• ಕೆ.ಪಿ. ನಾಗರಾಜ್, ಪಬ್ಲಿಕ್ ಟಿವಿ
ಸುತ್ತ ಅಚ್ಚ ಹಸಿರಿನ ಬೆಟ್ಟದ ಸಾಲುಗಳ ನಡುವೆ ಪುಟ್ಟ ಪುಟ್ಟ ಊರುಗಳು… ಅದೇ ಸಾಲಿನ ಕೊನೆಯಲ್ಲಿ ದೊಡ್ಡದಾದ ಇನ್ನೊಂದು ಊರು. ಈ ದೊಡ್ಡ ಊರಿನ ಮಧ್ಯೆ ಸದಾ ಕಾಲವೂ ಮೌನವನ್ನೇ ಹೊದ್ದಂತೆ ಹರಿಯುತ್ತಿದ್ದ ಝರಿಯಂಥ ನದಿ. ನದಿಯ ಆಸುಪಾಸು ಬದುಕು ಕಟ್ಟಿಕೊಂಡ ನೂರಾರು ಜನ. ಬಡತನದಲ್ಲೇ ನೆಮ್ಮದಿಯಾಗಿ ಬದುಕುತ್ತಿದ್ದ ಜೀವಗಳು. ಶ್ರೀಮಂತಿಕೆ ಇರದಿದ್ದರೇನು ಸ್ವರ್ಗದಂಥಾ ಊರಲ್ಲಿದ್ದೇವೆ ಎಂಬ ಸುಖ. ಬೇರೆಯವರಿಗೆ ಹೊಟ್ಟೆಕಿಚ್ಚು ಉಂಟು ಮಾಡುವ ಮಟ್ಟಕ್ಕೆ ಈ ಊರುಗಳಿದ್ದವು.
ಏಕೆಂದರೆ ಅದು ಪ್ರಕೃತಿ ಸೃಷ್ಟಿಸಿದ್ದ ವೈಭೋಗ. ಇಂತಹ ಊರಿನಲ್ಲಿ ಕಳೆದ ಜುಲೈ 29 ರ ಸೂರ್ಯಾಸ್ತ ಎಂದಿನಂತೆ ಆಗಿತ್ತು. ಆದರೆ, ಜುಲೈ 30ರ ಸೂರ್ಯೋದಯ ನೋಡಲು ಆ ಊರುಗಳಲ್ಲಿ ಜನ ಇರಲಿಲ್ಲ. ಇದ್ದದ್ದು ಕೇವಲ ಸ್ಮಶಾನ ಕೂಗು. ಈ ದಿನದ ರಾತ್ರಿಯವರೆಗೂ ಸೌಂದರ್ಯದ ಖನಿ ಆಗಿದ್ದ ಊರುಗಳು ರಾತ್ರಿಕಳೆದು ಬೆಳಗಾಗುವ ವೇಳೆಗೆ ಸ್ಮಶಾನಗಳಾಗಿ ಬದಲಾಗಿದ್ದವು. ಇಲ್ಲೊಂದು ಊರಿತ್ತಾ? ಇಲ್ಲೊಂದು ನಾಗರಿಕ ಸಮಾಜ ಬದುಕು ಕಟ್ಟಿಕೊಂಡಿತ್ತಾ ಎಂಬ ಕುರುಹೂ ಇಲ್ಲದಂತೆ ಊರುಗಳು ಪ್ರಪಾತಕ್ಕೆ ಬಿದ್ದಿದ್ದವು. ಊರುಗಳೇ ಕಣ್ಮರೆ ಆಗುವಂತಹ ದುರಂತ ಜುಲೈ 29 ರ ರಾತ್ರಿ 2 ಗಂಟೆಗೆ ನಡೆದಿತ್ತು. ಹಾ, ಹೂಂ ಅನ್ನುವುದರೊಳಗೆ ಊರುಗಳು ನಾಪತ್ತೆಯಾದವು.
