Andolana originals

ಹೊರವಲಯದ ನಿವೇಶನಗಳಿಗೆ ಹೆಚ್ಚಾಗಲಿದೆ ಮತ್ತಷ್ಟು ಬೇಡಿಕೆ

ಮೈಸೂರು: ನಗರದ ಹೊರವಲಯದ ನಾಲ್ಕು ದಿಕ್ಕುಗಳಲ್ಲಿರುವ ಹಲವು ಪ್ರದೇಶಗಳನ್ನು ಸೇರಿಸಿ ಗ್ರೇಡ್- ೧ ಮೈಸೂರು ಮಹಾನಗರ ಪಾಲಿಕೆಯನ್ನಾಗಿ ರಚಿಸಲು ರಾಜ್ಯಸರ್ಕಾರ ಹಸಿರು ನಿಶಾನೆ ತೋರಿ ಪ್ರಕ್ರಿಯೆ ಶುರು ಮಾಡಿದ್ದು, ಇದರಿಂದ ನಗರದ ಹೊರವಲಯದಲ್ಲಿರುವ ನಿವೇಶನಗಳಿಗೆ ಮತ್ತಷ್ಟು ಬೇಡಿಕೆ ಹೆಚ್ಚಾಗಲಿದೆ.

ಎರಡು ದಶಕಗಳಿಂದ ಬ್ಯಾಂಕ್‌ನಿಂದ ಸಾಲ ಪಡೆದು ಬಡಾವಣೆಗಳನ್ನು ರಚಿಸಿ ಮಾರಾಟಕ್ಕಾಗಿ ಕಾದಿರುವ ವಿವಿಧ ಅಳತೆಯ ನಿವೇಶನಗಳ ದರವೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುವ ನಿರೀಕ್ಷೆ ಇದೆ. ನಗರ ಪಾಲಿಕೆ ಸುತ್ತಮುತ್ತ ಇರುವ ೫ ನಗರ ಸ್ಥಳೀಯ ಸಂಸ್ಥೆಗಳು, ೭ ಗ್ರಾಮ ಪಂಚಾಯಿಗಳ ೨೦ ಗ್ರಾಮಗಳನ್ನು ಒಟ್ಟು ಸೇರಿಸಿ ಗ್ರೇಡ್ ೧ ನಗರ ಪಾಲಿಕೆ ರಚಿಸಲು ಉದ್ದೇ ಶಿಸಲಾಗಿದೆ. ಈ ಪ್ರದೇಶದಲ್ಲಿ ಈಗಾಗಲೇ ಹಲವಾರು ಬಡಾವಣೆಗಳು ನಿರ್ಮಾಣಗೊಂಡು ನಿವೇಶನಗಳು ಹಂಚಿಕೆಯಾಗಿದ್ದು, ಇನ್ನೂ ಹಲವಾರು ಬಡಾವಣೆಗಳು ನಿರ್ಮಾಣ ಆಗುತ್ತಿವೆ. ಈ ಎಲ್ಲ ಪ್ರದೇಶಗಳು ಇನ್ನು ಮುಂದೆ ಮೈಸೂರು ನಗರ ವ್ಯಾಪ್ತಿಗೆ ಒಳಪಡುವ ಹಿನ್ನೆಲೆಯಲ್ಲಿ ಸಹಜವಾಗಿಯೇ ನಿವೇಶನಗಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದ್ದು, ಇದೇ ನೆಪದಲ್ಲಿ ನಿವೇಶನಗಳ ಬೆಲೆ ಏರಿಕೆಯಾಗಲಿದೆ. ಬೆಂಗಳೂರಿನಲ್ಲಿ ಸಂಪಾದನೆ ಮಾಡಿ ಕೊನೆಯಲ್ಲಿ ಮೈಸೂರಿನಲ್ಲಿ ಸುಂದರವಾದ ಮನೆ ಕಟ್ಟಿಸಿಕೊಂಡು ವಾಸಮಾಡಬೇಕೆಂಬ ಮನಸ್ಸಿನವರು ಹೆಚ್ಚಾಗಿ ಮುಖ ಮಾಡಿರುವುದರಿಂದ ಈಗ ಮಾರಾಟವಾಗದೆ ಉಳಿದಿರುವ ನಿವೇಶನಗಳಿಗೂ ಶುಕ್ರದೆಸೆ ತಿರುಗಲಿದೆ.

