ಮೈಸೂರು: ಮೂರು ತಿಂಗಳುಗಳಿಂದ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆ ಶುರುವಾದ ಬೆನ್ನಲ್ಲೇ ಎಂಟ್ರಿಯಾಗಿರುವ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಹಗರಣದ ಬುಡಕ್ಕೆ ಕೈ ಹಾಕಿದ್ದಾರೆ.
ಒಂದು ವಾರದಿಂದ ಮುಡಾಕ್ಕೆ ಸಂಬಂಽಸಿದಂತೆ ಬೆಂಗಳೂರಿನಲ್ಲಿ ಅಗತ್ಯ ಮಾಹಿತಿಗಳನ್ನು ಕಲೆ ಹಾಕಿದ್ದ ಅಧಿಕಾರಿಗಳು ಶುಕ್ರವಾರ ಮುಡಾ ಮತ್ತು ತಾಲ್ಲೂಕು ಕಚೇರಿ ಮೇಲೆ ದಾಳಿ ಮಾಡಿ ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಮುಡಾದಲ್ಲಿ ಕಳೆದುಹೋಗಿರುವ ಮೂಲ ದಾಖಲೆಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಖಡಕ್ ಮಾತುಗಳಲ್ಲಿ ಸೂಚನೆ ನೀಡಿದ್ದಾರೆ.
ಅವರು ಕೇಳುತ್ತಿರುವ ದಾಖಲೆಗಳನ್ನು ಒದಗಿಸಲು ಆಯುಕ್ತರು, ಕಾರ್ಯದರ್ಶಿ, ವಿಶೇಷ ಭೂ ಸ್ವಾಧೀನಾಧಿಕಾರಿಗಳು ಎಸಿ ಕೊಠಡಿಯೊಳಗೂ ಬೆವರಿದ್ದು, ಹೆಚ್ಚಿನ ಮಾಹಿತಿ ಬೇಕಾದಲ್ಲಿ ಹಿಂದಿನ ಆಯುಕ್ತರನ್ನೇ ವಿಚಾರಣೆ ಮಾಡಬೇಕಾಗಿದೆ ಎಂದು ಅಲವತ್ತುಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ, ಡಾ. ಡಿ. ಬಿ. ನಟೇಶ್, ಜಿ. ಟಿ. ದಿನೇಶ್‌ಕುಮಾರ್ ಅವರನ್ನು ವಿಚಾರಣೆ ನಡೆಸಲು ಬುಲಾವ್ ನೀಡಲಾಗಿದೆ. ಅವರು ನೀಡುವ ಮಾಹಿತಿಯ ಆಧಾರದ ಮೇಲೆ ಇಡಿ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಶೇ. ೫೦:೫೦ ಅನುಪಾತದಡಿ ಸಿಎಂ ಪತ್ನಿ ಪಾರ್ವತಿ ಅವರಿಗೆ ನಿವೇಶನ ಹಂಚಿಕೆ ಮಾಡಿರುವುದೂ ಸೇರಿದಂತೆ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ ಎಂಬುದಾಗಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದೂರು ನೀಡಿದ್ದರು.
ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿ, ಸಿಎಂ ಸಿದ್ದರಾಮಯ್ಯ ಅವರ ಭಾವ ಮೈದುನ ಮಲ್ಲಿಕಾರ್ಜುನಸ್ವಾಮಿ ಅವರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಗೆ ಒಳಪಡಿಸಿದ್ದರು. ಸಿಎಂ ಮತ್ತು ಅವರ ಪತ್ನಿಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸುವುದಕ್ಕೆ ಒತ್ತಡ ಬರುತ್ತಿದ್ದರೂ, ಈತನಕ ನೋಟಿಸ್ ಜಾರಿಯಾಗಿಲ್ಲ. ಮತ್ತೊಂದೆಡೆ ೨೦೦೪ರಿಂದ ೨೦೨೪ವರೆಗೆ ಮುಡಾದಲ್ಲಿ ನಡೆದಿರುವ ಸಿಎ ನಿವೇಶನ ಹಂಚಿಕೆ, ಭೂ ಪರಿಹಾರ ಮೊದಲಾದ ವಿಚಾರಗಳ ಬಗ್ಗೆ ವರದಿ ನೀಡಲು ಪಿ. ಎನ್. ದೇಸಾಯಿ ನೇತೃತ್ವದ ಏಕಸದಸ್ಯ ವಿಚಾರಣೆ ಆಯೋಗ ರಚನೆ ಮಾಡಿ ಮಾಹಿತಿಯನ್ನು ಒದಗಿಸಲಾಗಿತ್ತು. ಈ ಎಲ್ಲಾ ಬೆಳವಣಿಗೆಗಳ ನಡುವೆ ಇಡಿ ಅಧಿಕಾರಿಗಳು ದೂರು ದಾಖಲಿಸಿಕೊಂಡು ತನಿಖೆಗೆ ಇಳಿದಿ ದ್ದಾರೆ.
