ಗಾಂಧಿ ಮಹಾತ್ಮನ ಆತ್ಮಕಥೆಗೆ ಶತಮಾನೋತ್ಸವದ ಸಂದರ್ಭದಲ್ಲಿ ‘ಆಂದೋಲನ’ ದಿನಪತ್ರಿಕೆಯ ಗಾಂಧಿ ಅಭಿಯಾನ
ನಾನು ಇಂಗ್ಲೆಂಡಿಗೆ ಹೋದ ಉದ್ದೇಶವನ್ನು ಬ್ಯಾರಿಸ್ಟರ್ ಆಗುವುದನ್ನು, ಕುರಿತು ನಾನು ಇದುವರೆಗೆ ಏನನ್ನೂ ಹೇಳಲಿಲ್ಲ. ಆ ವಿಚಾರವಾಗಿ ಕೆಲವು ಮಾತುಗಳನ್ನು ಸಂಕ್ಷೇಪವಾಗಿ ಹೇಳಲು ಈಗ ಕಾಲವೊದಗಿದೆ. ಒಬ್ಬ ವಿದ್ಯಾರ್ಥಿಯು ಬ್ಯಾರಿಸ್ಟರ್ ಆಗಬೇಕಾದರೆ ಎರಡು ಷರತ್ತುಗಳನ್ನು ಪಾಲಿಸಬೇಕಾಗಿತ್ತು: ‘ಟರ್ಮುಗಳನ್ನು ಉಳಿಸುವುದು’ -ಒಬ್ಬ ವಿದ್ಯಾರ್ಥಿ ಹನ್ನೆರಡು ಟರ್ಮುಗಳು, ಎಂದರೆ ಮೂರು ವರ್ಷಗಳನ್ನು, ಕಾಲೇಜಿನಲ್ಲಿ ಕಳೆಯುವುದು ಮತ್ತು ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು.
ಟರ್ಮುಗಳನ್ನು ಉಳಿಸುವುದು ಎಂದರೆ ಟರ್ಮುಗಳ ಅವಧಿಯಲ್ಲಿ ತಿನ್ನುವುದು ಎಂದು ಅರ್ಥ. ಏಕೆಂದರೆ ಒಂದು ಟರ್ಮಿನ ಇಪ್ಪತ್ತುನಾಲ್ಕು ಭೋಜನ ಕೂಟಗಳ ಪೈಕಿ, ವಿದ್ಯಾರ್ಥಿ ಆರು ಕೂಟಗಳಲ್ಲಿಯಾದರೂ ಹೋಗಿ ಊಟ ಮಾಡಬೇಕಾಗಿತ್ತು. ತಿನ್ನುವುದು ಎಂದರೆ ತಿನ್ನಲೇಬೇಕೆಂದು ಅರ್ಥವಲ್ಲ. ಆದರೆ ಊಟಕ್ಕೆ ಬಂದಿದ್ದೇನೆ ಎಂಬುದನ್ನು ಸಕಾಲದಲ್ಲಿ ಪ್ರಕಟಿಸಿ ಊಟ ಮುಗಿಯುವವರೆಗೆ ಅಲ್ಲಿಯೇ ಇರಬೇಕಾಗಿತ್ತು. ದೊರೆಯುತ್ತಿದ್ದ ಒಳ್ಳೆಯ ಭೋಜನ ಮತ್ತು ಉತ್ತಮವಾದ ಮದ್ಯವನ್ನು ಎಲ್ಲರೂ ಸಾಧಾರಣವಾಗಿ ತಿನ್ನುತ್ತಿದ್ದರು ಮತ್ತು ಕುಡಿಯುತ್ತಿದ್ದರು. ಒಂದು ಊಟಕ್ಕೆ ಎರಡೂವರೆ ಷಿಲಿಂಗ್‌ನಿಂದ ಮೂರೂವರೆ ಷಿಲಿಂಗ್‌ವರೆಗೆ ಖರ್ಚು ಬೀಳುತ್ತಿತ್ತು. ಅಂದರೆ ಎರಡರಿಂದ ಮೂರು ರೂಪಾಯಿ. ಈ ಬೆಲೆ ಅಷ್ಟೇನೂ ಹೆಚ್ಚಲ್ಲವೆಂದು ಜನ ಭಾವಿಸಿದ್ದರು. ಏಕೆಂದರೆ ಒಂದು ಭೋಜನ ಗೃಹಕ್ಕೆ ಹೋದರೆ ಬರಿಯ ಮದ್ಯಕ್ಕೆ ಮಾತ್ರವೇ ಅಷ್ಟು ಹಣವನ್ನು ಕೊಡಬೇಕಾಗುತ್ತಿತ್ತು.
