Andolana originals

ವಿಕಸಿತ ಭಾರತದ ಕನಸು ನನಸಾಗಬೇಕಾದರೆ….

  • ಪ್ರೊ. ಆರ್‌.ಎಂ. ಚಿಂತಾಮಣಿ

ನಾವು ಸ್ವಾತಂತ್ರ್ಯ ಪಡೆದು ನೂರು ವರ್ಷಗಳಾಗುವ ಹೊತ್ತಿಗೆ ಭಾರತ ವಿಕಸಿತ ದೇಶವಾಗುತ್ತದೆ ಎಂದು ನಮ್ಮ ಪ್ರಧಾನಿಗಳು ೨೦೨೨ರಿಂದಲೇ ಹೇಳುತ್ತಾ ಬಂದಿದ್ದಾರೆ. ಅಂದರೆ ಎಲ್ಲ ದೃಷ್ಟಿಯಿಂದಲೂ ಅಭಿವೃದ್ಧಿ ಹೊಂದುವ ದೇಶವಾಗುತ್ತದೆ ಎಂದರ್ಥ.

ಶ್ರೀಮಂತ ದೇಶವೆಂದೂ ಅನ್ನಬಹುದು. ಇದು ಒಂದು ಉತ್ತಮ ಆಶಯ ಅಥವಾ ಗುರಿಯಂದೇ ಹೇಳಬಹುದು. ಪ್ರಧಾನಿಗಳ ಮಾತು ಅರ್ಥಪೂರ್ಣವಾಗಿಯೇ ಇದೆ. ಇದನ್ನು ಸಾಧಿಸಲು ಉಳಿದಿರುವ ೨೨ ವರ್ಷಗಳಿಗೂ ಸ್ವಲ್ಪ ಹೆಚ್ಚು ಸಮಯದಲ್ಲಿ ನಾವು ಆರ್ಥಿಕ ಮತ್ತು ಸಾಮಾಜಿಕ ರಂಗಗಳಲ್ಲಿ ಹೆಚ್ಚು ವೇಗದ ಹೆಜ್ಜೆಗಳನ್ನಿಡಬೇಕಾದ ಅವಶ್ಯಕತೆ ಇದೆ.

ನಾವೀಗ ಕೆಳ ಮಧ್ಯಮ ವರ್ಗದ ರಾಷ್ಟ್ರಗಳ ಗುಂಪಿನಲ್ಲಿ ಇದ್ದೇವೆ. ಇದು ಒಂದು ಕಠಿಣ ಸ್ಥಿತಿ ಎಂದೂ ಇಲ್ಲಿಂದ ಮೇಲ್-ಮಧ್ಯಮ ವರ್ಗಕ್ಕೆ ಏರಬೇಕಾದರೆ ಸಮಯ ಹೆಚ್ಚು ಬೇಕಾಗುತ್ತದೆ ಮತ್ತು ಕಠಿಣ ಪರಿಶ್ರಮ (ನಿರ್ಧಾರಗಳು) ಬೇಕು ಎಂದೂ ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ಅಲ್ಲಿಂದ ವಿಕಸಿತ ದೇಶವಾಗುವುದು ಅಷ್ಟೇನು ಕಷ್ಟವಾಗಲಿಕ್ಕಿಲ್ಲ. ರಾಷ್ಟ್ರೀಯ ಒಟ್ಟಾದಾಯ (ಜಿ. ಡಿ. ಪಿ. ) ಬೆಳೆದರೆ ಸಾಲದು. ಸರಾಸರಿ ತಲಾದಾಯವೂ (Per Capita Income) ವೇಗವಾಗಿ ಬೆಳೆಯಬೇಕು. ಸರಾಸರಿ ತಲಾ ಆದಾಯವೇ ಮೇಲ್ಮಟ್ಟದಲ್ಲಿದ್ದು ಅದಕ್ಕಿಂತ ಕಡಿಮೆ ಆದಾಯವಿರುವವರ ಸಂಖ್ಯೆ ಒಟ್ಟು ಜನಸಂಖ್ಯೆಯಲ್ಲಿ ತೀರಾ ಕಡಿಮೆ ಪ್ರಮಾಣದಲ್ಲಿರಬೇಕು.

