ಕೆ.ಬಿ.ರಮೇಶನಾಯಕ
‘ಆಂದೋಲನ’ ವಿಶೇಷ ಸಂದರ್ಶನದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು
ಮೈಸೂರು: ರೈತರು, ಬಡ ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಿ ಜನಸ್ನೇಹಿ ಆಡಳಿತ ನೀಡಬೇಕೆಂಬ ರಾಜ್ಯ ಸರ್ಕಾರದ ಆಶಯಕ್ಕೆ ತಕ್ಕಂತೆ ಕಂದಾಯ ಇಲಾಖೆ ಹಲವಾರು ಸುಧಾರಣಾ ಕ್ರಮಗಳನ್ನು ರೂಪಿಸಿದೆ. ತಿಂಗಳುಗಟ್ಟಲೆ ಕಚೇರಿಗೆ ಅಲೆಯುವುದನ್ನು ತಪ್ಪಿಸಿ ತ್ವರಿತಗತಿಯಲ್ಲಿ ರೈತರಿಗೆ ದಾಖಲೆಗಳು ಸಿಗುವಂತೆ ಮಾಡಲು ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ದಶಕಗಳ ಹಿಂದೆ ಕಂದಾಯ ಇಲಾಖೆ ಅಂದರೆ ಮೂಗು ಮುರಿಯುತ್ತಿದ್ದ ಜನರಿಂದಲೇ ಶಹಬ್ಬಾಷ್‌ಗಿರಿ ಪಡೆಯುವಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಕೃಷ್ಣ ಭೈರೇಗೌಡ ಅವರು ಕಂದಾಯ ಸಚಿವರಾದ ಮೇಲೆ ತಂದಿರುವ ರೈತಪರ ಯೋಜನೆಗಳನ್ನು ಶೀಘ್ರ ಅನುಷ್ಠಾನಕ್ಕೆ ತರಲು ಜಿಲ್ಲಾಡಳಿತ ಮೊದಲ ಆದ್ಯತೆ ನೀಡಿದೆ. ಜಿಲ್ಲೆಯಲ್ಲಿ ಕಂದಾಯ ಇಲಾಖೆಯಲ್ಲಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ರೂಪಿಸಿರುವ ಕಾರ್ಯ ಕ್ರಮ ಕುರಿತು ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ‘ಆಂದೋಲನ’ ವಿಶೇಷ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡರು.
ಆಂದೋಲನ: ಇ-ಪೌತಿ ಖಾತೆ ಆಂದೋಲನಕ್ಕೆ ಚಾಲನೆ ನೀಡಲಾಗಿದೆಯೇ?
ಡಾ.ಪಿ.ಶಿವರಾಜು: ಇ-ಪೌತಿ ಖಾತೆ ಆಂದೋಲನ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಅರ್ಹ ರೈತರ ಪಹಣಿಗಳಿಗೆ ಆಧಾರ್ ಸಂಖ್ಯೆ ಜೋಡಣೆಯಾಗಿದೆ. ಆಧಾರ್ ಸಂಖ್ಯೆ ಜೋಡಣೆ ಮಾಡುವಾಗ ಮೃತಪಟ್ಟಿರುವ ವ್ಯಕ್ತಿಗಳ ಹೆಸರಿನಲ್ಲಿ ಈಗಲೂ ಆರ್‌ಟಿಸಿ ಇರುವ ಪ್ರಕರಣಗಳು ತುಂಬಾ ಕಂಡು ಬಂದಿವೆ. ಹಾಗಾಗಿ ಮೃತಪಟ್ಟವರ ಹೆಸರಿನಲ್ಲಿರುವ ಖಾತೆಯನ್ನು ಅವರ ಉತ್ತರಾಧಿಕಾರಿಗಳಿಗೆ ಪೌತಿ ಖಾತೆ ಮಾಡಿಕೊಡಲಾಗುತ್ತದೆ. ಗ್ರಾಮ ಆಡಳಿತ ಅಧಿಕಾರಿಗಳಿಗೆ ಕಾಲಮಿತಿಯನ್ನು ವಿಧಿಸಿ ನಿರ್ದಿಷ್ಟ ಪ್ರಕರಣಗಳನ್ನುಕೈಗೆತ್ತಿಕೊಂಡು ಮನೆ ಮನೆಗೆ ಖಾತೆ ತಲುಪಿಸುವಂತೆ ಮಾಡಲಾಗುವುದು. ಮೃತ ರೈತರ ಮಕ್ಕಳು ಕಚೇರಿಗೆ ಅಲೆಯಬೇಕಿಲ್ಲ. ಕಂದಾಯ ಇಲಾಖೆ ಅಽಕಾರಿಗಳೇ ಅವರ ಮನೆ ಬಾಗಿಲಿಗೆ ಬಂದು ಖಾತೆ ಪತ್ರವನ್ನು ತಲುಪಿಸುವಂತೆ ಮಾಡುತ್ತೇವೆ.