ಭಾರತದಲ್ಲಿರುವ ನಮಗೆ ನಾವು ‘ನಾಗರಿಕ’ರಾಗದಿದ್ದಲ್ಲಿ ಆಹಾರಕ್ಕಿಂತ ಕುಡಿತಕ್ಕೆ ಬೆಲೆ ಹೆಚ್ಚಾದರೆ ಆಶ್ಚರ್ಯವಾಗುತ್ತದೆ. ಈ ವಿಷಯ ನನಗೆ ಮೊದಲು ತಿಳಿದಾಗ ನಾನು ಬೆಚ್ಚಿಬಿದ್ದೆ. ಹೀಗೆ ಹಣವನ್ನು ಕುಡಿತಕ್ಕಾಗಿ ಪೋಲು ಮಾಡಲು ಜನರಿಗೆ ಹೇಗೆ ಮನಸ್ಸು ಬರುತ್ತದೆ ಎಂದು ನನಗೆ ಆಶ್ಚರ್ಯವಾಯಿತು. ಆನಂತರ ನನಗೆ ವಿಷಯಗಳು ತಿಳಿದವು. ಈ ಭೋಜನ ಕೂಟಗಳಲ್ಲಿ ನಾನು ಸಾಧಾರಣವಾಗಿ ಏನನ್ನೂ ತಿನ್ನುತ್ತಲೇ ಇರಲಿಲ್ಲ. ಏಕೆಂದರೆ ಅಲ್ಲಿ ನಾನು ತಿನ್ನಬಹುದಾಗಿದ್ದುದು ರೊಟ್ಟಿ, ಬೇಯಿಸಿದ ಆಲುಗಡ್ಡೆ, ಕೋಸುಗಡ್ಡೆ, ಅವು ಮೊದಮೊದಲು ನನಗೆ ರುಚಿಸಲಿಲ್ಲವಾಗಿ ನಾನು ಅವನ್ನು ತಿನ್ನುತ್ತಿರಲಿಲ್ಲ. ಆದರೆ ನಾನು ಅವುಗಳ ರುಚಿಯನ್ನು ತಿಳಿದು ತಿನ್ನಲು ಪ್ರಾರಂಭಿಸಿದ ಮೇಲೆ ಇತರ ಪದಾರ್ಥಗಳನ್ನು ಕೇಳಿ ತರಿಸಲು ನನಗೆ ಧೈರ್ಯವುಂಟಾಯಿತು. (ವಿದ್ಯಾಮಂದಿರದ ಮಂಡಳಿಯ ವಿದ್ಯಾರ್ಥಿಗಳ ಊಟಕ್ಕಿಂತ ಬೆಂಚರ್ಗಳ ಸದಸ್ಯರು) ಊಟ ಹೆಚ್ಚು ಉತ್ತಮವಾಗಿರುತ್ತಿತ್ತು. ಶಾಕಾಹಾರಿಯಾಗಿದ್ದ ಒಬ್ಬ ಪಾರಸೀ ವಿದ್ಯಾರ್ಥಿಯೂ ನಾನೂ, ಶಾಕಾಹಾರಿ ತತ್ತ್ವದ ಹಿತದೃಷ್ಟಿಯಿಂದ ಬೆಂಚರುಗಳ ಜತೆ ನಮಗೂ ಶಾಕಾಹಾರಿ ತಿಂಡಿಗಳನ್ನು ಒದಗಿಸಬೇಕೆಂದು ಕೋರಿದೆವು. ನಮ್ಮ ಪ್ರಾರ್ಥನೆಗೆ ಮನ್ನಣೆ ದೊರೆಯಿತು. ನಾವು ಬೆಂಚರ್ಗಳ ಅಡುಗೆಮನೆಯಿಂದ ಹಣ್ಣುಗಳನ್ನೂ ಇತರ ತರಕಾರಿಗಳನ್ನೂ ತರಿಸಿ ತಿನ್ನತೊಡಗಿದೆವು.
