ಕೆ.ಬಿ.ರಮೇಶನಾಯಕ
ಸ್ಥಳೀಯ ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿ ಕುರಿತು ಸಿಎಂ ಜತೆ ಚರ್ಚೆ
೨ ವರ್ಷಗಳಲ್ಲಿ ಹಲವು ಯೋಜನೆಗಳಿಗೆ ಒಪ್ಪಿಗೆ
ಪೌರಕಾರ್ಮಿಕರ ಖಾಯಮಾತಿ ಸಂಬಂಧ ಸಿಎಂ ಅವರಿಂದಲೇ ಭರವಸೆ ಸಿಕ್ಕಿದೆ
ಹುದ್ದೆಗಳ ಸೃಜನೆ ಆಗಬೇಕಾಗಿದೆ
ಸ್ವಕ್ಷೇತ್ರ ತಿ.ನರಸೀಪುರದಲ್ಲಿ ಕುಂಭಮೇಳ ಯಶಸ್ವಿ
ಮೈಸೂರು: ರಾಜ್ಯದ ಜನರಿಗೆ ಕೊಟ್ಟ ಮಾತಿನಂತೆ ಸರ್ಕಾರ ಆಡಳಿತ ಮಾಡುತ್ತಿದೆ. ದಲಿತರು, ಹಿಂದುಳಿದ, ಅಲ್ಪಸಂಖ್ಯಾತ ವರ್ಗಗಳ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದು ಅನುಷ್ಠಾನಗೊಳಿಸಲಾಗುತ್ತಿದೆ. ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದುವುದು, ಸಂವಿಧಾನ ಜಾಗೃತಿ ಮೂಡಿಸಿದ ಕೆಲಸದಿಂದ ಇಡೀ ಭಾರತ ಕರ್ನಾಟಕದ ಕಡೆಗೆ ನೋಡುವಂತೆ ಮಾಡಿದ್ದು ದಾಖಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ನಗರ, ಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಹುದ್ದೆಗಳು ಹೆಚ್ಚಾಗಿರುವ ಸಂಬಂಧ ‘ಆಂದೋಲನ’ದಲ್ಲಿ ಪ್ರಕಟವಾದ ಲೇಖನದ ಹಿನ್ನೆಲೆಯಲ್ಲಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಅಭಿಪ್ರಾಯ ಗಳನ್ನು ಹಂಚಿಕೊಂಡರು.
ಆಂದೋಲನ: ಜಿಲ್ಲಾ ಉಸ್ತುವಾರಿ ಸಚಿವರಾಗಿ ಸುಮಾರು ಎರಡು ವರ್ಷಗಳಿಂದ ಕಾರ್ಯ ನಿರ್ವ ಹಿಸುತ್ತಿದ್ದೀರಿ. ಯಶಸ್ವಿಯಾ ಗಿದ್ದೀರಿ ಅನಿಸುತ್ತಿದೆಯಾ?
ಡಾ.ಎಚ್‌ಸಿಎಂ: ಎರಡು ವರ್ಷಗಳಿಂದ ಮೈಸೂರು ಜಿಲ್ಲೆಯ ಅಭಿವೃದ್ಧಿ ಕಾರ್ಯ ನಿರ್ವಹಿಸುತ್ತಿರುವ ನನಗೆ ಜನರೇ ನಮ್ಮ ಕಾರ್ಯವೈಖರಿ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ಜತೆಗೆ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಮಂಜೂರು ಮಾಡಿಸಲಾಗಿದೆ. ಎರಡು ವರ್ಷಗಳ ಕೆಲಸ ನನಗೆ ತೃಪ್ತಿತಂದಿದೆ. ನನ್ನ ಸ್ವಕ್ಷೇತ್ರದಲ್ಲಿ ಕುಂಭಮೇಳ ಯಶಸ್ವಿಯಾಗಿ ನಡೆದಿದೆ. ಹಲವು ಯೋಜನೆಗಳಿಗೆ ಸರ್ಕಾರದಿಂದ ಸಮ್ಮತಿ ಸಿಕ್ಕಿರುವುದು ಗಮನಾರ್ಹ.
ಆಂದೋಲನ: ಸ್ಥಳೀಯ ಸಂಸ್ಥೆಗಳಲ್ಲಿ ಸಾರ್ವಜನಿಕರ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರು ಇದೆ. ಏನು ಹೇಳುವಿರಿ?
