ದುಸ್ಥಿತಿಯ ಪಾರಂಪರಿಕ ಕಟ್ಟಡಗಳ ಸುಸ್ಥಿತಿಗೆ ಆದ್ಯತೆ ಬೇಕು
೨೦೨೨ರ ಸಮೀಕ್ಷೆಯ ಪ್ರಕಾರ ೨೫ ಪಾರಂಪರಿಕ ಕಟ್ಟಡಗಳು ಶಿಥಿಲ
ಕೆ.ಆರ್.ಮಿಲ್, ಟಿಪ್ಪು ಸುಲ್ತಾನನ ಬೇಸಿಗೆ ಅರಮನೆ, ನಜರ್ ಬಾದ್‌ನಲ್ಲಿದ್ದ ಚರ್ಚ್ ಸೇರಿದಂತೆ ಹಲವಾರು ಪಾರಂಪರಿಕ ಕಟ್ಟಡಗಳು ಈಗಾಗಲೇ ನೆಲಸಮ
೧೧ ಪಾರಂಪರಿಕ ಕಟ್ಟಡಗಳ ಮರು ನಿರ್ಮಾಣಕ್ಕೆ ಸರ್ಕಾರ ನಿರ್ಧಾರ
ಮೈಸೂರು: ಕರ್ನಾಟಕದ ಸಾಂಸ್ಕ ತಿಕ ರಾಜಧಾನಿ ಮೈಸೂರು ತನ್ನ ಐತಿಹಾಸಿಕ, ಪಾರಂಪರಿಕ ಕಟ್ಟಡಗಳಿಗೆ ಹೆಸರುವಾಸಿ. ಮೈಸೂರಿನಲ್ಲಿ ೬೦೦ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳಿದ್ದು, ಇವುಗಳಲ್ಲಿ ಕೆಲವು ಕೇಂದ್ರ ಸರ್ಕಾರದ ಅಡಿಯಲ್ಲಿ ಬಂದರೆ ಮತ್ತೆ ಕೆಲವು ರಾಜ್ಯ ಸರ್ಕಾರ ಹಾಗೂ ಸ್ಥಳೀಯ ನಗರ ಪಾಲಿಕೆಯ ಸುಪರ್ದಿಗೆ ಒಳಪಟ್ಟಿವೆ. ಆದರೆ ಇಂದು ಸರ್ಕಾರಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ನಿರ್ವಹಣೆಯ ಕೊರತೆಯಿಂದಾಗಿ ಈ ಪಾರಂಪರಿಕ ಕಟ್ಟಡಗಳ ಅದ್ಭುತ ಇತಿಹಾಸ ಕ್ಷೀಣಿಸುತ್ತಿದೆ.
ಈಗಾಗಲೇ ಶತಮಾನಗಳ ಇತಿಹಾಸವನ್ನು ಸಾರುತ್ತಿದ್ದ ಅನೇಕ ಪಾರಂಪರಿಕ ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ. ಮಹಾತ್ಮ ಗಾಂಧಿ ೧೯೨೭ರಲ್ಲಿ ಭೇಟಿ ನೀಡಿದ್ದ ಕೆ.ಆರ್.ಮಿಲ್, ೧೦೦ ಅಡಿ ರಸ್ತೆಯಲ್ಲಿದ್ದ ಟಿಪ್ಪು ಸುಲ್ತಾನನ ಬೇಸಿಗೆ ಅರಮನೆ, ನಜರ್‌ಬಾದ್‌ನಲ್ಲಿದ್ದ ಚರ್ಚ್, ಪಾರಂಪರಿಕ ಮಂಟಪಗಳು, ಮನೆಗಳು, ಹೋಟೆಲ್‌ಗಳು, ಚಿತ್ರಮಂದಿರಗಳು ಸೇರಿದಂತೆ ಅನೇಕ ಐತಿಹಾಸಿಕ ಕಟ್ಟಡಗಳು ಈಗಾಗಲೇ ಕಣ್ಮರೆಯಾಗಿವೆ.