ಅಧಿಕಾರಿಗಳ ವಲಯದಲ್ಲಿ ಆತಂಕ: ಇಡಿ ಅಧಿಕಾರಿಗಳು ದಾಳಿ ನಡೆಸಿರುವುದು, ಮುಡಾ ಅಧಿಕಾರಿಗಳಿಗೆ ವಿಚಾರಣೆಗೊಳಪಡಬೇಕಾಗುತ್ತದೆ ಎಂಬ ಆತಂಕ ಮೂಡಿಸಿದೆ. ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದ ವೇಳೆ ಯಾವುದೇ ಅಧಿಕಾರಿಗಳು ತುಟಿ ಬಿಚ್ಚದೆ ಆತಂಕದ ಛಾಯೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಭೂ ಸ್ವಾಧೀನ, ಖಾತೆ, ನಗರ ಯೋಜಕ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ಮುಖ ಬಾಡಿ ಹೋಗಿತ್ತು. ಆಯುಕ್ತರು, ಕಾರ್ಯದರ್ಶಿ ಹಾಗೂ ಸಿಬ್ಬಂದಿ ಕೇಳಿದ ದಾಖಲೆಗಳನ್ನು ತತ್‌ಕ್ಷಣಕ್ಕೆ ಒದಗಿಸಲಾಗದೆ ಪರದಾಡಿದರು ಎಂದು ತಿಳಿದುಬಂದಿದೆ. ಮುಡಾ ಅಧ್ಯಕ್ಷ ಕೆ. ಮರೀಗೌಡರು ಆಯುಕ್ತರಿಗೆ ಪತ್ರ ಬರೆಯುವ ಸಂದರ್ಭದಲ್ಲಿ ಅನೇಕ ಅಂಶ ಗಳನ್ನು ಉಲ್ಲೇಖಿಸಿದ್ದಲ್ಲದೆ, ಶಾಸಕರು ಬರೆದಿದ್ದ ವಿಚಾರಗಳನ್ನು ಹೇಳಿದ್ದರು. ಈ ಎಲ್ಲಾ ಅಂಶಗಳನ್ನೂ ಕ್ರೋಢೀಕರಿಸಿ ಬದಲಿ ನಿವೇಶನವನ್ನು ಕಾನೂನುಬಾಹಿರವಾಗಿ ಯಾರ‍್ಯಾರಿಗೆ ಹಂಚಿಕೆ ಮಾಡಲಾಗಿದೆ ಎಂಬುದರ ಮಾಹಿತಿಯನ್ನು ಇಡಿ ಅಧಿಕಾರಿಗಳು ಸಂಗ್ರಹಿಸಿದರೆ ಇನ್ನೂ ಅನೇಕರು ಸಿಕ್ಕಿಬೀಳುವುದು ಗ್ಯಾರಂಟಿಯಾಗಿದೆ.
ನಿವೇಶನ ಮಾಲೀಕರಿಗೂ ಸಂಕಷ್ಟ: ಶೇ. ೫೦:೫೦ ಅನುಪಾತದಡಿ ಬದಲಿ ನಿವೇಶನ ಪಡೆದುಕೊಂಡಿರುವ ಕುರಿತು ತನಿಖೆ ನಡೆಯುವ ಸಾಧ್ಯತೆ ಇರುವ ಕಾರಣ ಅನೇಕ ನಿವೇಶನ ಮಾಲೀಕರಿಗೂ ಸಂಕಷ್ಟ ಎದುರಾಗಲಿದೆ. ಇಂತಹ ೧೦೦ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಅವ್ಯವಹಾರ ನಡೆದಿದೆ. ಇದರಲ್ಲಿ ಜನಪ್ರತಿನಿಧಿಗಳ ಪ್ರಭಾವದಿಂದಲೇ ಪ್ರಾಧಿಕಾರದ ಸಭೆಯಲ್ಲಿ ಮಂಡನೆಯಾಗಿ ಅನುಮೋದನೆ ಪಡೆದಿರುವ ಕಾರಣದಿಂದ ಸಂಬಂಧಪಟ್ಟ ಎಲ್ಲರಿಗೂ ಅಗತ್ಯ ಮಾಹಿತಿ ಒದಗಿಸುವಂತೆ ನೋಟಿಸ್ ಕೊಡುವುದಕ್ಕೆ ಇಡಿ ಅಽಕಾರಿಗಳು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.
ಸ್ನೇಹಮಯಿ ಕೃಷ್ಣ ದೂರಿನ ಬಗ್ಗೆ ಇಡಿ ಪರಿಶೀಲನೆ: ಮೈಸೂರು: ಮುಡಾದಲ್ಲಿ ಸಾವಿರಾರು ಕೋಟಿ ರೂ. ಹಣಕಾಸಿನ ಅವ್ಯವಹಾರ ನಡೆದಿರುವ ಕುರಿತು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ತನಿಖೆ ಆರಂಭಿಸಿರುವ ಕಾರಣ ಅದಕ್ಕೆ ಬೇಕಾದ ದಾಖಲೆಗಳ ಸಂಗ್ರಹಕ್ಕೆ ಕೈ ಹಾಕಿದ್ದಾರೆ. ನಿವೇಶನ ಹಂಚಿಕೆ ಮಾಡುವಾಗ ನಡೆದಿರುವ ಹಗರಣದ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದು, ಮತ್ತಷ್ಟು ಅವ್ಯವಹಾರಗಳು ಹೊರಬರುವ ಸಾಧ್ಯತೆ ಇದೆ. ಹಿಂದಿನ ಜಿಲ್ಲಾಧಿಕಾರಿ ಕೆ. ವಿ. ರಾಜೇಂದ್ರ ಅವರು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಬರೆದಿದ್ದ ಪತ್ರದಲ್ಲಿ ಒಂದು ಸಾವಿರ ಕೋಟಿ ರೂ. ಸರ್ಕಾರಕ್ಕೆ ನಷ್ಟವಾಗಿರುವುದನ್ನು ಉಲ್ಲೇಖಿಸಿದ್ದ ಪತ್ರದ ಆಧಾರದ ಮೇಲೂ ತನಿಖೆಯ ಆಳಕ್ಕೆ ಇಳಿದಿದ್ದಾರೆ. ಪ್ರತಿ ಕಡತಗಳಿಗೆ ಸಂಬಂಧಿಸಿದಂತೆ ಒಬ್ಬೊಬ್ಬ ಅಧಿಕಾರಿಗಳು ಪ್ರಶ್ನೆ ಮಾಡುತ್ತಿದ್ದರೆ, ಮತ್ತೊಬ್ಬರು ಅದನ್ನು ದಾಖಲಿಸಿಕೊಳ್ಳುತ್ತಿದ್ದರು. ಎಲ್ಲೆಲ್ಲಿ ಕಾನೂನು ಬಾಹಿರ ಕೆಲಸ ನಡೆದಿದೆ ಎಂಬುದನ್ನು ಗಮನಿಸಿ ಆಯುಕ್ತರು, ಕಾರ್ಯದರ್ಶಿಗೆ ಮರು ಪ್ರಶ್ನೆ ಮಾಡಿ ಮಾಹಿತಿ ಕೇಳುತ್ತಿದ್ದರು. ಈ ವೇಳೆ ತಮಗೆ ಗೊತ್ತಿರುವ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಹೀಗಾಗಿ, ಶನಿವಾರ ಹಿಂದಿನ ಆಯುಕ್ತರಾದ ಡಿ. ಬಿ. ನಟೇಶ್, ಜಿ. ಟಿ. ದಿನೇಶ್ ಕುಮಾರ್ ಅವರ ಸಮ್ಮುಖದಲ್ಲೇ ದಾಖಲೆಗಳನ್ನು ಪರಿಶೀಲಿಸಿ ಮಾಹಿತಿ ಕಲೆ ಹಾಕಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಇಡಿ ಅಧಿಕಾರಿಗಳು ಈ ಇಬ್ಬರೂ ನಿರ್ಗಮಿತ ಆಯುಕ್ತರಿಗೆ ದಾಖಲೆ ಪರಿಶೀಲನೆ ವೇಳೆ ಹಾಜರಿರುವಂತೆ ಸೂಚನೆ ನೀಡಿದ್ದಾರೆ.
ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವೆ: ಸ್ನೇಹಮಯಿ ಕೃಷ್ಣ: ಮೈಸೂರು: ಮುಡಾದಲ್ಲಿ ನಡೆದಿರುವ ಭ್ರಷ್ಟಾಚಾರ ವಿರುದ್ಧ ಹೋರಾಟ ನಿಶ್ಚಿತ. ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದರು. ಮುಡಾ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಕೇವಲ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿಯನ್ನು ಗುರಿಯಾಗಿಸಿಕೊಂಡು ನಾನು ದೂರು ನೀಡಿಲ್ಲ. ಮುಡಾದಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣವನ್ನು ಬಯಲಿಗೆಳೆಯುವಂತೆ ಕೋರಿ ದೂರು ನೀಡಿದ್ದೇನೆ. ನಿರಂತರವಾಗಿ ಹೋರಾಟ ಮಾಡುವೆ ಎಂದರು. ಇಡಿ ಅಧಿಕಾರಿಗಳು ಕೇಳಿರುವ ಮಾಹಿತಿಯನ್ನು ಬೆಂಗಳೂರಿನಲ್ಲಿ ನೀಡಿದ್ದೇನೆ. ಮುಡಾ ಅಧಿಕಾರಿಗಳ ಮೇಲೆ ಒತ್ತಡ ತಂದು ದಾಖಲೆ ನಾಶಪಡಿಸುವ ಕೆಲಸ ಮಾಡುವ ಯತ್ನ ನಡೆದಿದೆ ಎಂದು ತಿಳಿಸಿದರು.
ಭೈರತಿ ಸುರೇಶ್ ಮನೆಯಲ್ಲೂ ಪರಿಶೀಲಿಸಿ: ಮೈಸೂರು: ಮುಡಾದಲ್ಲಿ ನಡೆದಿರುವ ೫೦:೫೦ ನಿವೇಶನ ಹಂಚಿಕೆ ಸೇರಿದಂತೆ ಇನ್ನಿತರೆ ಹಗರಣಗಳ ಬಗ್ಗೆ ಮುಡಾದಲ್ಲಿ ದಾಖಲೆಗಳನ್ನು ಪರಿಶೀಲಿಸುವ ಬದಲಿಗೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮನೆಯಲ್ಲಿ ಪರಿಶೀಲನೆ ಮಾಡಬೇಕು ಎಂದು ಶಾಸಕ ಟಿ. ಎಸ್. ಶ್ರೀವತ್ಸ ಒತ್ತಾಯಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಡಾ ಹಗರಣ ಹೊರ ಬರುತ್ತಿದ್ದಂತೆಯೇ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ್ದ ಸಚಿವ ಭೈರತಿ ಸುರೇಶ್ ಅವರು ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಮೊದಲು ಸಚಿವರ ಮನೆ ಮತ್ತು ಕಚೇರಿಯ ಮೇಲೆ ದಾಳಿ ಮಾಡಬೇಕು. ಸಿಎಂ ಕಚೇರಿಯಲ್ಲೂ ಮಹತ್ತರ ದಾಖಲೆಗಳು ಇರುವುದರಿಂದ ದಾಳಿ ಮಾಡಿ ವಶಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಲಾದರೂ ರಾಜೀನಾಮೆ ನೀಡಬೇಕು. ಮುಡಾದಲ್ಲಿ ಕಾನೂನುಬಾಹಿರವಾಗಿ ನಿವೇಶನ ಹಂಚಿಕೆ ಆಗಿರುವುದು ದಾಖಲೆಗಳಲ್ಲಿ ಸಾಬೀತಾಗಿದೆ. ಸತ್ಯವನ್ನು ಎಂದಿಗೂ ಮುಚ್ಚಿಡಲು ಸಾಧ್ಯವಿಲ್ಲ. ಆಯುಕ್ತರಾಗಿ ಕೆಲಸ ಮಾಡಿದ್ದ ಡಾ. ಡಿ. ಬಿ. ನಟೇಶ್, ಜಿ. ಟಿ. ದಿನೇಶ್ ಕುಮಾರ್ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು ಎಂದು ಒತ್ತಾಯಿಸಿದರು.
ಮುಡಾದಲ್ಲಿ ಕಡತಗಳನ್ನು ತಿದ್ದುವ, ನಾಶಪಡಿಸುವ ಕೆಲಸ ನಡೆದಿದೆ. ನಮಗೆ ಬಂದಿರುವ ಮಾಹಿತಿ ಪ್ರಕಾರ ಹಲವಾರು ದಾಖಲೆಗಳನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಲಾಗಿದೆ. -ಟಿ. ಎಸ್. ಶ್ರೀವತ್ಸ, ಶಾಸಕ.
ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…
ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…
ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…
ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…
ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…
ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…