ಡಾ.ಎಚ್‌ಸಿಎಂ: ಸ್ಥಳೀಯ ಸಂಸ್ಥೆಗಳಲ್ಲಿ ಸಾರ್ವಜನಿಕರ ಕೆಲಸಗಳಿಗೆ ಯಾವುದೇ ಅಡ್ಡಿ ಇಲ್ಲದಂತೆ ಆಡಳಿತ ಚೆನ್ನಾಗಿ ನಡೆಯುತ್ತಿದೆ. ಸರ್ಕಾರ ಯಾವುದೇ ದೂರುದಾರನ ಅರ್ಜಿಯನ್ನು ಬಾಕಿ ಉಳಿಸಿಕೊಳ್ಳದಂತೆ ಸೂಚನೆ ನೀಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ಜನಸ್ಪಂದನ ನಡೆಯುತ್ತಿದೆ. ನಾನು ಮೈಸೂರಿಗೆ ಬಂದಾಗ ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಿದ್ದೇನೆ. ನಿರ್ದಿಷ್ಟ ಪ್ರಕರಣಗಳನ್ನು ಹೊರತುಪಡಿಸಿದರೆ ಬೇರೆ ಯಾವುದೇ ಕೆಲಸಗಳು ಕುಂಠಿತವಾಗಿಲ್ಲ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿವೆ.
ಆಂದೋಲನ: ಜಿಲ್ಲೆಯ ಬಹುತೇಕ ಎಲ್ಲ ನಗರ, ಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ಅಂದಾಜು ಶೇ.೫೦ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇವೆಯಲ್ಲ?
ಡಾ.ಎಚ್‌ಸಿಎಂ: ನಗರಾಭಿವೃದ್ಧಿ, ಪೌರಾಡಳಿತ ನಿರ್ದೇಶನಾಲಯ ವ್ಯಾಪ್ತಿಗೆ ಬರುವ ಹುದ್ದೆಗಳನ್ನು ತುಂಬಲಾಗುತ್ತದೆ. ಕೆಪಿಎಸ್‌ಸಿ ಮೂಲಕ ನೇಮಕಾತಿ ಮಾಡಿಕೊಳ್ಳಬೇಕಿದೆ. ಹಲವಾರು ವರ್ಷಗಳಿಂದ ಭರ್ತಿ ಮಾಡದೆ ಇರುವ ಕಾರಣ ಒಂದಿಷ್ಟು ಹುದ್ದೆಗಳು ಖಾಲಿ ಇವೆ. ಶೇ.೫೦ರಷ್ಟು ಹುದ್ದೆಗಳು ಖಾಲಿ ಇವೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡು ಗಮನಿಸುತ್ತೇನೆ. ಮುಖ್ಯಮಂತ್ರಿಗಳು ಹಾಗೂ ಸಂಬಂಧಿಸಿದ ಸಚಿವರೊಂದಿಗೆ ಸಮಾಲೋಚಿಸಿ ನೇಮಕಕ್ಕೆ ಕ್ರಮಕೈಗೊಳ್ಳುತ್ತೇನೆ.
ಆಂದೋಲನ: ಕೆಲವೆಡೆ ಪೌರಕಾರ್ಮಿಕ ಹುದ್ದೆಗಳೂ ಖಾಲಿ ಇವೆ ಎಂಬ ಆರೋಪಗಳಿವೆ?
ಡಾ.ಎಚ್‌ಸಿಎಂ: ಮೈಸೂರು ಭಾಗದಲ್ಲಿ ಪೌರಕಾರ್ಮಿಕರ ಕೊರತೆ ಇಲ್ಲ. ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದಾಗ ಪೌರ ಕಾರ್ಮಿಕರನ್ನು ನೇರ ವೇತನ ಪಾವತಿಗೆ ಒಳಪಡಿಸಿದ್ದು ಮತ್ತು ಖಾಯಂ ಮಾಡಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಈಗ ಮತ್ತೆ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಖಾಯಂ ಮಾಡುವ ಬಗ್ಗೆ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ. ಮೊನ್ನೆ ನಡೆದ ಪೌರ ಕಾರ್ಮಿಕರ ಸಮಾವೇಶದಲ್ಲಿ ಸಿಎಂ ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ನೇಮಕಾತಿ ಮತ್ತು ಖಾಯಂ ಮಾಡುವ ಬಗ್ಗೆ ಸರ್ಕಾರ ತೀರ್ಮಾನಿಸಲಿದೆ.
