Andolana originals

ದಸರೆಯಲ್ಲಿ ದೇಶೀಯ ಸೊಗಡು ಉಳಿಸಬೇಕಿದೆ: ಪ್ರೊ.ಹಂಪನಾ

 

ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಕಲ ಸಿದ್ಧತೆ ಆರಂಭ ವಾಗಿ ದಿನಗಣನೆ ಶುರುವಾಗಿರುವ ಹಿನ್ನೆಲೆಯಲ್ಲಿ ನಾಡಿನ ಅಧಿದೇವತೆಯ ಸನ್ನಿಧಿಯಲ್ಲಿ ದಸರೆಗೆ ಚಾಲನೆ ಕೊಡುವವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿದ್ದು, ಈ ಬಾರಿ ನಾಡೋಜ, ಹಿರಿಯ ಸಾಹಿತಿ ಪ್ರೊ.ಹಂಪ ನಾಗರಾಜಯ್ಯ ಅವರಿಗೆ ದಸರಾ ಉದ್ಘಾಟನೆ ಭಾಗ್ಯ ದೊರೆತಿದೆ.

ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ದಿನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ದಸರಾ ಉದ್ಘಾಟಕರ ಹೆಸರನ್ನು ಘೋಷಣೆ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದರು. ಕನ್ನಡ, ಜೈನ ಸಾಹಿತ್ಯದಲ್ಲಿ ಮೌಲ್ಯಯುತ ಕೃತಿಗಳನ್ನು ರಚಿಸಿರುವುದರ ಜತೆಗೆ ಸಂಶೋಧನೆ ನಡೆಸಿ ಜನಮನ್ನಣೆಗಳಿಸಿರುವ ಪ್ರೊ. ಹಂಪನಾ ಅವರನ್ನು ದಸರಾ ಉದ್ಘಾಟಕರನ್ನಾಗಿ ಆಯ್ಕೆ ಮಾಡಿದ ಹಿನ್ನೆಲೆಯಲ್ಲಿ ಆಂದೋಲನ’ ದಿನಪತ್ರಿಕೆ ನಡೆಸಿದ ವಿಶೇಷ ಸಂದರ್ಶನದಲ್ಲಿ ತಮ್ಮ ಹಲವು ಅಭಿಪ್ರಾಯಗಳನ್ನು ಹಂಚಿಕೊಂಡರು.

ದಸರಾ ಉದ್ಘಾಟನೆಗೆ ಸರ್ಕಾರ ತಮ್ಮನ್ನು ಆಯ್ಕೆ ಮಾಡಿದ್ದಕ್ಕೆ ನಿಮ್ಮ ಅನಿಸಿಕೆ ಏನು?
ಪ್ರೊ.ಹಂಪನಾ: ನನಗೆ ಎಲ್ಲಿಲ್ಲದ ಸಂತೋಷವಾಗಿದೆ. ನಾಲ್ಕು ಜನರ ಮಧ್ಯೆ ದಸರಾ ನೋಡಲು ಬರುತ್ತಿದ್ದೆ. ಎಷ್ಟೋ ವರ್ಷಗಳಿಂದ ದಸರಾ ನೋಡಿಕೊಂಡು ಬಂದಿದ್ದ ನನ್ನನ್ನು ನೀನೇ ಎಲ್ಲರ ಮುಂದೆ ನಿಂತು ದಸರಾ ಉದ್ಘಾಟನೆ ಮಾಡಬೇಕು ಅಂತ ಹೇಳಿದರೆ ಎಷ್ಟು ಸಂತೋಷವಾಗು ವುದಿಲ್ಲ. ಇದೊಂದು ಅವಿಸ್ಮರಣೀಯ, ಅಪರೂಪದ ಕ್ಷಣ. ಎಲ್ಲರ ಭುಜದೊಂದಿಗೆ ನಿಂತು ಚಾಲನೆ ಕೊಡುವ ಸಂತೋಷವೇ ಬೇರೆ. ಅದನ್ನು ಪದಗಳಲ್ಲಿ ವರ್ಣಿಸಲಾಗದು.

