Andolana originals

ಕೊಡಗಿನಲ್ಲಿ ಹೋಂ ಸ್ಟೇ ನೋಂದಣಿ ಪ್ರಕ್ರಿಯೆ ಚುರುಕು

ನವೀನ್ ಡಿಸೋಜ

೪ ಸಾವಿರಕ್ಕೂ ಅಧಿಕ ಹೋಂ ಸ್ಟೇಗಳಲ್ಲಿ ೨,೨೬೦ ನೋಂದಣಿ; ತಿಂಗಳಿಗೆ ೩೦ರಿಂದ ೫೦ ಹೊಸ ಅರ್ಜಿಗಳ ಸಲ್ಲಿಕೆ

ಮಡಿಕೇರಿ: ಕೊಡಗಿನಲ್ಲಿ ಹೋಂ ಸ್ಟೇ ನೋಂದಣಿ ಪ್ರಕ್ರಿಯೆ ಚುರುಕಾಗಿದ್ದು, ಅನಧಿಕೃತ ಹೋಂ ಸ್ಟೇಗಳು ಲೈಸನ್ಸ್ ಪಡೆದು ಅಧಿಕೃತ ಹೋಂ ಸ್ಟೇಗಳಾಗಿ ಮಾರ್ಪಾಡಾಗುತ್ತಿವೆ. ಜಿಲ್ಲೆಯಲ್ಲಿರುವ ೪ ಸಾವಿ ರಕ್ಕೂ ಅಧಿಕ ಹೋಂ ಸ್ಟೇಗಳಲ್ಲಿ ೨೨೬೦ ಹೋಂಸ್ಟೇಗಳು ಅಧಿಕೃತವಾಗಿ ನೋಂದಣಿಯಾಗಿವೆ.

ಪ್ರವಾಸೋದ್ಯಮ ಇಲಾಖೆ ವೆಬ್‌ಸೈಟ್‌ನಲ್ಲಿ ಹೋಂಸ್ಟೇಗಳ ಮಾಹಿತಿ ನೀಡಲಾರಂಭಿಸಿದ ಬಳಿಕ ಜಿಲ್ಲೆಯ ಹೋಂಸ್ಟೇಗಳ ನೋಂದಣಿ ಪ್ರಕ್ರಿಯೆಯಲ್ಲಿ ಏರಿಕೆಯಾಗುತ್ತಿದೆ. ಜಿಲ್ಲೆಯ ಪ್ರವಾಸೋದ್ಯಮಕ್ಕೆ ಕಪ್ಪುಚುಕ್ಕೆಯಾಗಿರುವ ಅಕ್ರಮ ಹೋಂ ಸ್ಟೇಗಳು ಅಧಿಕೃತ ಹೋಂಸ್ಟೇ ಗಳಾಗಿ ಪರಿವರ್ತನೆಯಾಗುತ್ತಿವೆ.

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಿದ ಕೊಡಗು ಪ್ರವಾಸೋದ್ಯಮ ಇಲಾಖೆಯ ವೆಬ್‌ಸೈಟ್‌ನಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳು, ಪ್ರವಾಸಿಗರ ಸುರಕ್ಷತೆ ಹಾಗೂ ಹಲವು ಮಾಹಿತಿಗಳೊಂದಿಗೆ ಅಧಿಕೃತ ಹೋಂ ಸ್ಟೇಗಳು, ಅದರ ಸಂಪರ್ಕ ಮಾಹಿತಿಯನ್ನೂ ನೀಡಲಾಗುತ್ತಿದೆ. ಇದರಿಂದ ಜಿಲ್ಲೆಗೆ ಬರುವ ಪ್ರವಾಸಿಗರು ಸುಲಭವಾಗಿ ಅಧಿಕೃತ ಹೋಂ ಸ್ಟೇಗಳಲ್ಲಿ ಬುಕ್ಕಿಂಗ್ ಮಾಡಿಕೊಳ್ಳಲು ಅವಕಾಶ ಸಿಕ್ಕಿದೆ. ಇದರಿಂದ ಈಗ ಜಿಲ್ಲೆಯ ಅನಧಿಕೃತ ಹೋಂಸ್ಟೇಗಳ ಮಾಲೀಕರು ತಮ್ಮ ಹೋಂಸ್ಟೇಗಳನ್ನು ನೋಂದಣಿ ಮಾಡಿಸಿಕೊಳ್ಳು ತ್ತಿದ್ದು, ಪರವಾನಗಿ ಪಡೆದುಕೊಳ್ಳುತ್ತಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು ೪ ಸಾವಿರಕ್ಕೂ ಹೋಂಸ್ಟೇಗಳಿವೆ ಎಂಬ ಅಂದಾಜಿದ್ದು, ಆ ಪೈಕಿ ಸದ್ಯ ೨,೨೬೦ ಹೋಂಸ್ಟೇಗಳು ಅಕೃತವಾಗಿ ನೋಂದಣಿಯಾಗಿವೆ. ಉಳಿದಂತೆ ನೋಂದಣಿಯಾಗದ ಹೋಂಸ್ಟೇಗಳು ಈಗ ನೋಂದಣಿಯಾಗುತ್ತಿವೆ. ವೆಬ್‌ಸೈಟ್‌ನಲ್ಲಿ ಮಾಹಿತಿ, ನಿರಂತರ ಜಾಗೃತಿಯ ಪರಿಣಾಮವಾಗಿ ಸದ್ಯ ಪ್ರವಾಸೋದ್ಯಮ ಇಲಾಖೆಗೆ ತಿಂಗಳಿಗೆ ೩೦ರಿಂದ ೫೦ ಅರ್ಜಿಗಳು ಹೊಸ ಹೋಂಸ್ಟೇಗಳ ನೋಂದಣಿಗೆ ಸಲ್ಲಿಕೆಯಾಗುತ್ತಿವೆ.

