ಶ್ರೀಧರ್ ಆರ್.ಭಟ್
ಗುತ್ತಿಗೆದಾರರು, ಅಧಿಕಾರಿಗಳ ಪಾಲಿಗೆ ಚಿನ್ನದ ಗಣಿಯಂತಾದ ಮಣ್ಣು; ಸರ್ಕಾರಕ್ಕೆ ಭಾರೀ ನಷ್ಟ
ನೂರಾರು ಕ್ಯೂಬಿಕ್ ಮೀಟರ್ ಮಣ್ಣು ಮಾರಾಟಕ್ಕೆ ಮಾತ್ರ ಲೆಕ್ಕ; ಲಕ್ಷಾಂತರ ಕ್ಯೂಬಿಕ್ ಮೀಟರ್ ಮಣ್ಣು ಸಾಗಾಟ
ಸರ್ಕಾರಿ ಕೆಲಸಕ್ಕೆ ಖಾಸಗಿಯವರಿಂದ ಮಣ್ಣು ಖರೀದಿ; ಖಾಸಗಿ ಕೆಲಸಕ್ಕೆ ಸರ್ಕಾರಿ ಮಣ್ಣನ್ನು ಉದಾರವಾಗಿ ನೀಡಿದ ಅಧಿಕಾರಿಗಳು
ಕಬಿನಿ ಬಲದಂಡೆ, ನುಗು ನಾಲೆಯ ೩ ಕೋಟಿ ರೂ. ಮೌಲ್ಯದ ಮಣ್ಣು ಮಂಗಮಾಯ
ನಂಜನಗೂಡು: ಕೋಟ್ಯಂತರ ರೂ. ಮೌಲ್ಯದ ನುಗು ಮತ್ತು ಕಬಿನಿ ಬಲದಂಡೆಯ ಮಣ್ಣು ನೋಡನೋಡುತ್ತಿದ್ದಂತೆಯೇ ಮಂಗಮಾಯವಾಗಿದೆ. ಬೆಟ್ಟದಂತೆ ಗುಡ್ಡೆಯಾಗಿದ್ದ ಮಣ್ಣನ್ನು ಕೆಲವೇ ದಿನಗಳಲ್ಲಿ ಕರಗಿಸಿದ್ದು, ಹಗಲು ದರೋಡೆ ನಡೆಯುತ್ತಿದೆ. ಇದರಿಂದಾಗಿ ಕೋಟಿ ಕೋಟಿ ರೂ.ಗಳ ನಷ್ಟವಾಗಿದ್ದು ಸರ್ಕಾರಕ್ಕೆ; ಲಾಭ ಮಾತ್ರ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಎಂಬಂತಾಗಿದೆ.
ನಾಲೆಯ ಮಣ್ಣು ಕಾಯಬೇಕಿದ್ದ ನೀರಾವರಿ ನಿಗಮದ ಅಧಿಕಾರಿಗಳ ಕುತಂತ್ರದಿಂದಾಗಿ ಕಬಿನಿ ಬಲದಂಡೆ ಹಾಗೂ ನುಗು ನಾಲೆಯ ಲಕ್ಷಾಂತರ ಟನ್ ಮಣ್ಣು ನಂಜನಗೂಡು ನಗರದ ಅನೇಕ ಹೊಸ ಬಡಾವಣೆಗಳಿಗೆ ಬಳಕೆಯಾಗಿದೆ.
ಕಬಿನಿ ಬಲದಂಡೆ ಹಾಗೂ ಎಡದಂಡೆ ನಾಲಾ ಮಣ್ಣನ್ನು ಕ್ಯೂಬಿಕ್ ಮೀಟರ್ ಲೆಕ್ಕದಲ್ಲಿ ಕೃಷಿ ಜಮೀನಿಗೆ ಬಳಸಲು ಅನುಮತಿ ಕೊಡಬೇಕು ಎಂದು ಅರ್ಜಿ ನೀಡಲಾಗಿದೆ. ಆದರೆ ಆ ಮಣ್ಣನ್ನು ಹೊಸ ಬಡಾವಣೆಗಳನ್ನು ಸಮತಟ್ಟು ಮಾಡಲು ಉಪಯೋಗಿಸಲಾಗಿದೆ. ಒಂದು ಕ್ಯೂಬಿಕ್ ಮೀಟರ್ ಮಣ್ಣಿಗೆ ಶುಲ್ಕವಾಗಿ ನಿರಾವರಿ ಇಲಾಖೆಗೆ ೨೨೮ ರೂ., ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ೬೮ ರೂ. ನಿಗದಿಪಡಿಸಲಾಗಿದೆ. ಮಣ್ಣಿನ ಅಗತ್ಯ ಇರುವವರು ನಿಗದಿತ ಶುಲ್ಕ ನೀಡಿ ಮಣ್ಣು ಸಾಗಿಸಲು ಅನುಮತಿ ಪಡೆಯಬೇಕಾಗುತ್ತದೆ.