ಮೊದಲ ಬಾರಿಗೆ ದಸರಾ ನೋಡಿದಾಗ ನಿಮಗಾದ ಅನುಭವ ಏನು?
ಪ್ರೊ.ಹಂಪನಾ: ಕಳೆದ 3 ವರ್ಷಗಳು ಬಿಟ್ಟರೆ ಮೊದಲಿನಿಂದಲೂ ದಸರಾ ನೋಡಿಕೊಂಡು ಬರುತ್ತಿದ್ದೇನೆ. ನಾವು ಆಯುರ್ವೇದ ಕಾಲೇಜಿನ ಬಳಿ ದಸರಾ ನೋಡಿಕೊಂಡು ಜೆ.ಕೆ.ಮೈದಾನದಲ್ಲಿ ಏರ್ಪಡಿಸುತ್ತಿದ್ದ ವಸ್ತು ಪ್ರದರ್ಶನ ವೀಕ್ಷಿಸುತ್ತಿದ್ದೆವು. ನಮ್ಮ ಸಂಬಂಧಿಕರು ದೊಡ್ಡ ಗಡಿಯಾರದ ಸಮೀಪ ಇದ್ದ ಕಾರಣ ಸಯ್ಯಾಜಿರಾವ್ ರಸ್ತೆಯಲ್ಲಿ ಕುಳಿತು ನೋಡುತ್ತಿದ್ದೆವು. ನಮ್ಮ ಸಂಬಂಧಿಕರು ಹೊಲಿಸಿಕೊಡುತ್ತಿದ್ದ ಹೊಸ ಶರ್ಟ್ ಧರಿಸಿ ದಸರಾ ನೋಡುತ್ತಿದ್ದೆವು. ಜಂಬೂಸವಾರಿ ವೀಕ್ಷಣೆ ಮಾಡಿದ ನಂತರ ಅರಮನೆ ದೀಪಾಲಂಕಾರ ನೋಡಲು ಹೋದಾಗ ರಾಜರು ಸಿಂಹಾಸನವನ್ನೇರುತ್ತಿದ್ದಂತೆ ದೀಪಗಳು ಹೊತ್ತಿಕೊಳ್ಳುತ್ತಿದ್ದವು. ಸಯ್ಯಾಜಿರಾವ್ ರಸ್ತೆಯನ್ನು ಬರೋಡಾದ ರಾಜರ ಹೆಸರಿನಲ್ಲಿ ನಿರ್ಮಾಣ ಮಾಡಲಾಯಿತು.ಏಕೆಂದರೆ ಬರೋಡಾದಲ್ಲಿ ಮೈಸೂರು ರಾಜರ ಹೆಸರಿನಲ್ಲಿ ರಸ್ತೆ ನಿರ್ಮಿಸಲಾಗಿದೆ. ಅದಕ್ಕಾಗಿಯೇ ನಾವು ಜಾಸ್ತಿ ಈ ರಸ್ತೆಯಲ್ಲಿ ಕುಳಿತು ದಸರೆ ವೀಕ್ಷಿಸುತ್ತಿದ್ದೆವು.

