‘ಆಶಾ ಧ್ವನಿ’ ಸರಣಿಯಿಂದ ಕಾರ್ಯಕರ್ತೆಯರಲ್ಲಿ ಮೂಡಿದ ಆಶಾಭಾವನೆ
ಸರ್ಕಾರದಿಂದಲೇ ಟ್ಯಾಬ್, ನೆಟ್ ಸೌಲಭ್ಯ ಕಲ್ಪಿಸಬೇಕು
ಗುಡ್ಡಗಾಡು ಪ್ರದೇಶಗಳಲ್ಲಿ ನೆಟ್‌ವರ್ಕ್ ಸಮಸ್ಯೆ
ಕಾರ್ಯಕರ್ತೆಯರಿಗೆ ದಿನದಲ್ಲಿ ೨ ಗಂಟೆ ವಿಶ್ರಾಂತಿಯೂ ಇಲ್ಲ
ಈಗಿರುವ ಪ್ರೋತ್ಸಾಹಧನದಲ್ಲಿ ಮಕ್ಕಳ ವಿದ್ಯಾಭ್ಯಾಸವೂ ಕಷ್ಟ
ಮೈಸೂರು: ಸಾರ್ವಜನಿಕರ ಆರೋಗ್ಯ ಸೇವೆಯೇ ಪ್ರಮುಖವಾಗಿರುವ ಆಶಾ ಕಾರ್ಯಕರ್ತೆಯರ ಸಮಸ್ಯೆಗಳು ಒಂದೇ ಗುಕ್ಕಿನಲ್ಲಿ ಸ್ಪಷ್ಟವಾಗುವುದಿಲ್ಲ. ಅವರ ಸಂಕಷ್ಟಗಳ ಹರಹು. ದುಡಿಮೆಯ ಅವಧಿ, ಕೆಲಸಗಳ ಹೊರೆ, ಆಧುನಿಕ ತಂತ್ರಜ್ಞಾನವುಳ್ಳ ಮೊಬೈಲ್ ಇಲ್ಲದಿರುವುದು… ಹೀಗೆ ವಿಸ್ತಾರಗೊಳ್ಳುತ್ತಲೇ ಹೋಗುತ್ತವೆ.
‘ಆಂದೋಲನ’ ದಿನಪತ್ರಿಕೆಯಲ್ಲಿ ಪ್ರಕಟವಾದ ‘ಆಶಾ ಧ್ವನಿ’ ಸರಣಿಗೆ ಪೂರಕವಾಗಿ ಇನ್ನಷ್ಟು ‘ಆಶಾ’ಗಳು ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ. ನಮಗೂ ಕುಟುಂಬಗಳಿವೆ, ಆರ್ಥಿಕ ಸಂಕಷ್ಟಗಳಿವೆ. ಅವುಗಳನ್ನು ನಿವಾರಿಸಿ ಸಬಲೀಕರಣಗೊಳಿಸಬೇಕು ಎಂಬುದು ಹಲವು ಕಾರ್ಯಕರ್ತೆಯರ ಒಕ್ಕೊರಲ ಅಭಿಪ್ರಾಯವಾಗಿದೆ. ಅಲ್ಲದೆ, ಅವರ ಬೇಡಿಕೆಗಳು ಈಡೇರುವ ಆಶಾ ಭಾವನೆಯಲ್ಲೇ ಇದ್ದಾರೆ.
” ನಮ್ಮ ಕೊಡಗು ಜಿಲ್ಲೆ ಬೆಟ್ಟಗುಡ್ಡ ಪ್ರದೇಶಗಳಿಂದ ಕೂಡಿದೆ. ಪರಿಣಾಮವಾಗಿ ಸರಿಯಾದ ನೆಟ್‌ವರ್ಕ್ ಇಲ್ಲ. ಇಂತಹ ಸಂದರ್ಭದಲ್ಲಿ ಸಮೀಕ್ಷೆ ವರದಿಯನ್ನು ಮೊಬೈಲ್‌ನಲ್ಲಿ ಅಪ್ ಲೋಡ್ ಮಾಡಲು ಸಾಧ್ಯವಾಗುವುದಿಲ್ಲ. ಒಂದು ಮನೆಯ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಒಂದು ಗಂಟೆ ಬೇಕಾಗುತ್ತದೆ.”
