Andolana originals

ಭಾರದ ಕಂಟೇನರ್ ಸಂಚಾರ; ಸೇತುವೆ ಕುಸಿಯುವ ಆತಂಕ

ತೆರಕಣಾಂಬಿ ಭಾಗದಲ್ಲಿ ಟಿಪ್ಪರ್‌ಗಳ ಹಾವಳಿಯಿಂದ ಬೇಸತ್ತ ಸಾರ್ವಜನಿಕರು

ಗುಂಡ್ಲುಪೇಟೆ: ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳು ಹಾಗೂ ಹೆದ್ದಾರಿಗಳಲ್ಲಿ ಹಗಲಿರುಳೂ ಸಂಚರಿಸುತ್ತಿರುವ ಟಿಪ್ಪರ್‌ಗಳು ಹಲವಾರು ಅವಾಂತರಗಳನ್ನು ಸೃಷ್ಟಿಸುತ್ತಿದ್ದರೂ ಸಂಬಂಧಪಟ್ಟವರು ಯಾವುದೇ ಕ್ರಮಕೈಗೊಳ್ಳದ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಗದಿತ ಮಿತಿಗಿಂತ ಹೆಚ್ಚಿನ ಕಲ್ಲು ತುಂಬಿಕೊಂಡು ಸಂಚರಿಸುವ ಟಿಪ್ಪರ್‌ಗಳ ಸಂಚಾರದಿಂದ ಗ್ರಾಮಾಂತರ ಪ್ರದೇಶಗಳ ರಸ್ತೆಗಳು ಗುಂಡಿ ಬಿದ್ದಿದ್ದರೆ ರಾಷ್ಟ್ರೀಯ ಹೆದ್ದಾರಿಗಳಿಗೆ ಹಾಕಿರುವ ಡಾಂಬರು ಕಿತ್ತುಬರುತ್ತಿದೆ. ಸೇತುವೆಗಳು ಓವರ್‌ಲೋಡ್ ಟಿಪ್ಪರ್‌ಗಳ ನಿರಂತರ ಸಂಚಾರದಿಂದ ಶಿಥಿಲವಾಗುತ್ತಿದ್ದು ಕುಸಿಯುವ ಹಂತಕ್ಕೆ ತಲುಪುತ್ತಿವೆ. ಗುಂಡ್ಲುಪೇಟೆ- ಮೈಸೂರು ರಸ್ತೆಯಲ್ಲಿ ರಸ್ತೆ ಅಗಲೀಕರಣಕ್ಕಾಗಿ ಒಂದು ಬದಿ ಅಗೆದ ಕಾರಣ ರಸ್ತೆ ಸಂಚಾರ ಕಿರಿದಾಗಿದೆ. ಇಲ್ಲಿ ಕಂಟೇನರ್‌ಗಳು ಅಧಿಕ ಭಾರ ಹೊತ್ತು ಸಾಗುತ್ತಿರುವುದರಿಂದ ಬೇರೆ ವಾಹನಗಳಿಗೆ ಸಮಸ್ಯೆಯಾಗುತ್ತದೆ. ಅಲ್ಲದೆ ವೇಗದ ಚಾಲನೆಯಿಂದ ಅಪಘಾತ ಹೆಚ್ಚಾಗುವ ಆತಂಕವಿದೆ.