ಹೀಗೆ ಕೇರಳದ ಜನ ಮಲಗಿ ಎದ್ದೇಳುವುದರೊಳಗೆ ನಾಪತ್ತೆಯಾದ ಊರುಗಳು- ಚೂರಲ್ ಮಲೈ, ಮುಂಡಕೈ ಹಾಗೂ ವೆಳೇರಿ ಮಲೈ. ಈ ಗ್ರಾಮಗಳಲ್ಲಿ ಚೂರಲ್ ಮಲೈ ಅತಿ ದೊಡ್ಡ ಗ್ರಾಮ. ಇಲ್ಲಿ 300 ಕ್ಕೂ ಹೆಚ್ಚು ಮನೆಗಳಿದ್ದವು. ಇನ್ನೂ ಎರಡು ಊರುಗಳಲ್ಲೂ ಐವತ್ತು – ನೂರು ಮನೆಗಳಿ ದ್ದವು. ಈ ಗ್ರಾಮಗಳ ಮೇಲೆ ಮುಂಡಕೈ ಎಂಬ ಬೆಟ್ಟವಿದೆ. ಇದು ಪಶ್ಚಿಮ ಘಟ್ಟದ ಒಂದು ಬೆಟ್ಟ. ಈ ಬೆಟ್ಟದಲ್ಲಿ ಅನೇಕ ಸಣ್ಣ ಸಣ್ಣ ಝರಿಯಂಥ ತೊರೆ ಹರಿಯುತ್ತವೆ. ಇದರಲ್ಲಿ ಸ್ವಲ್ಪ ದೊಡ್ಡ ಝರಿಯಂಥ ನದಿಯೆ ಚೂರಲ್ ಮಲೈ. ಚೂರಲ್ ಮಲೈ ಗ್ರಾಮದ ಒಳ ಭಾಗದಲ್ಲೇ ಈ ನದಿ ಹರಿಯುತ್ತಿದ್ದ ಕಾರಣ ನದಿಗೆ ಚೂರಲ್ ಮಲೈ ನದಿ ಎಂದು ನಾಮಕರಣ ಮಾಡಲಾಗಿತ್ತು. ಈ ಗ್ರಾಮ ದಲ್ಲಿ ಬಿದಿರು ಹೆಚ್ಚಾಗಿ ಬೆಳೆಯುತ್ತಿದ್ದ ಕಾರಣ ಗ್ರಾಮಕ್ಕೆ ಚೂರಲ್ ಮಲೈ ಎಂದು ಹೆಸರು ಬಂದಿದೆ. ಮಲಯಾಳಂನಲ್ಲಿ ಚೂರಲ್ ಅಂದರೆ ಬಿದಿರು ಎಂದರ್ಥ. ನೆತ್ತಿಯ ಮೇಲೆ ಸುಂದರ ಬೆಟ್ಟ, ಸುತ್ತಾ ಟೀ ಎಸ್ಟೇಟ್ ಇವುಗಳ ಮಧ್ಯೆ ಈ ಗ್ರಾಮಗಳಿದ್ದವು. ಟೀ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಈ ಗ್ರಾಮ ಗಳಲ್ಲಿ ನೆಲೆಸಿದ್ದರು. ಇವರಲ್ಲಿ ಬಹುತೇಕರು ವಲಸಿಗರು. ಕರ್ನಾಟಕ, ತಮಿಳು ನಾಡು, ಅಸ್ಸಾಂ ಭಾಗಗಳಿಂದ ಇಲ್ಲಿಗೆ ವಲಸೆ ಬಂದಿದ್ದ ಜನರು ಇಲ್ಲಿಯೇ ನೆಲೆಸಿ ಮಲಯಾಳಿಗಳಾಗಿ ಬದಲಾಗಿದ್ದರು. ಹುಟ್ಟೂರು ಬಿಟ್ಟು 50 – 60 ವರ್ಷಗಳೇ ಕಳೆದಿದ್ದು, ಇವರೆಲ್ಲಾ ಅಪ್ಪಟ್ಟ ಕೇರಳಿಗರಾಗಿ ಬದುಕು ಕಟ್ಟಿಕೊಂಡಿದ್ದರು.
ಈ ಊರಿನ ನೆತ್ತಿಯ ಮೇಲಿನ ಮುಂಡಕೈ ಬೆಟ್ಟವೇ ತಮ್ಮನ್ನು ಒಂದು ದಿನ ಸಮಾಧಿ ಸೇರಿಸಲಿದೆ ಎಂಬ ಯಾವ ಕಲ್ಪನೆಯೂ ಈ ಜನರಿಗೆ ಇರಲಿಲ್ಲ. ಪ್ರವಾಸೋದ್ಯಮ ಹೆಸರಿನಲ್ಲಿ ಬೆಟ್ಟವನ್ನು ಮನ ಬಂದಂತೆ ಅಗೆದದ್ದು ತಮ್ಮ ಸಮಾಧಿ ಸಿದ್ಧವಾಗುವುದಕ್ಕೆ ಬರೆದ ಮುನ್ನುಡಿ ಅಂತ ಜನರಿಗೆ ಅನ್ನಿಸಲೇ ಇಲ್ಲ. ಪರಿಸರ ವಾದಿಗಳ ಮಾತು ಆಡಳಿತ ನಡೆಸುವವರಿಗೆ ಅಲಕ್ಷ್ಯವಾಗಿತ್ತು. ಬೆಟ್ಟ ಅಗೆಯುವ ಮಂದಿಗೆ ದುಡ್ಡಷ್ಟೆ ಮುಖ್ಯವಾಗಿತ್ತು. ಪ್ರವಾಸೋದ್ಯಮ ಅಭಿವೃದ್ಧಿ ಹೆಸರಲ್ಲಿ ಬೆಟ್ಟದಲ್ಲಿ ನಡೆದ ವಾಣಿಜ್ಯ ಚಟುವಟಿಕೆಗಳು ಇಲ್ಲಿಯ ಜನರ ಪಾಲಿನ ನೇಣು ಕುಣಿಕೆಗಳಾದವು. ನೀವು ಮಾಡ್ತಿರೋದು ಸರಿಯಲ್ಲ ಅಂತ ಪ್ರಕೃತಿ ಆಗಾಗ ಸಣ್ಣ ಮಟ್ಟಕ್ಕೆ ಮುನಿದು ಸಂದೇಶ ರವಾನಿಸುತ್ತಿತ್ತು. ಈ ಸಂದೇಶ ಅರ್ಥವಾದರೂ ಅರ್ಥವೇ ಆಗದವರಂತೆ ನಡೆದುಕೊಂಡ ಪರಿಣಾಮವೇ ಈ ಮಹಾದುರಂತ. ಈಗ ಎಂದಿನಂತೆ ಮತ್ತೆ ಪಶ್ಚಿಮ ಘಟ್ಟಗಳ ಸಂರಕ್ಷಣೆಯ ಕೂಗು ಎದ್ದಿದೆ. ಈ ಕೂಗಿನ ವ್ಯಾಲಿಡಿಟಿ ತುಂಬ ಕಡಿಮೆ. ಏಕೆಂದರೆ ನಾವು ಎಂತಹ ದುರಂತಗಳನ್ನು ಕೂಡ ಬೇಗ ಮರೆತುಬಿಡುತ್ತೇವೆ. ಹೀಗಾಗಿ ಪಶ್ಚಿಮ ಘಟ್ಟಗಳ ರಕ್ಷಣೆ ಅನ್ನೋದು ಸದಾ ಕಾಲದ ಅರಣ್ಯರೋದನ.
