ಅಣ್ಣೂರು ಸತೀಶ್
ಜೀವನದ ಉದ್ದಕ್ಕೂ ರೈತರ ಏಳಿಗೆಗಾಗಿ ಶ್ರಮಿಸಿದ ಹಿರಿಯ ಗಾಂಧಿವಾದಿ
ಭಾರತೀನಗರ: ಮಂಡ್ಯ ಜಿಲ್ಲೆಯನ್ನು ರಾಜಕೀಯ, ಆರ್ಥಿಕ, ಶೈಕ್ಷಣಿಕ, ಧಾರ್ಮಿಕ, ಆರೋಗ್ಯ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದ ಮಾಜಿ ಸಚಿವರು, ಸಂಸದರು ಹಾಗೂ ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷರಾಗಿದ್ದ ಗಾಂಧಿವಾದಿ ಡಾ.ಜಿ.ಮಾದೇಗೌಡರು ನಮ್ಮನ್ನು ಅಗಲಿ ಇಂದಿಗೆ ೪ ವರ್ಷ ಕಳೆದರೂ ಅವರ ಸಾಧನೆ ಅಮರ.
ಮದ್ದೂರು ತಾಲ್ಲೂಕಿನ ಗುರುದೇವರಹಳ್ಳಿ ಗ್ರಾಮದಲ್ಲಿ ೧೯೨೮ರಲ್ಲಿ ಹುಟ್ಟಿದ ಮಾದೇಗೌಡರು ಬಿಎ, ಎಲ್ ಎಲ್‌ಬಿ ಶಿಕ್ಷಣ ಪಡೆದು ಕೃಷಿಕರು, ವಕೀಲರು, ರಾಜಕಾರಣಿ ಹಾಗೂ ಸಮಾಜ ಸೇವಕರಾಗಿ ಮಕ್ಕಳಿಗೆ ಶಿಕ್ಷಣ ನೀಡಿ, ರೈತರಿಗಾಗಿ ಕಾರ್ಖಾನೆ ತಂದು ಧಾರ್ಮಿಕವಾಗಿ ಆತ್ಮಲಿಂಗೇಶ್ವರ ದೇವಸ್ಥಾನವನ್ನು ನಿರ್ಮಿಸಿ ಜನರ ಹೃದಯದಲ್ಲಿ ಅಚ್ಚಳಿಯದೇ ಉಳಿದಿರುವ ಧೀಮಂತ ನಾಯಕರಾಗಿದ್ದಾರೆ.
ರಾಜಕೀಯ ಪ್ರವೇಶ: ೧೯೫೯ರಲ್ಲಿ ತಾಲ್ಲೂಕು ಬೋರ್ಡ್ ಚುನಾವಣೆಯ ಮೂಲಕ ರಾಜಕೀಯ ಪ್ರವೇಶಿಸಿದ ಮಾದೇಗೌಡರು ಅಭೂತಪೂರ್ವ ಗೆಲುವು ಸಾಧಿಸಿ ರಾಜಕೀಯ ಜೀವನಕ್ಕೆ ನಾಂದಿಯಾಡಿ, ಕಿರುಗಾವಲು ವಿಧಾನಸಭಾ ಕ್ಷೇತ್ರದಿಂದ ೧೯೬೨, ೧೯೬೭, ೧೯೭೨, ೧೯೭೮, ೧೯೮೩, ೧೯೮೫ರವರೆಗೆ ಸತತವಾಗಿ ಸ್ಪರ್ಧಿಸಿ ೬ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
ನಂತರ ಮಂಡ್ಯ ಲೋಕಸಭಾ ಕ್ಷೇತ್ರದಿಂದ ೧೯೮೯, ೧೯೯೫ರಲ್ಲಿ ಎರಡು ಬಾರಿ ಸ್ಪಽಸಿ ಲೋಕಸಭಾ ಸದಸ್ಯರಾಗಿದ್ದರು. ೧೯೮೦-೮೩ರವರೆಗೆ ದಿ.ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರ ಸಂಪುಟದಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವರಾಗಿ ಸೇವೆ ಸಲ್ಲಿಸಿ ರಾಜ್ಯಕ್ಕೆ ಹಲವು ಕೊಡುಗೆಗಳನ್ನು ನೀಡಿದರು.
