ಬಿ.ಆರ್.ಜೋಯಪ್ಪ
ಕದಂಬರು, ಗಂಗರು, ಚೆಂಗಾಳ್ವರು ಚೋಳರು, ನಾಯಕರು, ಸುಲ್ತಾನರು, ಹಾಲೇರಿ ರಾಜವಂಶದವರು ಮತ್ತು ಆಂಗ್ಲರು ಇವರೆಲ್ಲರೂ ಕೊಡಗನ್ನು ಆಳಿದವರೇ ೧೮೩೪ರ ವರೆಗೆ ಕೊಡಗನ್ನು ‘ದೇಶ ’ ಎಂದು ಕರೆಯುತ್ತಿದ್ದರು. ೧೮೩೪ರಿಂದ ೧೯೪೭ರವರೆಗೆ ಕೊಡಗನ್ನು ‘ರಾಜ್ಯ’ ಎಂದು ಕರೆಯುತ್ತಿದ್ದರು.
೧೯೪೭ರಿಂದ ೧೯೫೬ರವರೆಗೆ ಕೊಡಗಿಗೆ ರಾಜ್ಯ ಸ್ಥಾನಮಾನಗಳಿದ್ದವು. ೧೯೫೬ರ ನಂತರ ಕೊಡಗು ನಮ್ಮ ರಾಜ್ಯದ ಜಿಲ್ಲೆಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ. ಒಂದು ಕಾಲದಲ್ಲಿ ಕೊಡಗು ವಿಶಾಲವಾಗಿತ್ತು. ಪಿರಿಯಾಪಟ್ಟಣ, ಹಾಸನದ ಸಕಲೇಶಪುರ, ಸುಳ್ಯ, ಪಾಣೆ ಮಂಗಳೂರು, ಬೆಳ್ಳಾರೆ, ಸುಬ್ರಹ್ಮಣ್ಯ ಮತ್ತು ಪುತ್ತೂರು ಪ್ರದೇಶಗಳನ್ನು ಒಳಗೊಂಡಿತ್ತು.
ಈ ಎಲ್ಲಾ ಪ್ರದೇಶಗಳಿಗೆ ಕೊಡಗು ಕೇಂದ್ರವಾಗಿತ್ತು. ಯಾವಾಗ ಕೊಡಗು ಆಂಗ್ಲರ ಆಡಳಿತಕ್ಕೆ ಒಳಗಾಯಿತೊ, ಆಗ ಕೊಡಗನ್ನು ವಿಂಗಡಿಸಲಾಯಿತು. ಕೆಳ ಕೊಡಗು ಮತ್ತು ಮೇಲ್ಕೊಡಗು ಎಂದು ವಿಭಾಗಗೊಂಡಿತು. ಸುಳ್ಯ, ಪಾಣೆ ಮಂಗಳೂರು, ಬೆಳ್ಳಾರೆ, ಸುಬ್ರಹ್ಮಣ್ಯ ಮತ್ತು ಪುತ್ತೂರು ಇವುಗಳನ್ನು ಕೆಳ ಕೊಡಗು ಎಂದು ವಿಂಗಡಿಸಲಾಯಿತು. ೧೮೩೦ರ ಸಮಯದಲ್ಲಿ ಡಾ. ಜಫರ್‌ಸನ್ ಮತ್ತು ಕ್ಯಾಪ್ಟನ್‌ಹಿಲ್ ಎಂಬ ಇಬ್ಬರು ಆಂಗ್ಲ ಅಧಿಕಾರಿಗಳು ಕೊಡಗಿನ ಅರಸ ಚಕ್ರವೀರ ರಾಜನೊಡನೆ ಗೆಳೆತನ ಬೆಳಿಸಿದರು. ಅವರಿಗೆ ಕಾಡು ಪ್ರಾಣಿಗಳ ಮಾಂಸದ ಊಟದ ಆತಿಥ್ಯ! ಬಿಡುವಿನಲ್ಲಿ ಬೇಟೆಯ ಆಟ! ಆ ಇಬ್ಬರು ಅತಿಥಿಗಳು ಚಿಕ್ಕವೀರ ರಾಜನೊಡನೆ ಬೇಟೆಯಾಡಿದ ಸಂದರ್ಭ ಹೀಗಿದೆ: ಈ ಮೂವರು ಮರದ ಮೇಲೆ ಬೇಟೆಗಾಗಿ ಕಾದು ಕುಳಿತರು. ರಾಜ್ಯದ ಸೇವಕರು ಕಾಡು ಪ್ರಾಣಿಗಳನ್ನು ಅಟ್ಟುತ್ತಾ ಇವರೆಡೆಗೆ ಬಂದರು.
