಿಯೂರಪ್ಪ ಏಟು-ಎದಿರೇಟು, ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ವಿರುದ್ಧ ಗುಡುಗಿದ ಮಾತುಗಳು, ಸದನದಲ್ಲಿ ಬಿ.ಎಸ್. ಯಡಿಯೂರಪ್ಪ ಆಡಿರುವ ಮಾತುಗಳು, ಸಿ.ಪಿ.ಯೋಗೇಶ್ವರ್,ಡಾ.ಸಿ.ಎನ್.ಅಶ್ವಥ್ ನಾರಾ ಯಣ್ ಬಳಸಿದ್ದ ಮಾತುಗಳ ಸರಣಿ ಪ್ರದರ್ಶಿಸಿ ದಾಗ ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಮಯ್ಯ ಪರ ಜೈಕಾರದ ಘೋಷಣೆಗಳನ್ನು ಕೂಗಿದರು.

ಕೋಮುವಾದಿಗಳು, ಜಾತಿವಾದಿಗಳು, ಪಾಳೇಗಾರಿಕೆ ಪ್ರವೃತ್ತಿ ಇರುವವರನ್ನು ಭಾರತದಿಂದ ಓಡಿಸಬೇಕಾದ ಅನಿವಾರ್ಯತೆ ಇದೆ. ಮನುವಾದಿಗಳು ಶೋಷಿತರನ್ನು ಸಹಿಸುವುದಿಲ್ಲ. ಅಂಥವರನ್ನು ನಾವೆಲ್ಲರೂ ಒಕ್ಕೊರಲಿನಿಂದ ವಿರೋಧಿಸಬೇಕಾಗುತ್ತದೆ. ಅದಕ್ಕಾಗಿ ಈ ಸಮಾವೇಶ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

ಡೈ ಫ್ರುಟ್ಸ್ ಹಾರ

ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಕಾರ್ಯಕರ್ತರು ಡೈಫ್ರುಟ್ಸ್‌ಗಳಿಂದ ಮಾಡಿದ್ದ ಹಾರವನ್ನು ಹಾಕಿ ಅಭಿನಂದಿಸಿದರು. ಗೋಡಂಬಿ, ಖರ್ಜೂರ, ಬಾದಾಮಿ ಮೊದಲಾದ ಹಣ್ಣುಗಳಿಂದ ಮಾಡಿದ್ದ ಹಾರ ಹಾಕಿದರು. ಡಿಕೆಶಿ ಅದರಲ್ಲಿದ್ದ ಗೋಡಂಬಿ ಕಿತ್ತು ಸವಿದರು.

ಸಿಎಂ ಸಿದ್ದರಾಮಯ್ಯ ಹೇಳಿದ್ದು…

ದೇವೇಗೌಡರ ಕುಟುಂಬದವರು ದ್ವೇಷದ ರಾಜಕಾರಣ ಮಾಡುವ ಮನಸ್ಥಿತಿಯವರು ಹಾಗೂ ಬೇರೆಯವರು ಬೆಳೆಯಬಾರದೆಂಬ ಮನೋಭಾವ ಇರುವವರು.

ನಾನು ಎಂದಿಗೂ ದ್ವೇಷದ ಅಥವಾ ಸೇಡಿನ ರಾಜಕಾರಣ ಮಾಡಿಲ್ಲ. ಹಾಗೇನಾದರೂ ಮಾಡಿದ್ದರೆ ಇಂತಹ ಪರಿಸ್ಥಿತಿ ನನಗೆ ಬರುತ್ತಿರಲಿಲ್ಲ.

ನನ್ನ ರಾಜೀನಾಮೆ ಕೇಳಲು ಆರ್. ಅಶೋಕ, ಬಿ.ಎಸ್‌.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ಬಿ.ವೈ. ವಿಜಯೇಂದ್ರಗೆ ಯಾವ ನೈತಿಕತೆ ಇದೆ?