ನಾಲ್ಕು ಜನರ ಒಂದು ಗುಂಪಿಗೆ ಎರಡು ಸೀಸೆ ದ್ರಾಕ್ಷಾರಸವನ್ನು ಕೊಡುತ್ತಿದ್ದರು. ನಾನು ಅದನ್ನು ಮುಟ್ಟುತ್ತಿರಲಿಲ್ಲ. ನಾಲ್ವರ ಗುಂಪಿನಒಬ್ಬ ಸದಸ್ಯನಾಗಬೇಕೆಂದು ನನಗೆಯಾವಾಗಲೂ ಒತ್ತಾಯವಿರುತ್ತಿತ್ತು. ಏಕೆಂದರೆ ಆಗ ಆ ಮೂರು ಮಂದಿ, ಎರಡು ಸೀಸ ದ್ರಾಕ್ಷಾರಸವನ್ನೂ ಕುಡಿಯಲು ಅವಕಾಶವಾಗುತ್ತಿತ್ತು. ಪ್ರತಿ ಟರ್ಮಿನಲ್ಲಿಯೂ ಒಂದು ‘ವಿಶೇಷ ರಾತ್ರಿ’ ಬೇರೆ ಇರುತ್ತಿತ್ತು. ಆ ದಿವಸ ಪೋರ್ಟ್, ಷೆರ್ರಿ ಮುಂತಾದ, ಸಾಮಾನ್ಯ ಮದ್ಯಗಳನ್ನಲ್ಲದೆ ಷಾಮ್‌ಪೇನನ್ನೂ ಕೊಡುತ್ತಿದ್ದರು.
ಆದುದರಿಂದ ಮಿತ್ರರು ನಾನು ಹೋಗಲೇಬೇಕೆಂದು ಪ್ರಾರ್ಥಿಸುತ್ತಿದ್ದರು. ವಿಶೇಷ ರಾತ್ರಿಯಂದು ನಾನು ಎಲ್ಲರಿಗೂ ಬೇಕಾದವನಾಗಿರುತ್ತಿದ್ದೆ. ಈ ಊಟಗಳಿಂದ ವಿದ್ಯಾರ್ಥಿಗಳಿಗೆ ಬ್ಯಾರಿಸ್ಟರ್ ಆಗಲು ಹೇಗೆ ಹೆಚ್ಚು ಯೋಗ್ಯತೆಯುಂಟಾಯಿತು ಎಂಬುದು ಆಗ ನನಗೆ ಅರ್ಥವಾಗಿರಲಿಲ್ಲ, ಈಗಲೂ ಆಗಿಲ್ಲ. ಒಂದು ಕಾಲದಲ್ಲಿ, ಕಡಿಮೆ ಸಂಖ್ಯೆ ವಿದ್ಯಾರ್ಥಿಗಳು ಇಂತಹ ಊಟಗಳಿಗೆ ಬರುತ್ತಿದ್ದರು. ಈ ಸಂದರ್ಭಗಳಲ್ಲಿ ಅವರಿಗೂ ‘ಬೆಂಚರ್ ’ಗಳಿಗೂ ಮಾತುಕತೆಯಾಡಲು, ಒಂದೊಂದು ವೇಳೆ ಭಾಷಣಗಳನ್ನೂ ಮಾಡಲು ಅವಕಾಶವುಂಟಾಗುತ್ತಿತ್ತು. ಆದರೆ ನಾನು ಅಲ್ಲಿದ್ದ ಕಾಲದಲ್ಲಿ ಅದಾವುದೂ ಸಾಧ್ಯವಿರಲಿಲ್ಲ. ‘ಬೆಂಚರ್’ಗಳಿಗಾಗಿಯೇ ಬೇರೆ ಭೋಜನದ ಮೇಜನ್ನು ಒದಗಿಸಿದ್ದರು. ಆ ಪದ್ಧತಿಯಲ್ಲಿ ಮೊದಲು ಇದ್ದ ಅರ್ಥ ಇಲ್ಲವಾಗಿತ್ತು. ಆದರೆ ಸಂಪ್ರದಾಯಬದ್ಧವಾದ ಇಂಗ್ಲೆಂಡ್ ಇನ್ನೂ ಈ ಪದ್ಧತಿಯನ್ನು ಉಳಿಸಿಕೊಂಡಿತ್ತು. ಬ್ಯಾರಿಸ್ಟರ್ ಪರೀಕ್ಷೆಯ ಪಾಠಕ್ರಮ ಸುಲಭವಾಗಿತ್ತು: ಬ್ಯಾರಿಸ್ಟರ್‌ಗಳನ್ನು ವಿನೋದವಾಗಿ ‘ಊಟದ ಬ್ಯಾರಿಸ್ಟರ್’ಗಳು ಎಂದೇ ಕರೆಯುತ್ತಿದ್ದರು.