ಈ ಅನುಮತಿ ವ್ಯವಹಾರದಲ್ಲೇ ಅಧಿಕಾರಿಗಳು ಹಾಗೂ ಗುತ್ತಿಗೆ ದಾರರ ಕರಾಮತ್ ಅಡಗಿದೆ. ಕೇವಲ ನೂರಾರು ಕ್ಯೂಬಿಕ್ ಮೀಟರ್ ಮಣ್ಣು ಸಾಗಿಸಲು ಅನುಮತಿ ಪಡೆದ ಗುತ್ತಿಗೆದಾರ ಅಧಿಕಾರಿಗಳ ಬೆಂಬಲದಿಂದ ಹತ್ತಾರು ಸಾವಿರ ಕ್ಯೂಬಿಕ್ ಮೀಟರ್ ಮಣ್ಣು ಸಾಗಾಣಿಕೆ ಮಾಡಿದ್ದರ ಫಲವಾಗಿ ಕಬಿನಿ ಬಲದಂಡೆ ಹಾಗೂ ನುಗು ನಾಲೆಗಳ ಮಣ್ಣಿನ ಗುಡ್ಡ ಈಗಾಗಲೇ ಕರಗತೊಡಗಿದೆ.
ಕಳೆದೆರಡು ತಿಂಗಳಲ್ಲಿ ಕಳಲೆ ಮತ್ತು ಹರತಲೆ ನಡುವಿನ ನಾಲೆಯ ದಡದಲ್ಲಿ ೨೦ರಿಂದ ೩೦ ಅಡಿ ಅಗಲಕ್ಕೆ, ೮ರಿಂದ ೧೫ ಅಡಿ ಎತ್ತರಕ್ಕೆ, ಮೂರೂವರೆ ಕಿಮೀ ಉದ್ದಕ್ಕೆ ಚಾಚಿಕೊಂಡಿದ್ದ ಮಣ್ಣಿನ ಗುಡ್ಡ ಈಗಾಗಲೆ ಖಾಸಗಿ ಬಡಾವಣೆಗಳು ಹಾಗೂ ತೆಂಗಿನ ತೋಟಗಳ ಭರ್ತಿಗೆ ಸಾಗಾಟವಾಗಿ ಹೋಗಿದೆ. ನೀರಾವರಿ ಇಲಾಖೆಯ ಅಧಿಕಾರಿಗಳ ಜಾಣಮೌನ ಸರ್ಕಾರಕ್ಕೆ ಕೋಟಿ ಕೋಟಿ ರೂ.ಗಳ ನಷ್ಟವಾಗಲು ಕಾರಣವಾಗಿದೆ. ೧ ಮೀಟರ್ ಅಗಲ, ೧ ಮೀಟರ್ ಉದ್ದ, ೧ ಮೀಟರ್ ಎತ್ತರ ಈ ಘನ ಮೀಟರ್ ಅಳತೆಯ ಮಣ್ಣಿಗೆ ಒಂದು ಕ್ಯೂಬಿಕ್ ಮೀಟರ್ ಎಂದು ಕರೆಯಲಾಗುತ್ತದೆ.