ಇತ್ತೀಚೆಗೆ ಹಂಪಿಯಲ್ಲಿ ಪ್ರವಾಸಿಗರ ಮೇಲೆ ದೌರ್ಜನ್ಯ ಪ್ರಕರಣ ನಡೆದ ಬಳಿಕ ಜಿಲ್ಲೆಯಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮತ್ತು ಪೊಲೀಸ್ ಇಲಾಖೆಯಿಂದ ಹೋಂಸ್ಟೇ ಮಾಲೀಕರ ಸಭೆ ನಡೆಸಿದ್ದು, ಪ್ರವಾಸಿಗರ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲಾಗಿದೆ. ಅಲ್ಲದೇ ಹೋಂ ಸ್ಟೇಗಳಿಗೆ ಬಂದ ಅತಿಥಿಗಳಿಗೆ ಯಾವುದೇ ತೊಂದರೆಯಾದರೆ ಹೋಂಸ್ಟೇ ಮಾಲೀಕರನ್ನೇ ಹೊಣೆಯಾಗಿಸಲಾಗುತ್ತದೆ ಎಂಬ ಎಚ್ಚರಿಕೆ ನೀಡಲಾಗಿದೆ. ಇದರ ಪರಿಣಾಮದಿಂದಲೂ ಹೋಂಸ್ಟೇ ನೋಂದಣಿಯಲ್ಲಿ ಹೆಚ್ಚಳವಾಗುತ್ತಿದೆ.

ಹೋಂಸ್ಟೇ ನೋಂದಣಿ ಸುಲಭ ಪ್ರಕ್ರಿಯೆಯಾಗಿದ್ದು ಅರ್ಜಿ ಸಲ್ಲಿಸಿ ಒಂದರಿಂದ ಒಂದೂವರೆ ತಿಂಗಳಲ್ಲಿ ಪರವಾನಗಿ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಮೊದಲು ಪ್ರವಾಸೋದ್ಯಮ ಇಲಾಖೆಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ ಸಲ್ಲಿಸಬೇಕು. ನಂತರ ಅಲ್ಲಿಂದ ಹಿಂಬರಹ ಪಡೆದು ಪೊಲೀಸ್ ಠಾಣೆ ಮತ್ತು ಸ್ಥಳೀಯ ಸಂಸ್ಥೆಗೆ ಹೋದರೆ ಅವರು ಪರಿಶೀಲಿಸಿ ನಿರಾಕ್ಷೇಪಣಾ ಪತ್ರ ನೀಡುತ್ತಾರೆ. ಎಲ್ಲಾ ದಾಖಲೆಗಳೊಂದಿಗೆ ಕೆಟಿಟಿಎಫ್ ಪೋರ್ಟಲ್‌ನಲ್ಲಿ ೫೦೦ ರೂ. ಪಾವತಿಸಿ ಅರ್ಜಿ ಸಲ್ಲಿಸಿದರೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಲೈಸನ್ಸ್ ಸಿದ್ಧವಾದ ಕೂಡಲೇ ಅವರೇ ಕರೆಮಾಡುತ್ತಾರೆ.