ಬಿಜೆಪಿ-ಜಾ.ದಳದವರದ್ದು ಪಾಪ ವಿಮೋಚನೆಯ ಯಾತ್ರೆಯಾಗಿದೆ. ನಮ್ಮದು ಅಧರ್ಮಿಗಳ ವಿರುದ್ದದ ಧರ್ಮಯುದ್ಧವಾಗಿದೆ. ಸಂವಿಧಾನದ ರಕ್ಷಣೆಗಾಗಿ ಈ ಜನಾಂದೋಲನವನ್ನು ನಡೆಸುತ್ತಿದ್ದೇವೆ. ಈ ಸರ್ಕಾರವನ್ನು 10 ತಿಂಗಳಲ್ಲಿ ತೆಗೆದು ಹಾಕುತ್ತೇವೆ ಎಂದು ಹೊರಟಿರುವವರ ವಿರುದ್ಧ ಬಡವರಿಗಾಗಿ ನಾವು ಹೋರಾಡುತ್ತಿದ್ದೇವೆ.

-ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ

 

ಆಂದೋಲನ ಡೆಸ್ಕ್

Recent Posts

ಚಿತ್ರದುರ್ಗದಲ್ಲಿ ಬಸ್‌ ಅಪಘಾತ ಪ್ರಕರಣ: ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಳಿ ಸಂಭವಿಸಿದ ಭೀಕರ ಬಸ್‌ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ರೂ…

29 mins ago

ಚಿತ್ರದುರ್ಗದಲ್ಲಿ ಬಸ್‌ ಅಪಘಾತ ಪ್ರಕರಣ: ಹಾಸನ ಮೂಲದ ಇಬ್ಬರು ಟೆಕ್ಕಿಗಳು ಕಣ್ಮರೆ

ಹಾಸನ: ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಳಿ ಸಂಭವಿಸಿದ ಭೀಕರ ಬಸ್‌ ಅಪಘಾತದಲ್ಲಿ ಹಾಸನದ ಚನ್ನರಾಯಪಟ್ಟಣ ಮೂಲದ ಇಬ್ಬರು ಯುವತಿಯರು ಕಣ್ಮರೆಯಾಗಿದ್ದಾರೆ.…

35 mins ago

ಚಿತ್ರದುರ್ಗದಲ್ಲಿ ಬಸ್‌ ದುರಂತ ಪ್ರಕರಣ: ಕಂಬನಿ ಮಿಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಬಳಿ ಸಂಭವಿಸಿದ ಕಂಟೇನರ್‌ ಹಾಗೂ ಖಾಸಗಿ ಬಸ್‌ ಭೀಕರ ಅಪಘಾತದಲ್ಲಿ ಮೃತಪಟ್ಟವರಿಗೆ…

44 mins ago

ಎಲ್ಲೆಡೆ ಕ್ರಿಸ್‌ಮಸ್ ಹಬ್ಬದ ಸಂಭ್ರಮ: ಗಣ್ಯರಿಂದ ಶುಭಾಶಯಗಳ ಮಹಾಪೂರ

ಬೆಂಗಳೂರು: ಮಧ್ಯರಾತ್ರಿಯಿಂದಲೇ ಎಲ್ಲೆಡೆ ಕ್ರಿಸ್‌ಮಸ್‌ ಸಡಗರ ಮನೆ ಮಾಡಿದೆ. ಪ್ರತಿ ವರ್ಷದಂತೆ ಈ ವರ್ಷವು ಸಹ ಕ್ರಿಸ್‌ಮಸ್‌ ಹಬ್ಬವು ನಂಬಿಕೆಯೆಂಬ…

55 mins ago

ಚಿತ್ರದುರ್ಗದಲ್ಲಿ ಭೀಕರ ಬಸ್‌ ಅಪಘಾತ ಪ್ರಕರಣ: ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೋರ್ಲತ್ತು ಬಳಿ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 10ಕ್ಕೂ…

2 hours ago

ಭೀಕರ ರಸ್ತೆ ದುರಂತ: ಬಸ್‌ಗೆ ಬೆಂಕಿ ತಗುಲಿ 10ಕ್ಕೂ ಹೆಚ್ಚು ಮಂದಿ ಸಾವು

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೋರ್ಲತ್ತು ಕ್ರಾಸ್‌ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 10ಕ್ಕೂ ಹೆಚ್ಚು ಮಂದಿ ಸಜೀವ…

2 hours ago