ಬಿಳಿಗಿರಿರಂಗನ ಬೆಟ್ಟದಲ್ಲಿ ಸೋಲಿಗರ ಆಸ್ಪತ್ರೆ ನೆಲಸಮ; ಅರಣ್ಯ ಇಲಾಖೆಯ ಕ್ರಮಕ್ಕೆ ಸೋಲಿಗ ಮುಖಂಡರ ಆಕ್ರೋಶ
ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ನೀಲಗಿರಿ ಆದಿವಾಸಿ ವೆಲ್‌ಫೇರ್ ಅಸೋಸಿಯೇಷನ್ ಮೂಲಕ ನಡೆಯುತ್ತಿದ್ದ ಸೋಲಿಗರ ಆಸ್ಪತ್ರೆಯನ್ನು ಅರಣ್ಯ ಇಲಾಖೆಯವರು ತೆರವು ಮಾಡಿದ್ದರಿಂದ ಸೋಲಿಗರಿಗೆ ಸುಲಭವಾಗಿ ಸಿಗುತ್ತಿದ್ದ ಆರೋಗ್ಯ ಸೇವೆ ಮುಂದಿನ ದಿನಗಳಲ್ಲಿ ತುಟ್ಟಿಯಾಗಲಿದೆ.
ಬೆಟ್ಟದಲ್ಲಿ ಅನಧಿಕೃತ ಕಟ್ಟಡಗಳ ತೆರವು ಕಾರ್ಯ ಕೈಗೊಂಡಿದ್ದ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯದ ಅಧಿಕಾರಿಗಳು ಬಿಆರ್‌ಟಿ ವಲಯಾರಣ್ಯಕ್ಕೆ ಸೇರಿದ ಈ ಆಸ್ಪತ್ರೆ ಕಟ್ಟಡವನ್ನು ನೆಲಸಮಗೊಳಿಸಿದರು. ಇದರಿಂದ ಸೋಲಿಗರಿಗೆ ಸುಲಭವಾಗಿ ಸಿಗುತ್ತಿದ್ದ ಚಿಕಿತ್ಸೆ ಹಾಗೂ ಔಷಧೋಪಚಾರ ಸೇವೆ ಕೈತಪ್ಪಿದೆ.
ಬೆಟ್ಟದಲ್ಲಿ ಸೋಲಿಗರ ಆಸ್ಪತ್ರೆ ಜೊತೆಗೆ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರಕ್ಕೆ ಆಸ್ಪತ್ರೆ ಹಾಗೂ ಸರ್ಕಾರಿ ಆರೋಗ್ಯ ಉಪ ಕೇಂದ್ರವಿದೆ. ೩ ಆರೋಗ್ಯ ಕೇಂದ್ರಗಳಿಂದ ಚಿಕಿತ್ಸೆ ಸಿಗುತ್ತಿತ್ತು. ಈಗ ಸೋಲಿಗರ ಆಸ್ಪತ್ರೆಗೆ ಕೆಡವಿರುವುದರಿಂದ ಮುಂದಿನ ದಿನಗಳಲ್ಲಿ ೨ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಚಿಕಿತ್ಸೆ ದೊರಕಲಿದೆ.
೧೯೭೫-೭೬ನೇ ಸಾಲಿನಲ್ಲಿ ತಮಿಳುನಾಡಿನ ಕೊತ್ತಗಿರಿಯಲ್ಲಿ ಸ್ಥಾಪಿತವಾಗಿರುವ ನೀಲಗಿರಿ ವೆಲ್‌ಫೇರ್ ಅಸೋಸಿ ಯೆಷನ್ ಸಂಸ್ಥೆಯು ಬಿಳಿಗಿರಿರಂಗನಬೆಟ್ಟದ ಅರಣ್ಯ ಪ್ರದೇಶದಲ್ಲಿ ವಾಸವಾಗಿರುವ ಆದಿವಾಸಿ ಸೋಲಿಗರಿಗೆ ಆಸ್ಪತ್ರೆ ತೆರೆದು ಸೇವೆ ನೀಡುತ್ತಿತ್ತು. ೧೦ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಇದಾಗಿತ್ತು. ಒಬ್ಬ ವೈದ್ಯರು, ಒಬ್ಬ ನರ್ಸ್ ಮೂವರು ಸಹಾಯಕರಿದ್ದು ಚಿಕಿತ್ಸೆ ನೀಡುತ್ತಿದ್ದರು.
ಬೆಟ್ಟದ ವ್ಯಾಪ್ತಿಯ ಸೀಗೆಬೆಟ್ಟ, ಕಲ್ಯಾಣಿ, ಮಂಜಿಗುಂಡಿ, ಯರಕನಗದ್ದೆ, ಬಂಗ್ಲೆ, ಪುರಾಣಿ ಮತ್ತು ಬಂಗಲೆ ಪೋಡುಗಳ ಆದಿವಾಸಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಇದಲ್ಲದೆ ದೂರದ ಕೆರೆದಿಂಬ, ನಲ್ಲಿಕತ್ರಿ, ಮೊಣಕೈ, ಗೊಂಬೆಗಲ್ಲು ಪೋಡುಗಳ ಸೋಲಿಗರು ನಿರಂತರವಾಗಿ ಈ ಆಸತ್ರೆ ಸೇವೆಯನ್ನು ಪಡೆದು ಅನೇಕ ಕಾಯಿಲೆಗಳಿಂದ ಗುಣಮುಖರಾಗಿದ್ದಾರೆ.
ವಿಜಿಕೆಕೆ ಆಸ್ಪತ್ರೆಯಲ್ಲಿ ಒಬ್ಬ ವೈದ್ಯರು, ನರ್ಸ್ ಮತ್ತು ಆರೋಗ್ಯ ಉಪ ಕೇಂದ್ರದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕರು ಇದ್ದಾರೆ. ಮುಂದಿನ ದಿನಗಳಲ್ಲಿ ಈ ಕೇಂದ್ರಗಳಿಂದಲೇ ಚಿಕಿತ್ಸೆ ಪಡೆಯಬೇಕಾದ ಪರಿಸ್ಥಿತಿ ಎದುರಾಗಿದೆ. ಇಲ್ಲದಿದ್ದರೆ ಗುಂಬಳ್ಳಿಯ ಕರುಣಾ ಟ್ರಸ್ಟ್‌ನ ಆಸ್ಪತ್ರೆಗೆ ಬರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಕಳೆದ ೫೦ ವರ್ಷಗಳಿಂದಲೂ ಆರೋಗ್ಯ ಸೇವೆ ನೀಡುತ್ತಾ ಬಂದಿದ್ದ ಸೋಲಿಗರ ಆಸ್ಪತ್ರೆಯನ್ನು ಅಧಿಕೃತ ದಾಖಲೆಗಳಿಲ್ಲಎಂಬ ಕಾರಣ ನೀಡಿ ಅರಣ್ಯಾಧಿಕಾರಿಗಳು ತೆರವು ಮಾಡಿದ್ದು ಸರಿಯಲ್ಲ ಎಂದು ಸೋಲಿಗ ಮುಖಂಡರಾದ ಸಣ್ಣರಂಗೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೀಲಗಿರಿ ಆದಿವಾಸಿ ವೆಲ್‌ಫೇರ್ ಅಸೋಸಿಯೇಷನ್ ಸಂಸ್ಥೆಯನ್ನು ಅಮೆರಿಕದ ನಿಲಂ ಆರ್ಮ್ ಸ್ಟ್ರಾಂಗ್ ಎಂಬ ಮಹಿಳೆ ಪ್ರಾರಂಭಿಸಿದ್ದರು. ನಂತರ ಅವರು ನೀಲಗಿರಿಯ ಆದಿವಾಸಿಗಳಾದ ತೋಡ, ಕುರುಬ ಕಟುನಾಯಕ ಮುಂತಾದ ಆದಿವಾಸಿಗಳನ್ನು ಸೇರಿಸಿ ಅವರಿಗೆ ಈ ಸಂಸ್ಥೆಯನ್ನು ವಹಿಸಿದ್ದರು. ಈ ಆದಿವಾಸಿಗಳೇ ಸಂಸ್ಥೆ ನಡೆಸುತ್ತಿದ್ದಾರೆ. ಇದರ ಕಾರ್ಯ ದರ್ಶಿಯಾಗಿರುವ ಆಳವ್ ಎಂಬವರು ತಮಿಳುನಾಡು ಮತ್ತು ಬಿಳಿಗಿರಿರಂಗನ ಬೆಟ್ಟದ ಆದಿವಾಸಿಗಳಿಗೆ ಆರೋಗ್ಯ ಸೇವೆ ನೀಡುತ್ತಿದ್ದರು.
ಆಸ್ಪತ್ರೆ ಕಟ್ಟಡ ಬಿಟ್ಟು ಭೂಮಿ ಪಡೆಯಬಹುದಿತ್ತು:
ಯಳಂದೂರು: ಬೆಟ್ಟದಲ್ಲಿ ಸೋಲಿಗರ ಆಸ್ಪತ್ರೆ ತೆರೆಯಲು ಹಿಂದೆ ೪ ಎಕರೆ ೨೦ ಗುಂಟೆ ಅರಣ್ಯ ಭೂಮಿಯನ್ನು ಕೊತ್ತಗಿರಿಯ ನೀಲಗಿರಿ ವೆಲ್‌ಫೇರ್ ಅಸೋಸಿಯೆಷನ್ ಸಂಸ್ಥೆಗೆ ನೀಡಲಾಗಿತ್ತು. ಇತ್ತೀಚೆಗೆ ಅರಣ್ಯ ಇಲಾಖೆ ಜಂಟಿ ಸರ್ವೆ ಮಾಡದೆ ಒತ್ತುವರಿ ಮಾಡಿದ್ದಾರೆ ಎಂದು ನೋಟಿಸ್ ನೀಡಿದ್ದರು. ಆಸ್ಪತ್ರೆಗೆ ಸಂಬಂಧಪಟ್ಟ ದಾಖಲಾತಿಗಳನ್ನು ನೀಡಿಲ್ಲ ಎಂದು ಜೆಸಿಬಿ ಮೂಲಕ ಸೋಲಿಗರ ಆಸ್ಪತ್ರೆ ಕಟ್ಟಡವನ್ನು ಕೆಡವಲಾಗಿದೆ. ಆಸತ್ರೆ ಕಟ್ಟಡ ಬಿಟ್ಟು ಭೂಮಿಯನ್ನು ವಶಕ್ಕೆ ಪಡೆಯಬಹುದಿತ್ತು. ಆದರೆ, ಅರಣ್ಯಾಧಿಕಾರಿಗಳು ಬೆಟ್ಟದ ವ್ಯಾಪ್ತಿಯ ೧೨,೦೦೦ ಸೋಲಿಗರಿಗೆ ಆಸ್ಪತ್ರೆ ಸೇವೆ ಸಿಗದಂತೆ ಮಾಡಿದ್ದಾರೆ ಎಂದು ಸ್ಥಳೀಯ ಸೋಲಿಗ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
” ವಿಜಿಕೆಕೆ ಆಸ್ಪತ್ರೆಗೂ ಮೊದಲೇ ನೀಲಗಿರಿ ಆಸ್ಪತ್ರೆ ಪ್ರಾರಂಭವಾಗಿತ್ತು. ಸೋಲಿಗರು ಹೆಚ್ಚಾಗಿ ಆಸ್ಪತ್ರೆಗೆ ಹೋಗುತ್ತಿದ್ದರು. ಆರೋಗ್ಯ ಸೇವೆ ನೀಡುತ್ತಿದ್ದ ಆಸ್ಪತ್ರೆಯನ್ನು ಅರಣ್ಯ ಇಲಾಖೆ ಯವರು ಕೆಡವಿದ್ದು ಅಮಾನವೀಯವಾದುದು.”
-ಕೇತಮ್ಮ, ಆದಿವಾಸಿ ಮುಖಂಡರು, ಜಿಪಂ ಮಾಜಿ ಉಪಾಧ್ಯಕ್ಷರು.
“ಆಸ್ಪತ್ರೆ ಕೆಡವಿದ ಬಗ್ಗೆ ಶಾಸಕರಾದ ಎ.ಆರ್.ಕೃಷ್ಣಮೂರ್ತಿ ಅವರ ಗಮನಕ್ಕೆ ತರಲಾಗಿದೆ. ಸದ್ಯವೇ ಜಿಲ್ಲಾಧಿಕಾರಿ ಶಿಲ್ಪಾನಾಗ್, ಚಾ.ನಗರ ವೃತ್ತದ ಸಿಸಿಎಫ್ ಅವರ ಗಮನಕ್ಕೆ ತರಲಾಗುವುದು. ಆಸ್ಪತ್ರೆಯನ್ನು ಮರು ನಿರ್ಮಾಣ ಮಾಡಬೇಕೆಂದು ಒತ್ತಾಯಿಸಲಾಗುವುದು.”
-ಡಾ.ಸಿ.ಮಾದೇಗೌಡ, ಜಿಲ್ಲಾ ಆದಿವಾಸಿ ಬುಡಕಟ್ಟು ಅಭಿವೃದ್ಧಿ ಸಂಘದ ಕಾರ್ಯದರ್ಶಿ
ಒಮಾನ್ : ಭಾರತ ಮತ್ತು ಒಮಾನ್ ನಡುವಿನ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ) ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ವಿಶ್ವಾಸ…
ಬೆಳಗಾವಿ : ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿ ವಿಳಂಬ ಮತ್ತು ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗಳು ವಿಧಾನಸಭೆಯಲ್ಲಿ ಪ್ರತಿಧ್ವನಿಸಿದವು. ಪ್ರತಿಪಕ್ಷದ ನಾಯಕ ಆರ್.ಅಶೋಕ್…
ಬೆಳಗಾವಿ : ಶೀಘ್ರದಲ್ಲೇ 3600 ಸಿಬ್ಬಂದಿಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ವಿಧಾನಪರಿಷತ್‌ಗೆ ತಿಳಿಸಿದ್ದಾರೆ. ಸದಸ್ಯ ಜಗದೇವ್…
ಶಿವಮೊಗ್ಗ : ಬಿಜೆಪಿ ಪ್ರತಿಭಟನೆ ವೇಳೆ ಕರ್ತವ್ಯ ನಿರತ ಎಎಸ್‌ಐ ಕುತ್ತಿಗೆಯಲ್ಲಿದ್ದ 60 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಳ್ಳರು…
ಮಂಡ್ಯ : ಜಿಲ್ಲೆಯ ಸರ್ಕಾರಿ ನೌಕರರು ಜಿಲ್ಲೆಗೆ ಉತ್ತಮ ಹೆಸರು ತರುವಂತಹ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ…
ಮೈಸೂರು : ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಮೇಲೆ ಯಾವುದೇ ದೌರ್ಜನ್ಯ ಕಂಡುಬಂದರೆ ಕೂಡಲೇ ಎಫ್.ಐ.ಆರ್ ದಾಖಲಿಸಿ ಸೂಕ್ತ…