ಆರ್.ಎಲ್.ಮಂಜುನಾಥ್
ದಸರಾ ನೋಡಲು ಬಂದವರ ಪಾಡು ಅಯೋಮಯ; ತಾತ್ಕಾಲಿಕ ಶೆಲ್ಟರ್ ಅಳವಡಿಸಲು ಆಗ್ರಹ
ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ದಸರಾ ಮಹೋತ್ಸವದ ಪ್ರಯುಕ್ತ ಮೈಸೂರು ನಗರದ ಮಧ್ಯಭಾಗದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಲಿರುವ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ಮಧ್ಯಾಹ್ನ ೩ ಗಂಟೆ ನಂತರ ನಗರ ಬಸ್ ನಿಲ್ದಾಣದಿಂದ ಬಸ್ಸುಗಳ ಕಾರ್ಯಾಚರಣೆಯನ್ನು ನಿರ್ಬಂಧಿಸಲಾಗಿದೆ.
ಪರ್ಯಾಯವಾಗಿ ನಗರದ ೪ ಕಡೆಗಳಲ್ಲಿ ತಾತ್ಕಾಲಿಕ ಬಸ್ ನಿಲ್ದಾಣಗಳನ್ನು ಮಾಡಿದ್ದು, ಅಲ್ಲಿಂದ ಬಸ್ಸುಗಳು ಸಂಚರಿಸುತ್ತವೆ. ಅದರಲ್ಲಿ ಒಂದಾದ ಬನುಮಯ್ಯ ಕಾಲೇಜು ಬಳಿ ವ್ಯವಸ್ಥೆ ಮಾಡಿರುವ ಬಸ್ ನಿಲ್ದಾಣ ಅಧ್ವಾನದಿಂದ ಕೂಡಿದೆ.
ಗುರುವಾರ ರಾತ್ರಿ ಕೂಡ ಭಾರೀ ಮಳೆಯಾಗಿದ್ದರಿಂದ ಬಸ್ಗಾಗಿ ಕಾಯುತ್ತಿದ್ದ ಜನರು ತೋಯ್ದು ಹೋದರು. ರಸ್ತೆಯ ಒಂದು ಬದಿಯಲ್ಲಿ ಯಾವುದೇ ಮಳಿಗೆಗಳಿಲ್ಲ. ಈ ಕಡೆ ಬಸ್ಗಳು ನಿಲ್ಲುತ್ತವೆ. ಹೀಗಾಗಿ ಎದುರು ಸಾಲಿನಲ್ಲಿರುವ ಮಳಿಗೆಗಳಿಗೆ ರಸ್ತೆ ದಾಟಿ ಪ್ರಯಾಣಿಕರು ಹೋಗಿ ಮಳೆಯಿಂದ ರಕ್ಷಣೆ ಪಡೆಯಬೇಕಿದೆ. ಈ ನಡುವೆ ಬಸ್ಗಳು ಸಂಚರಿಸುತ್ತಿರುತ್ತವೆ.
ರಸ್ತೆ ದಾಟುವಾಗ ಈ ವೇಳೆ ಅವಘಡವಾದರೆ ಯಾರು ಹೊಣೆ?: ಜತೆಗೆ ಆ ಮಳಿಗೆಗಳ ಬಳಿ ಎಷ್ಟು ಜನರು ನಿಲ್ಲಲು ಸಾಧ್ಯ? ರಾತ್ರಿ ವೇಳೆ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು, ವಿದ್ಯಾರ್ಥಿಗಳು, ಕೆಲಸ ಮುಗಿಸಿಮನೆಗೆ ತೆರಳುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಗುರುವಾರ ರಾತ್ರಿ ಸುರಿದ ಭಾರೀ ಮಳೆ ಈ ತಾತ್ಕಾಲಿಕ ಬಸ್ ನಿಲ್ದಾಣದ ಅವ್ಯವಸ್ಥೆಯನ್ನು ಬಯಲು ಮಾಡಿತು. ಬಸ್ಸುಗಳು ಸಾಕಷ್ಟು ಸಂಖ್ಯೆಯಲ್ಲಿ ಬರುವುದರಿಂದ ಒಂದರ ಹಿಂದೆ ಒಂದರಂತೆ ನಿಲ್ಲಬೇಕಿದೆ. ಬಸ್ ನಿಲುಗಡೆ ಸ್ಥಳದಲ್ಲಿ ಯಾವುದೇ ಮೇಲ್ಚಾವಣಿ ವ್ಯವಸ್ಥೆ ಇಲ್ಲದಿರುವುದರಿಂದ ಜನರು ರಸ್ತೆ ಬದಿ ಬಸ್ಗಾಗಿ ನಿಲ್ಲುತ್ತಾರೆ.