ಹೂಡಿಕೆಗೆ ಸೂಕ್ತ: ಮೈಸೂರನ್ನು ನಿವೃತ್ತರ ಸ್ವರ್ಗ ಎಂದು ಕರೆಯಲಾಗುತ್ತದೆ. ಮೈಸೂರು ಯೋಜನಾಬದ್ಧವಾಗಿ ನಿರ್ಮಾಣ ಗೊಂಡಿರುವುದೇ ಇದಕ್ಕೆ ಪ್ರಮುಖ ಕಾರಣ. ಇಲ್ಲಿ ವಿಶಾಲವಾದ ರಸ್ತೆಗಳು, ಉದ್ಯಾನಗಳು ಹಾಗೂ ಉತ್ತಮ ವಾತಾವರಣ ಇರುವ ಹಿನ್ನೆಲೆಯಲ್ಲಿ ಜನರು ಸಹಜವಾಗಿಯೇ ಇಲ್ಲಿ ನೆಲೆಸಲು ಬಯಸುತ್ತಾರೆ. ಹೀಗಾಗಿ ಮೈಸೂರಿನಲ್ಲಿ ಒಂದು ನಿವೇಶನ ಖರೀದಿಸಬೇಕು ಎಂಬುದು ಎಲ್ಲರ ಕನಸೂ ಆಗಿದೆ. ಇನ್ನೂ ಕೆಲವರು ನಗರ ಮುಂದಿನ ದಿನಗಳಲ್ಲಿ ಸಾಕಷ್ಟು ಬೆಳವಣಿಗೆ ಕಾಣಲಿದೆ ಎಂಬ ನಿರೀಕ್ಷೆಯಲ್ಲಿ ನಿವೇಶನಗಳ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಹೀಗಾಗಿ ನಗರದಲ್ಲಿ ಹಲವಾರು ಹೊಸ ಬಡಾವಣೆಗಳು ನಿರ್ಮಾಣಗೊಳ್ಳುತ್ತಿದೆ. ಇದೀಗ ನಗರದ ಹೊರವಲಯದ ಪ್ರದೇಶಗಳು ಮೈಸೂರು ನಗರ ವ್ಯಾಪ್ತಿಗೆ ಸೇರುವ ಹಿನ್ನೆಲೆಯಲ್ಲಿ ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಜನರು ನಿವೇಶನಗಳ ಮೇಲೆ ಹೂಡಿಕೆ ಮಾಡಲು ಒಲವು ತೋರಲಿದ್ದಾರೆ.

ಇದನ್ನು ಓದಿ: ಶಿವಾನಂದಪುರಿ ಶ್ರೀಗಳಿಗೆ ಕನಕ ಭವನ ನಿರ್ವಹಣೆ ಹೊಣೆ 

ಯಾವೆಲ್ಲ ಪ್ರದೇಶ ಸೇರ್ಪಡೆ?:  ಗ್ರೇಟರ್-೧ ಮೈಸೂರು ವ್ಯಾಪ್ತಿಗೆ ಹೂಟಗಳ್ಳಿ ನಗರಸಭೆ, ಶ್ರೀರಾಂಪುರ, ರಮ್ಮನಹಳ್ಳಿ, ಬೋಗಾದಿ ಪಟ್ಟಣ ಪಂಚಾಯಿತಿಗಳು, ಇಲವಾಲ, ಸಿದ್ದಲಿಂಗಪುರ, ಚಾಮುಂಡಿಬೆಟ್ಟ, ನಾಗನಹಳ್ಳಿ, ನಾಗವಾಲ, ಧನಗಳ್ಳಿ, ಬೀರಿಹುಂಡಿ ಹಾಗೂ ಆಲನಹಳ್ಳಿ ಗ್ರಾಮ ಪಂಚಾಯಿತಿಗಳು ಸೇರ್ಪಡೆಯಾಗಲಿವೆ. ಕಡಕೊಳ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಉತ್ತನಹಳ್ಳಿ, ಬಂಡಿಪಾಳ್ಯ, ಹೊಸಹುಂಡಿ, ಮರಸೆ, ಮದರಗಳ್ಳಿ, ಏಳಿಗೆಹುಂಡಿ, ಗುಡುಮಾದನಹಳ್ಳಿ, ಗೆಜ್ಜಗಳ್ಳಿ, ಮಂಡಕಳ್ಳಿ ಪ್ರದೇಶ ಹಾಗೂ ನಾಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ಯಾದನಹಳ್ಳಿ ಗ್ರಾಮ ಮಾತ್ರ ಗ್ರೇಟರ್-೧ ಮೈಸೂರು ವ್ಯಾಪ್ತಿಗೆ ಸೇರ್ಪಡೆಯಾಗಲಿವೆ.

