ಸರ್ಕಾರದಿಂದ ಹಣ ಮಂಜೂರು; ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಹಿನ್ನಡೆ
ಪುನೀತ್ ಮಡಿಕೇರಿ
ಮಡಿಕೇರಿ: ಕುಶಾಲನಗರ ತಾಲ್ಲೂಕಿನಲ್ಲಿರುವ ದುಬಾರೆ ತೂಗು ಸೇತುವೆ ನಿರ್ಮಾಣಕ್ಕೆ ಸರ್ಕಾರ ಹಣ ಮಂಜೂರು ಮಾಡಿದ್ದರೂ ಸಂಬಂಧಿಸಿದವರ ನಿರ್ಲಕ್ಷದಿಂದಾಗಿ ತೂಗು ಸೇತುವೆ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿದೆ.
ನಂಜರಾಯಪಟ್ಟಣ ಮಾರ್ಗವಾಗಿ ದುಬಾರೆ ಸಾಕಾನೆ ಶಿಬಿರಕ್ಕೆ ತೆರಳುವವರು ಕಾವೇರಿ ನದಿಯನ್ನು ದಾಟಲೇಬೇಕು. ಏಪ್ರಿಲ, ಮೇ ತಿಂಗಳ ಬೇಸಿಗೆ ಅವಽಯಲ್ಲಿ ನದಿಯಲ್ಲಿ ನೀರಿನ ಹರಿವು ಕಡಿಮೆ ಇರುವುದರಿಂದ ಅಲ್ಲಿರುವ ಒಂದೊಂದು ಕಲ್ಲುಗಳ ಮೇಲೆ ಕಾಲಿಡುತ್ತಾ ನದಿಯ ಮೂಲಕ ಆನೆ ಕ್ಯಾಂಪ್ ತಲುಪಬಹುದು. ಈ ಸಂದರ್ಭದಲ್ಲಿ ಎಚ್ಚರ ತಪ್ಪಿದರೆ ನೀರಿಗೆ ಬೀಳುವ ಅಪಾಯವೂ ಇದೆ. ಈ ಹಿಂದಿನ ವರ್ಷಗಳಲ್ಲಿ ಈ ರೀತಿ ನದಿ ದಾಟಲು ಹೋಗಿ ೧೨ಕ್ಕೂ ಅಧಿಕ ಪ್ರವಾಸಿಗರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಜೂನ್ ನಂತರ ಮಳೆಗಾಲದಲ್ಲಿ ಕಾವೇರಿ ತುಂಬಿ ಹರಿಯುವುದರಿಂದ ನದಿ ದಾಟಲು ಕಷ್ಟಪಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಯಾಂತ್ರಿಕೃತ ದೋಣಿಗಳನ್ನು ಉಪಯೋಗಿಸ ಲಾಗುತ್ತದೆ. ದುಬಾರೆ ದ್ವೀಪದಲ್ಲಿರುವ ಗಿರಿಜನರ ಓಡಾಟಕ್ಕೆ, ಪ್ರವಾಸಿಗರನ್ನು ಕರೆದೊಯ್ಯಲು ಈ ದೋಣಿಗಳನ್ನು ಬಳಸಲಾಗುತ್ತದೆ. ಒಂದು ದೋಣಿ ದಿನಕ್ಕೆ ಕನಿಷ್ಠ ೧೦ ಬಾರಿಯಾದರೂ ನದಿಯ ಎರಡೂ ದಂಡೆಗಳ ಮಧ್ಯೆ ಓಡಾಡುತ್ತದೆ. ಪ್ರವಾಸಿಗರ ಸಂಖ್ಯೆ ಹೆಚ್ಚಿರುವ ರಜಾ ದಿನಗಳಲ್ಲಂತೂ ದೋಣಿಗಳ ಟ್ರಿಪ್ ಸಂಖ್ಯೆ ಇನ್ನೂ ಹೆಚ್ಚಿರುತ್ತದೆ. ಇದರಿಂದಾಗಿ ಇಲ್ಲಿಯ ಸೂಕ್ಷ್ಮ ಪರಿಸರದ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಆಗುತ್ತಿವೆ. ದುಬಾರೆಯಲ್ಲಿ ತೂಗು ಸೇತುವೆ ನಿರ್ಮಾಣವಾದರೆ ನದಿಯ ಒಂದು ಬದಿಯಿಂದ ಮತ್ತೊಂದು ಬದಿಗೆ ಸಂಪರ್ಕ ಸುಲಭ ಆಗಲಿದೆ.
