ದಿನೇಶ್ ಕುಮಾರ್ ಎಚ್.ಎಸ್
ಮೂರು ದಿನಗಳಲ್ಲಿ ಚಾಮುಂಡಿಬೆಟ್ಟ, ಅರಮನೆ, ಮೃಗಾಲಯಗಳಿಗೆ ಸಾವಿರಾರು ಜನರ ಭೇಟಿ
ಮೈಸೂರು: ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಮೈಸೂರಿಗೆ ಪ್ರವಾಸಿಗರು ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದಾರೆ.
ಕಳೆದ ಮೂರು ದಿನಗಳಲ್ಲಿ ಲಕ್ಷಾಂತರ ಮಂದಿ ಪ್ರವಾಸಿಗರು ಮೈಸೂರಿಗೆ ಭೇಟಿ ನೀಡಿದ್ದು, ವಿವಿಧ ಪ್ರವಾಸಿ ತಾಣಗಳಿಗೆ ಲಗ್ಗೆ ಇಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಜೆಯಾಯಿತೆಂದರೆ ನಗರದ ಹೃದಯ ಭಾಗದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಾಣಿಸಿಕೊಳ್ಳುತ್ತಿದೆ.
ದಸರಾ ಅಂಗವಾಗಿ ಕುಪ್ಪಣ್ಣ ಪಾರ್ಕ್ನಲ್ಲಿ ಫಲಪುಷ್ಪ ಪ್ರದರ್ಶನ, ಮಹಾರಾಜ ಕಾಲೇಜು ಮೈದಾನದಲ್ಲಿ ಆಹಾರ ಮೇಳ, ಉತ್ತನಹಳ್ಳಿ ಸಮೀಪ ಯುವ ದಸರಾ, ಪುಸ್ತಕ ಮೇಳ, ಪುರಭವನ, ಕಲಾಮಂದಿರ ಸೇರಿದಂತೆ ವಿವಿಧ ಕಡೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಹೀಗಾಗಿ ಸಾಹಿತ್ಯ, ನಾಟಕಾಸಕ್ತರು ಸಂಜೆಯಾಯಿತೆಂದರೆ ವಿವಿಧ ಕಾರ್ಯಕ್ರಮಗಳಿಗೆ ಭೇಟಿ ನೀಡುತ್ತಿದ್ದಾರೆ. ಶಾಲಾ-ಕಾಲೇಜುಗಳಿಗೆ ದಸರಾ ರಜೆ ನೀಡಿರುವುದರಿಂದ ಸಾಕಷ್ಟು ಮಂದಿ ನಗರಕ್ಕೆ ಭೇಟಿ ನೀಡುತ್ತಿದ್ದಾರೆ.
ಇದರ ಜೊತೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರದ ಕಾರಣ ಸಂಜೆಯಾಯಿತೆಂದರೆ ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ, ಧನ್ವಂತ್ರಿ ರಸ್ತೆ, ಅಶೋಕ ರಸ್ತೆ, ಅರಮನೆ ಮುಂಭಾಗ, ಗನ್ಹೌಸ್ ರಸ್ತೆಗಳಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ಇದರಿಂದ ಸಂಜೆ ೬ ಗಂಟೆ ನಂತರ ರಾತ್ರಿ ೧೧ ಗಂಟೆವರೆಗೆ ಎಲ್ಲೆಡೆ ಸಂಚಾರ ದಟ್ಟಣೆ ಉಂಟಾಗುತ್ತಿದೆ.
ವಸ್ತುಪ್ರದರ್ಶನ ಆವರಣ ಹಾಗೂ ಅರಮನೆ ಪಕ್ಕದಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿದ್ದರೂ ಜಾಗದ ಕೊರತೆಯಿಂದ ಇಟ್ಟಿಗೆಗೂಡು ಹಾಗೂ ಇನ್ನಿತರ ಪ್ರದೇಶಗಳ ಸಣ್ಣ ಸಣ್ಣ ರಸ್ತೆಗಳಲ್ಲಿ ಚಾಲಕರು ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಪೊಲೀಸರು ಹೈರಾಣ: ದಸರಾ ಕಾರ್ಯಕ್ರಮಗಳು ನಡೆಯುತ್ತಿರುವ ಸ್ಥಳಗಳಲ್ಲಿ ಈಗಾಗಲೇ ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿದೆ. ನಾಲ್ಕು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಸುಗಮ ಸಂಚಾರ ಕಲ್ಪಿಸಲು ಪ್ರತಿದಿನ ಸಂಜೆ ಪೊಲೀಸರು ಹೈರಾಣರಾಗುತ್ತಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ಸಿಗ್ನಲ್ಗಳನ್ನು ಬಂದ್ ಮಾಡಿ ಪೊಲೀಸರೇ ಸಂಚಾರ ನಿರ್ವಹಣೆ ಮಾಡುತ್ತಿದ್ದಾರೆ.
ಮಫ್ತಿಯಲ್ಲಿ ಪೊಲೀಸರು: ಇನ್ನು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ಅಪರಾಧ ವಿಭಾಗದ ಪೊಲೀಸರನ್ನು ನಗರದ ಪ್ರಮುಖ ಸ್ಥಳಗಳಲ್ಲಿ ಗಸ್ತಿಗೆ ನಿಯೋಜಿಸಲಾಗಿದೆ. ಅಪರಾಧ, ವೇಶ್ಯಾವಾಟಿಕೆ, ಗಾಂಜಾ ಹಾಗೂ ಇನ್ನಿತರೆ ಮಾದಕ ವಸ್ತುಗಳ ಮಾರಾಟದ ಉದ್ದೇಶವನ್ನಿಟ್ಟುಕೊಂಡು ನಗರಕ್ಕೆ ಆಗಮಿಸುವ ದುಷ್ಕರ್ಮಿಗಳ ಬಗ್ಗೆ ಮಫ್ತಿಯಲ್ಲಿರುವ ಪೊಲೀಸರು ವಿಶೇಷ ಗಮನ ಹರಿಸಲಿದ್ದಾರೆ.
ಬೆಟ್ಟದಲ್ಲಿ ಜನಜಂಗುಳಿ: ಇನ್ನು ನಗರದ ಪ್ರಮುಖ ಪ್ರವಾಸಿ ತಾಣವಾದ ಚಾಮುಂಡಿಬೆಟ್ಟದಲ್ಲಿ ಜನಜಂಗುಳಿ ಹೆಚ್ಚೇ ಇದೆ. ಮುಂಜಾನೆಯಿಂದ ರಾತ್ರಿ ೧೦ ಗಂಟೆವರೆಗೂ ಸಾವಿರಾರು ಮಂದಿ ಬೆಟ್ಟಕ್ಕೆ ಭೇಟಿ ನೀಡುತ್ತಿದ್ದಾರೆ. ಅಲ್ಲಿಯೂ ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿದೆ.
” ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಸುಮಾರು ೩ ಲಕ್ಷ ಮಂದಿ ಭಕ್ತರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಬೆಟ್ಟಕ್ಕೆ ಆಗಮಿಸುವವರಿಗೆ ಕುಡಿಯುವ ನೀರು, ಮಧ್ಯಾಹ್ನದ ಪ್ರಸಾದ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಪ್ರಾಧಿಕಾರದ ವತಿಯಿಂದ ಕಲ್ಪಿಸಲಾಗಿದೆ.”
ಎಂ.ಜೆ.ರೂಪ, ಕಾರ್ಯದರ್ಶಿ, ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ
” ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಅರಮನೆಗೆ ೨೯,೫೨೫ ಮಂದಿ ಭೇಟಿ ನೀಡಿದ್ದಾರೆ. ಕಳೆದ ಸಾಲಿಗೆ ಹೋಲಿಸಿದಲ್ಲಿ ಈ ಬಾರಿ ಅರಮನೆಗೆ ಭೇಟಿ ನೀಡಿದವರ ಸಂಖ್ಯೆ ಹೆಚ್ಚಳವಾಗಿದೆ. ಇದನ್ನು ಹೊರತುಪಡಿಸಿ ಸಂಜೆ ನಡೆಯುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸುತ್ತಿದ್ದಾರೆ.”
ಟಿ.ಎಸ್.ಸುಬ್ರಹ್ಮಣ್ಯ, ಉಪ ನಿರ್ದೇಶಕ, ಅರಮನೆ ಮಂಡಳಿ
” ಭಾನುವಾರದಿಂದ ಬುಧವಾರದವರೆಗೆ ಸುಮಾರು ೪೬ ಸಾವಿರ ಮಂದಿ ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ಭೇಟಿ ನೀಡಿದವರ ಸಂಖ್ಯೆ ಹೆಚ್ಚಳವಾಗಿದೆ. ಪ್ರವಾಸಿಗರಿಗೆ ತೊಂದರೆ ಆಗದಂತೆ ಹಾಗೂ ಅವರ ಸುರಕ್ಷತೆಗೆ ಬೇಕಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಬೆಳಿಗ್ಗೆ ೮.೩೦ ರಿಂದ ಸಂಜೆ ೫.೩೦ರವರೆಗೆ ಪ್ರವಾಸಿಗರಿಗೆ ಮೃಗಾಲಯ ತೆರೆದಿರುತ್ತದೆ.”
ಪಿ.ಅನುಷಾ, ಕಾರ್ಯನಿರ್ವಾಹಕ ನಿರ್ದೇಶಕರು, ಚಾಮರಾಜೇಂದ್ರ ಮೃಗಾಲಯ
ಇಂದಿನ ಡಿಜಿಟಲ್ ಯುಗದಲ್ಲಿ ಟಿವಿ ಮತ್ತು ಚಲನಚಿತ್ರಗಳಿಗಿಂತ ಸಾಮಾಜಿಕ ಜಾಲತಾಣಗಳು ಅತಿ ಹೆಚ್ಚು ಜನರನ್ನು, ವಿಶೇಷವಾಗಿ ಯುವ ಜನತೆ ಮತ್ತು…
ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ಮೈಸೂರು ನಗರದ ೧೨೩ ವೃತ್ತಗಳು, ೧೪೬ ಕಿ.ಮೀ.…
ದೇಶದಲ್ಲಿ ನೀಟ್ ಸೇರಿದಂತೆ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ವಂಚನೆಯನ್ನು ತಡೆಯಲು, ಪರೀಕ್ಷೆ ದಿನದಂದೇ ಕೃತಕ ಬುದ್ಧಿಮತ್ತೆಯನ್ನು…
ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ನಯವಾಗಿ ಮಾಹಿತಿ ಪಡೆದು ಬಿಡದಿ ಟೋಲ್ ಬಳಿ ಲಾಕ್ ಮಾಡಿದ ಪೊಲೀಸರು ಏನಿದು ನಿಜ…
ಚಿರಂಜೀವಿ ಎಸ್.ಹುಲ್ಲಹಳ್ಳಿ ದಸರಾ ಹಬ್ಬಗಳಲ್ಲಿ ಸಾಲಾನೆಯಾಗಿದ್ದವನು; ೧೮ ವರ್ಷಗಳ ಬಳಿಕ ಚಿನ್ನದ ಅಂಬಾರಿ ಹೊರುವ ಅವಕಾಶ ಮೈಸೂರು: ಕಾಡಾನೆ, ಹುಲಿ…