ಆ ಪರೀಕ್ಷೆಗಳಿಗೆ ಬೆಲೆ ಇಲ್ಲವೆಂದು ಎಲ್ಲರಿಗೂ ಗೊತ್ತಿತ್ತು. ನಾನು ಹೋದ ಕಾಲದಲ್ಲಿ ಎರಡು ಪರೀಕ್ಷೆಗಳಿದ್ದವು. ಒಂದು ರೋಮನ್ ಕಾನೂನಿನಲ್ಲಿ, ಮತ್ತೊಂದು ಸಾಮಾನ್ಯ ಕಾನೂನಿನಲ್ಲಿ. ಈ ಪರೀಕ್ಷೆಗಳಿಗೆ ಗೊತ್ತಾದ ಪಠ್ಯಪುಸ್ತಕಗಳಿದ್ದವು. ಪರೀಕ್ಷೆಗಳಿಗೆ ಭಾಗಶಃ ಕುಳಿತುಕೊಳ್ಳಲು ಅವಕಾಶವಿತ್ತು. ಆದರೆ ಪಠ್ಯಪುಸ್ತಕಗಳನ್ನು ಯಾರೂ ಓದುತ್ತಿರಲಿಲ್ಲ. ರೋಮನ್ ಕಾನೂನನ್ನು ಕುರಿತ ಪಠ್ಯಪುಸ್ತಕವನ್ನೇ ಓದದೆ ಎರಡು ಮೂರು ವಾರಗಳಲ್ಲಿ ಟಿಪ್ಪಣಿ (ನೋಟ್ಸ್) ಓದಿ ತೇರ್ಗಡೆಯಾದ ಅನೇಕರು ನನಗೆ ಗೊತ್ತು. ಹಾಗೆಯೇ ಎರಡು ಮೂರು ತಿಂಗಳಲ್ಲಿ ಕಾಮನ್ ಲಾ ನೋಟ್ಸ್ ಓದಿ ತೇರ್ಗಡೆಯಾದವರೂ ನನಗೆ ಗೊತ್ತು. ಪ್ರಶ್ನೆ ಪತ್ರಿಕೆಗಳು ಸುಲಭವಾಗಿ ಇರುತ್ತಿದ್ದವು. ಪರೀಕ್ಷಕರು ಉದಾರಿಗಳಾಗಿದ್ದರು. ರೋಮನ್ ಕಾನೂನಿನಲ್ಲಿ ತೇರ್ಗಡೆ ಹೊಂದುತ್ತಿದ್ದವರ ಸಂಖ್ಯೆ ಶೇ.೯೫ರಿಂದ ೯೯ರ ವರೆಗೆ ಇರುತ್ತಿತ್ತು. ಕಡೆಯ ಪರೀಕ್ಷೆಯಲ್ಲಿ ಶೇ.೭೫ ಕ್ಕಿಂತ ಹೆಚ್ಚು ಮಂದಿ ತೇರ್ಗಡೆಯಾಗುತ್ತಿದ್ದರು. ಹೀಗೆ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ಭಯವೇ ಇರಲಿಲ್ಲ. ವರ್ಷಕ್ಕೆ ನಾಲ್ಕು ಸಲ ಪರೀಕ್ಷೆಗಳು ನಡೆಯುತ್ತಿದ್ದವು. ಅವು ಕಷ್ಟವಾಗಿ ತೋರುತ್ತಲೇ ಇರಲಿಲ್ಲ. ಆದರೆ ಅದನ್ನೇ ಕಷ್ಟವಾಗಿ ಮಾಡಿಕೊಳ್ಳುವುದರಲ್ಲಿ ನಾನು ಸಫಲನಾದೆ. ಎಲ್ಲ ಪಠ್ಯಪುಸ್ತಕಗಳನ್ನೂ ಓದಬೇಕೆಂದು ನಾನು