ಉಳಿದಿರುವ ಕಟ್ಟಡಗಳಲ್ಲಿ ಅನೇಕ ಪಾರಂಪರಿಕ ಕಟ್ಟಡಗಳು ಶಿಥಿಲಾವಸ್ಥೆ ತಲುಪಿದ್ದರೂ ತಕ್ಷಣ ಗಮನ ಹರಿಸದ ಕಾರಣ ಕುಸಿದು ಬಿದ್ದಿರುವ ಘಟನೆಗಳೂ ನಡೆದಿವೆ. ಇತ್ತೀಚೆಗೆ ಮಹಾರಾಣಿ ಕಾಲೇಜು ಕಟ್ಟಡ ಪತನಗೊಂಡು ಕಾರ್ಮಿಕರೊಬ್ಬರು ದುರ್ಮರಣ ಹೊಂದಿರುವ ಘಟನೆ ಎಲ್ಲರಿಗೂ ಎಚ್ಚರಿಕೆಯ ಘಂಟೆಯಾಗಬೇಕಿದೆ.
೨೦೨೨ರ ಸಮೀಕ್ಷೆಯ ಪ್ರಕಾರ, ೨೫ ಪಾರಂಪರಿಕ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಅವುಗಳು ಕುಸಿಯುವ ಅಪಾಯದಲ್ಲಿವೆ. ಪುರಾತತ್ವ ಇಲಾಖೆ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮತ್ತು ಪರಂಪರೆ ಸಮಿತಿಯು ಮೈಸೂರಿನ ೧೨೯ ಪಾರಂಪರಿಕ ಕಟ್ಟಡಗಳ ಸಮೀಕ್ಷೆ ಮುಗಿಸಿದ್ದು, ೧೧ ಪಾರಂಪರಿಕ ಕಟ್ಟಡಗಳನ್ನು ನೆಲಸಮ ಮಾಡಿ ಮರುನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಮೈಸೂರಿನ ಪಾರಂಪರಿಕ ಕಟ್ಟಡಗಳ ನಿರ್ವಹಣೆ ಮತ್ತು ಸಂರಕ್ಷಣೆಗೆ ತಕ್ಷಣದ ಕ್ರಮಗಳ ಅಗತ್ಯವಿದೆ ಎಂಬುದು ಸ್ಪಷ್ಟವಾಗುತ್ತದೆ. ದುರಂತವೆಂದರೆ, ಅವುಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸಿ ಪುನರುಜ್ಜೀವನಗೊಳಿಸುವ ಬದಲು ಇತರ ಅನೇಕ ಕಟ್ಟಡಗಳಂತೆ ಕುಸಿಯಲು ಬಿಡಲಾಗುತ್ತಿದೆ.
ಈಗಲಾದರೂ ಸರ್ಕಾರಗಳು ಹಾಗೂ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡು ಕಟ್ಟಡಗಳ ಸಂಪೂರ್ಣ ಸಮೀಕ್ಷೆಯನ್ನು ನಡೆಸಿ, ಶಿಥಿಲಾವಸ್ಥೆಯಲ್ಲಿರುವ ಭಾಗಗಳನ್ನು ಗುರುತಿಸಿ, ತಕ್ಷಣದ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಬೇಕು. ಇದೇ ವೇಳೆ, ಭವಿಷ್ಯದಲ್ಲಿ ಇಂತಹ ಸಮಸ್ಯೆಗಳು ಉಂಟಾಗದಂತೆ ನಿಯಮಿತ ನಿರ್ವಹಣೆ ಮತ್ತು ಪರಿಶೀಲನೆ ಕಾರ್ಯಗಳನ್ನು ನಡೆಸಬೇಕು. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಐತಿಹಾಸಿಕ ಕಟ್ಟಡಗಳು ನೆಲಸಮವಾಗಲಿವೆ. ಪಾರಂಪರಿಕ ಕಟ್ಟಡ ಉಳಿಸಬೇಕೆ? ಹೊಸದಾಗಿ ನಿರ್ಮಿಸಬೇಕೆ? ಎಂಬುದರ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳದೆ ಹೋದರೆ, ಭವಿಷ್ಯದಲ್ಲಿ ಮೈಸೂರು ತನ್ನ ಪರಂಪರೆ ಯನ್ನು ಸಂಪೂರ್ಣ ಕಳೆದುಕೊಳ್ಳಬಹುದು. ಏಕೆಂದರೆ ಈ ಕಟ್ಟಡಗಳು ಕೇವಲ ಕಟ್ಟಡಗಳಲ್ಲ, ಅವು ಇತಿಹಾಸದ ಜೀವಂತ ಸಾಕ್ಷಿಗಳು.
