ಇದು ಕಳೆದ ಒಂದು ವರ್ಷದಿಂದೀಚಿನ ಬೆಳವಣಿಗೆ. ಬೇರೆ ರಾಜ್ಯಗಳಲ್ಲಿ ಇದು ನಡೆದಿತ್ತೋ ಏನೋ ಮಾಹಿತಿ ಇಲ್ಲ. ಆದರೆ ಕೇರಳದಲ್ಲಿ ಈ ಸುದ್ದಿ ಆಯಿತು. ಸಿನಿಮಾ ಕುರಿತು ಹೇಳುವ ಸಾಮಾಜಿಕ ಮಾಧ್ಯಮಗಳ, ಯುಟ್ಯೂಬ್ ವಾಹಿನಿಗಳ ಪ್ರತಿನಿದಿಗಳಿಗೆ ಹೊಸ ಚಿತ್ರಗಳ ಬಿಡುಗಡೆ ವೇಳೆ ಆಹ್ವಾನ ನೀಡದೆ ಇರುವ ನಿರ್ಧಾರವದು.
ಮನರಂಜನಾ ವಾಹಿನಿಗಳ ಸಿನಿಮಾ ಪ್ರತಿನಿಽಗಳಿಗೆ ಈ ನಿಷೇಧ ಇರಲಿಲ್ಲ. ಸುದ್ದಿ ವಾಹಿನಿಗಳಿಗೂ ಕೂಡ. ಇದಕ್ಕೆ ಅಲ್ಲಿನದೇ ಆದ ಕಾರಣವೂ ಇತ್ತು. ಸಿನಿಮಾ ನೋಡುತ್ತಿದ್ದಂತೆಯೇ ಅದರ ಕುರಿತ ಪ್ರತಿಕ್ರಿಯೆ ಆಯಾ ತಾಣಗಳಲ್ಲಿ ಪ್ರಸಾರವಾಗುತ್ತಿತ್ತು. ಅದು ನಕಾರಾತ್ಮಕವೋ ಸಕಾರಾತ್ಮಕವೋ ಎನ್ನುವುದು ಚಿತ್ರದ ಪ್ರಚಾರದ ವೇಳೆ, ಅಂತಹ ಮಂದಿಯನ್ನು ಚಿತ್ರದ ನಿರ್ಮಾಪಕರೋ, ವಿತರಕರೋ ಹೇಗೆ ನೋಡಿಕೊಳ್ಳುತ್ತಾರೆ ಎನ್ನುವುದರ ಮೇಲೆ ನಿರ್ಧಾರವಾಗುತ್ತಿತ್ತು ಎನ್ನಲಾಗುತ್ತಿದೆ.
ಈ ಕಾರಣದಿಂದಲೇ ಇಂತಹದೊಂದು ನಿರ್ಧಾರ ಎನ್ನುವುದು ನಿರ್ಮಾಪಕರ ಪ್ರತಿನಿಧಿಗಳ ಮಾತು. ನವಮಾಧ್ಯಮಗಳಲ್ಲಿ ದೃಶ್ಯ ಪತ್ರಿಕೋದ್ಯಮವನ್ನು ಗಂಭೀರವಾಗಿ ಪರಿಗಣಿಸಿಕೊಂಡ ಕೆಲವನ್ನು ಹೊರತುಪಡಿಸಿದರೆ ಉಳಿದಂತೆ ಬಹುತೇಕರದು ವೀಕ್ಷಕರನ್ನು ಸೆಳೆಯುವ ತಂತ್ರದವುಗಳದ್ದೇ ಕಾರುಬಾರು. ಸಿನಿಮಾ ಪತ್ರಿಕೋದ್ಯಮ, ವಿಮರ್ಶೆಯ ಹೆಸರಲ್ಲಿ ಬರುವ ಹೆಚ್ಚಿನ ಅನಿಸಿಕೆಗಳು ಇದಕ್ಕೆ ಪೂರಕವಾಗಿಯೇ ಇರುತ್ತವೆ. ಕಳೆದ ವಾರ ತೆರೆಕಂಡ ಹೆಸರಾಂತ ನಿರ್ಮಾಣ ಸಂಸ್ಥೆಯೊಂದರ ಹಿಂದಿ ಚಿತ್ರದ ಪ್ರೀಮಿಯರ್ ಪ್ರದರ್ಶನಕ್ಕೆ ಮಾಧ್ಯಮದ ಮಂದಿಗೆ ಆಹ್ವಾನ ಇರಲಿಲ್ಲ.