ಒಂದು ಘನ ಮೀಟರ್ ಮಣ್ಣಿಗೆ ಸರ್ಕಾರ ನಿಗದಿಪಡಿಸಿದ ಮೊತ್ತ ೨೯೬ ರೂ.ಗಳು ಇದರಂತೆ ಹರತಲೆ-ಕಳಲೆ ನಡುವೆ ಇದ್ದ ಮಣ್ಣಿನ ಪ್ರಮಾಣ ೩.೫ ಕಿಮೀ (೩,೫೦೦ ಮೀಟರ್), ಸರಾಸರಿ ೧೫ ಅಡಿ ಎತ್ತರ (೪.೫೭೨ ಮೀಟರ್), ೨೦ ಅಡಿ ಅಗಲ (೬.೦೯೬ ಮೀಟರ್) ಒಟ್ಟಾರೆ ಅಂದಾಜು ೧ ಲಕ್ಷ ಕ್ಯೂಬಿಕ್ ಮೀಟರ್ ಮಣ್ಣು ೧,೦೦,೦೦೦ ೨೯೬ ಅಂದರೆ ಈಗ ಸಾಗಿಸಿರುವ ಮಣ್ಣಿನಲ್ಲಿ ಸರ್ಕಾರಕ್ಕೆ ಪಾವತಿಯಾಗಬೇಕಿದ್ದ ರಾಜಧನ ಕನಿಷ್ಠ ೩ ಕೋಟಿ ರೂ. ಆದರೆ ಈವರೆಗೆ ನೀರಾವರಿ ಇಲಾಖೆಗೆ ಸಂದಾಯವಾಗಿರುವುದು ಲಕ್ಷಾಂತರ ರೂ.ಗಳು ಮಾತ್ರ. ನೀರಾವರಿ ಇಲಾಖೆಯ ದಾಖಲೆಗಳ ಪ್ರಕಾರ ಕಬಿನಿ ಬಲದಂಡೆಯ ಮೇಲಿನ ಮಣ್ಣಿಗೆ ಅನುಮತಿ ಪಡೆದಿದ್ದು ಸರಪಳಿ ೫೪, ೫೬, ೫೭, ೭೪, ೭೫,೭೫.೫ರ ಪ್ರದೇಶದ ೧,೩೯೦ ಕ್ಯೂಬಿಕ್ ಮೀಟರ್ ಮಣ್ಣು ಸಾಗಾಟಕ್ಕೆ ಮಾತ್ರ. ಅದೂ ಕೃಷಿ ಜಮೀನಿನ ಬಳಕೆಗೆ ಎಂದು. ಹಾಗಾದರೆ ಉಳಿದ ಕೋಟಿಗಟ್ಟಲೆ ಹಣ ಎಲ್ಲಿಗೆ ಹೋಯಿತು ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ
” ನಾಲೆ ಮಣ್ಣನ್ನು ಅಕ್ರಮವಾಗಿ ಸಾಗಾಣಿಕೆ ಮಾಡಲಾಗಿದೆ ಎಂದಾದರೆ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ.”
-ಶಿವಕುಮಾರ್, ತಹಸಿಲ್ದಾರ್
” ೧,೩೯೦ ಕ್ಯೂಬಿಕ್ ಮೀಟರ್ ಮಣ್ಣು ಮಾರಾಟಕ್ಕೆ ಮಾತ್ರ ಅಧಿಕೃತ ದಾಖಲೆ ಇದ್ದರೆ ಉಳಿದ ಲಕ್ಷ ಕ್ಯೂಬಿಕ್ ಮೀಟರ್ ಮಣ್ಣನ್ನು ಸಾಗಾಟ ಮಾಡಿದವರು ಯಾರು? ನಾಲಾ ಪಕ್ಕದ ಕೃಷಿ ಜಮೀನಿಗೆ ಭರ್ತಿ ಮಾಡುವ ಸಲುವಾಗಿ ಮಣ್ಣು ತುಂಬಿಕೊಳ್ಳಲು ಹೋದರೆ ಪೊಲೀಸರನ್ನು ಕರೆಸಿ ನಮಗೆ ಧಮ್ಕಿ ಹಾಕುತ್ತಾರೆ. ಆದರೆ ಟಿಪ್ಪರ್ ಲಾರಿಗಳ ಸಹಾಯದಿಂದ ಸಾವೀರಾರು ಲೋಡ್ ಮಣ್ಣು ದರೋಡೆ ಮಾಡಿದರೆ ಕೇಳುವವರ‍್ಯಾರೂ ಇಲ್ಲ.”
-ದೇವನಾಯಕ, ಕೃಷಿಕ, ಹರತಲೆ
” ಲಕ್ಷಾಂತರ ಕ್ಯೂಬಿಕ್ ಮೀಟರ್ ಮಣ್ಣು ಅನುಮತಿ ಇಲ್ಲದೆ ಸಾಗಾಣಿಕೆಯಾಗಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ೩ ಕೋಟಿ ರೂ.ಗಳಿಗೂ ಹೆಚ್ಚು ನಷ್ಟವಾಗಿದೆ. ಹಾಗಾಗಿ ಲೋಕಾಯುಕ್ತರು ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು.”
-ಹರತಲೆ ಕೆಂಪಣ್ಣ, ರೈತ ಹೋರಾಟಗಾರ
” ನಾಲೆಯ ಮಣ್ಣನ್ನು ಯಾವ ಜಮೀನು, ತೋಟ ಹಾಗೂ ಬಡಾವಣೆಗೆ ಸಾಗಿಸಲಾಗಿದೆ ಎಂದು ಪರಿಶೀಲಿಸಿದರೆ ಹಗಲು ದರೋಡೆ ಹಗರಣ ಬಯಲಾಗುತ್ತದೆ.”
