ಕಾಯಕಲ್ಪಕ್ಕಿಂತ ರಕ್ಷಣೆ ಅಗತ್ಯ; ಲ್ಯಾನ್ಸ್‌ಡೌನ್ ಕಟ್ಟಡ, ದೊಡ್ಡ ಗಡಿಯಾರ… ಕಟ್ಟಡಗಳಿಗೆ ಕಳ್ಳರ ಕಾಟ
ಕಿಡಿಗೇಡಿಗಳಿಂದ ನಿರಂತರ ಹಾನಿ; ಕಟ್ಟಡಗಳ ಉಳಿವು, ಸಂರಕ್ಷಣೆಗೆ ಬೇಕಿದೆ ಅನುದಾನ
ಕೆ.ಬಿ.ರಮೇಶನಾಯಕ
ಮೈಸೂರು: ನಗರದ ಹಲವಾರು ಪಾರಂಪರಿಕ ಕಟ್ಟಡಗಳು ಕಾಲಕಾಲಕ್ಕೆ ದುರಸ್ತಿ ಕಾಣದೆ ಕುಸಿದು ಬೀಳುವ ಆತಂಕ ಎದುರಿಸುತ್ತಿದ್ದರೆ, ಮತ್ತೊಂದೆಡೆ ಸೂಕ್ತ ರಕ್ಷಣೆ ಇಲ್ಲದೆ ಕಿಡಿಗೇಡಿಗಳು ಹಾಗೂ ಕಳ್ಳರಿಂದ ನಿರಂತರ ವಾಗಿ ಅಪಾಯದ ಸುಳಿಗೆ ಸಿಲುಕುತ್ತಿವೆ. ಪ್ರಸ್ತುತ ಈ ಕಟ್ಟಡಗಳಿಗೆ ಕಾಯಕಲ್ಪಕ್ಕಿಂತ ರಕ್ಷಣೆ ಬೇಕಿದೆ ಎಂಬುದು ಈಗ ಪಾರಂಪರಿಕ ತಜ್ಞರ ಸಲಹೆಯಾಗಿದೆ.
ಇತ್ತೀಚೆಗೆ ವ್ಯಕ್ತಿಯೊಬ್ಬ ನಗರದ ಹೃದಯ ಭಾಗ ಕೆ.ಆರ್.ವೃತ್ತದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ಪ್ರ ತಿಮೆಯ ಮೇಲೆ ಹತ್ತಿ, ಅದನ್ನು ವಿರೂಪಗೊಳಿಸಲು ಯತ್ನಿಸಿದ್ದ. ಇಂತಹ ಘಟನೆಗಳು ಇದೇ ಮೊದಲೇನೂ ಅಲ್ಲ. ಕೆಲವು ವರ್ಷಗಳ ಹಿಂದೆ ಚಾಮರಾಜ ಒಡೆಯರ್ ಪ್ರತಿಮೆಯ ಕತ್ತಿಯನ್ನು ಕಳವು ಮಾಡಲಾಗಿತ್ತು.
ಲ್ಯಾನ್ಸ್ಡೌನ್ ಕಟ್ಟಡದ ಒಂದು ಭಾಗ ೨೦೧೨ರಲ್ಲಿ ಸುರಿದ ಧಾರಾಕಾರ ಮಳೆಯಿಂದ ಕುಸಿದು ಬಿದ್ದಿತ್ತು. ನಂತರ ಕಟ್ಟಡದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದವರನ್ನು ಕಟ್ಟಡದ ಮುಂಭಾಗದಲ್ಲಿ ತಾತ್ಕಾಲಿಕ ಮಳಿಗೆ ಗಳನ್ನು ನಿರ್ಮಿಸಿ ಸ್ಥಳಾಂತರಿಸಲಾಯಿತು. ಲ್ಯಾನ್ ಡೌನ್ ಕಟ್ಟಡದಲ್ಲಿ ವ್ಯಾಪಾರ ವಹಿ ವಾಟು ನಡೆಯದ ಹಿನ್ನೆಲೆಯಲ್ಲಿ ಕಟ್ಟಡ ನಿರ್ವಹಣೆ ಇಲ್ಲದೆ ಪಾಳು ಬಿದ್ದು ಇದೀಗ ಸಂಪೂರ್ಣ ದುಸ್ಥಿತಿಯತ್ತ ಸಾಗಿದೆ. ಲ್ಯಾನ್ಸ್ ಡೌನ್ ಕಟ್ಟಡದ ಅನೇಕ ಕಿಟಕಿಗಳು ಹಾಗೂ ಬಾಗಿಲುಗಳನ್ನು ಕದ್ದೊಯ್ಯಲಾಗಿದೆ.
