ರಾತ್ರೋರಾತ್ರಿ ಬೆಳೆ ಕಳವು ಗಸ್ತು ಹೆಚ್ಚಳ ಸೇರಿದಂತೆ ಸೂಕ್ತ ಕ್ರಮಕ್ಕೆ ಬೆಳೆಗಾರರ ಒತ್ತಾಯ
ಸಿದ್ದಾಪುರ: ವನ್ಯಜೀವಿಗಳ ಉಪಟಳ, ಹವಾಮಾನ ವೈಪರೀತ್ಯ, ಕಾರ್ಮಿಕರ ಕೊರತೆಯ ನಡುವೆಯೂ ಬೆವರು ಹರಿಸಿ ಬೆಳೆದ ಫಸಲು ಕಳ್ಳರ ಪಾಲಾಗುತ್ತಿದ್ದು, ವರ್ಷದ ಕೂಳನ್ನು ಮನೆಗೆ ಸೇರಿಸಲು ರೈತರು ಹರಸಾಹಸ ಪಡುವ ಸ್ಥಿತಿ ನಿರ್ಮಾ ಣವಾಗಿದೆ.
ಈಗಾಗಲೇ ಅಡಕೆ, ಅರೇಬಿಕಾ ಕಾಫಿ ಕೊಯ್ಲು ಆರಂಭವಾಗಿದ್ದು, ಬೆಳೆಗಾರರಿಗೆ ಕಳ್ಳರ ಕಾಟ ತಲೆ ನೋವಾಗಿ ಪರಿಣಮಿಸಿದೆ. ಮಾಲ್ದಾರೆ ನೆಲ್ಲಿಹುದಿಕೇರಿ ವ್ಯಾಪ್ತಿಯ ತೋಟಗಳಲ್ಲಿ ರಾತ್ರೋರಾತ್ರಿ ಗಿಡಗಳಿಂದಲೇ ಫಸಲು ಕಳ್ಳತನವಾಗುತ್ತಿದ್ದು, ಬೆಳೆಗಾರರು ಪೊಲೀಸ್ ಠಾಣೆಗೆ ಮೊರೆಹೋಗುವ ಸ್ಥಿತಿ ನಿರ್ಮಾಣವಾಗಿದೆ.
ಮಾಲ್ದಾರೆ ನಿವಾಸಿ ವಿಜಯನ್ ಎಂಬವರ ತೋಟದಲ್ಲಿ ಒಂದೇ ರಾತ್ರಿ ಸುಮಾರು ೫೫ ಗಿಡಗಳಿಂದ ಕಾಫಿ ಫಸಲು ಕಳವಾಗಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವುದಾಗಿ ಅಳಲು ತೋಡಿಕೊಂಡಿದ್ದಾರೆ. ನೆಲ್ಲಿಹುದಿಕೇರಿ ನಿವಾಸಿ ರೈತ ಸಂಘದ ಸಂಚಾಲಕ ಚಂದ್ರನವರ ತೋಟದಲ್ಲಿ ೧೨ ಮರಗಳಿಂದ ಸುಮಾರು ೨ ಕ್ವಿಂಟಾಲ್ ಅಡಕೆಯನ್ನು ಕಳವು ಮಾಡಲಾಗಿದ್ದು, ಈ ಸಂಬಂಧ ಸಿದ್ದಾಪುರ ಠಾಣೆಗೆ ದೂರು ನೀಡಿದ್ದಾರೆ.
ಮಾಲ್ದಾರೆ ಸಮೀಪದ ಚೆಟ್ಟಿಯಾರ್ ತೋಟದಲ್ಲಿ ರಾತ್ರಿ ಕಾಫಿ ಕಳವು ಮಾಡಲಾಗಿದ್ದು, ಕಳ್ಳರು ಚೀಲ ಇಟ್ಟಿರುವ ಸ್ಥಳವನ್ನು ಮರೆತು ತೆರಳಿದ್ದಾರೆ. ಬೆಳಿಗ್ಗೆ ಕಾರ್ಮಿಕರು ಕೆಲಸಕ್ಕೆ ತೆರಳಿದ ಸಂದರ್ಭದಲ್ಲಿ ೨ ಚೀಲ ಕಾಫಿ ತೋಟದಲ್ಲಿ ಪತ್ತೆಯಾಗಿವೆ.
