Andolana originals

ಪ್ರತ್ಯೇಕ ಆದಿವಾಸಿಗಳ ಅಭಿವೃದ್ಧಿ ನಿಗಮ ಸ್ಥಾಪನೆಗೆ ಹೆಚ್ಚಿದ ಕೂಗು

ಪ್ರಸಾದ್ ಲಕ್ಕೂರು

ಅಲೆಮಾರಿ ಅಭಿವೃದ್ಧಿ ನಿಗಮದಿಂದ ಬೇರ್ಪಡಿಸಲು ಆಗ್ರಹ 

ಸರ್ಕಾರಿ ಸವಲತ್ತು ಪಡೆಯಲು ಅನುಕೂಲ ಎಂಬ ಆಶಯ

ರಾಜ್ಯದಲ್ಲಿ ಆದಿವಾಸಿಗಳ ಸಂಖ್ಯೆ ಅಂದಾಜು ೧೦ ಲಕ್ಷ 

ನಿಗಮ ಸ್ಥಾಪಿಸುವ ಭರವಸೆ ನೀಡಿದ್ದ ಸಿಎಂ

ಚಾಮರಾಜನಗರ: ಸಂರಕ್ಷಿತ ಅರಣ್ಯ ಪ್ರದೇಶಗಳ ಅಂಚಿನಲ್ಲಿ ಹಾಗೂ ಒಳಗೆ ವಾಸಿಸುತ್ತ ಬದುಕು ಕಟ್ಟಿಕೊಂಡಿರುವ ಆದಿವಾಸಿ ಗಳಿಗೆ ಪ್ರತ್ಯೇಕ ಆದಿವಾಸಿಗಳ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂಬ ಆದಿವಾಸಿಗಳ ಕೂಗು ದಿನೇ ದಿನೇ ಹೆಚ್ಚಾಗುತ್ತಿದೆ.

ಆದಿವಾಸಿಗಳು ಪ್ರಸ್ತುತ ಅಲೆಮಾರಿಗಳ ಅಭಿವೃದ್ಧಿ ನಿಗಮದ ವ್ಯಾಪ್ತಿಗೆ ಸೇರಿದ್ದಾರೆ. ಆದರೆ, ಸೌಲಭ್ಯಗಳನ್ನು ಪಡೆಯಲು ಅಲ್ಲಿರುವ ಬಲಾಢ್ಯ ಸಮುದಾಯಗಳ ಜೊತೆ ಪೈಪೋಟಿ ನಡೆಸಬೇಕಿದೆ. ನಾವು ಅಲೆಮಾರಿಗಳಲ್ಲ, ಒಂದು ಕಡೆ ನೆಲೆ ನಿಂತು ಬದುಕುತ್ತಿದ್ದೇವೆ. ನಮ್ಮನ್ನೇಕೆ ಅವರೊಡನೆ ಸೇರಿಸಿದ್ದೀರಿ ಎಂದು ಆದಿವಾಸಿ ಮುಖಂಡರು ಪ್ರಶ್ನಿಸುತ್ತಿದ್ದಾರೆ.

ರಾಜ್ಯದ ೮ ಜಿಲ್ಲೆಗಳಲ್ಲಿ ಹರಡಿಕೊಂಡಿರುವ ಪಶ್ಚಿಮ ಘಟ್ಟ ಅರಣ್ಯ ಪ್ರದೇಶಗಳಲ್ಲಿ ಆದಿವಾಸಿಗಳು ವಾಸವಿದ್ದಾರೆ. ೮ ಜಿಲ್ಲೆಗಳಾದ ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕ ಮಂಗಳೂರು ವ್ಯಾಪ್ತಿಯಲ್ಲಿ ಸೋಲಿಗರು, ಕಾಡು ಕುರುಬರು, ಜೇನುಕುರುಬರು, ಸಿದ್ದಿಗಳು, ಯರವರು ವಾಸವಿದ್ದಾರೆ. ಆದಿವಾಸಿಗಳ ಜನಸಂಖ್ಯೆ ಸುಮಾರು ೧೦ ಲಕ್ಷವಿದೆ.