ಅದಕ್ಕೆ ವಿಮರ್ಶಕರ ದುಬಾರಿ ಬೇಡಿಕೆ ಕಾರಣ ಎನ್ನುವುದನ್ನು ಸಂಸ್ಥೆಯೇ ಹೇಳಿದ್ದಾಗಿ ವರದಿಯಾಗಿತ್ತು. ವಿಮರ್ಶೆಗಳು ಗಲ್ಲಾಪೆಟ್ಟಿಗೆಯ ಗಳಿಕೆಯ ಮೇಲೆ ಪ್ರಭಾವ ಬೀರುತ್ತವೆ ಎನ್ನುವುದು ಬಹುತೇಕ ನಿರ್ಮಾಪಕರ ಅಭಿಪ್ರಾಯ. ಅದಕ್ಕಾಗಿ ಅವರಲ್ಲಿ ಹಲವರು ಪ್ರಭಾವಿಗಳು (ಇನ್ ಫ್ಲುಯೆನ್ಸರ್). ಅವರಿಗೋ, ವಿಮರ್ಶೆಗೆ, ಸಿನಿಮಾ ಕುರಿತ ಸಂದರ್ಶನ, ಲೇಖನ ಇತ್ಯಾದಿಗಳಿಗೆ ಅವರವರ ಯೋಗ್ಯತಾನುಸಾರ ಸಂಭಾವನೆ (? ) ನೀಡುವ ವಾಡಿಕೆಯೂ ಇದೆ.
ಸಾಮಾಜಿಕ ತಾಣಗಳಲ್ಲಿ ಸಿನಿಮಾ ಕುರಿತಂತೆ, ಸಿನಿಮಾ ಮಂದಿಯ ಕುರಿತಂತೆ ಯಾರೂ ಏನು ಬೇಕಾದರೂ ಹೇಳಬಹುದು ಎನ್ನುವ ದಿನಗಳಿವು. ಯುಟ್ಯೂಬ್ ವಾಹಿನಿಗಳಲ್ಲಿ ಪ್ರಸಾರವಾಗುವ ಚಿತ್ರಿಕೆಗಳನ್ನು ಹೆಚ್ಚು ಮಂದಿ ನೋಡಿದಷ್ಟು ಅವುಗಳ ಮಾಲೀಕರಿಗೆ ಹೆಚ್ಚು ಹೆಚ್ಚು ಹಣ ಬರುತ್ತದೆ. ಈ ಕಾರಣದಿಂದಲೇ ರೋಚಕ ಸುದ್ದಿಗಳಿಗೆ ಅಗ್ರಪೂಜೆ. ವಿವಾದಾತ್ಮಕ ಹೇಳಿಕೆಗಳಿಗೆ ಮೊದಲ ಸ್ಥಾನ. ಕೆಲವೊಮ್ಮೆ ಹೇಳಿಕೆಗಳನ್ನು ಕತ್ತರಿಸಿ, ವಿವಾದ, ರೋಚಕತೆಗಳಿಗೆ ದಾರಿ ಮಾಡಿಕೊಡುವ ಕೆಲಸವೂ ಅಲ್ಲಿ ನಡೆಯುತ್ತದೆ. ಮಹಾಭಾರತ ಯುದ್ಧದ ವೇಳೆ ಕೌರವ ಸೇನೆಯ ಸಾರಥಿಯಾಗಿ ದ್ರೋಣಾಚಾರ್ಯರಿದ್ದ ಸಂದರ್ಭದಲ್ಲಿ ಅಶ್ವತ್ಥಾಮ ಹತೋ ಹತಃಕುಂಜರಃ ಎನ್ನುವ ವೇಳೆ ಕುಂಜರ (ಆನೆ)ದ ಹೆಸರನ್ನು ಅಸ್ಪಷ್ಟವಾಗಿ, ಹೇಳಿದ್ದರಿಂದ ಅಶ್ವತ್ಥಾಮ ಹತನಾದ ಎಂದುಕೊಂಡ ಅವನ ತಂದೆ ದ್ರೋಣಾಚಾರ್ಯರು ವಿವಶರಾದ ಪ್ರಸಂಗ ಇಂತಹ ಪ್ರಸಂಗಗಳನ್ನು ನೋಡಿದಾಗ ನೆನಪಾಗುತ್ತದೆ.
