Andolana originals

ಗೌರಿ ಗಣೇಶ ಹಬ್ಬ; ಮೊರಗಳ ಮೊರೆತ

ಚಿರಂಜೀವಿ ಸಿ. ಹುಲ್ಲಹಳ್ಳಿ

ಮೈಸೂರಲ್ಲಿ ಕರಕುಶಲ ಕರ್ಮಿಗಳ ಮೊಗದಲ್ಲಿ ಸಂಭ್ರಮ

ಕಣ್ಸೆಳೆಯುವ ಬಗೆಬಗೆಯ ಮೊರಗಳು

ಚಿಕ್ಕ ಮೊರ, ಬಾಗಿನ ಮೊರ, ಚಿಬ್ಲು ಇತ್ಯಾದಿ

ಕುಲಕಸುಬು ಚೇತರಿಕೆಗೆ ಆರ್ಥಿಕ ನೆರವಿಗೆ ಒತ್ತಾಯ

ಮೈಸೂರು: ಗೌರಿ-ಗಣೇಶ ಹಬ್ಬ ಹತ್ತಿರವಾಗುತ್ತಿದ್ದಂತೆ ಸಂಭ್ರಮದ ಚಟುವಟಿಕೆಗಳು ಗರಿಗೆದರಿವೆ. ಗೌರಿ ಹಬ್ಬವು ಹೆಣ್ಣು ಮಕ್ಕಳಿಗೆ ವಿಶೇಷ ಎಂಬ ಪ್ರತೀತಿ ಇದೆ. ಏಕೆಂದರೆ ಹಬ್ಬದ ದಿನ ಬಹುತೇಕ ಮನೆಗಳಲ್ಲಿ ಹೆಣ್ಣು ಮಕ್ಕಳಿಗೆ ಬಾಗಿನ ನೀಡುತ್ತಾರೆ. ಈ ಸಂಪ್ರದಾಯದಲ್ಲಿ ಮೊರದ ಪಾತ್ರ ಪ್ರಮುಖವಾಗಿದೆ. ಹಾಗಾಗಿ ಸದ್ಯಕ್ಕೆ ಮೊರಕ್ಕೆ ಬೇಡಿಕೆ ಹೆಚ್ಚಾಗಿದೆ.

ಗೌರಿ-ಗಣೇಶನ ಹಬ್ಬ ಬಂತೆಂದರೆ ಸಾಕು ಹೆಣ್ಣು ಮಕ್ಕಳಲ್ಲಿ ಎಲ್ಲಿಲ್ಲದ ಸಡಗರ ಸಂಭ್ರಮ. ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳಂತೂ ತವರು ಮನೆಯಿಂದ ಹೊತ್ತು ತರುವ ಬಾಗಿನಕ್ಕಾಗಿ ಎದುರು ನೋಡುವುದು ಸರ್ವೇ ಸಾಮಾನ್ಯ. ಮದುವೆ ಮಾಡಿಕೊಟ್ಟ ತಮ್ಮ ಮಗಳನ್ನು ಇತರ ದಿನ ಹೋಗಿ ನೋಡಿಬರಲು ಸಾಧ್ಯವಾಗದಿದ್ದರೂ, ಗೌರಿ ಹಬ್ಬಕ್ಕೆ ಮಾತ್ರ ತವರಿಂದ ತಪ್ಪದೇ ಹೋಗಿ ಆಕೆಗೆ ಬಾಗಿನ ಕೊಟ್ಟು ಬರುವ ಸಂಪ್ರದಾಯ ಈಗಲೂ ಮುಂದುವರಿದಿದೆ. ಹೀಗಾಗಿ ಹೆಣ್ಣು ಮಕ್ಕಳಿಗೆ ಬಾಗಿನ ಕೊಡಲು ಬಳಸುವ ಬಿದಿರಿನ ಮೊರಕ್ಕೆ ಈಗ ಬೇಡಿಕೆ ಹೆಚ್ಚಾಗಿದೆ.

ನಗರದ ಅಗ್ರಹಾರದಲ್ಲಿರುವ ನೂರೊಂದು ಗಣಪತಿ ದೇವಸ್ಥಾನದ ಆವರಣದಲ್ಲಿ ಒಂದು ವಾರದಿಂದ ಹಲವಾರು ಮಂದಿ ಮೊರಗಳನ್ನು ತಯಾರಿಸುತ್ತಿದ್ದಾರೆ. ನಗರ ಮತ್ತು ಜಿಲ್ಲೆಯ ಸುತ್ತಮುತ್ತಲಿನ ಜನರು ಮೊರ ಖರೀದಿಗಾಗಿ ಧಾವಿಸುತ್ತಿದ್ದಾರೆ.

ಹಬ್ಬದ ಕಾರಣಕ್ಕೆ ತುಸು ಬೆಲೆ ಜಾಸ್ತಿಯಾದರೂ ಮೊರದ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಮೊರಗಳ ಅಳತೆಗೆ ತಕ್ಕಂತೆ ಬೆಲೆ ನಿಗಪಡಿಸಲಾಗಿದೆ. ದೊಡ್ಡದಾದರೆ ೧೫೦ ರೂ., ಚಿಕ್ಕದಾದರೆ ೧೦೦ ರೂ. ದರದಲ್ಲಿ ಬಿಕರಿ ಮಾಡಲಾಗುತ್ತಿದೆ. ಇದರ ಜೊತೆಗೆ ಹಬ್ಬದ ವಿಶೇಷ ಖಾದ್ಯವಾಗಿ ಇಡ್ಲಿ ತಯಾರು ಮಾಡುವುದು ವಾಡಿಕೆಯಾದ್ದರಿಂದ ಚಿಬ್ಲು ಇಡ್ಲಿಯನ್ನು ತಯಾರಿಸುವ ಮೊರಕ್ಕೂ ಬೇಡಿಕೆ ಹೆಚ್ಚಾಗಿದ್ದು, ಇವುಗಳ ದರ ಡಜನ್‌ಗೆ ೨೫೦ ರೂ. ಆಗಿದೆ.

೨೦ಕ್ಕೂ ಹೆಚ್ಚು ಜನರಿಂದ ಸಿದ್ಧತೆ: ನಂಜನಗೂಡಿನ ಚಾಮಲಾಪುರ ಬೀದಿಯಿಂದ ವಾರದ ಹಿಂದೆ ಬಂದಿರುವ ೨೦ಕ್ಕೂ ಹೆಚ್ಚು ಬುಟ್ಟಿ ಹೆಣೆಯುವವರು ಮೊರಗಳನ್ನು ಸಿದ್ಧ ಮಾಡುತ್ತಿದ್ದಾರೆ. ಮುಂಜಾನೆ ೭ರಿಂದ ಕೆಲಸ ಆರಂಭಿಸಿ, ನಿತ್ಯವೂ ಒಬ್ಬರು ೮ರಿಂದ ೧೦ ಮೊರಗಳನ್ನು ತಯಾರಿಸುತ್ತೇವೆ ಎಂದು ಕುಶಲಕರ್ಮಿ ಸಿದ್ದಯ್ಯ ‘ಆಂದೋಲನ’ಕ್ಕೆ ತಿಳಿಸಿದರು.

ಕೊಡಗಿನ ಮಡಿಕೇರಿ, ವಿರಾಜಪೇಟೆಯಿಂದ ಬಿದಿರಿನ ಬಂಬೂಗಳನ್ನು ತಂದು, ಇಲ್ಲಿ ಒಡೆದು ಸೀಳಿ, ಚೂಪುಗೊಳಿಸಿ ಮೊರಗಳ ಹೆಣಿಗೆಗೆ ಬಳಸಲಾಗುತ್ತದೆ. ಒಂದು ಮೊರವನ್ನು ಸಿದ್ಧಪಡಿಸಲು ಕನಿಷ್ಠ ಒಂದು ಗಂಟೆ ಅಗತ್ಯ. ದಿನಕ್ಕೆ ಒಬ್ಬರು ಐದಾರು ಮೊರಗಳನ್ನು ಹೆಣೆಯುತ್ತಾರೆ. ನಾನು, ನನ್ನ ಹೆಂಡ್ತಿ ಸುಮಾರು ೫೦ ವರ್ಷಗಳಿಂದ ಈ ಕುಲಸುಬು ಮಾಡಿಕೊಂಡು ಬಂದಿದ್ದೇವೆ ಎಂದು ಅವರು ಹೇಳಿದರು

ವಿವಿಧ ಬಗೆಯ ಮೊರಗಳು:  ಇಲ್ಲಿ ಮೊರಗಳನ್ನು ತಯಾರಿಸುತ್ತಿರುವ ಕುಶಲಕರ್ಮಿಗಳು ಚಿಕ್ಕ ಮೊರ, ಬಾಗಿನ ಮೊರ, ಏಳಡಿ ಮೊರ, ಚಿಬ್ಲು, ಅಕ್ಕಿ ಮೊರ, ಗೂಡೆ ಮೊರ ಇತ್ಯಾದಿಗಳನ್ನು ಹೆಣೆಯುತ್ತಿದ್ದಾರೆ. ಪ್ರತಿಯೊಂದಕ್ಕೂ ಒಂದೊಂದು ದರ ನಿಗದಿಪಡಿಸಿದ್ದಾರೆ.

” ನಮ್ಮ ಕೆಲಸದಲ್ಲಿ ಅಷ್ಟೊಂದು ಲಾಭ ಇರುವುದಿಲ್ಲ. ಕುಲಕಸುಬು ಆಗಿರುವುದಿಂದ ಮುಂದುವರಿಸಿಕೊಂಡು ಬಂದಿದ್ದೇವೆ. ಗೌರಿ-ಗಣೇಶ ಹಬ್ಬ ಬರುವುದರಿಂದ ಇದೊಂದು ವಾರ ವ್ಯಾಪಾರ ಜೋರಾಗಿ ನಡೆಯಲಿದೆ ಅಷ್ಟೇ. ಅದೂ ಕೂಡ ಬಿದಿರಿಗೆ ನಮ್ಮ ಕೂಲಿಗೆ ಸರಿಯಾಗಲಿದೆ.”

-ನೀಲಮ್ಮ, ಮೊರ ಹೆಣೆಯುವವರು

” ಹಬ್ಬ ಕಳೆಯುವವರೆಗೆ ಮೊರಗಳಿಗೆ ಬೇಡಿಕೆ ಇರುತ್ತದೆ. ಸಾಲ ಮಾಡಿಯೇ ಜೀವನ ನಡೆಸಬೇಕಾಗಿದೆ. ಶುಭ ಕಾರ್ಯಗಳಿಗೆ ಚಪ್ಪರ ಹಾಕೋದು, ಕೂಲಿ ಕೆಲಸ ಮಾಡಿಕೊಂಡುಜೀವನ ಮಾಡುತ್ತೇವೆ. ಯಾವ ಸರ್ಕಾರ ಬಂದರೂ ನಮಗೆ ನಾಕಾಣೆ ಕೊಡುವುದಿಲ್ಲ. ನಮ್ಮಂತೆ ಕುಲಕಸುಬನ್ನೇನಂಬಿಕೊಂಡು ಬದುಕುತ್ತಿರುವವರಿಗೆ ರಾಜ್ಯ ಸರ್ಕಾರ ಆರ್ಥಿಕ ನೆರವು ಒದಗಿಸಬೇಕು.”

-ಸಿದ್ದಯ್ಯ, ಕರಕುಶಲಕರ್ಮಿ

ಆಂದೋಲನ ಡೆಸ್ಕ್

Recent Posts

ಸಿಲಿಂಡರ್ ಸ್ಪೋಟ ಪ್ರಕರಣ : ಸಾವಿನ ಸಂಖ್ಯೆ 3ಕ್ಕೆ ಏರಿಕೆ

ಮೈಸೂರು : ಮೈಸೂರು ಅರಮನೆ ಮುಂಭಾಗ ನಿನ್ನೆ ಸಂಜೆ ನಡೆದಿದ್ದ ಹೀಲಿಯಂ ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ಇದೀಗ ಮೂರಕ್ಕೆ…

7 hours ago

ಮರ್ಯಾದೆಗೇಡು ಹತ್ಯೆ ವಿರೋಧಿಸಿ ಸಹಿ ಸಂಗ್ರಹ

ಮೈಸೂರು : ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಗೇಡು ಹತ್ಯೆ ವಿರೋಧಿಸಿ ಮತ್ತು ಮರ್ಯಾದೆಗೇಡು ಹತ್ಯೆ ತಡೆಗೆ ಕಠಿಣ ಕಾಯಿದೆ ರೂಪಿಸಬೇಕು ಎಂದು…

11 hours ago

ಕೆ.ಆರ್.ಆಸ್ಪತ್ರೆ ಶೆಡ್ ನಲ್ಲಿ ಬೆಂಕಿ : ಹಾಸಿಗೆಗಳು ಬೆಂಕಿಗಾಹುತಿ

ಮೈಸೂರು : ಇಲ್ಲಿನ ಕೆ.ಆರ್. ಆಸ್ಪತ್ರೆಯ ಶೆಡ್ ನಲ್ಲಿ ಬೆಂಕಿ ಕಾಣಿಸಿಕೊಂಡು ಆಸ್ಪತ್ರೆಯ ಹಾಸಿಗೆಗಳು ಬೆಂಕಿಗಾಹುತಿಯಾಗಿವೆ. ಆಸ್ಪತ್ರೆಯ ಚೆಲುವಾಂಬ ವಾರ್ಡ್…

11 hours ago

ಹೊಸ ವರ್ಷಾಚರಣೆಗೆ ಮುನ್ನೆಚ್ಚರಿಕೆ : ಸೂಕ್ಷ ಪ್ರದೇಶಗಳ ಬಗ್ಗೆ ಸಮೀಕ್ಷೆ ವರದಿಗೆ ಸೂಚನೆ

ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತಂತೆ ಪ್ರಶ್ನೆಗಳು ಉದ್ಭವಿಸಿರುವ ಸಂದರ್ಭದಲ್ಲಿ, ಹೊಸ ವರ್ಷಾಚರಣೆಯ ವೇಳೆ ಯಾವುದೇ ಅವಘಡ ನಡೆಯದಂತೆ…

12 hours ago

ಸಿಲಿಂಡರ್‌ ಸ್ಪೋಟ ಪ್ರಕರಣ : ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಮಂಜುಳ ಸಾವು

ಮೈಸೂರು : ಮೈಸೂರಿನ ವಿಶ್ವ ವಿಖ್ಯಾತ ಅರಮನೆ ಸಮೀಪ ಸಂಭವಿಸಿದ್ದ ಹೀಲಿಯಂ ಗ್ಯಾಸ್ ಸಿಲೆಂಡರ್ ಸ್ಫೋಟ ದುರಂತದಲ್ಲಿ ಸಾವಿನ ಸಂಖ್ಯೆ…

13 hours ago

ಇತಿಹಾಸ ಸೃಷ್ಟಿಸಿದ ಬಿಜೆಪಿ : ತಿರುವನಂತಪುರಂನ ಮೇಯರ್ ಆಗಿ ವಿ.ವಿ.ರಾಜೇಶ್ ಆಯ್ಕೆ

ತಿರುವನಂತಪುರಂ : ಬಿಜೆಪಿಯಿಂದ ಮೊದಲ ಬಾರಿಗೆ ತಿರುವನಂತಪುರಂ ನಗರ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ವಿ.ವಿ.ರಾಜೇಶ್ ಇತಿಹಾಸ ನಿರ್ಮಿಸಿದ್ದಾರೆ. 49…

13 hours ago