ನವೀನ್ ಡಿಸೋಜ
ಮಡಿಕೇರಿ: ಜಿಲ್ಲೆಯಲ್ಲಿ ಕೃಷಿ ಉತ್ಪನ್ನ ಸಾಗಾಟಕ್ಕೆ ಬಳಸುವ ಲಘು ಮೋಟಾರು ಸಾರಿಗೆ ವಾಹನಗಳ ಚಾಲಕರಿಗೆ ಸಮವಸ್ತ್ರ ಧರಿಸುವುದರಿಂದ ವಿನಾಯಿತಿ ನೀಡಿ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದೆ. ಆ ಮೂಲಕ ಸ್ವಂತಕ್ಕೆ ಪಿಕ್‌ಅಪ್ ಮುಂತಾದ ವಾಹನ ಬಳಸುತ್ತಿರುವವರಿಗೆ ಅನುಕೂಲ ವಾದಂತಾಗಿದೆ.
ಸ್ವಂತ ಬಳಕೆಯ ಗೂಡ್ಸ್ ವಾಹನಗಳ ಚಾಲಕರಿಗೆ ಸಮವಸ್ತ್ರ ನಿಯಮದಿಂದ ವಿನಾಯಿತಿ ಕೊಡಿಸಬೇಕು ಮತ್ತು ತೋಟದ ಕೆಲಸಗಳಿಗೆ ಬಳಸುವ ಗೂಡ್ಸ್ ವಾಹನಗಳನ್ನು ಸ್ವಂತ ಬಳಕೆಯ ವಾಹನಗಳೆಂದು(ವೈಟ್ ಬೋರ್ಡ್) ನೋಂದಣಿ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂಬುದು ಜಿಲ್ಲೆಯ ಹಲವು ಬೆಳೆಗಾರರ ಒತ್ತಾಯವಾಗಿತ್ತು. ಈ ಸಂಬಂಧ ಇತ್ತೀಚೆಗೆ ಬೆಳೆಗಾರರಾದ ಮಂಞೀರ ಕೆ. ಕುಟ್ಟಪ್ಪ, ಚೋವಂಡ ವಿಷ್ಣು, ಬೊಳ್ಳಂಡ ಶರೀನ್, ಪಾಡಿಯಂಡ ದೀಪಕ್ ಶಾಸಕ ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಿದ್ದರು. ಅದರಂತೆ ಪೊನ್ನಣ್ಣ ಅವರು ಇಲಾಖೆಯೊಂದಿಗೆ ಚರ್ಚಿಸಿದ್ದು, ಅದರ ಫಲವಾಗಿ ಸಾರಿಗೆ ಆಯುಕ್ತರು ಅಧಿಸೂಚನೆ ಹೊರಡಿಸಿದ್ದಾರೆ.
ಕರ್ನಾಟಕ ಮೋಟಾರು ವಾಹನ ನಿಯಮಾವಳಿ ೧೯೮೯ರ ನಿಯಮ ೧೪ರಲ್ಲಿ ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ, ಬೆಂಗಳೂರು ಇವರಿಗೆ ಪ್ರತ್ಯಜಿಸಿರುವ ಅಧಿಕಾರದಡಿ ಕೊಡಗು ಜಿಲ್ಲೆಯ ಕೃಷಿ ಉತ್ಪನ್ನ ಪದಾರ್ಥಗಳನ್ನು ಸಾಗಿಸಲು ಬಳಸುವ ಲಘು ಮೋಟಾರು ಸಾರಿಗೆ ವಾಹನಗಳನ್ನು ಓಡಿಸುವ ಚಾಲಕರಿಗೆ ಸಮವಸ್ತ್ರ ಧರಿಸುವುದರಿಂದ ವಿನಾಯಿತಿ ನೀಡಿ ಆದೇಶಿಸಲಾಗಿದೆ.
ಈ ವಿನಾಯಿತಿ ಕೃಷಿ ಉತ್ಪನ್ನ ಸಾಗಿಸುವ ಲಘು ಮೋಟಾರು ಸಾರಿಗೆ ವಾಹನಗಳ ಚಾಲಕರಿಗೆ ಮಾತ್ರ ಅನ್ವಯಿಸುತ್ತದೆ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರಾದ ಎಂ. ಎಂ. ಯೋಗೀಶ್ ಅಧಿಸೂಚನೆ ಹೊರಡಿಸಿದ್ದಾರೆ.
ಜಿಲ್ಲೆಯಲ್ಲಿ ಮಡಿಕೇರಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಣಿಯಾಗಿರುವ ಒಟ್ಟು ೭,೯೬೯ ಲಘು ಮೋಟಾರು ಸಾರಿಗೆ ವಾಹನಗಳಿದ್ದು, ಇವುಗಳಲ್ಲಿ ಸುಮಾರು ಶೇ. ೭೫ ರಷ್ಟು ವಾಹನಗಳು ಸ್ವಂತ ಬಳಕೆಯದ್ದೇ ಆಗಿವೆ. ಕಾಫಿ ತೊಟ ಹೊಂದಿರುವವರಿಗೆ ಕಾಫಿ ಸಾಗಿಸಲು, ಗೊಬ್ಬರ ಕೊಂಡೊಯ್ಯಲು, ನೀರಿನ ಪೈಪ್ ಸಾಗಣೆ ಸೇರಿದಂತೆ ಹಲವು ಕೆಲಸಗಳಿಗೆ ಈ ವಾಹನಗಳು ಬಳಕೆಯಾಗುತ್ತವೆ.