ಆಂದೋಲನ: ರೈತರ ಆಸ್ತಿಗಳ ಡಿಜಿಟೈಸ್ ಮಾಡುವ ಭೂ ಸುರಕ್ಷಾ ಯೋಜನೆಯಿಂದ ರೈತರಿಗೆ ಏನು ಅನುಕೂಲವಾಗಲಿದೆ?
ಡಾ.ಪಿ.ಶಿವರಾಜು: ಭೂ ಸುರಕ್ಷಾ ಯೋಜನೆಯಡಿ ಎಲ್ಲ ತಾಲ್ಲೂಕು ಕಚೇರಿಗಳಲ್ಲಿ ಶಾಶ್ವತವಾಗಿ ಇರಬೇಕಾದ ರೈತರಿಗೆ ಸಂಬಂಧಪಟ್ಟ ದಾಖಲೆಗಳು, ಎ ಮತ್ತು ಬಿ ಕೆಟಗರಿಯ ಎಲ್ಲ ಸರ್ಕಾರಿ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಿ ಡಿಜಿಟೈಸ್ ಮಾಡಿ ಅವುಗಳನ್ನು ಸಾರ್ವಜನಿಕರು, ರೈತರಿಗೆ ಆನ್‌ಲೈನ್ ಮೂಲಕ ವಿತರಿಸಲಾಗುತ್ತದೆ. ಎಲ್ಲ ತಾಲ್ಲೂಕು ಕಚೇರಿಗಳ ರೆಕಾರ್ಡ್ ರೂಂಗಳಲ್ಲಿ ಡಿಜಿಟೈಸ್ ಮಾಡಿ ಇಡಲಾಗುವುದು. ಯಾವುದೇ ದಾಖಲೆಗಳನ್ನು ಕೇಳಿ ರೈತರು ಅರ್ಜಿ ಸಲ್ಲಿಸಿದಾಗ ತಕ್ಷಣವೇ ಆನ್‌ಲೈನ್ ಮೂಲಕ ವಿತರಿಸಲು ಕ್ರಮವಹಿಸಲಾಗುತ್ತದೆ. ಇದರಿಂದಾಗಿ ಫೋರ್ಜರಿ ಮಾಡುವುದು, ವಿಳಂಬ ಮಾಡುವುದು ಮತ್ತು ದಾಖಲೆಗಳು ಇಲ್ಲವೆಂದು ಹೇಳುವುದಕ್ಕೆ ಸಾಧ್ಯವಿಲ್ಲ.
ಆಂದೋಲನ: ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಪರಿಹಾರ ದೊರಕುತ್ತಿದೆಯೇ?
ಡಾ.ಪಿ.ಶಿವರಾಜು: ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಪರಿಹಾರ ಕೊಡುವುದು ಬಾಕಿ ಇಲ್ಲ. ಜಿಲ್ಲಾ ಮಟ್ಟದ ಸಮಿತಿಯು ವರದಿ ನೀಡಿದ ತಕ್ಷಣವೇ ಪರಿಹಾರ ಕೊಡಲಾಗುತ್ತದೆ. ವಿಶೇಷವಾಗಿ ಜಿಲ್ಲಾಡಳಿತದಿಂದ ಮೃತ ರೈತನ ಪತ್ನಿಗೆ ಮಾಸಾಶನ, ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ಇನ್ನಿತರ ಸೌಲಭ್ಯ ಸಿಗುವಂತೆ ಮಾಡಿಕೊಡಲಾಗುವುದು. ಕೃಷಿ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಪರಿಶೀಲಿಸಿ ವರದಿ ನೀಡುವುದರಿಂದ ನಾವು ಅದಕ್ಕೆ ತಕ್ಕಂತೆ ಪರಿಹಾರವನ್ನು ಸಕಾಲದಲ್ಲಿ ನೀಡುತ್ತಿದ್ದೇವೆ.
