ಎಸ್.ನಾಗಸುಂದರ್
೫೦ ಸಾವಿರ ರೂ.ಗಳಿಂದ ೧೫ ಲಕ್ಷ ರೂ.ವರೆಗೆ ಬೆಲೆಬಾಳುವ ರಾಸುಗಳ ಪ್ರದರ್ಶನ
ಪಾಂಡವಪುರ: ತಾಲ್ಲೂಕಿನ ಬೇಬಿಬೆಟ್ಟದಲ್ಲಿ ನಡೆಯುತ್ತಿರುವ ಭಾರೀ ದನಗಳ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಸಂಖ್ಯೆಯಲ್ಲಿ ರಾಸುಗಳು ಆಗಮಿ ಸಿವೆ. ಎತ್ತುಗಳ ಪ್ರದರ್ಶನ ಒಂದಡೆಯಾದರೆ, ಮತ್ತೊಂದೆಡೆ ಎತ್ತುಗಳ ಮಾರಾಟ ಜೋರಾಗಿ ನಡೆಯುತ್ತಿದೆ. ಪ್ರತಿವರ್ಷ ನಡೆಯುವ ಭಾರೀ ದನಗಳ ಜಾತ್ರಾ ಮಹೋತ್ಸವದಲ್ಲಿ ಎತ್ತುಗಳೇ ಆಕರ್ಷಣೆಯ ಕೇಂದ್ರ ಬಿಂದು ವಾಗಿದ್ದು ಹಳ್ಳಿಕಾರ್ ತಳಿಗಳ ಎತ್ತುಗಳ ದರ್ಬಾರ್ ಜೋರಾಗಿದೆ.
ಜಾತ್ರೆಯಲ್ಲಿ ೫೦ ಸಾವಿರ ರೂ.ಗಳಿಂದ ೧೫ ಲಕ್ಷ ರೂ.ಗಳ ವರೆಗೂ ಬೆಲೆ ಬಾಳುವ ಹಳ್ಳಿಕಾರ್ ಎತ್ತುಗಳು, ಬೀಜದ ಹೋರಿಗಳು ಗಮನ ಸೆಳೆಯುತ್ತಿವೆ. ೯ ದಿನಗಳ ಕಾಲ ನಡೆಯುವ ಜಾತ್ರೆಗೆ ರಾಜ್ಯದ ವಿವಿಧ ಮೂಲೆಗಳಿಂದ ನೂರಾರು ಸಂಖ್ಯೆಯಲ್ಲಿ ಜೋಡೆತ್ತುಗಳು, ಹೋರಿಗಳು, ಕಡಸುಗಳು ಆಗಮಿಸಿವೆ. ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ಎತ್ತುಗಳನ್ನು ಸಾಕಾಣಿಕೆ ಮಾಡಿರುವ ರೈತರು, ತಮ್ಮ ಸ್ವಂತ ಖರ್ಚಿನಲ್ಲಿ ಟೆಂಟ್, ಶಾಮಿಯಾನಗಳನ್ನು ಹಾಕಿ ಎತ್ತುಗಳನ್ನು ಜಾತ್ರೆಯಲ್ಲಿ ಮಾರಾಟ, ಪ್ರದರ್ಶನಕ್ಕಿಟ್ಟಿದ್ದಾರೆ.
ಒಂದಕ್ಕೊಂದನ್ನು ಮೀರಿಸುವ ಎತ್ತುಗಳು, ಹೋರಿಗಳು ಜಾತ್ರೆಯ ವಿಶೇಷ ಆಕರ್ಷಣೆಯಾಗಿವೆ. ದುಬಾರಿ ಎತ್ತುಗಳು ಮಾತ್ರವಲ್ಲದೆ, ಕಡಿಮೆ ಬೆಲೆಯ ಎತ್ತುಗಳೂ ಜಾತ್ರೆಯಲ್ಲಿ ಮಾರಾಟವಾಗುತ್ತಿವೆ. ಹಳ್ಳಿಕಾರ್ ತಳಿಯ ಎತ್ತುಗಳ ಜತೆಗೆ ಅಲ್ಲಲ್ಲಿ ಮಲ್ನಾಡ್ ಗಿಡ್ಡ ತಳಿಯ ಹಸುಗಳು, ಟಗರುಗಳನ್ನೂ ಕಾಣಬಹುದಾಗಿದೆ.
