ಹೆಚ್.ಡಿ.ಮಣಿಕಂಠನಾಯಕ
ಖರೀದಿ ಪ್ರಕ್ರಿಯೆ ಸರಳಗೊಳಿಸಿದ ಕೇಂದ್ರ ಸರ್ಕಾರ; ಡಿ.೧ರಿಂದ ಯಳಂದೂರು ತಾಲ್ಲೂಕಿನಲ್ಲಿ ಜಾರಿ
ಯಳಂದೂರು: ರಸಗೊಬ್ಬರ ಖರೀದಿಗಾಗಿ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದ ರೈತರಿಗೆ ಇನ್ನು ಮುಂದೆ ಆ ಕಿರಿಕಿರಿ ತಪ್ಪಲಿದೆ. ರೈತರು ತಾವು ಇರುವ ಸ್ಥಳದಿಂದಲೇ ಮೊಬೈಲ್ ಮೂಲಕ ರಸಗೊಬ್ಬರ ಕಾಯ್ದಿರಿಸಿ, ನಿಗದಿತ ದಿನದಂದು ಸಮೀಪದ ಗೊಬ್ಬರದ ಅಂಗಡಿಯಲ್ಲಿ ಖರೀದಿಸುವ ನೂತನ ವ್ಯವಸ್ಥೆ ಡಿಸೆಂಬರ್ ೧ರಿಂದ ಯಳಂದೂರು ತಾಲ್ಲೂಕಿನಲ್ಲಿ ಜಾರಿಗೆ ಬರಲಿದೆ.
ಕೇಂದ್ರ ಸರ್ಕಾರ ರಸಗೊಬ್ಬರ ಖರೀದಿ ಪ್ರಕ್ರಿಯೆಯನ್ನು ಸರಳಗೊಳಿಸುವ ಹಾಗೂ ಮಾರಾಟದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ‘ಫರ್ಟಿಲೈಸರ್ ಸೇಲ್ಸ್ ಅಪ್ಲಿಕೇಷನ್ ಸಿಸ್ಟಮ್’ ಅಡಿಯಲ್ಲಿ ನೂತನ ಡಿಜಿಟಲ್ ವ್ಯವಸ್ಥೆಯನ್ನು ಪರಿಚಯಿಸಿದೆ.
ಪ್ರಸಕ್ತ ಹಂಗಾಮಿನಲ್ಲಿ ದೇಶದ ಆಯ್ದ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಅನುಷ್ಠಾನಗೊಳಿಸಲಾಗುತ್ತಿದೆ. ಈ ವ್ಯವಸ್ಥೆಯಡಿ ರೈತರು ತಮ್ಮ ಆಂಡ್ರಾಯ್ಡ್ ಮೊಬೈಲ್ನಲ್ಲಿ ಆಪ್ ಡೌನ್‌ಲೋಡ್ ಮಾಡಿಕೊಂಡು ಆಧಾರ್ ಸಂಖ್ಯೆ ನಮೂದಿಸಿ ನೋಂದಣಿ ಮಾಡಿಕೊಳ್ಳಬಹುದು. ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸಿ ಗೊಬ್ಬರ ಕಾಯ್ದಿರಿಸಬಹುದು. ಬುಕಿಂಗ್ ನಂತರ ದೊರೆಯುವ ಕ್ಯೂಆರ್ ಕೋಡ್ ಅನ್ನು ಗೊಬ್ಬರದ ಅಂಗಡಿಯಲ್ಲಿ ಸ್ಕ್ಯಾನ್ ಮಾಡಿ ಗೊಬ್ಬರ ಪಡೆಯಲು ಅವಕಾಶವಿದೆ.
ಅವಿದ್ಯಾವಂತ ರೈತರಿಗೂ ನೆರವು: ಆಪ್ ಬಳಕೆ ಗೊತ್ತಿಲ್ಲದ, ಅವಿದ್ಯಾವಂತ ಹಾಗೂ ಸ್ಮಾರ್ಟ್‌ಫೋನ್ ಹೊಂದಿರದ ರೈತರು ಆತಂಕಪಡುವ ಅಗತ್ಯವಿಲ್ಲ. ಇಂತಹ ರೈತರಿಗೆ ಕಾಮನ್ ಸರ್ವಿಸ್ ಸೆಂಟರ್‌ಗಳು (ಸಿಎಸ್‌ಸಿ), ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (ಪಿಎಸಿಎಸ್‌ಎಸ್), ಸಹಕಾರ ಸೊಸೈಟಿಗಳು, ರಸಗೊಬ್ಬರ ಮಾರಾಟ ಮಳಿಗೆಗಳು ಹಾಗೂಕೃಷಿ ಸಖಿಯರು ಕಾಯ್ದಿರಿಸುವ ಪ್ರಕ್ರಿಯೆ ಪೂರ್ಣಗೊಳಿಸಲು ಸಹಕರಿಸಲಿದ್ದಾರೆ. ರೈತರು ಖುದ್ದಾಗಿ ಅಂಗಡಿಗೆ ತೆರಳಲು ಸಾಧ್ಯವಾಗದಿದ್ದರೆ ಅವರ ಪರವಾಗಿ ಬೇರೊಬ್ಬರು ಗೊಬ್ಬರ ಪಡೆಯಬಹುದು. ಇದಕ್ಕೆ ರೈತರ ಒಟಿಪಿ, ಕ್ಯೂಆರ್ ಕೋಡ್ ಹಾಗೂ ಗೊಬ್ಬರ ಪಡೆಯುವ ವ್ಯಕ್ತಿಯ ಆಧಾರ್ ಕಾರ್ಡ್ ಸಲ್ಲಿಸುವುದು ಕಡ್ಡಾಯವಾಗಿದೆ. ಯುಪಿಐ ಮೂಲಕ ಹಣ ಪಾವತಿಸಲೂ ಅವಕಾಶವಿದೆ. ಭೂ ದಾಖಲೆಗಳಿಲ್ಲದಿದ್ದರೂ ಕೃಷಿ ಮಾಡುತ್ತಿರುವ ರೈತರಿಗೆ ವಿನಾಯಿತಿ ಮಾರ್ಗದ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ರೈತರ ಹೆಸರಿನಲ್ಲಿ ವಿತರಿಸುವ ಗೊಬ್ಬರದ ದುರ್ಬಳಕೆ, ಯೂರಿಯಾ ಸೇರಿದಂತೆ ವಿವಿಧ ರಸಗೊಬ್ಬರಗಳನ್ನು ಕೈಗಾರಿಕಾ ಉದ್ದೇಶಗಳಿಗೆ ಬಳಸುವುದು ಹಾಗೂ ಕಾಳಸಂತೆಯಲ್ಲಿ ಮಾರಾಟ ಮಾಡುವುದಕ್ಕೆ ಕಡಿವಾಣ ಹಾಕಲು ಈ ವ್ಯವಸ್ಥೆ ಸಹಕಾರಿಯಾಗಲಿದೆ. ಆಧಾರ್ ಆಧಾರಿತ ಖರೀದಿ ವ್ಯವಸ್ಥೆಯಿಂದ ರೈತರ ಖರೀದಿ ಪ್ರಮಾಣದ ಮೇಲೆ ನಿಗಾ ಇಡಲು ಸಾಧ್ಯವಾಗಲಿದೆ. ಅಲ್ಲದೆ, ಗೊಬ್ಬರದ ಬೇಡಿಕೆಗೆ ಅನುಗುಣವಾಗಿ ದಾಸ್ತಾನು ಮತ್ತು ಪೂರೈಕೆ ಮಾಡಲು ಸರ್ಕಾರಕ್ಕೂ ಅನುಕೂಲವಾಗಲಿದೆ.
ರಸಗೊಬ್ಬರ ಖರೀದಿ: ಪ್ರಕ್ರಿಯೆಯನ್ನು ಸರಳಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈಗಾಗಲೇ ಕೃಷಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ರಸಗೊಬ್ಬರ ಮಾರಾಟಗಾರರಿಗೆ ತರಬೇತಿ ನೀಡಲಾಗಿದೆ. ಆಪ್ ಬಳಕೆ ಗೊತ್ತಿಲ್ಲದ ರೈತರಿಗೆ ಸಹಾಯ ಕೇಂದ್ರಗಳ ಮೂಲಕ ನೆರವು ನೀಡಲಾಗುವುದು. ಡಿಸೆಂಬರ್ ೧ರಿಂದ ಯಳಂದೂರು ತಾಲ್ಲೂಕಿನಲ್ಲಿ ವ್ಯವಸ್ಥೆ ಜಾರಿಗೆ ಬರಲಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು.”
ಎನ್.ಜಿ.ಅಮೃತೇಶ್ವರ, ಸಹಾಯಕ ಕೃಷಿ ನಿರ್ದೇಶಕರು, ಯಳಂದೂರು
ನವೀನ್ ಡಿಸೋಜ ಡಿ.೨೧ರಿಂದ ಮಡಿಕೇರಿಯಲ್ಲಿ ೪ನೇ ಆವೃತ್ತಿಯ ಗೌಡ ಪ್ರೀಮಿಯರ್ ಲೀಗ್; ನ.೨೭ರಂದು ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ಮಡಿಕೇರಿ: ಕೊಡಗು…
ಮೈಸೂರು: ಸಿದ್ದರಾಮಯ್ಯ ಮತ್ತು ಮಹದೇವಪ್ಪ ನಡುವೆ ಮುನಿಸು ಮೂಡಿದೆ ಎಂಬ ವರದಿಗಳಿಗೆ ಸಂಸದ ಸುನಿಲ್ ಬೋಸ್ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಇಬ್ಬರದ್ದು…
ನವದೆಹಲಿ: ನಿಮ್ಮ ಖಾಸಗಿ ಕಾರು ಅಥವಾ ಬೈಕ್ ಬಿಎಸ್-6 ಮಾದರಿಯದ್ದೇ? ಹಾಗಿದ್ದರೆ ಮಾಲಿನ್ಯ ತಪಾಸಣೆಯ ಅವಧಿಯಲ್ಲಿ ನಿಮಗೊಂದು ಸಿಹಿಸುದ್ದಿ ಇದೆ.…
ಬೆಂಗಳೂರು: ಕರ್ನಾಟಕದಲ್ಲಿ ಇನ್ನೆರಡು ದಿನ ಚಳಿ ಹೆಚ್ಚಾಗುವ ಸಾಧ್ಯತೆಯಿದೆ. ನವೆಂಬರ್ 20ರ ಹವಾಮಾನ ವರದಿ ಪ್ರಕಾರ, ರಾಜ್ಯದ ಬಯಲು ಪ್ರದೇಶಗಳ ಪೈಕಿ…
ಢಾಕಾ: ಬಾಂಗ್ಲಾದೇಶದಲ್ಲಿ ಮತ್ತೆ ರಾಜಕೀಯ ಉದ್ವಿಗ್ನತೆ ಭುಗಿಲೆದ್ದಿದೆ. ಅವಾಮಿ ಲೀಗ್ ಕರೆ ನೀಡಿದ್ದ ಪ್ರತಿಭಟನೆಗೂ ಮುನ್ನ ನಡೆದ ಘರ್ಷಣೆಗಳಲ್ಲಿ ನಾಲ್ವರು…