ಈಗಾಗಲೇ ಅನಾಹುತ ಸಂಭವಿಸಿರುವ ಪಾರಂಪರಿಕ ಕಟ್ಟಡಗಳು
■ ೧೭೯೪ರಲ್ಲಿದ್ದ ಸೌಂದರ್ಯ ವಿಲಾಸ ಅರಮನೆಯು ಸಿಡಿಲಿಗೆ ಆಹುತಿ
■ ೧೮೯೭, -ಬ್ರವರಿ ೨೭ರಂದು ಮರದ ಅರಮನೆ ಬೆಂಕಿಯಿಂದ ನಾಶ
■ ೧೯೮೧, ೧೯೯೦, ೧೯೯೯ರಲ್ಲಿ ದೇವರಾಜ ಮಾರುಕಟ್ಟೆಯಲ್ಲಿ ಅಗ್ನಿ ಅನಾಹುತದಿಂದ ನೂರಾರು ಅಂಗಡಿಗಳು ಭಸ್ಮ
■ ೨೦೧೨ರಲ್ಲಿ ಲ್ಯಾನ್ಸ್‌ಡೌನ್ ಕಟ್ಟಡದ ಒಂದು ಭಾಗ ಕುಸಿದ ಪರಿಣಾಮ ನಾಲ್ವರು ಸಾವು
■ ೨೦೧೬ರಲ್ಲಿ ದೇವರಾಜ ಮಾರುಕಟ್ಟೆಯ ಉತ್ತರದ್ವಾರದ ಕಮಾನು ಕುಸಿತ
■ ೨೦೧೯ ಆಗಸ್ಟ್ ೯ ರಂದು ಸರಸ್ವತಿಪುರಂ ಅಗ್ನಿಶಾಮಕ ದಳದ ಮುಖಮಂಟಪ ಕುಸಿತ
■ ೨೦೨೦ರ ಅಕ್ಟೋಬರ್ ೧೮ ರಂದು ೧೪ನೇ ಶತಮಾನದಲ್ಲಿ ನಿರ್ಮಿಸಲಾದ ಅರಮನೆಯ ಕಲ್ಲಿನ ಕೋಟೆಯ ಗೋಡೆಯ ಭಾಗ ಕುಸಿತ
■ ೨೦೨೨, ಜುಲೈನಲ್ಲಿ ಮಹಾರಾಣಿ ಸೈನ್ಸ್ ಕಾಲೇಜು ಕಟ್ಟಡ ಭಾಗದ ಕುಸಿತ
■ ೨೦೨೧ರ -ಬ್ರವರಿಯಲ್ಲಿ ಮಹಾರಾಜ ಕಾಲೇಜಿನ ತರಗತಿಯೊಂದರ ಚಾವಣಿ ಕುಸಿದುಬಿದ್ದು, ಪರೀಕ್ಷೆ ಬರೆಯುತ್ತಿದ್ದ ಮೂವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ
■ ೨೦೨೨ರ ಮೇ ೧೨ ರಂದು ಮಹಾಮಳೆಯ ಪರಿಣಾಮವಾಗಿ ವಾಣಿವಿಲಾಸ ಮಾರುಕಟ್ಟೆಯ ಮುಖ್ಯ ದ್ವಾರದ ಗೋಡೆ ಕುಸಿತ
■ ಚಾಮುಂಡಿ ಬೆಟ್ಟದಲ್ಲಿ ಅವೈಜನಿಕ ಮತ್ತು ಅನಾರೋಗ್ಯಕರ ಅಭಿವೃದ್ಧಿಯಿಂದಾಗಿ ಈಗಾಗಲೇ ಐದು ಬಾರಿ ಗುಡ್ಡ ಕುಸಿತ
■ ೨೦೨೫, ಜ.೨೮ರಂದು ಹಳೆ ಕಟ್ಟಡ ನೆಲಸಮ ಕಾರ್ಯ ನಡೆಯುತ್ತಿದ್ದ ಮಹಾರಾಣಿ ವಿಜನ ಕಾಲೇಜಿನ ಕಟ್ಟಡ ಕುಸಿದು ಕಾರ್ಮಿಕರೊಬ್ಬರ ಸಾವು
ಅಧಿವೇಶನದಲ್ಲಿ ಚರ್ಚೆ:
” ಮೈಸೂರು ಪಾರಂಪರಿಕ ಕಟ್ಟಡಗಳ ನವೀಕರಣಕ್ಕೆ ಆಗ್ರಹಿಸಿ ಬಜೆಟ್‌ನಲ್ಲಿ ಹಣ ಮೀಸಲಿರಿಸುವಂತೆ ಮನವಿ ಮಾಡಲಾಗಿದೆ. ಜೊತೆಗೆ ಸರ್ಕಾರಿ ಕಾಲೇಜುಗಳ ನಿರ್ಮಾಣಕ್ಕೆ ಆಗ್ರಹಿಸಿ ಅಧಿವೇಶನದಲ್ಲಿ ಚರ್ಚಿಸಲಾಗುವುದು.”
-ಟಿ.ಎಸ್.ಶ್ರೀವತ್ಸ, ಶಾಸಕ.
ಲ್ಯಾನ್ಸ್‌ಡೌನ್, ದೇವರಾಜ ಮಾರುಕಟ್ಟೆ ಮರು ನಿರ್ಮಾಣ:
” ಲ್ಯಾನ್ಸ್‌ಡೌನ್ ಕಟ್ಟಡವನ್ನು ನೆಲಸಮ ಮಾಡಿ ಮರು ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ದೇವರಾಜ ಮಾರುಕಟ್ಟೆ ಕೆಡವಿ ಪುನರ್ ನಿರ್ಮಾಣಕ್ಕೆ ಈಗಾಗಲೇ ಅನುದಾನ ಬಿಡುಗಡೆಯಾಗಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಕಟ್ಟಡವನ್ನು ತೆರವುಗೊಳಿಸುವ ಕುರಿತು ಚರ್ಚಿಸಲಾಗುವುದು.”
-ಜಿ.ಡಿ.ಹರೀಶ್ ಗೌಡ, ಶಾಸಕ.
ರಾಜ್ಯ ಸರ್ಕಾರ ಅನುದಾನ ಮೀಸಲಿಡಬೇಕು:
” ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಣೆ ಮಾಡುವುದು, ಪುನರ್ ನವೀಕರಣ ಮಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಹಲವಾರು ವರ್ಷಗಳಿಂದ ರಕ್ಷಿಸಿಕೊಂಡು ಬಂದಿರುವ ಕಟ್ಟಡಗಳನ್ನು ಮುಂದಿನ ಪೀಳಿಗೆಗೂ ಉಳಿಸಬೇಕಿದೆ. ರಾಜ್ಯ ಸರ್ಕಾರ ಕಟ್ಟಡ ನವೀಕರಣ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿದ್ದರಿಂದಾಗಿ ಕಟ್ಟಡಗಳು ಕುಸಿದು ಬೀಳಲು ಕಾರಣವಾಗಿದೆ. ಸರ್ಕಾರ ಅನುದಾನ ಮೀಸಲಿಟ್ಟು ನವೀಕರಣ ಕಾರ್ಯಕ್ಕೆ ಮುಂದಾಗಬೇಕು.”
-ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದರು.
ದುಸ್ಥಿತಿಯಲ್ಲಿರುವ ಕಟ್ಟಡಗಳ ನವೀಕರಣ:
” ಮೈಸೂರಿನ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರತ್ಯೇಕ ಬಜೆಟ್ ಅಥವಾ ಅನುದಾನದ ವಿಚಾರ ಸರ್ಕಾರದ ನಿರ್ಧಾರಕ್ಕೆ ಬಿಟ್ಟಿದ್ದು. ಕುಸಿದು ಬೀಳುವ ಕಟ್ಟಡಗಳು ಏನಾದರೂ ಕಂಡು ಬಂದಲ್ಲಿ ತಕ್ಷಣವೇ ಅದರ ನವೀ ಕರಣಕ್ಕೆ ಗಮನಹರಿಸಲಾಗುವುದು. ಈಗಾಗಲೇ ದುಸ್ಥಿತಿಯಲ್ಲಿರುವ ಕಟ್ಟಡಗಳ ನವೀಕರಣ ಕೆಲಸ ನಡೆಯುತ್ತಿದೆ. ಉಳಿದಂತೆ ಬೇರೆ ಯಾವುದೇ ಯೋಜನೆ ರೂಪಿಸಿಲ್ಲ.”
-ಜಿ.ಲಕ್ಷ್ಮೀಕಾಂತ್ ರೆಡ್ಡಿ, ಜಿಲ್ಲಾಧಿಕಾರಿ.
” ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸಲು ಸಾಧ್ಯವಿದೆ. ಇದಕ್ಕೆ ಆಯುರ್ವೇದ ಮೆಡಿಕಲ್ ಕಾಲೇಜು, ಕಾಡಾ ಕಚೇರಿ, ಸರ್ಕಾರಿ ವಸತಿ ಗೃಹ, ಅರಸು ಬೋರ್ಡಿಂಗ್ ಶಾಲೆ ಇತ್ಯಾದಿ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಣೆ ಮಾಡಿರುವುದು ಇದಕ್ಕೆ ಉದಾಹರಣೆ ಯಾಗಿದೆ. ಸರ್ಕಾರ ಅನುದಾನ ಮೀಸಲಿಟ್ಟರೆ ಉಳಿದ ಕಟ್ಟಡಗಳ ಸಂರಕ್ಷಣೆಯೂ ಸಾಧ್ಯವಿದೆ.”
– ಎನ್.ಎಸ್.ರಂಗರಾಜು, ಪಾರಂಪರಿಕ ತಜ್ಞ.
ಕಟ್ಟಡ ಕೆಡವುವ ಅಗತ್ಯ ಇಲ್ಲ:
” ತಾತನ ಕಾಲದಿಂದಲೂ ಲ್ಯಾನ್ಸ್‌ಡೌನ್ ಕಟ್ಟಡದಲ್ಲಿ ವ್ಯಾಪಾರ ನಡೆಸುತಿದ್ದೇವೆ. ಕಟ್ಟಡವನ್ನು ಕಾಲಕಾಲಕ್ಕೆ ನಿರ್ವಹಣೆ ಮಾಡಿದ್ದರೆ ದುರಸ್ತಿಯ ಅವಶ್ಯಕತೆ ಇರುತ್ತಿರಲಿಲ್ಲ. ಇದರ ಜೀರ್ಣೋದ್ಧಾರವಾದರೆ ಸಾಕು ಕಟ್ಟಡ ಕೆಡವಿ ಹೊಸದಾಗಿ ನಿರ್ಮಿಸುವುದು ಸೂಕ್ತವಲ್ಲ. ಕಟ್ಟಡದಲ್ಲಿ ೫೭ ಮಳಿಗೆಗಳಿದ್ದು ಕೇವಲ ೧೫ ರಿಂದ ೧೯ ಮಳಿಗೆಗಳು ಮಾತ್ರ ದುರಸ್ತಿಯಾಗಬೇಕಿದೆ. ಉಳಿದಂತೆ ಕಟ್ಟಡ ಸುಸಜ್ಜಿತವಾಗಿದೆ.”
-ರಾಜೇಶ್, ವರ್ತಕರ ಸಂಘದ ಪ್ರಾಧಾನ ಕಾರ್ಯದರ್ಶಿ, ಲ್ಯಾನ್ಸ್‌ಡೌನ್ ಕಟ್ಟಡ.
ತೀರ್ಪಿಗಾಗಿ ಕಾಯುತ್ತಿದ್ದೇವೆ:
ದೇವರಾಜ ಮಾರುಕಟ್ಟೆಯ ಕಟ್ಟಡದ ಪ್ರಕರಣ ಸುಪ್ರೀಂಕೋಟ್ ನಲ್ಲಿ ಇರುವ ಕಾರಣ ತೀರ್ಪಿಗಾಗಿ ಕಾಯುತಿದ್ದೇವೆ. ೨೫ ವರ್ಷಗಳಿಂದ ಕಟ್ಟಡ ಬೀಳುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಇಲ್ಲಿಯವರೆಗೂ ಕಟ್ಟಡದಲ್ಲಿ ಒಂದು ಸಣ್ಣ ಸಮಸ್ಯೆಯೂ ಕಂಡಿಲ್ಲ. ಕಟ್ಟಡ ಸುಸಜ್ಜಿತವಾಗಿಯೇ ಇದೆ. ಸಣ್ಣ ಪ್ರಮಾಣದ ದುರಸ್ತಿಯಾದರೆ ಸಾಕು.
