ಭ್ರಮರ ಕೆ. ಉಡುಪ
ಅಜ್ಜಯ್ಯ ತೀರಿಹೋಗಿ ಎರಡು ವರುಷಗಳಾಗುತ್ತಾ ಬಂತು. ನಮ್ಮಜ್ಜಯ್ಯ ಸಾಮಾನ್ಯರಲ್ಲಿ ಸಾಮಾನ್ಯರು. ನಾಲ್ಕನೇ ಕ್ಲಾಸನ್ನು ಆರು ಬಾರಿ ಓದಿದ್ದ ಅವರು ‘ಒಳ್ಳೆಯ ಅಜ್ಜಯ್ಯನಾಗುವುದು ಹೇಗೆ? ’ ಎಂಬ ವಿಷಯದಲ್ಲಿ ಮಾತ್ರ ಗಮನಹರಿಸಿದ್ದರೇನೊ!
ಚಿಕ್ಕವಳಿದ್ದಾಗ ನನ್ನ ಹುಟ್ಟುಹಬ್ಬಕ್ಕೆ ಅವರೊಂದು ಕುರ್ಚಿ ಮತ್ತು ಬಿಳಿ ಬಣ್ಣದ ಮೇಲೆ ಕೇಸರಿ ವೃತ್ತಗಳಿರುವ ಫ್ರಾಕ್ ಒಂದನ್ನು ಉಡುಗೊರೆಯಾಗಿ ನೀಡಿದ್ದರು. ಅಜ್ಜಯ್ಯ ನನಗೆಂದು ಕೊಟ್ಟ ಕುರ್ಚಿಯಲ್ಲಿ ಯಾರಾದರೂ ಕುಳಿತದ್ದನ್ನು ಕಂಡರೆ ಸಿಟ್ಟಾಗುತ್ತಿದ್ದೆ. ತನ್ನೆರಡು ಕಣ್ಣುಗಳಿಂದಲೇ ಅಮ್ಮ ಸುಮ್ಮನಿರೆಂದು ಹೆದರಿಸುತ್ತಿದ್ದರೆ, ಜೋರಾಗಿ ಅಳುತ್ತಾ ಅಜ್ಜಯ್ಯನ ಮಂಡಿಗೆ ತಲೆಯನ್ನಿತ್ತು ಕೂತುಬಿಡುತ್ತಿದ್ದೆ. ಅಜ್ಜಯ್ಯನೋ ಅಮ್ಮನಿಗೆ ಬೈಯ್ಯುತ್ತಲೇ, ನನ್ನನ್ನು ಸಮಾಧಾನಪಡಿಸುತ್ತಿದ್ದರು. ಆ ದಿನ ನನ್ನ ಊಟ, ನಿದ್ದೆಯೆಲ್ಲ ಅಜ್ಜಯ್ಯನ ಪಕ್ಕದಲ್ಲಿಯೇ.
ಅಜ್ಜಯ್ಯನ ಬೆನ್ನಿನ ಮೇಲೊಂದು ದೊಡ್ಡ ಚೆಂಡಿನಾಕಾರದ ಗೆಡ್ಡೆಯಿತ್ತು. ಹುಟ್ಟಿನಲ್ಲಿ ಚಿಕ್ಕದಾಗಿ ಕಾಣಿಸಿಕೊಂಡಿದ್ದ ಗುಳ್ಳೆ ವಯಸ್ಸಾದಂತೆ ಚೆಂಡಿನಾಕಾರವಾಗಿ ಬೆಳೆದು ನಿಂತಿತ್ತು. ಅವರು ಎಂದೂ ಅದರ ಬಗ್ಗೆ ವಿಪರೀತವಾಗಿ ಯೋಚಿಸಿದವರಲ್ಲ. ನಂಗಂತೂ ಅವರ ಬೆನ್ನೇರಿ ‘ಅಜ್ಜಯ್ಯನ ಬೆನ್ನ ಮೇಲೆ ಚೆಂಡು, ಚೆಂಡು! ’ ಎಂದು ಕುಣಿಯುವುದೇ ಕೆಲಸ. ನಾನು ನಾಲ್ಕನೇ ಕ್ಲಾಸಲ್ಲಿ ಇರುವಾಗ ನಮ್ಮೂರಿಗೆ ನಾಟಿವೈದ್ಯನೊಬ್ಬ ಬಂದಿದ್ದ. ಅದೇನೋ ಇಳಿವಯಸ್ಸಿನಲ್ಲಿ ಆಸೆಯಾಗಿ ಅವನಲ್ಲಿ ಒಂದು ಬಾಟಲಿ ತೈಲ ಕೊಂಡರು. ಅದನ್ನು ದಿನಾಲೂ ಅವರ ಬೆನ್ನಿಗೆ ತಿಕ್ಕುವುದು ನನ್ನ ಕೆಲಸ. ಆದರೆ ಆವತ್ತಿಗೆ ಅಜ್ಜಯ್ಯನ ಬೆನ್ನ ಗೆಡ್ಡೆ ಮಾಯವಾದಂತೆ ಎಂದು ಕನಸು ಕಾಣುತ್ತಿದ್ದೆ. ಸ್ವಲ್ಪ ದಿನಗಳ ನಂತರ ಗೆಡ್ಡೆ ಮೃದುವಾಯಿತು. ಆದರೆ ಗಾತ್ರ ಇನ್ನೂ ದೊಡ್ಡದಾಗುತ್ತಿರುವುದನ್ನು ಮನಗಂಡ ಅಜ್ಜಯ್ಯ ತೈಲದ ಸಹವಾಸವನ್ನೇ ಬಿಟ್ಟರು.