ಸಾಮಾನ್ಯವಾಗಿ ಸಣ್ಣ ಪ್ರಮಾಣದಲ್ಲದ ಕಾಫಿ ತೋಟ ಹೊಂದಿರುವವರೆಲ್ಲರೂ ಇಂತಹ ವಾಹನಗಳನ್ನು ಹೊಂದಿರುತ್ತಾರೆ. ಇಂತಹ ಬೆಳೆಗಾರರಿಗೆ ಎಲ್ಲ ಸಮಯದಲ್ಲಿಯೂ ಸಮವಸ್ತ್ರ ಧರಿಸಿ ವಾಹನ ಓಡಿಸುವುದು ಕಷ್ಟವಾಗುತ್ತದೆ. ಸಮವಸ್ತ್ರ ಧರಿಸದೇ ಹೋದಾಗ ಟ್ರಾಫಿಕ್ ಪೊಲೀಸರು ನಿಲ್ಲಿಸಿ ಪ್ರಶ್ನಿಸುವ ಪ್ರಸಂಗಗಳು ಎದುರಾಗುತ್ತವೆ. ಹೀಗಾಗಿ ಈ ಆದೇಶದಿಂದ ವಾಹನ ಹೊಂದಿರುವ ಎಲ್ಲ ಬೆಳೆಗಾರರಿಗೂ ಅನುಕೂಲವಾದಂತಾಗಿದೆ.
ಪಿಕ್‌ಅಪ್‌ನಂತಹ ವಾಹನಗಳು ಈಗ ಕೇವಲ ಸರಕು ಸಾಗಣೆಗೆ ಮಾತ್ರವಲ್ಲದೇ ಸಂಚಾರಕ್ಕೂ ಅನುಕೂಲವಾಗುವಂತೆ ಬರುತ್ತಿವೆ. ತೋಟದಲ್ಲಿ ಕೆಲಸವಿದೆ ಎಂದರೆ ಬೆಳೆಗಾರರು ಅದೇ ವಾಹನಗಳಲ್ಲಿ ಹೋಗುತ್ತಾರೆ. ಕೆಲವೊಮ್ಮೆ ಪಟ್ಟಣಕ್ಕೆ ಬರಬೇಕೆಂದರೂ ಅದರಲ್ಲೇ, ತೆರಳುತ್ತಾರೆ. ಆದರೆ ಈ ವಾಹನಗಳನ್ನು ಬಾಡಿಗೆ ನೀಡುವುದಿಲ್ಲ. ಇಂತಹ ವಾಹನಗಳನ್ನು ಡೀಸೆಲ್ ತುಂಬಿಸುವುದಕ್ಕೋ, ಗೊಬ್ಬರ ಕೊಂಡೊ ಯ್ಯುವುದಕ್ಕೋ ನಗರ, ಪಟ್ಟಣಕ್ಕೆ ತಂದಾಗ ಅವರನ್ನು ಟ್ರಾಫಿಕ್ ಪೊಲೀಸರು ನಿಲ್ಲಿಸುವುದು, ಸಮವಸ್ತ್ರ ಹಾಕಿಲ್ಲವೆಂದು ದಂಡ ವಿಧಿಸುವುದು ನಡೆಯುತ್ತಿತ್ತು. ಇದೀಗ ಹೊಸ ಆದೇಶದಿಂದ ಬೆಳೆಗಾರರು ನಿಟ್ಟುಸಿರುಬಿಟ್ಟಿದ್ದಾರೆ.
ಯಾವ ವಾಹನಗಳಿಗೆ ಅನ್ವಯ?
ಲಘು ಮೋಟಾರು ಸಾರಿಗೆ ವಾಹನಗಳೆಂದರೆ ೭. ೫ ಟನ್ ಒಳಗಿನ ವಾಹನಗಳಾಗಿದ್ದು, ಇದರಲ್ಲಿ ಮಹೀಂದ್ರಾ ಪಿಕ್-ಅಪ್, ಬೊಲೇರೊ ಪಿಕ್ ಅಪ್, ಇಸುಜು ಎಸ್. ಕ್ಯಾಬ್, ಟಾಟಾ ಯೋಧ ಹಾಗೂ ಇದಕ್ಕಿಂತ ಸಣ್ಣ ಸರಕು ವಾಹನಗಳು ಸೇರುತ್ತವೆ. ಸದ್ಯಕ್ಕೆ ಕೊಡಗು ಜಿಲ್ಲೆಯಲ್ಲಿ ಸಂಚರಿಸುವ ಕೃಷಿ ಉತ್ಪನ್ನಗಳ ಸಾಗಣೆಗೆ ಬಳಸುವ ವಾಹನಗಳ ಚಾಲಕರಿಗಷ್ಟೇ ಸಮವಸ್ತ್ರ ವಿನಾಯಿತಿ ಅನ್ವಯಿಸುತ್ತದೆ.