-ಪೈಲ್ವಾನ್ ಎಸ್. ಮಹದೇವ್, ಅಧ್ಯಕ್ಷ, ದೇವರಾಜ ಮಾರುಕಟ್ಟೆ ವರ್ತಕರ ಸಂಘ.
ಪುನರ್ ನಿರ್ಮಾಣ ಮಾಡಿದರೆ ಪಾರಂಪರಿಕತೆ ಉಳಿಯಲ್ಲ:
” ಈಗಾಗಲೇ ಇಂಜಿನಿಯರ್ ಬಂದು ಕಟ್ಟಡ ಪರಿಶೀಲಿಸಿ ಕಟ್ಟಡ ಚೆನ್ನಾಗಿದೆ ಎಂದು ತಿಳಿಸಿದ್ದಾರೆ. ಕಟ್ಟಡ ಕೆಡವಿ ಪುನರ್ ನಿರ್ಮಾಣ ಮಾಡಿದರೆ ಕಟ್ಟಡ ಹಳೆಯ ಪಾರಂಪರಿಕ ಲಕ್ಷಣ ಕಾಣಲು ಸಾಧ್ಯವೇ ಇಲ್ಲ.”
-ಶಿವಕುಮಾರ್, ವ್ಯಾಪಾರಿ, ಲ್ಯಾನ್ಸ್‌ಡೌನ್ ಕಟ್ಟಡ
ಹೊಸದಿಲ್ಲಿ: ಮಾಜಿ ಪ್ರಧಾನಿಗಳು ಹಾಗೂ ರಾಜ್ಯಸಭಾ ಸದಸ್ಯರಾದ ಹೆಚ್.ಡಿ. ದೇವೇಗೌಡರು ಶುಕ್ರವಾರ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ…
ವಿಧಾನಸಭೆ : ರಾಜ್ಯದಲ್ಲಿರುವ ಮಹಾನಗರಪಾಲಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು, ಚಾಲಕರು, ಲೋಡರ್ ಗಳು, ತ್ಯಾಜ್ಯ ಸಂಗ್ರಹಕಾರರು ಸೇರಿದಂತೆ ಇನ್ನಿತರೆ…
ಮೈಸೂರು : ಕಲರ್ಸ್ ಕನ್ನಡ ವಾಹಿನಿಯ ‘ಗಿಚ್ಚಿ ಗಿಲಿಗಿಲಿ ಜೂನಿಯರ‍್ಸ್’ ರಿಯಾಲಿಟಿ ಷೋಗಾಗಿ ಡಿ.20 ರಂದು ಬೆಳಿಗ್ಗೆ 11 ಗಂಟೆಗೆ…
ಬೆಳಗಾವಿ : ಆರೋಗ್ಯ ಸೇವೆಯಿಂದ ವಂಚಿತರಾಗಿರುವ ಜನರಿಗೆ ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕ ಯೋಜನೆ ನೆರವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…
ಮೈಸೂರು : ಸಿನಿಮಾಗಳು ಮನರಂಜನೆಗಷ್ಟೇ ಸೀಮಿತವಾಗದೆ ಸಾಮಾಜಿಕ ಜವಾಬ್ದಾರಿಯುಳ್ಳ ಶಿಕ್ಷಣದ ಮಾಧ್ಯಮವಾಗಬೇಕು ಎಂದು ಖ್ಯಾತ ನಿರ್ದೇಶಕ ಬಿ.ಸುರೇಶ್ ಆಶಿಸಿದರು. ನಗರದ…
ಮೈಸೂರು : ಅಲ್ಪಸಂಖ್ಯಾತರ ಸಮುದಾಯ ವಾಸಿಸುವ ಸ್ಥಳಗಳಲ್ಲಿ ಬಾಲ್ಯ ವಿವಾಹ ಹಾಗೂ ಬಾಲಕಾರ್ಮಿಕ ಪದ್ಧತಿಗಳ ದುಷ್ಪರಿಣಾಮಗಳ ಕುರಿತು ಅರಿವು ಕಾರ್ಯಕ್ರಮಗಳನ್ನು…