ಪಿ.ಬಿ.ಪುಷ್ಪ, ಆಶಾ ಕಾರ್ಯಕರ್ತೆ, ಕೊಡಗು ಜಿಲ್ಲೆ
” ಆಶಾ ಕಾರ್ಯಕರ್ತೆಯರಿಗೆ ಸರ್ವೆ ಮಾಡುವುದಕ್ಕೆ ಆಂಡ್ರಾಯ್ಡ್ ಮೊಬೈಲ್ ಅವಶ್ಯವಿದೆ. ನಮ್ಮ ವೈಯಕ್ತಿಕ ಮೊಬೈಲ್ ಬಳಸಿ ಸರ್ವೆ ಮಾಡಲಾಗುತ್ತಿದೆ. ನಾವು ಸರ್ವೆ ಮಾಡುವುದಿಲ್ಲ ಎಂದು ಹೇಳುವುದಿಲ್ಲ. ನಮಗೂ ಕೂಡ ಟ್ಯಾಬ್ ನೀಡಿ ನೆಟ್ ಸೌಲಭ್ಯ ಕಲ್ಪಿಸಬೇಕು. ನಿವೃತ್ತಿ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಿಗೆ ಇಡುಗಂಟಾಗಿ ೨ ಲಕ್ಷ ರೂ. ನೀಡಬೇಕು.”
ತೆಕ್ಕಡೆ ಪೂರ್ಣಿಮ ಬಸಪ್ಪ, ಉಪಾಧ್ಯಕ್ಷರು, ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ.
” ಮಕ್ಕಳ ವಿದ್ಯಾಭ್ಯಾಸ ಕೊಡಿಸುವುದ್ಕೂ ಸಮಸ್ಯೆ ಆಗುತ್ತಿದೆ. ಡಿಜಿಟಲ್ ಅಪ್‌ಡೇಟ್ ಮಾಡುವುದಕ್ಕೆ ಫೋನ್‌ಗೆ ಕರೆನ್ಸಿ ಹಾಕಿಸುವುದಕ್ಕೂ ನಮ್ಮ ಬಳಿ ದುಡ್ಡು ಇರುವುದಿಲ್ಲ. ಸಾಲ ಮಾಡಿ ನಾವೇ ಕೆಲಸವನ್ನು ಮಾಡಬೇಕಿದೆ. ಡಿಎಚ್‌ಒ ಆಫೀಸ್‌ನಲ್ಲಿ ಕೇಳಿದರೆ ಅನುದಾನವಿಲ್ಲ ಎನ್ನುತ್ತಾರೆ.”
-ಮಣಿಲ, ಕಿರಗಸೂರು, ತಿ.ನರಸೀಪುರ ತಾ., ಮೈಸೂರು ಜಿಲ್ಲೆ.
” ಆಶಾ ಕಾರ್ಯಕರ್ತೆಯರಿಗೆ ಈ ಹಿಂದೆ ದಿನದಲ್ಲಿ ೨ ಗಂಟೆ ಮಾತ್ರ ಕೆಲಸದ ಅವಧಿ ನಿಗದಿಪಡಿಸಲಾಗಿತ್ತು. ಪ್ರಸ್ತುತ ದಿನದಲ್ಲಿ ಕನಿಷ್ಠ ೨ ಗಂಟೆಗಳೂ ಆಶಾಗಳಿಗೆ ವಿಶ್ರಾಂತಿ ಇಲ್ಲದ ದುಡಿಮೆ. ಯಾರಿಗೇ ಆರೋಗ್ಯದ ಸಮಸ್ಯೆಯಾದರೂ ಆಶಾಗಳೇ ಸಮೀಪದ ಉಪ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಬೇಕಿದೆ.”
– ಕವಿತಾ, ಅಧ್ಯಕ್ಷರು, ಚಾಮರಾಜನಗರ ಜಿಲ್ಲಾ ಆಶಾ ಕಾರ್ಯಕರ್ತೆಯರ ಸಂಘ.