ಮಳೆಯಾದರಂತೂ ಜನರ ಪಾಡು ಹೇಳತೀರದು. ಅನಿವಾರ್ಯವಾಗಿ ಮಳೆಯಲ್ಲೇ ನೆನೆಯಬೇಕು. ಮಳೆ ಬಂತೆಂದು ಬೇರೆ ಕಡೆಗೆ ಹೋದರೆ ಬಸ್ ಮಿಸ್ ಆಗುವ ಆತಂಕ. ಜತೆಗೆ ಮಳೆ ಸುರಿದಾಗ ಕೆಸರು ನಿರ್ಮಾಣವಾಗಿ ಅದೇ ಸ್ಥಳದಲ್ಲಿ ನಿಂತು ಬಟ್ಟೆ, ಕಾಲು ಎಲ್ಲವೂ ಕೊಳಕಾಗುತ್ತದೆ. ಈ ತಾತ್ಕಾಲಿಕ ನಿಲ್ದಾಣದಿಂದ ಸುತ್ತೂರು, ಉತ್ತನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳು, ಕುವೆಂಪುನಗರ, ವಿವೇಕಾನಂದನಗರ, ಶಾರದಾ ದೇವಿನಗರ, ಬೋಗಾದಿ, ರಾಮಕೃಷ್ಣನಗರ ಮುಂತಾದ ಕಡೆಗಳಿಗೆ ಬಸ್ಸುಗಳು ಸಂಚರಿಸುತ್ತವೆ. ದಸರಾ ವೇಳೆ ೧೦ -೧೨ ದಿನಗಳ ಕಾಲ ಪ್ರತಿನಿತ್ಯ ಮಳೆಯಾದರೆ ಪ್ರಯಾಣಿಕರು ಎದುರಿಸುವ ನರಕಯಾತನೆ ಯಾರ ಬಳಿ ಹೇಳಿಕೊಳ್ಳುವುದು? ವಿವಿಧ ಕಡೆಗಳಲ್ಲಿ ನಿರ್ಮಿಸಿರುವ ತಾತ್ಕಾಲಿಕ ಬಸ್ ನಿಲ್ದಾಣಗಳ ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗೇನೂ ಇಲ್ಲ.
ನೂರಾರು ಕೋಟಿ ರೂ. ವೆಚ್ಚದಲ್ಲಿ ದಸರಾ ಮಹೋತ್ಸವ ನಡೆಸುವ ಸರ್ಕಾರ ದಸರಾ ಸಂದರ್ಭದಲ್ಲಿ ತಾತ್ಕಾಲಿಕ ಬಸ್ ನಿಲ್ದಾಣಗಳನ್ನು ನಿರ್ಮಿಸಿರುವ ಕಡೆಗಳಲ್ಲಿ ಪ್ರಯಾಣಿಕರ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ತಗಡಿನ ಅಥವಾ ಶೀಟಿನ ಚಾವಣಿಯ ವ್ಯವಸ್ಥೆಯನ್ನು ಮಾಡಬೇಕಿದೆ. ಇಲ್ಲದಿದ್ದರೆ ಬಸ್ಗಳಲ್ಲಿ ಸಂಚರಿಸುವ ಮೈಸೂರಿನ ಪ್ರಯಾಣಿಕರು ಮಾತ್ರವಲ್ಲದೆ, ಹೊರಗಿನಿಂದ ಬಂದಿರುವ ಪ್ರವಾಸಿಗರೂ ಕೂಡ ಮೈಸೂರಿನ ಬಗ್ಗೆ ಕೆಟ್ಟ ಅಭಿಪ್ರಾಯ ಹೊಂದುವಂತಾಗುತ್ತದೆ