ಇಷ್ಟೊಂದು ಜನಸಂಖ್ಯೆಯಿದ್ದರೂ ಪ್ರತ್ಯೇಕ ಅಭಿವೃದ್ಧಿ ನಿಗಮವಿಲ್ಲ. ನಾಗರಿಕ ಸೌಲಭ್ಯಗಳಿಂದ ದೂರವಿರುವ ಹಾಗೂ ಮೂಲ ಸೌಲಭ್ಯ ಗಳಿಂದ ವಂಚಿತವಾಗಿರುವ ಆದಿವಾಸಿಗಳಿಗೆ ಸರ್ಕಾರದ ಸಾಲ ಸೌಲಭ್ಯಗಳು, ಸವಲತ್ತುಗಳು ಮರೀಚಿಕೆಯಾಗಿವೆ. ಆದ್ದ ರಿಂದಲೇ ಪ್ರತ್ಯೇಕ ಅಭಿವೃದ್ಧಿ ನಿಗಮ ರಚನೆ ಆಗಬೇಕೆಂಬ ಬೇಡಿಕೆ ಕೇಳಿಬಂದಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ೪ ಸಂರಕ್ಷಿತಾರಣ್ಯಗಳಿವೆ. ಬಂಡೀಪುರ ಮತ್ತು ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯಗಳು, ಮಲೆ ಮಹದೇಶ್ವರ ಮತ್ತು ಕಾವೇರಿ ವನ್ಯಜೀವಿಧಾಮಗಳಿವೆ. ಇಲ್ಲೆಲ್ಲ ಸುಮಾರು ೧೪೯ ಆದಿ ವಾಸಿಗಳ ಪೋಡುಗಳಿದ್ದು, ೪೫ ಸಾವಿರ ಆದಿ ವಾಸಿಗಳ ಜನಸಂಖ್ಯೆಯಿದೆ. ೪೦ ಸಾವಿರ ಸೋಲಿಗರು, ೩ ಸಾವಿರ ಜೇನು ಕುರುಬರು, ೨ ಸಾವಿರ ಬೆಟ್ಟಕುರುಬರು ವಾಸವಿದ್ದಾರೆ. ಕರ್ನಾಟಕದಲ್ಲಿರುವ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗಾಗಿ ಅಲೆಮಾರಿ ನಿಗಮದಿಂದ ಬೇರ್ಪಡಿಸಿ ಪ್ರತ್ಯೇಕವಾಗಿ ಆದಿವಾಸಿಗಳ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಅರಣ್ಯ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಬುಡಕಟ್ಟು ಸಮುದಾಯಗಳಿಗೆ ನೇರವಾಗಿ ಸರ್ಕಾರದ ಸಾಲ ಸೌಲಭ್ಯ ಮತ್ತು ಸವಲತ್ತು ತಲುಪಿಸಬೇಕು. ಇಲ್ಲದಿದ್ದರೆ ನಾವು ಸರ್ಕಾರಿ ಸವಲತ್ತು ಪಡೆಯಲು ಮಧ್ಯವರ್ತಿಗಳ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಅಲವತ್ತುಕೊಂಡಿದ್ದಾರೆ.

ಆದಿವಾಸಿಗಳು ಈ ಹಿಂದೆ ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯಾಪ್ತಿಯಲ್ಲಿದ್ದರು. ನಂತರ ೨೦೧೩ರಲ್ಲಿ ಕಾಂಗ್ರೆಸ್ ಸರ್ಕಾರ ಆದಿವಾಸಿಗಳ ಅಭಿವೃದ್ಧಿ ಮಂಡಳಿ ರಚಿಸಿತ್ತು. ಬಳಿಕ ಬಂದಂತಹ ಸರ್ಕಾರಗಳು ನಮ್ಮನ್ನು ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಸೇರಿಸಿದ್ದಾರೆ. ಈ ನಿಗಮದಲ್ಲಿ ಎಸ್ಸಿ ಮತ್ತು ಎಸ್ಟಿಗಳಿದ್ದಾರೆ. ಅವರೊಡನೆ ನಾವು ಪೈಪೋಟಿ ನಡೆಸುವುದು ಕಷ್ಟವಾಗಿದೆ ಎನ್ನುತ್ತಾರೆ ಆದಿವಾಸಿಗಳ ಮುಖಂಡರು.