ಇದನ್ನು ಓದಿ: ಸರಗೂರು ಸಾರಿಗೆ ಬಸ್ ನಿಲ್ದಾಣದಲ್ಲಿ ಅವ್ಯವಸ್ಥೆ
ಸಿದ್ದಾಪುರ, ಪಾಲಿಬೆಟ್ಟ, ಮಾಲ್ದಾರೆ, ಚೆನ್ನಂಗಿ, ನೆಲ್ಲಿಹುದಿಕೇರಿ ಸುತ್ತಮುತ್ತಲೂ ಹೆಚ್ಚಾಗಿ ಕಳ್ಳತನ ಪ್ರಕರಣಗಳು ನಡೆಯುತ್ತಿವೆ. ಈ ಭಾಗಗಳಲ್ಲಿ ಹಸಿಕಾಫಿ ಖರೀದಿದಾರರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಪರಾಽಗಳನ್ನು ಪತ್ತೆ ಹಚ್ಚಲು ಪೊಲೀಸ್ ವಿಶೇಷ ತಂಡ ರಚನೆ ಮಾಡಬೇಕು ಎಂದು ಬೆಳೆಗಾರರು ಮನವಿ ಮಾಡಿದ್ದಾರೆ.
ಇಲಾಖೆಯಿಂದ ಬೀಟ್ ಪೊಲೀಸರನ್ನು ನಿಯೋಜಿಸಿದ್ದರೂ ರಾತ್ರಿ ಗಸ್ತು ತಿರುಗುತ್ತಿಲ್ಲ. ಅಲ್ಲದೆ ಸಿಬ್ಬಂದಿ ಕೊರತೆ ಮತ್ತು ಪೊಲೀಸ್ ಚೆಕ್‌ಪೋಸ್ಟ್ ಕಾರ್ಯನಿರ್ವಹಿಸದೇ ಇರುವುದರಿಂದ ಕಳ್ಳರಿಗೆ ಇದು ವರದಾನವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಪೊಲೀಸ್ ಇಲಾಖೆಯಿಂದ ಪ್ರಕಟಣೆ: ರೈತರು ಚಾಲಕರು, ವರ್ತಕರ ಬಗ್ಗೆ ನಿಗಾವಹಿಸಿ ಸಂಪೂರ್ಣ ಮಾಹಿತಿ ಪಡೆಯಬೇಕು. ಮಾಲೀಕರು ತಮ್ಮ ತೋಟದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವುದರೊಂದಿಗೆ ಕಾಫಿ, ಕರಿಮೆಣಸು ಸಾಗಿಸುವ ವಾಹನಗಳ ಮಾಹಿತಿಯನ್ನು ದಾಖಲಿಸಿಡಬೇಕು. ಚಾಲಕರು ಕೂಡ ತಮ್ಮ ವಾಹನದಲ್ಲಿ ಸಾಗಿಸುವ ವಸ್ತುಗಳ ಮಾಲೀಕರ ಬಗ್ಗೆ ಮಾಹಿತಿ ಹೊಂದಿರಬೇಕು. ಅಂತೆಯೇ ಕಾಫಿ, ಕರಿಮೆಣಸು ಖರೀದಿಸುವ ವರ್ತಕರು ತಮ್ಮ ಮಳಿಗೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ತಮ್ಮ ಬಳಿಗೆ ಖರೀದಿಗೆ ತರುವ ವಸ್ತುಗಳ ಬಗ್ಗೆ ಹಾಗೂ ವ್ಯಕ್ತಿಗಳ ಮಾಹಿತಿ ಸಂಗ್ರಹ ಪುಸ್ತಕ ಹೊಂದಿರಬೇಕು. ತೋಟದ ಮಾಲೀಕರೇ ರಾತ್ರಿ ಪಾಳಿಯದಲ್ಲಿ ಕಾವಲುಗಾರರನ್ನು ನಿಯೋಜಿಸಿ ಸಂಶಯಾಸ್ಪದ ವ್ಯಕ್ತಿಗಳು, ವಾಹನಗಳ ಸಂಚಾರ ಕಂಡುಬಂದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಚಿಲ್ಲರೆ ಕಾಫಿ, ಕರಿಮೆಣಸು, ಅಡಕೆ ಮಾರಾಟ ಮಾಡಲು ಬರುವ ವ್ಯಕ್ತಿಗಳ ಸಂಪೂರ್ಣ ಮಾಹಿತಿ ಪಡೆಯಬೇಕು. ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು.
” ಫಸಲು ಕಳ್ಳತನ ಮಾಡುತ್ತಿರುವುದರ ಹಿಂದೆ ದೊಡ್ಡ ಜಾಲವೇ ಇದೆ. ಮಾಲ್ದಾರೆ ಸುತ್ತಮುತ್ತಲಿನ ಭಾಗದಲ್ಲಿ ಸಾಕಷ್ಟು ಮಂದಿ ಹಸಿ ಕಾಫಿ ಖರೀದಿದಾರರು ಇದ್ದು, ಇವರ ಕೈವಾಡ ಇರುವ ಶಂಕೆ ಇದೆ. ಪೊಲೀಸ್ ಇಲಾಖೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಬೆಳೆಗಾರರಿಗೆ ನ್ಯಾಯ ಒದಗಿಸಿಕೊಡಬೇಕು.”
-ವಿಜಯನ್, ಕಾಫಿ ಬೆಳೆಗಾರ, ಮಾಲ್ದಾರೆ
” ಹಲವು ಸಮಸ್ಯೆಗಳ ನಡುವೆಯೂ ಬೆಳೆದ ಫಸಲು ಕಳ್ಳರ ಪಾಲಾಗುತ್ತಿದೆ. ಪೊಲೀಸ್ ಇಲಾಖೆ ಈ ಬಗೆ ಹೆಚ್ಚಿನ ನಿಗಾವಹಿಸಿ ಇಂತಹ ಅಪರಾಧ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು.”
-ಸಿ.ಬಿ. ಪೂಣಚ್ಚ,
” ರೈತ ಸಂಘದ ಅಧ್ಯಕ್ಷ, ಅಮ್ಮತ್ತಿ ನನ್ನ ತೋಟದ ಹನ್ನೆರಡು ಅಡಕೆ ಮರಗಳಿಂದ ಸುಮಾರು ೨ ಕ್ವಿಂಟಾಲ್ ನಷ್ಟು ಅಡಕೆಯನ್ನು ಕಳ್ಳರು ರಾತ್ರಿ ಕದ್ದಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ಕಷ್ಟಪಟ್ಟು ಬೆಳೆದ ಬೆಳೆಯನ್ನು ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದ್ದು, ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು.”
-ಚಂದ್ರನ್, ರೈತ ಸಂಘ ಸಂಚಾಲಕ, ನೆಲ್ಲಿಹುದಿಕೇರಿ
” ರೈತರ ಫಸಲು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಪ್ರಕಟಣೆ ನೀಡಲಾಗಿದೆ. ಕಳವು ಮಾಲನ್ನು ಮಾರಾಟ ಮಾಡುವುದು, ಖರೀದಿಸುವುದು ಶಿಕ್ಷಾರ್ಹ ಅಪರಾಧ. ಇಂತಹ ಯಾವುದೇ ಘಟನೆ ನಡೆದಲ್ಲಿ ಅಥವಾ ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಸಾರ್ವಜನಿಕರು ಸಹಕರಿಸಬೇಕು.”
-ಮಂಜುನಾಥ್, ಠಾಣಾಧಿಕಾರಿ, ಸಿದ್ದಾಪುರ ಪೊಲೀಸ್ ಠಾಣೆ
–ಕೃಷ್ಣ ಸಿದ್ದಾಪುರ
ನಂಜನಗೂಡು: ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮದಲ್ಲಿ ಚರಂಡಿಗಳು ಗಬ್ಬೆದ್ದು ನಾರುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದ…
ಓದುಗರ ಪತ್ರ: ಗಾಳಿ... ತಂಗಾಳಿ ! ಚಾಮರಾಜನಗರದ ಶುದ್ಧ ಗಾಳಿಗೆ ದೇಶದಲ್ಲಿ ೪ನೇ ಸ್ಥಾನ ಎಂಥ ಪ್ರಾಣವಾಯು ! ಮಲೆ ಮಾದಪ್ಪ…
ರಾಜ್ಯ ಸರ್ಕಾರ ಮಂಡಿಸಿದ ದ್ವೇಷ ಭಾಷಣ ಮಸೂದೆ ೨೦೨೫ ಗಂಭೀರ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ವ್ಯಾಪಕ…
ಬೆಂಗಳೂರು: ಮೈಸೂರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನಡೆಸುತ್ತಿರುವ ತನಿಖೆಯಲ್ಲಿ ಹಲವು ಮಹತ್ವದ ಮಾಹಿತಿಗಳು ಬಯಲಾಗಿವೆ. ಮುಡಾ ಹಗರಣದ…
ಮೈಸೂರಿನ ಬಹುತೇಕ ಭಾಗಗಳಲ್ಲಿ ಪಾದಚಾರಿ ಮಾರ್ಗಗಳನ್ನು ಅಂಗಡಿಯವರು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಸಾರ್ವಜನಿಕರು ರಸ್ತೆಯ ಮೇಲೆ ಸಂಚರಿಸುವುದು ಅನಿವಾರ್ಯವಾಗಿದೆ. ನಗರದ…
ರಾಜ್ಯದಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ೫೭,೭೩೩ ಸೈಬರ್ ಪ್ರಕರಣಗಳು ದಾಖಲಾಗಿದ್ದು, ೫,೪೭೫ ಕೋಟಿ ರೂ. ವಂಚನೆ ನಡೆದಿರುವುದಾಗಿ, ಬೆಳಗಾವಿ…