ಆ ಗುಂಪಿನಲ್ಲಿ ಬಗೆ ಬಗೆಯ ಪ್ರಾಣಿಗಳಿದ್ದವು. ಆ ದಿನದ ಬೇಟೆಯಲ್ಲಿ ಡಾ. ಜಫರ್‌ಸನ್ ಮತ್ತು ಕ್ಯಾಪ್ಟನ್ ಹಿಲ್ ಅವರಿಗೆ ಮಾತ್ರ ಗುಂಡು ಹೊಡೆಯಲು ಅವಕಾಶ. ಅದೂ ಕಣ್ಣಿಗೆ ಕಂಡದ್ದನ್ನೆಲ್ಲಾ ಹೊಡೆಯುತ್ತಿಲ್ಲ. ಅವರ ಗುರಿ ಆನೆಗಳೆಡೆಗೆ ಮಾತ್ರ! ಹೀಗೆ ನೋಡುತ್ತಿರಲು ಒಂದು ಗುಂಪಿನ ಆನೆಗಳು ಇವರೆಡೆಗೆ ಬಂದವು. ಆ ಗುಂಪಿನಲ್ಲಿ ಹನ್ನೆರಡು ಆನೆಗಳಿದ್ದವು. ಅವುಗಳಲ್ಲಿ ಬೃಹತ್ ಗಾತ್ರದ ಆನೆಯೊಂದಿತ್ತು. ಆ ಆನೆಯನ್ನು ನೋಡಿದ ಚಿಕ್ಕ ವೀರರಾಜ “ಆ ದೊಡ್ಡ ಆನೆಯನ್ನು ಜೀವಂತವಾಗಿ ಹಿಡಿಯಬೇಕು ಅದನ್ನು ಗವರ್ನರ್ ಜನರಲ್‌ಗೆ ಬಹುಮಾನವಾಗಿ ಕೊಡಬೇಕು. ಅದಕ್ಕೆ ಗುಂಡು ಹೊಡೆಯಕೂಡದು” ಎಂದು ಆಜ್ಞಾಪಿಸಿದ “ಉಳಿದ ೧೧ ಆನೆಗಳನ್ನು ಹೊಡೆದುರುಳಿಸಿ” ಎಂದನು.
ಅದರಂತೆ ಆರು ಆನೆಗಳು ಡಾ.ಜಫರ್‌ಸನ್ ಗುಂಡೇಟಿಗೆ ಬಲಿಯಾದವು. ಉಳಿದ ನಾಲ್ಕು ಆನೆಗಳನ್ನು ಕ್ಯಾಪ್ಟನ್ ಹಿಲ್ ಗುಂಡು ಹೊಡೆದು ಕೊಂದನಂತೆ. ಒಟ್ಟು ಹತ್ತು ಆನೆಗಳು ಸತ್ತುರುಳಿದವು ಒಂದು ಆನೆ ತಪ್ಪಿಸಿಕೊಂಡು ಓಡಿತು. ಮತ್ತೊಂದು ದೊಡ್ಡ ಆನೆಯನ್ನು ಸೆರೆ ಹಿಡಿದರಂತೆ. ಇದು ಒಂದು ದಿನದ ಬೇಟೆಯಷ್ಟೆ!! (ಕೊಡಗಿನ ಇತಿಹಾಸ: ಡಿ.ಎಸ್.ಕೃಷ್ಣಯ್ಯ )
ಕೊಡಗಿನ ಪ್ರಜೆಗಳಲ್ಲಿ ಅಸಮಾಧಾನದ ಹೊಗೆ: ಕೊಡಗನ್ನು ಕೆಳ ಕೊಡಗು ಮತ್ತು ಮೇಲ್ಕೊಡಗು ಎಂದು ವಿಂಗಡಿಸಿದ್ದು ಜನತೆಗೆ ಸರಿ ಕಾಣಲಿಲ್ಲ. ಅನ್ಯೋನ್ಯವಾಗಿ ಜೀವಿಸಿದ್ದ ಜನತೆಗೆ ಆಂಗ್ಲರ ಒಡೆದು ಆಳುವ ನೀತಿಯು ಎಳ್ಳಷ್ಟೂ ಸರಿ ಕಾಣಲಿಲ್ಲ ಭೂ ಹಿಡುವಳಿ ಪದ್ಧತಿಯನ್ನು ಆಂಗ್ಲರು ಬದಲಿಸಿದರು. ತೆರಿಗೆ ಮತ್ತು ಕಂದಾಯ ಪದ್ಧತಿಯನ್ನೂ ಬದಲಿಸಿದರು. ಉಪ್ಪಿಗೆ ಸುಂಕ ಮತ್ತು ತೆರಿಗೆ ವಿಧಿಸಲಾಯಿತು. ಹೊಗೆಸೊಪ್ಪು ಬೆಳೆಯಲು ಮತ್ತು ಸಾಗಾಟ ಮಾಡಲು ನಿರ್ಬಂಧ ವಿಧಿಸಲಾಯಿತು. ಯಾವುದೇ ಅಭಿವೃದ್ಧಿ ಕೆಲಸ ಮಾಡಬೇಕಾದರೂ ಆಂಗ್ಲರ ಅನುಮತಿ ಪಡೆಯಬೇಕಿತ್ತು. ಕಾಡಿನಲ್ಲಿ ಧಾರಾಳವಾಗಿ ಬೆಳೆದ ಬೆತ್ತವನ್ನು ಕಡಿದು ಬುಟ್ಟಿ ಇತ್ಯಾದಿ ಕೈಕಸಬು ಮಾಡಲು ಸ್ಥಳೀಯ ಕುಶಲಕರ್ಮಿಗಳಿಗೆ ಅವಕಾಶವಿರಲಿಲ್ಲ.
ಮೊದಲೆಲ್ಲ ರಾಜನಿಗೆ ತೆರಿಗೆಯನ್ನು ವಸ್ತುವಿನ ರೂಪದಲ್ಲಿ ಪ್ರಜೆಗಳು ಸಂದಾಯ ಮಾಡುತ್ತಿದ್ದರು. ಅದು ಇಂತಹುದೇ ಅನ್ನುವಂತಹದ್ದೇನೂ ಇರಲಿಲ್ಲ. ರೈತರ ಕೃಷಿ ಉತ್ಪನ್ನವಿರಬಹುದು, ಕಾಡು ಉತ್ಪನ್ನವಿರಬಹುದು, ಏಲಕ್ಕಿ, ಜೇನು ಮುಂತಾದವು ಇರಬಹುದು. ಆದರೆ ಈ ಕಂಪೆನಿ ಸರಕಾರಕ್ಕೆ ವಸ್ತು ಬೇಕಿರಲಿಲ್ಲ. ಅವರಿಗೆ ನಗದು ರೂಪದಲ್ಲಿ ತೆರಿಗೆ ಕೊಡಬೇಕಿತ್ತು.ಹಾಗಾಗಿ ರೈತರು ಬೆಳೆದುದನ್ನೆಲ್ಲ ಮಾರಿದರೂ ತೆರಿಗೆ ಕಟ್ಟುವಷ್ಟು ನಗದು ಸಿಗುತಿರಲಿಲ್ಲ. ಇದು ರೈತರಿಗೆ ದೊಡ್ಡ ತಲೆ ನೋವಾಗತೊಡಗಿತು. ಕಂದಾಯ ಪಾವತಿಸಲು ಸಾಧ್ಯವಾಗದ ರೈತರು ಆಸ್ತಿಯನ್ನು ಮಾರಾಟ ಮಾಡುವುದು ಅನಿವಾರ್ಯವಾಯಿತು. ಕಂದಾಯ ಕಟ್ಟಲಾಗದವರ ಜಮೀನನ್ನು ಸರಕಾರ ಮುಟ್ಟುಗೋಲು ಹಾಕಿ, ಸಾರ್ವಜನಿಕವಾಗಿ ಹರಾಜಿಗೆ ಇಡುತ್ತಿತ್ತು. ಕೃಷಿಕರು ತಮ್ಮ ಊರಿನಲ್ಲಿ ಅನಾಥರಾಗತೊಡಗಿದರು ಅತ್ತ ತೆರಿಗೆ ಕಟ್ಟಲಾಗುತ್ತಿಲ್ಲ, ಇತ್ತ ಜಮೀನನ್ನು ಉಳಿಸಿಕೊಳ್ಳಲಾಗುತ್ತಿಲ್ಲ. ಕಡೆಗೆ ತಮ್ಮ ಜಮೀನನ್ನು ಯಾರು ಕೊಂಡುಕೊಂಡು ಅದೇ ಜಮೀನಿನಲ್ಲಿ ಕೂಲಿ ಕಾರ್ಮಿಕರಾದರು!
ಕರಕುಶಲ ಕರ್ಮಿಯೊಬ್ಬ ‘ದೇವರ ಕೊಲ್ಲಿ’ ಎಂಬಲ್ಲಿ ಬೆತ್ತವನ್ನು ಕಡಿದು ಒರೆ ಮಾಡಿ ಹೊತ್ತುಕೊಂಡು ಹೋಗಿ ಬುಟ್ಟಿ ಮಾಡಬೇಕೆಂದಿದ್ದ. ಅಷ್ಟರಲ್ಲಿ ಆಂಗ್ಲ ಅಧಿಕಾರಿಯೊಬ್ಬ ಕುದುರೆ ಸವಾರಿ ಮಾಡುತ್ತಾ “ಅನುಮತಿ ಇಲ್ಲದೆ ಬೆತ್ತ ಕಡಿದಿದ್ದೀಯ, ಆ ಹೊರೆಯನ್ನು ಹೊತ್ತುಕೊಂಡು ಮಡಿಕೇರಿಗೆ ನಡೆ” ಎಂದು ಆದೇಶಿಸಿದ. ಸುಮಾರು ಹದಿನಾರು ಕಿ.ಮೀ. ದೂರದ ಮಡಿಕೇರಿಗೆ ಹಸಿ ಬೆತ್ತದ ಹೊರೆಯನ್ನು ಹೊತ್ತುಕೊಂಡು ಬೆಟ್ಟವನ್ನು ಹತ್ತಿ ಮಡಿಕೇರಿ ತಲುಪಿದ. ಮುಂದೆ ಹೊರೆ ಹೊತ್ತ ಕೈ ಕಸುಬುದಾರ ಹಿಂದೆ ಕುದುರೆ ಮೇಲೆ ಆಂಗ್ಲ ಅಧಿಕಾರಿ! ಇಂತಹ ಹಿಂಸೆಗಳು ಇನ್ನೆಷ್ಟೊ? ೧೮೩೪ರಲ್ಲಿ ಬ್ರಿಟಿಷರು ಕೊಡಗಿನ ಕೊನೆಯ ಅರಸ ಚಿಕ್ಕವೀರ ರಾಜೇಂದ್ರನನ್ನು ಸಿಂಹಾಸನದಿಂದ ಕೆಳಗಿಳಿಸಿದರು. ಅಷ್ಟೇ ಅಲ್ಲ, ಕೊಡಗಿನಿಂದಲೇ ‘ಗಡಿಪಾರು’ ಮಾಡಿ ದೂರದ ಕಾಶಿಗೆ ಅಟ್ಟಿದರು. ಈ ಮೇಲಿನ ಎಲ್ಲಾ ಕಾರಣಗಳಿಂದ ಕೊಡಗಿನ ಪ್ರಜೆಗಳು ಆಂಗ್ಲರ ವಿರುದ್ಧ ರೊಚ್ಚಿಗೆದ್ದರು, ಸೇನೆ ಕಟ್ಟಿದರು.