ನಿಯಮಗಳನ್ನು ಪಾಲಿಸಿ…

ಪ್ರವಾಸೋದ್ಯಮ ಇಲಾಖೆ ಹಾಗೂ ಪೊಲೀಸ್ ಇಲಾಖೆಯಿಂದ ಹೋಂಸ್ಟೇ ಮಾಲೀಕರು ಕಡ್ಡಾಯವಾಗಿ ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ. ಮುಖ್ಯವಾಗಿ ಮಾಲೀಕರೇ ಹೋಂಸ್ಟೇ ನಡೆಸಬೇಕು. ಸಿಸಿ ಕ್ಯಾಮೆರಾ ಇರಬೇಕು. ನೋಂದಣಿ ಪುಸ್ತಕ ಹೊಂದಿರಬೇಕು. ಗ್ಯಾಸ್ ಗೀಸರ್ ಬಳಸಬಾರದು. ಪಾರ್ಕಿಂಗ್ ವ್ಯವಸ್ಥೆ ಹೊಂದಿರಬೇಕು ಎಂಬಿತ್ಯಾದಿ ನಿಯಮಗಳನ್ನು ಹೋಂಸ್ಟೇ ಮಾಲೀಕರು ಪಾಲಿಸುವಂತೆ ಸೂಚನೆ ನೀಡಲಾಗಿದೆ.

” ಹೋಂ ಸ್ಟೇ ನೋಂದಣಿ ಪ್ರಕ್ರಿಯೆ ಈಗ ಸುಲಭವಾಗಿದೆ. ಅರ್ಜಿ ಸಲ್ಲಿಸಿ ಒಂದರಿಂದ ಒಂದೂವರೆ ತಿಂಗಳಲ್ಲಿ ಪರವಾನಗಿ ಪಡೆಯಬಹುದಾಗಿದ್ದು, ಅಧಿಕೃತವಾಗಿ ವ್ಯವಹಾರ ನಡೆಸಬಹುದಾಗಿದೆ. ಲೈಸನ್ಸ್ ಪಡೆದು ಹೋಂಸ್ಟೇ ನಡೆಸುವುದು ಕಡ್ಡಾಯವಾಗಿದ್ದು, ಇದು ಪ್ರವಾಸಿಗರ ಮತ್ತು ಮಾಲೀಕರ ಸುರಕ್ಷತೆ ದೃಷ್ಟಿಯಿಂದಲೂ ಅತ್ಯವಶ್ಯ.”

-ಅನಿತಾ ಭಾಸ್ಕರ್, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕಿ.

ಆಂದೋಲನ ಡೆಸ್ಕ್

Recent Posts

ರೈಲ್ವೆ ಮೇಲ್ಸೇತುವೆ; ಭೂ ದರ ಕಗ್ಗಂಟು ಬಗೆಹರಿಯುವುದೇ?

ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…

54 mins ago

ಜನವರಿಗೆ ಚಾ.ಬೆಟ್ಟದ ಅಭಿವೃದ್ಧಿ ಕಾಮಗಾರಿ ಶುರು

ಮೈಸೂರು: ಪ್ರಸಿದ್ಧ ಯಾತ್ರಾ ಸ್ಥಳ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾಮಗಾರಿಯು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಜನವರಿ ಮೊದಲ…

1 hour ago

ಕೋಳಿ ಮೊಟ್ಟೆಗೆ ಬರ: ಏರಿದ ದರ

ಗಿರೀಶ್ ಹುಣಸೂರು ಬಿಡಿ ಮೊಟ್ಟೆಗೆ ೭.೫೦ ರೂ.; ರಫ್ತು ಹೆಚ್ಚಳದಿಂದ ಭಾರೀ ಹೊಡೆತ  ಮೈಸೂರು: ಮಾಗಿ ಚಳಿಗಾಲ ಆರಂಭ, ಚಂಡಮಾರುತದಿಂದ ಹವಾಮಾನ…

1 hour ago

ಹಣ ದ್ವಿಗುಣಗೊಳಿಸುವುದಾಗಿ ೨೮ ಲಕ್ಷ ರೂ. ವಂಚನೆ; ದೂರು ದಾಖಲು

ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…

11 hours ago

ಅಂಬಳೆ: ಚಾಮುಂಡೇಶ್ವರಿ ದೇಗುಲದಲ್ಲಿ ಕಳ್ಳತನ

ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…

11 hours ago