ಇತ್ತೀಚೆಗೆ ಗ್ರಾಮಾಂತರ ಪ್ರದೇಶಗಳಲ್ಲಿ ಗಣಿಗಾರಿಕೆಗೆ ಅನುಮತಿ ದೊರಕಿದ್ದರಿಂದ ತೆರಕಣಾಂಬಿ, ಹಿರಿಕಾಟಿ, ಅರೇಪುರ, ಕೂತನೂರು ಗುಡ್ಡ, ರಂಗೂಪುರ, ತೊಂಡವಾಡಿ ಭಾಗಗಳಲ್ಲಿಯೂ ಭಾರೀ ಪ್ರಮಾಣದ ಗಣಿಗಾರಿಕೆ ಆರಂಭಿಸಲಾಗಿದ್ದು, ಇಲ್ಲಿ ತೆಗೆದ ಕಲ್ಲುಗಳನ್ನು ಟಿಪ್ಪರುಗಳ ಮೂಲಕ ತಾಲ್ಲೂಕಿನ ನಾನಾ ಭಾಗಗಳಲ್ಲಿರುವ ಹಾಗೂ ನೆರೆಯ ನಂಜನಗೂಡಿನ ಕ್ರಷರ್‌ಗಳಿಗೆ ಕೊಂಡೊಯ್ಯಲಾಗುತ್ತಿದೆ. ಅಲ್ಲದೆ ಕರಿಕಲ್ಲು ಗಣಿಗಳಲ್ಲಿ ನಿರುಪಯುಕ್ತವಾಗಿರುವ ಕಲ್ಲು ಬಂಡೆಗಳನ್ನೂ ಸಹ ಕ್ರಷರ್‌ಗಳಿಗೆ ಸಾಗಣೆ ಮಾಡಲಾಗುತ್ತಿದೆ. ಇವುಗಳಿಗೆ ರಾಯಲ್ಟಿ ಪಾವತಿಸದೆ ರಾತ್ರಿ ೮ ಗಂಟೆಗೆ ಆರಂಭಿಸಿದರೆ ಬೆಳಿಗ್ಗೆ ೬ ಗಂಟೆವರೆಗೂ ನಿರಂತರವಾಗಿ ಸಾಗಣೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ತೆರಕಣಾಂಬಿ-ಬೊಮ್ಮನಹಳ್ಳಿ ರಸ್ತೆ, ತೆರಕಣಾಂಬಿ- ಗುಂಡ್ಲುಪೇಟೆ ರಸ್ತೆಗಳು ಗುಂಡಿಬಿದ್ದು ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದ್ದರೆ ಪಟ್ಟಣದಿಂದ ಜಿಲ್ಲಾ ಕೇಂದ್ರಕ್ಕೆ ಹೋಗುವ ರಸ್ತೆಯ ಕಗ್ಗಳ ಗ್ರಾಮದ ಬಳಿ ಯಿರುವ ಪುರಾತನ ಸೇತುವೆಯ ಕೆಳಭಾಗದಲ್ಲಿ ಇಟ್ಟಿಗೆಗಳು ಕಳಚಿ ಬೀಳುತ್ತಿವೆ. ತೆರಕಣಾಂಬಿಯ ಗೃಹ ನಿರ್ಮಾಣ ಮಂಡಳಿಯ ರಸ್ತೆಯಲ್ಲಿ ಕಾಲಿಡಲೂ ಸಾಧ್ಯವಾಗದಂತಾಗಿದ್ದು, ನಿವಾಸಿಗಳು ಹಿಡಿಶಾಪ ಹಾಕುತ್ತಿದ್ದಾರೆ.

ಮುಖ್ಯರಸ್ತೆಯಲ್ಲಿ ಆವರಿಸುವ ದೂಳಿನಿಂದ ಅಂಗಡಿ ಮುಂಗಟ್ಟುಗಳವರು ಉಸಿರಾಟದ ಸಮಸ್ಯೆ ಸೇರಿದಂತೆ ಹಲವಾರು ತೊಂದರೆಗಳನ್ನು ಅನುಭವಿಸುವಂತಾಗಿದೆ. ನಿಯಮಾವಳಿಯಂತೆ ಸಿಂಗಲ್ ಆಕ್ಸೆಲ್ ವಾಹನವು ಗರಿಷ್ಟ ೧೨ ಟನ್, ಡಬಲ್ ಆಕ್ಸೆಲ್ ವಾಹನವು ೧೬.೨೦ ಟನ್ ಭಾರದ ವಸ್ತು ಸಾಗಿಸಲು ಅವಕಾಶವಿದೆ. ಆದರೆ ನಿಯಮ ಉಲ್ಲಂಘಿಸಿ ಸಾಗಣೆ ಮಾಡುತ್ತಿರುವುದು ಕಂಡುಬರುತ್ತಿದೆ. ಈ ರಸ್ತೆಗಳಲ್ಲಿ ಪರ್ಮಿಟ್ ಇಲ್ಲದೆ ೪೦ರಿಂದ ೫೦ ಟನ್ ಭಾರ ಹೊತ್ತ ವಾಹನಗಳು ಸಂಚರಿ ಸುತ್ತಿರುವುದು ಕಂಡುಬಂದಿರುವ ಬಗ್ಗೆ ಲೋಕೋಪಯೋಗಿ ಇಲಾಖೆ ಎರಡೆರಡು ಬಾರಿ ಜಿಲ್ಲಾಡಳಿತಕ್ಕೆ ಪತ್ರ ಬರೆದಿದೆ.

ಆದರೆ ಒಮ್ಮೆಮ್ಮೆ ಪೊಲೀಸ್ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಟಿಪ್ಪರ್‌ಗಳನ್ನು ಪರಿಶೀಲಿಸಿ ನಿಯಮ ಉಲ್ಲಂಘನೆ ಬಗ್ಗೆ ದಂಡ ವಿಧಿಸುತ್ತಿದ್ದರೂ ಸಂಪೂರ್ಣ ನಿಯಂತ್ರಣ ಸಾಧ್ಯವಾಗಿಲ್ಲ. ಇದರಿಂದ ಬೇಸತ್ತ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.

” ಕಾಲ ಕಾಲಕ್ಕೆ ಭೇಟಿ ನೀಡುವ ಸಾರಿಗೆ ಅಧಿಕಾರಿಗಳು ಅಧಿಕ ತೂಕದ ಕಲ್ಲು ಸಾಗಾಣಿಕೆ ಟಿಪ್ಪರ್‌ಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಿದ್ದಾರೆ.”