ಆ ಅವಧಿಯಲ್ಲಿ ಗುಡ್ಡೆಮನೆ ಅಪ್ಪಯ್ಯ ಗೌಡರು ಕೊಡಗಿನ ಅರಸರ ಅಧಿನದಲ್ಲಿ ಸುಬೇದಾರರಾಗಿದ್ದರು ಯಾವಾಗ ಅರಸನನ್ನು ಕೆಳಗಿಳಿಸಿ ಅಧಿಕಾರವನ್ನು ಆಂಗ್ಲರು ಕಿತ್ತುಕೊಂಡರೋ ಅಪ್ಪಯ್ಯ ಗೌಡರು ತಮ್ಮ ಸುಬೇದಾರ ಹುದ್ದೆಯನ್ನು ಕಿತ್ತೆಸೆದರು. ಆಂಗ್ಲರ ವಿರುದ್ಧ ಸೇನೆ ಕಟ್ಟಿದರು. ಕೊಡಗಿನ ಸ್ವಾತಂತ್ರ್ಯವೇ ತನ್ನುಸಿರು ಎಂದು ಹೋರಾಟದ ಕಣಕ್ಕೆ ಧುಮುಕಿದರು. ಕೆದಂಬಾಡಿ ರಾಮಗೌಡ, ಹುಲಿ ಕಡಿದ ನಂಜಯ್ಯ, ಪುಟ್ಟ ಬಸವ, ಅಪಾರಂಪಾರ, ಸೋಮಯ್ಯ, ನಂಜಯ್ಯ, ಚಿಟ್ಟೆ ಕುಡಿಯ ಮತ್ತು ಕರ್ತು ಕಡಿಯ ಎಂಬ ಸೋದರರು ಸೇರಿದಂತೆ ಮೊದಲಾದ ಸಮಾನ ಮನಸ್ಕರನ್ನು ಒಟ್ಟು ಮಾಡಿದರು. ಶಸ್ತ್ರಾಸ್ತ್ರಗಳಿಲ್ಲ, ಮದ್ದು ಗುಂಡುಗಳಿಲ್ಲ; ಖಡ್ಗ, ಕತ್ತಿ, ಈಟಿ, ಭರ್ಜಿಗಳಷ್ಟೇ ಈ ಸೇನೆಯ ಆಯುಧಗಳು. ಆಂಗ್ಲರ ಫಿರಂಗಿ, ರೈಫಲ್‌ಗಳ ಮುಂದೆ ಈ ಆಯುಧಗಳು ಯಾವ ಲೆಕ್ಕ? ಆದರೂ ಕೆಚ್ಚೆದೆಯ ವೀರರು ಪಟ್ಟು ಬಿಡಲಿಲ್ಲ. ಆಂಗ್ಲರ ಓಡಾಟಕ್ಕೆ ತಡೆಯೊಡ್ಡಬೇಕು ಹೇಗೆ ಎಂದು ಅವರು ಕುದುರೆ ಸವಾರಿ ಮಾಡುತ್ತಾ ಬರುವಾಗ ಬೆಟ್ಟದಿಂದ ಬಂಡೆಗಳನ್ನು ಉರುಳಿಸಬೇಕು. ಬಿದಿರಿನ ಗೊಟ್ಟಗಳನ್ನು ನೆಲ ಮಟ್ಟದಲ್ಲಿ ಹೂತು ಹಾಕಬೇಕು. ಬಿದಿರಿನ ಗೊಟ್ಟವೆಂದರೆ ಬಿದಿರನ್ನು ಗೂಟದಂತೆ ಕತ್ತರಿಸುವುದು. ಆ ಗೂಟವನ್ನು ನೆಲದಲ್ಲಿ ಹೂತು ಹಾಕುವುದು. ಕುದುರೆಗಳ ಕಾಲು ಆ ಗೂಟದೊಳಗೆ ಸಿಕ್ಕಿಕೊಂಡು ಮುಗ್ಗರಿಸುತ್ತವೆ. ಆಗ ಸವಾರ ನೆಲಕ್ಕೆ ಉರುಳುತ್ತಾನೆ ಕೂಡಲೇ ಅವನನ್ನು ಹಿಡಿದು ಬಡಿಯಬೇಕು. ಇದು ಅಪ್ಪಯ್ಯ ಗೌಡರ ತಂಡದ ಉಪಾಯ!