ದುಬಾರೆಗೆ ತೂಗು ಸೇತುವೆ ಬೇಕು ಎಂಬ ಸ್ಥಳೀಯರ ಬೇಡಿಕೆಯನ್ನು ಸರ್ಕಾರದ ಮುಂದೆ ಮಂಡಿಸಿದ್ದ ಮಡಿಕೇರಿ ಶಾಸಕ ಡಾ. ಮಂಥರ್ ಗೌಡ, ಇದೇ ಉದ್ದೇಶಕ್ಕೆ ೭. ೩೦ ಕೋಟಿ ರೂ. ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇನ್ನು ಕೂಡ ಈ ಸಂಬಂಧ ಆಡಳಿತಾತ್ಮಕ ಪ್ರಕ್ರಿಯೆಗಳೇ ಶುರುವಾಗಿಲ್ಲ ಎನ್ನಲಾಗುತ್ತಿದೆ.
ದುಬಾರೆ ಸಾಕಾನೆ ಶಿಬಿರ ಮತ್ತು ಇಲ್ಲಿಯ ಸುತ್ತಮುತ್ತಲಿನ ಪ್ರದೇಶ ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಒಳನಾಡು ಜಲಸಾರಿಗೆ ಇಲಾಖೆ, ಕಾವೇರಿ ನೀರಾವರಿ ನಿಗಮ, ಪುರಾತತ್ವ ಇಲಾಖೆ ಹಾಗೂ ಸ್ಥಳೀಯ ನಂಜರಾಯಪಟ್ಟಣ ಗ್ರಾ. ಪಂ. ಜತೆ ಒಂದಿಂದು ಸಂಬಂಧ ಹೊಂದಿರುವುದರಿಂದ ಈ ಇಲಾಖೆಗಳ ಅಧಿಕಾರಿಗಳ ಮಧ್ಯೆ ಮೊದಲು ಸಮನ್ವಯತೆ ಮೂಡಬೇಕಿದೆ. ಕಾಮಗಾರಿ ಆರಂಭಿಸುವ ಮೊದಲು ಸಮನ್ವಯತೆ ಮಾಡದಿದ್ದರೆ ಗೊಂದಲ ಉಂಟಾಗಬಹುದು.
ಸೇತುವೆ ವಿನ್ಯಾಸ: ದುಬಾರೆಯಲ್ಲಿ ತೂಗು ಸೇತುವೆ ನಿರ್ಮಾಣ ಸಂಬಂಧ ತೂಗು ಸೇತುವೆ ತಜ್ಞೆ ಪತಂಜಲಿ ಭಾರದ್ವಾಜ ವಿನ್ಯಾಸವೊಂದನ್ನು ರೂಪಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಸೇತುವೆಯ ಉದ್ದ ೨೧೦ ಮೀ. , ಅಗಲ ೧. ೫ ಮೀ. ಇದೆ. ಎರಡು ಕಂಬಗಳ ಅಧಾರದಲ್ಲಿ ನಿಲ್ಲಲಿರುವ ಈ ಸೇತುವೆ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣವಾಗಲಿದೆ. ಹೆಚ್ಚು ಸ್ಥಿರತೆಗಾಗಿ ಸೇತುವೆಯ ಎರಡೂ
ಬದಿಗಳಿಗಿಂತ ಮಧ್ಯದ ಭಾಗ ಎತ್ತರ ಇರುತ್ತದೆ. ಈ ಸೇತುವೆಗೆ ಸುಮಾರು ೬ ಕೋಟಿ ರೂ. ವೆಚ್ಚದ ಅಂದಾಜು ಮಾಡಲಾಗಿದೆ.