ಅಜ್ಜಯ್ಯ ಕೊರೊನಾ ಸಮಯದಲ್ಲಿ ಹುಷಾರಿಲ್ಲದೆ ಆಸ್ಪತ್ರೆಗೆ ಸೇರಿದಾಗ ಯಾರಿಗೂ ಅವರು ವಾಪಸ್ ಬರುವುದಿಲ್ಲವೆಂದು ಅನಿಸಿರಲಿಲ್ಲ. ಅವರು ಇನ್ನಿಲ್ಲವೆಂದು ಅಮ್ಮ ಫೋನಿನಲ್ಲಿ ಹೇಳಿದಾಗಲೂ ನಾನು ಅದೊಂದು ಕನಸೆಂದು ಭಾವಿಸಿ ಸುಮ್ಮನೆ ನಿದ್ದೆ ಮಾಡಿದ್ದೆ. ಆದರೆ ನನ್ನೊಳಗಿನ ಮೊಮ್ಮಗಳನ್ನು ವಾಸ್ತವಕ್ಕೆ ತಂದದ್ದು ಅಜ್ಜಯ್ಯನ ಕಾಲುಗಳು! ಪ್ರತಿ ಬಾರಿಯೂ ಅವರ ಉಗುರುಗಳನ್ನು ಕತ್ತರಿಸುವುದು ನನ್ನ ಇಷ್ಟದ ಕೆಲಸ. ಆದರೆ ಅವರಿಗೋ ಉಗುರು ಕತ್ತರಿಸುವುದೆಂದರೆ ಚೂರೂ ಇಷ್ಟವಿರುತ್ತಿರಲಿಲ್ಲ. ಅದೂ ಅಲ್ಲದೆ ‘ನೋವೂ! ! ! ’ ಎಂದು ಕಿರುಚುತ್ತಿದ್ದರು. ನಾನೂ ಚೆಂದ ಬೈಯುತ್ತಾ ಕೆಲಸ ಮುಂದುವರಿಸುತ್ತಿದ್ದೆ. ಆದರೆ ಕೊನೆಯ ದಿನ ನೋಡಿದ ಅವರ ಕಾಲುಗಳು, ಆ ಬೆರಳುಗಳು, ಕಪ್ಪು ಮಣ್ಣು ತುಂಬಿದ ಉಗುರುಗಳ ಚಿತ್ರ ಇನ್ನೂ ಮನಸ್ಸಿನಲ್ಲಿ ಹಾಗೇ ಇದೆ.
ಒಂಬತ್ತು ರೂಪಾಯಿಯ ಬೀಡಿ ತರಲು ಒಂದು ರೂಪಾಯಿ ಲಂಚ ಕೊಡುತ್ತಿದ್ದದ್ದು, ಅವರ ಪುಟ್ಟ ಕೋಣೆಯಲ್ಲಿ ನನ್ನ ಮತ್ತು ಅವರ ಅಮ್ಮನ ಫೋಟೋ ಅಂಟಿಸಿಕೊಂಡಿದ್ದು, ಪಾಸು ಫೇಲಿನ ದಿನ ಪ್ರತಿ ವರ್ಷವೂ ಮರೆಯದೆ ಚಾಕಲೇಟು ತರುತ್ತಿದ್ದದ್ದು, ತಲೆಬುಡವಿಲ್ಲದ ನನ್ನ ಮಾತುಗಳಿಗೆಲ್ಲ ಹೌದೆಂದು ತಲೆ ಆಡಿಸುತ್ತಿದ್ದದ್ದು, ಕೋಲಾಟ ಇದೆಯೆಂದರೆ ಚೆಂದದ ಮರದ ಕೋಲುಗಳನ್ನು ಮಾಡಿಕೊಡುತ್ತಿದ್ದದ್ದು, ಜೀವನದ ಮುಕ್ಕಾಲು ಭಾಗ ಜೊತೆಗಿದ್ದ ಬೀಡಿಯನ್ನು ನನ್ನ ಪುಟ್ಟ ತಮ್ಮಂದಿರಿಗಾಗಿ ಒಂದೇ ದಿನದಲ್ಲಿ ತ್ಯಾಗ ಮಾಡಿದ್ದೆಲ್ಲ ಈಗ ನೆನೆದರೆ ಕಣ್ಣಂಚು ಅರಿವಿಲ್ಲದೆ ಒದ್ದೆಯಾಗುತ್ತದೆ.
ಅವರು ಹೋದಮೇಲೆ ಎಷ್ಟೋ ದಿನ ನಮ್ಮನೆಯಲ್ಲಿ ನಗುವಿರಲಿಲ್ಲ. ಕೊನೆಗೆ ನಾವೆಲ್ಲರೂ ಮನಸಾರೆ ನಕ್ಕಿದ್ದು, ಶ್ರದ್ಧಾಂಜಲಿಯ ದಿನ ಮೌನಾಚರಣೆಯ ಸಮಯದಲ್ಲಿ ನಮ್ಮೂರ ಮರ್ಯಾದಸ್ತನೊಬ್ಬ ಕುಡಿದ ಅಮಲಿನಲ್ಲಿ ‘ನಾರಾಯಣ ಉಡುಪರಿಗೆ ಜೈ ಜೈ! ’ ಎಂದು ಕಿರುಚಿದಾಗ. ಬದುಕಿದಷ್ಟು ದಿನ ಯಾರಿಗೂ ತೊಂದರೆ ಮಾಡದ, ಯಾರ ಮೇಲೂ ಹೊಟ್ಟೆಕಿಚ್ಚು ಪಡದ, ಯಾವ ಮೊಮ್ಮಕ್ಕಳ ಮದುವೆ ನೋಡಿಯೇ ಸಾಯುತ್ತೇನೆಂಬ ಮಾತುಗಳಿಂದ ಕಾಡದ ನಮ್ಮಜ್ಜಯ್ಯ ಎಂದರೆ ನಮಗೆಲ್ಲ ಬಹಳ ಹೆಮ್ಮೆ. ಅದಕ್ಕೆ ನಾವು ಎಷ್ಟೇ ದೊಡ್ಡವರಾದರೂ ಸದಾ ‘ನಾರಾಯಣ ಉಡುಪರ ಮೊಮ್ಮಕ್ಕಳು’.
ಮೈಸೂರು: ಹೊಸ ವರ್ಷದ ಹಿನ್ನೆಲೆಯಲ್ಲಿ ಇಂದು ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ದೇವಿಯ…
ಮೈಸೂರು: 2026ರ ಮೊದಲ ದಿನವಾದ ಇಂದು ನಾಡಿನ ಅಧಿದೇವತೆ ನೆಲೆಸಿರುವ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭಕ್ತಸಾಗರವೇ ಹರಿದುಬರುತ್ತಿದೆ. ಹೊಸ ವರ್ಷದ ಅಂಗವಾಗಿ…
ಮೈಸೂರು: ಹೊಸ ವರ್ಷ ಎಂದು ಮೋಜು ಮಸ್ತಿ ಮಾಡದೇ ರಸ್ತೆ ಬದಿಯ ನಿರಾಶ್ರಿತರಿಗೆ ಹೂದಿಕೆಗಳನ್ನು ನೀಡುವ ಮೂಲಕ ಯುವಕರ ತಂಡ…
ಮೈಸೂರು: ನೂತನ ವರ್ಷವನ್ನು ಮೈಸೂರಿನ ವಿಜಯನಗರದಲ್ಲಿರುವ ಯೋಗ ನರಸಿಂಹಸ್ವಾಮಿ ದೇವಾಲಯದಲ್ಲಿ ಭಕ್ತರಿಗೆ ತಿರುಪತಿ ಮಾದರಿ ಲಡ್ಡು ವಿತರಿಸುವ ಮೂಲಕ ಸ್ವಾಗತಿಸಲಾಯಿತು.…
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು, ದೇಶ ಹಾಗೂ ವಿಶ್ವದ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಅಷ್ಟೇ ಅಲ್ಲದೇ…
ಮೈಸೂರು: ಇಂದು ಹೊಸ ವರ್ಷದ ಸಂಭ್ರಮ ಮನೆ ಮಾಡಿರುವ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನ ದೇವಾಲಯಗಳು ಭಕ್ತರಿಂದ ತುಂಬಿ ತುಳುಕುತ್ತಿವೆ.…