ಲಕ್ಷ್ಮೀಕಾಂತ್ ಕೊಮಾರಪ್ಪ
ಸೋಮವಾರಪೇಟೆ: ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚುತ್ತಿದ್ದು, ಜಲಮೂಲಗಳಲ್ಲಿ ನೀರಿನ ಹರಿವು ಕ್ಷೀಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದ್ದು, ಬೇಸಿಗೆಯಲ್ಲಿ ನೀರಿನ ಸಮಸ್ಯೆ ನಿವಾರಿಸಲು ಸಂಬಂಧಪಟ್ಟ ಇಲಾಖೆಗಳು ಸನ್ನದ್ಧವಾಗಿದೆ. ಬತ್ತುತ್ತಿರುವ ಜಲ ಮೂಲಗಳು
ಈವರೆಗೆ ಸರಿಯಾಗಿ ಮಳೆ ಬೀಳದ ಹಿನ್ನೆಲೆಯಲ್ಲಿ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಜಲಮೂಲಗಳು ಬತ್ತಲಾರಂಭಿಸಿವೆ. ಪಟ್ಟಣದ ಕಕ್ಕೆಹೊಳೆಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ಬತ್ತಿ ಹೋಗುವ ಲಕ್ಷಣಗಳು ಗೋಚರಿಸುತ್ತಿವೆ. ಕೆರೆ ಕಟ್ಟೆಗಳಲ್ಲಿಯೂ ನೀರಿನ ಸಂಗ್ರಹ ಕಡಿಮೆಯಾಗುತ್ತಿದೆ. ಪಟ್ಟಣದ ಆನೆಕೆರೆ, ಯಡೂರು ದೇವರ ಕರೆ, ಚೌಡುಕರೆಗಳಲ್ಲಿ ನೀರಿನ ಸಂಗ್ರಹವಿದ್ದರೂ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸಾಕಷ್ಟು ಕಡಿಮೆ ಸಂಗ್ರಹವಿದೆ.
ಇನ್ನು ಸಣ್ಣಪುಟ್ಟ ಕೊಲ್ಲಿ , ತೋಡುಗಳಲ್ಲಿ ನೀರು ಇಲ್ಲ. ಸದ್ಯದ ಮಟ್ಟಿಗೆ ಕುಡಿಯುವ ನೀರಿಗೆ ಆತಂಕ ಎದುರಾಗದಿದ್ದರೂ, ಬಿಸಿಲಿ ಬೇಗೆ ಇದೇ ರೀತಿ ಮುಂದುವರಿದರೆ ಕೆಲವೇ ದಿನಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಲಿದೆ. ಪಟ್ಟಣಕ್ಕೆ ಪ್ರಮುಖವಾಗಿ ದುದ್ದುಗಲ್ಲು ಮತ್ತು ಹಾರಂಗಿ ಹೊಳೆಯಿಂದ ನೀರು ಪೂರೈಕೆಯಾಗುತ್ತಿದೆ. ದುದ್ದುಗಲ್ಲು ಹೊಳೆಯಲ್ಲಿಯೂ ನೀರಿನ ಹರಿವು ಕ್ಷೀಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿಯಿಂದ ಮರಳು ಚೀಲಗಳನ್ನು ಹೊಳೆಗೆ ಅಡ್ಡಲಾಗಿ ಹಾಕಿ ನೀರು ಸಂಗ್ರಹಿಸುವ ಕಾರ್ಯಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಕಕ್ಕಹೊಳೆಯಲ್ಲಿಯೂ ನೀರಿನ ಹರಿವು ಕಡಿಮೆಯಾಗುತ್ತಿದೆ. ಕಕ್ಕೆಹೊಳೆಯಿಂದ ಪ್ರಮುಖವಾಗಿ ಚೌಡ್ಲು ಗ್ರಾಮ ಪಂಚಾಯಿತಿಯ ಹೆಚ್ಚು ಮನೆಗಳಿಗೆ ಕುಡಿಯುವ ನೀರು ಸರಬರಾಜಾಗುತ್ತಿದೆ. ಕಕ್ಕೆಹೊಳೆಗೆ ಅಲೆಕಟ್ಟೆ ಬಳಿ ಚೆಕ್ ಡ್ಯಾಂ ನಿರ್ಮಿಸಿ, ನೀರನ್ನು ಶುದ್ಧೀಕರಣ ಮಾಡಲು ಘಟಕ ನಿರ್ಮಿಸಲಾಗಿದೆ. ಇಲ್ಲಿಂದಲೇ ಪ್ರತಿ ಮನೆಗೂ ನೀರು ಸರಬರಾಜಾಗುತ್ತಿದೆ.
ಪ್ರಸ್ತುತ ಪ.ಪಂ. ವ್ಯಾಪ್ತಿಯ ಎಲ್ಲ ಮನೆಗಳಿಗೂ ಶುದ್ಧ ಕುಡಿಯುವ ನೀರು ಒದಗಿಸುವ ಅಮೃತ್-೨ ಯೋಜನೆಯೂ ಪ್ರಗತಿಯಲ್ಲಿದ್ದು, ಈಗಾಗಲೇ ಹಾರಂಗಿಯಿಂದ ಪೈಪ್‌ಲೈನ್ ಅಳವಡಿಕೆ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಪಟ್ಟಣ ವ್ಯಾಪ್ತಿಯ ಪ್ರತಿ ಮನೆಗೂ ಪ್ರತ್ಯೇಕ ಪೈಪ್ ಅಳವಡಿಸಿ ನಲ್ಲಿ ಹಾಕುವ ಕಾರ್ಯ ನಡೆಯುತ್ತಿದೆ.
ತಾಲ್ಲೂಕಿನ ಶಾಂತಳ್ಳಿ ಹೋಬಳಿ ಭಾಗದಲ್ಲೂ ಜಲಮೂಲಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಿದೆ. ಹಲವೆಡೆ ಕೊಳವೆ ಬಾವಿ ಗಳಲ್ಲಿ ನೀರು ತಳ ಸೇರಿದೆ. ಬಿಸಿಲಿನ ಬಾಧೆ ಅಧಿಕವಾಗುತ್ತಿದ್ದು, ಕಾಫಿ ತೋಟಗಳಲ್ಲಿ ಗಿಡಗಳು ಒಣಗಲಾರಂಭಿಸಿವೆ. ಬೋರ್ವೆಲ್ ಹೊಂದಿರುವವರು ತೋಟಕ್ಕೆ ನೀರು ಹಾಯಿಸುತ್ತಿದ್ದಾರೆ. ಕೆರೆಗಳನ್ನು ಹೊಂದಿರುವ ಬೆಳೆಗಾರರು ಪಂಪ್‌ಸೆಟ್ ಅಳವಡಿಸಿ ನೀರು ಹಾಯಿಸುವ ಮೂಲಕ ಗಿಡಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮುಂದುವರಿಸಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಆತಂಕ ಇಲ್ಲದಿದ್ದರೂ ಇದೇ ಪರಿಸ್ಥಿತಿ ಮುಂದುವರಿದರೆ ಮೇ ತಿಂಗಳಿನಲ್ಲಿ ಹಲವು ಗ್ರಾಮೀಣಪ್ರದೇಶದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಲಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಮುಂಜಾಗ್ರತೆ ವಹಿಸಿವೆ.
” ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲಾಗುವುದು. ಈಗಾಗಲೇ ಈ ಸಂಬಂಧ ಗಮನಹರಿಸಲಾಗಿದೆ. ಶೀಘ್ರದಲ್ಲೇ ಕೆಟ್ಟು ಹೋಗಿರುವ ಕೊಳವೆಬಾವಿಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.”
ವೀರೇಂದ್ರ, ಎಇಇ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ.
” ಜಿಲ್ಲಾಧಿಕಾರಿ ನಿರ್ದೇಶನದಂತೆ ಸೋಮವಾರಪೇಟೆ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸಿದ್ದೇವೆ. ಎಲ್ಲಾ ಮೋಟಾರುಗಳು ಸುಸ್ಥಿತಿಯಲ್ಲಿದ್ದು, ದುದ್ದುಗಲ್‌ನಲ್ಲಿ ನೀರಿನ ಸಂಗ್ರಹ ಇದೆ. ತಕ್ಷಣಕ್ಕೆ ಯಾವುದೇ ತೊಂದರೆ ಇಲ್ಲ. ತೊಂದರೆಯಾದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು.”
ಜಯಂತಿ ಶಿವಕುಮಾರ, ಅಧ್ಯಕ್ಷರು, ಸೋಮವಾರಪೇಟೆ ಪ.ಪಂ.
ಹುಣಸೂರು : ಹುಣಸೂರು ನಗರದಲ್ಲಿ ಹಾಡಹಗಲೇ ದೊಡ್ಡ ದರೋಡೆ ನಡೆದಿದ್ದು, ಸುಮಾರು 4 ರಿಂದ 5 ಕೋಟಿ ರೂಪಾಯಿ ಮೌಲ್ಯದ…
ನವದೆಹಲಿ: ಪ್ರಧಾನಿ ಮೋದಿ ಅವರು ಇಂದು ತಮ್ಮ 129ನೇ ಮನ್ ಕಿ ಬಾತ್ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದರು. 2025ರಲ್ಲಿ ಭಾರತದ…
ಕಾರವಾರ: ದೇಶದ ಪ್ರಥಮ ಪ್ರಜೆಯಾಗಿರುವ ಸೇನಾ ಪಡೆಗಳ ಮಹಾದಂಡ ನಾಯಕಿ ರಾಷ್ಟ್ರಪತಿ ದ್ರೌಪದ ಮುರ್ಮು ಅವರು ಇಂದು ಜಲಾಂತರಗಾಮಿ ನೌಕೆಯಲ್ಲಿ…
ಮೈಸೂರು: ಅಯ್ಯಪ್ಪ ಸ್ವಾಮಿ ದೇವಸ್ಥಾನ ಪಕ್ಕದ ಕೇರಳ ರಾಜ್ಯದಲ್ಲಿ ಇದ್ದರೂ ಅಯ್ಯಪ್ಪನಿಗೆ ಹೆಚ್ಚಿನ ಭಕ್ತರು ಇರುವುದು ನಮ್ಮ ಕರ್ನಾಟಕದಲ್ಲಿಯೇ ಪ್ರತಿ…
ಚಾಮರಾಜನಗರ: ಇಟ್ಟಿಗೆ ಬೇಯಿಸಲು ಮರಗಳ ಮಾರಣಹೋಮ ನಡೆಸಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನಲ್ಲಿ ನಡೆದಿದೆ. ಇಲ್ಲಿನ ಹಲವು ಗ್ರಾಮಗಳಲ್ಲಿ…
ಮೈಸೂರು: ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ದಲಿತ ಮುಖ್ಯಮಂತ್ರಿ ಕೂಗು ಜೋರಾಗಿದ್ದು, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಸಿಎಂ ಮಾಡುವಂತೆ…