೯ ಕಿ.ಮೀ.ನಷ್ಟು ರಸ್ತೆ ಸಂಪೂರ್ಣ ಹದಗೆಟ್ಟು ವಾಹನ ಸಂಚಾರಕ್ಕೆ ತೀವ್ರ ಅಡಚಣೆ
ಮಹಾದೇಶ್ ಎಂ.ಗೌಡ
ಹನೂರು: ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತೀವ್ರ ಹದಗೆಟ್ಟಿರುವುದರಿಂದ ವಾಹನಗಳ ಸಂಚಾರ ದುಸ್ತರವಾಗಿದೆ.
೨ ವರ್ಷಗಳ ಹಿಂದೆ ಹನೂರು ಪಟ್ಟಣದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಮಹದೇಶ್ವರ ಬೆಟ್ಟದ ರಸ್ತೆಗೆ ೧೦೦ ಕೋಟಿ ರೂ. ಅನುದಾನ ನೀಡುವುದಾಗಿ ಘೋಷಣೆ ಮಾಡಿದ್ದರು. ಇದು ಕೇವಲ ಭರವಸೆಗೆ ಮಾತ್ರ ಸೀಮಿತವಾಯಿತು.
ಇದಾದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ೧೯ ತಿಂಗಳುಗಳು ಕಳೆದಿದ್ದರೂ ಇದುವರೆಗೂ ಈ ರಸ್ತೆ ಅಭಿವೃದ್ಧಿಗೆ ಅನುದಾನ ನೀಡಿಲ್ಲ.
ರಸ್ತೆಯುದ್ದಕ್ಕೂ ಗುಂಡಿಗಳಾಗಿ ಪ್ರತಿನಿತ್ಯ ಒಂದಲ್ಲ ಒಂದು ಅಪಘಾತಗಳು ಸಂಭವಿಸುತ್ತಿವೆ. ತಾಳಬೆಟ್ಟದಿಂದ ಮ.ಬೆಟ್ಟದ ವರೆಗಿನ ೯ ಕಿ.ಮೀ. ರಸ್ತೆ ಸಂಪೂರ್ಣ ಹಾಳಾಗಿದ್ದು ಮಳೆಗಾಲದ ಸಂದರ್ಭದಲ್ಲಿ ವಾಹನಗಳು ಸಂಚರಿಸುವುದೇ ಕಷ್ಟವಾಗಿದೆ.
ಅರಣ್ಯ ಪ್ರದೇಶದಲ್ಲಿ ರಸ್ತೆ ಅಗಲೀಕರಣ ಸಾಧ್ಯವಾಗದೇ ಇರುವುದರಿಂದ ಕೆಲವು ಕಡೆ ಮಳೆಯಿಂದ ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ಕೊಚ್ಚಿಕೊಂಡು ಹೋಗಿದ್ದು, ಒಂದು ವಾಹನ ಮುಂದೆ ಹೋದ ನಂತರವಷ್ಟೇ ಇನ್ನೊಂದು ವಾಹನ ಸಂಚರಿಸಬೇಕಾಗಿದೆ. ಇದರಿಂದ ಜಾತ್ರಾ ಸಂದರ್ಭಗಳಲ್ಲಿ ಅಧಿಕ ಸಂಚಾರ ಸಮಸ್ಯೆ ಉಂಟಾಗಿ ಭಕ್ತರು ಪರದಾಡುತ್ತಿದ್ದಾರೆ. ಅದರಲ್ಲೂ ಹಬ್ಬ, ಅಮಾವಾಸ್ಯೆ ಜಾತ್ರೆ ಸಂದರ್ಭಗಳಲ್ಲಿ ಸಮಸ್ಯೆ ಹೆಚ್ಚಾಗಿದೆ.
ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮುಖ್ಯಮಂತ್ರಿ ಸಿದ್ದರಾಮಯ್ಯರವರೇ ಆಗಿದ್ದಾರೆ. ಜತೆಗೆ ಮುಂಬರುವ ಜನವರಿ ತಿಂಗಳಿನಲ್ಲಿ ಮ.ಬೆಟ್ಟದಲ್ಲಿಯೇ ಸಂಪುಟ ಸಭೆ ನಡೆಸುವುದಾಗಿ ಸಿದ್ದರಾಮಯ್ಯ ಈಗಾಗಲೇ ಘೋಷಣೆ ಮಾಡಿರುವುದರಿಂದ ಕ್ಷೇತ್ರದ ಗ್ರಾಮೀಣ ಭಾಗದ ರಸ್ತೆಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಕ್ಷೇತ್ರದ ಮತದಾರರು ಮನವಿ ಮಾಡಿದ್ದಾರೆ.
ಮಹದೇಶ್ವರ ಬೆಟ್ಟಕ್ಕೆ ಪ್ರತಿನಿತ್ಯ ಭಕ್ತರು ಆಗಮಿಸುತ್ತಿದ್ದಾರೆ. ಅವರಿಗೆ ಅವಶ್ಯವಿರುವ ರಸ್ತೆಯನ್ನು ಅಭಿವೃದ್ಧಿಪಡಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಇದರಿಂದ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಶೀಘ್ರವಾಗಿ ಮಹದೇಶ್ವರ ಬೆಟ್ಟದವರೆಗಿನ ರಸ್ತೆ ಅಭಿವೃದ್ಧಿಪಡಿಸಬೇಕು.
-ಚೇತನ್, ಬಂಡಳ್ಳಿ ನಿವಾಸಿ
ಹನೂರಿನಿಂದ ಪಾಲಾರ್ ಗ್ರಾಮದವರೆಗೆ ಕೆ-ಶಿಪ್ ಯೋಜನೆಯಡಿ ರಸ್ತೆ ಅಭಿವೃದ್ಧಿಪಡಿಸಲು ಈಗಾಗಲೇ ಕ್ರಿಯಾಯೋಜನೆ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ತಾತ್ಕಾಲಿಕವಾಗಿ ಹನೂರಿನಿಂದ ಮ.ಬೆಟ್ಟದವರೆಗಿನ ೪೨ ಕಿ.ಮೀ. ರಸ್ತೆಗೆ ಡಾಂಬರು ಹಾಕಲು ೧೫ ಕೋಟಿ ರೂ. ಅನುದಾನ ಮಂಜೂರಾಗಿದ್ದು ಮಳೆ ನಿಂತ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದು.
-ಚಿನ್ನಣ್ಣ, ಎಇಇ, ಲೋಕೋಪಯೋಗಿ ಇಲಾಖೆ
ಮದ್ದೂರು : ತಾಲ್ಲೂಕಿನ ನಿಡಘಟ್ಟದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕಾರು ಸುಟ್ಟುಹೋಗಿದ್ದು, ಅದೃಷ್ಟವಶಾತ್…
ಮೈಸೂರು : ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಅಡುಗೆ ಎಣ್ಣೆಗಳು, ಅವುಗಳ ಆರೋಗ್ಯ ಲಾಭಗಳ ಕಾರಣದಿಂದ ಮತ್ತೆ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿವೆ.…
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು (ಜ.8) ನಡೆದ 2026ನೇ ಸಾಲಿನ 2ನೇ ಸಚಿವ ಸಂಪುಟದ ಸಭೆಯಲ್ಲಿ…
ಮಂಡ್ಯ : ನಗರಕ್ಕೆ ಹೈಟೆಕ್ ಸ್ಪರ್ಶ ನೀಡಲು ಮುಂದಾಗಿರುವ ಶಾಸಕ ಪಿ. ರವಿಕುಮಾರಗೌಡ ಅವರು, ಒಕ್ಕಲಿಗ ಜನಾಂಗದ ಹಲವು ವರ್ಷಗಳ…
ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಗರದಲ್ಲಿ ಬೀದಿಬದಿ ವ್ಯಾಪಾರಿಗಳ ವಲಯ ನಿರ್ಮಿಸಲು ಆದ್ಯತೆ ನೀಡಲಾಗುವುದು…
ಬೆಂಗಳೂರು : ಹಣಕಾಸು ಇಲಾಖೆ ಅನುಮತಿ ನೀಡಿದ ತಕ್ಷಣವೇ 2025ರ ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಗೃಹಲಕ್ಷ್ಮೀ ಯೋಜನೆಯ ಹಣವನ್ನು…