Andolana originals

ಅಭಿಮನ್ಯು ಉತ್ತರಾಧಿಕಾರಿಯಾಗಿ ಏಕಲವ್ಯ?

 

ಮೈಸೂರು: ಪ್ರವಾಸಿಗರ ಕಣ್ಮನ ಸೆಳೆಯುವಂತೆ ಜಂಬೂಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿ ಹೊತ್ತು ರಾಜಮಾರ್ಗದಲ್ಲಿ ಸಾಗುವ ಅಭಿಮನ್ಯುವಿನ ಉತ್ತರಾಧಿಕಾರಿಯಾಗಿ ಏಕಲವ್ಯ ಹೊರಹೊಮ್ಮುವ ಲಕ್ಷಣಗಳು ಗೋಚರಿಸಿವೆ.

ಗಾಂಭೀರ್ಯದಿಂದ ಹೆಜ್ಜೆ ಹಾಕುವುದರಲ್ಲಿ ಅಭಿಮನ್ಯುನನ್ನೇ ಮೀರಿಸಿ ಏಕಲವ್ಯ ಆನೆಯು ಅಧಿಕಾರಿಗಳ ಗಮನ ಸೆಳೆದಿದೆ. ಸುಪ್ರೀಂ ಕೋರ್ಟ್ ಮಾರ್ಗಸೂಚಿಯ ಪ್ರಕಾರ 60 ವರ್ಷ ವಯಸ್ಸಾದ ಆನೆಗೆ ಭಾರ ಹೊರಿಸುವುದಕ್ಕೆ ಅವಕಾಶ ಇಲ್ಲದ ಕಾರಣ ಪರ್ಯಾಯ ಆನೆಯ ಶೋಧದಲ್ಲಿ ತೊಡಗಿದ್ದ ಅಧಿಕಾರಿಗಳಿಗೆ ಏಕಲವ್ಯ ಭರವಸೆಯ ಉತ್ತರಾಧಿಕಾರಿಯಾಗಿ ಕಾಣಿಸಿಕೊಂಡಿ ದ್ದಾನೆ. ಅದಕ್ಕೆ ಪೂರಕವಾಗಿ ಏಕಲವ್ಯ ಬುಧವಾರ ಬನ್ನಿಮಂಟಪದಿಂದ ಅರಮನೆಗೆ 1ಗಂಟೆ 5 ನಿಮಿಷಗಳ ಅವಧಿಯಲ್ಲಿ ನಡೆದು ತಲುಪಿದ್ದಾನೆ.

ಅಕ್ಟೋಬರ್ 3ರಂದು ನಡೆಯಲಿರುವ ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಕ್ಯಾಪ್ಟನ್ ಅಭಿಮನ್ಯು, ಧನಂಜಯ, ಗೋಪಿ, ಭೀಮ, ಕಂಜನ್, ರೋಹಿತ್, ಏಕಲವ್ಯ, ವರಲಕ್ಷ್ಮೀ, ಲಕ್ಷ್ಮೀ ಆನೆಗಳು ನಗರಕ್ಕೆ ಬಂದಿವೆ. ಅರಮನೆ ಪ್ರವೇಶ ಮಾಡಿದ ಮರುದಿನವೇ ಎಲ್ಲಾ ಆನೆಗಳ ತೂಕ ಹಾಕಿದ ಮೇಲೆ ಅರಮನೆಯಿಂದ ಬನ್ನಿಮಂಟಪದ ತನಕ ತಾಲೀಮು ಶುರುವಾಗಿದೆ. ಆನೆಗಳ ತೂಕ, ಸಾಮರ್ಥ್ಯಕ್ಕೆ ತಕ್ಕಂತೆ ಪೌಷ್ಟಿಕಾಂಶ ಆಹಾರ ನೀಡಲಾಗುತ್ತಿದೆ.

ಏಕಲವ್ಯ ನೇತೃತ್ವ: ಅಭಿಮನ್ಯು ನೇತೃತ್ವದಲ್ಲಿ ಗಜಪಡೆ ಅರಮನೆಯಿಂದ ಬನ್ನಿಮಂಟಪದ ತನಕ ನಡೆದ ತಾಲೀಮಿನ ವೇಳೆ 1 ಗಂಟೆ 8 ನಿಮಿಷ ಸಮಯ ತೆಗೆದುಕೊಂಡರೆ, ಬನ್ನಿಮಂಟಪ ದಿಂದ ಅರಮನೆಯನ್ನು ಏಕಲವ್ಯ ನೇತೃತ್ವದ ತಂಡವು 1 ಗಂಟೆ 5 ನಿಮಿಷದಲ್ಲಿ ತಲುಪಿದೆ. ಮೊಟ್ಟ ಮೊದಲ ಬಾರಿಗೆ ನಾಯಕತ್ವವನ್ನು ವಹಿಸಿಕೊಂಡಿದ್ದ ಏಕಲವ್ಯ ರಾಜಮಾರ್ಗದಲ್ಲಿ ಅಭಿಮನ್ಯುವಿಗಿಂತಲೂ ಒಂದು ಹೆಜ್ಜೆ ಮುಂದೆ ಹಾಕುತ್ತಿದ್ದು ಗಮನಿಸಬಹುದಾಗಿತ್ತು. ಹಿಂದೆ ಯಾವ ರೀತಿ ಹೆಜ್ಜೆ ಹಾಕಿದ್ದವೋ ಇಲ್ಲವೋ ನನಗೆ ಗೊತ್ತಿಲ್ಲ. ನನಗೊಂದು ಅವಕಾಶ ಸಿಕ್ಕಿದರೆ ಎಲ್ಲರನ್ನೂ ಹಿಂದಿಕ್ಕಿ ತಲುಪುವೆ ಎನ್ನುವ ಧಾಟಿಯಲ್ಲೇ ಹೆಜ್ಜೆ ಹಾಕುವ ಮೂಲಕ ಹಿರಿಯ ಅಧಿಕಾರಿಗಳ ಮನ ಗೆದ್ದಿದೆ.

ಅರ್ಜುನನಂತೆ ಅರ್ಹತೆ: ಅಭಿಮನ್ಯುಗೆ ಮೊದಲು ಜಂಬೂಸವಾರಿಯಲ್ಲಿ ಅಂಬಾರಿ ಹೊರುತ್ತಿದ್ದ ಅರ್ಜುನ ಆನೆ 2023ರ ಡಿಸೆಂಬರ್ 4ರಂದು ಕಾಡಾನೆ ದಾಳಿಯಿಂದ ಮೃತಪಟ್ಟಿತು. ಅರ್ಜುನ ಆನೆಗೆ ಸಾಟಿಯೇ ಇರಲಿಲ್ಲ. ಆತನ ದಂತ, ಆತನ ಮುಖಚರ್ಯೆ, ಆತನ ಮೈಮಾಟವೇ ಸುಂದರವಾಗಿ ಕಾಣಿಸುತ್ತಿತ್ತು. ಅರ್ಜುನ ಅಂಬಾರಿ ಹೊತ್ತು ಸಾಗುತ್ತಿದ್ದರೆ ಗತಕಾಲದ ವೈಭವ ಮರುಕಳಿಸುತ್ತಿತ್ತು. ಆದರೆ, ಅರ್ಜುನ ಸಾವಿಗೀಡಾದ ನಂತರ ಆತನ ಸ್ಥಾನವನ್ನು ತುಂಬಲು ಬೇರೆ ಯಾವುದೇ ಆನೆಯಿಂದ ಸಾಧ್ಯವೇ ಇಲ್ಲ ಅನ್ನುವ ಪರಿಸ್ಥಿತಿ ಇತ್ತು. ಲಭ್ಯವಿದ್ದ ಆನೆಗಳ ಪೈಕಿ ಅಭಿಮನ್ಯುವೇ ಸೂಕ್ತ ಎಂದು ಅಂಬಾರಿ ಹೊರಲು ನಿಯೋಜನೆ ಮಾಡಲಾಯಿತು.

ಆದರೆ, ಅರ್ಜುನನ ಸ್ಥಾನವನ್ನು ಸಮರ್ಥವಾಗಿ ತುಂಬಲು ಏಕಲವ್ಯ ಸಜ್ಜಾಗಿದ್ದಾನೆ. ಅರ್ಜುನನಿಗಿದ್ದ ಎಲ್ಲ ಅರ್ಹತೆಗಳೂ ಏಕಲವ್ಯನಿಗೆ ಇವೆ. 39ನೇ ವಯಸ್ಸಿನಲ್ಲೇ ಆತನ ದೈಹಿಕ ಬೆಳವಣಿಗೆ ಅದ್ಭುತವಾಗಿದೆ. ಆತನ ದಂತಗಳು ಆಕರ್ಷಕವಾಗಿವೆ. ಕಿವಿ, ಕಣ್ಣು, ಮುಖ ಲಕ್ಷಣವಾಗಿದೆ. ದಸರಾ ಅಂಬಾರಿ ಆನೆಗೆ ಇರಬೇಕಾದ ಬೆನ್ನು ಹಾವಭಾವ ಎಲ್ಲವೂ ಏಕಲವ್ಯನಿಗಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಏಕಲವ್ಯ ಯಾರಿಗೂ ತೊಂದರೆ ನೀಡದೆ ಹೇಳಿದ ಮಾತನ್ನು ಚಾಚೂತಪ್ಪದೆ ಪಾಲಿಸುವ ಗುರು ಮೆಚ್ಚಿದ ಶಿಷ್ಯನಾಗಿದ್ದಾನೆ. ಮಾವುತ ಸೃಜನ್ ಕಾವಾಡಿ ಹಿದಾಯತ್‌ ಹೇಳುವ ಮಾತನ್ನು ಅಪ್ಪಿ ತಪ್ಪಿಯೂ ಮೀರುವುದಿಲ್ಲ. ಯಾವುದೇ ಕಾರಣಕ್ಕೂ ಬೇರೆ ಆನೆಗಳ ತಂಟೆಗೆ ಹೋಗುವುದಿಲ್ಲ. ಕೋಪ ಮಾಡಿಕೊಳ್ಳುವುದಿಲ್ಲ. ಇನ್ನು ವಿಶೇಷ ಅಂದ್ರೆ ಹುಷಾರು ತಪ್ಪಿದಾಗ ಅಥವಾ ಗಾಯ, ಹುಣ್ಣುಗಳಾದಾಗ ಏಕಲವ್ಯ ಮಗುವಿನಂತೆ ಚಿಕಿತ್ಸೆಗೆ ಸ್ಪಂದಿಸುತ್ತಾನೆ. ಕೊಟ್ಟ ಔಷಧಿಯನ್ನು ಹಠ ಮಾಡದೆ ಸೇವಿಸುತ್ತಾನೆ. ಹುಷಾರಾದ ನಂತರ ಚಿಕಿತ್ಸೆ ನೀಡಿದ ವೈದ್ಯರಿಗೆ ಸಲಾಂ ಹೊಡೆದು ಅವರನ್ನು ತನ್ನ ಬೆನ್ನ ಮೇಲೆ ಹೊತ್ತು ತಿರುಗಿಸುತ್ತಾನೆ. ಈ ಎಲ್ಲಾ ಕಾರಣಗಳಿಂದಾಗಿ ಏಕಲವ್ಯ ಆನೆ ಈಗ ಎಲ್ಲರ ಅಚ್ಚು ಮೆಚ್ಚಾಗಿದ್ದಾನೆ.

 

ಕೆ.ಬಿ. ರಮೇಶ ನಾಯಕ

ಪ್ರಸ್ತುತ ಆಂದೋಲನ ದಿನಪತ್ರಿಕೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿರುವ ನಾನು ಮೂಲತಃ ಚಾಮರಾಜನಗರ ತಾಲ್ಲೂಕು ಮತ್ತು ಜಿಲ್ಲೆಯ ಕಣ್ಣೇಗಾಲ ಗ್ರಾಮದವನು. ಚಾಮರಾಜನಗರ ತಾಲ್ಲೂಕಿನ ಆಲೂರು ಗ್ರಾಮದಲ್ಲಿ ಪ್ರಾಥಮಿಕ,ಪ್ರೌಢಶಿಕ್ಷಣ, ಚಾಮರಾಜನಗರದಲ್ಲಿ ಪಿಯುಸಿ ವ್ಯಾಸಂಗ ಮಾಡಿದ ನಾನು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದೇನೆ. 1992ರಿಂದ 2002ರವರೆಗೆ ಮೈಸೂರು ಮಿತ್ರ ಪತ್ರಿಕೆಯಲ್ಲಿ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಸೇವೆ ಸಲ್ಲಿಸಿದ ಬಳಿಕ 2002ರಿಂದ 2012ರವರೆಗೆ ಸಂಯುಕ್ತ ಕರ್ನಾಟಕ ಮೈಸೂರು ಪ್ರಾದೇಶಿಕ ಕಚೇರಿಯಲ್ಲಿ ವರದಿಗಾರನಾಗಿ, 2013ರಿಂದ 2015ರವರೆಗೆ ಹಾಸನ ಮತ್ತು ಮೈಸೂರಿನಲ್ಲಿ ವಿಜಯ ಕರ್ನಾಟಕ ಹಿರಿಯ ವರದಿಗಾರನಾಗಿ, 2015ರಿಂದ 2017ರವರೆಗೆ ಸಂಯುಕ್ತ ಕರ್ನಾಟಕ ಮುಖ್ಯ ವರದಿಗಾರನಾಗಿ, 2017ರಿಂದ 2020 ಜೂನ್‌ವರಗೆ ವಿಶ್ವವಾಣಿ ಮೈಸೂರು ಬ್ಯೂರೋ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದ್ದೇನೆ.