ಹೋರಾಟ ಸುಲಭವಲ್ಲ. ಹಗಲು ರಾತ್ರಿಯಲ್ಲಿ ಭಿನ್ನತೆಯಿಲ್ಲ. ಹಸಿವು – ನಿದ್ದೆಯ ಪರಿವೆಯಿಲ್ಲ. ಮಳೆಗಾಲದಲ್ಲಿ ತೋಡು- ತೊರೆ ತುಂಬಿರುತ್ತವೆ. ಬಂಡೆಯಿಂದ ಬಂಡೆಗೆ ಹಾರುತ್ತಾ ಜಿಗಿಯುತ್ತ ಸಾಗಬೇಕು. ರಕ್ತ ಹೀರುವ ಜಿಗಣೆಗಳು ಝೀಂ ಝೀಂ ಎನ್ನುವ ಜೀರುಂಡೆಗಳ ಮೊರೆತ, ನೊಣ ಗಾತ್ರದ ಸೊಳ್ಳೆಗಳು, ಮೊದಲೇ ಕಾಡು, ಹಗಲಿನಲ್ಲೇ ಗಂವ್ ಕತ್ತಲೆನ್ನುವ ಸ್ಥಿತಿ. ರಾತ್ರಿ ದೊಂದಿ ಬೆಳಕಲ್ಲಿ ಸಾಗಬೇಕು. “ಛೇ… ನಮ್ಮ ನಾಡಿಗೆ ಇಂತಹ ಸ್ಥಿತಿ ಬಂತಲ್ಲ… ನಮ್ಮ ನಾಡಿನಲ್ಲಿಯೇ ನಾವು ಅನಾಥರಾದೆವಲ್ಲ, ನಮ್ಮೊಳಗಿನ ಸ್ವಾರ್ಥದಿಂದ ಈ ಗತಿ ಬಂತಲ್ಲ…” ಎಂದು ಹೋರಾಟಗಾರರು ಹಲ್ಲು ಕಡಿದು ಮುನ್ನುಗ್ಗಿದರು.
೧೮೩೭ನೇ ಇಸವಿ ಮಾರ್ಚ್ ೫ನೇ ದಿನ ಮಡಿಕೇರಿ ಕೋಟೆಗೆ ಮುತ್ತಿಗೆ ಹಾಕಿ ಆಂಗ್ಲರನ್ನು ಬಗ್ಗಬಡಿಯಲು ನಿಶ್ಚಯವಾಗುತ್ತದೆ. ಆದರೆ ಆ ದಿನ ಬದಲಾಗಿ ಏಪ್ರಿಲ್ ಆರರಂದು ಯುಗಾದಿಯ ದಿನ ‘ಅಮರ ಸುಳ್ಯ’ದಿಂದ ಯುದ್ಧ ಪ್ರಾರಂಭ ಮಾಡಬೇಕೆಂದು ತೀರ್ಮಾನ ಮಾಡಲಾಗುತ್ತದೆ. ಹಲವು ಘಟನೆಗಳ ಬಳಿಕ ಮುಂದುವರಿದ ಸೇನೆ ಬಳ್ಳಾರಿ ಕೋಟೆಯನ್ನು ವಶಪಡಿಸಿಕೊಳ್ಳುತ್ತದೆ. ಖಜಾನೆಯನ್ನು ಲೂಟಿ ಮಾಡುತ್ತದೆ. ಕಲ್ಯಾಣ ಸ್ವಾಮಿಯ ನೇತೃತ್ವದ ಸೇನೆ ಪುತ್ತೂರಿನ ಖಜಾನೆಯನ್ನು ವಶಪಡಿಸಿಕೊಳ್ಳುತ್ತದೆ.
