Andolana originals

ಕೈಗಾರಿಕಾ ಬೆಳವಣಿಗೆಗೆ ಸಾಂಸ್ಕೃತಿಕ ನಗರಿಯ ಕೊಡುಗೆ

• ಟಿ.ವಿ.ರಾಜೇಶ್ವರ

• ಕೈಗಾರಿಕೆಗಳು, ವಾಣಿಜ್ಯ ಚಟುವಟಿಕೆ: ಮೈಸೂರಿಗೆ ದೇಶದಲ್ಲೇ 5ನೇ ಸ್ಥಾನ
• ಮುದ್ರಣ ಉದ್ಯಮದಲ್ಲೂ ಮುಂಚೂಣಿಯಲ್ಲಿರುವ ಮೈಸೂರು
• ಮೈಸೂರನ್ನು ಕೈಗಾರಿಕಾ ಭೂಪಟದಲ್ಲಿ ಗುರುತಿಸುವಂತೆ ಮಾಡಿದ್ದ ಎಂಎಂಸಿ
• ಮೈಸೂರು ಜಿಲ್ಲೆ ನೈಸರ್ಗಿಕ ಸಂಪನ್ಮೂಲದಲ್ಲೂ ಶ್ರೀಮಂತ

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಹಾಗೂ ಪಾರಂಪರಿಕ ನಗರ ಮೈಸೂರು ಕಲೆ, ಸಾಹಿತ್ಯ, ಸಂಸ್ಕೃತಿಯ ಜೊತೆ ಜೊತೆಗೆ ಕೈಗಾರಿಕೆಯಲ್ಲೂ ಮುಂಚೂಣಿಯಲ್ಲಿದೆ. ಅರಮನೆಗಳ ನಗರಿ ತನ್ನ ವಾಸ್ತು ವೈಭವ, ಪಾರಂಪರಿಕ ಕಟ್ಟಡಗಳು, ಐತಿಹಾಸಿಕ ಸ್ಥಳಗಳೊಂದಿಗೆ ಕೈಗಾರಿಕಾ ವಲಯದಲ್ಲೂ ಬ್ರಾಂಡ್ ಆಗಿದೆ. ಮೈಸೂರು ಸ್ಯಾಂಡಲ್ ಆಯಿಲ್ ಫ್ಯಾಕ್ಟರಿ (ಮೈಸೂರು ಗಂಧದೆಣ್ಣೆ ಕಾರ್ಖಾನೆ) ಹಾಗೂ ಮೈಸೂರು ರೇಷ್ಮೆ ನೇಯ್ದೆ ಕಾರ್ಖಾನೆ (ಸಿಲ್ಕ್ ಫ್ಯಾಕ್ಟರಿ) ಮೈಸೂರಿನ ಪ್ರಮುಖ ಬ್ರಾಂಡ್‌ಗಳಾಗಿವೆ. ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಮೈಸೂರು ದೇಶದಲ್ಲೇ 5ನೇ ಅತ್ಯುತ್ತಮ ನಗರವಾಗಿದೆ.

ರಾಜ್ಯ ರಾಜಧಾನಿಯಿಂದ 146 ಕಿ.ಮೀ. ದೂರದಲ್ಲಿರುವ ಮೈಸೂರು ಜಿಲ್ಲೆ 9 ತಾಲ್ಲೂಕುಗಳನ್ನು ಒಳಗೊಂಡಿದೆ. ಕಾವೇರಿ, ಕಪಿಲಾ ನದಿಗಳನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡಿರುವ ಮೈಸೂರು ಜಿಲ್ಲೆ ನೈಸರ್ಗಿಕ ಸಂಪನ್ಮೂಲದಲ್ಲೂ ಶ್ರೀಮಂತವಾಗಿದೆ. ಕೈಗಾರಿಕಾ ಸ್ಥಾಪನೆಗೆ ಸೂಕ್ತ ಸ್ಥಳವಾಗಿದೆ. ರಸ್ತೆ, ರೈಲು, ವಿಮಾನ ಸಂಪರ್ಕದ ಮೂಲ ಸೌಕರ್ಯಗಳನ್ನು ಒಳಗೊಂಡಿದೆ. ಮೈಸೂರು-ಬೆಂಗಳೂರು ದಶಪಥ ರಸ್ತೆ, ಜೋಡಿ ರೈಲು ಮಾರ್ಗ, ಸುಸಜ್ಜಿತ ವಿಮಾನ ನಿಲ್ದಾಣ, ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ವಿಮಾನ ಸೌಕರ್ಯ… ಇವು ಕೈಗಾರಿಕಾ ಬೆಳವಣಿಗೆಗೆ ಪೂರಕವಾಗಿವೆ.

ಬೆಂಗಳೂರು ನಂತರ ಎರಡನೇ ಮಾಹಿತಿ ತಂತ್ರಜ್ಞಾನ ಹಬ್ ಆಗಿ ಗುರುತಿಸಿ ಕೊಂಡಿರುವ ಮೈಸೂರಿನಲ್ಲಿ ಐಟಿ ದಿಗ್ಗಜ ಸಂಸ್ಥೆಗಳಾದ ಇನ್ಫೋಸಿಸ್, ವಿಪ್ರೋ ಕ್ಯಾಂಪಸ್‌ಗಳು ಇವೆ. ಸಾವಿರಾರು ಮಂದಿ ಇಲ್ಲಿ ತರಬೇತಿ ಜತೆಗೆ ಉದ್ಯೋಗ ವನ್ನೂ ಪಡೆದಿದ್ದಾರೆ. ಇದಲ್ಲದೆ, ಎಕ್ಸೆಲ್ ಸಾಫ್ಟ್, ಥಾಟ್ ಫೋಕಸ್, ಥಿಯೋ ರಮ್‌, ಆರ್‌ಐಐಟಿ ಸೇರಿದಂತೆ ಹಲವಾರು ಐಟಿ ಸಂಸ್ಥೆಗಳು ಮೈಸೂರಿನಲ್ಲಿವೆ.

ಮೈಸೂರು ಜಿಲ್ಲೆಯಲ್ಲಿ ಆಹಾರ ಉತ್ಪಾದನಾ ಘಟಕಗಳು, ಜವಳಿ ಉದ್ಯಮ, ಆರೋಗ್ಯ ಸೇವೆ ಉಪಕರಣಗಳ ಉತ್ಪಾದನೆ, ಪೀಠೋಪಕರಣಗಳ ತಯಾರಿಕಾ ಘಟಕ, ಸೇವಾ ವಲಯ, ರಾಸಾಯನಿಕ ಉತ್ಪಾದನಾ ಘಟಕಗಳು, ಕ್ಲಸ್ಟರ್‌ಗಳು ತಲೆ ಎತ್ತಿವೆ. ಹೆಬ್ಬಾಳಿನಲ್ಲಿರುವ ಸ್ಕ್ಯಾನ್ ರೇ ಟೆಕ್ನಾಲಜೀಸ್ ಜೀವ ರಕ್ಷಕ ವೆಂಟಿಲೇಟರ್ ಸೇರಿದಂತೆ ಎಕ್ಸ್‌ರೇ ಉಪಕರಣಗಳು, ಆರೋಗ್ಯ ಸೇವಾ ಉಪಕರಣಗಳ ತಯಾರಿಕೆಯಲ್ಲಿ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಮುದ್ರಣ ಉದ್ಯಮದಲ್ಲೂ ಮೈಸೂರು ಮುಂಚೂಣಿಯಲ್ಲಿದೆ.

ಕೆಎಸ್‌ಐಸಿ, ಜೆ.ಕೆ.ಟೈರ್ಸ್, ಆಟೋಮೋಟಿವ್ ಆಕ್ಸೆಲ್ಸ್, ಮೋಟಾರು ವಾಹನ ಗಳು ಮತ್ತು ಬಿಡಿ ಭಾಗಗಳನ್ನು ತಯಾರು ಮಾಡುವ ಟಿವಿಎಸ್, ಲಾರೆನ್ ಅಂಡ್ ಟ್ಯೂಬೊ (ಎಲ್ ಅಂಡ್ ಟಿ), ಎಟಿ ಅಂಡ್‌ ಎಸ್, ರೇ ಹನ್ಸ್ ಟೆಕ್ನಾಲ ಜೀಸ್, ಬಣ್ಣಾರಿ ಅಮ್ಮನ್ ಶುಗರ್ಸ್, ಎಕೆಸಿ ಸ್ಯಾಂಡಲ್ಸ್, ಸುಪ್ರೀಂ ಫಾರ್ಮಾಸ್ಯು ಟಿಕಲ್ಸ್, ಐಟಿಸಿ (ತಂಬಾಕು ಸಂಸ್ಕರಣೆ), ಜೆನಿತ್ ಟೆಕ್ಸ್‌ಟೈಲ್ಸ್, ಜೆಮಿನಿ ಡಿಸ್ಟೆಲ ರೀಸ್, ಸೌತ್ ಇಂಡಿಯಾ ಪೇಪರ್ ಮಿಲ್ ಮುಂತಾದ ಭಾರಿ ಕೈಗಾರಿಕೆಗಳು ಜಿಲ್ಲೆಯಲ್ಲಿವೆ.

ಮೈಸೂರಿನ ಅತ್ಯಂತ ಹಳೆಯದಾದ ಹಾಗೂ ಪ್ರತಿಷ್ಠಿತ ಕೈಗಾರಿಕೆಗಳಾಗಿದ್ದ ಕೆ.ಆರ್.ಮಿಲ್, ಐಡಿಯಲ್ ಜಾವಾ ಫ್ಯಾಕ್ಟರಿ, ಸುಜಾತ ಮಿಲ್ ಇಂದು ಮುಚ್ಚಲ್ಪಟ್ಟಿದ್ದರೂ, ಇನ್ನೂ ಮೈಸೂರಿನ ಹೆಗ್ಗುರುತುಗಳಾಗಿವೆ.

ಮೈಸೂರನ್ನು ಕೈಗಾರಿಕಾ ಭೂಪಟದಲ್ಲಿ ಗುರುತಿಸುವಂತೆ ಮಾಡಿದ್ದ ಎಂಎಂಸಿ, ಕರ್ನಾಟಕ ಬಾಲ್ ಬೇರಿಂಗ್, ಜೈ ಬೇರಿಂಗ್ಸ್, ಕರ್ನಾಟಕ ಅಲ್ಯುಮಿನಿಯಂ, ಶಿವಮೊಗ್ಗ ಸ್ಟೀಲ್ಸ್, ಫಾಲ್ಕನ್ ಟೈರ್ಸ್, ನಂಜನಗೂಡು ಕೈಗಾರಿಕಾ ವಲಯದಲ್ಲಿದ್ದ ರಾಮನ್ ಬೋರ್ಡ್, ಡನ್‌ಪೋರ್ಡ್ ಫ್ಯಾಬ್ರಿಕ್, ವಿಲ್ಲೆಕ್ ಬ್ಲಡ್ ಕಂಪೆನಿ, ಸರ್ಕಾರಿ ಸ್ವಾಮ್ಯದ ಚಾಮುಂಡಿ ಮೆಷಿನ್ ಟೂಲ್ಸ್ … ಹೀಗೆ ಹತ್ತು ಹಲವು ಕೈಗಾರಿಕೆಗಳು ಮುಚ್ಚಿ ಹೋಗಿವೆ. ಹೊಸ ಉದ್ಯಮಗಳು ತಲೆ ಎತ್ತಿವೆ. ಸರ್ಕಾರಿ ಸ್ವಾಮ್ಯದಲ್ಲಿದ್ದ ವಿಕ್ರಾಂತ್ ಟೈರ್ಸ್ ಈಗ ಜೆ.ಕೆ.ಟೈರ್ಸ್ ಆಗಿದೆ.

ಮೈಸೂರು, ಸುಗಂಧ ದ್ರವ್ಯ ಹಾಗೂ ಸುಗಂಧ ಕಡ್ಡಿ (ಅಗರಬತ್ತಿ) ತಯಾರಿಕೆಯಲ್ಲೂ ವಿಶ್ವಖ್ಯಾತಿ ಗಳಿಸಿದೆ. ಎನ್.ರಂಗರಾವ್ ಅಂಡ್ ಸನ್ಸ್, ಅರವಿಂದ ಪರಿಮಳ ವರ್ಕ್ಸ್, ಗೋಪಿಕಾ ಪರ್ಥ್ಯಮರಿ ವರ್ಕ್ಸ್, ಸುನಂದಾ ಆರೋಮೆಟಿಕ್ಸ್, ಸ್ಟೇಟ್ ಪರ್ಥ್ಯಮರಿ ವರ್ಕ್ಸ್… ಹೀಗೆ ಹತ್ತು ಹಲವು ಅಗರಬತ್ತಿ ಉದ್ಯಮ ಮೈಸೂರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡುವಲ್ಲಿ ನೆರವಾಗಿವೆ. ದೇಶದ ಅಗರಬತ್ತಿ ಉದ್ಯಮಕ್ಕೆ ಮೈಸೂರಿನ ಕೊಡುಗೆ ಶೇ.20ಕ್ಕೂ ಹೆಚ್ಚಿದೆ.