ವಿಧಾನಸೌಧ ಮಾದರಿಯ ಟೆಂಟ್ ಆಕರ್ಷಣೆ: ಜಾತ್ರೆ ಮೈದಾನದಲ್ಲಿ ಮೈಸೂರಿನ ಒಂಟಿಕೊಪ್ಪಲು ನಿವಾಸಿ ಪೈಲ್ವಾನ್ ಪ್ರಕಾಶ್ ಅವರು ವಿಧಾನಸೌಧ ಮಾದರಿಯಲ್ಲಿ ಟೆಂಟ್ ನಿರ್ಮಾಣ ಮಾಡಿ, ಪ್ರದರ್ಶನಕ್ಕಿಟ್ಟಿರುವ ಲಕ್ಷಾಂತರ ರೂ.ಬೆಲೆ ಬಾಳುವ ಹಳ್ಳಿಕಾರ್ ತಳಿಯ ಜೋಡೆತ್ತುಗಳು ಎಲ್ಲರನ್ನು ಆಕರ್ಷಿಸುತ್ತಿವೆ. ಜಾತ್ರೆಗೆ ಬರುತ್ತಿರುವ ಪ್ರತಿಯೊಬ್ಬ ರೈತರು, ರೈತ ಮಹಿಳೆಯರು, ಸಾರ್ವಜನಿಕರು ಇಲ್ಲಿಗೆ ಬಂದು ಟೆಂಟ್, ಎತ್ತುಗಳ ಜತೆಗೆ ಸೆಲ್ಛಿ,ಫೋಟೋ ತೆಗೆದುಕೊಂಡು ಖುಷಿ ಪಡುತ್ತಿದ್ದಾರೆ.
ರೈತ ಪೈಲ್ವಾನ್ ಪ್ರಕಾಶ್ ಅವರು ೪ ಜತೆ ಜೋಡೆತ್ತುಗಳನ್ನು ಪ್ರದರ್ಶನಕ್ಕಿಟ್ಟಿದ್ದು, ೧೪ ಲಕ್ಷ ರೂ.ಬೆಲೆ ಬಾಳುವ ೪ ಹಲ್ಲಿನ ಜೋಡೆತ್ತು, ೧೦ ಲಕ್ಷ ರೂ ಬೆಲೆ ಬಾಳುವ ಬಾಯಿ ಗೂಡಿದ ಜೋಡೆತ್ತು, ೧೦ ಲಕ್ಷ ರೂ. ಬೆಲೆಬಾಳುವ ೨ ಹಲ್ಲಿನ ಜೋಡೆತ್ತು, ೭.೫೦ ಲಕ್ಷ ರೂ.ಮೌಲ್ಯದ ಹಾಲುಹಲ್ಲಿನ ಜೋಡೆತ್ತುಗಳನ್ನು ಪ್ರದರ್ಶಿಸಿದ್ದಾರೆ. ಪೈ.ಪ್ರಕಾಶ್ ಅವರು ಮೂರು ದಶಕಗಳಿಂದಲೂ ಜಾತ್ರೆಯಲ್ಲಿ ಎತ್ತುಗಳನ್ನು ಪ್ರದರ್ಶಕ್ಕಿಡುವ ಮೂಲಕ ಬಹುಮಾನ ಗೆದ್ದಿದ್ದಾರೆ.
ಪಾಂಡವಪುರ ತಾಲ್ಲೂಕಿನ ಡಾಮಡಹಳ್ಳಿ ಗ್ರಾಮದ ನಿವಾಸಿಗಳಾದ ರಮೇಶ್, ವಿನೋದ್ ಎಂಬವರು ೧೫ ಲಕ್ಷ ರೂ.ಬೆಲೆ ಬಾಳುವ ಹೊಸಬಾಯಿ ಜೋಡೆತ್ತು, ೮.೫೦ ಲಕ್ಷ ರೂ. ಮೌಲ್ಯದ ಎರಡು ಹಲ್ಲುಗಳ ಜೋಡೆತ್ತು, ಕನಕಪುರ ಮುನಿರಾಜು ಅವರು ೬ ಲಕ್ಷ ರೂ ಬೆಲೆ ಬಾಳುವ ಬೀಜದ ಹೋರಿಯನ್ನು ಕಟ್ಟಿದ್ದಾರೆ. ಪಾಂಡವಪುರ ತಾಲ್ಲೂಕಿನ ಶ್ಯಾದನಹಳ್ಳಿ ಗ್ರಾಮದ ಸಾವಯವ ಕೃಷಿಕ ಚಲುವರಾಜು ಕೂಡ ೬ ಹಲ್ಲಿನ ೫ ಲಕ್ಷ ರೂ.ಮೌಲ್ಯದ ಹಳ್ಳಿಕಾರ್ ಎತ್ತುಗಳನ್ನು ಕಟ್ಟುವ ಮೂಲಕ ಗಮನ ಸೆಳೆದಿದ್ದಾರೆ.
೩೨೧ ರಾಸುಗಳು ಬಹುಮಾನಕ್ಕೆ ನೋಂದಣಿ: ಜಾತ್ರೆಯಲ್ಲಿ ಉತ್ತಮ ರಾಸುಗಳಿಗೆ ಚಿನ್ನದ ಬಹುಮಾನ ನೀಡುವ ಹಿನ್ನೆಲೆಯಲ್ಲಿ ಬಹುಮಾನಕ್ಕಾಗಿ ೩೨೧ರಾಸುಗಳು ನೋಂದಣಿಯಾಗಿವೆ. ಜೋಡಿ ಎತ್ತುಗಳ ವಿಭಾಗದಲ್ಲಿ ೧೯೨ ರಾಸುಗಳು ನೋಂದಣಿಯಾಗಿವೆ.
” ಬೇಬಿಬೆಟ್ಟದ ಜಾತ್ರೆಯು ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಸಾವಿರಾರು ಸಂಖ್ಯೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ರಾಸುಗಳು ಆಗಮಿಸುತ್ತವೆ. ಪ್ರತಿವರ್ಷವೂ ಜಾತ್ರೆ ಹೆಚ್ಚು ಆಕರ್ಷಣೆ ಪಡೆದುಕೊಳ್ಳುತ್ತಿದೆ. ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಜಾತ್ರೆಯ ಯಶಸ್ಸಿಗೆ ಶ್ರಮಿಸಿದ್ದಾರೆ. ಸರಳ ಸಾಮೂಹಿಕ ವಿವಾಹವೂ ವಿಜೃಂಭಣೆಯಿಂದ ಜರುಗಿದೆ.”
-ಕೆ.ಎಸ್.ದಯಾನಂದ್, ರೈತ ಮುಖಂಡ
ಮೈಸೂರು ತಾಲ್ಲೂಕು ಸಿದ್ದಲಿಂಗಪುರ ಗ್ರಾಪಂ ವ್ಯಾಪ್ತಿಯ ನಾಗನಹಳ್ಳಿ ಗ್ರಾಮದಲ್ಲಿ ಚರಂಡಿಯಲ್ಲಿ ಹೂಳುತುಂಬಿದ್ದು, ಸರಾಗವಾಗಿ ನೀರು ಹರಿಯದೇ ಇರುವುದರಿಂದ ಸೊಳ್ಳೆ, ನೊಣಗಳ…
ಇಂದು ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಒಳಗಾಗಿದ್ದು, ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಮ್, ಫೇಸ್ ಬುಕ್, ಸ್ನಾಪ್ ಚಾಟ್, ಎಕ್ಸ್ , ಟೆಲಿಗ್ರಾಂಗಳನ್ನು…
ಮೈಸೂರಿನ ಬಹುತೇಕ ಎಲ್ಲ ವೃತ್ತಗಳಲ್ಲೂ ಸಿಗ್ನಲ್ ಲೈಟ್‌ಗಳನ್ನು ಅಳವಡಿಸಿದ್ದು, ಸಾಂಸ್ಕೃತಿಕ ನಗರಿಯಾಗಿರುವ ಮೈಸೂರು ಸಿಗ್ನಲ್ ಲೈಟ್‌ಗಳ ನಗರಿಯಾಗಿ ಮಾರ್ಪಾಡಾಗಿದೆ. ಸಂಚಾರ…
ಮೈಸೂರಿನ ಜಯಲಕ್ಷ್ಮಿಪುರಂ ಮೂಲಕ ಹಾದು ಹೋಗುವ ಗೋಕುಲಂನ ಮುಖ್ಯರಸ್ತೆಯಲ್ಲಿ ಕೆಲ ರೆಸ್ಟೋರೆಂಟ್‌ಗಳು, ಕೆಫೆ,ಪಿಜ್ಜಾ ಹಾಗೂ ಬರ್ಗರ್ ಸೆಂಟರ್‌ಗಳು ಇವೆ. ಈ…
ಇದು ಮಾಹಿತಿ ತಂತ್ರಜ್ಞಾನದ ಕ್ರಾಂತಿಯ ಯುಗ. ಅರವತ್ತರ ದಶಕದಲ್ಲಿ ಕೃಷಿ ಕ್ಷೇತ್ರದಲ್ಲಿ ಜಾರಿಗೆ ತಂದ ಜಪಾನ್ ಮಾದರಿಯ ನಾಟಿ, ಕಳೆಕೀಳುವ…
ನವೀನ್ ಡಿಸೋಜ ಮಡಿಕೇರಿ: ಫೆ.೨೮ರಿಂದ ಮಾ.೧೭ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು, ಜಿಲ್ಲೆಯ ೧೮ ಪರೀಕ್ಷಾ ಕೇಂದ್ರಗಳಲ್ಲಿ ೫,೨೫೫ ವಿದ್ಯಾರ್ಥಿಗಳು…