-ಬೊಕ್ಕಹಳ್ಳಿ ನಂಜುಂಡಸ್ವಾಮಿ, ರೈತ ಸಂಘ
” ಖಾಸಗಿ ವ್ಯಕ್ತಿಗಳು ನಾಲೆಯ ಮಣ್ಣು ಎತ್ತಲು ಪಕ್ಕದ ಜಮೀನಿನವರಿಂದಲೂಹಣವಸೂಲಿಮಾಡಿದ್ದಾರೆ. ಮಣ್ಣು ತುಂಬಿರುವ ನಾಲೆಯ ಜಾಗ ಸಮತಟ್ಟಾದರೆ ಪಕ್ಕದ ಜಮೀನಿನವರು ಒತ್ತುವರಿ ಮಾಡಲು ಅನುಕೂಲವಾಗುತ್ತದೆ. ಅವರಿಂದಲೂ ಹಣ ವಸೂಲಿ ಮಾಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಈ ಜಾಗ ಒತ್ತುವರಿಯಾಗುತ್ತದೆ.”
-ರಮೇಶ ಹರತಲೆ, ರೈತ
” ಒಂದು ಲಾರಿ ಲೋಡ್‌ಗೆ ೯.೫ ಕ್ಯೂಬಿಕ್ ಮೀಟರ್ ಮಣ್ಣು ಬೇಕಾಗುತ್ತದೆ. ಅಂದರೆ ಇಲ್ಲಿ ೧೦ ಸಾವಿರ ಲೋಡ್‌ಗಳಿಗೂ ಹೆಚ್ಚು ಮಣ್ಣನ್ನು ಲಾರಿಗಳಲ್ಲಿ ಸಾಗಿಸಲಾಗಿದೆ.”
-ಕಳಲೆ ಮಹದೇವನಾಯಕ
ಸಾರಿಗೆ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಸಿಎಂಗೆ ಪತ್ರ ಬರೆದಿದ್ದ ಗ್ರಾಮದ ವಿದ್ಯಾರ್ಥಿಗಳು ಹನೂರು: ತಾಲ್ಲೂಕಿನ ಪಚ್ಚೆದೊಡ್ಡಿ ಗ್ರಾಮದ ನಿವಾಸಿಗಳಿಗೆ ಸಮರ್ಪಕ…
ಎಂ.ನಾರಾಯಣ್ ತಿ.ನರಸೀಪುರ ತಾಲ್ಲೂಕಿನ ಮೂಗೂರಿನಲ್ಲಿ ಜ.೩ರಂದು ಆಕರ್ಷಕ ಬಂಡಿ ಉತ್ಸವ; ೫ರಂದು ರಥೋತ್ಸವ ತಿ.ನರಸೀಪುರ: ಪುರಾಣ ಪ್ರಸಿದ್ಧ ತಾಲ್ಲೂಕಿನ ಮೂಗೂರಿನ…
ಶಾಸಕರ ಸೂಚನೆಯ ಮೇರೆಗೆ ಕ್ಯಾಂಟೀನ್ ಆರಂಭ; ಬಡವರು, ಕಾರ್ಮಿಕರು, ವಿದ್ಯಾರ್ಥಿಗಳಿಗೆ ಸಂತಸ ಎಚ್.ಡಿ.ಕೋಟೆ: ಕಡಿಮೆ ದರದಲ್ಲಿ ರುಚಿಕರವಾದ ತಿಂಡಿ, ಊಟ…
ವರಹಳ್ಳಿ ಆನಂದ ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿಶ್ವವಿದ್ಯಾನಿಲಯ ೧ರಿಂದ ೭ನೇ ತರಗತಿವರೆಗೆ ಪ್ರವೇಶಾವಕಾಶ ಇರುವ ಸ.ಹಿ.ಪ್ರಾ. ಶಾಲೆ ಮೈಸೂರು: ನೂರಾರು…
ಸಿದ್ದಾಪುರ :- ನಗರದಲ್ಲಿ ನಡೆದ ದರೋಡೆ ಪ್ರಕರಣ ಭೇದಿಸಲು ಜಿಲ್ಲಾ ಹೆಚ್ಚುವರಿ ಪೋಲೀಸ್ ಅಧೀಕ್ಷರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿದೆ…