ಬಿ.ಟಿ.ಮೋಹನ್ ಕುಮಾರ್
ರಾಗಿ ಪೂರೈಸಲು ರೈತರ ನಿರಾಸಕ್ತಿ
ರೈತರು ಬೆಳೆದ ಭತ್ತ, ರಾಗಿ ದಲ್ಲಾಳಿಗಳ ಪಾಲು
ಮಂಡ್ಯ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ ಖರೀದಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಜಿಲ್ಲೆಯಲ್ಲಿ ಖರೀದಿ ಕೇಂದ್ರ ತೆರೆಯಬೇಕೆಂದು ಸರಣಿ ಹೋರಾಟಗಳೇ ನಡೆದಿದ್ದವು. ಆದರೆ, ರೈತರು ಬೆಂಬಲ ಬೆಲೆ ಯೋಜನೆಯಡಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಈವರೆಗೆ ಒಂದು ಕಿಲೋ ಭತ್ತ ಕೂಡ ಖರೀದಿ ಕೇಂದ್ರಗಳಿಗೆ ಪೂರೈಕ ಯಾಗಿಲ್ಲ. ರಾಗಿ ಪೂರೈಕೆಯಲ್ಲೂ ಸಾಕಷ್ಟು ಕುಸಿತ ಕಂಡಿದೆ.
ಜಿಲ್ಲೆಯಲ್ಲಿ ೩೪ ನೋಂದಣಿ ಕೇಂದ್ರಗಳನ್ನು ಸ್ಥಾಪಿಸಿದರೂ ಖರೀದಿ ಪ್ರಕ್ರಿಯೆ ವಿಳಂಬವಾಗಿತ್ತು. ೨೦೨೪-೨೫ನೇ ಸಾಲಿನಲ್ಲಿ ಜಿಲೆ ಯಲ್ಲಿ ೧೫೯೧ ರೈತರು ೪೬,೬೦೭ ಕ್ವಿಂಟಾಲ್ ಭತ್ತ ಪೂರೈಸುವುದಾಗಿ ನೋಂದಣಿ ಮಾಡಿಸಿದ್ದರು.
ಆದರೆ, ಒಂದು ಕಿಲೋ ಭತ್ತವೂ ಪೂರೈಕೆಯಾಗಿಲ್ಲ. ಹಾಗೆಯೇ ೧೭,೭೫೧ ರೈತರು ೨,೬೪,೪೩೧ ಕ್ವಿಂಟಾಲ್ ರಾಗಿ ಪೂರೈಕೆಗೆ ನೋಂದಾಯಿಸಿಕೊಂಡಿದ ರು. ಆದರೆ, ಏ.೨ರವರೆಗೆ ಕೇವಲ ೨೧೭೭ ರೈತರಿಂದ ೩೨,೮೭೮.೫೦ ಕ್ವಿಂಟಾಲ್ ರಾಗಿ ಮಾತ್ರ ಪೂರೈಕೆಯಾಗಿದೆ.
ಜಿಲ್ಲೆಯಲ್ಲಿ ಸಾಮಾನ್ಯವಾಗಿ ಈ ಹಿಂದೆ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಖರೀದಿ ಕೇಂದ್ರಗಳು ಆರಂಭವಾಗುತ್ತಿದ್ದವು. ಆದರೆ, ೨-೩ ವರ್ಷಗಳಿಂದ ಜನವರಿ,ಫೆಬ್ರವರಿಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ೨೦೨೪ರಲ್ಲೂ ಫೆಬ್ರವರಿ ಮಧ್ಯಭಾಗದಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿತ್ತು.
ಈ ವರ್ಷ ಮಾರ್ಚ್‌ನಿಂದ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಸರ್ಕಾರದ ಪ್ರಕಟಣೆಯಂತೆ ಜನವರಿ ೧ರಿಂದಲೇ ಖರೀದಿ ಕೇಂದ್ರಗಳು ಆರಂಭಗೊಳ್ಳಬೇಕಿತ್ತು. ಆದರೆ, ಕೆಲ ದಿನಗಳ ಬಳಿಕ (ಫೆ.೧೫ರಿಂದ) ಆರಂಭಿಸುವುದಾಗಿ ಸರ್ಕಾರ ಮರು ಪ್ರಕಟಣೆ ಹೊರಡಿಸಿತ್ತು. ಆದಾಗ್ಯೂ ಫೆಬ್ರವರಿ ಕಡೆಯ ವಾರ ಖರೀದಿ ಕೇಂದ್ರಗಳನ್ನು ತೆರೆಯಲಾಯಿತಾದರೂ ಕೇವಲ ಭತ್ತವನ್ನು ಮಾತ್ರ ಸ್ವೀಕರಿಸಲಾಯಿತು. ರಾಗಿ ಖರೀದಿಗೆ ಅವಧಿ ವಿಸ್ತರಣೆ ಮಾಡಿದ್ದರೂ ರೈತರು ಆಸಕ್ತಿ ತೋರುತ್ತಿಲ್ಲ.
ಬಣಗುಟ್ಟುತ್ತಿರುವ ಧಾನ್ಯ ಖರೀದಿ ಕೇಂದ್ರ: ಭತ್ತ, ರಾಗಿ ಕಟಾವು ಮತ್ತು ಒಕ್ಕಣೆ ಆರಂಭವಾಗುವುದಕ್ಕೂ ಮುನ್ನವೇ ಖರೀದಿ ಕೇಂದ್ರಗಳನ್ನು ತೆರೆದರೆ ಮಾರುಕಟ್ಟೆಯಲ್ಲಿ ಪೈಪೋಟಿ ಇರುತ್ತದೆ. ಹೀಗಾಗಿ ಬೆಲೆ ಎಲ್ಲಿ ಹೆಚ್ಚಾಗಿ ಸಿಗುತ್ತದೆಯೋ ಅಲ್ಲಿಗೆ ರೈತರು ಧಾನ್ಯ ಪೂರೈಸುತ್ತಾರೆ. ಆದರೆ, ಈ ವರ್ಷ ಖರೀದಿ ಕೇಂದ್ರ ತೆರೆಯುವುದು ೩-೪ ತಿಂಗಳು ವಿಳಂಬವಾದ ಕಾರಣ ರೈತರು ದಲ್ಲಾಳಿಗಳಿಗೆ ಮಾರಾಟ ಮಾಡಿದ್ದಾರೆ.
ಹಿಂದಿನಂತೆ ಈಗ ಧಾನ್ಯಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ರೈತರ ಬಳಿ ಸ್ಥಳಾವಕಾಶವಿಲ್ಲ. ಗ್ರಾಮೀಣ ಪ್ರದೇಶದ ಪ್ರತಿ ಮನೆಗಳಲ್ಲೂ ಹಿಂದೆ ಇದ್ದ ಕಣಜ, ಗೂಡೆ ಮತ್ತು ಗುಡಾಣಗಳು ಈಗ ಮಾಯವಾಗಿವೆ. ಹೀಗಾಗಿ ಮನೆಗೆ ಅಗತ್ಯವಿರುವಷ್ಟು ಪ್ರಮಾಣದ ಭತ್ತ, ರಾಗಿಯನ್ನು ಮಾತ್ರ ಇಟ್ಟುಕೊಂಡು ಉಳಿದದ್ದನ್ನು ಜಮೀನಿನಲ್ಲೇ ರೈತರು ದಲ್ಲಾಳಿಗಳಿಗೆ ಮಾರಾಟ ಮಾಡಿದ್ದಾರೆ. ಖರೀದಿ ಕೇಂದ್ರಕ್ಕೆ ಭತ್ತ ಪೂರೈಸುವುದಾದರೆ ಸಾಗಣೆ ವೆಚ್ಚ, ಕಾರ್ಮಿಕರ ಕೂಲಿ, ಚೀಲಕ್ಕೆ ಹಣ ನೀಡಬೇಕು. ಜೊತೆಗೆ, ಭತ್ತ ಪೂರೈಸಿ ಹಣಕ್ಕಾಗಿ ತಿಂಗಳುಗಟ್ಟಲೆ ಕಾಯಬೇಕು.
ಆದರೆ, ದಲ್ಲಾಳಿಗಳಿಗೆ ನೀಡಿದರೆ ಇದ್ಯಾವ ವೆಚ್ಚದ ಹೊರೆಯೂ ಇರುವುದಿಲ್ಲ. ಸಮಯವೂ ಉಳಿತಾಯವಾಗುತ್ತದೆ. ಭತ್ತ ಕೊಟ್ಟ ಮೂರ್ನಾಲ್ಕು ದಿನಗಳಲ್ಲಿ ದಲ್ಲಾಳಿಗಳು ಹಣವನ್ನು ಪಾವತಿಸುತ್ತಾರೆ. ಹೀಗಾಗಿ ರೈತರು ಬೆಳೆದ ಭತ್ತ, ರಾಗಿ ದಲ್ಲಾಳಿಗಳ ಪಾಲಾಗಿದೆ.
” ಡಿಸೆಂಬರ್ ತಿಂಗಳಲ್ಲೇ ಖರೀದಿ ಕೇಂದ್ರ ತೆರೆದರೆ ಉತ್ತಮ ಭತ್ತದ ಕೂಯ್ಲು ಡಿಸೆಂಬರ್ ತಿಂಗಳಿನಿಂದಲೇ ಆರಂಭವಾಗುತ್ತದೆ. ಆಗಲೇ ಖರೀದಿ ಕೇಂದ್ರ ತೆರೆದರೆ ರೈತರು ಸರಬರಾಜು ಮಾಡುತ್ತಾರೆ. ಸರ್ಕಾರ ಖರೀದಿ ಕೇಂದ್ರ ತೆರೆಯುವುದನ್ನು ವಿಳಂಬ ಮಾಡಿದ್ದರಿಂದಾಗಿ ದಲ್ಲಾಳಿಗಳಿಗೆ ನೀಡಿದ್ದಾರೆ. ದಲ್ಲಾಳಿಗಳು ಸಹ ಸರ್ಕಾರ ನಿಗದಿ ಮಾಡಿದ್ದ ಬೆಂಬಲ ಬೆಲೆಯನ್ನೇ ನೀಡಿ ಕೊಳ್ಳುವುದರಿಂದ ಹಾಗೂ ಸ್ಥಳದಲ್ಲೇ ಹಣ ನೀಡುವುದರಿಂದ ರೈತರಿಗೆ ಬಹಳ ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ರೈತರು ಖರೀದಿ ಕೇಂದ್ರಕ್ಕೆ ಭತ್ತವನ್ನು ಸರಬರಾಜು ಮಾಡದೆ ದಲ್ಲಾಳಿಗಳಿಗೇ ನೀಡಿದ್ದಾರೆ” .