ಇವರ ಆದಾಯವು ಜೀವನಾವಶ್ಯಕ ವಸ್ತು ಮತ್ತು ಸೇವೆಗಳಲ್ಲದೆ ಸೌಖ್ಯದ (comforts) ಅವಶ್ಯಕತೆಗಳನ್ನು ಪೂರೈಸಿಕೊಂಡು ಭವಿಷ್ಯತ್ತಿನ ಅನಿರೀಕ್ಷಿತ ಅನಿಶ್ಚಿತತೆಗಳನ್ನು ಎದುರಿಸಲು ಉಳಿತಾಯ ಮಾಡಿಕೊಳ್ಳುವ ಮಟ್ಟಕ್ಕಿರಬೇಕು. ಈ ಮಟ್ಟದಲ್ಲಿ ಬದುಕಲು ಸಾಧ್ಯವಾಗುವಂತೆ ಎಲ್ಲ ಕುಟುಂಬಗಳು ಉದ್ಯೋಗಾವಕಾಶ ಮತ್ತು ಆದಾಯ ಹೊಂದುವಂತೆ ನೀತಿಗಳು ರೂಪುಗೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರ, ಉದ್ದಿಮೆಗಳು ಮತ್ತು ರಾಜಕೀಯ ವ್ಯವಸ್ಥೆ ತುರ್ತಾಗಿ ಗಮನಿಸಬೇಕಾದ ಕೆಲವು ಅಂಶಗಳ ಬಗ್ಗೆ ಇಲ್ಲಿ ಸಂಕ್ಷಿಪ್ತವಾಗಿ ಚರ್ಚಿಸಲಾಗಿದೆ.

ಉತ್ಪಾದಕತೆ ಹೆಚ್ಚಿಸಬೇಕು: ನಮ್ಮಲ್ಲಿ ಇಂದಿಗೂ ಕೃಷಿ ಕಾರ್ಯಗಳಲ್ಲಿ ತೊಡಗಿ ಕೊಂಡವರ ಸಂಖ್ಯೆ ಹೆಚ್ಚಾಗಿದೆ. ಇವರಲ್ಲಿ ಕೃಷಿ ಕಾರ್ಮಿಕರ ಸಂಖ್ಯೆಯೂ ಹೆಚ್ಚು. ಗ್ರಾಮೀಣ ಉದ್ಯೋಗ ಭರವಸೆ ಕಾಯ್ದೆ ಅಡಿಯಲ್ಲಿ ನೋಂದಾಯಿಸಿಕೊಂಡವರ ಸಂಖ್ಯೆಯೇ ಇದಕ್ಕೆ ಸಾಕ್ಷಿ. ಇತ್ತೀಚೆಗೆ ಸ್ವಲ್ಪ ಕಡಿಮೆಯಾಗಿದ್ದರೂ ಇನ್ನೂ ಗಣನೀಯ ಸಂಖ್ಯೆಯಲ್ಲಿದ್ದಾರೆ. ಇವರೆಲ್ಲರ ವಯಸ್ಸು ಮತ್ತು ಸಾಮರ್ಥ್ಯಗಳನ್ನು ಗಮನಿಸಿದರೆ ಉತ್ಪಾದಕತೆ ತೀರಾ ಕಡಿಮೆ, ಇವರೆಲ್ಲರಿಗೂ ಹೆಚ್ಚಿನ ಕೌಶಲಗಳನ್ನು ಕಲಿಸಿ ಬೇರೆಡೆಗೆ ತೊಡಗಿಸಿ ಉತ್ಪಾದಕತೆ ಹೆಚ್ಚಿಸಬೇಕಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದರೂ ಸಾಕಾಗದು.

ಸ್ಥಳೀಯವಾಗಿ ಲಭ್ಯವಿರುವ ಕಚ್ಚಾ ಸರಕುಗಳು ಮತ್ತು ಮಾನವ ಸಂಪನ್ಮೂಲಗಳನ್ನು ಬಳಸಿಕೊಂಡು ಅತಿ ಸಣ್ಣ ಮತ್ತು ಸಣ್ಣ ಉದ್ದಿಮೆಗಳು ಹಳ್ಳಿಗಳಲ್ಲಿಯೇ ಹೆಚ್ಚಾಗಬೇಕಾಗಿದೆ. ಇದಕ್ಕೆ ಪೂರಕ ವಾತಾವರಣವನ್ನು ಸರ್ಕಾರ ನಿರ್ಮಿಸಬೇಕು. ಉತ್ಪನ್ನಗಳ ಮಾರಾಟಕ್ಕೂ ಪೂರಕ ಮೂಲ ಸೌಲಭ್ಯಗಳನ್ನು ಒದಗಿಸಬೇಕು. ತಮ್ಮ ಸಂಶೋಧನೆ ಮತ್ತು ಮಾಹಿತಿ ವಿಸ್ತರಣಾ ಕಾರ್ಯಗಳೊಂದಿಗೆ ಕೈಗಾರಿಕಾ ಸಂಘಟನೆಗಳೂ ಕೈಜೋಡಿಸಬೇಕು. ಇದರಿಂದ ಕೃಷಿಯಲ್ಲಿ ಉಳಿಯುವ ಮಾನವ ಸಂಪನ್ಮೂಲದ ಉತ್ಪಾದಕತೆಯೂ ಹೆಚ್ಚುತ್ತದೆ. ಕೃಷಿಯು ನೈಸರ್ಗಿಕ ಸ್ಥಿತಿಗತಿಗಳನ್ನೇ ಹೆಚ್ಚಾಗಿ ಅವಲಂಬಿಸಿರುವುದರಿಂದ ಉತ್ಪಾದನೆಯಲ್ಲಿ ದೊಡ್ಡ ಏರುಪೇರುಗಳಾಗುತ್ತವೆ.

ಇದು ಆದಾಯದ ಮೇಲೆ ಪರಿಣಾಮ ಬೀರುತ್ತದೆ. ರೈತರು ತಮ್ಮ ಉತ್ಪಾದನಾ ವೆಚ್ಚಗಳನ್ನು ಪ್ರತಿಸಲ ಬೆಳೆದ ಬೆಳೆಗಳ ಗಾತ್ರದ ಮೇಲೆ ನಿರ್ಧರಿಸುವುದು ಕಷ್ಟದ ಕೆಲಸ. ನಿರ್ಧರಿಸಿದರೂ ಅದು ಮಾರುಕಟ್ಟೆಯಲ್ಲಿ ವ್ಯಾವಹಾರಿಕವಾಗುವುದು ಇನ್ನೂ ಕಷ್ಟ. ಆದ್ದರಿಂದ ಕೈಗಾರಿಕೆಗಳಂತೆ ರೈತರು ತಮ್ಮ ಉತ್ಪನ್ನಗಳ ಬೆಲೆಯನ್ನು ನಿರ್ಧರಿಸಿದರೆ ಅದು ವ್ಯಾವಹಾರಿಕವಾಗಲಾರದು. ಆದ್ದರಿಂದ ಬೇಡಿಕೆ-ಪೂರೈಕೆ ಬೆಲೆ ನಿರ್ಧರಿಸುತ್ತವೆ. ಒಮ್ಮೊಮ್ಮೆ ಮಧ್ಯವರ್ತಿಗಳ ಕುತಂತ್ರಗಳೂ ಇರುತ್ತವೆ. ಇದೇ ಕಾರಣದಿಂದ ಸರ್ಕಾರದಿಂದ ಕನಿಷ್ಠ ಬೆಂಬಲ ಬೆಲೆಯ ಅವಶ್ಯಕತೆ ಇದೆ. ಅದನ್ನು ಕಾಯ್ದೆ ಬದ್ಧಗೊಳಿಸಬೇಕೆಂಬ ರೈತ ಸಂಘಟನೆಗಳ ಬೇಡಿಕೆಯು ನ್ಯಾಯಯುತವಾಗಿದೆ.