” ಮೈಸೂರು ದಸರಾ ಅಂಗವಾಗಿ ನಡೆಯುವ ವಿವಿಧ ಕಾರ್ಯಕ್ರಮಗಳನ್ನು ವೀಕ್ಷಿಸಿ ರಾತ್ರಿ ಬಸ್ನಲ್ಲಿ ನಮ್ಮ ಬಂಧುಗಳ ಮನೆಗೆ ತೆರಳಲು ಬನುಮಯ್ಯ ಕಾಲೇಜಿನ ಬಳಿ ಇರುವ ಬಸ್ ನಿಲ್ದಾಣಕ್ಕೆ ಬಂದರೆ ಅಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ಯಾವುದೇ ತಾತ್ಕಾಲಿಕ ವ್ಯವಸ್ಥೆ ಇಲ್ಲದೆ ಬಸ್ ಬರುವತನಕ ಮಳೆಯಲ್ಲಿ ನೆನೆಯುವಂತಾಯಿತು. ಎದುರಿನ ಮಳಿಗೆಗಳಿಗೆ ಹೋಗಿ ನಿಲ್ಲಲು ಯೋಚಿಸುವ್ಟರಲ್ಲೆ ಬಹಳಷ್ಟು ಜನರು ಸೇರಿದ್ದು ನಿಲ್ಲಲು ಸ್ಥಳವೇ ಇರಲಿಲ್ಲ. ದಸರಾಗೆ ಅಷ್ಟೊಂದು ಹಣ ಖರ್ಚು ಮಾಡುವ ಸರ್ಕಾರ ತಾತ್ಕಾಲಿಕ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಮಳೆಯ ಸಂದರ್ಭದಲ್ಲಿ ರಕ್ಷಣೆ ಪಡೆಯುವ ಸಲುವಾಗಿ ಚಾವಣಿ ವ್ಯವಸ್ಥೆ ಮಾಡಲಿ.”
-ಸುಬ್ಬಯ್ಯ, ಕುವೆಂಪುನಗರ
ಕೆ.ಎಸ್.ಚಂದ್ರಶೇಖರ ಮೂರ್ತಿ ಮೈಸೂರಿನ ಎನ್.ಆರ್. ಕ್ಷೇತ್ರದಲ್ಲಿ ೫೦೦ಕ್ಕೂ ಹೆಚ್ಚು ಮತದಾರರ ವಿರುದ್ಧ ಸುಳ್ಳು ಮಾಹಿತಿ ಸಲ್ಲಿಕೆ ಆರೋಪ; ಪೊಲೀಸ್ ತನಿಖೆ …
ಮಂಜು ಕೋಟೆ ವರದರಾಜಸ್ವಾಮಿ, ಚಾಮುಂಡೇಶ್ವರಿ ದೇವಸ್ಥಾನಗಳಲ್ಲಿ ವಿವಿಧ ಕಾರ್ಯಕ್ರಮಗಳು; ಪ್ರತಿನಿತ್ಯ ನೂರಾರು ಮಂದಿ ಭಾಗಿ ಎಚ್.ಡಿ.ಕೋಟೆ: ನವರಾತ್ರಿ ಉತ್ಸವ ಮತ್ತು…
ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ದೇವಸ್ಥಾನದ ತೇರು ಪಕ್ಕದಲ್ಲಿರುವ ಸಂತೋಷ್ ಎಂಬುವವರಿಗೆ ಸೇರಿದ ಅಂಗಡಿಯ ಮೇಲೆ ಕಾಡಾನೆಯೊಂದು ದಾಳಿ ನಡೆಸಿ…
ನಂಜನಗೂಡು: ತಾಲ್ಲೂಕಿನ ಹಂಚೀಪುರ ಗ್ರಾಮದಲ್ಲಿ ರೈತನ ಸಾವಿಗೆ ಕಾರಣವಾಗಿದ್ದ ಆನೆಯನ್ನು ಅರಣ್ಯ ಇಲಾಖೆ ಇಂದು ಸೆರೆ ಹಿಡಿದಿದೆ. ಸಾಕಾನೆಗಳ ನೆರವಿನಿಂದ…
ಬೆಂಗಳೂರು: ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್ ಶುಕ್ರವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದರು. ಲೋಕಭವನದ ಗಾಜಿನ ಮನೆಯಲ್ಲಿ ನಡೆದ…