Andolana originals

ಸತ್ಯದ ಹುತ್ತವ ಬಡಿದರೆ ಹೊರಬರುವ ಸುಳ್ಳು ದೇವರುಗಳು

• ಶೇಷಾದ್ರಿ ಗಂಜೂರು

ಸೆಪ್ಟೆಂಬರ್ ಐದು, ಸಾವಿರದ ಒಂಬೈನೂರ ತೊಂಬತ್ತಾರು, ಭಾರತದ ಚರಿತ್ರೆಯಲ್ಲಿಯೇ ಒಂದು ‘ಐತಿಹಾಸಿಕ ದಿನ’. ಇದು ನಾನೆನ್ನುವ ಮಾತಲ್ಲ; ಭಾರತದ ಅತ್ಯಂತ ಪ್ರತಿಷ್ಠಿತ ಇಂಗ್ಲಿಷ್ ದಿನಪತ್ರಿಕೆಗಳಲ್ಲಿ ಒಂದಾದ ಇಂಡಿಯನ್‌ ಎಕ್ಸ್‌ಪ್ರೆಸ್‌ನ ವರದಿಯಲ್ಲಿನ ಮೊದಲ ಸಾಲಿನಲ್ಲೇ ಕಾಣುವ ಪದ ಪುಂಜವಿದು. ಆ ವರದಿಯೇ ಹೇಳುವಂತೆ ಈ ಇತಿಹಾಸವನ್ನು ಸೃಷ್ಟಿಸಿದವನು ಹೈಸ್ಕೂಲೂ ದಾಟದ ಒಬ್ಬ ಹಳ್ಳಿ ಹೈದ. ಆ ದಿನ ಅವನು ತೋರಿದ ಹೊಸದೊಂದು ಸಂಶೋಧನೆ ಐ.ಐ.ಟಿ.ಯ ತಜ್ಞರಿಗೇ ಎಷ್ಟು ದಂಗು ಬಡಿಸಿತೆಂದರೆ, ಆ ತಜ್ಞರೇ ಹೇಳಿದಂತೆ, ‘ಇದು ನಂಬಲಸಾಧ್ಯ, ಆದರೆ ನಿಜ’. ಈ ಅಭೂತಪೂರ್ವ ಸಂಶೋಧನೆಯ ಮಹತ್ವ ಎಷ್ಟಿತ್ತೆಂದರೆ, ಅಂದಿನ ಭಾರತ ಸರ್ಕಾರದ ರಕ್ಷಣಾ ಸಲಹೆಗಾರರಾಗಿದ್ದ ಮುಂದೆ ರಾಷ್ಟ್ರಪತಿಗಳಾದ — ಅಬ್ದುಲ್ ಕಲಾಮ್‌ರವರೇ ಇದರಿಂದ ಅತ್ಯುತ್ಸಾಹಿತರಾದರಂತೆ. ಈ ಮಹತ್ಸಾಧನೆ ಮಾಡಿದ ತಮಿಳುನಾಡಿನ ಆ ಯುವಕನನ್ನು ದೆಹಲಿಗೆ ಆಮಂತ್ರಿಸಿದ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ರಾಮಮೂರ್ತಿಯವರು, ಆ ಸಂಶೋಧನೆಯ ಆರ್ಥಿಕ ಮಹತ್ವವನ್ನು ಮನಗಂಡು, ಅದರ ವಿವರಗಳನ್ನು ಅಂದಿನ ಪ್ರಧಾನಿ ದೇವೇಗೌಡರ ಕಾರ್ಯಾಲಯಕ್ಕೆ ವರದಿ ಮಾಡಿದರಂತೆ. ರಾಮಮೂರ್ತಿಯವರ ಪ್ರಕಾರ ಆ ಸಂಶೋಧನೆ ‘ಖಚಿತವಾಗಿಯೂ’ ಭಾರತ ಸರ್ಕಾರ ಆಸಕ್ತಿ ತೋರಲೇಬೇಕಾದಂತಹ ವಿಚಾರ.