” ಆಶಾ ಕಾರ್ಯಕರ್ತೆಯರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಒಂದೆಡೆ ಸರ್ಕಾರದ ಸರಿ ಸುಮಾರು ೪೪ ಕಾರ್ಯಕ್ರಮಗಳ ಅಡಿಯಲ್ಲಿ ನಾವು ಮನೆ ಮನೆಗೆ ಹೋಗಬೇಕು. ಆ ಮನೆಯ ಎಲ್ಲ ಮಾಹಿತಿಗಳನ್ನೂ ಕಲೆ ಹಾಕುವುದು, ಜಗೃತಿ ಮೂಡಿಸುವುದು, ಆರೋಗ್ಯ ಇಲಾಖೆ ವಹಿಸುವ ಕೆಲಸ ಮಾಡುವುದು… ಹೀಗೆ ಸಾಕಷ್ಟಿವೆ.”
-ಕೆ.ವಿ.ಜ್ಯೋತಿ, ಆಶಾ ಕಾರ್ಯಕರ್ತೆ, ವಿ.ಸಿ.ಫಾರಂ. ಮಂಡ್ಯ
” ಸಹಾಯಧನ ೧೦,೦೦೦ ರೂ. ನಿಗದಿಪಡಿಸಿರುವುದು ಸಂತೋಷದ ವಿಚಾರ. ಜೊತೆಗೆ ಪ್ರತಿವರ್ಷ ಆಶಾ ಕಾರ್ಯಕರ್ತೆಯರಿಗೆ ಸಂಪೂರ್ಣ ಉಚಿತಆರೋಗ್ಯ ತಪಾಸಣೆ ಸೌಲಭ್ಯ ಕಲ್ಪಿಸಬೇಕು. ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ವೇತನ, ಭವಿಷ್ಯನಿಧಿ, ಕಾರ್ಮಿಕರ ರಾಜ್ಯ ವಿಮೆ ಸೌಲಭ್ಯವನ್ನು ಒದಗಿಸಬೇಕು.”
– ಮಂಜುಳ, ಮಿರ್ಲೆ, ಕೆ.ಆರ್.ನಗರ ತಾ.
” ನುಡಿದಂತೆ ನಡೆಯುತ್ತೇವೆ ಎಂದು ಹೇಳುವ ರಾಜ್ಯ ಸರ್ಕಾರ ನೀಡಿದ ವಾಗ್ದಾನದಂತೆ ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಬೇಕು. ಕಳೆದ ತಿಂಗಳು ನಡೆದ ಬೃಹತ್ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೇತನ ಹೆಚ್ಚಳದ ಘೋಷಣೆ ಮಾಡಿದಂತೆ ವೇತನ ಖಚಿತಪಡಿಸಬೇಕು. ಇದು ಏಪ್ರಿಲ್ ತಿಂಗಳಿನಿಂದಲೇ ಜಾರಿಯಾದರೆ ಒಳ್ಳೆಯದು. ರಾಜ್ಯ ಸರ್ಕಾರ ಈ ಬಗ್ಗೆ ಗಂಭೀರ ಗಮನಹರಿಸಬೇಕು.”
– ಪಿ.ಎಸ್.ಸಂಧ್ಯಾ, ಜಿಲ್ಲಾ ಗೌರವಾಧ್ಯಕ್ಷರು, ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ.
” ಗರ್ಭಿಣಿಯರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಹೆರಿಗೆ ಮಾಡಿಸಿದರೆ ಆಶಾಗಳಿಗೆ ೩೦೦ ರೂ. ದೊರೆಯುತ್ತದೆ. ಆದರೆ, ಈ ಕೆಲಸದ ಜೊತೆಗೆ ಸರ್ಕಾರದ ೩೪ ಬಗೆಯ ಸರ್ವೆಗಳಲ್ಲಿಯೂ ಆಶಾಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರದ ‘ಆಶಾ ನಿಧಿ’ ಯೋಜನೆಯಿಂದ ಆಶಾಗಳಿಗೆ ಸರಿಯಾಗಿ ಹಣ ಬರುತ್ತಿಲ್ಲ. ರಾಜ್ಯ ಸರ್ಕಾರದ ೫ ಸಾವಿರ ರೂ. ಜೊತೆಗೆ ೮ ಕೆಲಸಗಳಿಗೆ ಒಂದು ಕಂತಿನಲ್ಲಿ ೨ ಸಾವಿರ ರೂ. ತಂಡ ಆಧಾರಿತ ಪ್ರೋತ್ಸಾಹ ಧನ ೩ ಸಾವಿರ ರೂ. ಸೇರಿ ಒಟ್ಟಿಗೆ ೧೦ ಸಾವಿರ ರೂ.ಅನ್ನು ಜಮಾ ಮಾಡಬೇಕು ಎಂಬುದು ನಮ್ಮ ಬೇಡಿಕೆ.”