ಸಿನಿಮಾ ಮಾಧ್ಯಮ ಡಿಜಿಟಲ್‌ಗೆ ಹೊರಳಿದ ನಂತರ ಇತ್ತ ಬಹುತೇಕರ ಗಮನಹರಿಯಿತು. ಸಿನಿಮಾ ಕುರಿತ ಸಾಂಪ್ರದಾಯಕ ಅಧ್ಯಯನ, ಅದರ ವ್ಯಾಕರಣ, ಸಿದ್ಧಾಂತಗಳ ಗೊಡವೆ, ಅಗತ್ಯ ಇಲ್ಲ ಎನ್ನುವ ಮನೋಭಾವದ ಮಂದಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗತೊಡಗಿದ್ದಾರೆ. ಯಾರು ಬೇಕಾದರೂ ಚಿತ್ರ ನಿರ್ಮಿಸಬಹುದು, ನಿರ್ದೇಶಿಸಬಹುದು, ನಟಿಸಬಹುದು ಎನ್ನುವವರ ಸಂಖ್ಯೆ ಹೆಚ್ಚತೊಡಗಿದೆ. ನೀವು ಟಿವಿ ಧಾರಾವಾಹಿಗಳಲ್ಲಿ ನಟಿಸಬೇಕೆ? ಸಿನಿಮಾಗಳಲ್ಲಿ ನಟಿಸಬೇಕೆ? ಹಾಗಾದರೆ ನಮ್ಮಲ್ಲಿ ಬನ್ನಿ ಎನ್ನುವ ಭಿತ್ತಿಪತ್ರಗಳನ್ನು ಎಲ್ಲೆಂದರಲ್ಲಿ ನೋಡಬಹುದು. ಅಲ್ಲಿಗೂ ಎಡತಾಕಿ ಬರುವವರಿದ್ದಾರೆ. ಕಡಿಮೆ ವೆಚ್ಚದಲ್ಲಿ ಸಿನಿಮಾ ನಿರ್ಮಿಸುವುದು ಈ ದಿನಗಳಲ್ಲಿ ಸುಲಭ ಎನ್ನುವುದನ್ನು ಮನಗಂಡ ಸಾಕಷ್ಟು ಮಂದಿ ಕನ್ನಡ ಚಿತ್ರಗಳ ನಿರ್ಮಾಪಕರಾಗಿದ್ದಾರೆ, ನಿರ್ದೇಶಕರಾಗಿದ್ದಾರೆ, ನಟರೂ ಆಗಿದ್ದಾರೆ.
