ಕೆ.ಬಿ.ರಮೇಶನಾಯಕ
ಜಾಗ ಬದಲಾವಣೆಯಿಂದ ಯುವ ದಸರಾಕ್ಕೆ ಹರಿದುಬಂದ ಜನಸಾಗರ
ಅರಮನೆ ಆವರಣದಲ್ಲಿ ಜಂಬೂಸವಾರಿ ಮಾರ್ಗ 400 ಮೀಟರ್ ವಿಸ್ತರಣೆಯಿಂದ ಕಡಿಮೆಯಾದ ಒತ್ತಡ
ಸಿಎಂ ಆಣತಿಯಂತೆ ಅಚ್ಚುಕಟ್ಟಾಗಿ ನಡೆಸಿದ ಸಚಿವ ಎಚ್‌ಸಿಎಂ
ಮೈಸೂರು: ಪರಂಪರೆಯ ಸಂಪ್ರದಾಯ ಮುಂದು ವರಿಕೆಯ ಜತೆಗೆ ಹೊಸಹೊಸ ಪ್ರಯೋಗಗಳಿಂದ ವರ್ಷ ದಿಂದ ವರ್ಷಕ್ಕೆ ಜನರನ್ನು ಆಕರ್ಷಿಸುತ್ತಿರುವ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಈ ಬಾರಿ ಮಾಡಿದ ಒಂದೇ ಒಂದು ಪ್ರಯೋಗ ಯಶಸ್ವಿಯಾಗಿದ್ದರ ಪರಿಣಾಮವಾಗಿ ದಸರಾ ಮಹೋತ್ಸವದ ಸಂಭ್ರಮದದಿಕ್ಕೇ ಬದಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಅವರ ಮನದಲ್ಲಿ ಮೂಡಿದ ಪ್ರಯೋಗ ಸಫಲವಾಗಿದ್ದರಿಂದಾಗಿ ಯುವ ದಸರಾ ಮತ್ತು ಅರಮನೆ ಆವರಣದಲ್ಲಿ ಹೆಚ್ಚುವರಿ ಸೀಟುಗಳ ವ್ಯವಸ್ಥೆಯಿಂದ ಮತ್ತಷ್ಟು ಜನರಿಗೆ ವೀಕ್ಷಣೆ ಭಾಗ್ಯ ದೊರೆತಂತಾಗಿದೆ. ಜಾಗದ ಬದಲಾವಣೆಯಿಂದಾಗಿ ಮೈಸೂರಿನ ಇತಿಹಾಸದ ಪುಟಗಳಲ್ಲಿ ದಾಖಲಾಗುವಂತಹ ಜನರು ಯುವದಸರೆಯಲ್ಲಿ ಭಾಗವಹಿಸಿದ್ದು ವಿಶೇಷವಾದರೆ, ಆಹಾರ ಮೇಳಕ್ಕೆ ಉಂಟಾಗುತ್ತಿದ್ದ ನೂಕುನುಗ್ಗಲಿಗೂ ಬ್ರೇಕ್ ಬಿದ್ದಿದಂತಾಗಿದೆ. ಜೊತೆಗೆ ನವರಾತ್ರಿಯ ಸಂದರ್ಭದಲ್ಲಿ ಸಂಚಾರ ನಿರ್ವಹಣೆಯಲ್ಲಿ ಆಗುತ್ತಿದ್ದ ದೊಡ್ಡ ಸಮಸ್ಯೆ ನಿವಾರಣೆಯಾಗಿದೆ.
ಮುಂದಿನ ವರ್ಷಗಳಲ್ಲಿ ಇದೇ ಫಾರ್ಮುಲಾ ಇಟ್ಟುಕೊಂಡು ಕಾರ್ಯಕ್ರಮ ರೂಪಿಸುವ ಜತೆಗೆ ಆಗಿರುವ ಸಣ್ಣಪುಟ್ಟ ಲೋಪಗಳನ್ನು ಸರಪಡಿಸಿಕೊಂಡರೆ ದೊಡ್ಡ ಮಟ್ಟದ ಕಾರ್ಯಕ್ರಮ ಮಾಡಿದರೂ ಹೆದರುವ ಪ್ರಮೇಯವೇ ಬರುವುದಿಲ್ಲ ಎನ್ನುವುದಕ್ಕೆ ಇದೊಂದು ಪ್ರಯೋಗ ಸಾಕ್ಷಿಯಾಗಿದೆ.
ದಸರಾ ಜನರ ದಸರಾವಾಗಿರಬೇಕೆಂಬ ಆಲೋಚನೆ ಇಟ್ಟುಕೊಂಡು ಕಾರ್ಯಕ್ರಮ ರೂಪಿಸಬೇಕೆಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಣತಿಯಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಲವಾರು ಬದಲಾವಣೆಗೆ ಚಿಂತನೆ ನಡೆಸಿದ್ದರು.
ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿದ್ದ ಯುವ ದಸರಾವನ್ನು ರಿಂಗ್ ರಸ್ತೆಯ ಉತ್ತನಹಳ್ಳಿ ಗ್ರಾಮದ ಬಳಿ ಏರ್ಪಡಿಸಿ ಸಂಗೀತ ದಿಗ್ಗಜರನ್ನು ಆಹ್ವಾನಿಸುವಂತೆ ಸೂಚನೆ ನೀಡಿದ್ದರು. ಪ್ರಾರಂಭದಲ್ಲಿ ಸ್ವಲ್ಪ ಅಳುಕಿನಿಂದಲೇ ಇದ್ದ ಡಿಸಿ ಜಿ ಲಕ್ಷ್ಮೀಕಾಂತ್ ರೆಡ್ಡಿ ಅಧಿಕಾರಿಗಳೊಂದಿಗೆ ಹೊಸ ಪ್ರಯೋಗಕ್ಕೆ ಕೈ ಹಾಕಿ ಸಂಪೂರ್ಣ ಎಸಿ, ಹೊಣೆಯನ್ನು ವಹಿಸಿಕೊಟ್ಟಿದ್ದರು. ಅದರಂತೆ ಯುವ ದಸರಾ ವೀಕ್ಷಣೆಗೆ ಸುಮಾರು ಒಂದೂವರೆ ಲಕ್ಷ ಮಂದಿ ಭೇಟಿ ನೀಡಿದರೂ ಸಣ್ಣ ಸಮಸ್ಯೆಯೂ ಆಗದಂತೆ ಅಗತ್ಯವಿದ್ದ ಎಲ್ಲಾ ವ್ಯವಸ್ಥೆ ದಿನಗಳ ಮಾಡಿದ್ದರಿಂದ ಐದು ಯುವದಸರಾ ಯಶಸ್ವಿಯಾಗಿ ನಡೆಯಿತಲ್ಲದೆ, ಲಕ್ಷ ಲಕ್ಷ ಜನರು ಯುವ ದಸರಾ ವೈಭವವನ್ನು ಕಣ್ತುಂಬಿಕೊಂಡರು.
ಭಾರತ್ ಸೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ನಡೆಯುತ್ತಿದ್ದ ಆಹಾರ ಮೇಳವನ್ನು ಮಹಾರಾಜ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸಿ ಮಳಿಗೆಗಳನ್ನು ನಿರ್ಮಿಸಿಕೊಟ್ಟಿದ್ದರಿಂದ ಜನರು ನೆಮ್ಮದಿಯಿಂದ ಆಗಮಿಸಿ ತಮಗೆ ಬೇಕಾದ ತಿಂಡಿ-ತಿನಿಸು ಸವಿಯುವಂತಾದರೆ, ವ್ಯಾಪಾರವೂ ಜೋರಾಗಿ ಮಾಲೀಕರ ಕಿಸೆ ತುಂಬುವಂತಾಯಿತು. ಮತ್ತೊಂದೆಡೆ ಸರಿಯಾದ ಜಾಗ ಇಲ್ಲದೆ ಪರದಾಡುತ್ತಿದ್ದ ಪುಸ್ತಕ ಮೇಳಕ್ಕೂ ಈ ಬಾರಿಯಿಂದ ಹೊಸ ಜಾಗ ದೊರೆತಿರುವುದರಿಂದ ಪ್ರಕಾಶಕರು, ಮುದ್ರಕರಿಗೂ ಸ್ವಲ್ಪ ಅನುಕೂಲವಾಗಿದೆ.
ಅನುದಾನದ ಕೊರತೆ ನೀಗಿಸಿದ ಎಚ್‌ಸಿಎಂ
ಮೈಸೂರು: ದಸರಾ ಮಹೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದಾರವಾಗಿ ಅನುದಾನ ನೀಡಿರುವುದರ ಹಿಂದೆ ಡಾ. ಎಚ್.ಸಿ.ಮಹದೇವಪ್ಪ ಪ್ರಮುಖ ಪಾತ್ರವಹಿಸಿದ್ದರು. ಹೈ ಪವರ್ ಕಮಿಟಿ ತೀರ್ಮಾನದಂತೆ 40 ಕೋಟಿ ರೂ. ಅನುದಾನಕ್ಕೆ ಒಪ್ಪಿಗೆ ಕೊಡಿಸಿ ಅನುದಾನ ಬಿಡುಗಡೆ ಮಾಡಿಸಿದರು. ಖಾಸಗಿಯವರಿಂದಲೂ ಪ್ರಾಯೋಜಕತ್ವ ಬರುವಂತೆ ನೋಡಿಕೊಂಡರು.
ಅರಮನೆ ಆವರಣದಲ್ಲಿ ಸೀಟು ಸಂಖ್ಯೆ ಹೆಚ್ಚಳ…
ಮೈಸೂರು: ಅರಮನೆ ಆವರಣದಲ್ಲಿ ರೂಪಿಸಿದ ಹೊಸ ಪ್ರಯೋಗ ಯಶಸ್ವಿಯಾಗಿದ್ದು, ಒಂದಿಷ್ಟು ಸಮಸ್ಯೆಗಳನ್ನು ಸರಿಪಡಿಸಿಕೊಂಡಿದ್ದರಿಂದ ಜನರು ಜಂಬೂಸವಾರಿಯನ್ನು ಸುಲಭವಾಗಿ ವೀಕ್ಷಿಸಲು ಅನುಕೂಲವಾಯಿತು. ಅರಮನೆಯಲ್ಲಿ 25ರಿಂದ 30 ಸಾವಿರ ಮಂದಿ ಕೂರಲು ಅವಕಾಶ ಇದ್ದಿದ್ದರಿಂದ ಪಾಸ್‌ಗೆ ಭಾರೀ ಬೇಡಿಕೆ ಉಂಟಾಗುತ್ತಿತ್ತು. ಆದರೆ, ಈ ಬಾರಿ ಅಂಬಾರಿ ಕಟ್ಟಿದ ಮೇಲೆ ವರಾಹಸ್ವಾಮಿ, ಜೈಭುವನೇಶ್ವರಿ ದೇವಸ್ಥಾನದ ಮಾರ್ಗದ ಮೂಲಕ ಆಗಮಿಸಿದ್ದರಿಂದ ಹೆಚ್ಚುವರಿಯಾಗಿ 15 ಸಾವಿರ ಜನರು ಸುಲಭವಾಗಿ ಅಂಬಾರಿ ವೀಕ್ಷಣೆ ಮಾಡಲು ಸಾಧ್ಯವಾಯಿತು. ಅರಮನೆ ಆವರಣದಲ್ಲಿ ಇದ್ದ ಆಸನ ವ್ಯವಸ್ಥೆಯಿಂದ ಒಟ್ಟಾರೆ 60 ಸಾವಿರ ಮಂದಿ ಅಂಬಾರಿ ವೀಕ್ಷಣೆ ಮಾಡಿರಬಹುದೆಂದು ಅಂದಾಜಿಸಲಾಗಿದೆ. ವಿವಿಐಪಿ, ವಿಐಪಿಗಳ ಒತ್ತಡ ತಗ್ಗಿಸುವ ಜತೆಗೆ ಜನಸಾಮಾನ್ಯರಿಗೆ ಗೋಲ್ಡ್ ಕಾರ್ಡ್, ಟಿಕೆಟ್ ದೊರೆಯಲಿಲ್ಲ ಎನ್ನುವ ಅಪವಾದ ಇಲ್ಲದಂತೆ ಕೊನೆಯ ದಿನಗಳ ತನಕ ಆನ್‌ಲೈನ್ ನಲ್ಲಿ ಟಿಕೆಟ್ ಸಿಗುವಂತೆ ನೋಡಿಕೊಂಡಿದ್ದು ವಿಶೇಷ ದಸರಾ ಮುಗಿದ ಮೇಲೂ ಬರುವ ಪ್ರವಾಸಿಗರು ಮತ್ತು ಸ್ಥಳೀಯರ ಅನುಕೂಲಕ್ಕೆ ದೀಪಾಲಂಕಾರವನ್ನು 21 ದಿನಗಳ ಕಾಲ ಆಯೋಜಿಸಿರುವುದರಿಂದ ಒಂದಿಷ್ಟು ದಿನಗಳ ಕಾಲ ಸಂಭ್ರಮದ ಗುಂಗು ಮುಂದುವರಿಯಲಿದೆ. ಡೋನ್ ಶೋ ಏರ್ಪಡಿಸಿದ್ದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳು ಎಲ್ಲರ ಗಮನ ಸೆಳೆದಿದ್ದಾರೆ.
`ಹೊಸ ತಲೆಮಾರಿನ ಸಾಹಿತ್ಯ' ಕುರಿತ ವಿಚಾರಗೋಷ್ಠಿಯಲ್ಲಿ ವಿಮರ್ಶಕ ವಿಕ್ರಂ ವಿಸಾಜಿ ಅಭಿಮತ • ಜಿ.ತಂಗಂ ಗೋಪಿನಾಥಂ ಮಂಡ್ಯ: ಹೊಸ ತಲೆಮಾರಿನ…
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…