ಗಾಯತ್ರಿ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಚಾಮರಾಜನಗರ

” ಮೊದಲೇ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ ಎದುರಿಸುತ್ತಿರುವ ಸರ್ಕಾರ ಹೊಸದಾಗಿ ಸೇತುವೆ ನಿರ್ಮಿಸುವುದು ದೂರದ ಮಾತಾಗಿದೆ. ರಾತ್ರಿ ವೇಳೆ ಪ್ರಖರ ಎಲ್‌ಇಡಿ ದೀಪಗಳನ್ನು ಹಾಕಿಕೊಂಡು ವೇಗವಾಗಿಹೋಗುವ ಟಿಪ್ಪರ್‌ಗಳಿಂದ ದ್ವಿಚಕ್ರ ವಾಹನ, ಕಾರುಗಳು ಸೇರಿದಂತೆ ಯಾವುದೇ ವಾಹನಗಳು ಸುಗಮವಾಗಿ ಸಂಚರಿಸಲು ಸಾಧ್ಯವಾಗದೆ ಅಪಘಾತಗಳು ಸಂಭವಿಸುತ್ತಿವೆ. ಈ ಬಗ್ಗೆ ಸಮಾನಮನಸ್ಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನುಭವ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಂಡು ಜನಾಭಿಪ್ರಾಯ ರೂಪಿಸುತ್ತಿದ್ದೇವೆ.”

ಮಂಜು, ಶಿವಪುರ ಸಾರ್ವಜನಿಕರು

–ಮಹೇಂದ್ರ ಹಸಗೂಲಿ

 

ಆಂದೋಲನ ಡೆಸ್ಕ್

Recent Posts

ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣ: ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಅಧ್ಯಕ್ಷ ಶಿವಕುಮಾರ್ ಅರೆಸ್ಟ್​!

ಮಂಡ್ಯ: ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮನ್ ಮುಲ್ ಅಧ್ಯಕ್ಷ ಶಿವಕುಮಾರ್(ಶಿವಪ್ಪ)…

1 hour ago

ಭಾರೀ ಮಳೆಗೆ ರೈತರ ಬೆಳೆ ನಾಶ: ಲಕ್ಷಾಂತರ ರೂ. ನಷ್ಟ, ಮನೆ ಗೋಡೆ ಕುಸಿತ

ಹನೂರು: ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಕ್ಷೇತ್ರದ ಹಲವು ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳು ಸಂಪೂರ್ಣ ಜಲಾವೃತಗೊಂಡು ಲಕ್ಷಾಂತರ ರೂಪಾಯಿ…

1 hour ago

ಸ್ಕೂಲ್ ಬಸ್‌ ಹರಿದು ಒಂದೂವರೆ ವರ್ಷದ ಮಗು ಸಾವು

ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ರಸ್ತೆ ಬದಿ ನಿಂತಿದ್ದ ಒಂದೂವರೆ ವರ್ಷದ ಪುಟ್ಟ…

2 hours ago

ಓದುಗರ ಪತ್ರ: ‘ಪ್ರತಾಪ’ಕ್ಕೆ ಸವಾಲು ಈ ನೀಲಿ

‘ಪ್ರತಾಪ’ಕ್ಕೆ ಸವಾಲು ಈ ನೀಲಿ ಇದು ನಮ್ಮ ಸೂರು ಆಕಾಶದ ನೀಲಿ ಇದು ನನ್ನವ್ವ ಸುತ್ತಿಕೊಂಡ ಸೀರೆಯ ನೀಲಿ ನನಗೆ…

7 hours ago

ಓದುಗರ ಪತ್ರ: ಟೆಲಿಕಾಂ ಕಂಪೆನಿಗಳ ಹಗಲು ದರೋಡೆ ನಿಯಂತ್ರಿಸಿ

ಪ್ರಸ್ತುತ ಆಂಡ್ರಾಯ್ಡ ಮೊಬೈಲ್‌ನಿಂದಲೇ ದಿನನಿತ್ಯದ ಕೆಲಸಗಳು ಆರಂಭವಾಗಿ ಅವುಗಳಿಂದಲೇ ದಿನ ಮುಕ್ತಾಯ ಅನ್ನುವಷ್ಟರ ಮಟ್ಟಿಗೆ ಅನಿವಾರ್ಯತೆ ನಿರ್ಮಾಣವಾಗಿದೆ. ಮೊಬೈಲ್ ಇಲ್ಲದೆ…

7 hours ago

ಓದುಗರ ಪತ್ರ: ಸರ್ಕಾರಿ ಕಚೇರಿಗಳ ಅನಗತ್ಯ ಬಾಡಿಗೆ ವೆಚ್ಚಗಳನ್ನು ತಪ್ಪಿಸಿ

ಹೆಚ್. ಡಿ. ಕೋಟೆ ತಾಲ್ಲೂಕು ಕೇಂದ್ರ ಸ್ಥಳದಲ್ಲಿ ಕೆಲವು ಸರ್ಕಾರಿ ಇಲಾಖೆಗಳು ಹಾಗೂ ಹಾಸ್ಟೆಲ್‌ಗಳು ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಣೆ ಮಾಡುತ್ತಿವೆ.…

7 hours ago