ಕಿರುತೆರೆ ಧಾರಾವಾಹಿಗಳ ನಿರ್ಮಾಣ ವೆಚ್ಚ ಅವರಲ್ಲಿ ಬಹುತೇಕರಿಗೆ ಅಳತೆಗೋಲು. ಸರ್ಕಾರ ನೀಡುವ ಸಹಾಯಧನದ ಹೆಸರಲ್ಲಿ, ಟಿವಿ, ಒಟಿಟಿ, ಆಡಿಯೋ ಹಕ್ಕುಗಳ ಮಾರಾಟದ ಮೂಲಕ ಕೋಟಿಗಟ್ಟಲೆ ಲಾಭ ಮಾಡಬಹುದು ಎಂದು ಚಿತ್ರರಂಗವೆಂಬ ದೂರದಬೆಟ್ಟವನ್ನು ದೂರದಿಂದ ನೋಡಿ ಬರುವವರಿಗೆ ಇಲ್ಲಿನ ಕಲ್ಲು, ಮುಳ್ಳು, ಕಲ್ಲುಬಂಡೆಗಳು ಸಾಮಾನ್ಯವಾಗಿ ಭ್ರಮನಿರಸನಗೊಳಿಸುತ್ತವೆ. ಆದರೆ ಅಂತಹದೊಂದು ಅನುಭವ ಆಗುವ ವೇಳೆಗೆ ಸಮಯ ಸರಿದಿರುತ್ತದೆ. ಬಹಳಷ್ಟು ಸಂದರ್ಭಗಳಲ್ಲಿ ನವಮಾಧ್ಯಮ, ಕಿರುತೆರೆ ಮತ್ತು ಇತರ ಮಾಧ್ಯಮಗಳಲ್ಲಿ ಸಿಗುವ ಪ್ರಚಾರಗಳೇ ಇವರಿಗೆ ಸಿಗುವ ಲಾಭ. ಇದಕ್ಕಾಗಿ ಈ ಕ್ಷೇತ್ರಕ್ಕೆ ಕಾಲಿಡುವವರೂ ಇದ್ದಾರೆ; ಇದರಲ್ಲೇ ಅವರಿಗೆ ತೃಪ್ತಿ ಎನ್ನುವ ಮಾತೂ ಇದೆ. ಹೊಸ ಚಿತ್ರಗಳು ತೆರೆಕಂಡಾಗ ಅವುಗಳ ಕುರಿತಂತೆ ಪತ್ರಿಕೆಗಳಲ್ಲೋ, ಇತರ ಮಾಧ್ಯಮಗಳಲ್ಲೋ ಪ್ರಕಟವಾಗುವ ಅನಿಸಿಕೆಗಳು, ಸಿನಿಮಾ ಅಧ್ಯಯನ, ಸಿದ್ಧಾಂತಗಳ ಹಿನ್ನೆಲೆಯವಲ್ಲ. ಸೀಮಿತ ಸ್ಥಳ, ಶಬ್ದ ಮಿತಿಯ ಅವಸರ ಸಾಹಿತ್ಯ.
ವಿಶೇಷವಾಗಿ ಮುಖ್ಯವಾಹಿನಿ ಚಿತ್ರಗಳ ಕುರಿತಂತೆ ಅದನ್ನು ನೋಡಿದ ಪತ್ರಕರ್ತನ ವಿಶ್ಲೇಷಣೆ ಆಗಿರುತ್ತದೆ. ಇತ್ತೀಚೆಗೆ ಸಹೋದ್ಯೋಗಿಯೊಬ್ಬರು ಈ ಕುರಿತಂತೆ ಪ್ರಸ್ತಾಪಿಸುತ್ತಾ, ‘ಮೊದಲೆಲ್ಲ ಸಿನಿಮಾ ನೋಡಿ ಹೊರಗೆ ಬರುವಾಗ ಹೇಗಿದೆ ಸಿನಿಮಾ? ಎಂದು ಕೇಳುತ್ತಿದ್ದರು. ಈಗ ಹೊರಗೆ ಬರುತ್ತಲೇ ಎಷ್ಟು ಸ್ಟಾರ್ ಕೊಡುತ್ತೀರಿ? ಎಂದು ಕೇಳುತ್ತಾರೆ’ ಎಂದು ಹೇಳಿದ ಮಾತು, ಕನ್ನಡ ಮಾತ್ರವಲ್ಲ, ಎಲ್ಲ ಭಾರತೀಯ ಭಾಷೆಗಳ ಚಿತ್ರೋದ್ಯಮಿಗಳ ಮನಸ್ಥಿತಿ, ಸಿನಿಮಾ ಕುರಿತಂತೆ ಅವರ ಕಾಳಜಿಗೆ ಹಿಡಿದ ಕನ್ನಡಿ ಎಂದರೆ ತಪ್ಪಿಲ್ಲ. ಗಲ್ಲಾಪೆಟ್ಟಿಗೆ ಗಳಿಕೆಯತ್ತ ಮಾತ್ರ ಅವರ ಗಮನ. ಈ ಮಾಧ್ಯಮ ಸಮಾಜದ ಮೇಲೆ ಬೀರಬಹುದಾದ ಪರಿಣಾಮದ ಕುರಿತು ಅವರ ಯೋಚನೆ ಖಂಡಿತ ಇಲ್ಲ ಎನ್ನುವುದಕ್ಕೆ ಇತ್ತೀಚೆಗೆ ಬರುತ್ತಿರುವ, ಗಲ್ಲಾಪೆಟ್ಟಿಗೆ ದೋಚುತ್ತಿರುವ ಕೆಲವು ಸಿನಿಮಾಗಳು ಸಾಕ್ಷಿಯಾಗುತ್ತವೆ. ತೆರೆಯ ಮೇಲೆ ಹಿಂಸೆಯನ್ನು ವಿಜೃಂಭಿಸುವ ಚಿತ್ರಗಳೇ ಈಗ ಹೆಚ್ಚಾಗಿ ಬರುತ್ತವೆ. ‘ಸೆಕ್ಸ್ ಮತ್ತು ಹಿಂಸೆ ಮಾತ್ರ ಮಾರಾಟವಾಗುತ್ತವೆ’ ಎನ್ನುವುದು ಹಲವರ ಘೋಷವಾಕ್ಯ ಆಗತೊಡಗಿದೆ.
ಸಿನಿಮಾಗಳಲ್ಲಿ ನಟಿಸಲು ಬರುವವರಲ್ಲಿ ಕೆಲವರು ಅದಕ್ಕೆ ಬೇಕಾದ ತರಬೇತಿ ಪಡೆಯುವವರಿದ್ದಾರೆ. ಅಭಿನಯಕ್ಕಿಂತ, ಹೊಡೆದಾಟ ಬಡಿದಾಟಗಳಲ್ಲಿ ಪ್ರಾವೀಣ್ಯತೆ ಪಡೆಯುವವರಿದ್ದಾರೆ. ನಾಯಕನಟ ಆಗಬೇಕಾದರೆ ಮಚ್ಚು ಹೇಗೆ ಹಿಡಿಯಬೇಕು ಎನ್ನುವುದು ತಿಳಿದಿರಬೇಕು ಎನ್ನುವ ನವಪ್ರತಿಭೆಗಳಿವೆ! ನಮ್ಮ ಚಿತ್ರಗಳ ಇಂದಿನ ಗುಣಮಟ್ಟ ನಿಜಕ್ಕೂ ನೋವುಂಟುಮಾಡುತ್ತಿದೆ. ಎಂತೆಂತಹ ಉತ್ತಮ ಚಿತ್ರಗಳು ಬಂದವು ನಮ್ಮಲ್ಲಿ. ಆದರೆ ಈಗ ಅದಾವುದೂ ಇಲ್ಲ. ಹಿಂಸೆ, ಕ್ರೌರ್ಯಗಳನ್ನು ವಿಜೃಂಭಿಸುವ ಚಿತ್ರಗಳು. ಹೆಣ್ಣನ್ನು ಅರೆಬೆತ್ತಲೆ ಮಾಡಿ ತೋರಿಸುವ ಚಿತ್ರಗಳು. . . ಇವು