ಶಶಿಕಾಂತ ಯಡಹಳ್ಳಿ
೨೦೦೩ರಲ್ಲಿ ಮಣಿಪಾಲ್‌ನಲ್ಲಿ ಮೆಡಿಕಲ್ ಓದುತ್ತಿದ್ದ ಅನನ್ಯ ತನ್ನ ಗೆಳತಿಯರ ಜೊತೆ ಧರ್ಮಸ್ಥಳಕ್ಕೆ ಬಂದಾಗ ಇದ್ದಕ್ಕಿದ್ದಂತೆ ನಾಪತ್ತೆ
ಇದು ಕೇವಲ ಒಬ್ಬ ಅನನ್ಯ ಭಟ್ ಕತೆಯಲ್ಲ, ಧರ್ಮಸ್ಥಳದಲ್ಲಿ ನಿಗೂಢವಾಗಿ ನಾಪತ್ತೆಯಾಗಿ, ಕ್ರೂರವಾಗಿ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಹೆಣ್ಣುಮಕ್ಕಳ ವ್ಯಥೆ
‘ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ನೂರಾರು ಹೆಣ್ಣುಮಕ್ಕಳ ಶವಗಳನ್ನು ಕಾಡಿನಲ್ಲಿ ಹೂತಿದ್ದೇನೆ’ ಎಂದು ವ್ಯಕ್ತಿಯೊಬ್ಬ ಯಾವಾಗ ನ್ಯಾಯಾಲಯದ ಮುಂದೆ ಹೇಳಿಕೆ ಕೊಟ್ಟನೋ, ಆಗ ಇಳಿವಯಸ್ಸಿನ ಆ ತಾಯಿ ಆತಂಕದಿಂದ ಓಡಿ ಬಂದು ಮಾಧ್ಯಮಗಳ ಮುಂದೆ ಅಲವತ್ತುಕೊಂಡಳು. ‘ಹೀಗೆ ನಾಪತ್ತೆಯಾಗಿ ಸತ್ತ ನತದೃಷ್ಟ ಹೆಣ್ಣುಮಕ್ಕಳಲ್ಲಿ ತನ್ನ ಮಗಳ ಶವ ಎಲ್ಲಿ? ಕನಿಷ್ಠ ಆಕೆಯ ಕಳೇಬರದ ಅಸ್ಥಿಪಂಜರವನ್ನಾದರೂ ಹುಡುಕಿಸಿ ಕೊಟ್ಟರೆ ಮಗಳಿಗೆ ಸದ್ಗತಿ ದೊರಕಿಸುವ ಕಾರ್ಯ ಮಾಡುತ್ತೇನೆ’ ಎಂಬುದೊಂದೇ ಆ ಹಿರಿಯ ಜೀವದ ಕೋರಿಕೆಯಾಗಿತ್ತು.
ಆ ತಾಯಿಯ ಹೆಸರು ಸುಜಾತಾ ಭಟ್. ಇಲ್ಲಿವರೆಗೂ ಪತ್ತೆಯಾಗದೇ ನಿಗೂಢವಾಗಿ ದೈವದೂರ’ಲ್ಲಿ ಕಣ್ಮರೆಯಾದ ಮಗಳ ಹೆಸರು ಅನನ್ಯ ಭಟ್. ಕಾಣೆಯಾದ ಸ್ಥಳ ಧರ್ಮಸ್ಥಳ. ಇಪ್ಪತ್ತೆರಡು ವರ್ಷಗಳ ಹಿಂದೆ ಅಂದರೆ ೨೦೦೩ರಲ್ಲಿ ಮಣಿಪಾಲ್‌ನಲ್ಲಿ ಮೆಡಿಕಲ್ ಓದುತ್ತಿದ್ದ ಅನನ್ಯ ತನ್ನ ಗೆಳತಿಯರ ಜೊತೆ ಧರ್ಮಸ್ಥಳಕ್ಕೆ ಬಂದಾಗ ಇದ್ದಕ್ಕಿದ್ದಂತೆ ಮಾಯವಾಗುತ್ತಾಳೆ. ವಿಷಯ ತಿಳಿದು ದೂರದ ಊರಿನಿಂದ ಆತಂಕದಿಂದ ಬಂದ ಸುಜಾತಾರವರು, ಮಗಳ ಫೋಟೋ ಹಿಡಿದು ಧರ್ಮಸ್ಥಳದ ಮೂಲೆ ಮೂಲೆಯಲ್ಲಿ ಹುಡುಕಿದರೂ ಯಾವುದೇ ಸುಳಿವು