• ಮೈಸೂರಿಗೂ ನಿಮಗೂ ಇರುವ ನಂಟು ಕುರಿತು…
ಪ್ರೊ.ಹಂಪನಾ:ಮೈಸೂರಿನಲ್ಲಿ ನಮ್ಮ ತಂದೆಯ ನೆಂಟರು ಇದ್ದ ಕಾರಣ ಚಿಕ್ಕಂದಿನಲ್ಲಿ ಇಲ್ಲಿಗೆ ಬರುತ್ತಿದ್ದೆ. ಆದರೆ,ಮೈಸೂರು ನನಗೆ ವಿದ್ಯೆ ಕೊಟ್ಟ ಊರು.ಉದ್ಯೋಗ ಕೊಟ್ಟ ಊರು. 1954ರಲ್ಲಿ ಮಹಾರಾಣಿ ಕಾಲೇಜಿನಲ್ಲಿ ಉದ್ಯೋಗ ದೊರಕಿತು. ಎಲ್ಲದಕ್ಕಿಂತಲೂ ಶಾರದೆಯು ಕಮಲಾಳನ್ನು ಕೊಟ್ಟಳು. ಆಕೆಯು ಸಿಕ್ಕಿದ್ದು ನನ್ನ ಪಾಲಿನ ಪುಣ್ಯ. ನಾವಿಬ್ಬರೂ ಮದುವೆಯಾಗುವ ಮುನ್ನ ಪ್ರಣಯದಿಂದ ಕಾಲ ಕಳೆದಿದ್ದೆವು. ಕಾರಂಜಿಕೆರೆ ಸೇರಿದಂತೆ ಹತ್ತಾರು ಉದ್ಯಾನವನಗಳಲ್ಲಿ ಕುಳಿತು ಮಾತನಾಡಿದ್ದೆವು. ಆದರೆ, ಮದುವೆ ವಿಚಾರ ಬಂದಾಗ ಪ್ರಣಯ ಪರ್ವ ಬದಲಿಗೆ ಯುದ್ಧ ಪರ್ವವೇ ಶುರುವಾಯಿತು. ನಮ್ಮ ತಂದೆ ಶ್ಯಾನು ಭೋಗರು. ಹತ್ತಾರು ಹಳ್ಳಿಗಳಿಗೆ ನ್ಯಾಯ ಹೇಳುತ್ತಿದ್ದರಿಂದ ಬೇಡರ ಮನೆತನದ ಹುಡುಗಿ ಬೇಡ ಎಂದು ಹಠ ಮಾಡಿದ್ದರಿಂದ ಕೊನೆಗೆ ನಾವೇ ಗೆದ್ದು ಮದುವೆಯಾದೆವು. ಕೊನೆ ಕೊನೆಗೆ ಕಮಲಾ ನಮ್ಮ ಅಪ್ಪ- ಅಮ್ಮನ ಮನಸ್ಸನ್ನು ಗೆದ್ದಿದ್ದರಿಂದ ನಮ್ಮ ಮನೆಯಲ್ಲೇ ಬಂದು ಕೊನೆ ಉಸಿರೆಳೆದರು. ಇಂದು ಮರ್ಯಾದಾಗೇಡು ಹತ್ಯೆಗಳನ್ನು ನೋಡುತ್ತಿದ್ದರೆ ಮನಸ್ಸಿಗೆ ನೋವಾಗುತ್ತದೆ. ಸದ್ಯಕ್ಕೆ ನಮ್ಮ ಮನೆಯವರು ನಮ್ಮನ್ನು ಹಾಗೆಯೇ ಬಿಟ್ಟರಲ್ಲ ಎನ್ನುವು ದನ್ನು ಈಗಲೂ ನೆನಪಿಸಿಕೊಳ್ಳುತ್ತೇವೆ. 21ನೇ ಶತಮಾತನಕ್ಕೆ ನಾವು ಕಾಲಿಟ್ಟರೂ ಇಂತಹ ಘಟನೆಗಳು ನಡೆಯುತ್ತಿರುವುದು ಸರಿಯಲ್ಲ. ಇಂತಹ ಹತ್ಯೆಗಳು ನಿಲ್ಲಬೇಕಿದೆ.