– ಕೆ.ಸಿ. ಮಂಜುನಾಥ್, ರೈತ, ಕಲ್ಲಹಳ್ಳಿ
” ಧಾನ್ಯ ಖರೀದಿ ಪ್ರಕ್ರಿಯೆ ಆರಂಭಕ್ಕೆ ಪೂರಕವಾದ ಸಾಫ್ಟ್‌ವೇರ್ ಪರಿಷ್ಕರಣೆ ಆಗುವುದು ಸಾಕಷ್ಟು ವಿಳಂಬವಾಯಿತು. ಹೀಗಾಗಿ ಪ್ರಕ್ರಿಯೆಯೂ ತಡವಾಗಿದೆ. ೨೦೨೪ರ ಡಿಸೆಂಬರ್ ಮೊದಲ ವಾರವೇ ಭತ್ತ ಮತ್ತು ರಾಗಿ ಖರೀದಿಸುವ ಸಂಬಂಧ ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ರಾಗಿಗೆ ೩,೫೦೦-೩,೬೦೦ ರೂ. ಇದೆ. ಆದರೆ, ನಮ್ಮಲ್ಲಿ ೪,೨೯೦ ರೂ. ನೀಡಲಾಗುತ್ತಿದೆ. ಆದರೂ ಖರೀದಿ ಕೇಂದ್ರಗಳಿಗೆ ರೈತರು ರಾಗಿ ತಂದು ಕೊಡುವ ಪ್ರಮಾಣ ಕಡಿಮೆಯಾಗುತ್ತಿದೆ. ಹೀಗಾಗಿ ರಾಗಿ ಪೂರೈಸುವಂತೆ ಕರಪತ್ರ ವಿತರಣೆ ಮತ್ತು ಪ್ರಚಾರ ಕಾರ್ಯ ಮಾಡಲಾಗುತ್ತಿದ್ದು, ಖರೀದಿ ಕೇಂದ್ರದತ್ತ ರೈತರು ಬರುತ್ತಿದ್ದಾರೆ.”
– ಎಂ.ಪಿ. ಕೃಷ್ಣಕುಮಾರ್, ಜಂಟಿ ನಿರ್ದೇಶಕರು, ಆಹಾರ ಇಲಾಖೆ, ಮಂಡ್ಯ
ಗೋಣಿಕೊಪ್ಪ : ಪಟ್ಟಣದಲ್ಲಿ ಬೀದಿನಾಯಿ ದಾಳಿಗೆ ಇಬ್ಬರು ವಿದ್ಯಾರ್ಥಿಗಳೂ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಈ ಘಟನೆಯಿಂದ ಎಚ್ಚೆತ್ತ ಸ್ಥಳೀಯರು ಮತ್ತಷ್ಟು…
ಹೊಸದಿಲ್ಲಿ : ಕನ್ನಡ ನಾಡು-ನುಡಿ ನಮ್ಮ ಹೆಮ್ಮೆ, ಕನ್ನಡ ಭೂಮಿ ನಮ್ಮ ಹೆಮ್ಮೆಯಾಗಿದೆ ಎಂದು ಪ್ರಧಾನಿ ನರೇಂದ್ರಮೋದಿ ಅವರು ಮುಕ್ತಕಂಠದಿಂದ…
ಮೈಸೂರು : ಕಾಂಗ್ರೆಸ್ ಪಕ್ಷ ಎಂದರೆ ಅದು ಅಹಿಂದ. ಅದನ್ನು ಅರಿಯದೆ ಅಹಿಂದ ಸಮಾವೇಶ ಮಾಡಿ ಕಾಂಗ್ರೆಸ್ ಪಕ್ಷವನ್ನು ಮುಚ್ಚಲು…
ಮೈಸೂರು : ಲಂಡನ್‌ನ ಬಂಕಿಂಗ್ ಹ್ಯಾಮ್ ಅರಮನೆಯಲ್ಲಿ ಎಲ್ಲರಿಗೂ ಪ್ರವೇಶ ಇಲ್ಲ. ದಿನಕ್ಕೆ ಇಂತಿಷ್ಟೇ ಜನ ಭೇಟಿ ನೀಡಬೇಕು ಎಂಬ…
ಬೆಂಗಳೂರು : ಬೆಂಗಳೂರಿನಲ್ಲಿ ಮಾದಕ ವಸ್ತುಗಳ ತಯಾರಿಕೆಯ ಘಟಕಗಳು ಪತ್ತೆಯಾಗಿರುವುದಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಿಡಿಮಿಡಿಯಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳನ್ನು…
ಬೆಂಗಳೂರು : ಮುಂದಿನ ಎರಡು ಮೂರು ತಿಂಗಳ ಒಳಗಾಗಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯಿತಿ ಗಳಿಗೆ ಚುನಾವಣೆ ನಡೆಸಲು…