– ಎಂ.ಉಮಾದೇವಿ, ರಾಜ್ಯ ಉಪಾಧ್ಯಕ್ಷರು, ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ.
” ಸರ್ಕಾರ ಆಶಾ ಕಾರ್ಯಕರ್ತೆಯರ ಕೆಲಸದ ಬಗ್ಗೆ ಮೆಚ್ಚುಗೆಯ ಮಾತನಾಡುತ್ತೆ. ಆದರೆ, ೭,೦೦೦ ರೂ.ಗಳಿಗೆ ನಮ್ಮನ್ನು ತಿಂಗಳು ಪೂರ್ತಿ ದುಡಿಸಿಕೊಳ್ಳುತ್ತಿದೆ. ಕಳೆದ ಬಜೆಟ್‌ನಲ್ಲಿ ನೀಡಿರುವ ಭರವಸೆ ಜಾರಿಯಾಗಬೇಕು. ಮಂಡ್ಯ ಜಿಲ್ಲೆಯಲ್ಲಿ ೧,೩೮೭ ಕಾರ್ಯಕರ್ತೆಯರಿದ್ದು, ಸರ್ಕಾರದ ನಿಲುವಿನತ್ತ ಆಶಾಭಾವನೆಯಿಂದ ಕಾಯುವಂತಾಗಿದೆ.”
-ಪುಷ್ಪಾವತಿ, ಜಿಲ್ಲಾಧ್ಯಕ್ಷರು, ಆಶಾ ಕಾರ್ಯಕರ್ತೆಯರ ಸಂಘಟನೆ, ಮಂಡ್ಯ
ಮೈಸೂರು : ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಮೇಲೆ ಯಾವುದೇ ದೌರ್ಜನ್ಯ ಕಂಡುಬಂದರೆ ಕೂಡಲೇ ಎಫ್.ಐ.ಆರ್ ದಾಖಲಿಸಿ ಸೂಕ್ತ…
ಚಾಮರಾಜನಗರ : ಜಿಲ್ಲೆಯ ಶ್ರೀಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಹಳ್ಳಿಗಳಲ್ಲಿನ ಮೂಲಭೂತ ಸೌಕರ್ಯವನ್ನು ದೇವಾಲಯಕ್ಕೆ ಬರುವ ಆದಾಯದಲ್ಲಿ ಅಭಿವೃದ್ಧಿಪಡಿಸಬೇಕು ಎಂದು…
ಸುವರ್ಣಸೌಧ : ರಾಜ್ಯದ ಪೌರಕಾರ್ಮಿಕರು, ಲೋಡರ್ಸ್, ಯುಜಿಡಿ ಸಹಾಯಕರು, ಕ್ಲೀನರ್ ಗಳು ಸೇರಿದಂತೆ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ…
ಬೆಳಗಾವಿ : ಕಾವೇರಿ, ಕಬಿನಿ, ಅರ್ಕಾವತಿ, ತುಂಗಭದ್ರಾ, ಭದ್ರಾ ಸೇರಿದಂತೆ ವಿವಿಧ ನದಿಗಳಿಗೆ ಸಂಸ್ಕರಿಸದ ಗೃಹ ತ್ಯಾಜ್ಯ ಜಲ ಹರಿಯುತ್ತಿದ್ದು,…
ಹನೂರು : ಬಾಳೆಗೊನೆ ಕಟಾವು ಮಾಡಿ ಸ್ವಗ್ರಾಮಕ್ಕೆ ತೆರಳುತ್ತಿದ್ದ ಕೂಲಿ ಕಾರ್ಮಿಕನ ಮೇಲೆ ಕಾಡಾನೆ ದಾಳಿಮಾಡಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿರುವ…
ಬೆಳಗಾವಿ: ಮೈಸೂರು ನಗರದಲ್ಲಿರುವ ಚಾಮರಾಜೇಂದ್ರ ಮೃಗಾಲಯದಲ್ಲಿ 356 ನೌಕರರು ಕಾರ್ಯ ನಿರ್ವಹಿಸುತ್ತಿದ್ದು, ಕೇವಲ 9 ಮಂದಿ ಮಾತ್ರ ಖಾಯಂ ನೌಕರರಾಗಿದ್ದಾರೆ…