ಹಿಂದಿನ ಆದಿವಾಸಿಗಳ ಅಭಿವೃದ್ಧಿ ಮಂಡಳಿಯಲ್ಲಿ ಗಿರಿಜನ ಮುಖಂಡರಿಗೆ ಅವಕಾಶ ನೀಡಲಾಗಿತ್ತು.  ಹೊಸದಾಗಿ ಪ್ರತ್ಯೇಕ ನಿಗಮ ಸ್ಥಾಪಿಸಿದಲ್ಲಿ ಆದಿವಾಸಿಗಳ ಮುಖಂಡರು ಮತ್ತು ಇವರ ಪರ ಕೆಲಸ ಮಾಡುವ ತಜ್ಞರು ಇರಬೇಕು ಎಂಬುದು ಆದಿವಾಸಿ ಸಂಘಟನೆಗಳ ಮುಖಂಡರ ಒತ್ತಾಯವಾಗಿದೆ.

” ಪ್ರತ್ಯೇಕ ನಿಗಮ ಸ್ಥಾಪನೆ ಜೊತೆಗೆ ಬಹುಸಂಖ್ಯಾತ ಬುಡಕಟ್ಟುಗಳು ವಾಸವಾಗಿರುವ ಪಶ್ಚಿಮಘಟ್ಟ ಪ್ರದೇಶವನ್ನು ಅನುಸೂಚಿತ ಪ್ರದೇಶವೆಂದು ಘೋಷಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಆದಿಮ ಬುಡಕಟ್ಟಿನ ಲಕ್ಷಣವುಳ್ಳ ಕರ್ನಾಟಕ ಆದಿವಾಸಿಗಳನ್ನು ಕರ್ನಾಟಕ ಸರ್ಕಾರವು ವೈಜ್ಞಾನಿಕವಾಗಿ ಕುಲಶಾಸ್ತ್ರೀಯ ಅಧ್ಯಯನಕ್ಕೊಳಪಡಿಸಿ ಭಾರತದ ಆದಿಮ ಬುಡಕಟ್ಟು ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು.”

-ಸುರೇಶ್, ಆದಿವಾಸಿ ರಕ್ಷಣಾ ಪರಿಷತ್‌ನ ಜಿಲ್ಲಾಧ್ಯಕ್ಷ, ಮೂಕಹಳ್ಳಿ ಕಾಲೋನಿ

ನಿಗಮ ರಚನೆ: ಈಡೇರದ ಸಿಎಂ ಭರವಸೆ:  ೬ ತಿಂಗಳ ಹಿಂದೆ ಎಚ್.ಡಿ.ಕೋಟೆ ತಾಲ್ಲೂಕಿನ ಕೆರೆಮಾಳ ಹಾಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದಿವಾಸಿಗಳ ಸಮಸ್ಯೆಗಳ ಆಲಿಕೆ ಸಭೆ ನಡೆಸಿದ್ದರು. ಆದಿವಾಸಿಗಳಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ರಚಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಅದು ಈಡೇರಿಲ್ಲ ಎಂಬುದು ಆದಿವಾಸಿ ಮುಖಂಡರ ಅಳಲು.