ಆಂದೋಲನ: ಗ್ರಾಮ ಆಡಳಿತಾಧಿಕಾರಿಗಳ ಕೊರತೆ ಇದೆ ಎನ್ನುವ ದೂರುಗಳು ಇವೆಯಲ್ಲಾ?
ಡಾ.ಪಿ.ಶಿವರಾಜು: ಎಲ್ಲ ಇಲಾಖೆಗಳಿಗೂ ಕಂದಾಯ ಇಲಾಖೆ ಮಾತೃ ಇಲಾಖೆಯಾಗಿದೆ. ಸರ್ಕಾರ ಆಯಾಯ ಸಂದರ್ಭದಲ್ಲಿ ನೇಮಕಾತಿಗೆ ಅನುಮೋದನೆ ನೀಡುತ್ತಿದೆ. ಜಿಲ್ಲೆಯಲ್ಲಿ ಖಾಲಿ ಇದ್ದ ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಯಲ್ಲಿ ೬೦ ಹುದ್ದೆಗಳಿಗೆ ಹೊಸ ನೇಮಕಾತಿ ಆಗಿದೆ. ಇವರುಗಳು ಈ ವರ್ಷ ನೇಮಕಗೊಂಡು ತರಬೇತಿ ಪಡೆಯುತ್ತಿದ್ದಾರೆ. ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ೧೮೩ ಗ್ರಾಮ ಆಡಳಿತಾಧಿಕಾರಿಗಳಿಗೆ ಸರ್ಕಾರದಿಂದ ಅವರ ಕಾರ್ಯಕ್ಷಮತೆ ಹೆಚ್ಚಿಸಲು ಲ್ಯಾಪ್‌ಟಾಪ್ ಗಳನ್ನು ನೀಡಿದೆ. ಇದರಿಂದಾಗಿ ಹಳ್ಳಿಗಳಲ್ಲಿ ಸಕಾಲದಲ್ಲಿ ಜನರ ಕೆಲಸ ಗಳನ್ನು ಮಾಡಿಕೊಡಲು ಅನುಕೂಲವಾಗಿದೆ.
ಆಂದೋಲನ: ಭೂ ವ್ಯಾಜ್ಯಗಳ ಪ್ರಕರಣ ಇತ್ಯರ್ಥವಾಗುತ್ತಿದೆಯೇ?
ಡಾ.ಪಿ.ಶಿವರಾಜು: ಹಲವಾರು ವರ್ಷಗಳಿಂದ ಇದ್ದ ಭೂ ವ್ಯಾಜ್ಯ ಪರಿಹಾರಗಳನ್ನು ಇನ್ನುಒಂದು ವರ್ಷದಲ್ಲಿ ಶೀಘ್ರವಾಗಿ ಇತ್ಯರ್ಥಪಡಿಸುವ ಕೆಲಸ ಮಾಡಲಾಗುತ್ತಿದೆ. ೨೦೨೪ರ ಜುಲೈನಿಂದ ೨೦೨೫ರ ಜೂನ್ತನಕ ತಹಸಿಲ್ದಾರ್ ಮತ್ತು ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿ ೫,೯೯೩, ಜಿಲ್ಲಾಧಿಕಾರಿ ಮತ್ತು ವಿಶೇಷ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ೯೨೪, ಕಂದಾಯ ನ್ಯಾಯಾಲಯದಲ್ಲಿ ಸುಮಾರು ೬,೯೦೦ಕ್ಕೂ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಿದೆ. ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸಿದರೆ ರೈತರಿಗೆ ಅನುಕೂಲವಾಗಲಿದೆ.
ಆಂದೋಲನ: ಜನರ ಸಮಸ್ಯೆಗಳನ್ನು ತಪ್ಪಿಸಲು ಏನು ಕ್ರಮಕೈಗೊಂಡಿದ್ದೀರಾ?
