Andolana originals

ರಾಷ್ಟ್ರೀಯ ಹೆದ್ದಾರಿಗೆ ತಡೆಗೋಡೆ ನಿರ್ಮಾಣಕ್ಕೆ ಶೀಘ್ರ ಚಾಲನೆ

ಪುನೀತ್

೯೪ ಕೋಟಿ ರೂ. ವೆಚ್ಚದ ಕಾಮಗಾರಿ; ೧೮ ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆ 

ಮಡಿಕೇರಿ: ರಾಷ್ಟ್ರೀಯ ಹೆದ್ದಾರಿ ೨೭೫ರಲ್ಲಿ ೨೧ ಅಪಾಯಕಾರಿ ಸ್ಥಳಗಳಲ್ಲಿ ಕಾಂಕ್ರೀಟ್ ತಡೆಗೋಡೆ ನಿರ್ಮಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ.

ಬೆಂಗಳೂರಿನಿಂದ ಕರಾವಳಿ ಭಾಗ ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ರಾಷ್ಟ್ರೀಯ ಹೆದ್ದಾರಿ ೨೭೫ನ್ನು ಸುರಕ್ಷಿತ ಮಾರ್ಗ ಮಾಡುವತ್ತ ರಾಷ್ಟ್ರೀಯ ಹೆದ್ದಾರಿ ವಿಭಾಗ ಹೆಜ್ಜೆ ಇಟ್ಟಿದೆ. ಈ ಹೆದ್ದಾರಿಯ ೨೧ ಕಡೆಗಳಲ್ಲಿ ಇರುವ ಅಪಾಯಕಾರಿ ಸ್ಥಳಗಳಲ್ಲಿ ಕಾಂಕ್ರೀಟ್ ತಡೆಗೋಡೆ ಕಟ್ಟಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದೆ.

ಬೆಂಗಳೂರು ಮತ್ತು ಮಂಗಳೂರನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್, ಶಿರಾಡಿ ಘಾಟ್‌ಗಳಲ್ಲಿ ಸಮಸ್ಯೆ ಉಂಟಾದರೆ ಇವೆರಡೂ ನಗರಗಳನ್ನು ಸಂಪರ್ಕಿಸುವ ಪ್ರಮುಖ ಪರ್ಯಾಯ ಮಾರ್ಗವಾಗಿ ಸಂಪಾಜೆ ಘಾಟ್ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ೨೭೫ ಗುರುತಿಸಿಕೊಂಡಿದೆ. ಆದರೆ, ೨೦೧೮ರಲ್ಲಿ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಈ ಹೆದ್ದಾರಿಯೂ ಹಲವೆಡೆ ಕುಸಿದು ಮಡಿಕೇರಿ-ಸುಳ್ಯ ನಡುವೆ ೨ ತಿಂಗಳುಗಳ ಕಾಲ ಸಂಪರ್ಕ ಕಡಿತವಾಗಿತ್ತು.

ನಂತರದ ವರ್ಷಗಳಲ್ಲಿ ಅಪಾಯಕಾರಿ ಸ್ಥಳಗಳಲ್ಲಿ ತಾತ್ಕಾಲಿಕ ಪರಿಹಾರ ಕಾರ್ಯಗಳು ನಡೆದಿರುವುದರಿಂದ ಒಂದೆರಡು ಸ್ಥಳಗಳನ್ನು ಹೊರತುಪಡಿಸಿದರೆ ಉಳಿದ ಕಡೆಗಳಲ್ಲಿ ಸದ್ಯಕ್ಕೆ ಬಹುತೇಕ ಸುರಕ್ಷಿತ ಅನ್ನಬಹುದಾದ ಸ್ಥಿತಿ ಇದೆ.

ರಾಷ್ಟ್ರೀಯ ಹೆದ್ದಾರಿ ವಿಭಾಗದ ೯೪ ಕೋಟಿ ರೂ.ಗಳ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಯೋಜನೆಯ ಮೊತ್ತ ಕೂಡ ಬಿಡುಗಡೆ ಆಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಕಾಮಗಾರಿ ಆರಂಭಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಸ್ತೆ ಮೇಲ್ಭಾಗ ಮತ್ತು ಕೆಳಭಾಗದ ಎರಡೂ ಕಡೆಯೂ ತಡೆಗೋಡೆಗಳ ನಿರ್ಮಾಣ ಕಾರ್ಯ ನಡೆಯಲಿದೆ. ಇಳಿಜಾರು ಪ್ರದೇಶಗಳನ್ನು ಕೇಂದ್ರೀಕರಿಸಿ ಕಾಮಗಾರಿ ನಡೆಯಲಿದೆ.

ರಾಷ್ಟ್ರೀಯ ಹೆದ್ದಾರಿ ೨೭೫ರಲ್ಲಿ ಮಡಿಕೇರಿ- ಸಂಪಾಜೆ ಮಧ್ಯೆ ಕಾಟಕೇರಿ, ಕರ್ತೋಜಿ, ೧ನೇ ಮೊಣ್ಣಂಗೇರಿ, ೨ನೇ ಮೊಣ್ಣಂಗೇರಿ, ಮದೆನಾಡು, ಜೋಡುಪಾಲ ಸೇರಿದಂತೆ ಸುಮಾರು ೨೧ ಕಡೆ ಮಣ್ಣು ಕುಸಿತದ ಸಾಧ್ಯತೆಯನ್ನು ರಾಷ್ಟ್ರೀಯ ಹೆದ್ದಾರಿ ವಿಭಾಗವೇ ಗುರುತಿಸಿದೆ. ಈ ಪೈಕಿ ಮಳೆಯ ಅಬ್ಬರ ಹೆಚ್ಚಾದರೆ ಮದೆನಾಡು ಸಮೀಪದ ಕರ್ತೋಜಿ ಸುತ್ತಮುತ್ತ ರಸ್ತೆಯಲ್ಲೇ ನೀರು ಉಕ್ಕುವ ಸಾಧ್ಯತೆ ಇರುವುದರಿಂದ ಹೆಚ್ಚು ಅಪಾಯಕಾರಿ ಆಗಬಹುದು ಎನ್ನುವುದು ಅಧಿಕಾರಿಗಳ ಆತಂಕ. ಇಲ್ಲಿ ೨೦೦ ಮೀಟರ್ ವ್ಯಾಪ್ತಿಯಲ್ಲಿ ೨ ಕಡೆ ಭೂಕುಸಿತದ ಸಾಧ್ಯತೆಯನ್ನು ಅಂದಾಜಿಸಲಾಗಿದೆ.

ದೀರ್ಘಕಾಲೀನ ಪರಿಹಾರ ಕಲ್ಪಿಸುವ ಸಲುವಾಗಿ ನಡೆಸಲಾಗುವ ೯೪ ಕೋಟಿ ರೂ. ಮೊತ್ತದ ಯೋಜನೆ ೧೮ ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎನ್ನುತ್ತಾರೆ ಅಧಿಕಾರಿಗಳು. ಈಗಾಗಲೇ ಹೆಚ್ಚು ಅಪಾಯಕಾರಿ ಎಂದು ಗುರುತಿಸಲಾಗಿರುವ ಕರ್ತೋಜಿ ಭಾಗದಿಂದಲೇ ಕಾಮಗಾರಿ ಆರಂಭಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಇದರ ಜತೆಗೆ ಈ ಭಾಗದಲ್ಲಿ ತುರ್ತು ಪರಿಸ್ಥಿತಿ ಎದುರಾದರೆ ಅದನ್ನು ಎದುರಿಸಲು ಕೂಡ ರಾಷ್ಟ್ರೀಯ ಹೆದ್ದಾರಿ ವಿಭಾಗ ಸಜ್ಜಾಗಿದೆ.

” ರಾಷ್ಟ್ರೀಯ ಹೆದ್ದಾರಿ ೨೭೫ರಲ್ಲಿ ೭೮ ಕಿ.ಮೀ. ನಿಂದ ೧೨೫ ಕಿ.ಮೀ. ತನಕ ೪೭ ಕಿ.ಮೀ. ವ್ಯಾಪ್ತಿಯಲ್ಲಿ ೨೧ ಕಡೆಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸುವ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದೆ. ೯೪ ಕೋಟಿ ರೂ. ವೆಚ್ಚದ ಈ ಯೋಜನೆಯ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಗುತ್ತಿಗೆದಾರರಿಗೆ ಕಾಮಗಾರಿಯ ಆದೇಶವನ್ನೂ ನೀಡಲಾಗಿದೆ. ಹೆಚ್ಚು ಅಪಾಯಕಾರಿ ಎಂದು ಗುರುತಿಸಲಾಗಿರುವ ಕರ್ತೋಜಿ ಭಾಗದಲ್ಲಿ ಮೊದಲು ಕಾಮಗಾರಿ ಆರಂಭಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಸದ್ಯದಲ್ಲೇ ಕೆಲಸ ಆರಂಭವಾಗಲಿದೆ.”

-ಗಿರೀಶ್, ಎಇಇ, ರಾಷ್ಟ್ರೀಯ ಹೆದ್ದಾರಿ ವಿಭಾಗ

ಆಂದೋಲನ ಡೆಸ್ಕ್

Recent Posts

ಶೇ.56ರಷ್ಟು ಮೀಸಲಾತಿ | 9ನೇ ಶೆಡ್ಯೂಲ್‌ಗೆ ಸೇರಿಸಲು ವಿ.ಎಸ್.ಉಗ್ರಪ್ಪ ಆಗ್ರಹ

ಬೆಂಗಳೂರು : ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ಜಾತಿಗಳ ಮೀಸಲಾತಿ ಪ್ರಮಾಣವನ್ನು ಶೇ.56ಕ್ಕೆ ಹೆಚ್ಚಳ…

5 hours ago

Padma Award | ಧರ್ಮೇಂದ್ರಗೆ ಪದ್ಮವಿಭೂಷಣ, ಮಮ್ಮುಟಿಗೆ ಪದ್ಮಭೂಷಣ ಪ್ರಶಸ್ತಿ

ಹೊಸದಿಲ್ಲಿ : ಹಿರಿಯ ನಟ ಧರ್ಮೇಂದ್ರ, ದಂತಕಥೆ ಹಿನ್ನೆಲೆ ಗಾಯಕಿ ಅಲ್ಕಾ ಯಾಜ್ಞಿಕ್, ಮಲಯಾಳಂ ಸಿನಿಮಾ ದಿಗ್ಗಜ ಮಮ್ಮುಟ್ಟಿ, ಬಂಗಾಳಿ…

5 hours ago

ನ್ಯಾಯಾಂಗ ಸ್ವಾತಂತ್ರ್ಯಕ್ಕೆ ʼಆಂತರಿಕ ಅಪಾಯʼ : ಸುಪ್ರೀಂ ನ್ಯಾಯಾಧೀಶರಿಂದ ಕಾರ್ಯಾಂಗದ ಬಗ್ಗೆ ಅಸಮಾಧಾನ

ಹೊಸದಿಲ್ಲಿ : ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಅಪಾಯ ಹೊರಗಿನಿಂದಲ್ಲ, ‘ಆಂತರಿಕ ವ್ಯವಸ್ಥೆ’ಯಿಂದಲೇ ಇದೆ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಉಜ್ಜಲ್…

6 hours ago

ಅಧಿಕಾರಿಗಳು ಜನಪ್ರತಿನಿಧಿಗಳ ಕರೆ ಸ್ವೀಕರಿಸಿ : ರಾಜ್ಯ ಸರ್ಕಾರಿ ಅಧಿಕಾರಿಗಳಿಗೆ ಮುಖ್ಯಕಾರ್ಯದರ್ಶಿ ಖಡಕ್ ಸೂಚನೆ

ಬೆಂಗಳೂರು : ಅಧಿಕಾರಿಗಳು ಜನಪ್ರತಿನಿಧಿಗಳ ದೂರವಾಣಿ ಕರೆಯನ್ನು ಸ್ವೀಕರಿಸಲೇಬೇಕು ಎಂಬ ಸುತ್ತೋಲೆಯನ್ನು ಹೊರಡಿಸುವ ಮೂಲಕ ಸರ್ಕಾರಿ ಅಧಿಕಾರಿಗಳಿಗೆ ರಾಜ್ಯ ಸರ್ಕಾರ…

7 hours ago

ಬುದ್ಧಗಯಾ ವಿಮೋಚನಾ ಚಳವಳಿ ಬೆಂಬಲಿಸಿ

ಮೈಸೂರು : ಹೊಸದಿಲ್ಲಿಯಲ್ಲಿ ಬುದ್ಧಗಯಾ ವಿಮೋಚನೆ ಐತಿಹಾಸಿಕ ಚಳವಳಿಯಲ್ಲಿ ಬೌದ್ಧ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಬೌದ್ಧ ಚಿಂತಕ,…

7 hours ago

ಮೈಸೂರಲ್ಲಿ ಸಂಭ್ರಮದ ರಥಸಪ್ತಮಿ

ಮೈಸೂರು : ರಥಸಪ್ತಮಿ ಅಂಗವಾಗಿ ನಗರದಲ್ಲಿ ಭಾನುವಾರ ಅರಮನೆ ಸೇರಿದಂತೆ ವಿವಿಧೆಡೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸೂರ್ಯನಿಗೆ ನಮಿಸಲಾಯಿತು.…

7 hours ago