ದುಬಾರೆಯಲ್ಲಿ ತೂಗು ಸೇತುವೆ ನಿರ್ಮಾಣಕ್ಕೆ ೭. ೩೦ ಕೋಟಿ ರೂ. ಅನುದಾನ ಬಿಡುಗಡೆ ಆಗಿದೆ. ಇಲ್ಲಿ ತೂಗು ಸೇತುವೆ ನಿರ್ಮಾಣವಾಗುವುದರಿಂದ ಪ್ರವಾಸಿ ಆಕರ್ಷಣೆ ಹೆಚ್ಚಾಗಲಿದೆ. ದ್ವೀಪದ ಹಾಡಿಯಲ್ಲಿ ವಾಸಿಸುತ್ತಿರುವ ಗಿರಿಜನರಿಗೂ ಅನುಕೂಲ ಆಗಲಿದೆ. ಪೂರಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಮಾಚ್ ನಿಂದಲೇ ತೂಗುಸೇತುವೆ ಕಾಮಗಾರಿ ಆರಂಭಿಸುವಂತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ಕೊಡಲಾಗಿದೆ. –ಡಾ. ಮಂಥರ್ ಗೌಡ, ಶಾಸಕರು, ಮಡಿಕೇರಿ ವಿಧಾನಸಭಾ ಕ್ಷೇತ್ರ
ದುಬಾರೆ ಸಾಕಾನೆ ಶಿಬಿರಕ್ಕೆ ತೆರಳುವ ಸಂದರ್ಭದಲ್ಲಿ ಸಿಗುವ ಕಾವೇರಿ ನದಿಯ ದೃಶ್ಯ. ದುಬಾರೆ ತೂಗು ಸೇತುವೆಗೆ ಸರ್ಕಾರದಿಂದ ಹಣ ಬಂದಿದೆ. ಆದರೂ ಅಧಿಕಾರಿಗಳು ಕಾಮಗಾರಿ ಶುರು ಮಾಡಿಲ್ಲ. ಅನುದಾನ ಇದ್ದರೂ ಅಧಿಕಾರಿಗಳು ಈ ರೀತಿ ಏಕೆ ನಿರ್ಲಕ್ಷ ತೋರಿಸುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಮಾರ್ಚ್ ಒಳಗೆ ಕೆಲಸ ಆರಂಭಿಸದಿದ್ದರೆ ನಂತರ ಮಳೆಗಾಲ ಪ್ರಾರಂಭವಾಗುತ್ತದೆ. ಈ ಸಂದರ್ಭದಲ್ಲಿ ಕಾಮಗಾರಿ ನಡೆಸಲು ಆಗುವುದಿಲ್ಲ. ಈ ವಿಷಯವನ್ನು ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಗಮನಕ್ಕೆ ತರಲಾಗಿದೆ. -ವಿ. ಪಿ. ಶಶಿಧರ್, ಅಧ್ಯಕ್ಷಯ, ಕುಶಾಲನಗರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ
ಚಾಮುಂಡಿ ಬೆಟ್ಟದಲ್ಲಿ ಪ್ರಸಾದ ಯೋಜನೆಯಡಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಯ ಬಗ್ಗೆ ಮೈಸೂರು ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹಾಗೂ ಪ್ರಜ್ಞಾವಂತ…
ಮೈಸೂರು ತಾಲ್ಲೂಕಿನ ಧನಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕೆಂಚಲಗೂಡು ಗ್ರಾಮದಲ್ಲಿ ಕರ್ನಾಟಕ ಗೃಹ ಮಂಡಳಿ(ಕೆಎಚ್‌ಬಿ)ಯಿಂದ ನಿರ್ಮಿಸಿರುವ ಬಡಾವಣೆಯಲ್ಲಿ ನೀರು,…
ಮೈಸೂರಿನಲ್ಲಿ ಬಸ್ ನಿಲ್ದಾಣ, ರೈಲು ನಿಲ್ದಾಣ ಮೊದಲಾದ ಕಡೆಗೆ ತೆರಳುವವರು, ಅದರಲ್ಲೂ ಮುಖ್ಯವಾಗಿ ಒಬ್ಬರೇ ಪ್ರಯಾಣಿಸುವವರು ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ…
ರಾಷ್ಟ್ರಕವಿ ಕುವೆಂಪು ಅವರು ವಾಸವಿದ್ದ ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ ‘ಉದಯರವಿ’ ಮನೆಯನ್ನು ಸ್ಮಾರಕವನ್ನಾಗಿ ಮಾಡಬೇಕೆಂದು ಸಾಹಿತ್ಯಾಸಕ್ತರು ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದರೂ ಸಂಬಂಧಪಟ್ಟವರು…
ಪ್ರೊ.ಆರ್.ಎಂ.ಚಿಂತಾಮಣಿ ನುರಿತ ಹಣಕಾಸು ಆಡಳಿತಗಾರ ಮತ್ತು ದೇಶದ ಹಣಕಾಸು ಮತ್ತು ಬಂಡವಾಳ ಪೇಟೆಗಳ ಬೆಳವಣಿಗೆ ಮತ್ತು ನಿಯಂತ್ರಣದ ಉನ್ನತಾಧಿಕಾರವುಳ್ಳ ಭಾರತೀಯ…
ಲಕ್ಷ್ಮಿಕಾಂತ್ ಕೊಮಾರಪ್ಪ ಹತ್ತಾರು ಸಮಸ್ಯೆಗಳ ನಡುವೆಯೂ ಕಾಫಿ ಬೆಳೆದಿದ್ದವರಿಗೆ ನಷ್ಟದ ಭೀತಿ; ಮತ್ತಷ್ಟು ದರ ಕುಸಿತಗೊಳ್ಳುವ ಸಾಧ್ಯತೆ ಸೋಮವಾರಪೇಟೆ: ಕಾರ್ಮಿಕರ ಕೊರತೆ,…