ಹೀಗಾಗಿ ಕಟ್ಟಡ ದಿನೇದಿನೇ ಶಿಥಿಲಗೊಳ್ಳುತ್ತಿದೆ. ಇಷ್ಟಾದರೂ ಕಟ್ಟಡಕ್ಕೆ ರಕ್ಷಣೆ ಒದಗಿಸಲು ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ. ಇದೇ ರೀತಿ ಪರಿಸ್ಥಿತಿ ಮುಂದುವರಿದರೆ ಈ ಕಟ್ಟಡವನ್ನು ಕಳ್ಳರೇ ಕೆಡವಿ ಹಾಕುವ ದಿನಗಳು ದೂರವಿಲ್ಲ. ನಗರದ ಸರ್ಕಾರಿ ಅತಿಥಿ ಗೃಹಕ್ಕೆ ಸೇರಿದ ಸ್ವಾಗತ ಕಮಾನು(ಬೆಂಗಳೂರು- ಮೈಸೂರು ರಸ್ತೆ) ನಿರ್ವಹಣೆಯ ಕೊರತೆಯಿಂದ ದುಸ್ಥಿತಿಗೆ ತಲುಪಿದೆ. ಈ ಕಟ್ಟಡವನ್ನು ಕೆಲವರು ಕುದುರೆ ಲಾಯವಾಗಿ ಮಾರ್ಪಾಡು ಮಾಡಿಕೊಂಡಿದ್ದರು. ಇದನ್ನು ಗಮನಿಸಿದ ನಗರ ಪಾಲಿಕೆ ಅಧಿಕಾರಿಗಳು, ಸ್ವಾಗತ ಕಮಾನು ರಕ್ಷಣೆಗೆ ಮುಂದಾದರು. ಈ ಸ್ವಾಗತ ಕಮಾನಿನ ಜತೆಗೆ ಮಹಾರಾಣಿ ಕಾಲೇಜಿನ ಸ್ವಾಗತ ಕಮಾನು, ವೀರನಗೆರೆಯಲ್ಲಿರುವ ಗೋಪುರವನ್ನು ಸಂರಕ್ಷಣೆ ಹಾಗೂ ಲಲಿತ ಮಹಲ್ ರಸ್ತೆಯಲ್ಲಿರುವ ಗೋಪುರವನ್ನು ಸ್ಥಳಾಂತರಿಸಿ ರಸ್ತೆ ವಿಸ್ತರಣೆ ಮಾಡಲು ಯೋಜನೆ ರೂಪಿಸಿ, ಅನುದಾನ ಬಿಡುಗಡೆ ಮಾಡಲಾಯಿತು. ಆದರೆ, ಸಂರಕ್ಷಣಾ ಕಾಮಗಾರಿ ಒಂದು ವರ್ಷವಾದರೂ ಆರಂಭಗೊಂಡಿಲ್ಲ.
ದೊಡ್ಡ ಗಡಿಯಾರ ಗೋಪುರ ಮೈಸೂರಿನಲ್ಲಿ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಕಟ್ಟಡವು ಇಲಿ, ಗೆದ್ದಲುಗಳ ಹಾವಳಿಯಿಂದ ಕುಸಿಯುವ ಭೀತಿ ಎದುರಾಗಿತ್ತು. ಈ ಬಗ್ಗೆ ಪಾರಂಪರಿಕ ತಜ್ಞರು ಗಮನ ಸೆಳೆದ ನಂತರ ನಗರ ಪಾಲಿಕೆ ದೊಡ್ಡ ಗಡಿಯಾರದ ಸಂರಕ್ಷಣಾ ಕಾರ್ಯ ಕೈಗೊಂಡಿರುವುದು ಗಮನಾರ್ಹ. ಆದರೆ, ಈ ದೊಡ್ಡ ಗಡಿಯಾರ ಕೂಡ ಕಳ್ಳರಿಂದ ಸಮಸ್ಯೆ ಎದುರಿಸುತ್ತಿದೆ. ಇತ್ತೀಚೆಗೆ ಕಳ್ಳರು ದೊಡ್ಡ ಗಡಿಯಾರ ಗೋಪುರದ ಅರ್ಥಿಂಗ್ ವೈರ್‌ಅನ್ನು ಕಳವು ಮಾಡಿದ್ದರು.