ಮುಂದುವರಿದ ಸೇನೆ ಮಂಗಳೂರಿನಲ್ಲಿ ಖಜಾನೆಯನ್ನು ವಶಪಡಿಸಿಕೊಂಡು ೧೩ ದಿನಗಳ ಕಾಲ ಆಡಳಿತ ನಡೆಸುತ್ತದೆ. ಕಲ್ಯಾಣಸ್ವಾಮಿ ಅಲ್ಲಿ ಅಧಿಕಾರ ನಡೆಸುತ್ತಾರೆ. ಆದರೆ ಅನಿರೀಕ್ಷಿತವಾಗಿ ಬ್ರಿಟಿಷ್ ಸೇನೆ ಫಿರಂಗಿ ದಾಳಿ ನಡೆಸಿದ್ದರಿಂದ ನಮ್ಮ ಸೇನೆಯ ಮಾರಣ ಹೋಮವಾಗುತ್ತದೆ. ಸೆರೆ ಸಿಕ್ಕಿದ ಕಲ್ಯಾಣಸ್ವಾಮಿ, ರಾಮಗೌಡ, ಅಣ್ಣೇಗೌಡ , ಬಂಗಾರರಾಜನನ್ನು ಸೆರೆ ಹಿಡಿದು ಬಿಕ್ರಾನಕಟ್ಟೆ ಎಂಬಲ್ಲಿ ಗಲ್ಲಿಗೇರಿಸುತ್ತಾರೆ. ಗುಡ್ಡೆಮನಿ ಅಪ್ಪಯ್ಯ ಗೌಡರೊಂದಿಗೆ ಸೆರೆಯಾಳುಗಳಾದ ನಾಲ್ಕು ನಾಡಿನ ಉತ್ತು ಪೆರಾಜೆಯ ಪಾರುಪತ್ಯೇಗಾರ ಕೃಷ್ಣಯ್ಯ ಶಾಂತಳ್ಳಿಯ ಮಲ್ಲಯ್ಯ, ಚಿಟ್ಟೆ ಕುಡಿಯ ಮತ್ತು ಕುರ್ತು ಕುಡಿಯ ಇವರುಗಳನ್ನು ಸೆರೆ ಹಿಡಿಯಲಾಯಿತು. ಇವರುಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಸಿಂಗಾಪುರ ಮತ್ತು ಕಲ್ಲಿಕೋಟೆಯ ಸೆರೆಮನೆಗೆ ತಳ್ಳಲಾಗುತ್ತದೆ. ಗುಡ್ಡೆಮನೆ ಅಪ್ಪಯ್ಯಗೌಡರ ವಿರುದ್ಧ ವಿಶೇಷ ವಿಚಾರಣೆ ನಡೆಯುತ್ತದೆ. ೧೮೩೭ರ ಅಕ್ಟೋಬರ್ ೩೧ರಂದು ಬೆಳಿಗ್ಗೆ ೧೦ ಗಂಟೆಗೆ ಮಡಿಕೇರಿ ಕೋಟೆಯ ಮುಂಭಾಗದಲ್ಲಿ ಬಹಿರಂಗವಾಗಿ ನೇಣಿಗೇರಿಸುವುದೆಂದು ಬ್ರಿಟಿಷ್ ನ್ಯಾಯಾಲಯ ತೀರ್ಪು ನೀಡುತ್ತದೆ. ಕರ್ನಲ್ ಫ್ರೇಜರ್ ಮತ್ತು ಲೀ ಹಾರ್ಡಿ ಅಟ್ಟಹಾಸದಿಂದ ಮೆರೆಯುತ್ತಾರೆ.
” ಒಂದು ಕಾಲದಲ್ಲಿ ಕೊಡಗು ವಿಶಾಲವಾಗಿತ್ತು. ಪಿರಿಯಾಪಟ್ಟಣ, ಹಾಸನದ ಸಕಲೇಶಪುರ, ಸುಳ್ಯ, ಪಾಣೆ ಮಂಗಳೂರು, ಬೆಳ್ಳಾರೆ, ಸುಬ್ರಮಣ್ಯ ಮತ್ತು ಪುತ್ತೂರು ಪ್ರದೇಶಗಳನ್ನು ಒಳಗೊಂಡಿತ್ತು. ಈ ಎಲ್ಲಾ ಪ್ರದೇಶಗಳಿಗೆ ಕೊಡಗು ಕೇಂದ್ರವಾಗಿತ್ತು. ಯಾವಾಗ ಕೊಡಗು ಆಂಗ್ಲರ ಆಡಳಿತಕ್ಕೆ ಒಳಗಾಯಿತೊ, ಕೊಡಗನ್ನು ವಿಂಗಡಿಸಲಾಯಿತು. ಕೆಳ ಕೊಡಗು ಮತ್ತು ಮೇಲ್ಕೊಡಗು ಎಂದು ವಿಭಾಗಗೊಂಡಿತು”
ಮೈಸೂರು: ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಜಗಮಗಿಸುವ ದೀಪಾಲಂಕಾರ, ಫಲಪುಷ್ಪ ಪ್ರದರ್ಶನದ ಸೊಬಗಿನ ಮಧ್ಯೆ ಪಾರಂಪರಿಕ ಪೊಲೀಸ್ ಬ್ಯಾಂಡ್‌ನ ಸದ್ದಿನೊಂದಿಗೆ…
ಕೊಳ್ಳೇಗಾಲ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿರುವ ಸಾಕಮ್ಮಾಸ್ ಕಾಫಿ ಪುಡಿ ಅಂಗಡಿ ಬುಧವಾರ ರಾತ್ರಿ ಸಂಪೂರ್ಣ…
ಮೈಸೂರು: ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸುತ್ತಿದ್ದ 25 ಮಂದಿ ಐಪಿಎ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶ ನೀಡಿದೆ. ಅವರಲ್ಲಿ…
ಕೊಡಗು: ಕರ್ನಾಟಕ ಸರ್ಕಾರದ ಆದೇಶದಂತೆ ಕೊಡಗಿನ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅವರನ್ನು ಬೆಳಗಾವಿ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಖಾಲಿಯಾದ ಸ್ಥಳಕ್ಕೆ…
ಬೆಂಗಳೂರು: ಸಣ್ಣ ವಯಸ್ಸಿನಿಂದಲೇ ಬರವಣಿಗೆ ರೂಢಿಸಿಕೊಂಡು 9ನೇ ವಯಸ್ಸಿಗೆ 'ಟೇಲ್ಸ್ ಬೈ ಪರಿ' ಪುಸ್ತಕವನ್ನು ಬರೆದು ಹೆಸರು ಮಾಡಿರುವ ನಮ್ಮ…
ನವದೆಹಲಿ: ಕೋಗಿಲು ಲೇಔಟ್‌ನಲ್ಲಿ ಅಕ್ರಮ ನಿವಾಸಿಗಳಿಗೆ ಮನೆ ನೀಡುತ್ತಿದ್ದಾರೆ. ಇದು ರಾಜ್ಯ ಸರ್ಕಾರದ ದಡ್ಡತನದ ಪರಮಾವಧಿ ಎಂದು ಕೇಂದ್ರ ಸಚಿವ…