ಉತ್ಪಾದನಾ ಸಂಶೋಧನೆಯಲ್ಲಿ ಖಾಸಗಿ ಹೂಡಿಕೆಗಳು: ನಾವು ಜಗತ್ತಿನ ಐದನೇ ಅತಿ ದೊಡ್ಡ ಅರ್ಥ ವ್ಯವಸ್ಥೆ ಎಂದೂ ಮೂರನೇ ಸ್ಥಾನಕ್ಕೆ ಏರುತ್ತಿದ್ದೇವೆ ಎಂದೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇವೆ. ಆದರೆ ಉತ್ಪಾದನಾ ಸಂಶೋಧನೆ ಮತ್ತು ಅಭಿವೃದ್ಧಿ ವಿಷಯದಲ್ಲಿ ೨೧ನೇ ಸ್ಥಾನದಲ್ಲಿದ್ದೇವೆ ಎಂಬುದನ್ನು ಮರೆಮಾಚುತ್ತೇವೆ. ನಮ್ಮ ಖಾಸಗಿ ವಲಯದ ಕಂಪೆನಿಗಳು ತಮ್ಮ ಲಾಭದಲ್ಲಿ ತಮ್ಮಲ್ಲಿಯೇ ಸಂಶೋಧನೆ ಮತ್ತು ನಾವೀನ್ಯತೆಗಾಗಿ ಅತಿ ಕಡಿಮೆ ಖರ್ಚು ಮಾಡುತ್ತಿವೆ ಎಂದು ರಾಷ್ಟ್ರಮಟ್ಟದಲ್ಲಿಯ ವರದಿಗಳು ಹೇಳುತ್ತವೆ.

ನಮ್ಮ ದೇಶದಲ್ಲಿ ಜಿಡಿಪಿಯ ಶೇ. ೦. ೩ ಮಾತ್ರ ಖರ್ಚು ಮಾಡುತ್ತಿದ್ದು ಇದು ಜಾಗತಿಕ ಜಿಡಿಪಿಯ ಶೇ. ೧. ೫ ಇರುತ್ತದೆ. ಇದನ್ನು ಹೆಚ್ಚಿಸಬೇಕಾದರೆ ಕಂಪೆನಿಗಳಲ್ಲಿ ಹೆಚ್ಚು ಸಂಶೋಧನಾ ವೆಚ್ಚಗಳಿಗೆ ಇನ್ನಷ್ಟು ಉತ್ತೇಜನಗಳನ್ನು ಒದಗಿಸಬೇಕು ಮತ್ತು ಕಂಪೆನಿಗಳು ತಾವೇ ಸ್ವಯಂ ಪ್ರೇರಣೆಯಿಂದ ಸಂಶೋಧನೆ ಮತ್ತು ನಾವೀನ್ಯತೆಗಳಿಗೆ ಹೆಚ್ಚು ಖರ್ಚು ಮಾಡಿದರೆ ತಮಗೇ ಹೆಚ್ಚು ಅನುಕೂಲವಾಗುತ್ತದೆ. ತಮ್ಮ ಉತ್ಪಾದನೆಗಳಲ್ಲಿ ನಾವೀನ್ಯತೆ ತರಲು ಸಾಧ್ಯವಾಗುತ್ತದೆ. ಹೊಸತನ ಎಂದೂ ಪುಕ್ಕಟೆಯಾಗಿ ಬರುವುದಿಲ್ಲ.

ನಗರಗಳಲ್ಲಿ ಅರೆ ಉದ್ಯೋಗ ಮತ್ತು ನಿರುದ್ಯೋಗಗಳಿಂದ ಮಾನವ ಸಂಪನ್ಮೂಲ ಮತ್ತು ಭೌತಿಕ ಸಂಪನ್ಮೂಲಗಳ ಉತ್ಪಾದಕತೆ ಕಡಿಮೆ ಇರುವುದನ್ನು ಕಾಣಬಹುದು. ಅಭದ್ರತೆಯಿಂದಲೂ ಉತ್ಪಾದಕತೆ ಕಡಿಮೆಯಾಗುವ ಸಾಧ್ಯತೆ ಇದೆ. ಯಾವುದೇ ವೃತ್ತಿ ಮತ್ತು ನೌಕರಿಯಲ್ಲಿ ಆದಾಯದ ಖಾತ್ರಿ ಮತ್ತು ಭವಿಷ್ಯತ್ತಿನ ಭದ್ರತೆಗಳು ಉತ್ಪಾದಕತೆಯನ್ನು ಹೆಚ್ಚಿಸುತ್ತವೆ. ಹೊಸದನ್ನು ಕಲಿಯುವ ಮತ್ತು ತನ್ನ ಕೆಲಸದಲ್ಲಿ ಅಳವಡಿಸಿಕೊಂಡು ಹೊಸತನ ಮತ್ತು ನಾವಿನ್ಯತೆಗಳನ್ನು ತರುವತ್ತ ಆಸಕ್ತಿ ಹೆಚ್ಚುತ್ತದೆ. ಹೊಸ ಹೊಸ ಉದ್ಯೋಗಗಳೂ ಸೃಷ್ಟಿಯಾಗುತ್ತವೆ.

ಆದ್ದರಿಂದ ಸರ್ಕಾರ ಶಿಕ್ಷಣ, ಆರೋಗ್ಯ ಮತ್ತು ತರಬೇತಿಗಳಿಗೆ ಹೆಚ್ಚು ಬಂಡವಾಳ ವೆಚ್ಚಗಳನ್ನು ಮಾಡಬೇಕಲ್ಲದೆ ಅಪ್ರೆಂಟಿಸ್‌ಶಿಪ್ ಯೋಜನೆ ಇನ್ನೂ ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು. ಸರ್ಕಾರ ಮತ್ತು ಸರ್ಕಾರಿ ವಲಯಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮಗಳನ್ನು ತೀವ್ರವಾಗಿ ತೆಗೆದುಕೊಳ್ಳಬೇಕು. ಸರ್ಕಾರದ ಹೂಡಿಕೆಗಳು ಹೆಚ್ಚಾದರೆ ಖಾಸಗಿ ಹೂಡಿಕೆಗಳೂ ಹೆಚ್ಚುತ್ತವೆ. ಕೊನೆಯದಾಗಿ ರಾಜಕೀಯ ಮುಖಂಡರ ನಡವಳಿಕೆಯ ಬಗ್ಗೆ ಒಂದು ಮಾತು ಹೇಳಲೇಬೇಕು. ಇದು ರಾಜಕೀಯ ಅರ್ಥವ್ಯವಸ್ಥೆ ನಮ್ಮಲ್ಲಿ ಪಕ್ಷ ವ್ಯವಸ್ಥೆ ಇದೆ. ಪಕ್ಷಗಳು ಇರುವುದೇ ಜನರ ಕಲ್ಯಾಣಕ್ಕಾಗಿ ಚಿಂತಿಸಿ ರಾಜಕೀಯ ಮತ್ತು ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರುತ್ತವೆ. ಶಿಸ್ತು, ಸಂಯಮ ಬೇಕು. ಆದರೆ ಇಂದು ರಾಜಕೀಯ ಮುಖಂಡರು ಬಾಯಿ ಬಿಟ್ಟರೆ ವಿರೋಧ ಪಕ್ಷದವರನ್ನು ತೆಗಳುವುದು ಮತ್ತು ಆಧಾರವಿಲ್ಲದೆ ಆಪಾದನೆಗಳನ್ನು ಮಾಡುವುದು ಹೆಚ್ಚಾಗಿದೆ. ಉನ್ನತ ಸ್ಥಾನದಲ್ಲಿರುವವರೂ ಹಿಂದಿನವರನ್ನು ತೆಗಳುವುದು ನಿತ್ಯದ ಮಾತಾಗಿದೆ. ಸದನಗಳಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ಸೌಜನ್ಯದ ಎಲ್ಲೆ ಮೀರಿ ವರ್ತಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಇದರಿಂದ ಜನರಿಗೆ ಹೋಗುವ ಸಂದೇಶವೇನು? ಎಲ್ಲ ಪಕ್ಷಗಳೂ ತಮ್ಮ ನಡತೆಯನ್ನು ತಿದ್ದಿಕೊಳ್ಳಲೇಬೇಕು.

 

andolana

Recent Posts

ಮಳವಳ್ಳಿ| ಆಸ್ತಿಗಾಗಿ ತಂದೆಯನ್ನೇ ಕೊಂದ ಪಾಪಿ ಮಗ

ಮಂಡ್ಯ: ಆಸ್ತಿಗಾಗಿ ತಂದೆಯನ್ನೇ ಪಾಪಿ ಮಗನೋರ್ವ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿಕೋಡಿಯಲ್ಲಿ ನಡೆದಿದೆ. ಗ್ರಾಮದ…

3 hours ago

ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ನಿವೃತ್ತ ಯೋಧ ಆತ್ಮಹತ್ಯೆ

ಹಾಸನ: ನಿವೃತ್ತ ಯೋಧರೊಬ್ಬರು ಪಿಸ್ತೂಲ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆ ಬೇಲೂರು…

3 hours ago

ರೈತ ದಿನಾಚರಣೆಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಬೇಕು: ರೈತ ಮುಖಂಡ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಆಗ್ರಹ

ಮೈಸೂರು: ಈ ದೇಶದಲ್ಲಿ ಬಂಡವಾಳಶಾಹಿಗಳಾಗಲೀ, ಸಕ್ಕರೆ ಕಾರ್ಖಾನೆ ಮಾಲೀಕರಾಗಲೀ ಅಥವಾ ಉದ್ಯಮಿಗಳು ಸೇರಿ ಯಾರೂ ಸಹ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆದರೇ,…

4 hours ago

ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಭೈರತಿ ಬಸವರಾಜ್‌ಗೆ ಬಿಗ್‌ ಶಾಕ್‌

ಬೆಂಗಳೂರು: ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್‌ ಜಾಮೀನು ಅರ್ಜಿಯನ್ನು ಕೋರ್ಟ್‌ ವಜಾಗೊಳಿಸಿದೆ. ಈ…

5 hours ago

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರ ಬರೆದ ಎಚ್.ಡಿ.ಕುಮಾರಸ್ವಾಮಿ: ಕಾರಣ ಇಷ್ಟೇ

ನವದೆಹಲಿ: ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಕರಾವಳಿ ಪ್ರದೇಶಗಳ ನಡುವೆ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ವಂದೇ ಭಾರತ್‌ ಎಕ್ಸ್…

5 hours ago

ಹಾಸನ| ಮಗುವಿಗೆ ಜನ್ಮ ನೀಡಿದ ಬಾಲಕಿ: ಆರೋಪಿ ಬಂಧನ

ಹಾಸನ: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಚಾಕೋಲೇಟ್‌ ನೀಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಹಿನ್ನೆಲೆಯಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ ಘಟನೆ…

5 hours ago