ಇಷ್ಟಕ್ಕೂ, ಆ ‘ಐತಿಹಾಸಿಕ ಸಂಶೋಧನೆ’ಯಾದರೂ ಏನು? ಗಿಡ ಮೂಲಿಕೆಯಿಂದ ತಯಾರಿಸಲ್ಪಟ್ಟ ‘ಹರ್ಬಲ್ ಪೆಟ್ರೋಲ್’. ಅದರ ಸೃಷ್ಟಿಕರ್ತ, ರಾಮರ್ ಪಿಳ್ಳೆ. ‘ಹರ್ಬಲ್ ಪೆಟ್ರೋಲ್’ ಹೆಸರಿನ ಅವನ ವಂಚನೆಯ ಹಿಂದಿನ ಸತ್ಯ ಹೊರಬೀಳಲು ಹೆಚ್ಚು ಕಾಲ ಬೇಕಾಗಲಿಲ್ಲ. ಮುಂದೆ ಅವನು ಜೈಲಿಗೂ ಹೋಗಬೇಕಾಯಿತು. ಆದರೆ, ಇಂಡಿಯನ್ ಎಕ್ಸ್‌ಪ್ರೆಸ್‌ ಸೇರಿದಂತೆ ಎಷ್ಟೋ ಸುದ್ದಿ ಮಾಧ್ಯಮಗಳು, ಐ.ಐ.ಟಿ.ಯ ತಜ್ಞರು, ರಾಮಮೂರ್ತಿ, ಅಬ್ದುಲ್ ಕಲಾಂರಂತಹ ಭಾರತ ಸರ್ಕಾರದ ಹಿರಿಯ ಮುತ್ಸದ್ದಿಗಳು ಇವರನ್ನೆಲ್ಲಾ ಈ ರಾಮಾ‌ ಪಿಳ್ಳೆ ಯಾಮಾರಿಸಿದ್ದಾದರೂ ಹೇಗೆ? ಅವರ ಕೆಮಿಸ್ಟಿ ಪಿಎಚ್.ಡಿ. ಸೇರಿ, ಹಲವು ದಶಕಗಳ ಶೈಕ್ಷಣಿಕ ಜ್ಞಾನ, ‘ಇದು ನಂಬಲು ಅಸಾಧ್ಯ’ ಎನ್ನುತ್ತಿದ್ದರೂ, ಐ.ಐ.ಟಿ.ಯ ತಜ್ಞರು ಅದನ್ನು ‘ನಿಜ’ವೆಂದು ನಂಬಿದ್ದಾದರೂ ಏಕೆ? ಇಂತಹ ಪ್ರಶ್ನೆಗಳಿಗೆ ಸುಲಭ-ಸರಳ ಉತ್ತರಗಳಿಲ್ಲವಾದರೂ, ವಿಜ್ಞಾನಿಗಳು-ಮನಶಾಸ್ತ್ರಜ್ಞರು ಹೇಳುವಂತೆ, ನಮ್ಮ ನಂಬಿಕೆಗಳು ಹಲವು ಬಾರಿ ವಿಚಾರದ ಸತ್ಯಾಸತ್ಯತೆಗಳಿಗಿಂತ ನಮ್ಮ ಅಸ್ಮಿತೆ, ಮನಸ್ಥಿತಿ ಮತ್ತು ಆಶೋತ್ತರಗಳ ಮೇಲೆಯೇ ಅವಲಂಬಿತವಾಗಿರುತ್ತದೆ. ಉದಾಹರಣೆಗೆ, ಪೆಟ್ರೋಲಿಯಂ ತೈಲವನ್ನು ಸಹಸ್ರಾರು ಕೋಟಿ ರೂಪಾಯಿ ಕೊಟ್ಟು ಆಮದು ಮಾಡಿಕೊಳ್ಳುವ ದೇಶವೊಂದರಲ್ಲಿ, ಅವಿದ್ಯಾವಂತ ಸಾಮಾನ್ಯನೊಬ್ಬ ನಾನು ಹರ್ಬಲ್ ಪೆಟ್ರೋಲ್ ಕಂಡುಹಿಡಿದಿದ್ದೀನಿ’ ಎಂದರೆ ನಂಬದಿರಲಾದೀತೇ? ಇಲ್ಲಿ ಇನ್ನೂ ಒಂದು ಮಾತು: ಈ ಹರ್ಬಲ್ ಪೆಟ್ರೋಲ್ ಅನ್ನು ರಾಮರ್ ಪಿಳ್ಳೆಯಂತಹ ಸಾಮಾನ್ಯನೊಬ್ಬನ ಬದಲು ಐ.ಐ.ಟಿ.ಯ ತಜ್ಞನೊಬ್ಬ ತಾನು ಕಂಡು ಹಿಡಿದಿದ್ದೇನೆ ಎಂದಿದ್ದರೆ, ಸುದ್ದಿ ಮಾಧ್ಯಮಗಳಲ್ಲಿ, ಸರ್ಕಾರಿ ವಲಯಗಳಲ್ಲಿ, ಕೊನೆಗೆ ಜನ ಸಾಮಾನ್ಯರ ಮಧ್ಯೆ ಅದಕ್ಕೆ ಇಂತಹುದೇ ಪ್ರಾಮುಖ್ಯತೆ ಸಿಗುತ್ತಿತ್ತೇ?

ಅಸ್ಮಿತೆ ಮತ್ತು ಮನಸ್ಥಿತಿಗಳು ಸತ್ಯಾಸತ್ಯತೆಗಳನ್ನು ನಿರ್ಧರಿಸುವ ಇಂತಹ ವಿಚಾರಗಳು, ಕೇವಲ ಇಂದಿನ ಭಾರತದಲ್ಲಿ ಮಾತ್ರ ಕಾಣಬರುವಂತದ್ದೂ ಅಲ್ಲ ಅಥವಾ ಅವುಗಳ ವ್ಯಾಪ್ತಿ ಅಸತ್ಯಗಳನ್ನು ನಂಬಿಸುವುದಕ್ಕೆ ಮಾತ್ರ ಸೀಮಿತವೂ
ಅಲ್ಲ.

ಹತ್ತೊಂಬತ್ತನೆಯ ಶತಮಾನದ ಮಧ್ಯದ ಹೊತ್ತಿಗೆ ಯೂರೋಪಿನಲ್ಲಿ, ವೈದ್ಯಕೀಯ ರಂಗದಲ್ಲಿ ಮಹತ್ತರ ಬದಲಾವಣೆಗಳು ಆಗತೊಡಗಿದ್ದವು. ಬ್ಯಾಕ್ಟಿರಿಯಾ, ವೈರಸ್‌ಗಳಂತಹ ಸೂಕ್ಷ್ಮಾಣು ಜೀವಿಗಳ ಬಗೆಗೆ ಮಾಹಿತಿ ಇಲ್ಲದಿದ್ದರೂ, ಶರೀರ ವಿಜ್ಞಾನ, ಶವ ಪರೀಕ್ಷೆಗಳಂತಹ ವೈಜ್ಞಾನಿಕತೆ ಬೇರೂರತೊಡಗಿದ್ದವು. ಆ ಸಮಯದಲ್ಲಿ, ಇಗ್ವಾಜ್ ಸೆಮೆಲ್ವಿಸ್ ಎಂಬ ತರುಣ ವೈದ್ಯ ಆಸ್ಟಿಯಾದ ವಿಯೆನ್ನಾದ ಜೆನೆರಲ್ ಹಾಸ್ಪಿಟಲ್ಲಿಗೆ ನೇಮಕವಾದ. ಆ ಆಸ್ಪತ್ರೆಯಲ್ಲಿ ಹೆರಿಗೆಗೆಂದು ಎರಡು ವಾರ್ಡುಗಳು ಇದ್ದವು. ಒಂದು ವಾರ್ಡ್ ಪೂರ್ಣವಾಗಿ ಪುರುಷ ವೈದ್ಯರ ಉಸ್ತುವಾರಿಯಲ್ಲಿದ್ದರೆ, ಇನ್ನೊಂದು, ಸೂಲಗಿತ್ತಿ ಮಹಿಳಾ ನರ್ಸ್ ಗಳ ಉಸ್ತುವಾರಿಯಲ್ಲಿ ಇತ್ತು. ಆ ಕಾಲದಲ್ಲಿ, ಹೆರಿಗೆಯ ನಂತರ ಮಹಿಳೆಯರು ವಿಪರೀತ
ಜ್ವರ ಪೀಡಿತರಾಗಿ ಸಾವನ್ನಪ್ಪುವುದು ಸರ್ವೇ ಸಾಮಾನ್ಯವಾಗಿತ್ತು. ಇದಕ್ಕೆ “ಚೈಲ್ಡ್ ಬೆಡ್ ಫೀವರ್” ಎಂಬ ಹೆಸರೂ ಇತ್ತ ಈ ಸಾವುಗಳನ್ನು ಸೆಮೆಲ್ವಿಸ್ ಅಧ್ಯಯನ ಮಾಡಿದಾಗ ಒಂದು ಆಶ್ಚರ್ಯಕರ ಅಂಶ ಹೊರಬಿತ್ತು. ವೈದ್ಯರ ಉಸ್ತುವಾರಿಯಲ್ಲಿದ್ದ ವಾರ್ಡಿನಲ್ಲಿನ ಸತ್ತವರ ಸಂಖ್ಯೆ ಸೂಲಗಿತ್ತಿಯರ ವಾರ್ಡಿನಲ್ಲಿನ ಸಂಖ್ಯೆಗಿಂತ ಐದು ಪಟ್ಟು ಹೆಚ್ಚಿತ್ತು! ಇದರಿಂದ ಕುತೂಹಲಗೊಂಡ ಸೆಮೆಲ್ವಿಸ್, ಈ ಸಾವುಗಳ ಬಗೆಗೆ ಮತ್ತಷ್ಟು ಆಳವಾದ ಅಧ್ಯಯನ ಮಾಡಿದ.

ಆ ಆಸ್ಪತ್ರೆಯಲ್ಲಿ, ಸೂಲಗಿತ್ತಿಯರು ಮಹಿಳೆಯರನ್ನು ಪಕ್ಕೆಯ ಮೇಲೆ ಮಲಗಿಸಿ ಹೆರಿಗೆ ಮಾಡಿಸಿದರೆ, ವೈದ್ಯರು ಅವರನ್ನು ಬೆನ್ನ ಮೇಲೆ ಮಲಗಿಸಿ ಹೆರಿಗೆ ಮಾಡಿಸುತ್ತಿದ್ದರು. ಇದು ವೈದ್ಯರ ವಾರ್ಡಿನಲ್ಲಿ ಹೆಚ್ಚಿನ ಸಂಖ್ಯೆಯ ಜ್ವರ-ಸಾವುಗಳಿಗೆ ಕಾರಣವಾಗಿರಬಹುದೇ? ಆದರೆ, ಸೆಮೆಲ್ವಿಸ್ ಈ ಪದ್ಧತಿಯನ್ನು ಬದಲಿಸಿದಾಗ, ಎರಡು ವಾರ್ಡುಗಳ ನಡುವಿನ ಸಾವಿನ ಸಂಖ್ಯೆಯಲ್ಲಿನ ಅಂತರದಲ್ಲಿ ಏನೂ ಬದಲಾವಣೆ ಕಾಣಲಿಲ್ಲ. ತನ್ನ ಅಧ್ಯಯನವನ್ನು ಮುಂದುವರಿಸಿದ ಸೆಮೆಲ್ವಿಸ್ ಇನ್ನಷ್ಟು ಬದಲಾವಣೆಗಳನ್ನೂ ಮಾಡಿದ. ಆದರೆ, ಅವು ಯಾವುವೂ ಫಲಪ್ರದವಾಗಲಿಲ್ಲ. ಇಷ್ಟರ ಮಧ್ಯೆ, ಸೆಮೆಲ್ವಿನ ಸಹೋದ್ಯೋಗಿ ವೈದ್ಯನೊಬ್ಬ ಒಂದು ಶವಪರೀಕ್ಷೆ ಮಾಡಿದ ಕೆಲವೇ ದಿನಗಳಲ್ಲಿ ಜ್ವರ ಪೀಡಿತನಾಗಿ ಸಾವನ್ನಪ್ಪಿದ. (ವೈದ್ಯರು ಹೀಗೆ ಸಾಯುವುದೂ ಸಾಮಾನ್ಯವೇ ಆಗಿತ್ತು) ಆ ಸಾವಿನ ಕುರಿತು ಸೆಮೆಲ್ವಿಸ್ ವಿಚಾರಿಸಿದಾಗ, ಯಾರಿಗೂ ತಿಳಿಯದಿದ್ದ ತಿಳಿದಿದ್ದ ವಿಷಯವೊಂದು ಗೊತ್ತಾಯಿತು. ಹೆರಿಗೆ ಮಾಡಿಸುವ ಹಲವಾರು ವೈದ್ಯರು ಶವಪರೀಕ್ಷೆಯನ್ನೂ ಮಾಡುತ್ತಿದ್ದರು. ಆದರೆ, ಸೂಲಗಿತ್ತಿಯರಾಗಲೀ, ನರ್ಸ್‌ಗಳಾಗಲೀ ಎಂದೂ ಶವಪರೀಕ್ಷೆ ಮಾಡುತ್ತಿರಲಿಲ್ಲ. ಈ ವಿಷಯ ತಿಳಿದ ನಂತರ, ಬ್ಯಾಕ್ಟಿರಿಯಾ-ವೈರಸ್ಸುಗಳ ಬಗೆಗೆ ಅರಿವಿರದಿದ್ದರೂ, ಈ ಶವ ಪರೀಕ್ಷೆಗಳಿಂದಲೇ ಜ್ವರ ಹರಡುತ್ತಿದೆಯೆಂದು (ಸರಿಯಾಗಿಯೇ) ನಿರ್ಧರಿಸಿ ಹೊಸದೊಂದು ಬದಲಾವಣೆ ತಂದ; ಶವಪರೀಕ್ಷೆ ಮಾಡಿದ ನಂತರ ವೈದ್ಯರು ತಮ್ಮ ಕೈಗಳನ್ನು ತಪ್ಪದೇ ಕ್ಲೋರಿನ್‌ನಲ್ಲಿ ತೊಳೆಯಬೇಕು. ಈ ಬದಲಾವಣೆ ತಂದ ಕೆಲವೇ ದಿನಗಳಲ್ಲಿ ವೈದ್ಯರ ವಾರ್ಡಿನ ಸಾವಿನ ಸಂಖ್ಯೆ ಗಮನಾರ್ಹವಾಗಿ ಕುಸಿಯಿತು.

ಆದರೆ, ಈ ಬದಲಾವಣೆ ಹೆಚ್ಚುಕಾಲ ನಿಲ್ಲಲಿಲ್ಲ. ಚೈಲ್ಡ್‌ ಬೆಡ್ ಫೀವರ್ ತಮ್ಮ ಕೈಗಳಿಂದ ಹರಡುತ್ತವೆಂದು ನಂಬಲು ಪುರುಷ ವೈದ್ಯರು ಸಿದ್ಧವಿರಲಿಲ್ಲ. ‘ನಾವು ವೈದ್ಯರು, ಅವರು ಸೂಲಗಿತ್ತಿಯರು. ನಾವು ಅವರಿಗಿಂತ ಎಲ್ಲ ವಿಧದಲ್ಲೂ ಉತ್ತಮರು ಎಂಬ ಗಣ್ಯತೆಯ ಅಸ್ಮಿತೆ ಅವರಲ್ಲಿ ಮನೆ ಮಾಡಿತ್ತು. ಹೀಗಾಗಿ, ಅವರು ಕ್ಲೋರಿನ್‌ನಲ್ಲಿ ತಮ್ಮ ಕೈ ತೊಳೆಯುವುದನ್ನು ನಿಲ್ಲಿಸಿದರು. ಸಾವಿನ ಸಂಖ್ಯೆ ಮತ್ತೆ ಹೆಚ್ಚಾಯಿತು. ಮುಂಗೋಪಿಯಾಗಿದ್ದ ಸೆಮೆಲ್ಲೀಸ್ ಉಳಿದ ವೈದ್ಯರ ಮನ ಒಲಿಸುವಲ್ಲಿ ವಿಫಲನಾದ. ಅವನನ್ನು ಕೆಲಸದಿಂದ ಕಿತ್ತೊಗೆಯಲಾಯಿತು.

ಬೇರಾವುದೇ ಆಸ್ಪತ್ರೆಗಳಲ್ಲಿ ಅವನಿಗೆ ಕೆಲಸ ಸಿಗಲಿಲ್ಲ. ಇದು ಅವನನ್ನು ಮನೋವ್ಯಾಧಿಗೆ ತಳ್ಳಿತು. ಅದು ಉಲ್ಬಣಗೊಂಡಾಗ, ಅವನನ್ನು ಮಾನಸಿಕ ರೋಗಿಗಳ ಆಸ್ಪತ್ರೆಯಲ್ಲಿ ಬಂಧಿಸಿ ಇಡಲಾಯಿತು. ಕೊನೆಗೆ ಅವನು ಆ ಆಸ್ಪತ್ರೆಯಲ್ಲಿ, ತಾನು ಶತಾಯ ಗತಾಯ ತಡೆಗಟ್ಟಲು ಪ್ರಯತ್ನಿಸಿದ್ದ ಜ್ವರದಿಂದಲೇ ಸಾವನ್ನಪ್ಪಿದ.

ಸೆಮೆಲ್ವಿಸ್, ರಾಮ‌ ಪಿಳ್ಳೆಯರ ಕಥಾನಕಗಳಿಗೆ ಶತಕ, ದಶಕಗಳಾಗಿವೆ. ಆದರೂ, ನಂಬಿಕೆ- ಅಪನಂಬಿಕೆಗಳ ವಿಚಾರದಲ್ಲಿ ನಮ್ಮ ಮನಸ್ಥಿತಿ ಬದಲಾಗಿಲ್ಲ. ಒಂದೆಡೆ ವ್ಯಾಕ್ಸಿನ್‌ನಂತಹ ಜೀವ ರಕ್ಷಕ ಸಲಕರಣೆಗಳ ಬಗೆಗೆ ಅಪನಂಬಿಕೆ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಹೋಮಿಯೋಪತಿಯಂತಹ ಪದ್ಧತಿಗಳ ಮೇಲಿನ ನಂಬಿಕೆ ಹೆಚ್ಚುತ್ತಿದೆ. ಜ್ಞಾನವಾಹಿನಿಯಾಗಬೇಕಿದ್ದ ಇಂಟರ್‌ನೆಟ್, ಇಂದು ಆಧಾರ ರಹಿತ ಕೊಳೆತು ನಾರುವ ಕಾನ್ಸಿರಸಿ ಥಿಯರಿಗಳ ಚರಂಡಿಯಾಗತೊಡಗಿದೆ. ಇಂತಹ ಸಂದರ್ಭದಲ್ಲಿ ನಾವೇನು ಮಾಡಬಹುದು?

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ‘ಫ್ಯಾಕ್ಟ್ ಚೆಕ್’ ಇಲಾಖೆಗಳನ್ನು ರಚಿಸುವ ಆಲೋಚನೆಗಳಲ್ಲಿ ತೊಡಗಿವೆ. ಇದು ಮೇಲ್ನೋಟಕ್ಕೆ ಒಳ್ಳೆಯ ಬೆಳವಣಿಗೆ ಎನ್ನಿಸಿದರೂ, ಇಂತಹ ಇಲಾಖೆಗಳು ಸರ್ಕಾರಿ ಸತ್ಯ’ಗಳ, ಜಾರ್ಜ್ ಆರ್ವೆಲ್ಲನ ‘ಡಿಪಾರ್ಟ್‌ಮೆಂಟ್‌ ಆಫ್ ಟೂತ್’ ಆಗುವ ಸಂಭವವೇ ಹೆಚ್ಚು. ಇಷ್ಟಕ್ಕೂ, ಐ.ಐ.ಟಿ., ವಿಜ್ಞಾನ-ತಂತ್ರಜ್ಞಾನ ಇಲಾಖೆಗಳಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದವರು ರಾಮಾರ್‌ನಿಗೆ ಯಾಮಾರಿದ್ದನ್ನು ನಾವು ಮರೆಯಲಾದೀತೇ. ಅಲ್ಲದೆ, ನಮ್ಮ ನಂಬಿಕೆ-ಅಪನಂಬಿಕೆಗಳು ಯಾವುದೇ ವಿಷಯದ ಸತ್ಯಾಸತ್ಯತೆಗಿಂತ ನಮ್ಮ ಅಸ್ಮಿತೆ ಮತ್ತು ಆಶೋತ್ತರಗಳ ಆಧಾರದ ಮೇಲೆ ನಿಂತಿವೆ ಎಂಬುದನ್ನು ನಾವು ಮರೆಯಬಾರದು.

ರಾಮರ್ ಪಿಳ್ಳೆಯಂತಹವರ ನಾಜೂಕುರಹಿತ ವಂಚನೆ ಹೆಚ್ಚು ಕಾಲ ನಡೆಯುವುದಿಲ್ಲ. ಅಂತಹವರು ಸಿಕ್ಕಿ ಜೈಲಿಗೂ ಹೋಗುತ್ತಾರೆ. ಆದರೆ, ಎಲ್ಲರೂ ಅಸ್ಮಿತೆಯನ್ನು ಹುಡುಕುತ್ತಿರುವ ಈ ಕಾಲದಲ್ಲಿ, ನಯ-ನಾಜೂಕಿನ ಇಂಗ್ಲಿಷ್ ಮಾತನಾಡುತ್ತಾ, ತಮ್ಮ ಉಪನ್ಯಾಸಗಳಲ್ಲಿ ಆಧುನಿಕ ವಿಜ್ಞಾನದ (‘ಕ್ವಾಂಟಂ’, ಇತ್ಯಾದಿ) ಪದಗಳನ್ನು ಆಗ್ಗಿಂದಾಗ್ಗೆ ಉದುರಿಸುತ್ತಾ ತಮ್ಮ ನಯವಂಚನೆಗೆ ವಿಜ್ಞಾನದ ಮುಲಾಮು ಹಚ್ಚುತ್ತಿರುವವರ ಪಡೆಯೇ ಇಂದು ಸಿದ್ಧವಾಗಿದೆ. ‘ಗುರು’, ‘ಸದ್ಗುರು’, ‘Spiritual Advisor’ ಇತ್ಯಾದಿ ಹೆಸರುಗಳಲ್ಲಿ ಇವರು ಮಾರುವುದು ರಾಮರ್ ಪಿಳ್ಳೆಯ ಹರ್ಬಲ್ ಪೆಟ್ರೋಲ್ ಅಲ್ಲ. ಬದಲಿಗೆ, ಅವರು ಮಾರುತ್ತಿರುವುದು ಅಲುಗಾಡುತ್ತಿರುವ ಅಸ್ಥಿತೆಗೆ Pseudoscience ಮತ್ತು ಸುಳ್ಳುಗಳಿಂದಲೇ ಸೃಷ್ಟಿಯಾಗಿರುವ ಹೊಸದೊಂದು ಬುನಾದಿ, ಉದಾಹರಣೆಗೆ, ಆಧುನಿಕ ವಿಜ್ಞಾನ ಪ್ರತಿ ನಿತ್ಯ ಸಾವಿರಾರು ವರ್ಷಗಳ ನಮ್ಮ ನಂಬಿಕೆ-ಸಂಪ್ರದಾಯ-ಪದ್ದತಿಗಳ ಟೊಳ್ಳುತನವನ್ನು ಹೊರಗೆ ಹಾಕುತ್ತಾ ನಮ್ಮ ಧಾರ್ಮಿಕ-ಸಾಂಸ್ಕೃತಿಕ ಅಸ್ಮಿತೆಗಳನ್ನು ಅಲ್ಲಾಡಿಸುತ್ತಿರುವ ಸಂದರ್ಭದಲ್ಲಿ, ನಮ್ಮ ಧಾರ್ಮಿಕ ಗ್ರಂಥಗಳಲ್ಲಿ ಏರೋನಾಟಿಕ್ಸ್‌ನಿಂದ ಹಿಡಿದು ಕ್ವಾಂಟಂ ಫಿಸಿಕ್ಸಿನವರೆಗೆ ಸಕಲವೂ ಇದೆ ಎನ್ನುವುದು ಬೊಗಳೆಯಾದರೂ ಅಪ್ಯಾಯಕರವಾಗಿರದೆ ಇರಲು ಸಾಧ್ಯವೇ?