ಆಂದೋಲನ: ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮವಹಿಸುತ್ತೀರಾ?
ಡಾ.ಎಚ್‌ಸಿಎಂ: ಗ್ರಾಪಂನಿಂದ ಸ್ಥಳೀಯ ಸಂಸ್ಥೆಗಳಿಗೆ ಮೇಲ್ದರ್ಜೆಗೇರಿದ ಕೆಲವು ಸಂಸ್ಥೆಗಳಲ್ಲಿ ಕೊರತೆಯಾಗಿರುವುದು ಬಿಟ್ಟರೆ ಬೇರೆ ಕಡೆ ಖಾಲಿ ಇಲ್ಲ. ಕಾಲಕಾಲಕ್ಕೆ ನೇಮಕಾತಿ ಮಾಡಿಕೊಂಡು ಬರಲಾಗುತ್ತಿದೆ. ಹುದ್ದೆಗಳ ಸೃಜನೆ ಜಾಸ್ತಿಯಾಗಬೇಕಿದೆ. ಇದು ಒಂದು ಇಲಾಖೆ ವಿಚಾರವಲ್ಲ. ಎಲ್ಲಾ ಇಲಾಖೆಗಳಲ್ಲೂ ಇಂದಿನ ದಿನಮಾನಕ್ಕೆ ತಕ್ಕಂತೆ ಹುದ್ದೆಗಳನ್ನು ಸೃಜಿಸಿ ನೇಮಕಾತಿ ಮಾಡಬೇಕಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಯೋಚನೆ ಮಾಡಲಾಗುವುದು.
ಆಂದೋಲನ: ಸಂಸ್ಥೆಗಳಲ್ಲಿ ಕೆಲಸಗಳಾಗದೆ ಪರದಾಡುತ್ತಿರುವ ಸಾರ್ವಜನಿಕರಿಗೆ ನಿಮ್ಮ ಭರವಸೆ ಏನು?
ಡಾ.ಎಚ್‌ಸಿಎಂ: ಸಾರ್ವಜನಿಕರ ಕೆಲಸ ಕಾರ್ಯಗಳಲ್ಲಿ ವಿಳಂಬವಾಗದಂತೆ ನೋಡಿಕೊಳ್ಳಲಾಗಿದೆ. ಜನರ ಪರವಾಗಿರುವ ನಾವು ಯಾವುದೇ ಸಮಸ್ಯೆ ಇದ್ದಲ್ಲಿ ನೇರವಾಗಿ ಭೇಟಿ ಮಾಡಬಹುದು. ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಪರದಾಡುತ್ತಿರುವ ವಿಚಾರ ನನ್ನ ಗಮನಕ್ಕೆ ತಂದಿಲ್ಲ. ಒಂದು ಸಣ್ಣ ದೂರೂ ಬಂದಿಲ್ಲ. ಒಂದು ವೇಳೆ ವಿಳಂಬ ಆಗುತ್ತಿರುವುದು ಇದ್ದರೆ ಹೇಳಬಹುದು. ಅಧಿಕಾರಿಗಳು ಸರ್ಕಾರಿ ಕಚೇರಿಯಲ್ಲಿ ಇದ್ದು ಕೆಲಸ ಮಾಡುತ್ತಿದ್ದಾರೆ. ಜನರ ಕೆಲಸ ಮಾಡಲು ಇರುವ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಾರೆ ಎನ್ನುವ ನಿರೀಕ್ಷೆ ಇದೆ.
ಆಂದೋಲನ: ಸ್ಥಳೀಯ ಸಂಸ್ಥೆಗಳು ಆರ್ಥಿಕವಾಗಿ ಬಲಾಢ್ಯವಾಗದಿದ್ದರೆ ಎಲ್ಲವನ್ನೂ ಸರ್ಕಾರ ಮಾಡಲು ಸಾಧ್ಯವೇ?
ಡಾ.ಎಚ್‌ಸಿಎಂ: ಸ್ಥಳೀಯ ಸಂಸ್ಥೆಗಳು ಆರ್ಥಿಕವಾಗಿ ಬಲಾಢ್ಯವಾಗಿರಬೇಕು ಎನ್ನುವ ಕಾರಣಕ್ಕಾಗಿ ಸರ್ಕಾರ ಅನುದಾನ ನೀಡುತ್ತಿದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನ, ನಗರೋತ್ಥಾನ ಅನುದಾನ, ಐದನೇ ಹಣಕಾಸು ಆಯೋಗದಿಂದ ಅನುದಾನ ನೀಡುತ್ತಿದೆ. ಅಧಿಕಾರ ವೀಕೇಂದ್ರೀಕರಣ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿರುವ ಸಿದ್ದರಾಮಯ್ಯ ಅವರು, ಅದಕ್ಕೆ ತಕ್ಕಂತೆ ಬಜೆಟ್‌ನಲ್ಲಿ ಒತ್ತು ನೀಡಿದ್ದಾರೆ. ಸ್ಥಳೀಯ ಸಂಸ್ಥೆಗಳು ಸಂಪನ್ಮೂಲ ಕ್ರೋಡೀಕರಣಕ್ಕೆ ಅವಕಾಶ ನೀಡಿವೆ. ಕುಡಿಯುವ ನೀರು, ಟ್ರೇಡ್ ಲೈಸೆನ್ಸ್, ಆಸ್ತಿ ತೆರಿಗೆ, ಜಾಹೀರಾತು ಮೊದಲಾದ ವಿಚಾರಗಳಲ್ಲಿ ಆದಾಯ ಕಂಡುಕೊಳ್ಳಬೇಕಿದೆ.
” ನಗರಾಭಿವೃದ್ಧಿ, ಪೌರಾಡಳಿತ ನಿರ್ದೇಶನಾಲಯ ವ್ಯಾಪ್ತಿಗೆ ಬರುವ ಹುದ್ದೆಗಳನ್ನು ತುಂಬಲಾಗುತ್ತದೆ. ಕೆಪಿಎಸ್‌ಸಿ ಮೂಲಕ ನೇಮಕಾತಿ ಮಾಡಿಕೊಳ್ಳಬೇಕಿದೆ. ಹಲವಾರು ವರ್ಷಗಳಿಂದ ಭರ್ತಿ ಮಾಡದೆ ಇರುವ ಕಾರಣ ಒಂದಿಷ್ಟು ಹುದ್ದೆಗಳು ಖಾಲಿ ಇವೆ. ಶೇ.೫೦ರಷ್ಟು ಹುದ್ದೆಗಳು ಖಾಲಿ ಇವೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡು ಗಮನಿಸುತ್ತೇನೆ.”
-ಡಾ.ಎಚ್.ಸಿ.ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವರು. ಮೈಸೂರು
ಮೈಸೂರು : ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ. ಆದರೆ, ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಯಾವ…
ಬೆಳಗಾವಿ : ರಾಜ್ಯ ಸರ್ಕಾರ ರೈತ ಪರ ಸರಕಾರವಾಗಿದ್ದು, ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ…
ಹೊಸದಿಲ್ಲಿ: ಮುಂಬರುವ ಐಸಿಸಿ ಟಿ-೨೦ ವಿಶ್ವಕಪ್‌ಗಾಗಿ ೧೫ ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದು, ಶುಭಮನ್…
ಹೊಸದಿಲ್ಲಿ : ಮೊಟ್ಟೆ ಸೇವೆನೆಗೆ ಸುರಕ್ಷಿತವಾಗಿದ್ದು ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕವಾಗುವ ಯಾವುದೇ ಅಂಶ ಪತ್ತೆ ಆಗಿಲ್ಲ ಎಂದು ಕೇಂದ್ರ ಆಹಾರ…
ಚಾಮರಾಜನಗರ : ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವಂತಹ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುವಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜಲಶಕ್ತಿ ಮಂತ್ರಾಲಯದ…
ಮೈಸೂರು : ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಪ್ರವಾಸಿಗರು, ಸ್ಥಳೀಯರಿಗೆ ಮನರಂಜನೆ ಒದಗಿಸಲು ಅರಮನೆ ಅಂಗಳದಲ್ಲಿ ಡಿ.೨೧ರಿಂದ ೩೧ರವರೆಗೆ…