ಸಿಗುವುದಿಲ್ಲ. ಯಾರೋ ಒಬ್ಬರು ಹೇಳುತ್ತಾರೆ ‘ಈ ಹುಡುಗಿಯನ್ನು ಕಾರಿನಲ್ಲಿ ಅಪಹರಿಸಲಾಗಿದೆ’ ಎಂದು. ಸಂಕಟ ತಾಳಲಾಗದ ಆ ತಾಯಿ ಧರ್ಮಸ್ಥಳದ ಪೊಲೀಸ್ ಸ್ಟೇಷನ್ನಿಗೆ ಧಾವಿಸಿ ವಿಚಾರಿಸಿದಾಗ ನಕಾರಾತ್ಮಕ ಉತ್ತರ ದೊರೆಯುತ್ತದೆ.
ಅವರನ್ನೇ ನಿಂದಿಸಿ ಹಿಂಸಿಸಲಾಗುತ್ತದೆ. ಪೊಲೀಸರ ದೌರ್ಜನ್ಯದಿಂದ ಅತಿಯಾಗಿ ನೊಂದು ಕೊಂಡ ಆ ಮಾತೆ, ಆ ಧಾರ್ಮಿಕ ಕ್ಷೇತ್ರದವರ ಬಳಿ ಹೋಗಿ ತನ್ನ ನೋವು ತೋಡಿಕೊಳ್ಳುತ್ತಾಳೆ. ಆದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಇದರಿಂದ ನಿರಾಶಳಾದ ಆ ತಾಯಿ, ತನ್ನ ಮಗಳು ಮತ್ತೆ ಸಿಗಲಾರಳು ಎಂದು ಅಂದುಕೊಂಡು ಊರಿಗೆ ಮರಳುತ್ತಾಳೆ.
೨೨ ವರ್ಷಗಳ ನಂತರ ಯಾವಾಗ ಅನಾಮಧೇಯ ವ್ಯಕ್ತಿಯೊಬ್ಬ ‘ಅತ್ಯಾಚಾರ ಹಾಗೂ ಹತ್ಯೆಗೊಳಗಾದ ನೂರಾರು ಶವಗಳನ್ನು ಧರ್ಮಸ್ಥಳದ ಕಾಡಿನಲ್ಲಿ ದೊಡ್ಡವರ ಆಣತಿಯ ಮೇರೆಗೆ ಹೂತು ಹಾಕಿದ್ದೇನೆ’ ಎಂದು ಹೇಳಿದ್ದು ಮಾಧ್ಯಮಗಳಲ್ಲಿ ಪ್ರಸಾರವಾಯಿತೋ ಆಗ ‘ಆ ನೂರಾರು ಶವಗಳಲ್ಲಿ ತನ್ನ ಮಗಳ ಶವವೂ ಇರಬಹುದು, ಆಕೆಯ ಅಸ್ಥಿಪಂಜರವಾದರೂ ಸಿಕ್ಕರೆ ಸದ್ಗತಿ ದೊರಕಿಸುವ ಕ್ರಿಯಾಕರ್ಮವನ್ನಾದರೂ ಮಾಡಿ ಕರುಳಕುಡಿಗೆ ಮುಕ್ತಿಯನ್ನಾದರೂ ದೊರಕಿಸಿಕೊಡಬಹುದು ಎನ್ನುವುದು ಆ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದ ತಾಯಿಯ ಏಕೈಕ ಕೋರಿಕೆಯಾಗಿತ್ತು. ‘ನಾನು ಬೇರೆ ಯಾರ ಮೇಲೂ ಆರೋಪ ಮಾಡೋದಿಲ್ಲ, ನನಗೆ ಬೇರೇನೂ ಬೇಡ. ನನ್ನ ಮಗಳಿಗೆ ಮುಕ್ತಿ ದೊರಕಿಸಲು ಆಕೆಯ ಅಸ್ಥಿಪಂಜರವನ್ನಾದರೂ ಕೊಡಿಸಿ’ ಎಂದು ಆ ಹತಭಾಗ್ಯ ತಾಯಿ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದು, ನೋಡಿದವರ ಕಣ್ಣಲ್ಲಿ ನೀರೂರಿಸಿತ್ತು.