” ಮುಖ್ಯಮಂತ್ರಿಸಿದ್ದರಾಮಯ್ಯ ಅವರು ಇತ್ತೀಚೆಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಸಿದ ವಿಶೇಷ ಸಂಪುಟ ಸಭೆಯ ಸಂದರ್ಭ ಹಾಗೂ ಚಾಮರಾಜ ನಗರಕ್ಕೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಬಂದಿದ್ಧಾಗ ಪ್ರತ್ಯೇಕ ನಿಗಮ ಸ್ಥಾಪಿಸಬೇಕು ಎಂದು ಮನವಿ ಮಾಡಿದ್ದೇವೆ.”

-ಡಾ.ಸಿ.ಮಾದೇಗೌಡ, ಕಾರ್ಯದರ್ಶಿ, ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘ, ಬಿಳಿಗಿರಿರಂಗನ ಬೆಟ್ಟ 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಕಾಲೇಜು ವಿದ್ಯಾರ್ಥಿನಿಯರಿಗೆ ಬಿಸಿಯೂಟ ಶ್ಲಾಘನೀಯ

ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಇಸ್ಕಾನ್ ಸಂಸ್ಥೆಯ ಅಕ್ಷಯಪಾತ್ರೆ ಫೌಂಡೇಶನ್ ಸಹಯೋಗದೊಂದಿಗೆ…

31 mins ago

ಓದುಗರ ಪತ್ರ: ಪೊಲೀಸ್ ಅಧಿಕಾರಿಯ ಅಸಭ್ಯ ವರ್ತನೆ ಅಕ್ಷಮ್ಯ

ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅವರ ಕಚೇರಿಯಲ್ಲಿ ಸಮವಸ್ತ್ರದಲ್ಲಿದ್ದಾಗಲೇ ಮಹಿಳೆಯೊಂದಿಗೆ ನಡೆಸಿದ್ದಾರೆ ಎನ್ನಲಾದ ರಾಸಲೀಲೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್…

33 mins ago

ಓದುಗರ ಪತ್ರ: ಅಮೆರಿಕ ಅಧ್ಯಕ್ಷರ ಹುಚ್ಚುತನ

ಉತ್ತರ ಅಟ್ಲಾಂಟಿಕ್ ಸಮುದ್ರದಲ್ಲಿ ಇರುವ ವಿಶ್ವದ ಅತಿದೊಡ್ಡ ದ್ವೀಪವಾಗಿರುವ ಹಾಗೂ ಡೆನ್ಮಾರ್ಕ್ ದೇಶದ ನಿಯಂತ್ರಣದಲ್ಲಿರುವ ‘ಗ್ರೀನ್ ಲ್ಯಾಂಡ್’ ದ್ವೀಪವನ್ನು ತನ್ನ…

36 mins ago

ಕಾಡ್ಗಿಚ್ಚು ತಡೆಗೆ ನಾನಾ ಮುಂಜಾಗ್ರತಾ ಕ್ರಮ

ನವೀನ್ ಡಿಸೋಜ ಅರಣ್ಯ ಇಲಾಖೆಯಿಂದ ಬೆಂಕಿ ರೇಖೆ ನಿರ್ಮಾಣ ಕಾರ್ಯ ಚುರುಕು; ಜನರಲ್ಲಿ ಜಾಗೃತಿ ಮೂಡಿಸಲು ಚಿಂತ ಮಡಿಕೇರಿ: ಬೇಸಿಗೆ…

40 mins ago

ಬಾಚಳ್ಳಿ ಆಂಜನೇಯಸ್ವಾಮಿ ಜಾತ್ರೋತ್ಸವಕ್ಕೆ ಸಕಲ ಸಿದ್ಧತೆ

ಎಂ ಯೋಗಾನಂದ್ ಜ.೨೩ರಿಂದ ೨೬ರವರೆಗೆ ಜಾತ್ರಾ ಮಹೋತ್ಸವ; ಮೆರುಗು ನೀಡಲಿರುವ ಗಾಡಿ ಓಡಿಸುವ ಸ್ಪರ್ಧೆ ಹುಣಸೂರು: ತಾಲ್ಲೂಕಿನ ಬಾಚಳ್ಳಿ ಗ್ರಾಮದಲ್ಲಿ…

44 mins ago