ವಾರ್ಡ್‌ಗಳ ಸಂಖ್ಯೆ ಹೆಚ್ಚಳ:  ಪ್ರಸ್ತುತ ಮೈಸೂರು ಮಹಾನಗರ ಪಾಲಿಕೆಯಲ್ಲಿ ಒಟ್ಟು ೬೫ ವಾರ್ಡ್‌ಗಳು ಇವೆ. ಒಂದು ವೇಳೆ ಗ್ರೇಡ್-೧ ಮೈಸೂರು ರಚನೆಯಾದರೆ ಜನಸಂಖ್ಯೆಗೆ ಅನುಗುಣವಾಗಿ ೧೦೦ಕ್ಕೂ ಹೆಚ್ಚು ವಾರ್ಡ್ ಗಳು ರಚನೆಯಾಗುವ ಸಾಧ್ಯತೆ ಇದೆ. ೨೦೧೧ರ ಜನಗಣತಿ ಪ್ರಕಾರ ಮೈಸೂರು ನಗರದಲ್ಲಿ ೯,೨೦,೫೫೦ ಜನಸಂಖ್ಯೆ ಇದ್ದು, ಪ್ರಸ್ತುತ ೧೧,೪೬,೦೬೯ ಜನಸಂಖ್ಯೆ ಇರಬಹುದು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಗ್ರೇಡ್-೧ ಮೈಸೂರು ವ್ಯಾಪ್ತಿಯ ಪ್ರದೇಶದಲ್ಲಿ ೧೪,೧೬,೬೭೧ ಜನಸಂಖ್ಯೆ ಇದೆ ಎಂದು ಅಂದಾಜಿಸಲಾಗಿದೆ. ಕೇಂದ್ರ ಸರ್ಕಾರ ೨೦೨೫ರ ಜನಗಣತಿ ನಡೆಸಿದ ನಂತರ ಗ್ರೇಟರ್ ಮೈಸೂರು ಪ್ರದೇಶದಲ್ಲಿ ಎಷ್ಟು ಜನರು ವಾಸವಿದ್ದಾರೆ ಎಂಬ ನಿಖರ ಅಂಕಿ ಅಂಶ ದೊರೆಯಲಿದೆ.

ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ:  ಮೈಸೂರಿನಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿಯಂತ್ರಣ ಮಾಡಲು ಮೈಸೂರು ಅಭಿವೃದ್ಧಿ ಪ್ರಾಧಿಕಾರ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು, ಇದಕ್ಕಾಗಿ ಭೂಸ್ವಾಧಿನಕ್ಕೆ ಸಿದ್ಧತೆ ಕೈಗೊಂಡಿದೆ. ಒಟ್ಟು ೧೦೫ ಕಿಮೀ ಉದ್ದದ ೨೦೦ ಅಡಿ ಅಗಲದ ರಸ್ತೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ನಗರದ ಮುಂದಿನ ೨೫ ವರ್ಷಗಳ ಬೆಳವಣಿಗೆಯನ್ನು ಗಮನದಲ್ಲಿಟ್ಟು ಕೊಂಡು ಈ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ನಗರದಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ದಶಕದ ಹಿಂದೆ ೪೫ ಕಿಮೀ ಉದ್ದದ ಹೊರವರ್ತುಲ ರಸ್ತೆ ನಿರ್ಮಾಣ ಮಾಡಿದ ಬಳಿಕ ನಗರದ ಬೆಳವಣಿಗೆಯ ವೇಗ ಮತ್ತಷ್ಟು ಹೆಚ್ಚಾಯಿತು. ಹೊಸದಾಗಿ ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣವಾದರೆ ನಗರ ಮತ್ತಷ್ಟು ಬೆಳವಣಿಗೆ ಕಾಣಲಿದೆ. ಗ್ರೇಡ್-೧ ಮೈಸೂರು ರಚನೆ ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣವು ರಿಯಲ್ ಎಸ್ಟೇಟ್ ಉದ್ಯಮದ ಪಾಲಿಗೆ ವರದಾನವಾಗಲಿದೆ.