ಒಟ್ಟಿನಲ್ಲಿ, ನಮ್ಮ ನಂಬಿಕೆಗಳಿಗೆ ಸತ್ಯದ ಬುನಾದಿ ನೀಡಬೇಕೆಂದರೆ ನಾವು ನಮ್ಮ ಅಸ್ಮಿತೆಯನ್ನು ಧರ್ಮ, ರಾಷ್ಟ್ರೀಯತೆ, ಭಾಷೆ, ಸಂಸ್ಕೃತಿಗಳಂತಹ ಸೀಮಿತ ಚೌಕಟ್ಟುಗಳನ್ನು ಮೀರಿಯೇ ಕಂಡುಕೊಳ್ಳಬೇಕಿದೆ.
seshadri.ganjur@gmail.com

ಆಂದೋಲನ ಡೆಸ್ಕ್

Recent Posts

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

3 mins ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

56 mins ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

1 hour ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

2 hours ago

ಕರ್ನಾಟಕ ಪಬ್ಲಿಕ್ ಶಾಲೆಗೆ ಮೇಲ್ದರ್ಜೇಗೇರಿಸಲು ಅಗತ್ಯ ಕ್ರಮ: ʻಜಿಟಿಡಿʼ

ಮೈಸೂರು: ಬಡವರ ಮಕ್ಕಳೇ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ವ್ಯಾಸಂಗ ಮಾಡುವ ಕಾರಣ ಶಾಲೆಗಳ ಅಭಿವೃದ್ಧಿ ಶಿಕ್ಷಕರ ಮೇಲಿದೆ. ಕ್ಷೇತ್ರದಲ್ಲಿ ಬರುವ…

2 hours ago

ಪಶ್ಚಿಮಘಟ್ಟ: 16114 ಚ.ಕಿ.ಮೀ. ಪರಿಸರ ಸೂಕ್ಷ್ಮ ಪ್ರದೇಶ ಮಿತಿ ಸೂಕ್ತ :ಈಶ್ವರ ಖಂಡ್ರೆ

ಪಶ್ಚಿಮಘಟ್ಟ ಕುರಿತ ಕಸ್ತೂರಿ ರಂಗನ್ ವರದಿ ಬಗ್ಗೆ ಬಾಧ್ಯಸ್ಥರ ಸಭೆ ಬೆಂಗಳೂರು: ರಾಜ್ಯದ ವಿವಿಧ ಅರಣ್ಯ ಮತ್ತು ವನ್ಯಜೀವಿ ತಾಣಗಳ ಸುತ್ತ…

2 hours ago