ಶಿಕ್ಷಣ: ಮದ್ದೂರು ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಬೇಕೆಂಬ ಹಂಬಲದೊಂದಿಗೆ ಕಾಳಮುದ್ದನ ದೊಡ್ಡಿಯಲ್ಲಿ ೧೯೬೨ರಲ್ಲಿ ಭಾರತೀ ಎಜುಕೇಷನ್ ಟ್ರಸ್ಟ್ ಸ್ಥಾಪಿಸಿದ ಜಿ.ಮಾದೇಗೌಡರು, ಅದರ ಸಂಸ್ಥಾಪಕ ಅಧ್ಯಕ್ಷರಾಗಿ ಭಾರತೀ ಪ್ರೌಢಶಾಲೆಯನ್ನು ೨೩ ವಿದ್ಯಾರ್ಥಿಗಳಿಂದ ಆರಂಭಿಸಿ ವಿದ್ಯಾರ್ಥಿಗಳಿಗೆ ತಾವೇ ಶಿಕ್ಷಕರಾಗಿ ಅಕ್ಷರ ಅಭ್ಯಾಸ ಮಾಡಿಸಿದ ಪರಿಶ್ರಮದ ಪ್ರತಿಫಲವಾಗಿ ಇಂದು ಸುಮಾರು ೨೭ ಶಾಖೆಗಳೊಂದಿಗೆ ಪ್ರಾಥಮಿಕ ಶಾಲೆಯಿಂದ ಹಿಡಿದು ಉನ್ನತ ವ್ಯಾಸಂಗದವರಗೆ ಗ್ರಾಮೀಣ ಮಕ್ಕಳಿಗಲ್ಲದೇ ಹೊರ ಜಿಲ್ಲೆ ಮತ್ತು ರಾಜ್ಯದ ವಿದ್ಯಾರ್ಥಿಗಳಿಗೂ ಇಲ್ಲಿ ಶಿಕ್ಷಣ ದೊರೆಯುತ್ತಿದೆ. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗವನ್ನು ನೀಡಲಾಗಿದೆ. ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಹಾಗೂ ಮದ್ದೂರು ತಾಲ್ಲೂಕಿನ ಹನುಮಂತನಗರದಲ್ಲಿಯೂ ಶಾಲಾ ಕಾಲೇಜುಗಳನ್ನು ಸ್ಥಾಪಿಸಿರುವುದು ಮಾದೇಗೌಡರ ಶೈಕ್ಷಣೀಕ ಚಿಂತನೆಗೆ ಹಿಡಿದ ಕೈಗನ್ನಡಿಯಾಗಿದೆ.
ಕಾವೇರಿ ಹೋರಾಟ: ಮಂಡ್ಯ ಜಿಲ್ಲೆಯನ್ನು ಹಸಿರು ಮಾಡುವುದರ ಜೊತೆಗೆ ಇಲ್ಲಿನ ಜನರ ಉಸಿರಾಗಿದ್ದ ಕಾವೇರಿ ನೀರು ಸುಪ್ರೀಂ ಕೋರ್ಟ್‌ನ ತೀರ್ಮಾನದಿಂದ ಮಂಡ್ಯ ಜನತೆಗೆ ತಪ್ಪಿ ಹೋಗುವ ಸಾಧ್ಯತೆಯ ಸುಳಿವು ಸಿಕ್ಕ ಮಾದೇಗೌಡರು, ಕಾವೇರಿ ನೀರಿನ ಹಕ್ಕಿಗಾಗಿ ಮಂಡ್ಯ ಜಿಲ್ಲೆಯ ರೈತರಿಗಾಗಿ ಬೀದಿಗಿಳಿದರು. ರೈತರು ಮಾದೇಗೌಡರನ್ನು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಮಾಡಿದರು. ಕಾವೇರಿ ಹೋರಾಟಕ್ಕೆ ಜನರನ್ನು ಸಜ್ಜುಗೊಳಿಸುವುದು, ಸರ್ವ ಪಕ್ಷಗಳ ನಾಯಕರನ್ನು ಕಾವೇರಿ ಹೋರಾಟಕ್ಕೆ ಒಂದುಗೂಡಿಸುವ ಕೆಲಸವನ್ನು ಮಾಡಿದ ಮಾದೇಗೌಡರು, ೫೫ ದಿನಗಳ ಅಹಿಂಸಾತ್ಮಕ ಹೋರಾಟದೊಂದಿಗೆ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.
ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ರೈತರಿಗೆ ಆಗುವ ಅನ್ಯಾಯವನ್ನು ಖಂಡಿಸಿದರು. ಹೋರಾಟ ತೀವ್ರಗೊಂಡ ಸಂದರ್ಭದಲ್ಲಿ ಮಾದೇಗೌಡರನ್ನು ಬಂಧಿಸುವ ಸಂದರ್ಭ ಬಂದಾಗ ರೈತರಿಗಾಗಿ ಜೈಲಿಗೆ ಹೋಗಲೂ ಸಿದ್ಧ ಎಂದು ಜೈಲುವಾಸವನ್ನು ಅನುಭವಿಸಿ ಮಂಡ್ಯ ಜಿಲ್ಲೆಯ ರೈತರಿಗೆ ನ್ಯಾಯ ಕೊಡಿಸುವಲ್ಲಿ ಸಫಲರಾದರು. ಬಾಲ್ಯದಿಂದ ಹಿಡಿದು ಜೀವನದುದ್ದಕ್ಕೂ ಹೋರಾಟದ ಹಾದಿಯಲ್ಲಿ ಬದುಕಿದ ಮಾದೇಗೌಡರು ಇಂದಿಗೂ ರೈತನ ಮನದಲ್ಲಿ ಜೀವಂತವಾಗಿ ಉಳಿದಿದ್ದಾರೆ.
ಕಾಳಮುದ್ದನದೊಡ್ಡಿ ಭಾರತೀ ನಗರವಾಯ್ತು: ಮದ್ದೂರು ತಾಲ್ಲೂಕಿನ ಕಾಳಮುದ್ದನದೊಡ್ಡಿ ಒಂದು ಹೋಬಳಿ ಆಗಲೂ ಯೋಗ್ಯವಿಲ್ಲದ ಗ್ರಾಮವಾಗಿತ್ತು. ಮದ್ದೂರು, ಮಳವಳ್ಳಿ, ಹಲಗೂರು ಮಂಡ್ಯಕ್ಕೆ ಹೋಗುವ ಮಧ್ಯೆದಲ್ಲಿ ಸಿಗುವ ಕಾಳಮುದ್ದನ ದೊಡ್ಡಿಯಲ್ಲಿ ಪ್ರೌಢಶಾಲೆಯನ್ನು ಆರಂಭಿಸಿದರೆ ಎಲ್ಲ ಭಾಗದ ವಿದ್ಯಾರ್ಥಿಗಳಿಗೂ ಅನುಕೂಲವಾಗುತ್ತದೆ ಎಂದು ಅರಿತ ಮಾದೇಗೌಡರು. ಭಾರತೀ ಪ್ರೌಢಶಾಲೆಯನ್ನು ಆರಂಭಿಸಿದರು.
ಮಳವಳ್ಳಿಗೆ ಹೋಗಬೇಕಿದ್ದ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯನ್ನು ಮೆಳ್ಳಹಳ್ಳಿ ಎಂದು ಹೆಸರು ಬದಲಾಯಿಸಿ ಕಾರ್ಖಾನೆಯನ್ನು ತಂದರು. ಭಾರತೀ ಎಜುಕೇಷನ್ ಟ್ರಸ್ಟ್ ದಿನದಿಂದ ದಿನಕ್ಕೆ ದೊಡ್ಡ ಮಟ್ಟದಲ್ಲಿ ಬೆಳೆದ ಪರಿಣಾಮ ಕಾಳಮುದ್ದನ ದೊಡ್ಡಿ ಭಾರತೀನಗರವಾಗಿ ಬದಲಾಯಿತು. ಭಾರತೀನಗರ ವ್ಯಾಪಾರ ಕೇಂದ್ರವಾಗಿ ಆರಂಭಗೊಂಡು ಇಂದು ವಿಶಾಲ ರಸ್ತೆ, ಹಲವು ಬ್ಯಾಂಕುಗಳು ಸೇರಿದಂತೆ ದೊಡ್ಡ ಮಟ್ಟದ ಅಂಗಡಿಗಳಿಂದ ರೂಪುಗೊಂಡು ತಾಲ್ಲೂಕು ಮಟ್ಟಕ್ಕಿಂತಲೂ ಹೆಚ್ಚಾಗಿ ಬೆಳೆಯಲು ಮಾದೇಗೌಡರೇ ಕಾರಣರಾಗಿದ್ದಾರೆ.