ವೈಟ್ ಬೋರ್ಡ್ ನೋಂದಣಿಗೆ ಬೇಡಿಕೆ ಸರಕು ವಾಹನಗಳಿಗೆ ಹಳದಿ ಬೋರ್ಡ್ ಅಳವಡಿಸುವುದರಿಂದ ಪ್ರತಿ ವರ್ಷ ಎಫ್‌ಸಿ ಮಾಡಿಸಿಕೊಳ್ಳಬೇಕಾಗುತ್ತದೆ. ಇದರಿಂದ ಸಮಸ್ಯೆಯಾಗುತ್ತಿದ್ದು, ಸ್ವಂತ ಬಳಕೆಗೆ ಉಪಯೋಗಿಸುವ ವಾಹನಗಳಿಗೆ ಬಿಳಿ ಬೋರ್ಡ್ ನೋಂದಣಿ ಮಾಡಿಸಲು ಅವಕಾಶ ನೀಡಬೇಕು. ವಿಶೇಷವಾಗಿ ಮಲೆನಾಡು ಜಿಲ್ಲೆಗಳಾದ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಇತರೆಡೆ ಇದನ್ನು ಜಾರಿಗೆ ತರಬೇಕು ಎಂಬುದೂ ಬೆಳೆಗಾರರ ಬೇಡಿಕೆಯಾಗಿದೆ.
ನಮ್ಮ ಬೇಡಿಕೆ ಈಡೇರಿಸಲು ಕಾರಣರಾದ ಶಾಸಕ ಎ. ಎಸ್ ಪೊನ್ನಣ್ಣ ಅವರಿಗೆ ಧನ್ಯವಾದಗಳು. ಈಗಿನ ಗೂಡ್ಸ್ ವಾಹನ ಗಳು ಅತ್ಯುತ್ತಮ ಸೀಟಿಂಗ್ ನೊಂದಿಗೂ ಬರುತ್ತಿದ್ದು ನಾಲ್ಕು ಮಂದಿ ಪ್ರಯಾಣಿಸಬಹುದು. ಹೀಗಾಗಿ ನಾವು ಕೆಲವೊಮ್ಮೆ ಅದರಲ್ಲಿಯೇ ಪ್ರಯಾಣವೂ ಮಾಡುತ್ತೇವೆ. ಆದ್ದರಿಂದ ಇಂತಹ ವಾಹನಗಳಿಗೆ ವೈಟ್ ಬೋರ್ಡ್ ರಿಜಿಸ್ಟ್ರೇಷನ್ ಮಾಡಿಸಲು ಅವಕಾಶ ನೀಡಬೇಕೆಂಬುದೂ ನಮ್ಮ ಬೇಡಿಕೆಯಾಗಿದೆ. –ಮಂಞೀರ ಕೆ. ಕುಟ್ಟಪ್ಪ, ಬೆಳೆಗಾರ.
ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವ ರಕ್ಷಕ ಔಷಧಿಗಳ ಕೊರತೆಯಿರುವುದು ನಿಜ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.…
ಬೆಂಗಳೂರು: ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಟಿ ರನ್ಯಾರಾವ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಡಿಐಆರ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದೇಗೆ ಎಂಬ…
ಹಾಸನ: ಕೌಟುಂಬಿಕ ಕಲಹದಿಂದ ಬೇಸತ್ತು ತಾಯಿ-ಮಗ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಕಬ್ಬಳ್ಳಿ…
ಬೆಂಗಳೂರು: ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಈ…
ಸಮತೋಲನದ ಬಜೆಟ್!... ಮೂಡಿ ಬಂದಿದೆ ಸರ್ವರ ಹಿತ ಏಳ್ಗೆಯ ಕರ್ನಾಟಕದ ಮಾದರಿ ಜನಪರ ಬಜೆಟ್! ಮುಖ್ಯಮಂತ್ರಿಗಳ ಅನುಭವದ ಮೂಸೆಯಲಿ ಸುಸ್ಥಿರ…
ಮುಖ್ಯಮಂತ್ರಿ ಸಿದ್ದರಾಮಯ್ಯನವರು ೧೬ನೇ ಬಜೆಟ್ ಮಂಡನೆ ವೇಳೆ ಸಿನಿಮಾ ಟಿಕೆಟ್ ದರ ನಿಗದಿಯ ಬಗ್ಗೆ ಪ್ರಸ್ತಾಪಿಸಿದ್ದು, ಸಿನಿ ಪ್ರಿಯರಿಗೆ ಸಂತಸ…