Andolana originals

ದಸರಾ: ಜನರ ಸುರಕ್ಷತೆಗೆ ಆದ್ಯತೆ ನೀಡಿ

ನವೀನ್ ಡಿಸೋಜ

ಆಚರಣೆ ವೇಳೆ ನಿಯಮ ಪಾಲಿಸುವಂತೆ ಪೊಲೀಸ್ ಇಲಾಖೆಯಿಂದ ಹಲವು ಸೂಚನೆ 

ಮಡಿಕೇರಿ: ಐತಿಹಾಸಿಕ ಮಡಿಕೇರಿ ದಸರಾ ಆಚರಣೆ ಸಂಬಂಧವಾಗಿ ಪೊಲೀಸ್ ಇಲಾಖೆಯಿಂದ ಮಹತ್ವದ ಆದೇಶ ಹೊರಡಿಸಲಾಗಿದ್ದು, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚನೆ ನೀಡಲಾಗಿದೆ.

ಸೆ.೨೨ರಿಂದ ಮಡಿಕೇರಿ ದಸರಾ ಕಾರ್ಯಕ್ರಮಗಳು ಆರಂಭವಾಗಲಿವೆ. ಪ್ರತಿದಿನ ವಿಭಿನ್ನ ಕಾರ್ಯಕ್ರಮಗಳು ನಡೆಯಲಿದ್ದು, ದಸರಾ ಸಾಂಸ್ಕೃತಿಕ ಸಮಿತಿ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಅ.೨ರಂದು ರಾತ್ರಿ ದಶಮಂಟಪಗಳ ಶೋಭಾಯಾತ್ರೆ ನಡೆಯಲಿದ್ದು, ಲಕ್ಷಾಂತರ ಮಂದಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಅಗತ್ಯ ಮುನ್ನೆ ಚ್ಚರಿಕಾ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ತಿಳಿಸಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಅಹಿತಕರ ಘಟನೆ ನಡೆದಿರುವ ಹಿನ್ನೆಲೆಯಲ್ಲಿ ಆಯೋಜಕರಿಗೆ ಕೆಲವು ನಿಯಮಗಳನ್ನು ಪಾಲಿಸಬೇಕೆಂದು ಸೂಚನೆ ನೀಡಲಾಗಿದೆ. ಮಡಿಕೇರಿ ದಸರಾ ಮೆರವಣಿಗೆಯ ವೀಕ್ಷಣೆಗಾಗಿ ಬರುವ ಸಾರ್ವಜನಿಕರು, ವಿಶೇಷವಾಗಿ ಹಿರಿಯ ನಾಗರಿಕರ, ಮಹಿಳೆಯರ ಹಾಗೂ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ದಸರಾ ಮೆರವಣಿಗೆ ಸಾಗುವ ರಸ್ತೆಗಳಲ್ಲಿನ ಜನವಸತಿ ಪ್ರದೇಶಗಳಲ್ಲಿ ವಾಸಿಸುವ ಹಾಗೂ ಕೂಗಳತೆಯ ದೂರದಲ್ಲಿರುವ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಗರ್ಭಿಣಿಯರ, ಹಿರಿಯರ ಸುರಕ್ಷತೆಯ ನಿಟ್ಟಿನಲ್ಲಿ ಮಡಿಕೇರಿ ದಸರಾ ಸಮಿತಿ ಹಾಗೂ ದಶಮಂಟಪ ಸಮಿತಿಯವರು ಕಡ್ಡಾಯವಾಗಿ ಸೂಚನೆಗಳನ್ನು ಪಾಲಿಸಬೇಕೆಂದು ಆದೇಶಿಸಲಾಗಿದೆ.

ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ರಿಟ್ ಪೆಟಿಷನ್ ನಂ.೨೩೩೮೫/೨೦೨೩ರ ಆದೇಶವನ್ನು ಪಾಲನೆ ಮಾಡಬೇಕು. ಧ್ವನಿವರ್ಧಕ, ಮ್ಯೂಸಿಕ್ ಸಿಸ್ಟಮ್‌ಅನ್ನು ನಿರ್ದಿಷ್ಟಪಡಿಸಿದ ಸಮಯ ಹಾಗೂ ಡೆಸಿಬಲ್‌ಗಳಂತೆ ಬಳಸಬೇಕು. ಮೆರವಣಿಗೆಯಲ್ಲಿ ಸಾಗುವ ಮಂಟಪಗಳನ್ನು ಟ್ರಾಕ್ಟರ್, ಟ್ರೈಲರ್‌ಗಳ ಮೇಲೆ ಭಾರತೀಯ ಮೋಟಾರು ವಾಹನ ಕಾಯಿದೆ-೧೯೮೮ರ ನಿಯಮಗಳಂತೆ ತಯಾರಿಸಬೇಕು.

ದಶ ಮಂಟಪಗಳ ನಿರ್ಮಾಣದ ಸಮಯದಲ್ಲಿ (ದಸರಾ ದಿನದ ಹಿಂದಿನ ದಿನಗಳಲ್ಲಿ) ಜನರ ಓಡಾಟಕ್ಕೆ ತೊಂದರೆ ಆಗುವ ರೀತಿಯಲ್ಲಿ ಸಾರ್ವಜನಿಕ ರಸ್ತೆಗಳನ್ನು ಬಳಸಬಾರದು. ಮಂಟಪಗಳನ್ನು ಅವುಗಳ ಸ್ಥಿರತೆಯ ಬಗ್ಗೆ ತಾಂತ್ರಿಕ ಪರಿಣತರಿಂದ ದೃಢೀಕರಿಸಿದ ನಂತರವೇ ಸಾರ್ವಜನಿಕ ರಸ್ತೆಗೆ ತರಬೇಕು. ಮಂಟಪಗಳನ್ನು ಹಾಗೂ ಕಲಾಕೃತಿಗಳನ್ನು ಅತಿ ಎತ್ತರವಾಗಿ ನಿರ್ಮಿಸುವುದರಿಂದ ಮೆರವಣಿಗೆ ಸಾಗುವ ಮಾರ್ಗದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳಿಗೆ ಮಂಟಪಗಳು ಹಾಗೂ ಕಲಾಕೃತಿಗಳು ತಾಗಿ ವಿದ್ಯುತ್ ಅವಘಡ ಸಂಭವಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಎತ್ತರವನ್ನು ಮಿತಿಗೊಳಿಸಬೇಕು.

ದಶಮಂಟಪಗಳ ಕಥಾ ಪ್ರದರ್ಶನವನ್ನು ಸಾಕಷ್ಟು ಸ್ಥಳಾವಕಾಶ ಇರುವ ಕಡೆಗಳಲ್ಲಿ ಯಾವುದೇ ಕಾಲ್ತುಳಿತ ಹಾಗೂ ಇತರೆ ಅವಘಡಗಳಿಗೆ ಅವಕಾಶ ಆಗದಂತೆ ಪ್ರದರ್ಶಿಸಬೇಕು. ದಶಮಂಟಪಗಳ ಕಥಾ ಪ್ರದರ್ಶನದ ಸಮಯದಲ್ಲಿ ಸಿಡಿಮದ್ದು, ಬೆಂಕಿಯ ಜ್ವಾಲೆ, ಬಿರುಸುಬಾಣಗಳನ್ನು ಬಳಸುವುದರಿಂದ ಬೆಂಕಿ ಅವಘಡ ಸಂಭವಿಸಿ ನೆರೆಯುವ ಜನರು ಕಾಲ್ತುಳಿತಕ್ಕೆ ಸಿಲುಕುವ ಸಾಧ್ಯತೆ ಇರುವುದರಿಂದ ಇವುಗಳನ್ನು ಬಳಸದಂತೆ ಕ್ರಮವಹಿಸುವುದು ಹಾಗೂ ಅಗ್ನಿ ನಿಯಂತ್ರಣ ಸಾಮಗ್ರಿಗಳನ್ನು ಪ್ರತಿ ಮಂಟಪಗಳಲ್ಲಿ ಕಡ್ಡಾಯವಾಗಿ ಇರಿಸಿಕೊಳ್ಳಬೇಕು.

ಏಕರೂಪ ಸಮಾಧಾನಕರ ಬಹುಮಾನ ನೀಡಿ…: 

ದಶ ಮಂಟಪಗಳ ಮೆರವಣಿಗೆಯಲ್ಲಿ ಭಾಗವಹಿಸುವ ಮಂಟಪಗಳನ್ನು ತೀರ್ಪುಗಾರರು ವೀಕ್ಷಿಸಿ ಅವುಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡುವುದು ವಾಡಿಕೆ. ಆಯಾಯ ಮಂಟಪಗಳ ಉಸ್ತುವಾರಿ ಸಮಿತಿಯವರು ತೀರ್ಪುಗಾರರ ತೀರ್ಪನ್ನು ಪ್ರತಿಷ್ಠೆಯನ್ನಾಗಿ ಪರಿಗಣಿಸಿ ಮಂಟಪ ಸಮಿತಿಗಳ ನಡುವೆ ಪೈಪೋಟಿ ನಡೆಸಿ ಪ್ರಥಮ ಸ್ಥಾನಕ್ಕಾಗಿ ಮಂಟಪ ಹಾಗೂ ಕಲಾಕೃತಿಗಳ ಗಾತ್ರಗಳನ್ನು ಹೆಚ್ಚಿಸಿ ಅವೈಜ್ಞಾನಿಕ ವಿಧಾನಗಳನ್ನು ಬಳಸುವುದಲ್ಲದೆ, ಸಿಡಿಮದ್ದು ಹಾಗೂ ಪಟಾಕಿಯನ್ನು ಹೆಚ್ಚಾಗಿ ಬಳಸಿ ಮತ್ತು ಹೆಚ್ಚು ಧ್ವನಿ ಹೊಮ್ಮುವ ಧ್ವನಿವರ್ಧಕಗಳನ್ನು (ಡಿಜೆ) ಹಾಗೂ ಹೆಚ್ಚು ಹೊಗೆ ಹೊಮ್ಮುವ ಉಪಕರಣಗಳನ್ನು ಬಳಸಿ ವಾಯುಮಾಲಿನ್ಯ, ಶಬ್ದ ಮಾಲಿನ್ಯ ಮಾಡುವುದು ಕಂಡು ಬಂದಿದೆ. ಅಲ್ಲದೆ, ತೀರ್ಪನ್ನು ಪ್ರಕಟಿಸಿದ ನಂತರ ಮಂಟಪಗಳ ಸಮಿತಿಯವರು ಪರಸ್ಪರ ಜಗಳ ಮಾಡಿಕೊಂಡು ಸಾರ್ವಜನಿಕರ ಸುರಕ್ಷತೆಗೆ ಹಾಗೂ ಕಾನೂನು ಸುವ್ಯಸ್ಥೆಗೆ ಧಕ್ಕೆ ಉಂಟು ಮಾಡುವುದು ಹಾಗೂ ದಸರಾ ಆಚರಣೆಯ ಸಂತರ ಮಂಟಪಗಳನ್ನು ರಸ್ತೆಯಲ್ಲಿಯೇ ಬಿಟ್ಟು ವಾಹನ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿರುವುದರಿಂದ ಉತ್ತಮ ಕಲಾಕೃತಿಯ ಆಯ್ಕೆಯ ಪ್ರಕ್ರಿಯೆಯನ್ನು ಕೈಬಿಟ್ಟು ಎಲ್ಲಾ ಮಂಟಪಗಳಿಗೂ ಏಕರೂಪ ಸಮಾಧಾನಕರ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸುವ ಬಗ್ಗೆ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಸಲಹೆ ಮಾಡಿದೆ.

” ದಸರಾ ಆಚರಣೆ ಸಂದರ್ಭದಲ್ಲಿ ಜನರ ಸುರಕ್ಷತೆಗೆ ಆದ್ಯತೆ ನೀಡಬೇಕಾಗಿದೆ. ಹೀಗಾಗಿ ಪೊಲೀಸ್ ಇಲಾಖೆಯ ಎಲ್ಲಾ ಸೂಚನೆಗಳನ್ನು ಪಾಲಿಸಬೇಕು. ಇತಿಹಾಸ ಪ್ರಸಿದ್ಧ ಮಡಿಕೇರಿ ದಸರಾ ಮಹೋತ್ಸವವನ್ನು ಕಣ್ತುಂಬಿಸಿಕೊಳ್ಳಲು ರಾಜ್ಯದ ವಿವಿಧೆಡೆಗಳಿಂದ ಬರುವ ಜನರ ಹಕ್ಕುಗಳಿಗೆ ಧಕ್ಕೆಯಾಗದಂತೆ ಎಲ್ಲರ ಸುರಕ್ಷತೆಗೆ ಆದ್ಯತೆ ನೀಡುವ ಮೂಲಕ ದಸರ ಆಚರಣೆಯನ್ನು ಯಶಸ್ವಿಯಾಗಿಸಲು ಸಹಕರಿಸಬೇಕು.”

-ಕೆ.ರಾಮರಾಜನ್, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಆಂದೋಲನ ಡೆಸ್ಕ್

Recent Posts

ಹಣ ದ್ವಿಗುಣಗೊಳಿಸುವುದಾಗಿ ೨೮ ಲಕ್ಷ ರೂ. ವಂಚನೆ; ದೂರು ದಾಖಲು

ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…

9 hours ago

ಅಂಬಳೆ: ಚಾಮುಂಡೇಶ್ವರಿ ದೇಗುಲದಲ್ಲಿ ಕಳ್ಳತನ

ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…

9 hours ago

ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ ಬೆನ್ನಲ್ಲೇ ಪೈಲಟ್‌ಗಳ ರಜಾ ನಿಯಮ ಸಡಿಲಿಸಿದ ಡಿಜಿಸಿಎ

ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…

10 hours ago

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ: ಸತೀಶ್‌ ಜಾರಕಿಹೊಳಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…

11 hours ago

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಬೋಧನೆ: ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಎಚ್‌ಡಿಕೆ ಪತ್ರ

ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…

12 hours ago

ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ: ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು

ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…

12 hours ago