ಆರೋಗ್ಯ: ಗ್ರಾಮೀಣ ಜನರಿಗೆ ಆರೋಗ್ಯ ನೀಡಬೇಕೆಂಬ ಆಕಾಂಕ್ಷೆಯೊಂದಿಗೆ ಮದ್ದೂರು ತಾಲ್ಲೂಕಿನ ಹನುಮಂತನಗರದಲ್ಲಿ ಪ್ರಕೃತಿ ಆರೋಗ್ಯಧಾಮವನ್ನು ಸ್ಥಾಪಿಸಿದರು. ನಂತರ ಭಾರತೀನಗರದಲ್ಲಿ ಮಾದೇಗೌಡ ಆಸ್ಪತ್ರೆಯನ್ನು ಸ್ಥಾಪಿಸಿ ಗ್ರಾಮೀಣ ಜನರಿಗೆ ಆರೋಗ್ಯವನ್ನು ನೀಡಲಾಗುತ್ತಿದೆ.
ಧಾರ್ಮಿಕತೆಗೆ ಒತ್ತು: ಗ್ರಾಮೀಣ ಜನರಿಗೆ ಉತ್ತಮ ದೇವಸ್ಥಾನ ಸಿಗಬೇಕೆಂಬ ಹಿನ್ನೆಲೆಯಲ್ಲಿ ತಾಲ್ಲೂಕಿನಹನುಮಂತನಗರದಲ್ಲಿ ಆತ್ಮಲಿಂಗೇಶ್ವರ ದೇವಸ್ಥಾನವನ್ನು ನಿರ್ಮಿಸಿದರು.
ಪ್ರತಿ ಶಿವರಾತ್ರಿಯಂದು ವಿಶೇಷ ಜಾತ್ರೆ ನಡೆಯುವಂತೆ ಕಾರ್ಯಕ್ರಮ ರೂಪಿಸಿದರು. ರೈತರ ಆನುಕೂಲಕ್ಕಾಗಿ ದನಗಳ ಜಾತ್ರೆಯನ್ನು ಆರಂಭಿಸಿದ್ದು, ಇಂದಿಗೂ ಧಾರ್ಮಿಕ ಆಚರಣೆಗಳು ಮುಂದುವರೆದುಕೊಂಡು ಬರುತ್ತಿದೆ.
ಡಾಕ್ಟರೇಟ್ ಗೌರವ: ಮಂಡ್ಯ ಜಿಲ್ಲೆಯನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ ಮಹಾನುಭಾವರಲ್ಲಿ ಮಾದೇಗೌಡರದ್ದು ಎದ್ದು ಕಾಣುವ ವ್ಯಕ್ತಿತ್ವ. ಜಿ. ಮಾದೇಗೌಡ ಅವರು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಧಾರ್ಮಿಕ, ಆರೋಗ್ಯ ಕ್ಷೇತ್ರಗಳಲ್ಲಿ ಸಲ್ಲಿಸಿರುವಗಣನೀಯ ಸಾಧನೆಗಾಗಿ ೨೦೧೨ರ ಜನವರಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದರು.
ಭತ್ತ, ರಾಗಿಗೆ ಮಾದೇಗೌಡರ ಹೆಸರಿಡಲು ಒತ್ತಾಯ: ಭತ್ತ ಅಥವಾ ರಾಗಿಗೆ ರೈತ ಹೋರಾಟಗಾರ ಡಾ.ಜಿ.ಮಾದೇಗೌಡರ ಹೆಸರಿಡಬೇಕೆಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರೂ ಸರ್ಕಾರವನ್ನು ಒತ್ತಾಯಿಸಿದ್ದಾರೆ. ತಮ್ಮ ಜೀವನದ ಉದ್ದಕ್ಕೂ ರೈತರ ಏಳಿಗೆಗಾಗಿ ಶ್ರಮಿಸಿದ ಮಾದೇಗೌಡರ ಹೆಸರು ಶಾಶ್ವತವಾಗಿ ಉಳಿಯುವಂತೆ ಭತ್ತ ಅಥವಾ ರಾಗಿಗೆ ಅವರ ಹೆಸರನ್ನು ನಾಮಕರಣ ಮಾಡಬೇಕೆಂಬುದು ಮಂಡ್ಯ ಜಿಲ್ಲೆಯ ರೈತರ ಒಕ್ಕೊರಲಿನ ಒತ್ತಾಯವಾಗಿದೆ.