ದಸರೆ ಆಚರಣೆ ಬಗ್ಗೆ ನಿಮ್ಮ ಅಭಿಪ್ರಾಯ?
ಪ್ರೊ.ಹಂಪನಾ: ದಸರಾ ಜನರ ಹಬ್ಬ. ಇಡೀ ಕರ್ನಾಟಕ,ದೇಶವೇ ನೋಡುವಂತಹ ಹಬ್ಬ. ಪಾಶ್ಚಿ ಮಾತ್ಯದ ಸೊಗಡು, ಸಂಸ್ಕೃತಿ ಇಲ್ಲದೆ ಈ ಮಣ್ಣಿನ ಸೊಗಡು, ಪರಂಪರೆಯನ್ನು ಉಳಿಸಬೇಕಿದೆ. ಸುಮಾರು 28 ದೇಶಗಳಲ್ಲಿ ಸುತ್ತಾಡಿ ಉಪನ್ಯಾಸ ನೀಡಿದ್ದೇನೆ. ವಿಶ್ವದಲ್ಲೇ ಮೈಸೂರು ದಸರಾ ವಿಶಿಷ್ಟ ದೇಶೀಯ ಸಂಸ್ಕೃತಿ ತಂದುಕೊಂಡ ಹಬ್ಬವಾಗಿದೆ. ಸ್ವಾತಂತ್ರ್ಯ ಬಂದ ಮೇಲೆ ರಾಜ-ಮಹಾರಾಜರನ್ನು ಖಂಡಿಸುವುದು ಸರಿಯಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜ ಒಡೆಯರ್ ಸೇರಿದಂತೆ ಹಿಂದಿನ ಮಹಾರಾಜರು ಆದರ್ಶ, ಜನಪರ ಆಡಳಿತವನ್ನು ನೀಡಿ ಕೀರ್ತಿ ತಂದಿ ದ್ದಾರೆ. ಸ್ವಾತಂತ್ರ್ಯ ಬಂದ ಮೇಲೆ ಅಂಬಾರಿಯಲ್ಲಿ ವ್ಯಕ್ತಿ ಯನ್ನು ಕೂರಿಸುವ ಬದಲಿಗೆ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಕೂರಿಸಿ ಮೆರವಣಿಗೆ ಮಾಡಲಾಗುತ್ತದೆ.

• ಕವಿಗೋಷ್ಠಿ ಹೊರತುಪಡಿಸಿ ದಸರೆಗೆ ಸಾಹಿತ್ಯ ಕ್ಷೇತ್ರವನ್ನು ತೊಡಗಿಸಿಕೊಳ್ಳುವುದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಪ್ರೊ.ಹಂಪನಾ: ದಸರೆಯಲ್ಲಿ ಸಾಹಿತ್ಯವೂ ಇದೆ. ಕವಿಗೋಷ್ಠಿಯಲ್ಲಿ ಹಲವು ವಿಚಾರಗಲೂ ಇವೆ. ಈ ಬಗ್ಗೆ ತಕ್ಷಣವೇ ಕೇಳಿದರೆ ಹೇಳಲಾಗದು. ಯೋಚನೆಮಾಡಿ ಮಾತನಾಡಬೇಕು. ಯುವಗೋಷ್ಠಿ, ಮಹಿಳಾಗೋಷ್ಠಿ ಸೇರಿ ಇನ್ನಿತರ ಗೋಷ್ಠಿಗಳು ಇವೆ.

ವಿದ್ವಾಂಸ ಹಂಪನಾ ಅವರ ಸಂಕ್ಷಿಪ್ತ ಪರಿಚಯ
ಮೈಸೂರು: ಭಾಷಾ ಶಾಸ್ತ್ರಜ್ಞ, ಸಂಶೋಧಕ, ಪ್ರಾಧ್ಯಾಪಕ ಹಾಗೂ ಜೈನ ವಿದ್ವಾಂಸರೂ ಆದ ನಾಡೋಜ ಹಂಪ ನಾಗರಾಜಯ್ಯ ಅವರು 1936ರ ಅಕ್ಟೋಬರ್ 7ರಂದುಪದ್ಮನಾಭಯ್ಯ- ಪದ್ಮಾವತಮ್ಮ ದಂಪತಿಗೆ 4ನೇ ಮಗುವಾಗಿ ಗೌರಿ ಬಿದನೂರಿನ ಹಂಪಸಂದ್ರದಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಹಂಪಸಂದ್ರದಲ್ಲಿ, ಪ್ರೌಢಶಿಕ್ಷಣ ಗೌರಿಬಿದನೂರು, ಮಧುಗಿರಿಯಲ್ಲಿ, ಕಾಲೇಜು ಶಿಕ್ಷಣವನ್ನು ಮಧುಗಿರಿ ಮತ್ತು ಮೈಸೂರಿನಲ್ಲಿ ಪಡೆದರು. 1959ರಲ್ಲಿ ಎಂಎ ಪದವಿ ಗಳಿಸಿ, 1959ರಲ್ಲಿ ಸರ್ಕಾರಿ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಪ್ರಾರಂಭಿಸಿದ ಹಂಪನಾ, 1970ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಉಪನ್ಯಾಸಕ, ಪ್ರವಾಚಕ, ಪ್ರಾಧ್ಯಾಪಕ, ನಿರ್ದೆಶಕ ಹುದ್ದೆ ಗಳನ್ನು ಅಲಂಕರಿಸಿ 1996ರಲ್ಲಿ ನಿವೃತ್ತರಾದ ಬಳಿಕ ಸಂಪೂರ್ಣವಾಗಿ ಕನ್ನಡ ಸಾಹಿತ್ಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಗಳಾಗಿ ಸೇವೆ ಸಲ್ಲಿಸಿರುವ ಇವರು, 1966ರಿಂದ 1974ರವರೆಗೆ 8 ವರ್ಷಗಳವರೆಗೆ ಗೌರವ ಕಾರ್ಯದರ್ಶಿಗಳಾಗಿ ಮತ್ತು 1978ರಿಂದ 1986ರವರೆಗೆ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ದೊರೆತ ಪ್ರಶಸ್ತಿಗಳು
# ಸಾಹಿತ್ಯ ಪರಿಷತ್ತಿನ ಚಾವುಂಡರಾಯ ಪ್ರಶಸ್ತಿ ಬೆಂಗಳೂರಿನ ತೇರಾಪಂಥ ಸಂಘದಿಂದ ಮಹಾಪ್ರಾಜ್ಞ ಜೈನ ಸಾಹಿತ್ಯ ಪ್ರಶಸ್ತಿ
• ಶ್ರವಣ ಬೆಳಗೊಳದ ಜೈನ ಶಾಸನ ಸಾಹಿತ್ಯ ಪ್ರಶಸ್ತಿ
ಅಮೆರಿಕ ಸಂಯುಕ್ತ ಸಂಸ್ಥಾನದ ಜೈನ್ ವರ್ಲ್ಡ್ ಫೌಂಡೇಷನ್‌ ಸಂಸ್ಥೆ ನೀಡಿರುವ ಜ್ಯೂವೆಲ್ಸ್ ಆಫ್ ಜೈನ್ ಅವಾರ್ಡ್
• ಹಂಪಿ ವಿಶ್ವವಿದ್ಯಾಲಯದ ವತಿಯಿಂದ ನಾಡೋಜ ಗೌರವ
ಆಯೋಜಿಸಿದ್ದ ಸಾಹಿತ್ಯ ಸಮ್ಮೇಳನಗಳು
# ಒಟ್ಟು 7 ಸಾಹಿತ್ಯ ಸಮ್ಮೇಳನಗಳು ಹಾಗೂ 19 ಜಿಲ್ಲಾ ಸಮ್ಮೇಳನಗಳು ನಡೆದಿವೆ.
• 1979ರಲ್ಲಿ ಅಖಿಲ ಕರ್ನಾಟಕ ವ್ಯಂಗ್ಯ ಚಿತ್ರಕಾರರ 2ನೇ ಸಮ್ಮೇಳನ
• 1979ರಲ್ಲಿ ಅಖಿಲ ಕರ್ನಾಟಕ ಕನ್ನಡ ಶೀಘ್ರಲಿಪಿ ಬೆರಳಚ್ಚುಗಾರರ ಸಮ್ಮೇಳನ
1980ರಲ್ಲಿ ಕನ್ನಡ ಸಂಘ-ಸಂಸ್ಥೆಗಳ ಸಮ್ಮೇಳನ

ಪತ್ನಿ ನೆನೆದು ಕಣ್ಣೀರಾದ ಹಂಪನಾ: ದಸರಾ ಉದ್ಘಾಟನೆಗೆ ಆಯ್ಕೆಯಾಗಿದ್ದಕ್ಕೆ ಸಂತೋಷಗೊಂಡರೂ ಪತ್ನಿ ಕಮಲಾ ಹಂಪನಾ ಜತೆಯಾಗಿ ಇಲ್ಲದಿರುವುದನ್ನು ನೆನೆದು ಹಂಪನಾ ಕಣ್ಣೀರಿಟ್ಟರು. ಪತ್ನಿ ತನಗಾಗಿ ರೆಡಿ ಮಾಡಿದ್ದ ಕರ್ಚೀಫ್‌ ನ್ನು ಹಿಡಿದು ಆಕೆಯೇ ಕೊಟ್ಟಿದ್ದನ್ನು ನಾನು ಬಳಸುವೆ. ಕಣ್ಣೀರನ್ನು ಒರೆಸಿ ಒರೆಸಿ ಸವೆದಿದೆ. ಆಕೆಯೇ ರೋಸ್ ಬಿಡಿಸಿ ಕೊಟ್ಟಿದ್ದ ರೆಂದು ಕೈನಲ್ಲಿದ್ದ ಕರವಸ್ತ್ರವನ್ನು ತೋರಿಸಿದರು. ಮೈಸೂರಿನಲ್ಲಿ ಕಾಲೇಜು ದಿನಗಳಲ್ಲಿ ಕಳೆದ ದಿನಗಳನ್ನು ಸಂಕೋಚವಿಲ್ಲದೇ ಹೇಳುವ ಜತೆಗೆ ಮಡದಿ ಇಲ್ಲದ್ದರ ಬಗ್ಗೆ ಬೇಸರಿಸಿದರು. ಮಗಳು ಕುಟುಂಬ ಸಮೇತ ಜೈಪುರಕ್ಕೆ ಹೋಗಿದ್ದಾರೆ. ಒಬ್ಬ ಮಗ ಆರ್ಕಿಟೆಕ್ಟ್, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕುಟುಂಬ ಸಮೇತ ದಸರೆಯಲ್ಲಿ ಭಾಗವಹಿಸುತ್ತಾರೆ. ಆರ್ಕಿಟೆಕ್ಟ್‌ನಲ್ಲಿ ತುಂಬಾ ಹೆಸರು ಗಳಿಸಿರುವುದರಿಂದ ಅದನ್ನು ಹೇಳಲು ಹೆಮ್ಮೆ ಎನ್ನಿಸುತ್ತದೆ ಎಂದರು.

ಕನ್ನಡಿಗರ ಪರವಾಗಿ ದಸರಾ ಉದ್ಘಾಟನೆ: ಹಂಪನಾ

ಮೈಸೂರು: ದಸರಾ ಮಹೋತ್ಸವದ ಉದ್ಘಾಟಕರಾಗಿ ನನ್ನನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿರುವುದು ತುಂಬಾ ಸಂತಸ ತಂದಿದ್ದು, ನಾನು ನಾಡಿನ ಆರೂವರೆ ಕನ್ನಡಿಗರ ಪರವಾಗಿ ನಾಡಹಬ್ಬವನ್ನು ಉದ್ಘಾಟಿಸುತ್ತೇನೆ ಎಂದು ಸಾಹಿತಿ ಹಂಪಾ ನಾಗರಾಜಯ್ಯ ಹೇಳಿದರು. ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಮಾತನಾಡಿದ ಅವರು, ನಾನು ಇದುವರೆಗೆ 50 ದಸರಾ ಉತ್ಸವಗಳನ್ನು ನೋಡಿರ ಬಹುದು. ದಸರಾ ಉತ್ಸವದ ಸಡಗರ, ಸಂಭ್ರಮ ನೋಡಿ ಪುಳಕಗೊಳ್ಳುತ್ತಿದ್ದೆ. ದಸರಾ ನೋಡಲು ಹಂಬಲಿಸಿಕೊಂಡು ಬರುತ್ತಿದ್ದೆ. ಆದರೆ, ಇದೀಗ ನನಗೇ ದಸರಾ ಮಹೋತ್ಸವ ಉದ್ಘಾಟನೆಗೆ ಅವಕಾಶ ದೊರೆತಿರುವುದು ನನ್ನ ಬದುಕಿನಲ್ಲಿ ದೊರೆತ ಅವಿಸ್ಮರಣೀಯ ಕ್ಷಣ. ಅವಕಾಶ ಮಾಡಿಕೊಟ್ಟ ಸರ್ಕಾರಕ್ಕೆ ಧನ್ಯವಾದ ತಿಳಿಸಲು ಬಯಸುತ್ತೇನೆ ಎಂದು ತಿಳಿಸಿದರು.

ನಾನು ಮಹಾರಾಜ ಕಾಲೇಜಿನಲ್ಲಿ ಓದಿ ದವನು. ನನಗೆ ಈ ನಗರದಲ್ಲಿ ಜ್ಞಾನದ ಲೋಕ ತೆರೆಯಿತು. ಅಕ್ಷರ ಲೋಕಕ್ಕೆ ಬಾಗಿಲು ತೆರೆದು ಸರಸ್ವತಿ ದೇವಿ ನನ್ನನ್ನು ಬರಮಾಡಿಕೊಂಡ ನಗರ ಇದು. ಇಂತಹ ನಗರದಲ್ಲಿ ದಸರಾ ಉದ್ಘಾಟನೆಗೆ ಅತಿಥಿಯಾಗಿ ನನ್ನನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿರುವುದು ಸಂತಸ
ಮೂಡಿಸಿದೆ ಎಂದು ಹೇಳಿದರು.

ನಾಡಹಬ್ಬ ದಸರಾ ಮಹೋತ್ಸವ ಉದ್ಘಾಟಕರಾಗಿ ಆಯ್ಕೆ ಮಾಡಿದ್ದಕ್ಕೆ ಸಂತಸ ‘ಆಂದೋಲನ’ ಪತ್ರಿಕೆ ನಡೆಸಿದ ವಿಶೇಷ ಸಂದರ್ಶನದಲ್ಲಿ ಹಳೆಯ ದಿನಗಳ ಮೆಲುಕು

ರಾಜಶೇಖರ ಕೋಟಿ ನೆನಪು:
‘ಆಂದೋಲನ’ ಎಂದಾಕ್ಷಣ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ ಅವರ ಹೆಸರನ್ನು ನೆನಪಿಸಿಕೊಂಡು ಆತ್ಮೀಯವಾಗಿ ಮಾತನಾಡಿದ ಹಂಪನಾ ಅವರೊಂದಿಗೆ ಇದ್ದ ಸ್ನೇಹದ ನಂಟನ್ನು ಸ್ಮರಿಸಿದರು. ರಾಜಶೇಖರ ಕೋಟಿ ಅವರು ನಿರ್ಭೀತಿ ಮನೋಧರ್ಮದ ಪತ್ರಿಕೆಯನ್ನು ಆರಂಭಿಸುವ ಜತೆಗೆ ರಾಜ್ಯ ಮಟ್ಟದ ಪತ್ರಿಕೆಗಳ ಮಟ್ಟಿಗೆ ಪ್ರಾದೇಶಿಕ ಪತ್ರಿಕೆಯೂ ಬೆಳೆಯಬಹುದೆಂದು ತೋರಿಸಿಕೊಟ್ಟರು. ಅವರೊಂದಿಗೆ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೇನೆ. ಅವರು ತೋರುತ್ತಿದ್ದ ವಿಶ್ವಾಸ, ಪ್ರೀತಿ ಪತ್ರಿಕೆಯನ್ನು ಬೆಳೆಸಿದ ಪರಿಗೆ ಪ್ರೀತಿ, ಮೆಚ್ಚುಗೆ ವ್ಯಕ್ತಪಡಿಸುತ್ತೇನೆ ಎಂದರು.

ಹಂಪನಾಗೆ ಸಿಎಂ ಸನ್ಮಾನ ದಸರಾ ಉದ್ಘಾಟಕರಾಗಿ ಆಯ್ಕೆಗೊಂಡ ನಾಡೋಜ ಪ್ರೊ.ಹಂಪ ನಾಗರಾಜಯ್ಯ ಅವರನ್ನು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಕರ್ನಾಟಕ ಸಾಂಸ್ಕೃತಿಕ ಮುನ್ನೋಟ: ಚಿಂತನಾ ಸಮಾವೇಶ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಿದರು.

ಕೆ.ಬಿ. ರಮೇಶ ನಾಯಕ

ಪ್ರಸ್ತುತ ಆಂದೋಲನ ದಿನಪತ್ರಿಕೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿರುವ ನಾನು ಮೂಲತಃ ಚಾಮರಾಜನಗರ ತಾಲ್ಲೂಕು ಮತ್ತು ಜಿಲ್ಲೆಯ ಕಣ್ಣೇಗಾಲ ಗ್ರಾಮದವನು. ಚಾಮರಾಜನಗರ ತಾಲ್ಲೂಕಿನ ಆಲೂರು ಗ್ರಾಮದಲ್ಲಿ ಪ್ರಾಥಮಿಕ,ಪ್ರೌಢಶಿಕ್ಷಣ, ಚಾಮರಾಜನಗರದಲ್ಲಿ ಪಿಯುಸಿ ವ್ಯಾಸಂಗ ಮಾಡಿದ ನಾನು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದೇನೆ. 1992ರಿಂದ 2002ರವರೆಗೆ ಮೈಸೂರು ಮಿತ್ರ ಪತ್ರಿಕೆಯಲ್ಲಿ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಸೇವೆ ಸಲ್ಲಿಸಿದ ಬಳಿಕ 2002ರಿಂದ 2012ರವರೆಗೆ ಸಂಯುಕ್ತ ಕರ್ನಾಟಕ ಮೈಸೂರು ಪ್ರಾದೇಶಿಕ ಕಚೇರಿಯಲ್ಲಿ ವರದಿಗಾರನಾಗಿ, 2013ರಿಂದ 2015ರವರೆಗೆ ಹಾಸನ ಮತ್ತು ಮೈಸೂರಿನಲ್ಲಿ ವಿಜಯ ಕರ್ನಾಟಕ ಹಿರಿಯ ವರದಿಗಾರನಾಗಿ, 2015ರಿಂದ 2017ರವರೆಗೆ ಸಂಯುಕ್ತ ಕರ್ನಾಟಕ ಮುಖ್ಯ ವರದಿಗಾರನಾಗಿ, 2017ರಿಂದ 2020 ಜೂನ್‌ವರಗೆ ವಿಶ್ವವಾಣಿ ಮೈಸೂರು ಬ್ಯೂರೋ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದ್ದೇನೆ.

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

2 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

3 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

4 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

4 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

5 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

6 hours ago