ಮೊದಲು ಎಂಟ್ರಿ ಕೊಟ್ಟಿದ್ದ ಕನ್ನಡತಿ!: ಹೀಗೆ ಕೇರಳದ ವಯನಾಡಿನಲ್ಲಿ ನಡೆದ ಮಹಾದುರಂತದಲ್ಲಿ ಶವಗಳನ್ನು ಹುಡುಕಿದ್ದೇ ಒಂದು ದೊಡ್ಡ ಸಾಹಸ. ಐವತ್ತಲ್ಲ ನೂರಲ್ಲ! ನಾಲ್ಕು ನೂರು ಶವಗಳು! ಇನ್ನೂ ಸಿಗಬೇಕಿರುವ ಶವಗಳ ಸಂಖ್ಯೆಯೇ 200 ರ ಮೇಲಿದೆ. ಅಷ್ಟರಮಟ್ಟಿಗೆ ಕಾಲಿಟ್ಟ ಕಡೆಯಲೆಲ್ಲಾ ಹೆಣ, ಹೆಣ, ಹೆಣ. ಹೀಗೆ ನೂರಾರು ಜನರು ಬಲಿಯಾದ ಇನ್ನೂ ನೂರಾರು ಜನರು ಸಂಕಷ್ಟಕ್ಕೆ ಸಿಲುಕಿದ ಒಂದೇ ಗಂಟೆಯಲ್ಲಿ ಈ ಸ್ಥಳಕ್ಕೆ ತಡರಾತ್ರಿ 3 ಗಂಟೆಗೆ ಸ್ಥಳೀಯ ಟೀಂನ ಜೊತೆ ಕಾಲಿಟ್ಟಿದ್ದು ಒಬ್ಬ ಕನ್ನಡತಿ! ಅವರ ಹೆಸರು ಮೇಘಶ್ರೀ. ವಯನಾಡಿನ ಜಿಲ್ಲಾಧಿಕಾರಿ.
ದುರಂತದ ಸುದ್ದಿ ತಿಳಿದ ತಕ್ಷಣವೆ ಜೀಪ್ ಹತ್ತಿ ಇಲ್ಲಿಗೆ ಬಂದಿದ್ದರು. ಸ್ಥಳೀಯ ಟೀಂಗಳನ್ನು ರಾತ್ರೋರಾತ್ರಿ ಅಲ್ಲಿಗೆ ಸೇರಿಸಿ ನೂರಾರು ಜನರ ಪ್ರಾಣ ಉಳಿಸಿದರು. ಮೇಘಶ್ರೀ ಕರ್ನಾಟಕದ ಚಿತ್ರದುರ್ಗದವರು. 2017ನೇ ಬ್ಯಾಚ್ ನ ಐಎಎಸ್ ಅಧಿಕಾರಿ. ಯಾವಾಗ ವಯನಾಡು ಭಾಗದಲ್ಲಿ ಕುಂಭದ್ರೋಣ ಮಳೆ ಆರಂಭವಾಯಿತೋ ಅವತ್ತಿನಿಂದ ಬೆಟ್ಟದ ಜನರ ವಿಚಾರದಲ್ಲಿ ಮೇಘಶ್ರೀ ಹೈ ಅಲರ್ಟ್ ಆಗಿದ್ದರು. ಜನರನ್ನು ಆದಷ್ಟು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕೆಲಸ ಮಾಡಿದ್ದರು. ದುರಂತ ನಡೆದ ಊರುಗಳ ಜನರಿಗೂ ಈ ಬಗ್ಗೆ ಎಚ್ಚರಿಕೆ ರವಾನಿಸಿದ್ದರು. ಆದರೆ ಜಿಲ್ಲಾಡಳಿತದ ಮಾತನ್ನು ಜನರು ನಿರ್ಲಕ್ಷಿಸಿದ್ದರು. ಅದರ ಪರಿಣಾಮ ಇಂತಹ ದುರಂತಕ್ಕೆ ದಾರಿ ಆಯ್ತು.
ದುರಂತ ನಡೆದ ಬೆಳಗಿನ ಹೊತ್ತಿಗೆ ಎನ್‌ಡಿಆರ್‌ಎಫ್ ತಂಡ ಮತ್ತು ಭಾರತೀಯ ಸೈನ್ಯದವರು ಸ್ಥಳಕ್ಕೆ ಬಂದರು. 10 – 15 ಅಡಿ ಮಣ್ಣಿನಲ್ಲಿ ಹೂತು ಹೋದ ಶವಗಳನ್ನು ಹುಡುಕುವುದು ಹೇಗೆ? ಹುಡುಕಿದ ಶವಗಳ ಬೇರೆ ಕಡೆ ಶಿಫ್ಟ್ ಮಾಡೋದು ಹೇಗೆ? ಪ್ರವಾಹದಿಂದ ಜೀವ ಉಳಿಸಿಕೊಂಡು ಬೆಟ್ಟದ ಎತ್ತರದ ಪ್ರದೇಶದಲ್ಲಿ ಕುಳಿತ ಜನರ ರಕ್ಷಣೆ ಹೇಗೆ ಅನ್ನೋದೆ ಗೊತ್ತಾಗದ ಮಟ್ಟಕ್ಕೆ ಈ ಸ್ಥಳದ ಚಿತ್ರಣವಿತ್ತು. ಊರಿನ ನಡುವೆ ದೊಡ್ಡ ನದಿ ಹರಿಯುತ್ತಿದೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಇದ್ದ ದೊಡ್ಡ ಸೇತುವೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಇದರ ನಡುವೆ ಜೋರು ಮಳೆ ಬೇರೆ. ಇವು ಕಾರ್ಯಾಚರಣೆಯ ಆರಂಭ ದಲ್ಲಿ ಸಾಲು ಸಾಲು ಸವಾಲುಗಳಂತೆ ಕಂಡವು. ಆಗ ಎನ್‌ಡಿಆರ್‌ಎಫ್ ತಂಡ ಮರದಿಂದ ಮರಕ್ಕೆ ಹಗ್ಗ ಕಟ್ಟಿ ರೋಪ್ ವೇ ನಿರ್ಮಿಸಿ ಕಾರ್ಯಾಚರಣೆ ಆರಂಭಿಸಿತು. ರೋಪ್ ವೇ ಮೂಲಕವೇ ಸಾಧ್ಯವಾದಷ್ಟು ಜನರನ್ನು ರಕ್ಷಣೆ ಮಾಡಲಾಯಿತು. ಆದರೆ ಮೃತರ ಸಂಖ್ಯೆ, ರಕ್ಷಣೆ ಮಾಡಬೇಕಾದವರ ಸಂಖ್ಯೆ ದೊಡ್ಡದಿದೆ. ಈ ರೋಪ್ ವೇ ಮೂಲಕ ಇದು ತುರ್ತಾಗಿ ಆಗುವ ಕೆಲಸವಲ್ಲ ಎಂಬುದು ಆ ಕ್ಷಣಕ್ಕೆ ಎಲ್ಲರಿಗೂ ಸ್ಪಷ್ಟವಾಗಿತ್ತು. ಹೀಗಾಗಿ ಬಿದಿರಿನ ಸೇತುವೆ ಕಟ್ಟಿದರು. ಆದರೆ ಹೀಗೆ ಕಟ್ಟಿದ ಸೇತುವೆ ಅರ್ಧ ದಿನದಲ್ಲಿ ಪ್ರವಾಹದಿಂದ ಮುಳುಗಡೆ ಆಯ್ತು. ಆಗಲೇ ಭಾರತೀಯ ಸೇನೆಯವರು ತಾತ್ಕಾಲಿಕವಾದ ಬೃಹತ್ ಕಬ್ಬಿಣದ ಸೇತುವೆ ಕಟ್ಟುವ ನಿರ್ಧಾರಕ್ಕೆ ಬಂದರು.
ಮತ್ತೊಬ್ಬ ಮಹಿಳಾ ಅಧಿಕಾರಿ ಎಂಟ್ರಿ!: ಆಗ ಸ್ಥಳಕ್ಕೆ ಎಂಟ್ರಿ ಕೊಟ್ಟರು ಮತ್ತೊಬ್ಬ ಮಹಿಳಾ ಸೇನಾಧಿಕಾರಿ. ಅವರ ಹೆಸರು ಮೇಜರ್ ಸೀತಾ ಅಶೋಕ್ ಶೆಲ್ಕೆ. ಮೇಜರ್ ಸೀತಾ ಅವರು ಸ್ಥಳಕ್ಕೆ ಬಂದು ಸೇತುವೆ ಪ್ಲಾನ್ ಸಿದ್ಧ ಮಾಡಿದರು. ಕೇವಲ 20 ಗಂಟೆಗಳಲ್ಲಿ 190 ಅಡಿಗಳಷ್ಟು ಉದ್ದದ ಬೈಲಿ ಸೇತುವೆ ಕಟ್ಟಿದರು. ಭಾರತೀಯ ಸೇನೆಯ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ಬಿರು ಮಳೆ ನಡುವೆಯೆ ಸೇತುವೆಯನ್ನು ಕಟ್ಟಿತು. ಮೇಜರ್ ಸೀತಾ ಈ ಬ್ರಿಡ್ಜ್ ಆಪರೇಷನ್ ನೇತೃತ್ವ ವಹಿಸಿಕೊಂಡು ಘಟನೆ ನಡೆದ ಒಂದು ದಿನದ ನಂತರ ಅಂದರೆ ಬುಧವಾರ ರಾತ್ರಿ 9.30 ಕ್ಕೆ ಸೇತುವೆ ಕಟ್ಟುವುದಕ್ಕೆ ಶುರು ಮಾಡಿದರು, ಗುರುವಾರ ಸಂಜೆ 5.30 ಕ್ಕೆ ಸೇತುವೆ ನಿರ್ಮಾಣ ಕಾರ್ಯ ಪೂರ್ಣವಾಗಿತ್ತು. ಮೇಜರ್ ಸೀತಾ ಅವರ ಟೀಂನ ಈ ಕಾರ್ಯದಿಂದ ದುರಂತದ ಕಾರ್ಯಾಚರಣೆಯ ವೇಗವೆ ಬದಲಾಗಿ ಬಿಟ್ಟಿತು. ಶವಗಳ ಹುಡುಕುವ ಕಾರ್ಯ, ಸಂತ್ರಸ್ತರ ರಕ್ಷಿಸುವ ಕಾರ್ಯಗಳು ಎಲ್ಲವೂ ಸೇತುವೆಯಿಂದಾಗಿ ಸಲೀಸಾಯಿತು.
ಇದು ನಿಜವಾದ ಮಾದರಿ!: ಹೀಗೆ ಒಂದು ಕಡೆಯಲ್ಲಿ ಸಾವಿರಾರು ಜನರು ಕಾರ್ಯಾಚರಣೆಯಲ್ಲಿ ತೊಡಗಿದ್ದರೆ ಮತ್ತೊಂದು ಕಡೆ ಸ್ಥಳೀಯ ಜನರು ಮಾನವೀಯತೆ ಮಳೆಯನ್ನೇ ಸುರಿಸಿ ಎಲ್ಲರಿಗೂ ಮಾದರಿಯಾದರು. ದುರಂತ ನಡೆದ ಕೆಲವೇ ಗಂಟೆಗಳಲ್ಲಿ ವಯನಾಡು ಭಾಗದ ಖಾಸಗಿ ಆಸ್ಪತ್ರೆಗಳು ತಮ್ಮ ಬಳಿ ಇದ್ದ ಆಂಬ್ಯುಲೆನ್ಸ್ ಗಳನ್ನು ಯಾರ ಮನವಿಗೂ ಕಾಯದೆ ದುರಂತ ನಡೆದ ಸ್ಥಳಕ್ಕೆ ತಂದು ನಿಲ್ಲಿಸಿದರು. ಹತ್ತಲ್ಲ ಇವತ್ತಲ್ಲ ನೂರಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳು ಬಂದು ಬೆಟ್ಟದ ಸಾಲುಗಳಲ್ಲಿ ನಿಂತಿ ದ್ದವು. ಆ ಭಾಗದ ಖಾಸಗಿ ಆಸ್ಪತ್ರೆಯವರು ಇಟ್ಟ ಈ ಮಾನವೀಯ ಹೆಜ್ಜೆ ಮಾದರಿ ಯಾಗಿದೆ. ದುರಂತದಲ್ಲಿ ಬದುಕಿ ಉಳಿದವರಿಗೆ ತುರ್ತು ಚಿಕಿತ್ಸೆಯನ್ನು ನೀಡಲು ಎಲ್ಲ ಖಾಸಗಿ । ಆಸ್ಪತ್ರೆಗಳೂ ಸ್ವಯಂ ಪ್ರೇರಿತವಾಗಿ 1 ಸಿದ್ದವಾಗಿದ್ದವು. ಇನ್ನೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಖಾಸಗಿ ಆಸ್ಪತ್ರೆಯ ವೈದ್ಯರು ರು ಸ್ವಯಂ ಸಯಂ ಪೇರಿತ ಪ್ರೇರಿತ ವಾಗಿ ವಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಬಂದು ಚಿಕಿತ್ಸೆ ನೀಡಲು ನೆರವಾದರು. ಇದಕ್ಕೆ ಯಾರ ಆದೇಶವೂ ಇರಲಿಲ್ಲ, ಯಾವ ಪ್ರಚಾರವೂ ಇರಲಿಲ್ಲ! ಮಾನವೀಯತೆ ಇನ್ನೂ ಇದೆ ಎಂಬುದು ಇಲ್ಲಿ ಹೆಜ್ಜೆ ಹೆಜ್ಜೆಗೂ ಸಾಬೀತಾಯಿತು (ವರದಿಗಾಗಿ ಮೈಸೂರಿನಿಂದ ತೆರಳಿದ್ದ ಚಾನೆಲ್ ವರದಿಗಾರ ಮಧುಸೂದನ್ ವರದಿ ಮಾಡುವ ವೇಳೆ ಕೈ ಮೂಳೆ ಮುರಿದುಕೊಂಡಿದ್ದರು. ಅವರನ್ನು ಇನ್ನಿಬ್ಬರು ವರದಿಗಾರರಾದ ವಿನೋದ್ ಪಡವರಹಳ್ಳಿ ಮತ್ತು ದಿಲೀಪ್ ಚೌಡಳ್ಳಿ ಚಿಕಿತ್ಸೆಗಾಗಿ ಹೈಟೆಕ್ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಏಕ್ಸ್ ರೇ ಸಮೇತ ಎಲ್ಲಾ ಚಿಕಿತ್ಸೆ ಮಾಡಿದ ವೈದ್ಯರಿಗೆ ಫೀಜ್ ಕೊಡಲು ಹೋಗಿದ್ದಾರೆ. ಆಗ ಆಸ್ಪತ್ರೆಯವರು ನೀವು ಇಲ್ಲಿಗೆ ಬಂದಿರುವುದು ನಮ್ಮವರ ಕಷ್ಟಕ್ಕೆ ಧ್ವನಿಯಾಗಲು. ಈ ವೇಳೆ ನಿಮಗೆ ತೊಂದರೆ ಆಗಿದೆ. ನಮಗೆ ಹಣ ಬೇಡ ಎಂದು ಹೇಳಿ ಕಳುಹಿಸಿದ್ದಾರೆ.)
ದುರಂತದಿಂದ ವಯನಾಡು ಭಾಗದ ಬಹುತೇಕ ಮನೆಗಳಲ್ಲಿ ಸೂತಕದ ಛಾಯೆ ಇತ್ತು. ಏಕೆಂದರೆ ಸತ್ತವರು ವಯನಾಡು ಭಾಗದ ಜನರ ಸಂಬಂಧಿಗಳು, ದೂರದ ಸಂಬಂಧಿಗಳು ಇದ್ದರು. ಹೀಗಿದ್ದರೂ ಕೂಡ ಈ ಭಾಗದ ಜನರು ಮಾನವೀಯತೆಯನ್ನು ನಿಷ್ಕಲ್ಮಶವಾಗಿ ತೋರಿಸಿದರು. ಸೂತಕದ ನೋವಿನ ಗೋಡೆಗಳನ್ನು ಕೆಡವಿ ಜಾತಿ, ಧರ್ಮಗಳ ಎಲ್ಲೆ ಮೀರಿ ಮಾನವೀಯ ಧರ್ಮವನ್ನು ಎತ್ತಿ ಹಿಡಿದರು. ಕಾರ್ಯಾಚರಣೆಗೆ ಮುಂದಾದ ಜನರ ರಕ್ಷಣೆಗೆ ಅವರು ನಿಂತರು. ಬೆಟ್ಟದ ತುದಿಯವರೆಗೂ ಬಂದು ಊಟ, ನೀರು, ಚಹ, ಬಿಸ್ಕೆಟ್ ಗಳನ್ನು ನೀಡಿದರು. ಒಬ್ಬರಲ್ಲ ಇಬ್ಬರಲ್ಲ ಐವತ್ತೂಕ್ಕೂ ಹೆಚ್ಚು ಟೀಂಗಳ ಯುವಕರು ದುರಂತದ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಜನರ ಯೋಗಕ್ಷೇಮ ನೋಡಿಕೊಂಡರು. ಸಮಯಕ್ಕೆ ಸರಿಯಾಗಿ ಊಟ, ನೀರು ಕೊಡುತ್ತಾ ನಮ್ಮ ಸಹಾಯಕ್ಕೆ ನೀವು ಬಂದಿದ್ದೀರಿ. ನಿಮ್ಮ ಯೋಗಕ್ಷೇಮ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಹೇಳುತ್ತಾ ಆ ಯುವಕರು ಓಡಾಡುತ್ತಿದ್ದರು. ಊಟ, ನೀರು ಕೊಟ್ಟು ಫೋಟೋ ತೆಗೆಸಿ ಪ್ರಚಾರ ಗಿಟ್ಟಿಸಿಕೊಳ್ಳುವ ಚಾಳಿ ಅವರಿಗೆ ಇರಲಿಲ್ಲ. ಫೋಟೋ ತೆಗೆಯುತ್ತೇವೆ ಅಂದರೂ ಬೇಡ. ಇದೆಲ್ಲಾ ಪ್ರಚಾರದ ಕೆಲಸ ಅಲ್ಲ ಅಂತಿದ್ದರು. ಇವರ ಈ ನಡೆ ಸದಾ ಕಾಲಕ್ಕೂ ಮಾದರಿ! ಹೀಗೆ ಸಾವಿನ ಮನೆಯಲ್ಲೂ ಹೆಜ್ಜೆ ಹೆಜ್ಜೆಗೂ ಆದರ್ಶದ ಮಾದರಿಗಳು ಸಿಕ್ಕವು.
ಮನುಷ್ಯ ದೇವರಾದ! ಪ್ರಾಣಿ ದೇವರಾಯ್ತು! ದೇವರು ಕಲ್ಲಾದ! ದೇವರ ನಾಡು ಕೇರಳದಲ್ಲಿ ನಡೆದ ಈ ದುರಂತದಲ್ಲಿ ಮನುಷ್ಯ ದೇವರಾದ! ಕಾಡು ಪ್ರಾಣಿ ದೇವರಾಯ್ತು! ಆದರೆ ದೇವರೆ ದೇವರಾಗಲಿಲ್ಲ ಎಂಬ ಸತ್ಯ ಕಾಣಿಸಿತು. ಜನರನ್ನು ಕಾಪಾಡಬೇಕಾದ ದೇವರು, ಅರೆಕ್ಷಣದಲ್ಲಿ ನೂರಾರು ಜನರನ್ನು ಬಲಿ ಪಡೆದ. ಸತ್ತವರು ತಾವು ಬದುಕಿದ್ದಾಗ ನಡೆಸುತ್ತಿದ್ದ ಪೂಜೆ, ಹರಕೆ, ಹೋಮ, ಹವನ ಯಾವುದೂ ಲೆಕ್ಕಕ್ಕೆ ಬರಲಿಲ್ಲ. ತನ್ನ ನಿರ್ಣಯದಂತೆ ಭಗವಂತ ಎಲ್ಲರನ್ನೂ ಗಂಗೆಯ ಒಡಲಲ್ಲಿ ಸೇರಿಸಿ ಬಿಟ್ಟ. ಆದರೆ, ದುರಂತ ನಡೆದ ಮೇಲೆ ಇಲ್ಲಿ ಮನುಷ್ಯರು ದೇವರಾಗಿ ಬಿಟ್ಟರು. ಕಾರ್ಯಾಚರಣೆಯಲ್ಲಿ ತೊಡಗಿದ್ದ ಸೇನೆಯವರು ತಮ್ಮ ಜೀವವನ್ನು ಒತ್ತೆ ಇಟ್ಟು ಜನರನ್ನು ರಕ್ಷಿಸಿದರು. ಸ್ಥಳೀಯ ಸಾಹಸಿ ಯುವಕರು ಸಾವಿನ ದಂಡೆಯಲ್ಲಿದ್ದ ಬಹುತೇಕರನ್ನು ಕಾಪಾಡಿದರು. ಈ ಮೂಲಕ ಹಲವು ಕುಟುಂಬಗಳ ಪಾಲಿಗೆ ಇವರು ದೇವರಾದರು. ಇನ್ನೂ ಪ್ರವಾಹದ ಸುಳಿಯಿಂದ ತಪ್ಪಿಸಿಕೊಂಡು ಬಂದಿದ್ದ ಮುಂಡಕ್ಕೆ ಗ್ರಾಮದ ವೃದ್ಧೆ ಸುಜಾತ ಮತ್ತು ಅವರ ಕುಟುಂಬ ಎತ್ತರದ ಬೆಟ್ಟ ಹತ್ತಿದ್ದರು. ಅಲ್ಲಿ ಅವರಿಗೆ ಎದುರಾಗಿದ್ದು ಕಾಡಾನೆ. ಕಾಡಾನೆ ನೋಡಿದವರಿಗೆ ಮುಗಿಯಿತು ನಮ್ಮ ಕಥೆ ಅಂತಾ ಅನ್ನಿಸಿದೆ. ತಕ್ಷಣ ಧೈರ್ಯ ಮಾಡಿ ಆನೆ ಮುಂದೆ ನಿಂತು ದುರಂತದಿಂದ ತಪ್ಪಿಸಿಕೊಂಡು ಬಂದಿದ್ದೇವೆ. ನೀನು ನಮಗೇನೂ ಮಾಡಬೇಡ ಅಂತಾ ಕಣ್ಣೀರಿಟ್ಟು ಕೈ ಮುಗಿದಿದ್ದಾರೆ. ಆಗ ಪವಾಡ ನಡೆದಿದೆ. ಕಾಡಾನೆ ಸುಮ್ಮನೆ ಸ್ವಲ್ಪ ದೂರಕ್ಕೆ ಹೋಗಿ ಮಲಗಿ ಇವರ ಕಾವಲು ಕಾದಿದೆ. ಬೆಳಿಗ್ಗೆಯವರೆಗೂ ಇವರ ಕಾವಲಿಗೆ ನಿಂತು ನಂತರ ಕಾಡು ಸೇರಿದೆ. ಇದು ಪವಾಡ ಅಲ್ಲದೆ ಇನ್ನೇನು?
ನಾಲ್ಕು ಕುಟುಂಬ ಉಳಿಸಿದ ಗಿಳಿ!: ಗಿಳಿಯೊಂದು ನಾಲ್ಕು ಕುಟುಂಬಗಳನ್ನು ಕಾಪಾಡಿದೆ. ಅಚ್ಚರಿ ಅನಿಸಿದರೂ ಇದು ಸತ್ಯ. ಚೂರಲ್ ಮಲೈನಲ್ಲಿ ವಾಸವಿದ್ದ ವಿನೋದ್ ತಮ್ಮ ಮನೆಯಲ್ಲಿ ಕಿಂಗಿಣಿ ಎಂಬ ಹೆಸರಿನ ಗಿಣಿ ಸಾಕಿದ್ದಾರೆ. ದುರಂತ ನಡೆಯುವ ಕೆಲ ಗಂಟೆಗ ಳಿಗೂ ಮೊದಲು ಗಿಳಿ ಜೋರಾಗಿ ಕೂಗಲು ಆರಂಭಿಸಿದೆ. ವಿನೋದ್ ಎಷ್ಟೆ ಸಮಾಧಾನ ಮಾಡಿದರೂ ಗಿಳಿಯ ಕೂಗಾಟ ನಿಂತಿಲ್ಲ. ಒಂದು ಹಂತದಲ್ಲಿ ಗಿಳಿ ತನ್ನ ರೆಕ್ಕೆಯನ್ನು ಪಂಜರಕ್ಕೆ ಜೋರಾಗಿ ಬಡಿದು ಬಡಿದು ಅದರ ರೆಕ್ಕೆಗಳೇ ಕಿತ್ತು ಬಂದಿವೆ. ಆಗ ವಿನೋದ್ ಇದು ಏನೋ ಅನಾಹುತದ ಮನ್ಸೂಚನೆ ಎಂದು ಅರಿತಿದ್ದಾರೆ. ತನ್ನ ನೆರೆಹೊರೆಯವರಿಗೂ ಈ ವಿಚಾರ ಹೇಳಿದ್ದಾರೆ. ಇದ್ದಾದ ಕೆಲ ಸಮಯದಲ್ಲೆ ಭಾರೀ ಪ್ರಮಾಣದ ಗುಡ್ಡ ಕುಸಿಯುವುದು ನೋಡಿದ್ದಾರೆ. ತಕ್ಷಣ ಇವರು ಹಾಗೂ ಇವರ ನಾಲ್ವರು ಸ್ನೇಹಿತರ ಕುಟುಂಬಗಳವರು ಸುರಕ್ಷಿತ ಸ್ಥಳ ಸೇರಿದ್ದಾರೆ. ನಂತರ ಉಂಟಾದ ಪ್ರವಾಹದ ಅಬ್ಬರಕ್ಕೆ ಈ ನಾಲ್ಕು ಕುಟುಂಬಗಳೂ ಇದ್ದ ಮನೆಗಳು ಕೊಚ್ಚಿ ಹೋಗಿವೆ. ಅಲ್ಲಿಗೆ ಗಿಳಿಯೂ ಈ ಕುಟುಂಬಗಳ ಪಾಲಿಗೆ ದೇವರಾಗಿದೆ! ಒಂದಂತೂ ಸತ್ಯ. ಈ ದುರಂತದಲ್ಲಿ ಸತ್ತವರನ್ನು ವಾಪಸ್ ತರಲು ಸಾಧ್ಯವಿಲ್ಲ. ಆದರೆ ದುರಂತದಿಂದ ನಾವು ಕಲಿಯಬೇಕಾದ ಪಾಠಗಳು ಬಹಳಷ್ಟಿವೆ. ಒಂದು ಮಹಾ ದುರಂತದ ಮೂಲಕ ಪ್ರಕೃತಿ ಜನರಿಗೆ ಬದುಕಿನ ಬಹು ದೊಡ್ಡ ದೊಡ್ಡ ಪಾಠ ಹೇಳಿಕೊಟ್ಟಿದೆ. ಸತ್ತವರನ್ನು ಮರೆಯುತ್ತೇವೆ ನಾವು. ಆದರೆ, ದುರಂತದಿಂದ ಕಲಿತ ಪಾಠ ಮರೆಯುವುದು ಬೇಡ. ಇದೇ ನಾವು ಆ ಮಡಿದ ಜೀವಗಳಿಗೆ ಸಲ್ಲಿಸುವ ಬಹು ದೊಡ್ಡ ಶ್ರದ್ಧಾಂಜಲಿ.
ದಾ.ರಾ. ಮಹೇಶ್ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…
ಮಂಡ್ಯ: ಇಂದಿನಿಂದ ( ಡಿಸೆಂಬರ್ 20 ) ಮೂರು ದಿನಗಳ ಕಾಲ ನಡೆಯಲಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ…
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…