ನಗರದ ಹೃದಯ ಭಾಗದಲ್ಲಿ ಇರುವ ಪಾರಂಪರಿಕ ಕಟ್ಟಡಗಳಲ್ಲಿಯೇ ಈ ರೀತಿ ನಿರಂತರವಾಗಿ ಕಳವು ನಡೆಯುತ್ತಿದ್ದರೂ ಜಿಲ್ಲಾಡಳಿತ ಈ ಬಗ್ಗೆ ಯಾವುದೇ ಗಮನಹರಿಸದೆ ಇರುವುದು ಅಚ್ಚರಿಯ ಸಂಗತಿ. ನಗರದಲ್ಲಿ ಹೆಜ್ಜೆಹೆಜ್ಜೆಗೂ ಸಿಸಿ ಕ್ಯಾಮೆರಾಗಳು ಇದ್ದರೂ ಕಳ್ಳರು ಪಾರಂಪರಿಕ ಕಟ್ಟಡಗಳಲ್ಲಿ ಯಾವ ರೀತಿ ಕಳವು ಮಾಡುತ್ತಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ನಗರದ ಎಲ್ಲ ಪಾರಂಪರಿಕ ಕಟ್ಟಡಗಳಿಗೆ ರಕ್ಷಣೆ ಒದಗಿಸುವುದು ಕಷ್ಟದ ಕೆಲಸ. ಆದರೆ, ನಗರದ ಹೃದಯ ಭಾಗದಲ್ಲಿ ಇರುವ ಪಾರಂಪರಿಕ ಕಟ್ಟಡಗಳಿಗಾದರೂ ರಕ್ಷಣೆ ನೀಡುವ ಅವಶ್ಯಕತೆ ಇದೆ. ಉಳಿದ ಪಾರಂಪರಿಕ ಕಟ್ಟಡಗಳ ರಕ್ಷಣೆಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಜಿಲ್ಲಾಡಳಿತ, ನಗರಪಾಲಿಕೆ ಕ್ರಮ ವಹಿಸುವ ಅಗತ್ಯ ಇದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಗರದ ಪಾರಂಪರಿಕ ಕಟ್ಟಡಗಳನ್ನು ಫೋಟೊಗಳಲ್ಲಿ ಮಾತ್ರ ನೋಡಬೇಕಾದಂತಹ ಸನ್ನಿವೇಶ ಬರಬಹುದು.
” ಮೈಸೂರಿನ ಹಲವಾರು ಪಾರಂಪರಿಕ ಕಟ್ಟಡಗಳಿಗೆ ಸೂಕ್ತ ರಕ್ಷಣೆ ಇಲ್ಲದ ಹಿನ್ನೆಲೆಯಲ್ಲಿ ಕಳವು ಪ್ರಕರಣ ಹಾಗೂ ಕಟ್ಟಡಗಳನ್ನು ವಿರೂಪಗೊಳಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ನಗರಪಾಲಿಕೆ ಅಧಿಕಾರಿಗಳು ಪಾರಂಪರಿಕ ಕಟ್ಟಡಗಳ ರಕ್ಷಣೆಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ಕ್ರಮ ವಹಿಸಬೇಕು. ಈ ಬಗ್ಗೆ ನಗರಪಾಲಿಕೆಯ ಅಧಿಕಾರಿಗಳ ಗಮನ ಸೆಳೆಯಲಾಗುವುದು.”
ಪ್ರೊ.ಎನ್.ಎಸ್.ರಂಗರಾಜು, ಸದಸ್ಯ, ಜಿಲ್ಲಾ ಪಾರಂಪರಿಕ ಸಮಿತಿ
ರಾಮನಗರ: ರಾಮನಗರದಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಎಸಗಲಾಗಿದ್ದು, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ವಿಕಾಸ್, ಪ್ರಶಾಂತ್, ಚೇತನ್…
ಹನೂರು: ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವನ್ಯಜೀವಿ ವಲಯದ ಜಲ್ಲಿಪಾಳ್ಯ ಹತ್ತಿರ ಬೈಕ್‌ನಲ್ಲಿ…
ಬೆಳಗಾವಿ: ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ. ಇದು ಅವರ ಕೊನೆಯ ಅಧಿವೇಶನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಲೇವಡಿ ಮಾಡಿದ್ದಾರೆ.…
ಮೈಸೂರಿನ ಕುವೆಂಪು ನಗರದ ಅಪೋಲೋ ಆಸ್ಪತ್ರೆಯ ಹಿಂಭಾಗ ದಲ್ಲಿರುವ ಬಿಜಿಎಸ್ ಪದವಿಪೂರ್ವ ಕಾಲೇಜಿನ ಎದುರಿನ ದೊಡ್ಡಮೋರಿ ಯಿಂದ ತೆಗೆದ ಕಸವನ್ನು…
ಕಳೆದ ಮೂರು ವರ್ಷಗಳ ಅವಧಿಯಲ್ಲಿ, ರಾಜ್ಯದಲ್ಲಿ ೨,೮೪೭ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ (ಎನ್‌ಸಿಆರ್‌ಬಿ)…
ಭಾರತದ ಶಿಕ್ಷಣ ನೀತಿ ಮಕ್ಕಳ ಆರೋಗ್ಯದ ಕುರಿತು ಸ್ಪಷ್ಟ ಮಾರ್ಗಸೂಚಿ ನೀಡಿದ್ದರೂ, ಬಹುತೇಕ ಶಾಲೆಗಳು ಇದನ್ನು ಪಾಲಿಸುತ್ತಿಲ್ಲ ಎಂಬುದು ವಿಷಾದಕರ…