ಯೋಚಿಸಿದೆ. ವಠ್ಯಪುಸ್ತಕಗಳನ್ನು ಆದರೆ ನಾನು ಅಷ್ಟು ವ್ಯಾಸಂಗ ಮಾಡಿದ್ದರೂ ನನ್ನ ನಿಸ್ಸಾಹಾಯಕತೆಗೂ ಭಯಕ್ಕೂ ಕೊನೆ ಇರಲಿಲ್ಲ. ವಕೀಲಿ ಉದ್ಯೋಗವನ್ನು ನಡೆಸುವ ಯೋಗ್ಯತೆ ನನಗೆ ಇದೆಯೆಂದು ಧೈರ್ಯವುಂಟಾಗಲಿಲ್ಲ. ನನ್ನ ಈ ನಿಸ್ಸಾಹಾಯಕತೆಯನ್ನು ವಿವರಿಸಲು ಬೇರೆ ಅಧ್ಯಾಯವ ಆವಶ್ಯಕ.
ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…
ಸತೀಶ್ ತಿಪಟೂರು ಕರ್ನಾಟಕದ ಯಾವುದೇ ಭಾಗದಲ್ಲಿ ಜಂಬೆ ಮೇಷ್ಟ್ರ ಹಿರಿ - ಕಿರಿಯ ವಿದ್ಯಾರ್ಥಿಗಳು ಮೂರ್ನಾಲ್ಕು ಜನ ಒಂದೆಡೆ ಸೇರಿದರೆಂದರೆ…
ಪ್ರತಿ ಭಾರತೀಯರ ಎದೆ ಬಡಿತದ ಚೇತನ ಗಾಂಧೀಜಿ: ಕೈಯಲ್ಲೊಂದು ಕೋಲು ಹಿಡಿದು, ದುಂಡು ಕನ್ನಡಕ ಧರಿಸಿ, ಸತ್ಯ, ಅಹಿಂಸೆಯ ಅಸದಿಂದ…
ಸೋನಿಯಾ ಎಮ್.ವಿ., ಉಪನ್ಯಾಸಕಿ, ಟೆರಿಷಿಯನ್ ಕಾಲೇಜ್ ಎಮ್. ಎನ್. ಜೋಯಿಸ್ ಮತ್ತು ಸುಬ್ಬಮ್ಮ ಜೋಯಿಸ್ ಮೈಸೂರಿನ ಸ್ವತಂತ್ರ ಹೋರಾಟಗಾರರಲ್ಲಿ ತಮ್ಮ…
ಪರಮಶಿವ ನಡುಬೆಟ್ಟ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟಗಾರರು ಧ್ವಜ ಸತ್ಯಾಗ್ರಹ ಕಾರ್ಯ ಕ್ರಮವನ್ನು ಹಮ್ಮಿ ಕೊಂಡಿದ್ದರು. ಈ ಧ್ವಜ ಸತ್ಯಾಗ್ರಹವನ್ನು…
ಪ್ರವಾಸಿಗರ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮ: ಅಗತ್ಯ ಮುನ್ನೆಚ್ಚರಿಕೆಗೆ ಅರಣ್ಯ ಇಲಾಖೆ ಮನವಿ ಕೆ.ಬಿ.ಶಂಶುದ್ಧೀನ್ ಕುಶಾಲನಗರ: ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ…