‘ಆಂದೋಲನ’ ಫೋನ್‌ಇನ್ ಕಾರ್ಯಕ್ರಮದಲ್ಲಿ ದೂರುಗಳ ಸುರಿಮಳೆ
ಮೈಸೂರು: ಜಿಲ್ಲೆಯ ಬಹಳಷ್ಟು ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಎಂಬುದೂ ಸೇರಿದಂತೆ ಆರೋಗ್ಯ ಇಲಾಖೆ ವಿರುದ್ಧ ದೂರುಗಳ ಸುರಿಮಳೆಯಾಗಿದ್ದು, ಇದರ ನಡುವೆಯೇ ಸಕಾಲಿಕವಾಗಿ ಸ್ಪಂದನೆ ಸಿಕ್ಕಿತ್ತು ಎಂಬ ಸಾವಧಾನದ ಸಿಂಚನವೂ ದೊರೆಯಿತು.
‘ಆಂದೋಲನ’ ದಿನಪತ್ರಿಕೆಯ ಕಚೇರಿಯಲ್ಲಿ ಶನಿವಾರ ( ಮಾರ್ಚ್ 16 ) ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಡಿಎಚ್‌ಒ) ಡಾ.ಪಿ.ಸಿ.ಕುಮಾರಸ್ವಾಮಿ ಅವರು ನಡೆಸಿಕೊಟ್ಟ ಫೋನ್ ಇನ್ ಕಾರ್ಯಕ್ರಮದ ಸಂದರ್ಭದಲ್ಲಿ ಮೂಡಿಬಂದ ಸನ್ನಿವೇಶ ಇದು.
ಜಿಲ್ಲೆಯ ಸರಗೂರು ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಶುಶೂಷಕನಾಗಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿ ಎಚ್.ಡಿ.ಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಪ್ರಕರಣದ ಬಗ್ಗೆ ಸಾರ್ವಜನಿಕರು ಹೆಚ್ಚಿನ ದೂರುಗಳನ್ನು ದಾಖಲು ಮಾಡಿದರು. ಎಚ್.ಡಿ.ಕೋಟೆ ಪಟ್ಟಣದಲ್ಲಿರುವ ಶ್ರೀ ಪಾರ್ವತಿ ಹೆಲ್ತ್‌ಕೇ ಮತ್ತು ಮೆಡಿಕಲ್ಸ್‌ನಲ್ಲಿ ಪುಟ್ಟರಾಜು ಎಂಬ ವ್ಯಕ್ತಿ ವೈದ್ಯನೆಂದು ಹೇಳಿಕೊಂಡು ಸಾರ್ವಜನಿಕರಿಗೆ ಚಿಕಿತ್ಸೆ ನೀಡುತ್ತಿರುವ ಬಗ್ಗೆ ದೂರು ನೀಡು ವುದರ ಜೊತೆಗೆ ದಾಖಲೆಗಳನ್ನೂ ನೀಡುತ್ತೇವೆ, ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಯನ್ನು ಒತ್ತಾಯಿಸಿದರು.
ಈ ದೂರು ಆಲಿಸಿದ ಡಿಎಚ್ ಒ, ತಾಲ್ಲೂಕು ಆರೋಗ್ಯಾಧಿಕಾರಿ ಗಮನಕ್ಕೆ ತಂದು ಜಿಲ್ಲಾ ಮಟ್ಟದಲ್ಲಿ ಮೊದಲು ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು, ಸರ್ಕಾರ ಗೊತ್ತು ಪಡಿಸಿರುವ ಸಮಯ ಹೊರತುಪಡಿಸಿ ಬೇರೆ ಕಡೆ ಕೆಲಸ ಮಾಡುತ್ತಿದ್ದರೆ ಆ ಬಗ್ಗೆ ತಕರಾರಿಲ್ಲ. ಆದರೆ ನಕಲಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ಬಗ್ಗೆ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು.
ಕಡಕೊಳ ಕುಮಾರಸ್ವಾಮಿ: ಕಡಕೊಳ ಗ್ರಾಮದಲ್ಲಿ ಹಾದು ಹೋಗಿರುವ ನಂಜನಗೂಡು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಕಷ್ಟು ಅಪಘಾತಗಳಾಗುತ್ತಿದ್ದು, ಇಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರೇ ಇಲ್ಲ, ಆಂಬ್ಯುಲೆನ್ಸ್ ವ್ಯವಸ್ಥೆಯೂ ಇಲ್ಲ ಈ ಬಗ್ಗೆ ತುರ್ತಾಗಿ ಕ್ರಮ ಕೈಗೊಳ್ಳಿ?
ಡಿಎಚ್‌ಒ: ಸರ್ಕಾರದ ನಿಯಮಾವಳಿಯಂತೆ ಜನಸಂಖ್ಯೆಗೆ ಅನುಗುಣವಾಗಿ ಕಡಕೊಳ ಪಿಎಚ್‌ಸಿಗೆ ವೈದ್ಯರನ್ನು ನೇಮಕ ಮಾಡಿದ್ದು, ಆಂಬ್ಯುಲೆನ್ಸ್ ವ್ಯವಸ್ಥೆ ಕೂಡ ಮಾಡಲಾಗಿದೆ. ಅಗತ್ಯವಿದ್ದರೆ ಮುಂದಿನ ದಿನಗಳಲ್ಲಿ ವೈದ್ಯರ ವ್ಯವಸ್ಥೆ ಮಾಡಲಾಗುವುದು.
ಕುಮಾರಸ್ವಾಮಿ (ಮಾದಾಪುರ): ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಸಮಸ್ಯೆ ಇದೆ, ಕೇಂದ್ರದಲ್ಲಿ ವೈದ್ಯರು ತಂಗುತ್ತಿಲ್ಲ, ಸಂಜೆ 4ರ ನಂತರ ವೈದ್ಯರಿಲ್ಲದೆ, ಖಾಸಗಿ ಆಸ್ಪತ್ರೆಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ?
ಡಿಎಚ್‌ಒ: ಈ ಸಂಬಂಧವಾಗಿ ಕ್ಷೇತ್ರದ ಶಾಸಕರು ಚರ್ಚಿಸಿದ್ದಾರೆ, ಫಿಜಿಷಿಯನ್ ಹಾಗೂ ರೇಡಿಯಾಲಜಿಸ್ಟ್ ಕೊರತೆ ಇದೆ. ಹೊರ ರೋಗಿಗಳಿಗೆ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಮಾಡಲು ಅದಷ್ಟು ಬೇಗ ವೈದ್ಯರನ್ನು ನೇಮಕ ಮಾಡಲಾಗುವುದು. ವೈದ್ಯರು ಪ್ರಮುಖವಾದ ಆಸ್ಪತ್ರೆಗಳಲ್ಲಿ ರಾತ್ರಿ ವೇಳೆಯಲ್ಲಿ ತಂಗುವ ವ್ಯವಸ್ಥೆ ಮಾಡುತ್ತೇವೆ.
ಪ್ರಕಾಶ್ ಬುದ್ಧ (ಅಂತರಸಂತೆ): ಸರ್ಕಾರಿ ಆಸ್ಪತ್ರೆ ವೈದ್ಯರು, ಖಾಸಗಿ ಕ್ಲಿನಿಕ್‌ಗಳಿಗೆ ರೋಗಿಗಳನ್ನು ಬರುವಂತೆ ಪ್ರಚೋದನೆ ಮಾಡುತ್ತಾರೆ, ಕೆಲವು ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಸಂಜೆ 5ರ ತನಕ ವೈದ್ಯರು ಕೆಲಸ ನಿರ್ವಹಿಸುವಂತೆ ಕ್ರಮಕೈಗೊಳ್ಳಿ ?
ಡಿಎಚ್‌ಒ: ಈ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಕೆಪಿಎಂಇಎ ಕಾಯಿದೆ ಪ್ರಕಾರ ಇಂತಹ ಪ್ರಕರಣಗಳ ವಿರುದ್ದ ಕ್ರಮಕೈಗೊಳ್ಳಲಾಗುವುದು. ಈ ಆಸ್ಪತ್ರೆಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ನಿಯಂತ್ರಣವಾಗದಿದ್ದರೆ ದೂರು ಕೇಂದ್ರ ಹಾಗೂ ನ್ಯಾಯಾಲಯದಲ್ಲಿ ದೂರು ಸಲ್ಲಿಸಿ ಕ್ರಮತೆಗೆದುಕೊಳ್ಳುತ್ತೇವೆ. ಅಂತರಸಂತೆಯಲ್ಲಿ ಮೊಬೈಲ್ ಮೆಡಿಕಲ್ ಯೂನಿಟ್ ಪುನಃ ಸ್ಥಾಪಿಸಲಾಗುತ್ತಿದೆ. ಎಂಬಿಬಿಎಸ್ ಪದವೀಧರರು ಗ್ರಾಮೀಣ ಭಾಗದಲ್ಲಿ ಕೆಲಸ ನಿರ್ವಹಿಸುವ ನೂತನ ಯೋಜನೆ ಜಾರಿಯಾಗಿದ್ದು, 22 ವಿವಿಧ ವಿಭಾಗಗಳ ವೈದ್ಯರನ್ನು ಜಿಲ್ಲೆಗೆ ಹಂಚಿಕೆ ಮಾಡಲಾಗಿದೆ. ಈ ವೈದ್ಯರನ್ನು ಗ್ರಾಮೀಣ ಭಾಗದಲ್ಲಿ ಕೊರತೆ ಇರುವ ಪ್ರದೇಶಗಳಿಗೆ ನಿಯೋಜನೆ ಮಾಡಲಾಗುವುದು.
ಕವನ (ಶ್ರೀರಂಪಟ್ಟಣ): ಮೈಸೂರು ಜಿಲ್ಲಾಸ್ಪತ್ರೆಯಲ್ಲಿ ಇದೇ ತಿಂಗಳು ಹೆರಿಗೆಯಾಗಿದ್ದು ಡಾ.ಚಂದ್ರಕಲಾ ಹಾಗೂ ಸಿಬ್ಬಂದಿ ಉತ್ತಮ ಚಿಕಿತ್ಸೆ ನೀಡಿ ಶುಶೂಷೆ ಮಾಡಿದರು, ತುಂಬಾ ಖುಷಿಯಾಗಿದೆ.
ಡಿಎಚ್‌ಒ: ಇದು ಖುಷಿಯ ವಿಚಾರ. ಈ ಪ್ರಶಂಸೆ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸಲ್ಲಬೇಕು, ನಾನು ನಿಮ್ಮ ಪ್ರಶಂಸೆಯನ್ನು ಅವರಿಗೆ ತಲುಪಿಸುತ್ತೇನೆ.
ಮಹದೇವಶೆಟ್ಟಿ (ತಿ.ನರಸೀಪುರ) : ಸೋಸಲೆ ಗ್ರಾಮದ ಆಸ್ಪತ್ರೆಯಲ್ಲಿ ಪಟ್ಟಿಯಲ್ಲಿರುವ ಔಷಧಿಗಳಲ್ಲಿ ಕೆಲವು ಮಾತ್ರ ಇದ್ದು ಉಳಿದವನ್ನು ಹೊರಗಡೆ ಖರೀದಿಸಲು ಬರೆಯುತ್ತಿದ್ದಾರೆ. ಗ್ರಾಮೀಣ ಭಾಗದ ಬಡಜನರಿಗೆ ಆಸ್ಪತ್ರೆಯಲ್ಲೇ ಔಷಧಿ ವ್ಯವಸ್ಥೆ ಮಾಡಿಕೊಡಿ ?
ಡಿಎಚ್‌ಒ: ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪಿಎಚ್‌ಸಿಗಳಲ್ಲಿ ಚಿಕಿತ್ಸೆಗೆ ಅಗತ್ಯವಿರುವ ಔಷಧಿಗಳನ್ನು ನೀಡುವಂತೆ ಆದೇಶಿಸಲಾಗಿದೆ.
ಆಸ್ಪತ್ರೆಗಳಲ್ಲಿ ಯಾವ ಕಾಯಿಲೆ ಹೆಚ್ಚಾಗಿ ಕಂಡುಬಂದಿದೆ ಅಂತಹವುಗಳಿಗೆ ಅಗತ್ಯ ಔಷಧಿ ಇದೆ. ಪಟ್ಟಿಯಲ್ಲಿರುವ ಔಷಧಿಗಳು ಆಯಾಯ ಆಸ್ಪತ್ರೆಗೆ ಅನುಗುಣವಾಗಿ ಇರುತ್ತವೆ. ತುರ್ತು ಔಷಧಿಗಳೂ ಆ ಘಟಕದಲ್ಲಿ ಇರುತ್ತದೆ.
ನಂಜುಂಡ (ಎಚ್. ಮಟಕೆರೆ): ಸರ್ಕಾರಿ ಆಸ್ಪತ್ರೆಯಲ್ಲಿ ಆಗದಿರುವ ಹೆರಿಗೆ, ಸಮೀಪದಲ್ಲಿರುವ ಸೇಂಟ್ ಮೇರಿಸ್ ಆಸ್ಪತ್ರೆ ಹಾಗೂ ಪಾರ್ವತಿ ಹೆಲ್ತ್ ಕೇರ್‌ನಲ್ಲಿ ಸುಲಲಿತವಾಗಿ ಆಗಿಬಿಡುತ್ತಿದೆ! ಇದಕ್ಕೆ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಹಾಗೂ ಕೆಲವು ಸಿಬ್ಬಂದಿ ಬೆಂಬಲವಿದೆ. ತಾಯಿ ಕಾರ್ಡ್ ನೀಡಲು ಸಬೂಬು ಹೇಳಿ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದಾರೆ.
ಡಿಎಚ್‌ಒ: ನಮ್ಮಲ್ಲಿ ಬರುವ ರೋಗಿಗಳಿಗೆ ಮೊದಲು ಮೆಡಿಕಲ್ ಕೌನ್ಸಿಲಿಂಗ್ ಮಾಡಲಾಗುತ್ತದೆ. ಯಾವುದೇ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸಿದರೆ ಅಥವಾ ಸ್ಪಂದಿಸದಿದ್ದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು. ಸರ್ಕಾರಿ ಕೆಲಸದ ಅವಧಿಯಲ್ಲಿ ಖಾಸಗಿ ಕ್ಲಿನಿಕ್‌ಗಳು ಹಾಗೂ ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರ ವಿರುದ್ಧ ಕಾನೂನು ರೀತ್ಯಾ ಕ್ರಮಕೈಗೊಳ್ಳುತ್ತೇನೆ. ಜಿಲ್ಲಾಮಟ್ಟದಲ್ಲಿ168 ಆರೋಗ್ಯ ಕೇಂದ್ರಗಳಲ್ಲಿ ಮಾಸಿಕವಾಗಿ 4.5 ಲಕ್ಷ ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 1800ರಿಂದ 2000ರವರೆಗೆ ಹೆರಿಗೆಗಳನ್ನು ಮಾಡಿ ಬಾಣಂತಿ ಹಾಗೂ ನವಜಾತ ಶಿಶುಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಎಲ್ಲೋ ಒಂದೆರಡು ಪ್ರಕರಣ ಈ ರೀತಿ ಆಗಬಹುದು ನಿಮ್ಮದೂರನ್ನು ಕೂಡ ಪರಿಗಣಿಸಿಕ್ರಮವಹಿಸುತ್ತೇನೆ.
ಮೋಹನ್ (ಭೇರ್ಯ): ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಇರುವುದೇ ಇಲ್ಲ. ಈವತ್ತೂ ಇಲ್ಲ. ಯಾವಾಗಲೂ ಮೀಟಿಂಗ್ ಇದೆ ಎಂದು ಹೇಳುತ್ತಾರೆ. ಸಿಬ್ಬಂದಿಗಳೂ ಸಾರ್ವಜನಿಕರಿಗೆ ಸ್ಪಂದಿಸುತ್ತಿಲ್ಲ. ಚಿಕಿತ್ಸೆಗೆ ತೆರಳುವ ರೋಗಿಗಳ ಸ್ಥಿತಿ ಏನಾಗಬೇಕು?
ಡಿಎಚ್‌ಒ : ಅಲ್ಲಿಗೆ ಭೇಟಿ ನೀಡಿದಾಗ ಸಾರ್ವಜನಿಕರು ಮಹಿಳಾ ವೈದ್ಯರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಗತ್ಯಬಿದ್ದರೆ ಪರಿಶೀಲಿಸಿ ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಕ್ರಮವಹಿಸುತ್ತೇನೆ.
ದೊರೆಸ್ವಾಮಿ(ಎಚ್.ಡಿ.ಕೋಟೆ): ಸರಗೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದು ಎಚ್.ಡಿ.ಕೋಟೆಯಲ್ಲಿರುವ ಪಾರ್ವತಿ ಹೆಲ್ತ್ ಕೇರ್‌ನಲ್ಲಿ ನಕಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದು ತಾಲ್ಲೂಕಿನಾದ್ಯಂತ ಇರುವ ಅನಕ್ಷರಸ್ಥ ಜನರಿಗೆ ಕ್ಲಿನಿಕ್‌ನಲ್ಲಿ ಡಾಕ್ಟರ್ ಎಂದು ಬಿಂಬಿಸಿ ಸ್ಟೆಥಾಸ್ಕೋಪ್ ಹಾಕಿಕೊಂಡು ಚಿಕಿತ್ಸೆ ನೀಡುತ್ತಿದ್ದು, ಈ ಬಗ್ಗೆ ಸ್ಥಳೀಯ ಟಿಎಚ್‌ಒ ಹಾಗೂ ಆಡಳಿತಾಧಿಕಾರಿಗೆ ಮಾಹಿತಿ ಇದ್ದರೂ ಕ್ರಮಕೈಗೊಳ್ಳುತ್ತಿಲ್ಲ. ಇದರ ಬಗ್ಗೆ ಕ್ರಮ ಕೈಗೊಳ್ಳವುದಿಲ್ಲವೇ?
ಡಿಎಚ್‌ಒ : ಈ ಬಗ್ಗೆ ಸಾಕಷ್ಟು ದೂರುಗಳಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿರುವವರು ಖಾಸಗಿ ಕ್ಲಿನಿಕಲ್‌ನಲ್ಲಿ ವೈದ್ಯನಾಗಿ ಬಿಂಬಿಸಿಕೊಳ್ಳುತ್ತಿರುವುದರ ಬಗ್ಗೆ ಇಲಾಖೆವತಿಯಿಂದ ತಂಡ ರಚನೆ ಮಾಡಿ ತನಿಖೆ ಮಾಡಲಾಗುತ್ತದೆ. ಹಾಗೇನಾದರೂ ಕಂಡುಬಂದಲ್ಲಿ ಕೆಪಿಎಂಇಎ ಕಾಯಿದೆ ಪ್ರಕಾರ ಕ್ರಮಕೈಗೊಳ್ಳುತ್ತೇವೆ.
ನಿಂಗರಾಜ ಮಲ್ಲಾಡಿ (ಕಟ್ಟೆಮಳಲವಾಡಿ, ಹುಣಸೂರು ತಾ.) : ನಮ್ಮ ಗ್ರಾಮದಲ್ಲಿ ಒಂದೂವರೆ ವರ್ಷದಿಂದ ವೈದ್ಯರಿಲ್ಲ. ನಮ್ಮಲ್ಲಿ ಎಸ್ಸಿ, ಎಸ್‌ಟಿ ಸಮುದಾಯದವರು ಹೆಚ್ಚಿದ್ದು ಆರೋಗ್ಯ ತಪಾಸಣೆಗೆ ಹೋಗಬೇಕಾದರೆ ಒಂದು ದಿನ ಕೂಲಿ ಬಿಟ್ಟು ದೂರದ ಹುಣಸೂರಿಗೆ ಹೋಗಬೇಕಿದೆ?
ಡಿಎಚ್‌ಒ: ನಿಮ್ಮ ದೂರನ್ನು ಗಂಭಿರವಾಗಿ ಪರಿಗಣಿಸಿ ಒಂದು ವಾರದಲ್ಲಿ ವೈದ್ಯರ ನೇಮಕಕ್ಕೆ ಕ್ರಮವಹಿಸಲಾಗುವುದು.
ವಾಣಿವಿಲಾಸ ಮಾರುಕಟ್ಟೆ ಒಳಗಿನ ಶೌಚಾಲಯದ ದುಸ್ಥಿತಿ; ಬಹುತೇಕ ಶೌಚಾಲಯಗಳಲ್ಲೂ ಇದೇ ಸ್ಥಿತಿ ಹೆಚ್. ಎಸ್. ದಿನೇಶ್ ಕುಮಾರ್ ಮೈಸೂರು: ದೇಶದ…
ಕೆ. ಬಿ. ರಮೇಶನಾಯಕ ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಽಕಾರದಲ್ಲಿ ೫೦:೫೦ ಅನುಪಾತದಡಿ ನಿವೇಶನಗಳ ಹಂಚಿಕೆಯಲ್ಲಿ ನಡೆದಿ ರುವ ಹಗರಣ ಕುರಿತು…
ದೊಡ್ಡಕವಲಂದೆ: 3 ವರ್ಷಗಳಾದರೂ ನಿರ್ಮಾಣವಾಗದ ಶೌಚಾಲಯ; ಗುತ್ತಿಗೆದಾರ ನಾಪತ್ತೆ ಶ್ರೀಧರ್ ಆರ್. ಭಟ್ ನಂಜನಗೂಡು: ಸ್ವಚ್ಛತೆಗಾಗಿ ಕೇಂದ್ರ ಮತ್ತು ರಾಜ್ಯ…
ಬಿ. ಆರ್. ಜೋಯಪ್ಪ ಕೊಡಗಿನಲ್ಲಿ ಸ್ಥಳೀಯರು ‘ಕಾಡುಪಾಪ’ವನ್ನು ‘ಚೀಂಗೆ ಕೋಳಿ’ ಎಂದು ಕರೆಯುತ್ತಾರೆ. ಇದೊಂದು ನಿಶಾಚರಿ, ನಿರುಪದ್ರವಿ ಕಾಡಿನ ಜೀವಿ.…
ಚಾಮರಾಜನಗರ ನೆಲದ ಕಲಾವಿದರು, ಅಲ್ಲಿನ ಆಡುಭಾಷೆಯನ್ನೇ ಜೀವಾಳವಾಗಿಸಿಕೊಂಡು ಗೆದ್ದ ಅನ್ನ ಚಲನಚಿತ್ರ ರಶ್ಮಿ ಕೋಟಿ ಮನೆಗೆ ಕರೆದುಕೊಂಡು ಹೋಗಲು ಬಂದ…
ತುಳುನಾಡಿನಲ್ಲಿ ಹುಟ್ಟಿ ಬೆಳೆದ ಎಚ್. ನಾಗವೇಣಿಯವರ ಕತೆಗಳಲ್ಲಿ ಕೂಡ ಈ ತಾಯ್ನೆಲದ ಮಣ್ಣಿನ ತುಡಿತ ಮಿಡಿತಗಳು ನರನಾಡಿಯಂತೆ ವ್ಯಾಪಿಸಿರುತ್ತವೆ. ಆ…