ಬದುಕಿನ ಪಯಣದಲ್ಲಿ ಸಾಕ್ಷಿಗಳ ಗುಡ್ಡೆಯನ್ನು ಕಟ್ಟಿಕೊಂಡು ಬಂದ ಮಾಜಿ ಸಂಸದ ಜಿ.ಮಾದೇಗೌಡರು ತಮ್ಮ ೯೪ನೇ ವಯಸ್ಸಿನಲ್ಲಿ ಜು.೧೭, ೨೦೨೧ರಲ್ಲಿ ನಿಧನ ಹೊಂದಿದರು.
ಮಾದೇಗೌಡರಿಗೆ ಪ್ರಿಯವಾದ ಭೂಮಿ ಹನುಮಂತನಗರದ ಆತ್ಮಲಿಂಗೇಶ್ವರ ದೇವಸ್ಥಾನದ ಸಮೀಪದಲ್ಲಿ ಅಂತ್ಯ ಸಂಸ್ಕಾರವನ್ನು ನೆರೆವೇರಿಸಲಾಯಿತು. ಅವರು ಅಗಲಿ ಇಂದಿಗೆ ೪ ವರ್ಷವಾದರೂ ಅವರ ಸಾಧನೆ ಜೀವಂತವಾಗಿದೆ.
” ಗಾಂಧಿ ತತ್ವದಡಿಯಲ್ಲಿ ಜೀವನ ಸಾಗಿಸಿದ ಡಾ.ಜಿ.ಮಾದೇಗೌಡರು ತಮ್ಮ ಜೀವನವನ್ನು ಸಾರ್ವಜನಿಕರ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದರು. ಮಾದೇಗೌಡರ ಹೆಸರು ಶಾಶ್ವತವಾಗಿ ಉಳಿಯುವಂತೆ ಸರ್ಕಾರ ಭತ್ತ ಅಥವಾ ರಾಗಿ ತಳಿಗೆ ಮಾದೇಗೌಡರ ಹೆಸರನ್ನು ಇಡಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ.”
ಬಿ.ಎಂ.ನಂಜೇಗೌಡ, ಕಾರ್ಯದರ್ಶಿ, ಭಾರತೀ ಎಜುಕೇಷನ್ ಟ್ರಸ್ಟ್, ಭಾರತೀನಗರ
ಮಡಿಕೇರಿ: ಮಾರ್ಚ್‌ನಲ್ಲಿ ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲಲಿ ನಡೆದಿದ್ದ ನಾಲ್ವರ ಹತ್ಯೆ ಪ್ರಕರಣ ಸಂಬಂಧ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿ…
ಮೈಸೂರು: ಮೈಸೂರಿನ ಅರಮನೆ ಆವರಣದಲ್ಲಿ ಡಿಸೆಂಬರ್.21ರಿಂದ 31ರವರೆಗೆ ಜರುಗಲಿರುವ ಪ್ರತಿಷ್ಠಿತ ಮಾಗಿ ಉತ್ಸವದ ಅಂಗವಾಗಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನಕ್ಕೆ ಅಂತಿಮ…
ಕೊಚ್ಚಿ: ಖ್ಯಾತ ಮಲಯಾಳಂ ನಟ ಹಾಗೂ ನಿರ್ದೇಶಕ ಶ್ರೀನಿವಾಸ್ ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಹಲವು ವರ್ಷಗಳಿಂದ ವಿವಿಧ…
ಚಾಮರಾಜನಗರ: ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲ್ಲೂಕುಗಳ ಗ್ರಾಮಸ್ಥರಲ್ಲಿ ವ್ಯಾಘ್ರಗಳ ಆತಂಕ ಮನೆ ಮಾಡಿದೆ. ಒಟ್ಟಿಗೆ ಐದು ಹುಲಿಗಳು ರಸ್ತೆಯಲ್ಲಿ ಹಾದು…
ಹಾಸನ: ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಇಬ್ಬರು ಬಲಿಯಾಗಿರುವ ಘಟನೆ ನಡೆದಿದೆ. ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ದೊಡ್ಡಳ್ಳಿ ಗ್ರಾಮದ ಸುಧಾಮಣಿ ಹಾಗೂ…
ಗುವಾಹಟಿ: ರೈಲು ಡಿಕ್ಕಿ ಹೊಡೆದ ಪರಿಣಾಮ ಏಳು ಆನೆಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಒಂದು ಆನೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಸ್ಸಾಂನ…