ಪಾಲಿಕೆ ಆದಾಯ ವೃದ್ಧಿ:  ಗ್ರೇಡ್-೧ ಮೈಸೂರು ರಚನೆಯ ನಂತರ ಪಾಲಿಕೆಗೆ ಹೆಚ್ಚುವರಿಯಾಗಿ ೨೫.೮೧ ಕೋಟಿ ರೂ. ಆದಾಯ ಹರಿದು ಬರುವ ನಿರೀಕ್ಷೆ ಇದೆ. ನಗರದ ಹೊರ ವಲಯದಲ್ಲಿರುವ ಪಟ್ಟಣ ಪಂಚಾಯಿತಿ, ನಗರಸಭೆ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ದರ ಕಡಿಮೆ ಇದ್ದು, ನಗರಪಾಲಿಕೆ ವ್ಯಾಪ್ತಿಗೆ ಬಂದರೆ ತೆರಿಗೆ ಪ್ರಮಾಣ ಹೆಚ್ಚಾಗುತ್ತದೆ. ಹಾಗಾಗಿ ಪ್ರಸ್ತುತ ಸಂಗ್ರಹವಾಗುತ್ತಿರುವ ತೆರಿಗೆ ಹಣಕ್ಕಿಂತ ಹೆಚ್ಚಿನ ಪ್ರಮಾಣದ ಆದಾಯ ನಗರ ಪಾಲಿಕೆಗೆ ದೊರೆಯುವ ನಿರೀಕ್ಷೆ ಇದೆ. ಗ್ರೇಡ್-೧ ಮೈಸೂರು ರಚನೆಯಾದರೆ ಜನಸಂಖ್ಯೆಗೆ ಪೂರಕವಾಗಿ ಸರ್ಕಾರದಿಂದ ಅನುದಾನ ಬಿಡುಗಡೆಯಾಗಲಿದೆ.

-ಕೆ.ಬಿ.ರಮೇಶನಾಯಕ

ಆಂದೋಲನ ಡೆಸ್ಕ್

Recent Posts

ಇಸ್ರೇಲ್-ಲೆಬನಾನ್‌ ನಡುವೆ 10 ದಿನಗಳ ಕದನ ವಿರಾಮ ಘೋಷಿಸಿದ ಟ್ರಂಪ್‌

ಇಸ್ರೇಲ್‌ : ಇಸ್ರೇಲ್-ಲೆಬನಾನ್ ಉದ್ವಿಗ್ನತೆಗೆ 10 ದಿನಗಳ ಕದನ ವಿರಾಮ ಘೋಷಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.…

9 hours ago

ರಾಜ್ಯಗಳ ನಡುವೆ ಯಾವುದೇ ತಾರತಮ್ಯ ಇಲ್ಲ : ಪ್ರಧಾನಿ ಮೋದಿ ಅಭಯ

ನವದೆಹಲಿ : ಉತ್ತರ, ದಕ್ಷಿಣ, ದೊಡ್ಡ ಅಥವಾ ಸಣ್ಣ ರಾಜ್ಯಗಳಾವುದೇ ಇರಲಿ ಕ್ಷೇತ್ರ ಪುನರ್ ವಿಂಗಡಣೆಯ ವಿಷಯಕ್ಕೆ ಬಂದಾಗ ರಾಜ್ಯಗಳ…

10 hours ago

KSOU | ಯುಜಿಸಿ ನೆಟ್, ಕೆ-ಸೆಟ್‌ ಪರೀಕ್ಷೆಗೆ ಉಚಿತ ತರಬೇತಿ

ಮೈಸೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗಳಿಗೆ…

11 hours ago

ನಿಂತಿದ್ದ ವಿಮಾನಕ್ಕೆ ತಗುಲಿದ ಸ್ಪೈಸ್‌ಜೆಟ್‌ ವಿಮಾನ ; ತಪ್ಪಿದ ಭಾರಿ ಅನಾಹುತ

ನವದೆಹಲಿ : ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳ ನಡುವೆ ಸಣ್ಣ ಘರ್ಷಣೆಯಾಗಿದ್ದು, ಭಾರೀ ಅನಾಹುತ ತಪ್ಪಿದೆ.…

11 hours ago

ಮಂತ್ರಾಲಯ ಬಳಿ ಭೀಕರ ಅಪಘಾತ : ಐವರು ಮಹಿಳೆಯರು ಸೇರಿ 8 ಮಂದಿ ಸಾವು

ರಾಯಚೂರು : ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಚಿಲಕಣಡೋಣ ಗ್ರಾಮದ ಸಮೀಪ ಗುರುವಾರ ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ…

11 hours ago

ಈ ಬಾರಿ ಕರ್ನಾಟಕಕ್ಕೆ ಮುಂಗಾರು ಕೊರತೆ ; ಮುಂಜಾಗ್ರತ ಕ್ರಮಕ್ಕೆ ಸಿಎಂ ಸೂಚನೆ

ಬೆಂಗಳೂರು : ರಾಜ್ಯದ ಐದು ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆಯಾಗುವ ಸಾಧ್ಯತೆಯಿದ್ದು, ಕುಡಿಯುವ ನೀರಿಗೆ ತೊಂದರೆಯಾಗದಂತೆ…

12 hours ago