ಇದು ಕೇವಲ ಒಬ್ಬ ಅನನ್ಯ ಭಟ್ ಕತೆಯಲ್ಲ. ಧರ್ಮಸ್ಥಳದಲ್ಲಿ ನಿಗೂಢವಾಗಿ ನಾಪತ್ತೆಯಾಗಿ, ಕ್ರೂರವಾಗಿ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಹೆಣ್ಣುಮಕ್ಕಳ ವ್ಯಥೆಯಾಗಿದೆ. ಸೌಜನ್ಯ, ಪದ್ಮಲತಾರಂತಹ ಅನೇಕ ಹೆಣ್ಣುಮಕ್ಕಳು ಕ್ರೌರ್ಯಕ್ಕೆ ಬಲಿಯಾಗಿದ್ದಾರೆ ಎಂಬ ಆರೋಪವಿದೆ. ಈ ಶವಗಳನ್ನು ತಾನು ದಫನ್ ಮಾಡಿದ್ದೇನೆಂದು ಹೇಳಿ ಪೌರ ಕಾರ್ಮಿಕ ವ್ಯಕ್ತಿಯೊಬ್ಬ ಎಲ್ಲವನ್ನೂ ಬಹಿರಂಗಪಡಿಸಲು ಈಗ ಮುಂದೆ ಬಂದಿದ್ದಾನೆ. ತನಗೆ ಹಾಗೂ ತನ್ನ ಕುಟುಂಬಕ್ಕೆ ರಕ್ಷಣೆ ಕೊಟ್ಟರೆ ಯಾರೆಲ್ಲ ಈ ದುಷ್ಕೃತ್ಯವನ್ನು ತನ್ನಿಂದ ಮಾಡಿಸಿದ್ದಾರೋ ಅವರ ಹೆಸರನ್ನು ಹೇಳುವುದಾಗಿ ಸುಪ್ರೀಂ ಕೋರ್ಟ್‌ಗೆ ಪತ್ರ ಬರೆದಿದ್ದಾನೆ. ಕೋರ್ಟ್‌ನ ಆದೇಶದಂತೆ ಸ್ಥಳೀಯ ಪೊಲೀಸರು ದೂರು ದಾಖಲಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದ್ದು, ಬೆಳ್ತಂಗಡಿ ಕೋರ್ಟಿನ ನ್ಯಾಯಾಽಶರ ಮುಂದೆ ಲಾಯರ್‌ಗಳ ಜೊತೆ ಕಳೆದ ಜೂನ್ ೧೧ರಂದು ಹಾಜರಾಗಿ ತನ್ನ ಹೇಳಿಕೆಯನ್ನು ದಾಖಲಿಸಿ ಈಗ ಭೂಗತನಾಗಿದ್ದಾನೆ. ಈ ವಿಚಾರದಲ್ಲಿ ಕೆಲವು ರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿದವು. ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶದ ಮಹಾಪೂರವೇ ಹರಿದುಬಂತು. ಇದರಿಂದಾಗಿ ಆತಂಕಕ್ಕೊಳಗಾದ ಧರ್ಮಕ್ಷೇತ್ರದ ಆಡಳಿತ ಕೂಡಲೇ ನ್ಯಾಯಾಲಯಕ್ಕೆ ಹೋಗಿ ‘ಯಾರೂ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ಸುದ್ದಿ ಪ್ರಸಾರ ಮಾಡಕೂಡದು’ ಎಂದು ತಡೆಯಾಜ್ಞೆ ತಂದಿತು.
ಆದರೆ ಸೌಜನ್ಯ ಪರ ಹೋರಾಟಗಾರರ ಪ್ರತಿರೋಧವನ್ನು ನಿಲ್ಲಿಸಲಾಗಲಿಲ್ಲ. ಹೂತುಹೋದ ಶವಗಳನ್ನು ಕುರಿತು ಬೇರೆ ರೀತಿಯ ಸಮರ್ಥನಾ ದಾಳ ಉರುಳಿಸಲಾಯಿತು. ಧರ್ಮಸ್ಥಳ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷನಿಂದ ಪತ್ರಿಕಾಗೋಷ್ಠಿ ನಡೆಯಿತು. ಧರ್ಮಸ್ಥಳದಲ್ಲಿ ಸತ್ತುಬಿದ್ದ ಅನಾಥ ಶವಗಳನ್ನು ಕಾಡಿನಲ್ಲಿ ಪಂಚಾಯಿತಿಯ ವತಿಯಿಂದ ಹೂಳಲಾಗಿದೆ ಎಂದು ಹೇಳಿದರು. ಪೋಸ್ಟ್‌ಮಾರ್ಟಂ ಮಾಡಿಸದೇ, ಕಾನೂನಾತ್ಮಕ ಪ್ರಕ್ರಿಯೆ ಮಾಡದೇ ಎಲ್ಲೆಂದರಲ್ಲಿ ಶವಗಳನ್ನು ಹೂತಿದ್ದು ಏಕೆ? ಎನ್ನುವ ಪ್ರಶ್ನೆಗಳಿಗೆ ಅವರಲ್ಲಿ ಉತ್ತರವಿರಲಿಲ್ಲ.
ಈಗ ಭೂಗತನಾಗಿರುವ ಸಾಕ್ಷಿದಾರನಿಗೆ ‘ಮಂಪರು ಪರೀಕ್ಷೆ ಮಾಡಿಸಬೇಕು’ ಎಂದು ಪೊಲೀಸರು ಹೇಳತೊಡಗಿದರು. ಮಂಪರು ಪರೀಕ್ಷೆ ಮಾಡಿಸುವ ನೆಪದಲ್ಲಿ ಆತ ಎಲ್ಲೆಲ್ಲಿ ಶವಗಳನ್ನು ಹೂತಿಟ್ಟಿದ್ದಾನೆ ಎಂಬುದನ್ನು ತಿಳಿದುಕೊಂಡು, ಸಾಕ್ಷ ಗಳನ್ನು ನಾಶ ಮಾಡುವ ಹುನ್ನಾರ ಎಂಬುದು ಪ್ರತಿಭಟನಾಕಾರರ ಆರೋಪವಾಗಿದೆ.
ದೂರುದಾರನಿಗೆ ರಕ್ಷಣೆ ಕೊಡಬೇಕೆಂದು ನ್ಯಾಯಾಲಯ ಆದೇಶಿಸಿದರೂ ಪೊಲೀಸ್ ವರಿಷ್ಠಾಧಿಕಾರಿಗಳು ಅದನ್ನು ನಿರಾಕರಿಸಿ ವರದಿ ಸಲ್ಲಿಸಿದರು. ‘ಸಾಕ್ಷಿದಾರನ ಇರುವಿಕೆಯ ಬಗ್ಗೆ ಅವನ ವಕೀಲರು ಯಾವುದೇ ಮಾಹಿತಿ ಹಂಚಿಕೊಂಡಿಲ್ಲ, ಆದ್ದರಿಂದ ಸಾಕ್ಷಿಗೆ ರಕ್ಷಣೆ ನೀಡಲು ಸಾಧ್ಯವಿಲ್ಲ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ಕೆ.ಅರುಣ್ ಅವರು ಸಕ್ಷಮ ಪ್ರಾಧಿಕಾರಕ್ಕೆ ವರದಿ ಸಲ್ಲಿಸಿದರು.
ಇದೆಲ್ಲಾ ವಿದ್ಯಮಾನಗಳಿಂದಾಗಿ ಸ್ಥಳೀಯ ಪೊಲೀಸರು ಹಾಗೂ ಜಿಲ್ಲಾ ಪೊಲೀಸರಿಂದ ನ್ಯಾಯವಾದ ತನಿಖೆ ಅಸಾಧ್ಯವೆಂಬುದು ಹತಭಾಗ್ಯರ ಪರ ಹೋರಾಡುವ ಎಲ್ಲರಿಗೂ ಅರ್ಥವಾಗಿತ್ತು. ಹಾಗಾಗಿ ಧರ್ಮಸ್ಥಳದಲ್ಲಾದ ಎಲ್ಲ ಅಪಹರಣ, ನಾಪತ್ತೆ ಹಾಗೂ ಹತ್ಯೆ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸಲು ಸ್ಪೆಷಲ್ ಇನ್ವೆಸ್ಟಿಗೇಶನ್ ಟೀಂ (SIT) ರಚಿಸಬೇಕೆಂಬ ಒತ್ತಡವನ್ನು ಸರ್ಕಾರದ ಮೇಲೆ ತರಲಾಯಿತು. ಮೊದಮೊದಲು ಸರ್ಕಾರವೂ SIT ರಚಿಸಲು ಹಿಂದೇಟು ಹಾಕಿತು. ‘ಪೊಲೀಸರು ಬಂಧಿಸಿದರೆ SIT ರಚಿಸಲಾಗುವುದು’ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು. ಆದರೆ ಹಿರಿಯ ವಕೀಲರ ತಂಡ ಸಿಎಂ ಭೇಟಿಯಾಗಿ SIT ರಚನೆಗೆ ಆಗ್ರಹಿಸಿತು. ಜೊತೆಗೆ ರಾಷ್ಟ್ರೀಯ ಮಾಧ್ಯಮಗಳು ಈ ಕುರಿತು ನಿರಂತರವಾಗಿ ಸುದ್ದಿ ಪ್ರಸಾರ ಮಾಡತೊಡಗಿದವು. ಅಂತಿಮವಾಗಿ ಕರ್ನಾಟಕ ಸರ್ಕಾರ, ಪ್ರಣವ್ ಮೊಹಾಂತಿಯವರ ನೇತೃತ್ವದಲ್ಲಿ ನಾಲ್ವರು ಐಪಿಎಸ್ ಅಧಿಕಾರಿಗಳ ತಂಡದ SIT ಯನ್ನು ರಚಿಸಿದೆ.
ಹೂತುಹೋದ ಶವಗಳನ್ನು ಕುರಿತು ಬೇರೆ ರೀತಿಯ ಸಮರ್ಥನಾ ದಾಳ ಉರುಳಿಸಲಾಯಿತು. ಧರ್ಮಸ್ಥಳ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷನಿಂದ ಪತ್ರಿಕಾಗೋಷ್ಠಿ ನಡೆಯಿತು. ಧರ್ಮಸ್ಥಳದಲ್ಲಿ ಸತ್ತುಬಿದ್ದ ಅನಾಥ ಶವಗಳನ್ನು ಕಾಡಿನಲ್ಲಿ ಪಂಚಾಯಿತಿಯ ವತಿಯಿಂದ ಹೂಳಲಾಗಿದೆ ಎಂದು ಹೇಳಿದರು. ಪೋಸ್ಟ್‌ಮಾರ್ಟಂ ಮಾಡಿಸದೇ, ಕಾನೂನಾತ್ಮಕ ಪ್ರಕ್ರಿಯೆ ಮಾಡದೇ ಎಲ್ಲೆಂದರಲ್ಲಿ ಶವಗಳನ್ನು ಹೂತಿದ್ದು ಏಕೆ? ಎನ್ನುವ ಪ್ರಶ್ನೆಗಳಿಗೆ ಅವರಲ್ಲಿ ಉತ್ತರವಿರಲಿಲ್ಲ
ಮಗಳ ಹುಡುಕಿಕೊಂಡು ಬಂದ ತಾಯಿಗೆ ನಿಂದನೆ: ಇಪ್ಪತ್ತೆರಡು ವರ್ಷಗಳ ಹಿಂದೆ ೨೦೦೩ರಲ್ಲಿ ಮಣಿಪಾಲ್‌ನಲ್ಲಿ ಮೆಡಿಕಲ್ ಓದುತ್ತಿದ್ದ ಅನನ್ಯ ತನ್ನ ಗೆಳತಿಯರ ಜೊತೆ ಧರ್ಮಸ್ಥಳಕ್ಕೆ ಬಂದಾಗ ಇದ್ದಕ್ಕಿದ್ದಂತೆ ಮಾಯವಾಗುತ್ತಾಳೆ. ಆಕೆಯ ತಾಯಿ ಮಗಳ ಫೋಟೋ ಹಿಡಿದು ಧರ್ಮಸ್ಥಳದ ಮೂಲೆ ಮೂಲೆಯಲ್ಲಿ ಹುಡುಕಿದರೂ ಯಾವುದೇ ಸುಳಿವು ಸಿಗುವುದಿಲ್ಲ. ಯಾರೋ ಒಬ್ಬರು ಹೇಳುತ್ತಾರೆ ‘ಈ ಹುಡುಗಿಯನ್ನು ಕಾರಿನಲ್ಲಿ ಅಪಹರಿಸಲಾಗಿದೆ’ ಎಂದು. ಸಂಕಟ ತಾಳಲಾಗದ ಆ ತಾಯಿ ಧರ್ಮಸ್ಥಳದ ಪೊಲೀಸ್ ಸ್ಟೇಷನ್ನಿಗೆ ಧಾವಿಸಿ ವಿಚಾರಿಸಿದಾಗ ನಕಾರಾತ್ಮಕ ಉತ್ತರ ದೊರೆಯುತ್ತದೆ. ಬಂದ ಅವರನ್ನೇ ನಿಂದಿಸಿ ಹಿಂಸಿಸಲಾಗುತ್ತದೆ.
ನ್ಯೂಯಾರ್ಕ್: ಅಮೆರಿಕದ ಕ್ಯಾಲಿಫೋರ್ನಿಯಾದ ಬರ್ಕ್ಲಿಯಲ್ಲಿ ಕಾಣೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ (22) ಅವರ ಮೃತದೇಹ ಪತ್ತೆಯಾಗಿದೆ ಎಂದು ಸ್ಯಾನ್…
ಹೊಸದಿಲ್ಲಿ : ವಿವಾಹಪೂರ್ವ ದೈಹಿಕ ಸಂಬಂಧಗಳಲ್ಲಿ ಅತ್ಯಂತ ಜಾಗರೂಕತೆ ವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ. ಮದುವೆಯ ಸುಳ್ಳು…
ಮೈಸೂರು : ಎಲಾನ್ ಮಸ್ಕ್ ಒಡೆತನದ ಸಾಮಾಜಿಕ ಜಾಲತಾಣ ಎಕ್ಸ್ (X, ಹಿಂದಿನ ಟ್ವಿಟರ್) ಇಂದು ಸಂಜೆ (ಫೆಬ್ರವರಿ 16)…
ಬೆಂಗಳೂರು : ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ರೈತರ ಮೇಲೆ ಪರಿಣಾಮ ಬೀರುವ ಭಾರತ-ಅಮೆರಿಕ ವ್ಯಾಪಾರ…
ಮಲ್ಕುಂಡಿ : ಕಾಡಾನೆಗಳ ದಾಳಿಯಿಂದ ಗುಡಿಸಲು ಹಾಗೂ ಸೋಲಾರ್ ತಂತಿ ಬೇಲಿ ನಾಶವಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ದೇವರಾಯಶೆಟ್ಟಿಪುರ ಗ್ರಾಮದಲ್ಲಿ…
ಮೈಸೂರು : ನಗರದಲ್ಲಿ ಅಪರಾಧ ನಿಯಂತ್ರಣ ಮತ್ತು ಪತ್ತೆ ಸಂಬಂಧ ರಾಜ್ಯ ಪೊಲೀಸ್ ಇಲಾಖೆಯ ಅಪರಾಧ ಮತ್ತು ತಾಂತ್ರಿಕ ಸೇವೆ…