ಡಾ.ಪಿ.ಶಿವರಾಜು: ಜನರ ಸಮಸ್ಯೆ ಪರಿಹರಿಸುವುದು ಕಂದಾಯ ಇಲಾಖೆ ಕೆಲಸವಾಗಿದೆ. ಜನಸ್ನೇಹಿ ಆಡಳಿತ ನೀಡುವುದು ಮುಖ್ಯ. ಗ್ರಾಮ ಆಡಳಿತದಿಂದ ಜಿಲ್ಲಾ ಮಟ್ಟದವರೆಗೆ ಜನರಿಗೆ ತ್ವರಿತಗತಿಯಲ್ಲಿ ಸೇವೆ ನೀಡಬೇಕು. ಈಗಾಗಲೇ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ದೂರು ಬಾರದಂತೆ ಕಾರ್ಯ ನಿರ್ವಹಿಸಲು ಸೂಚನೆ ನೀಡಲಾಗಿದೆ. ಭೂಸುಧಾರಣಾ ಕ್ರಮಗಳಿಂದ ನಿಗದಿತ ದಿನಗಳಲ್ಲಿ ಕೆಲಸಗಳು ನಡೆಯುತ್ತಿವೆ. ಒಂದು ವೇಳೆ ವಿಳಂಬವಾಗಿ, ಅಂತಹವರ ವಿರುದ್ಧ ದೂರು ಬಂದರೆ ಮುಲಾಜಿಲ್ಲದೇ ಕ್ರಮಜರುಗಿಸಲಾಗುವುದು. ತಹಸಿಲ್ದಾರ್ ಕಚೇರಿಯಲ್ಲಾಗಲಿ, ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಾಗಲಿ ಸೇವೆ ವಿಳಂಬ ಮಾಡುವಂತಿಲ್ಲ.
ಬೆಂಗಳೂರು: ಬಳ್ಳಾರಿ ಗಲಭೆಗೆ ಕಾರಣಕರ್ತರಾದ ಶಾಸಕ ನಾರಾ ಭರತ್‍ರೆಡ್ಡಿಯನ್ನು ದ್ವೇಷಭಾಷಣ ಕಾಯ್ದೆಯಡಿ ಬಂಧಿಸಿ ಸರ್ಕಾರ ಜೈಲಿಗೆ ಏಕೆ ಹಾಕಿಲ್ಲ ಎಂದು…
ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂದು ಪ್ರಸಿದ್ಧಿ ಪಡೆದಿರುವ ಗವಿಸಿದ್ದೇಶ್ವರ ಮಹಾ ರಥೋತ್ಸವ ನಾಳೆಯಿಂದ ಆರಂಭವಾಗಲಿದೆ. ಮಹಾರಥೋತ್ಸವಕ್ಕೆ ಮೇಘಾಲಯ ರಾಜ್ಯಪಾಲ…
ನಟನಾಗಿ ಹೆಸರಾಗಿದ್ದ ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೇಲ್ ಎಂಬ ಸಿನಿಮಾ ನಿರ್ದೇಶನ ಮಾಡುವ ಮೂಲಕ ಮೊದಲ ಹೆಜ್ಜೆಯಲ್ಲಿಯೇ ಗೆಲುವು ಕಂಡಿದ್ದರು.…
ಹುಬ್ಬಳ್ಳಿ: ಕರ್ನಾಟಕದ ವಾಣಿಜ್ಯನಗರಿಯಲ್ಲಿ ಒಂದೇ ದಿನದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ನಡೆದ ಅತ್ಯಾಚಾರ ಪ್ರಕರಣವು ಇಡೀ ಉತ್ತರ ಕರ್ನಾಟಕವನ್ನು…
ಬೆಂಗಳೂರು: ಸರ್ಕಾರದ ಆಡಳಿತದಲ್ಲಿ ಪ್ರಮುಖ ವಹಿಸುವ ಸಿಬ್ಬಂದಿಗಳಿಗೆ ಸೂಕ್ತ ವಿಮಾ ಭದ್ರತೆ ಒದಗಿಸುವುದು ಅತಿ ಮುಖ್ಯ ಮತ್ತು ಅತ್ಯಂತ ಜವಾಬ್ದಾರಿ…
ಬೆಂಗಳೂರು: ಬಳ್ಳಾರಿಯಲ್ಲಿ ನಡೆದ ಗಲಾಟೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವ ಸಾಧ್ಯತೆ ಇದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಗೃಹ…