ಮಡಿಕೇರಿ: ನಗರದ ರಾಜಾಸೀಟ್ (Raja Seat Garden) ಬಳಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಮಹತ್ವಾಕಾಂಕ್ಷಿ ಕೂರ್ಗ್ ವಿಲೇಜ್ ಸದ್ಬಳಕೆ ಆಗುವ ಸೂಚನೆ ಸಿಕ್ಕಿದೆ. ಪಾಳು ಬೀಳುತ್ತಿದ್ದ ಈ ಪ್ರದೇಶ ಪ್ರವಾಸೋದ್ಯಮ ಇಲಾಖೆಯ ಚಿಂತನೆಯಿಂದಾಗಿ ಮರುಜೀವ ಪಡೆಯುವ ಎಲ್ಲ ಸಾಧ್ಯತೆಗಳೂ ಕಂಡು ಬರುತ್ತಿದೆ.
ಕೊಡಗಿನ ಕಿತ್ತಳೆ ಸವಿಯನ್ನು ಪ್ರವಾಸಿಗರಿಗೆ ಪರಿಚಯಿಸಲು ರೂಪಿಸಿರುವ ಯೋಜನೆ ಕೂರ್ಗ್ ವಿಲೇಜ್‌ನಲ್ಲಿ ಅನುಷ್ಠಾನಕ್ಕೆ ಬರುತ್ತಿರುವುದರಿಂದ ಮಡಿಕೇರಿಯ ಪ್ರವಾಸಿ ಆಕರ್ಷಣೆಯೂ ಹೆಚ್ಚಾಗಲಿದೆ.
ಕಾರ್ಯರೂಪಕ್ಕೆ ಬಾರದ ಯೋಜನೆ: ಕೊಡಗಿನ ಸಂಸ್ಕೃತಿಯನ್ನು ಬಿಂಬಿಸುವ ಪಾರಂಪರಿಕ ಉತ್ಪನ್ನಗಳು ಮತ್ತು ಸ್ಥಳೀಯ ಉತ್ಪನ್ನಗಳನ್ನು ಪ್ರವಾಸಿಗರಿಗೆ ಪರಿಚಯಿಸುವ ಉದ್ದೇಶದಿಂದ ರಾಜಾ ಸೀಟ್ ಬಳಿ ಕೂರ್ಗ್ ವಿಲೇಜ್ ಯೋಜನೆಗೆ ಚಾಲನೆ ನೀಡ ಲಾಯಿತಾದರೂ ಇಲ್ಲಿಯ ತನಕ ಅದು ಕಾರ್ಯರೂಪಕ್ಕೆ ಬಂದಿಲ್ಲ.
ಪ್ರವಾಸಿಗರಿಗೆ ಕೊಡಗಿನ ಸಂಸ್ಕೃತಿ, ಪದ್ಧತಿ, ಪರಂಪರೆ ತಿಳಿಸುವುದರ ಜತೆಗೆ ಇಲ್ಲಿಯ ಸಾಂಪ್ರದಾಯಿಕ ತಯಾರಿಕೆಗಳು, ಕೃಷಿ ಉತ್ಪನ್ನಗಳನ್ನು ಪ್ರವಾಸಿಗರು ಖರೀದಿ ಮಾಡಲು ಅವಕಾಶ ಕಲ್ಪಿಸುವುದಕೋಸ್ಕರ ಪ್ರಸಿದ್ಧ ಪ್ರವಾಸಿ ತಾಣ ರಾಜಾಸೀಟ್‌ನಿಂದ ಸುಮಾರು 115 ಮೀ. ದೂರದಲ್ಲಿ ಕೂರ್ಗ್ ವಿಲೇಜ್ ನಿರ್ಮಿಸಲಾಗಿದೆ.
98 ಲಕ್ಷ ರೂ. ವೆಚ್ಚದಲ್ಲಿ ಮಳಿಗೆಗಳ ನಿರ್ಮಾಣ : ಇಲ್ಲಿ ಸುಮಾರು 98 ಲಕ್ಷ ರೂ. ವೆಚ್ಚದಲ್ಲಿ ಮಳಿಗೆಗಳು ಕೂಡ ತಲೆಯೆತ್ತಿದ್ದು, ಜಿಲ್ಲೆಯ ಸ್ತ್ರೀ ಶಕ್ತಿ ಸಂಘಗಳು, ತೋಟಗಾರಿಕೆ ಉತ್ಪನ್ನ ಕಂಪೆನಿಗಳು, ಏಲಕ್ಕಿ, ಜೇನು ಸೇರಿದಂತೆ ಕೊಡಗಿನ ಪಾರಂಪರಿಕ ಉತ್ಪನ್ನಗಳನ್ನು ಉತ್ಪಾದಿಸುವವರಿಗೆ ಸಂಬಂಧಿಸಿದ ಸಹಕಾರ ಸಂಘಗಳಿಗೆ ಹಂಚಿಕೆ ಮಾಡಲಾಗಿದ್ದರೂ ಮಳಿಗೆಗಳು ಇಲ್ಲಿ ಕಾರ್ಯಾರಂಭಮಾಡಿಲ್ಲ.
ಆಕರ್ಷಕ ಕೊಳ ನಿರ್ಮಾಣ ಈ ಪ್ರದೇಶದ ವಾತಾವರಣವೂ ಅತ್ಯಂತ ಸುಂದರವಾಗಿದ್ದು, ಕೂರ್ಗ್ ವಿಲೇಜ್ ಒಳಗಿರುವ ಪುಟ್ಟ ಕೊಳ ಆಕರ್ಷಣೀಯ ವಾಗಿದೆ. ಭೂ ಪ್ರದೇಶ ಕೂಡ ಪ್ರವಾಸಿಗರನ್ನು ಸೆಳೆಯುವಂತಿದೆ. ಪ್ರಕೃತಿ ನಡುವೆ ವಿಹರಿಸುತ್ತಾ ಕೊಡಗು ಭೇಟಿಯ ನೆನಪು ಹಸಿರಾಗಿರುವಂತೆ ಶಾಪಿಂಗ್ ಮಾಡಲು ಬೇಕಾದ ಎಲ್ಲಾ ಅವಕಾಶಗಳು ಇಲ್ಲಿದ್ದರೂ ಸದ್ಬಳಕೆ ಆಗಿಲ್ಲ ಎನ್ನುವ ನೋವು ಪ್ರಜ್ಞಾವಂತರನ್ನು ಕಾಡುತ್ತಿತ್ತು.
ಇದೀಗ ಪ್ರವಾಸೋದ್ಯಮ ಇಲಾಖೆ ಕೂರ್ಗ್ ವಿಲೇಜ್ (Coorg Village) ನಿರ್ಮಾಣದ ಆಶಯಕ್ಕೆ ಪೂರಕವಾಗಿ ಸದುಪಯೋಗಪಡಿಸಿಕೊಳ್ಳಲು ಯೋಜನೆ ರೂಪಿಸಿದೆ. ಭೌಗೋಳಿಕ ಮಾನ್ಯತೆ ಪಡೆದಿರುವ ಕೊಡಗಿನ ಕಿತ್ತಳೆಯ ಸ್ವಾದವನ್ನು ಪ್ರವಾಸಿಗರಿಗೆ ಉಣಬಡಿಸುವ ಯೋಜನೆ ಯೊಂದಕ್ಕೆ ಈ ಸ್ಥಳವನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಈ ಸಂಬಂಧ ಪೂರಕ ಪ್ರಕ್ರಿಯೆಗಳು ಪ್ರಗತಿಯಲ್ಲಿದ್ದು, ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಗೋಣಿಕೊಪ್ಪಲುವಿನ ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ಸಹಯೋಗ ಪಡೆಯಲಾಗಿದೆ.
ಕೂರ್ಗ್ ಮ್ಯಾಂಡರಿನ್ ಎಂದು ಗುರುತಿಸಲಾಗುವ ಕೊಡಗಿನ ಕಿತ್ತಳೆಯನ್ನು ಜಿಲ್ಲೆಯಲ್ಲಿ ಹುಡುಕುವಂಥ ಪರಿಸ್ಥಿತಿ ನಿರ್ಮಾಣ ಆಗಿದೆ. ವಿಶಿಷ್ಟ ಸ್ವಾದದ ಈ ಹಣ್ಣಿನ ರುಚಿಗೆ ಮಾರು ಹೋಗದವರೇ ಇಲ್ಲ. ಆದರೆ ಮಾರುಕಟ್ಟೆಯಲ್ಲಿ, ಜಿಲ್ಲೆಯ ರಸ್ತೆ ಬದಿಗಳಲ್ಲಿ ಕೊಡಗಿನ ಕಿತ್ತಳೆ ಹೆಸರಿನಲ್ಲಿ ಬೇರೆ ತಳಿಯ ಕಿತ್ತಳೆಯನ್ನು ಗ್ರಾಹಕರಿಗೆ ಕೊಟ್ಟು ಮೋಸ ಮಾಡುತ್ತಿರುವುದು ಸಾಮಾನ್ಯವಾಗಿದೆ.
ಕೊಡಗಿನ ಕಿತ್ತಳೆಗೆ ಪುನಶ್ಚೇತನ ಒಂದು ಕಡೆಯಲ್ಲಿ ಚೆಟ್ಟಳ್ಳಿಯಲ್ಲಿರುವ ತೋಟಗಾರಿಕೆ ಬೆಳೆಗಳ ಸಂಶೋಧನಾ ಕೇಂದ್ರ ಕೊಡಗಿನ ಕಿತ್ತಳೆ ಪುನಶ್ಚೇತನಕ್ಕೆ ಯೋಜನೆ ರೂಪಿಸಿದ್ದರೆ, ಮತ್ತೊಂದು ಕಡೆ ಪ್ರವಾಸೋದ್ಯಮ ಇಲಾಖೆ ಜಿಲ್ಲೆಯ ವಿಶೇಷವಾಗಿರುವ ಕೂರ್ಗ್ ಮ್ಯಾಂಡರಿನ್ ಇತಿಹಾಸ, ವೈಶಿಷ್ಟ್ಯತೆ, ಸ್ವಾದವನ್ನು ಪ್ರವಾಸಿಗರಿಗೆ ಪರಿಚಯಿಸುವ ಕೆಲಸ ಮಾಡುವ ಮೂಲಕ ಈ ಹಣ್ಣಿನ ಮಹತ್ವವನ್ನು ಜಗತ್ತಿಗೆ ಸಾರಲು ಹೊರಟಿದ್ದು, ಇದಕ್ಕೆ ಕೂರ್ಗ್ ವಿಲೇಜ್ ಆಯ್ಕೆ ಮಾಡಿಕೊಂಡಿರುವುದಕ್ಕೆ ಪ್ರವಾಸೋದ್ಯಮ ವಲಯದಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.
ಮಡಿಕೇರಿಯ ರಾಜಾಸೀಟ್ ಬಳಿಯಲ್ಲಿರುವ ಕೂರ್ಗ್ ವಿಲೇಜ್‌ನಲ್ಲಿ ಕೊಡಗಿನ ಕಿತ್ತಳೆ ಸವಿಯನ್ನು ಪ್ರವಾಸಿಗರಿಗೆ ಪರಿಚಯಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಗೋಣಿಕೊಪ್ಪಲುವಿನ ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ಸಹಯೋಗ ಪಡೆಯಲಾಗಿದೆ. ಕೂರ್ಗ್ ವಿಲೇಜ್ ಎಂಬುದೇ ಚಂದದ ಯೋಜನೆಯಾಗಿದ್ದು, ಇದನ್ನು ಮತ್ತಷ್ಟು ಪ್ರಚಾರದೊಂದಿಗೆ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುತ್ತಿದೆ. ಜಿಲ್ಲಾಧಿಕಾರಿ ವೆಂಕಟ್ ರಾಜಾ ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳ ಅಭಿವೃದ್ಧಿ ಬಗ್ಗೆ ವಿಶೇಷ ಕಾಳಜಿ ವಹಿಸಿರುವುದು ಕೂಡ ಪೂರಕವಾಗಿದೆ. -ಅನಿತಾ ಭಾಸ್ಕರ್, ಉಪ ನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ.
ಜಿಲ್ಲೆಯಲ್ಲಿ ಅಜ್ಞಾತವಾಗಿರುವ ಪ್ರವಾಸಿ ತಾಣಗಳು ಸಾಕಷ್ಟಿವೆ. ಇವುಗಳನ್ನು ಪ್ರವಾಸಿಗರಿಗೆ ಪರಿಚಯಿಸುವ ಕೆಲಸ ಆಗಬೇಕು. ಜಿಲ್ಲೆಯ ವಿಶೇಷತೆಗಳ ಬಗ್ಗೆಯೂ ಪ್ರವಾಸಿಗರಿಗೆ ಮಾಹಿತಿ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಕೂರ್ಗ್ ವಿಲೇಜ್‌ನಲ್ಲಿ ಪ್ರವಾಸಿಗರಿಗೆ ಕಿತ್ತಳೆ ಸವಿಯನ್ನು ಆಸ್ವಾದಿಸಲು ಯೋಜನೆ ರೂಪಿಸಿರುವ ಪ್ರವಾಸೋದ್ಯಮ ಇಲಾಖೆ ಚಿಂತನೆ ಸ್ವಾಗತಾರ್ಹ. ಇದರಿಂದ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಸಾಕಷ್ಟು ಕೊಡುಗೆ ಸಿಗಲಿದೆ.
– ಬಿ. ಆರ್. ನಾಗೇಂದ್ರ ಪ್ರಸಾದ್, ಅಧ್ಯಕ್ಷ, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್, ಕೊಡಗು
ಬೆಳಗಾವಿ : ಉತ್ತರ ಕರ್ನಾಟಕದ ಸಮಸ್ಯೆ, ಕಾನೂನು ಸುವ್ಯವಸ್ಥೆಯಲ್ಲಿ ಲೋಪ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಇನ್ನೂ ದೀರ್ಘ ಚರ್ಚೆ…
ಬೆಳಗಾವಿ : ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿದೆ ಎಂಬ ವಿಚಾರದ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿ ವರದಿ ನೀಡಲು ಇಲಾಖೆಗೆ ಸೂಚಿಸಲಾಗಿದೆ ಎಂದು…
ಹೊಸದಿಲ್ಲಿ : ದಿಲ್ಲಿಯಲ್ಲಿ ಉಂಟಾದ ದಟ್ಟವಾದ ಹೊಗೆ ಹಾಗೂ ತೀವ್ರ ಹವಾಮಾನ ವೈಪರೀತ್ಯದಿಂದಾಗಿ ಕರ್ನಾಟಕದ 21 ಶಾಸಕರು ಮತ್ತು 7…
ಹೊಸದಿಲ್ಲಿ : ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ನೋಟೀಸ್ʼಗೆ ಉತ್ತರ ನೀಡಲು ಕಾಲಾವಕಾಶ ಕೋರುವೆ ಎಂದು ಡಿಸಿಎಂ…
ಬಳ್ಳಾರಿ : ನಗರದಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಲಾರಿಯಲ್ಲಿ ಸಾಗಿಸುತ್ತಿದ್ದ ಯಮಹಾ ಕಂಪನಿಯ 40 ಬೈಕ್‌ಗಳು ಸಂಪೂರ್ಣವಾಗಿ ಸುಟ್ಟು…
ಬೆಂಗಳೂರು : ಆಸ್ಪ್ರೇಲಿಯಾದ ಬೀಚ್‌ನಲ್ಲಿ ಭಾನುವಾರ ಮಧ್ಯಾಹ್ನ ಭೀಕರ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಪೊಲೀಸರು ಸೇರಿದಂತೆ 12 ಮಂದಿ…