ನಂಜನಗೂಡಿನ ಕೈಗಾರಿಕಾ ವಲಯದಲ್ಲಿರುವ ಜುಬಿಲಂಟ್ ಲೈಫ್ ಸೈನ್ಸಸ್, ನೆ, ಏಷಿಯನ್ ಪೇಂಟ್ಸ್ ಬಹುರಾಷ್ಟ್ರೀಯ ಕಂಪೆನಿಗಳಾಗಿದ್ದು, ಸಾವಿರಾರು ಮಂದಿಗೆ ನೇರವಾಗಿ ಹಾಗೂ ಪರೋಕ್ಷವಾಗಿ ಉದ್ಯೋಗ ಸೃಷ್ಟಿಸಿವೆ. ವಿಶ್ವ ಮಟ್ಟದಲ್ಲಿ ಹೆಸರು ಗಳಿಸಿದ್ದ ‘ಎಸ್.ಕುಮಾರ್’ ನಂತರ ‘ರೀಡ್ ಅಂಡ್ ಟೇಲರ್’ ನಂಜನಗೂಡು ಕೈಗಾರಿಕಾ ವಲಯದಲ್ಲಿತ್ತು. ಇದು ಈಗ ಉತ್ಪಾದನೆ ಸ್ಥಗಿತಗೊಳಿಸಿದೆ. ಮೈಸೂರು ಜಿಲ್ಲೆ ಆಹಾರ, ಜವಳಿ, ಸಾಫ್ಟ್ ವೇರ್, ಫಾರ್ಮಾಸ್ಯುಟಿಕಲ್ಸ್ ಉತ್ಪನ್ನಗಳ ರಪ್ತಿನಲ್ಲಿ ಮುಂಚೂಣಿಯಲ್ಲಿದೆ.

ಎನ್‌ ಆರ್ ಗ್ರೂಪ್: ಅಗರಬತ್ತಿ ಉದ್ಯಮದಲ್ಲಿ ದೇಶವಷ್ಟೇ ಅಲ್ಲ ವಿದೇಶದಲ್ಲೂ ಮುಂಚೂಣಿಯಲ್ಲಿರುವ ಎನ್.ರಂಗರಾವ್ ಅಂಡ್ ಸನ್ಸ್ ದೇಶದ ಅಗರಬತ್ತಿ ರಸ್ತಿನಲ್ಲಿ ಶೇ.15 ಪಾಲು ಪಡೆದಿದೆ. 65ಕ್ಕೂ ಹೆಚ್ಚು ದೇಶಗಳಿಗೆ ರಫ್ತಾಗುತ್ತಿದೆ. ಸೈಕಲ್ ಬ್ರಾಂಡ್ ಹೆಸರಿನಲ್ಲಿ ಖ್ಯಾತಿ ಗಳಿಸಿರುವ ಅಗರಬತ್ತಿ ಪ್ರತಿ ಮನೆಯಲ್ಲೂ ಸ್ಥಾನ ಪಡೆದಿದೆ. 1948ರಲ್ಲಿ ಎನ್.ರಂಗರಾವ್ ಅವರು ಮೈಸೂರು ಪ್ರಾಡಕ್ಟ್ ಮತ್ತು ಜನರಲ್ ಟ್ರೇಡಿಂಗ್ ಕಂಪೆನಿ ಹೆಸರಿನಲ್ಲಿ ಉದ್ಯಮವನ್ನು ಸ್ಥಾಪಿಸಿದರು. ನಂತರ ಇದು ಎನ್.ರಂಗರಾವ್ ಅಂಡ್ ಸನ್ಸ್ ಎಂದಾಯಿತು. ಈಗ ಇದರ ಅಡಿಯಲ್ಲಿ ಆರು ಕಂಪೆನಿಗಳಿವೆ. ಎಸೆನ್ಸಿಯಲ್ ಆಯಿಲ್ಸ್ ಫ್ರಾಗ್ರೆನ್ಸಸ್, ಇನ್ಸೆನ್ಸ್ ಎಲೆಕ್ಟ್ರಾನಿಕ್ಸ್‌, ರಂಗ್‌ಸನ್ಸ್‌ ಮಾರ್ಕೆಟಿಂಗ್, ರಿಪ್ಪಲ್ ಫ್ರಾಗ್ರೆನ್ಸ್ ಪೈ,ಲಿ, ನ್ಯಾಚುರಲ್ ಅಂಡ್ ಎಸ್ಟೋನಿಯಲ್ ಆಯಿಲ್ಸ್ ಪೈಲಿ, ಸೈಕಲ್ ಬ್ರಾಂಡ್ ಅಗರಬತ್ತಿ ಎಂಬ ಕಂಪೆನಿಗಳು ಸಾವಿರಾರು ಮಂದಿಗೆ ಉದ್ಯೋಗ ಒದಗಿಸಿವೆ. ಎನ್.ರಂಗರಾವ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಆರ್.ಗುರು ಅವರು ಸಂಸ್ಥೆಯನ್ನು ಮುನ್ನಡೆಸಿದ್ದಾರೆ.

ಎಂಎಂಸಿ: ಮೈಸೂರಿನ ಕೈಗಾರಿಕಾ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಬಹುದೆಂಬ ಹಾಗೂ ಸಾವಿರಾರು ಮಂದಿಗೆ ಉದ್ಯೋಗ ಒದಗಿಸಿ ಮೈಸೂರು ಜಿಲ್ಲೆಯ ಆರ್ಥಿಕ ಪ್ರಗತಿಗೂ ಸಹಕಾರಿಯಾಗಬಲ್ಲದು ಎಂದು ನಿರೀಕ್ಷಿಸಿದ್ದ ಮಹೀಂದ್ರ ಮತ್ತು ಮಹೀಂದ್ರ ಕಂಪೆನಿ ಆರಂಭವಾದರೂ ಹೆಚ್ಚು ಕಾಲ ಬದುಕುಳಿಯಲಿಲ್ಲ.

ಐಡಿಯಲ್ ಜಾವಾ ಕಾರ್ಖಾನೆ: ಮೈಸೂರಿನ ಮತ್ತೊಂದು ಪ್ರತಿಷ್ಠಿತ ಕೈಗಾರಿಕೆಯಾಗಿದ್ದುದ್ದು ಐಡಿಯಲ್ ಜಾವಾ ಫ್ಯಾಕ್ಟರಿ, ದ್ವಿಚಕ್ರ ವಾಹನಗಳ ಕ್ರಾಂತಿಯನ್ನು ಮಾಡಿದ ಫ್ಯಾಕ್ಟರಿ ಇಂದು ನೆನಪಾಗಿದೆ. 1960ರಲ್ಲಿ ಫರೂಕ್ ಕೆ.ಇರಾನಿ ಅವರು ಐಡಿಯಲ್ ಜಾವಾ ಫ್ಯಾಕ್ಟರಿಯನ್ನು ಆರಂಭಿಸಿದರು. 1961ರಲ್ಲಿ ಅಂದಿನ ಮೈಸೂರು ರಾಜ್ಯಪಾಲರಾಗಿದ್ದ ಜಯಚಾಮರಾಜ ಒಡೆಯರ್ ಅವರು ಮೊದಲ ಬೈಕ್‌ ಅನ್ನು ಬಿಡುಗಡೆ ಮಾಡಿದ್ದರು. ಜಾವಾ ಮೋಟಾರ್ ಸೈಕಲ್, ಯೆಜ್ಜಿ ಮೊಪೆಡ್ 1970ರ ದಶಕದಲ್ಲಿ ನೆಚ್ಚಿನ ಬೈಕ್‌ಗಳಾಗಿದ್ದವು. 1973ರಲ್ಲಿ ಯಜ್ಜಿ-250 ಮೋಟಾರ್ ಸೈಕಲ್ ಅನ್ನು ಹೊಸ ವಿನ್ಯಾಸ ದಲ್ಲಿ ತಯಾರಿಸಿದರು. ಇದು ಅಂದಿನ ಯುವ ಸಮೂಹದ ನೆಚ್ಚಿನ ಬೈಕ್ ಆಗಿತ್ತು. 1996ರಲ್ಲಿ ಕಾರ್ಮಿಕರ ಮುಷ್ಕರ ಹಾಗೂ ಆಂತರಿಕ ಸಂಘರ್ಷದ ಫಲವಾಗಿ ಉತ್ಪಾದನೆ ಸ್ಥಗಿತಗೊಂಡು ಲಾಕ್‌ ಔಟ್ ಘೋಷಿಸಲಾಯಿತು. ಜಾವಾ ಬೈಕ್‌ಗಳು ಸುಮಾರು 61 ರಾಷ್ಟ್ರಗಳಿಗೆ ರಫ್ತಾಗುತ್ತಿತ್ತು. 25 ವರ್ಷಗಳ ನಂತರ ಯೆಜ್ಜಿಯನ್ನು ಮಹೀಂದ್ರ ರೀ- ಲಾಂಚ್ ಮಾಡಿದೆ.

ಮೈಸೂರಿನಲ್ಲಿ ಯಾದವಗಿರಿ, ಹೆಬ್ಬಾಳ್, ಮೇಟಗಳ್ಳಿ, ಬೆಳಗೊಳ, ಕೂರ್ಗಳ್ಳಿ, ಹೂಟಗಳ್ಳಿ, ಬೆಳವಾಡಿ ಕೈಗಾರಿಕಾ ಪ್ರದೇಶಗಳಿದ್ದು, ಜಿಲ್ಲೆಯಲ್ಲಿ ನಂಜನಗೂಡು, ಹುಣಸೂರು ಕೈಗಾರಿಕಾ ಪ್ರದೇಶಗಳನ್ನು ಹೊಂದಿವೆ. ಜಿಲ್ಲೆಯಲ್ಲಿ ಸಣ್ಣ, ಅತಿಸಣ್ಣ, ಸೂಕ್ಷ್ಮ ಮಧ್ಯಮ ಹಾಗೂ ಭಾರಿ ಕೈಗಾರಿಕೆಗಳು ಸೇರಿ ಸುಮಾರು 25 ಸಾವಿರಕ್ಕೂ ಹೆಚ್ಚು ಕೈಗಾರಿಕಾ ಘಟಕಗಳಿವೆ. ಮಧ್ಯಮ ಮತ್ತು ದೊಡ್ಡ ಕೈಗಾರಿಕೆಗಳಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ. ಶೇ.20ರಷ್ಟು ಕಾರ್ಖಾನೆಗಳು ರೋಗಗ್ರಸ್ತವಾಗಿ ಮುಚ್ಚಿವೆ. ಸುಮಾರು 50ಕ್ಕೂ ಹೆಚ್ಚು ಕ್ಲಸ್ಟರ್‌ಗಳಿವೆ.

ಕೆ.ಆರ್.ಮಿಲ್: ಗತಕಾಲದ ವೈಭವ, ನೆನಪು ಮಾತ್ರ : ಮೈಸೂರು ಮಹಾರಾಜರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಫಲವಾಗಿ ಮೈಸೂರಿನಲ್ಲಿ ಸುಮಾರು 71 ಎಕರೆ ಪ್ರದೇಶದಲ್ಲಿ ಕೃಷ್ಣರಾಜೇಂದ್ರ ಮಿಲ್ (ಕೆ.ಆರ್.ಮಿಲ್) ಸ್ಥಾಪನೆಯಾಗಿತ್ತು. 1927ರಲ್ಲಿ ಎಂ.ಎಲ್‌.ವರ್ಧಮಾನಯ್ಯ ಅವರು ಕೆ.ಆರ್.ಮಿಲ್ ಅನ್ನು ಸ್ಥಾಪಿಸಿದ್ದರು. ಇದು ಆ ದಿನಗಳಲ್ಲೇ ನೂರಾರು ಮಂದಿಗೆ ಉದ್ಯೋಗಾವಕಾಶ ವನ್ನು ಕಲ್ಪಿಸಿತ್ತು. 1934ರಲ್ಲಿ ಮಹಾತ್ಮ ಗಾಂಧಿ ಅವರು ಕೆ.ಆರ್.ಮಿಲ್‌ಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಖಾದಿಯ ಉತ್ಪಾದನೆಗೆ ಕರೆ ನೀಡಿದ್ದರು. ಸ್ವಾತಂತ್ರ್ಯಾನಂತರ ದಿನದಿಂದ ದಿನಕ್ಕೆ ನಷ್ಟದಲ್ಲೇ ಸಾಗಿದ ಮಿಲ್ 1977ರಲ್ಲಿ ತನ್ನ ಉತ್ಪಾದನೆಯನ್ನು ಸ್ಥಗಿತಗೊಳಿಸಿ ಲಾಕ್‌ ಔಟ್ ಘೋಷಿಸಿತು. ನಂತರ ಇದರ ಪುನಾರಂಭಕ್ಕೆ ಪ್ರಯತ್ನಗಳು ನಡೆದರೂ ಯಶಸ್ವಿಯಾಗಲಿಲ್ಲ.

ಮೈಸೂರಿನಲ್ಲಿರುವ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್ ಟಿಆರ್‌ಐ), ಕೇಂದ್ರ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್‌ಆರ್‌ಎಲ್), ನೋಟು ಮುದ್ರಣಾಲಯ (ಆರ್‌ಬಿಐ), ಆರ್ ಎಂಪಿ, ಬಿಇಎಂಎಲ್, ರೈಲ್ವೆ ವರ್ಕ್‌ಶಾಪ್, ಸಿಪೆಟ್, ಕೇಂದ್ರೀಯ ರೇಷ್ಮೆ ಸಂಶೋಧನಾ ಮಂಡಳಿ ಮುಂತಾದವು ಕೈಗಾರಿಕಾ ಬೆಳವಣಿಗೆಗೆ ಪೂರಕವಾಗಿವೆ.

ಮೈಸೂರು ಜಿಲ್ಲೆ ಕೈಗಾರಿಕೆ ಜತೆಗೆ ಖನಿಜ ಸಂಪನ್ಮೂಲ, ಅರಣ್ಯ ಸಂಪನ್ಮೂಲವನ್ನೂ ಹೊಂದಿದೆ. ಜಿಲ್ಲೆಯಲ್ಲಿ ಡ್ಯುನೈಟ್, ಲೈಮ್ ಸ್ಟೋನ್, ಕೈನೈಟ್, ಮ್ಯಾಗ್ನಸೈಟ್, ಕ್ವಾಟ್ರೆಟ್, ಫೆಲೈಟ್, ಸಿಲಿಮನೈಟ್, ಕ್ರೋಮೈಟ್, ಸೋಪ್‌ ಸ್ಟೋನ್, ಗ್ರಾಫೈಟ್‌ ಮುಂತಾದ ಖನಿಜಗಳು ಹೇರಳವಾ ಗಿವೆ. ಮೈಸೂರು ಜಿಲ್ಲೆ 62,851 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಒಳಗೊಂಡಿದೆ.

ಟಿ.ವಿ.ರಾಜೇಶ್ವರ

ಮೂಲತಃ ಮೈಸೂರು ಜಿಲ್ಲೆ ತಲಕಾಡು ಗ್ರಾಮವಾದರೂ ಮೈಸೂರಿನ್ಲೇ ಕಳೆದ ೬ ದಶಕಗಳಿಂದ ನೆಲೆಸಿದ್ದೇನೆ. ಜೆಎಸ್‌ಎಸ್‌ಕಾಲೇಜು ವಿದ್ಯಾರ್ಥಿಯಾಗಿ ಮೈಸೂರು ವಿವಿಯಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿರುವ ನಾನು ಪತ್ರಿಕಾ ವೃತ್ತಿಯನ್ನು ಹವ್ಯಾಸವಾಗಿ ಆಯ್ದುಕೊಂಡು ನಂತರ ಪೂರ್ಣ ಪ್ರಮಾಣದಲ್ಲಿ ಅದರಲ್ಲೇ ತೊಡಗಿಸಿಕೊಂಡಿದ್ದೇನೆ. ನವಧ್ವನಿ ಮೂಲಕ ೧೯೮೩ರಲ್ಲಿ ಪತ್ರಿಕಾ ರಂಗ ಪ್ರವೇಶಿಸಿದ ನಾನು ಜಿಲ್ಲಾಮಟ್ಟದ ಪತ್ರಿಕೆಗಳಲ್ಲಿ ವರದಿಗಾರ, ಮುಖ್ಯ ವರದಿಗಾರ, ಉಪ ಸಂಪಾದಕ ಮುಖ್ಯ ಉಪಸಂಪಾದಕ, ಸುದ್ದಿ ಸಂಪಾದಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಪತ್ರಿಕಾ ರಂಗದಲ್ಲಿ ಸುಮಾರು ೪೦ ವರ್ಷಗಳ ಅನುಭವವಿದ್ದು, ಪ್ರಸ್ತುತ ಆಂದೋಲನದಲ್ಲಿ ೧೬ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ರಾಜಕೀಯ, ಸಿನೆಮಾ, ಕ್ರೀಡೆ, ವನ್ಯಜೀವಿ, ಸಾಹಿತ್ಯ, ಸಾಮಾಜಿಕ ವಿಷಯದಲ್ಲಿ ಅನೇಕ ಲೇಖನಗಳನ್ನು ಬರೆದಿದ್ದು, ರಾಜಕೀಯವಾಗಿ ಹೆಚ್ಚು ಆಸಕ್ತಿ ಇದೆ. ಕರ್ನಾಟಕ ಸರ್ಕಾರದ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಜಿಲ್ಲಾಡಳಿತ ನೀಡುವ ರಾಜ್ಯೋತ್ಸವ ಪ್ರಶಸ್ತಿ, ಕೆಯುಡಬ್ಲ್ಯುಜೆ ಕೊಡಮಾಡುವ ಖಾದ್ರಿ ಶಾಮಣ್ಣ ಪ್ರಶಸ್ತಿ, ಪಟೇಲ್ ಭೈರ ಹನುಮಯ್ಯ ಪ್ರಶಸ್ತಿ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಜೀವಮಾನ ಸಾಧನೆ ಪ್ರಶಸ್ತಿ, ರಾಜಶೇಖರ ಕೋಟಿ ಪ್ರಶಸ್ತಿ, ಆದರ್ಶ ಸೇವಾ ರತ್ನ, ವಿಶ್ವ ಚೇತನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ.

Recent Posts

ಉಪ ಚುನಾವಣೆ: ಸರ್ಕಾರದ ದುರಾಡಳಿತದ ವಿರುದ್ಧ ನಡೆಯುತ್ತಿರುವ ಚುನಾವಣೆ: ಆರ್.‌ ಅಶೋಕ್

ಮುಸ್ಲಿಮರ ಓಲೈಕೆಗಾಗಿ ಜಮೀನು ಕಬಳಿಕೆ, ಇದರ ವಿರುದ್ಧ ಬಿಜೆಪಿ ಬೃಹತ್ ಹೋರಾಟ ಚನ್ನಪಟ್ಟಣ: ಇದು ವ್ಯಕ್ತಿಗಳ ನಡುವೆ ನಡೆಯುತ್ತಿರುವ ಚುನಾವಣೆಯಲ್ಲ,…

27 mins ago

ಮೈಸೂರಿನ ಸರಸ್ವತಿ ಚಿತ್ರಮಂದಿರ ಇನ್ನು ನೆನಪು ಮಾತ್ರ: ಕಟ್ಟಡ ನೆಲಸಮ

ಮೈಸೂರು: ನಾಲ್ಕು ದಶಕಕ್ಕೂ ಹೆಚ್ಚು ಕಾಲ ಜನರನ್ನು ರಂಜಿಸಿದ್ದ ನಗರದ ಸರಸ್ವತಿ ಚಿತ್ರಮಂದಿರ ನೆನಪಿನಂಗಳಕ್ಕೆ ಸರಿಯುತ್ತಿದೆ. ಪ್ರೇಕ್ಷಕರ ಕೊರತೆಯಿಂದ ಕೋವಿಡ್‌…

41 mins ago

ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ತಿರುಗೇಟು ಕೊಟ್ಟ ನಿಖಿಲ್ ಕುಮಾರಸ್ವಾಮಿ

ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿಂದು ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಅವರು ಅನೇಕ ಹಳ್ಳಿಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.…

3 hours ago

ರಂಗೇರಿದ ಜಾರ್ಖಂಡ್ ಚುನಾವಣೆ: ಬಿಜೆಪಿ ಪ್ರಣಾಳಿಕೆ ಬಿಡುಗಡೆ

ನವದೆಹಲಿ: ಜಾರ್ಖಂಡ್‌ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಇಂದು…

4 hours ago

ರಂಗೇರಿದ ಚನ್ನಪಟ್ಟಣ ಉಪಚುನಾವಣೆ: ನಿಖಿಲ್ ಪರ ಬಿಜೆಪಿ ನಾಯಕರ ಪ್ರಚಾರ

ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇಂದು ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಪರ ಕೇಂದ್ರ…

4 hours ago

ಯುಪಿ ಸಿಎಂ ಯೋಗಿ ಆದಿತ್ಯನಾಥ್ಗೆ ಬೆದರಿಕೆ ಹಾಕಿದ್ದ ಮಹಿಳೆ ಬಂಧನ

ಮುಂಬೈ: ಇನ್ನು 10 ದಿನದೊಳಗೆ ಸಿಎಂ ಸ್ಥಾನದಿಂದ ಕೆಳಗಿಳಿಯದಿದ್ದರೆ ಹತ್ಯೆ ಮಾಡುವುದಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ಗೆ ಕೊಲೆ…

4 hours ago