ನಮಗೆ ಬೇಕೆ? ಲೈಂಗಿಕ, ಅಶ್ಲೀಲ, ದ್ವಂದ್ವಾರ್ಥಗಳ ಕತೆ ಒಂದೆಡೆಯಾದರೆ, ಹಿಂಸೆ, ಕ್ರೌರ್ಯಗಳ ಕತೆ ಮತ್ತೊಂದೆಡೆ. ದಿನಬೆಳಗಾದರೆ ಕೊಲೆ, ಸುಲಿಗೆ, ಬಲಾತ್ಕಾರಗಳ ಸುದ್ದಿ ಓದುತ್ತಿರುತ್ತೇವೆ. ಆದರೆ ಅದನ್ನು ಮಾಡಿದ ಅಪರಾಽಗಳಿಗೆ ಶಿಕ್ಷೆಯಾದ ಸುದ್ದಿ ಓದುತ್ತಿದ್ದೇವೆಯೇ? ಇಲ್ಲ. ಅಂಥವರಿಗಾಗಿ ನಾವು ಏಕೆ ಮರುಗಬೇಕು? ಕದ್ದವನು ಇನ್ನೊಮ್ಮೆ ಕದಿಯದಂತೆ ಮಾಡುತ್ತೀವಾ ನಾವು? ಇಲ್ಲ.
ನನ್ನನ್ನು ಕೇಳಿದರೆ ಹಿಂಸೆ, ಲೈಂಗಿಕತೆಗಳನ್ನು ಮೆರೆಯುವ ಚಿತ್ರಗಳನ್ನು ಪ್ರೋತ್ಸಾಹಿಸಬಾರದು. ಫೈಟಿಂಗ್ ಬೇರೆ, ಹಿಂಸೆ ಬೇರೆ. ಕತ್ತರಿಸೋದು, ಕೊಚ್ಚಿ ಹಾಕೋದು ಚಿತ್ರಗಳಲ್ಲಿರಬಾರದು. ಸೆನ್ಸಾರ್ ಇರುವುದು ಏತಕ್ಕೆ? ಇವುಗಳನ್ನು ಸೆನ್ಸಾರ್ ತಡೆಯಬೇಕು. ಸಮಾಜದ ಸ್ವಾಸ್ಥ್ಯವನ್ನು ಕೆಡಿಸಬಲ್ಲ ಇಂತಹ ಚಿತ್ರಗಳನ್ನು ಬರಗೊಡಲು ಬಿಡಬಾರದು. ಇದು ೩೦ ವರ್ಷಗಳ ಹಿಂದೆ ಡಾ. ರಾಜ್‌ಕುಮಾರ್ ಅವರು, ತಮ್ಮ ವೃತ್ತಿಜೀವನದ ನಲವತ್ತನೇ ವರ್ಷ ನೀಡಿದ ಸಂದರ್ಶನವೊಂದರಲ್ಲಿ ಆಡಿದ್ದ ಮಾತುಗಳು. ಬಹುಶಃ ಈ ಮಾತುಗಳು ಇಂದಿನ ಪೀಳಿಗೆಯ ನಟರಿಗಾಗಲಿ, ನಿರ್ಮಾಪಕ, ನಿರ್ದೇಶಕರಿಗಾಗಲೀ ರುಚಿಸಲಾರದು. ಅಂತಹದೊಂದು ಯೋಚನೆ ಮಾಡಬಲ್ಲವರು ಈಗ ಯಾರಿದ್ದಾರೆ? ಸಿನಿಮಾ ವಿಮರ್ಶೆಗಳ ಹೆಸರಿನ ಬರಹಗಳಲ್ಲಿನ ‘ಸ್ಟಾರ್’ಗಳಿಗೂ ಗಲ್ಲಾಪೆಟಿಗೆಯ ಗಳಿಕೆಗೂ ಪರಸ್ಪರ ಸಂಬಂಧ ಇದೆ ಎನ್ನುವ ನಂಬಿಕೆ ಕೆಲವು ನಿರ್ಮಾಪಕರಿಗಿದೆ.
ಹಾಗಿದ್ದರೂ, ರಾಜಕೀಯ ಸಮಾರಂಭಗಳಿಗೆ ಪಕ್ಷದ ಮಂದಿ ಜನ ಸೇರಿಸುವಂತೆ, ಇಲ್ಲೂ ಚಿತ್ರ ತೆರೆಕಂಡಾಗ ‘ಕ್ರೌಡ್ ಪುಲ್ಲಿಂಗ್’ ಮಾಡಲು ಮಧ್ಯವರ್ತಿಗಳಿದ್ದಾರೆ. ಈ ಕೆಲಸ ನಿರ್ಮಾಪಕರ ಶಕ್ತ್ಯನುಸಾರ ಮುಂದುವರಿಯುತ್ತದೆ. ಈ ನಡುವೆ ಕಟುವಾಗಿ ವಿಮರ್ಶಿಸಬೇಡಿ; ನಿರ್ಮಾಪಕರ ಬಂಡವಾಳ ವಾಪಸ್ ಬರಲು, ಉಸಿರಾಡಲು ಅವಕಾಶ ಕೊಡಿ ಎನ್ನುವ ಕೋರಿಕೆ, ಹೋಟೆಲಿನ ತಿಂಡಿಗೆ ಮತ್ತು ಸಿನಿಮಾಕ್ಕೆ ಹೂಡುವ ಬಂಡವಾಳ ಮತ್ತು ಅದನ್ನು ಪಡೆಯುವ ಗ್ರಾಹಕ ಮತ್ತು ಪ್ರೇಕ್ಷಕನ ಮೇಲಿನ ಹೊಣೆಗಾರಿಕೆಯ ಮಾತೂ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ಎಲ್ಲರೂ ಇಲ್ಲಿ ಸ್ವತಂತ್ರರು, ಎಲ್ಲವೂ ಇಲ್ಲಿ ಮುಕ್ತ. ಒಳ್ಳೆಯದು, ಕೆಟ್ಟದು ಎಲ್ಲವೂ ಸೇರಿದಂತೆ. ತಮ್ಮ ಜೇಬಿನ ಸ್ವಾಸ್ಥ್ಯಕ್ಕಿಂತ ಸಮಾಜದ ಸ್ವಾಸ್ಥ್ಯ ಗಮನ ಕೊಡುವ ಮನೋಭಾವ ಉದ್ಯಮಕ್ಕೆ ಬರಲಿ ಎನ್ನುವುದು ಆಶಯ.
ಮಂಡ್ಯ: ಆಸ್ತಿಗಾಗಿ ತಂದೆಯನ್ನೇ ಪಾಪಿ ಮಗನೋರ್ವ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿಕೋಡಿಯಲ್ಲಿ ನಡೆದಿದೆ. ಗ್ರಾಮದ…
ಹಾಸನ: ನಿವೃತ್ತ ಯೋಧರೊಬ್ಬರು ಪಿಸ್ತೂಲ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆ ಬೇಲೂರು…
ಮೈಸೂರು: ಈ ದೇಶದಲ್ಲಿ ಬಂಡವಾಳಶಾಹಿಗಳಾಗಲೀ, ಸಕ್ಕರೆ ಕಾರ್ಖಾನೆ ಮಾಲೀಕರಾಗಲೀ ಅಥವಾ ಉದ್ಯಮಿಗಳು ಸೇರಿ ಯಾರೂ ಸಹ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆದರೇ,…
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಈ…
ನವದೆಹಲಿ: ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಕರಾವಳಿ ಪ್ರದೇಶಗಳ ನಡುವೆ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ವಂದೇ ಭಾರತ್ ಎಕ್ಸ್…
ಹಾಸನ: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಚಾಕೋಲೇಟ್ ನೀಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಹಿನ್ನೆಲೆಯಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ ಘಟನೆ…