Recent Posts

ತಲಕಾಡಿನತ್ತ ಹರಿದುಬರುತ್ತಿರುವ ಪ್ರವಾಸಿಗರು: ಕಾವೇರಿ ನದಿಯಲ್ಲಿ ಮಿಂದೆದ್ದು ಸಂಭ್ರಮ

ಟಿ.ನರಸೀಪುರ: ಹೊಸ ವರ್ಷದ ಸಂಭ್ರಮಾಚರಣೆ ಆಚರಿಸಲು ಐತಿಹಾಸಿಕ ಪಂಚಲಿಂಗಗಳ ಪುಣ್ಯಕ್ಷೇತ್ರ ತಲಕಾಡಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಕಳೆದ ಮೂರು…

12 mins ago

ಕೇರಳ ಸಿಎಂ ಪಿಣರಾಯಿ ವಿಜಯನ್‌ ವಿರುದ್ಧ ಸಚಿವ ಎಚ್.ಸಿ.ಮಹದೇವಪ್ಪ ಕಿಡಿ

ಬೆಂಗಳೂರು: ಬೆಂಗಳೂರಿನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್‌ಗಳ ತೆರವು ಪ್ರಕರಣವನ್ನು ಖಂಡಿಸಿ ಟ್ವೀಟ್‌ ಮಾಡಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್‌ ವಿರುದ್ಧ…

29 mins ago

ಕರ್ತವ್ಯ ಮುಗಿಸಿ ಮನೆಗೆ ಬಂದಾಗಲೇ ಹೃದಯಾಘಾತ: ಎಎಸ್‌ಐ ಸಾವು

ಚಾಮರಾಜನಗರ: ಕರ್ತವ್ಯ ಮುಗಿಸಿ ಮನೆಗೆ ಬದ ತಕ್ಷಣ ಹೃದಯಾಘಾತ ಸಂಭವಿಸಿ ಎಎಸ್‌ಐ ಮೃತಪಟ್ಟಿರುವ ಘಟನೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ನಡೆದಿದೆ.…

1 hour ago

ಹುಣಸೂರು: ಕೇವಲ 4 ನಿಮಿಷದಲ್ಲೇ ಕೆಜಿ ಕೆಜಿ ಚಿನ್ನ ದರೋಡೆ

ಹುಣಸೂರು: ಇಲ್ಲಿನ ಜ್ಯುವೆಲ್ಲರಿ ಶಾಪ್‌ನಲ್ಲಿ ಚಿನ್ನ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿಯೊಂದು ಲಭ್ಯವಾಗಿದ್ದು, ದರೋಡೆಕೋರರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.…

1 hour ago

ಬಿಜೆಪಿ ಶಾಸಕ ಶರಣು ಸಲಗರ್‌ ವಿರುದ್ಧ ಎಫ್‌ಐಆರ್:‌ ಕಾರಣ ಇಷ್ಟೇ

ಬೀದರ್:‌ 99 ಲಕ್ಷ ಸಾಲ ಹಿಂತಿರುಗಿಸದ ಆರೋಪದ ಮೇರೆಗೆ ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗರ್‌ ವಿರುದ್ಧ ಎಫ್‌ಐಆರ್‌…

2 hours ago

ಪ್ರೀತಿ ವಿಚಾರವಾಗಿ ಹಲ್ಲೆ: ಮನನೊಂದು ಯುವಕ ಆತ್ಮಹತ್ಯೆ

ಮೈಸೂರು: ಯುವತಿಯ ಪ್ರೀತಿ ವಿಚಾರವಾಗಿ ಯುವಕನ ಮೇಲೆ ಹಲ್ಲೆ ನಡೆಸಲಾಗಿದ್ದು, ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೈಸೂರು ಜಿಲ್ಲೆ ಟಿ.ನರಸೀಪುರ…

2 hours ago